ಕಮಲಾ ರಾಜೇಶ್ ಅವರಿಗೆ ಸರ್ವಾದ್ಯಕ್ಷೆಯಾಗಿ ಆಯ್ಕೆ

ಕಮಲಾ ರಾಜೇಶ್ ಅವರಿಗೆ ಸರ್ವಾದ್ಯಕ್ಷೆಯಾಗಿ ಆಯ್ಕೆ

ಮುಕ್ತಕ ಕವಯಿತ್ರಿಯಾದ ಕಮಲಾ ರಾಜೇಶ್ ಅವರಿಗೆ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್( ರಿ) ಬೆಂಗಳೂರು ಸಂಸ್ಥೆಯು ನಾಲ್ಕನೇ ಮಹಿಳಾ ಸಾಂಸ್ಕೃತಿಕ ಸಮಾವೇಶಕ್ಕೆ ಸರ್ವಾಧ್ಯಕ್ಷೆಯಾಗಿ ಆಯ್ಕೆ

ಬಂಧುಬಾಂಧವ ಕವಯಿತ್ರಿ ಹಾಗೂ ಕವಿಮಿತ್ರರೇ ಮತ್ತು ಕನ್ನಡ ಮನಸ್ಸುಗಳಿಗೆ ಮುಕ್ತಕ ಕವಯಿತ್ರಿಯಾದ ಕಮಲಾ ರಾಜೇಶ್ ಅವರಿಗೆ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್( ರಿ) ಬೆಂಗಳೂರು ಸಂಸ್ಥೆಯು ನಾಲ್ಕನೇ ಮಹಿಳಾ ಸಾಂಸ್ಕೃತಿಕ ಸಮಾವೇಶಕ್ಕೆ ಸರ್ವಾಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದು ದಿನಾಂಕ 24-7-2022ರ ಭಾನುವಾರ ಬೆಳಗ್ಗೆ 9.15ರಿಂದ ಸಂಜೆ 5ರ ತನಕ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು ಸಾಹಿತ್ಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಬೇಕೆಂದು ವಿನಂತಿಸುತ್ತೇ

ಕಮಲಾ ರಾಜೇಶ್ ಪರಿಚಯ

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ರಿ ಬೆಂಗಳೂರು ಸಂಸ್ಥೆಯ ನಾಲ್ಕನೇ ಮಹಿಳಾ ಸಮಾವೇಶದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವ  ಶ್ರೀಮತಿ ಕಮಲಾರಾಜೇಶ್ ಅವರು ಶಿಸ್ತಿನ ಸಿಪಾಯಿ ರಂಗೇಗೌಡ-ಜಯಲಕ್ಷ್ಮಮ್ಮರವರ ಮಗಳಾಗಿ  ತುರುವೇಕೆರೆಯಲ್ಲಿ ಜನಿಸಿ ಅಮ್ಮಸಂದ್ರದಲ್ಲಿ ಬೆಳೆದರು.ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೆ ಕರಕುಶಲ ವಸ್ತುಗಳನ್ನು ತಯಾರಿಸುವುದು,ಕಥೆಗಳನ್ನು ಕೇಳುವುದು, ಹೇಳುವುದು, ಚಿತ್ರಕಲೆ, ಸಂಗೀತ, ಹಾಡುಗಾರಿಕೆ,ನೃತ್ಯ,ಭರತನಾಟ್ಯ  ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ಮೊದಲ ಸ್ಥಾನದಲ್ಲಿದ್ದು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಸಾಹಿತ್ಯ ದಿಗ್ಗಜರಾದ ಕುವೆಂಪು, ಡಿ ವಿ ಜಿ,ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ,ಶಿವರಾಮ ಕಾರಂತ,ವಿ ಕೃ ಗೋಕಾಕ್,ದ ರಾ ಬೇಂದ್ರೆ  ಮೊದಲಾದವರ ಸಾಹಿತ್ಯಾಭಿಮಾನಿಯಾಗಿ ಕವನ,ಚುಟುಕು, ಗಜಲ್, ರುಬಾಯಿ, ಹಾಸ್ಯಗವನ, ಪ್ರೇಮಗೀತೆ, ಹನಿಗವನ ಮೊದಲಾದ ಅನೇಕ ಪ್ರಭೇದಗಳಲ್ಲಿ ಪದ್ಯಗಳನ್ನು ರಚಿಸಿ ಸಹಪಾಠಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಪದವಿಯನ್ನು ಮುಗಿಸಿ, ತುಮಕೂರಿನ ಸಾಹಿತಿ ರಾಜೇಶ್ ರವರೊಡನೆ ಸಪ್ತಪದಿ ತುಳಿದು ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗನನ್ನು ಹಡೆದು ದಾಂಪತ್ಯ ಜೀವನದ ಮಹಾಸಾಗರದಲ್ಲಿ ಈಜಿ ದಡವನ್ನು ಮುಟ್ಟಿದ್ದಾರೆ. ಸಾಹಿತಿಗಳಾದ ರಾಜೇಶ್ ರವರ ಬೆಂಬಲದಿಂದ ಕವನ,ಕವಿತೆ,ಹನಿಗವನ,ಚುಟುಕು, ಪ್ರೇಮಗೀತೆ,ಹಾಸ್ಯಗವನ,ಗಜಲ್, ರುಬಾಯಿ ಮೊದಲಾದ ಪ್ರಭೇದಗಳಲ್ಲಿ ಮುಕ್ತ ಛಂದಸ್ಸಿನಲ್ಲಿ ಸಾಹಿತ್ಯ ರಚನೆ ಮಾಡಿ ಕವಿಮಿತ್ರರ ಮೆಚ್ಚುಗೆಗೆ ಪಾತ್ರರಾಗಿದ್ದರೂ ಛಂದೋಬದ್ಧ ಕಾವ್ಯವನ್ನು ರಚಿಸಬೇಕೆಂಬ ಹಂಬಲವು ಹೃದಯದಲ್ಲಿ ಮಿಡಿಯುತ್ತಿದ್ದು ಮೈಸೂರಿನ ಮುಕ್ತಕ ಕವಿಗಳಾದ ಶ್ರೀ ಎಂ ಮುತ್ತುಸ್ವಾಮಿಯವರ ಮಾರ್ಗದರ್ಶನದಲ್ಲಿ ಮುಕ್ತಕಗಳನ್ನು ರಚಿಸುವ ಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಮುಕ್ತಕ, ರಗಳೆ,ತ್ರಿಪದಿ,ದ್ವಿಪದಿ ಮೊದಲಾದ ಛಂದೋಬದ್ಧ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ.ಮಾತೃಶ್ರೀ ಸೇವಾ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿ ಬಡಜನರಿಗೆ, ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಮಾನಸ ಪ್ರಕಾಶನದ ಮೂಲಕ ಕೃತಿಗಳನ್ನು ಹೊರತಂದು ಪ್ರಕಟಿಸುತ್ತಿದ್ದಾರೆ.ಕೃತಿಗಳನ್ನು  ಲೋಕಾರ್ಪಣೆ ಮಾಡಿ ಕವಿಗಳಿಗೆ ಬೆನ್ನೆಲುಬಾಗಿ  ಸಹಕಾರ ನೀಡುತ್ತಿದ್ದಾರೆ. ಮುಕ್ತಕ ಸಾಹಿತ್ಯ ಕೃಷಿಯನ್ನು ಮಾಡುತ್ತ “ಮುಕ್ತಕ ಕಮಲ”, “ಮುಕ್ತಕ ಮಾನಸ ” ,”ಶ್ರೀಕೃಷ್ಣ ಚರಿತ್ರೆ” ,  “ಕಮಲದೊಳಗಿನ ಮುತ್ತು” , ಕಾರ್ತಿಕ ಮಾಸ,ಶ್ರೀನಿವಾಸ ಕಲ್ಯಾಣ,ಕನಕಚರಿತ್ರೆ ಎಂಬ ಮುಕ್ತಕ ಕೃತಿಗಳನ್ನು  ಮತ್ತು ವಚನ ರಾಮಾಯಣ, ವಚನ ಭಾರತ,ವಚನ  ಭಾಗವತವೆಂಬ ಆಧ್ಯಾತ್ಮಿಕ  ಕೃತಿಯನ್ನು ರಚಿಸಿದ್ದಾರೆ.  ಕವಯಿತ್ರಿ ಯವರು ಸರಿಸುಮಾರು

ಹದಿನಾರು  ಸಾವಿರ ಮುಕ್ತಕಗಳನ್ನು ರಚಿಸಿ,ವಿದ್ಯುನ್ಮಣಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.ಇವರ ಮುಕ್ತಕಗಳು ಕವಿಗಳ ಮನತಣಿಸಿದೆ. ಛಂದೋಬದ್ಧವಾದ ಮುಕ್ತಕಗಳನ್ನು ರಚಿಸುವ ಕಲೆಯನ್ನು ಸಿದ್ಧಿಸಿಕೊಂಡಿರುವ ಇವರು   ಗಜ,ಸಿಂಹ, ಹಯ, ವೃಷಭ, ಶರಭ ಮತ್ತು ಅಜಪ್ರಾಸಗಳಲ್ಲಿ ನಿರರ್ಗಳವಾಗಿ ಮುಕ್ತಕಗಳನ್ನು ರಚಿಸುವ ಮೂಲಕ ಬಳಗಕ್ಕೆ ಶಕ್ತಿಯನ್ನು ತುಂಬುತಿದ್ದು . ಇವರ ಸಾಹಿತ್ಯ ಸೇವೆಯನ್ನು ಗುರ್ತಿಸಿ ಅಭಿರುಚಿ ಬಳಗ ಮೈಸೂರು ಸಂಸ್ಥೆಯು ಸಾಧನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಿಮಾಲಯ ಪೌಂಡೇಶನ್ ಮತ್ತು ಅನಂತ ಪ್ರಕಾಶನ 2021ನೇ ಸಾಲಿನಲ್ಲಿ ವಿದ್ಯಾರಣ್ಯ ಪ್ರಶಸ್ತಿಯನ್ನು ನೀಡಿದೆ ,ಇವರ  ಸಾಧನೆಯನ್ನು ಗುರ್ತಿಸಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಅನಿಕೇತನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಡ್ಯದ ರಂಜನಿ ಕಲಾವೇದಿಕೆಯಿಂದ ರಂಜನಿ ಸಾಹಿತ್ಯ ಪ್ರಶಸ್ತಿಯನ್ನೂ ನಾಡಧ್ವನಿ ಪತ್ರಿಕೆ ಮತ್ತು ಸಾಹಿತ್ಯ ಬಳಗದ ವತಿಯಿಂದ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಹಿಮಾಲಯ ಪ್ರತಿಷ್ಠಾನದ ವತಿಯಿಂದ ಸಾಹಿತ್ಯ ಸೇವಾ ರತ್ನ ಪ್ರಶಸ್ತಿಯನ್ನೂ ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತು ಮೈಸೂರು ಸಂಸ್ಥೆಯು ಕುಮಾರ ನಿಜಗುಣ ಸೇವಾ ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.ನಿಜಗುಣ ಸೇವಾ ಸಂಸ್ಥೆಯು ಪ್ರತಿಷ್ಠಿತ ನಿಜಗುಣ ಸೇವಾ ಪ್ರಶಸ್ತಿ ಯನ್ನು ನೀಡಿರುವುದು ಹೆಮ್ಮೆಯ ವಿಷಯ. ಸಿರಿಗನ್ನಡ ವೇದಿಕೆಯು ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ನೀಡಿದೆ. ಮುದ್ದುಕೃಷ್ಣ ಪ್ರಕಾಶನವು ಕೊಡಮಾಡುವ  2022ನೆಯ ಸಾಲಿನ   ಮುದ್ದುಕೃಷ್ಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕವಯಿತ್ರಿಯವರು ಐನೂರಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಕವನ ವಾಚಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಹಲವಾರು ಸಭೆಸಮಾರಂಭಗಳಲ್ಲಿ ನಿರೂಪಕಿಯಾಗಿ,ಅಥಿತಿಯಾಗಿ,ಉದ್ಘಾಟಕರಾಗಿ,ಅಧ್ಯಕ್ಷರಾಗಿ ಸಭೆಯ ಶೋಭೆಯನ್ನು ಹೆಚ್ಚಿಸಿದ್ದಾರೆ.ಸಭೆಗಳನ್ನು ಸಮಾರಂಭಗಳನ್ನು ಸುಲಲಿತವಾಗಿ ನಡೆಸುವ ಜಾಣ್ಮೆಯನ್ನು ಸಿದ್ಧಿಸಿಕೊಂಡಿದ್ದಾರೆ. ಮುದ್ದುಕೃಷ್ಣ ಪ್ರಕಾಶನದ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತು ಮೈಸೂರು ಸಂಸ್ಥೆಯ ಖಜಾಂಚಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮಾತೃ ಸೇವಾ ಚಾರಿಟೇಬಲ್ ಟ್ರಸ್ಟ್ ತುಮಕೂರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆಯಾಗಿ ನಿಸ್ವಾರ್ಥದಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸ್ಪಂದನ ಸಿರಿ ವೇದಿಕೆ ತುಮಕೂರು ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತು ಮೈಸೂರು ಸಂಸ್ಥೆಯ ಅಂಗಸಂಸ್ಥೆಯಾಗಿ ,ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತು ತುಮಕೂರು (ಜಿಲ್ಲಾ) ಶಾಖೆಯ ಅಧ್ಯಕ್ಷೆಯಾಗಿರುವ ಇವರು ತನು ಮನ ಧನವನ್ನು ಸಮರ್ಪಿಸುತ್ತ ಸಾಹಿತ್ಯ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತಿದ್ದಾರೆ.  ಕವಯಿತ್ರಿಯವರು “ಮುಕ್ತಕ ಪಂಚ ಸಹಸ್ರಿ” ಎಂಬ ಐದು ಸಾವಿರ ದ್ವಿಪದಿ ಮುಕ್ತಕಗಳನ್ನು ರಚಿಸಿರುವುದು ಇವರಲ್ಲಿರುವ ಪ್ರತಿಭೆಗೆ ಕೈಗನ್ನಡಿಯಾಗಿದೆ.ಇವರು ರಚಿಸಿರುವ ಒಂದು ಸಾವಿರದ ಒಂದು ನೂರ ಹನ್ನೊಂದು ಪುಟಗಳ ಬೃಹತ್ ಚೌಪದಿ ಗ್ರಂಥ ಮುಕ್ತಕ ಸಾಹಿತ್ಯದಲ್ಲಿ ದಾಖಲೆಯನ್ನು ನಿರ್ಮಿಸಬಹುದಾದ ಮಹಾಕಾವ್ಯವೆಂದು ಮುಕ್ತಕ ಕವಿಬಳಗ ಮೆಚ್ಚುಗೆ ಸೂಚಿಸಿ ಗೌರವಿಸಿದೆ.


One thought on “ಕಮಲಾ ರಾಜೇಶ್ ಅವರಿಗೆ ಸರ್ವಾದ್ಯಕ್ಷೆಯಾಗಿ ಆಯ್ಕೆ

Leave a Reply

Back To Top