ಅಂಕಣ ಸಂಗಾತಿ
ಸಿನಿ ಸಂಗಾತಿ
The Critic
ವಿಮರ್ಶಕನ ವಿಮರ್ಶೆ
ಚಿತ್ರದ ಮೊದಲ ದೃಶ್ಯ. ಪುಸ್ತಕದ ರಾಶಿಯ ಮಧ್ಯೆ ಒಬ್ಬ ವ್ಯಕ್ತಿ ಕುಳಿತಿದ್ದಾರೆ. ಪುಸ್ತಕ ಕೈಯಲ್ಲಿ ಹಿಡಿದಿದ್ದಾರೆ. ಫೋನಿನಲ್ಲಿ ಮಾತನಾಡುತ್ತಾ ಇಂದಿನ ಆಧುನಿಕ ಸಾಹಿತ್ಯ, ವಿಮರ್ಶೆ ಇವುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸಭೆಯೊಂದರಲ್ಲಿ ಅತಿಥಿಯಾಗಿ ಭಾಗವಹಿಸಲು ಅವರಿಗೆ ಆಹ್ವಾನ ಬಂದಿರುತ್ತದೆ. ಅವರ ಮಾತಿನಲ್ಲಿ ಸ್ವ ಪ್ರಶಂಸೆ ಎದ್ದು ಕಾಣುತ್ತದೆ. ಅವರೊಬ್ಬ ಖ್ಯಾತ ವಿಮರ್ಶಕರೆಂಬುದನ್ನು ಗೊತ್ತು ಪಡಿಸುತ್ತಾರೆ ನಿರ್ದೇಶಕರು ಈ ದೃಶ್ಯದಲ್ಲಿ.
ಅದೇ ದೃಶ್ಯದಲ್ಲಿ ಹುಡುಗಿಯೊಬ್ಬಳು ಬರುತ್ತಾಳೆ. ಆಕೆ ಒಬ್ಬ ಯುವ ಲೇಖಕಿ. ತಾನು ಬರೆದ ಪುಸ್ತಕವನ್ನು ಈ ಹಿರಿಯ ವಿಮರ್ಶಕರಿಗೆ ಉಡುಗೊರೆಯಾಗಿ ನೀಡಿ ಓದಿ ಅಭಿಪ್ರಾಯ ತಿಳಿಸಲು ಕೇಳುತ್ತಾಳೆ. ವಿಮರ್ಶೆ ಮಾಡಿದರೆ ಮತ್ತಷ್ಟು ಒಳ್ಳೆಯದೆನ್ನುತ್ತಾಳೆ ಮತ್ತು ತಾನು ಆ ವಿಮರ್ಶಕರ ಅಭಿಮಾನಿ ಎಂಬುದನ್ನು ತಿಳಿಸುತ್ತಾಳೆ.
ಪುಸ್ತಕವನ್ನು ಓದಿ ಸ್ವಲ್ಪ ಸಮಯದ ನಂತರ ತಾನೆ ಕರೆ ಮಾಡಿ ಬರಲು ತಿಳಿಸುವುದಾಗಿ ವಿಮರ್ಶಕ ಆಕೆಗೆ ಹೇಳಿ ಕಳುಹಿಸುತ್ತಾರೆ. ಆಕೆಯ ಆಗಮನಕ್ಕೂ ಮುನ್ನ ಯಾವುದೋ ಬಿಲ್ ಪಾವತಿಗಾಗಿ ತಮ್ಮ ಟೇಬಲ್ ಮೇಲೆ ವಿಮರ್ಶಕರು ಇಟ್ಟಿದ್ದ ಹಣ ಆಕೆಯ ನಿರ್ಗಮನದ ನಂತರ ಅಲ್ಲಿರುವುದಿಲ್ಲ. ಯುವಲೇಖಕಿಯನ್ನು ಹೊರತುಪಡಿಸಿ ಬೇರಾರೂ ಕೋಣೆಗೆ ಬಾರದೇ ಇರುವುದರಿಂದ ಆಕೆಯೇ ಹಣ ಕದ್ದಿದ್ದಾಳೆ ಎಂಬ ತೀರ್ಮಾನಕ್ಕೆ ವಿಮರ್ಶಕರು ಬರುತ್ತಾರೆ.
ದೃಶ್ಯ ಎರಡರಲ್ಲಿ ಆ ಯುವಲೇಖಕಿ ವಿಮರ್ಶಕರನ್ನು ಭೇಟಿಯಾಗಲು ಮತ್ತೆ ಬಂದಿದ್ದಾಳೆ. ಈ ವಿಮರ್ಶಕ ಅವಳ ಪುಸ್ತಕದ ಬಗ್ಗೆ, ಲೇಖಕಿಯ ಬರವಣಿಗೆಯ ಬಗ್ಗೆ ಕಥಾ ನಾಯಕಿಯ ಪಾತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನ ಆಡುತ್ತಾರೆ.
ಲೇಖಕಿಯ ಮುಖ ಸಂತಸದಿಂದ ಅರಳುತ್ತದೆ. ಮುಂದಿನ ಕ್ಷಣದಲ್ಲಿ ವಿಮರ್ಶಕರ ಮುಖಭಾವ ಬದಲಾಗುತ್ತದೆ. ಆ ವಿಮರ್ಶಕ ಹುಡುಗಿಯ ಮೇಲೆ ಅವರ ಹಣವನ್ನು ಕದ್ದೊಯ್ದ ಆರೋಪವನ್ನು ಹೊರೆಸಿ ಛೀಮಾರಿ ಹಾಕುತ್ತಾರೆ. “ನಿನಗೆ ಕಷ್ಟವಿದೆ ಎಂದು ನೇರವಾಗಿ ಹೇಳಿದ್ದರೆ ಹಣ ಸಹಾಯ ಮಾಡುತ್ತಿದ್ದೇನಲ್ಲ ಮ್ಮ “ಎಂದು ಗದರುತ್ತಾರೆ.
ಕಣ್ಣಲಿ ನೀರು ತುಂಬಿಕೊಳ್ಳುವ ಲೇಖಕಿ, ತಾನು ಹಣ ಕದ್ದಿದ್ದು ತಪ್ಪು ಎಂದು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ತನ್ನ ಪುಸ್ತಕವನ್ನು ವಾಪಸ್ಸು ಕೊಡಿರೆಂದು ಕಠೋರ ಧ್ವನಿಯಲ್ಲಿ ಖಚಿತ ಧ್ವನಿಯಲ್ಲಿ ಕಿರುಚುತ್ತಾಳೆ. ಕುಪಿತಗೊಂಡ ವಿಮರ್ಶಕ ಅವಳು ಬರೆದ ಪುಸ್ತಕವನ್ನು ರೊಯ್ಯನೆ ಎಸೆಯುತ್ತಾರೆ.
ಪುಸ್ತಕದೊಳಗಿಂದ ನೋಟುಗಳು ಉದುರಿ ಬೀಳುತ್ತದೆ. ವಿಮರ್ಶಕ ಪೆಚ್ಚಾಗಿ ನಿಲ್ಲುತ್ತಾರೆ…!!
ಪುಸ್ತಕವನ್ನೇ ಓದದೆ ಪುಸ್ತಕದ ನಾಯಕಿಯ ಬಗ್ಗೆ , ಪುಸ್ತಕದ ಬಗ್ಗೆ ವಿಮರ್ಶೆ ಮಾಡಿದ್ದನ್ನು ನಾಯಕಿ ಖಂಡಿಸುತ್ತಾಳೆ, ಅವರಡೆಗೆ ಆಕ್ರೋಶದ ನೋಟ ಬೀರುತ್ತಾಳೆ, ತನ್ನ ಪುಸ್ತಕದೊಂದಿಗೆ ಹೊರ ನಡೆಯುತ್ತಾಳೆ. ಇದರೊಂದಿಗೆ ಚಿತ್ರ ಮುಕ್ತಾಯಗೊಳ್ಳುತ್ತದೆ.
ಈ ಚಿತ್ರದಲ್ಲಿ ದೊಡ್ಡ ಮನುಷ್ಯರ ಸಣ್ಣತನವನ್ನು ಬಹಳ ಅಚ್ಚುಕಟ್ಟಾಗಿ ಬಯಲಿಗೆಳೆದಿದ್ದಾರೆ ನಿರ್ದೇಶಕ ಮಂಸೋರೆಯವರು. ತನ್ನೊಳಗಿನ ಹುಳುಕುಗಳನ್ನು ತಾನು ಆತ್ಮ ವಿಮರ್ಶೆ ಮಾಡಿಕೊಳ್ಳದ ವಿಮರ್ಶಕನ ಟೊಳ್ಳುತನ ಕಳಚಿ ಬೀಳುವುದು ಈ ಕಿರು ಚಿತ್ರದ ವೈಶಿಷ್ಟ್ಯ.
ಆಧುನಿಕ ಸಾಹಿತ್ಯ ವಲಯದಲ್ಲಿ ಪ್ರತಿಷ್ಠೆ, ಕೀರ್ತಿಗಳ ಹಿಂದೆ ಓಡುವ ಲೇಖಕರ ನಿಜರೂಪವೇನು ಎಂಬುದನ್ನು ಈ ಕಿರು ಚಿತ್ರದಲ್ಲಿ ಕಾಣಬಹುದಾಗಿದೆ.
ನಾತಿಚರಾಮಿ., Act 1978, ಹರಿವು- ಅಂತಹ ಉತ್ತಮ ಸದಭಿರುಚಿಯ ಚಿತ್ರಗಳನ್ನು ನೀಡಿರುವ ಮಂಸೋರೆಯವರ ದಕ್ಷ ನಿರ್ದೇಶನದಲ್ಲಿ ಈ ಕಿರುಚಿತ್ರ -“the critic” ಮೂಡಿಬಂದಿದೆ.
ಹಿರಿಯ ಛಾಯಾಗ್ರಹಕ ಸತ್ಯ ಹೆಗಡೆಯವರ ತಂಡದಿಂದ “the critic” ನಿರ್ಮಾಣಗೊಂಡಿದೆ. ಕಥೆಗೆ ಬಳಸಿರುವ ಸೆಟ್ ಬಹಳ ಚೆನ್ನಾಗಿದೆ. ಛಾಯಾಗ್ರಹಣ ನಟರ ಭಾವನೆಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಚಿತ್ರಕಥೆ ಅಚ್ಚುಕಟ್ಟಾಗಿದೆ.
ಖ್ಯಾತ ರಂಗಕರ್ಮಿ, ಹಿರಿಯ ನಿರ್ದೇಶಕ ಟಿ ಎಸ್ ನಾಗಭರಣರವರು ವಿಮರ್ಶಕನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಲೇಖಕಿಯಾಗಿ ಯುವನಟಿ ಉಮಾ ಅವರದು ಹೊಸ ಪರಿಚಯ. ಈಕೆ ಉತ್ತಮ ಗಾಯಕಿಯು ಕೂಡ, ಇವರು ಸಹ ಪಾತ್ರ ವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
ಸುಮಾರು 11 ನಿಮಿಷದ ಕಿರುಚಿತ್ರ the critic ನೀಡುವ ಪರಿಣಾಮ ಗಾಢವಾದದ್ದು. ಸತ್ಯ ಹೆಗಡೆ ಸ್ಟುಡಿಯೋಸ್ ನಿಂದ ಮತ್ತಷ್ಟು ಉತ್ತಮ ಕಿರು ಚಿತ್ರಗಳನ್ನು ನಿರೀಕ್ಷಿಸಬಹುದಾಗಿದೆ.
ಯೂಟ್ಯೂಬ್ ನಲ್ಲಿ ಈ ಕಿರುಚಿತ್ರ ಲಭ್ಯವಿದೆ.
ಕುಸುಮಾ ಮಂಜುನಾಥ್
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.
Very nice
Super ವಿಮರ್ಶೆ