ಅನಸೂಯ ಜಹಗೀರದಾರರ ನೀಹಾರಿಕೆ

ಪುಸ್ತಕ ಸಂಗಾತಿ

ಅನಸೂಯ ಜಹಗೀರದಾರರ ನೀಹಾರಿಕೆ

ತನ್ನರಿವೇ ತನಗೆ ಗುರುವಾದ ಆತ್ಮಸಾಕ್ಷಿ

ಅನಸೂಯ ಜಹಗೀರದಾರರ ನೀಹಾರಿಕೆ

ಅನಸೂಯ ಜಹಗೀರದಾರ ಅವರು ಪ್ರತಿಭಾವಂತೆ.ಶಾಲಾ ಕಾಲೇಜು ದಿನಗಳಿಂದಲು ಓದುವ ಬರೆವ ಹವ್ಯಾಸವಿತ್ತು.ಜೊತೆಗೆ ಸಂಗೀತದ ಅಭ್ಯಾಸ ಹೀಗಾಗಿ ಹಾಡುವ ಕೋಗಿಲೆಯೂ ಆದವರು.ಈಗ ಒಟ್ಟು ನಾಲ್ಕು ಸಂಕಲನಗಳ ಬರಹಗಾರ್ತಿ. ಬರೆಯುವ ಹದಗಾರ್ತಿಯೂ ಆಗಿದ್ದಾರೆ.ಸಹೃದಯತೆ,ಮಾನವೀಯತೆ,ಮಕ್ಕಳಿಗೆ ಕಲಿಸುವಲ್ಲಿಯೂ ಶಿಸ್ತು. ಹೀಗಾಗಿ ಮಕ್ಕಳ ಮಮಕಾರದ ಗುರುಮಾತೆಯೂ ಆಗಿದ್ದಾರೆ.

ಸಾಹಿತ್ಯಕ್ಕಾಗಿ ಡಾ.ಡಿ.ಎಸ್.ಕರ್ಕಿ,ಕಾವ್ಯ ಪ್ರಶಸ್ತಿ,’ಕಾವ್ಯಶ್ರೀ ಪ್ರಶಸ್ತಿ,ಕುವೆಂಪು ಕಾವ್ಯ ಪುರಸ್ಕಾರ ಪಡೆದಿದ್ದಾರೆ.ಕನ್ನಡ ಸಾಹಿತ್ಯ, ಕಲೆ,ಸಂಸ್ಕೃತಿ ಸೇವೆಗಾಗಿ ಕೊಪ್ಪಳ ಜಿಲ್ಲಾಡಳಿತದ ರಾಜ್ಯೋತ್ಸವ ಪುರಸ್ಕಾರ, ಶಿಕ್ಷಣ ಕ್ಷೇತ್ರ ಸಾಧನೆಗಾಗಿ ವೃತ್ತಿಯಲ್ಲಿನ ನಿಷ್ಠೆಗಾಗಿ ಉತ್ತಮ ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.ಹೀಗೆ ಬಹುಮುಖ ವ್ಯಕ್ತಿತ್ವದೆಡೆ ಪಯಣ ಇವರದಾಗಿದೆ.

ಈ ನೀಹಾರಿಕೆ ಹನಿಗವನ ಪುಸ್ತಕದಲ್ಲಿ ಹನ್ನೊಂದು ಶೀರ್ಷಿಕೆಗಳಿದ್ದುಅವುಗಳ ಮೇಲೆ ಹನಿಯ ಗೀತೆ ಬರೆದಿದ್ದಾರೆ. ಮೊದಲ ಶೀರ್ಷಿಕೆ ನೀಹಾರಿಕೆ, ರೈತ, ಚೈನಾಬಜಾರ್, ಪ್ರೇಮ, ಅಲಂಕಾರ, ಅವಳು, ಜಾಹೀರಾತು, ನವೀನ(ತ)ಗಾದೆ,ಕವಿತೆ,ಬದುಕು,ಅವನು, ಈ ಎಲ್ಲ ವೈವಿಧ್ಯಮಯ ರಚನೆಗಳು ಸೇರಿ ೧೫೧ ಕವಿತೆಗಳಿವೆ.

ತಿಳಿವಿನಿಂದ ಬಂದದ್ದು,ಅರಿವಿನಿಂದ ಹೊಮ್ಮಿದ್ದು,ಆತ್ಮಸಾಕ್ಷಿಯಿಂದ ಪುಟಿದೆದ್ದು ಕವಯತ್ರಿಯಲ್ಲಿ ಸಂಗಮವಾಗಿದೆ.ಈ ಒಟ್ಟು ಹನ್ನೊಂದು ಶೀರ್ಷಿಕೆಯಲ್ಲಿ ಎಲ್ಲವೂ ನೋಡಲು ಸಿಗುವ,ಅನುಭವಿಸಿದ್ದನ್ನು ಹೇಳುವ,ಅನುಭವವಾಗಿ ಕಂಡಿದ್ದು ಕವಿತೆಗಳಾಗಿವೆ.ಜೀವಪರ ಕಾಳಜಿಯೊಳಗೆ ಬದುಕನ್ನು ನೋಡಿರುವುದು ಅನನ್ಯವೆನಿಸುತ್ತದೆ.

ಒಂದೊಂದು ಕವಿತೆಯಲ್ಲೂ ಒಂದೊಂದುರುಚಿ,ಆಸೆ,ನಿರಾಸೆ,ಅಪೇಕ್ಷೆ,ದುಃಖ,ದುಗುಡ,ಬೇಸರ,ನೋವು ಸಂತಸ,ಸಂಭ್ರಮ,ಹೇಳದಿರುವುದು,ಹೇಳಲೇಬೇಕಾದದ್ದು ಎಲ್ಲವೂ ಈ ಸಂಕಲನದ ನೀಹಾರಿಕೆಯಲ್ಲಿ ಇದೆ.

ಪ್ರೀತಿಯಿಂದ ಬರೆಯಿಸಿದ ಶರಚ್ಚಂದ್ರ ತಳ್ಳಿ ಅವರ ಮುನ್ನುಡಿಯಿದೆ.ಡಾ.ಆನಂದ ಋಗ್ವೇದಿ ಅವರ ಶಾಲು ಹೊದಿಸಿದ ಬೆನ್ನುಡಿ ಇದೆ.ಲೇಖಕಿಯ ಅನುಭವದ ನುಡಿಯೂ ಇದೆ.’ನೀಹಾರಿಕೆ’ ಓದಿ ತಿಳಿಯಬೇಕಾದ ಸಂತಸ ಹೊಂದಬೇಕಾದ ಕ್ಷಣಗಳು ಪುಸ್ತಕ ಎತ್ತಿಕೊಂಡಾಗ, ಕಣ್ಣಿಗೆ ಒತ್ತಿಕೊಂಡಾಗ..ಇದ್ದೇ ಇದೆ.ಅದನ್ನು ಓದುಗರು ಮಾಡಲಿ.ಅವರೆಲ್ಲರ ಮೃಷ್ಟಾನ್ನ ಈ ನೀಹಾರಿಕೆ

ಈ ಸಂಕಲನದ ಐದು ಹನಿಗಳನ್ನು ಆಯ್ದುಕೊಂಡು ವಿಶ್ಲೇಷಣೆಯನ್ನು ತಮ್ಮ ಮುಂದಿಡುವೆ.ಇಲ್ಲಿ ಬಹುಪಾಲು ೧೫೧ ಚುಟುಕುಗಳು ಮುತ್ತೇ..! ನಾನಿಲ್ಲಿ ಹೇಳುವುದು ಐದನ್ನು ಮಾತ್ರ..!

ಲೋಕಕ್ಕೆ ಅನ್ನ ನೀಡುವವನೇ ರೈತ ಯೋಗಿ. ಆತನೇ ದೈವ.ಆತನೇ ದೇವ.ಕವಯತ್ರಿ ಅನಸೂಯ ಅವರ ಭಾವದಲ್ಲಿ ಮೂಡಿದ ಈ ಹನಿ

ಪೊಳ್ಳು ಭರವಸೆಗಳಿವೆ

ರೈತನ ಬೊಗಸೆ ತುಂಬಾ

ಬಳಲಿದ್ದಾನೆ ತೆವಳಿದ್ದಾನೆ

ಕ್ರಿಮಿನಾಶಕವೀಗ ಒಡಲತುಂಬಾ..!!

ಎಲ್ಲರೂ ಅಯ್ಯೋ..!! ಅನ್ನುವವರೇ..ಆ ರೈತನ ನಿಜವಾದ ತ್ಯಾಗ ಶತಶತಮಾನ ದಾಟಿದರೂ ತಿಳಿಯುತ್ತಿಲ್ಲ.ಆತನ ಮುಂದಿರುವುದು ಈಗ ನಿಜವಾದ ಕ್ರಿಮಿನಾಶಕ ಎನ್ನುವುದನ್ನು ಮಾರ್ಮಿಕವಾಗಿ ದಾಖಲಿಸಿದ್ದಾರೆ.

ಇಲ್ಲಿ ‘ಪ್ರೇಮ’ ಎಂಬುದು ಜೀವಸತ್ವ.ಕಾರುಣ್ಯತೆ ಪಡೆವ ಮಾನವನಿಗೆ ಇದು ದೊರೆಯಲೇಬೇಕು.ಅಂದಾಗ ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ.

ಕನ್ನಡಿ ಒಡೆದಿದೆ

ಯಾರನ್ನು ದೂರಲಿ

ಕಂಡ ಮುಖ

ನನ್ನವರದೇ…!

ಮಾಯೆ ಯಾರನ್ನು ಬಿಡದೇ ಹಿಂಸಿಸುವುದರ ಉದಾಹರಣೆಯಿದು.

ನಿನ್ನ ಕಣ್ಣ ಕಡಲಿನಲಿ

ಮುಳುಗಿಸಿಬಿಡು ನನ್ನ…

ರೆಪ್ಪೆ ಕಾವಲಾಗಲಿಬಿಡು..

ಹೀಗಾದರೂ

ಒಂದಾಗೋಣ….!

ದುಃಖವಿರಲಿ,ಬಡತನವಿರಲಿ,ಕಾವಲಾಗಲು ಇರುವ ಸಂಬಂಧವೇ ನಿಜವಾದ ಗುರುತ್ವ ಎಂಬುದು ಕವಯತ್ರಿಯ ಭಾವವಾಗಿದೆ.ಈ ಬುವಿಯಲ್ಲಿ ಹೆಣ್ಣು

ಗಂಡು ಬೇನೆ ಬೇಕು ಆಗಲೇ ಅನುಭಾವ ಸಂಬಂಧ ಎನಿಸುವುದು.ಗಂಡಿನ ನೋಟದಲ್ಲಿ ಸಮಾಜದ ಅರೆತಿಳುವಳಿಕೆಯಲ್ಲಿ ಎಂಥ ನೋವು ಅನುಭವಿಸಬೇಕಾಗುವುದು ಎಂದು ‘ಅವಳು’ ಕವಿತೆಅರ್ಥೈಸುವುದು.

ಅವಳ ಅಂಗಾಂಗಗಳನ್ನೆಲ್ಲ

ಇಂಚು ಇಂಚಾಗಿ ವರ್ಣಿಸಿದ

ಕವಿಮಿತ್ರರು ಅವಳಿಗೊಂದು

ವ್ಯಕ್ತಿತ್ವ ಇದೆ ಎಂದು

ಹೇಳಲೇ ಇಲ್ಲ…!!

ಯತ್ರ ನಾರ್ಯಸ್ತು ಪೂಜ್ಯಂತೆ

ಬೇಡ ಖಂಡಿತ ಬೇಡ

ಪೂಜೆ ಬೇಡವೇ ಬೇಡ

ವ್ಯಕ್ತಿ ಅನ್ನಿ…ಸಾಕು..!!

ಹೆಣ್ಣನ್ನು ಗೌರವಿಸುವಲ್ಲಿ ದೇವತೆಗಳು ನೆಲೆಸುತ್ತಾರೆಂಬ ಸೂಕ್ತಿ ಇದೆ.ಅಂಥ ಭ್ರಮೆ ಬೇಕಿಲ್ಲ.ಪೂಜಿಸುವುದಕ್ಕಿಂತ ಬದುಕಿ ಬಾಳಿದರೆ ಸಾಕು.’ವ್ಯಕ್ತಿಯಾಗಿ ಗೌರವವಿರಲಿ’ ಎಂಬ ಕವಯತ್ರಿಯ ಆಶಯ ಇಲ್ಲಿ ವ್ಯಕ್ತವಾಗಿದೆ.

ಅನಸೂಯ ಜಹಗೀರದಾರ ಅವರ ಬರಹದಲ್ಲಿ ಕಸುವು ಇದೆ ಹಸಿವೂ ಇದೆ.ಹಂಬಲವೂ ಇದೆ.ಆತ್ಮಸಾಕ್ಷಿ ಪ್ರಜ್ಞಯಿಂದ ಬರವಣಿಗೆ ಮಾಡುತ್ತಿರುವುದು ಅವರು ನೀಡುವ ಕೃತಿಗಳೇ ಹೇಳುತ್ತವೆ.ವೈವಿಧ್ಯಮಯ ಕೃತಿಗಳು ಬರಲಿ.ನಾಡಿಗೆಲ್ಲ ನಮ್ಮೂರ ಹಬ್ಬದ ಹೂರಣ ಹರಡಲಿ ಎಂದು ಆಶಿಸುವೆ.


ಅಕ್ಬರ ಸಿ ಕಾಲಿಮಿರ್ಚಿ

2 thoughts on “ಅನಸೂಯ ಜಹಗೀರದಾರರ ನೀಹಾರಿಕೆ

Leave a Reply

Back To Top