ಅಂಕಣ ಸಂಗಾತಿ
ಗಜಲ್ ಲೋಕ
ಸಾವನ್ ಅವರ ಗಜಲ್ ಗಳಲ್ಲಿ ಸಾವನ್ ಬಹಾರ್
ಸಾವನ್ ಅವರ ಗಜಲ್ ಗಳಲ್ಲಿ ಸಾವನ್ ಬಹಾರ್
ಗಜಲ್ ಗಂಗೆ ಸಂಸಾರದುದ್ದಕ್ಕೂ ಹರಿಯುತಿದ್ದಾಳೆ, ಸಹೃದಯಿಗಳ ಮೈ-ಮನವನ್ನು ತಣಿಸುತ್ತ… ಇಂಥಹ ಗಜಲ್ ಕುರಿತು ಮಾತನಾಡುತಿದ್ದರೆ ಮೌಸಮ್ ಕಾ ಮಹೀನಾ ದ ಫೀಲ್ ಆಗುತ್ತೆ…!! ಆ ಅನುಭಾವದ ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳೋಕೆ ಖುಷಿಯೆನಿಸುತ್ತಿದೆ. ಕರುನಾಡಿನ ಪ್ರಸಿದ್ಧ ಗಜಲ್ ಗೋ ಅವರ ಪರಿಚಯದೊಂದಿಗೆ ತಮ್ಮ ಮುಂದೆ ಬರುತ್ತಿದ್ದೇನೆ. ಪ್ರೀತಿಯಿಂದ ತಾವೆಲ್ಲರೂ ಗಜಲ್ ಬೇಗಂ ಳನ್ನು ಸ್ವಾಗತಿಸುವಿರೆಂಬ ಭಾವನೆಯೊಂದಿಗೆ ನನ್ನ ಕಲಮ್ ಗೆ ಚಾಲ್ತಿ ನೀಡುವೆ…!!
“ಮನಸು ಎಲ್ಲಿ ಖುಷಿಯಾಗಿರುತ್ತದೆ ಅವಳ ನೆನಪು ಮರೆಯೋದರಿಂದ
ಕೊಠಡಿ ಸ್ಮಶಾನವಾಗುವುದು ಒಂದು ಭಾವಚಿತ್ರ ತೆಗೆದು ಹಾಕೋದರಿಂದ”
–ಜಲೀಲ್ ಆಲಿ
ನಾವು ಒಬ್ಬ ವ್ಯಕ್ತಿಯನ್ನು ಪ್ರೀತಿಸಿದಾಗ, ಅವರನ್ನು ನಮ್ಮ ಹೃದಯದಿಂದ ಬಯಸಿದಾಗ, ಆ ವ್ಯಕ್ತಿಯು ನಮ್ಮೊಂದಿಗೆ ಇರುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ನಾವು ಯಾರನ್ನು ಪ್ರೀತಿಸುತ್ತೇವೆಯೊ ಆ ವ್ಯಕ್ತಿಯು ನಮ್ಮನ್ನು ತೊರೆದರೆ ಅಥವಾ ನಮ್ಮಿಂದ ಶಾಶ್ವತವಾಗಿ ದೂರ ಹೋದರೆ, ಅವರಿಲ್ಲದೆ ಬದುಕುವುದು ಕಷ್ಟವಾಗುತ್ತದೆ. ಅಂತೆಯೇ ಪ್ರೇಮಿಗಳು ದೂರವಿರಲು ಬಯಸುವುದೂ ಇಲ್ಲ, ಸಹಿಸುವುದೂ ಇಲ್ಲ. ಒಂಟಿತನದಲ್ಲಿ ಹೃದಯದ ಪಿಸುಮಾತುಗಳು ಮಸಣಮುಖಿಯಾಗಿ ಸಾಗುತ್ತವೆ. ಪ್ರೇಮಿಗಳು ಪರಸ್ಪರ ದೂರವಾದರೆ ಅವರ ತುಟಿಗಳು ಸ್ವಲ್ಪವೂ ಕದಲದಿದ್ದರೂ ತಮ್ಮ ಪ್ರಿಯಕರ, ಪ್ರಿಯತಮೆಯರನ್ನೆ ಮೌನವಾಗಿ ಕೂಗುತ್ತಿರುತ್ತವೆ. ಪ್ರೇಮಲೋಕದಲ್ಲಿ ಉದ್ಭವಿಸುವ ವಿರಹದ ಗೋಡೆ ಆಪ್ತತೆಯ ಬೆಲೆಯನ್ನು ಮನದಟ್ಟಾಗಿಸುತ್ತದೆ. ಆ ಆಪ್ತತೆಯೆ ಮತ್ತಷ್ಟು ಕನವರಿಕೆಗೆ ದಾರಿ ಮಾಡಿಕೊಡುತ್ತದೆ. ಈ ಕಾರಣಕ್ಕಾಗಿಯೇ ದೂರ ಎನ್ನುವುದು ತಮ್ಮ ಬಾಳಿನಿಂದ ದೂರವೇ ಉಳಿಯಲಿ ಎಂಬುದೇ ಪ್ರತಿ ಒಲವಿನಂಗಳದ ಆಶಯವಾಗಿರುತ್ತದೆ. ಈ ಪ್ಯಾರ್, ಮೊಹಬ್ಬತ್ ಗೆ ಜಾತಿ, ಮತ, ಪಂಥ, ಧರ್ಮದ ಹಂಗಿಲ್ಲ, ವಯಸ್ಸಿನ ಗಡಿಯಿಲ್ಲ; ಇನ್ನೂ ಹೊತ್ತು ಗೊತ್ತು ಅಂತ ಇಲ್ಲವೇ ಇಲ್ಲ. ಇಂಥಹ ಪ್ರೀತಿಯ ಕರವಟೆ, ವಿವಿಧ ಮಗ್ಗುಲಗಳನ್ನು ಅಕ್ಷರ ಲೋಕ ತನ್ನ ಕಾವ್ಯದ ತೊಟ್ಟಿಲಲ್ಲಿ ಮಲಗಿಸಿ ಅನಾದಿಕಾಲದಿಂದಲೂ ಜೋಗುಳ ಹಾಡುತ್ತಾ ಬಂದಿದೆ. ಸಾಮಾನ್ಯವಾಗಿ ತೊಟ್ಟಿಲುಗಳಲ್ಲಿ ಅಷ್ಟೊಂದು ವೆರೈಟಿ ಸಿಗದೇ ಹೋದರೂ ಕೆಲವೊಂದರ ಜೋಗುಳದ ಹಾಡಿನಲ್ಲಿ ಮಾತ್ರ ಹಾಂಟಿಂಗ್ ಭಾವನೆ ಕೇಳಿಸದೆ ಇರದು!! ಈ ಹಾಂಟಿಂಗ್ ಭಾವನೆಯ ಒಡತಿ ಎಂದರೆ ಬೇರಾರೂ ಅಲ್ಲ, ಕಾವ್ಯದ ಅನಭಿಷಿಕ್ತ ರಾಣಿ ಗಜಲ್. ಇದು ಆಶಿಕಿಯ ಅಪರಾವತಾರ. ಪರಂಪರಾಗತವಾಗಿ ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸುತ್ತ ಬರುತ್ತಿದೆ. ತನ್ನ ಅಶಅರ್ ಮೂಲಕ ಪ್ರತಿ ದಿನವೂ ತಾಜಮಹಲ್ ಅನ್ನು ಕಟ್ಟಿ ಕೊಡುತ್ತಿದೆ. ಇಂಥಹ ತಾಜಮಹಲ್ ಗಳ ನಿರ್ಮಾತೃಗಳಾದ ಅಸಂಖ್ಯಾತ ಗಜಲ್ ಗೋ ಅವರಲ್ಲಿ ಸಾವನ್ ಸಿಂಧನೂರು ಅವರೂ ಒಬ್ಬರು!!
ಸಾವನ್ ಕೆ. ಸಿಂಧನೂರು ಅವರು ಕಾಸಿಂಸಾಬ್ ಮತ್ತು ಮಾಲನಬಿ ದಂಪತಿಗಳ ಮಗನಾಗಿ ೧೯೮೩ ರ ಡಿಸೆಂಬರ್ ೦೧ ರಂದು ಜನಿಸಿದರು. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀಯುತರು ಪ್ರಸ್ತುತವಾಗಿ ಗಣಿತ ಶಿಕ್ಷಕರಾಗಿ, ರಾಯಚೂರಿನ ಸಿಂಧನೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕುಟುಂಬದಲ್ಲಿ ಕಾಸಿಂಸಾಬ್ ರವರ ಭಜನಾ ಪದಗಳ ಸಾಂಸ್ಕೃತಿಕ ಲೋಕವು ಗಜಲ್ ಗೋ ಅವರ ಬರಹದ ಮೇಲೆ ದಟ್ಟವಾದ ಪ್ರಭಾವ ಬೀರಿರುವುದನ್ನು ಇವರ ಅಶಅರ್ ಮೂಲಕ ಗುರುತಿಸಬಹುದು. ಈ ಸಾಹಿತ್ಯದ ಆಸಕ್ತಿಯೆ ಇವರನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆಯಲು ದಾರಿದೀಪವಾಯಿತು. ಇವರು ‘ಮಗರೀಬ್’ ಮತ್ತು ‘ಉಸಿರ ಮರೆತ ಕೊಳಲು”ಎಂಬ ಎರಡು ಗಜಲ್ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಗಜಲ್ ನೊಂದಿಗೆ ಕಥೆ, ಕಾವ್ಯ, ವೈಚಾರಿಕ ಲೇಖನ… ಬರೆಯುವ ಇವರು ವೈಲ್ಡ್ ಲೈಫ್ ಫೋಟೋಗ್ರಫಿ ಹವ್ಯಾಸವನ್ನೂ ಹೊಂದಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಸದಾ ಸಾಹಿತ್ಯ, ಸಂಘಟನೆಯಲ್ಲಿ ಸಕ್ರಿಯವಾಗಿರುವ ಶ್ರೀಯುತರಿಗೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ.
ಒಲವನ ಆಲಿಂಗನ, ಅಗಲಿಕೆಯ ನೋವಿನ ನಡುವೆಯೂ ಪ್ರೀತಿಯ ಸೌಂದರ್ಯವನ್ನು ಅಭಿವ್ಯಕ್ತಿಸುವ ವಿಶಿಷ್ಟ ಕಾವ್ಯ ಪ್ರಕಾರವೆಂದರೆ ಅದು ‘ಗಜಲ್’. ಇದು ಹೃದಯದ ಬಡಿತವನ್ನು ಅಳೆಯುವ ಪ್ಯಾರಾಮೀಟರ್ ಆಗಿದ್ದು, ಸದಾ ಸಮರ್ಪಣಾ ಭಾವವನ್ನು ಎದುರು ನೋಡುತ್ತಿರುತ್ತದೆ. ಬಾಹ್ಯವಾಗಿ ಕಂಬನಿಯನ್ನು ಕಂಡರೆ ಮಾರುದ್ದ ಓಡಿ ಹೋಗುವ ನಾವುಗಳು ಗಜಲ್ ನಲ್ಲಿ ಸುರಿಯುವ ಉಪ್ಪು ನೀರಿಗೆ ಫಿದಾ ಆಗಿ ಬಿಡುತ್ತೇವೆ. ಈ ಹಿನ್ನೆಲೆಯಲ್ಲಿ ವಿರಹ ಎನ್ನುವುದು ಗಜಲ್ ಗೋಯಿಯಲ್ಲಿ ವರವಾಗಿ ಕಂಗೊಳಿಸುತ್ತದೆ. ಪ್ರೇಮಿಗಳ ಆಲಾಪನೆಯ ಮುಂದೆ ಯಾವ ಸಂಗೀತವೂ ನೆಲೆ ನಿಲ್ಲದು. ಇಂಥಹ ಆಲಾಪನೆಯ ಬಾಂಸುರಿಯೇ ಗಜಲ್. ಈ ಕೊಳಲಿನ ಮಧುರ ಸಾಂಗತ್ಯದಲ್ಲಿ ಜೀವನ ಸಾಗಿಸುತ್ತಿರುವ ಸಾವನ್ ಸಿಂಧನೂರು ಅವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮ, ವಿರಹ, ತೊರೆದ ನೋವು, ಫಲಿಸದ ಪ್ರೇಮ, ಬಿಕ್ಕಳಿಸುವ ಪ್ರೇಮ ವೈಫಲ್ಯ, ಬದುಕು, ಧಾರ್ಮಿಕ ಕಂದಾಚಾರ, ಮೌಢ್ಯತೆ, ಜಾತಿಯ ಅಸಮಾನತೆ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಸ್ತ್ರೀ ಸಂವೇದನೆ, ರೈತನ ದಾರುಣ ಸ್ಥಿತಿ, ಹೆಣ್ಣಿನ ಮುಟ್ಟು, ಆಶಾವಾದದ ನಾಳೆಯ ಕನಸುಗಳನ್ನು ಗುರುತಿಸಬಹುದು. ಇವರು ತಮ್ಮ ಅಶಅರ್ ನಲ್ಲಿ ಜಾತಿ, ಧರ್ಮ ವೈಷಮ್ಯದ ಬಗ್ಗೆ ಮಾತನಾಡುತ್ತಾ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಎಚ್ಚರಿಸುತ್ತಾರೆ.
ಪ್ರಕೃತಿಯ ಮಡಿಲಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನರು. ಪೌರುಷ್ಯ ಎಂದರೆ ಹೆಣ್ಣುಮಕ್ಕಳನ್ನು ಶೋಷಿಸುವುದಲ್ಲ, ಬದಲಿಗೆ ಅವರಿಗೆ ತಮ್ಮ ಸುತ್ತಲಿನ ಪರಿಸರದಲ್ಲಿ ಕಂಪರ್ಟೇಬಲ್ ಭಾವ ಮೂಡಿಸುವಂತದ್ದು. ಅವನಿಯಲ್ಲಿ ಬೀಜ ಬಿತ್ತುವುದೆ ಗಂಡಸ್ತನ ಎಂದುಕೊಂಡಿರುವ ಪುರುಷಪುಂಗರಿಗೇನೂ ಇಲ್ಲಿ ಬರವಿಲ್ಲ. ಅಂತೆಯೇ ಇಲ್ಲಿ ಗಜಲ್ ಗೋ ಸಾವನ್ ಅವರು ಪುರುಷ ಪ್ರಧಾನ ಸಮಾಜದ ಧೋರಣೆಗಳನ್ನು ಖಂಡಿಸುತ್ತ, ಹೆಣ್ಣಿನ ಹೆರಿಗೆ ನೋವಿಗೆ ಸಮಾನಾಂತರವಾಗಿ ತೂಗುವ ಬೇರೆ ಯಾವ ನೋವೂ ಇಲ್ಲ ಎಂಬುದನ್ನು ಈ ಷೇರ್ ಮೂಲಕ ಅರುಹಿದ್ದಾರೆ. ಇಲ್ಲಿ ಪುರಷನ ಅಟ್ಟಹಾಸ, ಮಮತಾಮಯಿ ತಾಯಿಯ ಸಹನೆ, ಶಾಂತಿ ಹಾಗೂ ತ್ಯಾಗ ಮುಖಾಮುಖಿಯಾಗಿವೆ, ಮುಖಾಮುಖಿಯಾಗುತ್ತಲೆ ಇವೆ. ಆದರೆ ತಾಯ್ತನದ ಮುಂದೆ ಗಂಡು ಗೆಲ್ಲುತಿಲ್ಲವಾದರೂ ಸೋಲು ಒಪ್ಪಿಕೊಳ್ಳದೆ ಅಹಂಗೆ ಅಂಟಿಕೊಂಡಿರುವುದನ್ನು ನಾವೆಲ್ಲರೂ ಅರಿಯಬಹುದು.
“ಬೀಜ ಬಿತ್ತುವ ಹಿಮ್ಮತ್ ಇದೆ ಎಂದು ಸೆಟೆದು ಸಾಗುವ ಯಜಮಾನರೇ
ಹಡೆವ ಬ್ಯಾನಿಯ ಜಹನ್ನುಮ್ಮಿನ ಪಡೆಯಲು ನೋವು ಯಾರು ಸಿದ್ದರಿಹರಿಲ್ಲಿ ಸಖಿ”
‘Love is sweet poison’ ಎಂಬುದನ್ನು ಒಪ್ಪಿ ಪ್ರೀತಿಸಲು ಬಿಡಲಾದೀತೆ, ಆ ಪ್ರೀತಿಯ ವಿರಹದ ಬೇಗೆಯಲ್ಲಿ ಬೆಂದಿರುವುದನ್ನು ಸುಳ್ಳು ಎನ್ನಲಾದೀತೆ! ಈ ಹಿನ್ನೆಲೆಯಲ್ಲಿ ಪ್ರೀತಿ ಎಂದರೆ ಎರಡು ಅಲಗಿನ ಕತ್ತಿಯಿದ್ದಂತೆ. ವಿರಹದ ಹೊರತಾದ ಪ್ರೀತಿ, ಪ್ರೀತಿಯೆ ಅಲ್ಲ. ಈ ವಿರಹವನ್ನೂ ಪ್ರೀತಿಸಬಹುದು, ಆದರೆ ಪ್ರೀತಿಯಲ್ಲಿ ‘ಬೇವಫಾ’ ವನ್ನು ಸಹಿಸಲಾಗುವುದಿಲ್ಲ. ಈ ಅನುರಾಗ ಎನ್ನುವುದು ಸೂಕ್ಷ ಸಂವೇದನೆಯ ಚಿಟ್ಟೆ ಇದ್ದಂತೆ. ಗಟ್ಟಿಯಾಗಿ ಹಿಡಿದರೆ ಉಸಿರುಗಟ್ಟಿ ಸಾಯುತ್ತದೆ, ಬಿಟ್ಟರೆ ಹಾರಿ ಹೋಗುತ್ತದೆ. ಈ ಎರಡರ ಸಮನ್ವಯವೆ ಪ್ರೀತಿ. ಇಂಥಹ ಪ್ರೀತಿಯಲ್ಲಿ ಮೋಸ ಹೋದ ಹೃದಯದ ತೊಳಲಾಟವನ್ನು ಸುಖನವರ್ ಸಾವನ್ ಅವರು ಪ್ರೇಮಿಗಳ ಹೃದಯದಾಳಕ್ಕೆ ಇಳಿಯುವಂತೆ ಚಿತ್ರಿಸಿದ್ದಾರೆ. ನಿಜವಾದ ಪ್ರೀತಿಯೆಂದರೆ ಪಡೆದುಕೊಳ್ಳುವ ಹಪಾಹಪಿಯಲ್ಲ, ನೆಮ್ಮದಿಯ ನಿಟ್ಟುಸಿರು. ತಾನು ಪ್ರೀತಿಸಿದ ಜೀವ ಎಲ್ಲಿಯಾದರೂ ಇರಲಿ, ಸುಖವಾಗಿ ಇರಲಿ ಎಂಬ ಸಾರ್ವತ್ರಿಕ ಸಂದೇಶಗಳನ್ನು ಈ ಕೆಳಗಿನ ಷೇರ್ ಪ್ರತಿಧ್ವನಿಸುತ್ತಿದೆ.
“ಬೇಕಿದ್ದರೆ ಪ್ರಾಣ ಕೊಡುತ್ತಿದ್ದೆ ಯಾಕೆ ಪ್ರೀತಿಸಿ ಕೊಂದೆ
ಕೇಳಿದ್ದರೆ ಹಾದಿ ಬಿಡುತ್ತಿದ್ದೆ ಯಾಕೆ ತಪ್ಪಿಸಿ ಕೊಂದೆ”
ಗಜಲ್ ಎನ್ನುವಂತದ್ದು ಎಂದೊ ಆಗಿಹೋದ ಪ್ರಕ್ರಿಯೆಯ ಚರ್ವಿತ ಚರ್ವಣವಲ್ಲ. ಇದು ಸದಾ ಕ್ರಿಯೆಯಲ್ಲಿರುವ ಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಯಾರೂ ಯಾವುದೇ ಒಂದು ಕಾಲಘಟ್ಟದ ಬಿಂದುವಿನಲ್ಲಿ ನಿಂತು ಸುಖನವರ್ ಆಗಲು ಸಾಧ್ಯವಿಲ್ಲ, ಅವರು ತಮ್ಮ ಜೀವನದುದ್ದಕ್ಕೂ ಶಾಯರ್ ಆಗುತ್ತಲೇ ಇರುತ್ತಾರೆ, ಇರಬೇಕು ಕೂಡ. ಆ ಪ್ರಕ್ರಿಯೆಯಲ್ಲಿ ವಿಶ್ವಾಸವನ್ನಿರಿಸಿ ಅನುಭವ ನಿಷ್ಠವಾಗಿ, ಸ್ವವಿಮರ್ಶೆಯನ್ನು ಮಾಡಿಕೊಳ್ಳುತ್ತ, ಭಾಷೆಯ ಹೊಸ ಹೊಸ ಸಾಧ್ಯತೆಗಳನ್ನು ಅರಸುತ್ತ ನವ ನವೀನ ಪ್ರತಿಮೆ-ರೂಪಕಗಳ ಸೃಷ್ಟಿಗಾಗಿ ಹಾತೊರೆಯುವುದರ ಮೂಲಕ ಉತ್ತಮ ಗಜಲ್ ಗಳ ಕಾರವಾನ್ ನೆರವಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಸಾವನ್ ಸಿಂಧನೂರು ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ರಚನೆಯಾಗಲಿ, ಗಜಲ್ ಮೇಲಾ ಸಂಭ್ರಮಿಸಲಿ ಎಂದು ಶುಭ ಹಾರೈಸುತ್ತೇನೆ.
“ಮನಸ್ಸನ್ನು ಮುರಿದು ಹೋಗುವವಳೆ ಮನಸ್ಸಿನ ಮಾತನ್ನಾದರೂ ಹೇಳಿ ಹೋಗು
ಇವಾಗ ನಾ ಮನಸ್ಸಿಗೆ ಏನು ವಿವರಿಸಲಿ ನನಗೆ ವಿವರಿಸಿಯಾದರೂ ಹೇಳಿ ಹೋಗು”
–ಹಫೀಜ್ ಜಾಲಂದ್ರಿ
ಗಜಲ್ ಗುಲ್ಜಾರ್ ನ ಮೇಹಫಿಲ್ ನಲ್ಲಿ ಮಲ್ಲಿಗೆ ದಣಿವೆಂಬುದೆ ಇಲ್ಲ. ಅಶಅರ್ ನ ದಳಗಳ ಸ್ವಾದ ಜಗತ್ತನ್ನು ತಣಿಸುತ್ತಿದೆ. ಆದರೆ ವಕ್ತ್ ಮಾತ್ರ ಕಾಲಕಾಲಕ್ಕೆ ಅಲ್ಪವಿರಾಮ ಹಾಕುತ್ತಲೆ ಇರುತ್ತದೆ ಅಲ್ಲವೇ… ಸೋ… ಗಡಿಯಾರದ ಮುಳ್ಳುಗಳನ್ನು ಗೌರವಿಸುತ್ತ ಇಲ್ಲಿಂದ ನಿರ್ಗಮಿಸುತ್ತಿರುವೆ. ಮತ್ತೆ ಮುಂದಿನ ಗುರುವಾರ ತಮ್ಮ ಭೇಟಿಗಾಗಿ ಸುಖನವರ್ ಒಬ್ಬರ ದಾಸ್ತಾನ್ ನೊಂದಿಗೆ ಬರುತ್ತೇನೆ. ಅಲ್ಲಿಯವರೆಗೆ ಅಲ್ವಿದಾ ದೋಸ್ತೋ..
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ