ಪ್ರಬಂಧ ಸಂಗಾತಿ
ಅವರವರ ಭಕುತಿಗೆ..
ಜ್ಯೋತಿ ಡಿ.ಬೊಮ್ಮಾ.
ವೈಚಾರಿಕ ನಿಲುವುಳ್ಳವರನ್ನು ಕಂಡರೆ ಸಮಾಜ ಒಂದು ರೀತಿಯಲ್ಲಿ ನೋಡುತ್ತದೆ .ಓ ಅವರಾ ದೇವರು ದಿಡ್ಡಿರು ಒಂದು ಗೊತ್ತಿಲ್ಲ ಎಂದು ಮೂಗು ಮುರಿಯುತ್ತಾರೆ. ಬಹುತೇಕ ಜನರಿಗೆ ಅಂತವರ ಬಗ್ಗೆ ಒಂದು ರೀತಿಯ ಅಸಡ್ಡೆ ಮನೋಭಾವಿದೆ .ನಮ್ಮ ಜನರಲ್ಲಿ ನಾಸ್ತಿಕ ರೆಂದರೆ ದೇವರನ್ನು ಅಲ್ಲಗಳೆಯುವರು ದೇವರನ್ನು ಒಪ್ಪದವರು ಎಂಬ ಮನೋಭಾವವಿದೆ. ಆದರೆ ನಾಸ್ತಿಕತೆ ಎನ್ನುವದು ಚಾತುರ್ವಣ್ಯವನ್ನು ವಿರೋಧಿಸುವ ಮತ್ತು ಮೂಢನಂಬಿಕೆಯನ್ನು ಅಲ್ಲಗಳೆಯುವದಾಗಿದೆ.
ದೇವರು ಪೂಜೆ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವುದನ್ನು ಸಮಾಜ ಗೌರವಿಸುತ್ತದೆ. ಈ ಒಂದು ಕಾರಣ ಮೂಢನಂಬಿಕೆಗಳ ಆಚರಣೆ ಹೆಚ್ಚಾಗಲು ಕಾರಣವಾಗಿವೆ.
ನಾಸ್ತಿಕ ರಾಗಿರುವದು ಸುಲಭವಲ್ಲ ಲೋಕದೊಳಗೆ.ಅದರಲ್ಲೂ ಸ್ತ್ರೀ ಯರಿಗೆ ಇದು ಸವಾಲಿನ ಕೆಲಸ. ಹೆಣ್ಣು ಎಂದರೆ ಸಂಸ್ಕೃತಿ ಪೂಜೆ ಆಚರಣೆಗಳ ಪ್ರತಿಬಿಂಬ ಎಂದು ನಂಬಿದ ಸಮಾಜದಲ್ಲಿ ದಾರ್ಮಿಕ ಆಚರಣೆ ವಿರೋದಿಸುವದು ಕಷ್ಟಕರ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ಬದಲಾಯಿಸುವದು ಅಸಾದ್ಯ.ಪ್ರಶ್ನಿಸಿದರೆ ಸಹಿಸಿಕೊಳ್ಳದ ಮನೋಭಾವಗಳೆ ಹೆಚ್ಚು.
ವಚನ ಸಾಹಿತ್ಯ ದತ್ತ ಒಲವು ಉಳ್ಳ ನಾನು ವೈಚಾರಿಕತೆಯನ್ನು ಮತ್ತು ವೈಜ್ಞಾನಿಕ ನಿಲುವುಗಳ ಸಮರ್ಥನೆಯಲ್ಲಿ ತೊಡಗಿಕೊಳ್ಳುತಿದ್ದಂತೆ ಸಮಾಜ ನನ್ನನ್ನು ಪ್ರತ್ಯಕವಾಗಿಡತೊಡಗಿತು. ಪೂಜೆ ಆಚರಣೆಗಳತ್ತ ಒಲವು ಕಳೆದುಕೊಂಡು ದೇವರ ಕುರಿತು ನಿರ್ವಿಕಾರ ಭಾವ ಹೊಂದಿರುವದು ಬೆರೆಯವರಿಗೆ ಸಹಿಸದ ವಿಷಯವಾಯಿತು.
ಪಾತಾಳದಿಂದತ್ತತ್ತ , ಭ್ರಮಾಂಡದತ್ತತ್ತ , ಅಗಮ್ಯ ಅಗೋಚರನಾದ ನಿರಾಕಾರನಿಗೆ ಒಬ್ಬೊಬ್ಬರು ಒಂದೊಂದು ಸಾಕಾರ ರೂಪ ಕೊಟ್ಟು ಪೂಜಿಸುವದನ್ನು ಅವರವರ ಭಕುತಿಗೆ ಬಿಡಬೇಕಷ್ಟೆ. ದೇವನಿಗೆ ರೂಪ ಆಕಾರ ಯಾವದು ಇಲ್ಲ, ಅವನು ನಿರಾಕಾರ ನಿರ್ಗುಣ, ದೇವನೊಬ್ಬನೆ ನಾಮ ಹಲವು ಎಂದು ನಾನು ಹೇಳಿದರೆ ನಂಬಿದ ಭಕ್ತರನ್ನು ಕೆರಳಿಸಿದಂತೆ.
ಹಬ್ಬ ಪೂಜೆ ಆಚರಣೆಗಳಲ್ಲಿ ಉತ್ಸಾಹ ತೋರದೆ ನಿರ್ಲಿಪ್ತಳಾಗಿರುವ ನನ್ನನ್ನು ನಮ್ಮ ಮನೆಯಲ್ಲಿಯೇ ಪ್ರತ್ಯೇಕ ವಾಗಿ ನೊಡುತ್ತಾರೆ. ಸಂಪ್ರದಾಯಿವಾದಿಗಳಾದ ಅವರು ದೇವರು ಪೂಜೆ ವೃತಗಳನ್ನು ಹಾಗೆ ಮುಂದುವರೆಸಿಕೊಂಡು ಬಂದವರು .ಮನೆಯ ಮಕ್ಕಳು ಸೊಸೆಯಂದಿರು ಈ ಸಂಪ್ರದಾಯಗಳನ್ನು ಹಾಗೆ ಮುಂದುವರೆಸಿಕೊಂಡು ಹೋಗಬೆಕೆಂಬ ಅಭಿಲಾಷೆ ಸಹಜವೆ. ದೇವರಿಗೆ ವಿಧವಿಧವಾಗಿ ಬಟ್ಟೆ ಒಡವೆಗಳಿಂದ ಅಲಂಕರಿಸಿ ಪೂಜಿಸಿ , ತಾವು ಅಲಂಕರಿಸಿಕೊಂಡು ಅರಸಿನ ಕುಂಕುಮ ಕೊಡಲು ಅಕ್ಕಪಕ್ಕದ ಮುತೈದೆಯರನ್ನು ಕರೆದು (ತಮ್ಮ ತಮ್ಮ ಮನೆಯ ದೇವರ ಅಲಂಕಾರ ತೋರಿಸಿ)ಸಂಭ್ರಮಿಸುತ್ತಾರೆ.ಸಂಭ್ರಮ ಒಳ್ಳೆಯದೆ.ಆದರೆ ಆಚರಣೆ ಸಂಪ್ರದಾಯಗಳು ಮತ್ತೊಬ್ಬರ ಮನ ನೋಯಿಸುವಂತಿರುವದು ಎಷ್ಟು ಸರಿ..! ವಿಧವೆಯರನ್ನು ಇಂತಹ ಪೂಜೆ ಆಚರಣೆಗಳಿಂದ ದೂರ ಇಡಲಾಗುತ್ತದೆ. ಅವರನ್ನು ನೀವು ಇದಕ್ಕೆ ಅನರ್ಹರು ಎಂದು ಸಾರಿ ಪರೋಕ್ಷವಾಗಿ ಬಿಂಬಿಸುವ ಇಂತಹ ಸಂಪ್ರದಾಯಗಳಿಂದ ಏನು ಪ್ರಯೋಜನ. ಸಮಾಜ ತಮ್ಮನ್ನು ಸ್ವೀಕರಿಸದು ಎಂದು ಭಾವಿಸುವ ವಿಧವೆಯರು ತಾವಾಗಿಯೇ ಇಂತಹ ಕಾರ್ಯಗಳಿಂದ ದೂರ ಉಳಿಯುತ್ತಾರೆ. ಎಷ್ಟೋ ಮಠಮಾನ್ಯಗಳು ಮುತೈದೆಯರಿಗೆ ಉಡಿ ತುಂಬುವ ಕಾರ್ಯ ಕ್ರಮ ಎರ್ಪಡಿಸುತ್ತವೆ.ಅಸಮಾನತೆ ಮೂಢನಂಬಿಕೆ ಹೋಗಲಾಡಿಸುವ ಪ್ರಯತ್ನ ಮಾಡಬೇಕಾದ ಮಠಗಳಿಂದಲೆ ಇಂತಹ ತಾರತಮ್ಯದ ಕಾರ್ಯಗಳು ಜರುಗಿದರೆ ಹೇಗೆ..!
ವೈಚಾರಿಕ ನಿಲುವುಳ್ಳವರು ಎಲ್ಲರೊಳಗೊಂದಾಗಿ ಇರುವದು ಕಠಿಣವೆ , ಪ್ರಶ್ನಿಸುವ ಮನೋಭಾವದಿಂದ ಬೆರೆಯವರಿಗೆ ಅಸಹನೆಯಾಗುತ್ತದೆ. ಗುಂಪಿನಲ್ಲಿ ಗೋವಿಂದ ಎಂಬತಿದ್ದರೆ ಸರಿ ಇಲ್ಲದಿದ್ದರೆ ಭಕ್ತರ ಕೆಂಗಣ್ಣಿಗೆ ಗುರಿಯಾಗುವದು ಖಚಿತ. ಅವರೊಂದಿಗೆ ನೀರು ಕಂಡರೆ ಮುಳುಗುತ್ತ, ಗಿಡವ ಕಂಡರೆ ಸುತ್ತುತ್ತ ಸಾಗಬೇಕು.ಇಲ್ಲದಿದ್ದರೆ ಎಲ್ಲರ ಅಸಹನೆಯ ಕೇಂದ್ರ ಬಿಂದು ನಾವೆ.ದುರದೃಷ್ಟವಶಾತ್ ನಮಗೆ ಏನಾದರು ಅವಘಡ ಸಂಭವಿಸಿತೋ , ನಮ್ಮ ವೈಚಾರಿಕ ನಿಲುವುಗಳೆಲ್ಲ ಅವರ ಬಾಯಲ್ಲಿ ಆಡಿಕೊಳ್ಳುವ ವಿಷಯಗಳಾಗಿ ಬಿಡುತ್ತವೆ.
ನಮ್ಮ ಕಡೆ ಮುತೈದೆಯರನ್ನು ವಿಜೃಂಭಿಸುವದು ಬಹಳ .ಯಾವದೇ ಶುಭಕಾರ್ಯಕ್ಕೂ ಮೊದಲು ಮುತೈದೆಯರನ್ನು ಸಂಪ್ರಿತಿಗೊಳಿಸುವ ಕಾರ್ಯ ಜರುಗುತ್ತಧೆ.ಅವರ ಕಾಲು ತೊಳೆದು ಭಾರಿ ಬೋಜನ ಉಣಬಡಿಸಿ ತಮ್ಮಧೀರ್ಘಕಾಲದ ಮುತೈದೆ ಭಾಗ್ಯಕ್ಕಾಗಿ ಅವರನ್ನು ಬೇಡಿಕೊಳ್ಳುತ್ತಾರೆ.ವ್ಯಕ್ತಿ ಪೂಜೆಯನ್ನು ವಿರೋಧಿಸುವ ನನಗೆ ಇದರಲ್ಲಿ ನಂಬಿಕೆ ಇಲ್ಲ.ಮುತೈದೆ ಭಾಗ್ಯ ಲಭಿಸಬೆಕಾದರೆ ಮತ್ತೊಬ್ಬರ ಕಾಲು ತೊಳೆದು ಪೂಜಿಸುವದಕ್ಕಿಂತ ನಮ್ಮ ನಮ್ಮ ಗಂಡಂದಿರನ್ನು ಯಾವ ಕಾಟ ಕೊಡದೆ ಅವನ ಆರೋಗ್ಯದ ಕಾಳಜಿ ವಹಿಸಿದರಾಗದೇ..! ಆದರೂ ಸಂಪ್ರದಾಯ ಮುಂದುವರೆಸಬೇಕಲ್ಲ.
ಮುತೈದೆ ಭಾಗ್ಯದ ಒಂದು ಘಟನೆ ನೆನಪಿಗೆ ಬರುತ್ತದೆ.ಸಂಬಂಧಿಕರ ಮನೆಯಲ್ಲಿ ಒಂದು ಶುಭಕಾರ್ಯ ಜರುಗುವದಿತ್ತು.ಅದಕ್ಕೂ ಮುನ್ನ ಮುತೈದೆಯರನ್ನು ಉಣಬಡಿಸಿ ಅವರನ್ನು ಸಂಪ್ರೀತಿಗೊಳಿಸಿ ಅವರ ಆಶಿರ್ವಾದ ಪಡೆದ ನಂತರವೇ ಮುಂದಿನ ಕಾರ್ಯ. ನನಗೂ ಸೇರಿಸಿ ಒಟ್ಟು ಐದು ಜನರಿಗೆ ಊಟಕ್ಕೆ ಕರೆದಿದ್ದರು. ಐದು ಜನರನ್ನು ಸಾಲಾಗಿ ಕೂಡಿಸಿ ಪಾದಗಳನ್ನು ನೀರಿನಿಂದ ತೊಳೆದು ಅರಶಿನ ಕುಂಕುಮದಿಂದ ಪೂಜಿಸಿ ತಲೆಯನ್ನು ಹೂ ದಂಡೆಯಿಂದ ಅಲಂಕರಿಸಿ ದೇವರನ್ನಾಗಿಸಿದರು.ಮನೆಯೊಡತಿ ಎಲ್ಲರಿಗೂ ಉಡಿಯಲ್ಲಿ ಹೊಸ ಬಟ್ಟೆ ಕೊಟ್ಟು ಕಾಲಿಗೆ ನಮಸ್ಕರಿಸಿ ಎಲ್ಲರ ಮುಂದೆ ವಿವಿಧ ಭಕ್ಷಗಳ ತಟ್ಟೆಯನ್ನಿಟ್ಟರು.ಇನ್ನೆನೂ ನಾವು ಊಟ ಶುರು ಮಾಡಬೇಕು , ಮನೆಯೊಡತಿಗೆ ನಮ್ಮೆಲ್ಲರನ್ನು ಮತ್ತೊಮ್ಮೆ ನಮಸ್ಕರಿಸಿ ಆಶಿರ್ವಾದ ಪಡೆದಿಕೊಳ್ಳುವ ಇಚ್ಚೆಯಾಯಿತು. ಸರದಿಯಂತೆ ಒಬ್ಬೊಬ್ಬರಿಗೆ ನಮಸ್ಕರಿಸುತ್ತ ಬಂದರು.ನನ್ನ ಪಕ್ಕದ ಮಹಿಳೆಯ ಕಾಲಿಗೆ ನಮಸ್ಕರಿಸಿ ಮುಖ ಮೇಲೆ ಎತ್ತಿದ್ದೆ ಆ ಮಹಿಳೆ ಅವರ ಕಪಾಳಕ್ಕೆ ಒಂದು ಬಿಗಿದುಬಿಟ್ಟಳು. ಕೋಪದಿಂದ ಮುಖ ಬಿಗಿದುಕೊಂಡು ಹೂಂಕರಿಸತೊಡಗಿದಳು.ಎನು ಏಕೆ ಎಂದು ಮನೆಯವರೆಲ್ಲ ಬಂದು ಸೇರುವಷ್ಟ ರಲ್ಲಿ ಮನೆಯೊಡತಿಗೆ ಅವಳ ಮೈಮೇಲೆ ದೇವರು ಬಂದಿರುವದು ಅರ್ಥವಾಗಿತ್ತು. ದೇವರು ತನ್ನನ್ನು ಹೊಡೆದಿರಬೇಕಾದರೆ ತಮ್ಮಿಂದ ಏನೋ ಘೋರವಾದ ತಪ್ಪೆ ಜರುಗಿರಬಹುದೆಂದು ಭಾವಿಸಿ ಗಟ್ಟಿಯಾಗಿ ಅವಳ ಕಾಲು ಹಿಡಿದುಕೊಂಡು ತಮ್ಮ ತಪ್ಪನ್ನು ಮನ್ನಿಸಲು ಕೋರಿಕೊಳ್ಳತೊಡಗಿದರು. ಅವರ ಕೋರಿಕೆ ಹೆಚ್ಚಾದಷ್ಟು ದೇವರ ಅರ್ಭಟ ಹೆಚ್ಚುತಿತ್ತು.ಪಕ್ಕದಲ್ಲೇ ಇದ್ದ , ಅಲ್ಲ ಬಂದ ದೇವರನ್ನು ನೋಡಿ ನನಗೆ ವಿಸ್ಮಯ. ಪ್ರತಿಯೊಬ್ಬರು ದೇವರ ಸಿಟ್ಟಿಗೆ ಕಾರಣ ಕೆಳುವವರೆ , ಹೂಂಕರಿಸಿ ಸಾಕಾದ ದೇವರು ಕೊನೆಗೂ ಬಾಯಿಬಿಟ್ಟಿತು. ಮನೆಯ ಹಿರಿಯರಾದ ತಮಗೆ ಮನೆಯವರಿಂದ ನಿರಾದರವಾಗಿದೆ.ತನ್ನ ಬೆಳ್ಳಿಯ ಮೂರ್ತಿ ಮಾಡಿಸಿ ಮೆರೆಸಿ ದೇವರಮನೆಯ ಜಗುಲಿಯಲ್ಲಿ ಪ್ರತಿಷ್ಟಾಪಿಸಿ ನಿತ್ಯ ಪೂಜೆಗೈಯಲು ಅಪ್ಪಣೆ ಕೊಟ್ಟಿತು. ಮನೆಯವರೆಲ್ಲ ಗಲ್ಲಗಲ್ಲ ಬಡಿದುಕೊಂಡು ಸಮ್ಮತಿಸಿದರು.ತುಂಬಿದ ಕೊಡದಲ್ಲಿನ ನೀರು ತಂದು ಆ ದೇವರ ಮೇಲೆ ಸಿಂಪಡಿಸದ್ಧೆ ತಡ ಆ ಮಹಿಳೆಯೊಳಗಿನ ದೇವರು ನಿರ್ಗಮಿಸಿದರು.ದೇವರು ಹೋದದ್ಧೆ ಎಲ್ಲರು ನಿರಾಳರಾದರು.ದೇವರಿಗಾಗಿ ಎನೆಲ್ಲ ಮಾಡುವ ಜನರು ಹೀಗೆ ದೇವರು ಎದುರಿಗೆ ಬಂದರೆ ಹೀಗೇಕೆ ವಿಚಲಿತರಾಗುತ್ತಾರೋ , ಆ ದೇವರನ್ನು ತಿರುಗಿ ಕಳಿಸಿಯೇ ತೀರುತ್ತಾರೆ. ತೀರ್ಥ ಯಾತ್ರೆಗೆ ಹೋದರು ಅಷ್ಟೆ , ಬಂದಮೇಲೆ ದೇವರನ್ನು ಕಳಿಸುವ ಒಂದು ಕಾರ್ಯಕ್ರಮ ವಿರುತ್ತದೆ. ಕರೆದುಕೊಂಡು ಬಂದು ಮತ್ತೆಕೆ ಕಳಿಸುತ್ತಾರೋ. ದೇವರು ನಿರ್ಗಮಿಸಿದ ಮೇಲೆ ಆ ಮಹಿಳೆ ಏನು ಆಗೆ ಇಲ್ಲವೇನೋ ಎಂಬಂತೆ ಸುಮ್ಮನೆ ಕುಳಿತಿದ್ದಳು.ಇಷ್ಟು ಹೊತ್ತು ಆಗಿದ್ದ ಕ್ಕೂ ತನಗೂ ಸಂಭಂಧವೆ ಇಲ್ಲವೆಂಬಂತೆ.ಅವಳಿಂದ ಏಟು ತಿಂದ ಮನೆಯೊಡತಿಯು ಮಂಕಾಗಿದ್ದರು.ನನಗಂತೂ ಈ ಮಹಿಳೆ ಯಾವದೋ ವೈಮನಸ್ಸಿನಿಂದ ಈ ರೀತಿ ಸೇಡು ತೀರಿಸಿಕೊಂಡಿರಬಹುದೆಂಬ ಅನುಮಾನ ಕಾಡುತ್ತಲೆ ಇತ್ತು.
ದೇವರು ಮತ್ತು ಪೂಜೆಗಳು ಕ್ರಮಬದ್ದವಾದ ಜೀವನಶೈಲಿಯ ಒಂದು ವ್ಯವಸ್ಥಿತ ವಿಧಾನಗಳಾಗಿವೆ. ಆದರೆ ಪರಿಶುದ್ದ ಕಾಯಕದಲ್ಲಿ ತೊಡಗಿರುವ ಯಾರಿಗಾದರೂ ಇವುಗಳ ಅವಶ್ಯಕತೆಯೇ ಇಲ್ಲ. ನಮ್ಮ ದೇಶದ ಬಹುಪಾಲು ಜನರು ಅಂಜುವದು ಕೇವಲ ಎರಡೇ ವಿಷಯಗಳಿಗೆ.ಒಂದು ದೆವ್ವ ಮತ್ತು ಇನ್ನೊಂದು ದೇವರು.ಇವರ ನಂಬಿಕೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಒಂದು ಸಮೂಹವೇ ಇದೆ.
ಎಷ್ಟೋ ಜನ ತಾವು ದುಡಿದ ಹಣವೆಲ್ಲ ಈ ದೇವರ ಕಾರ್ಯಗಳಿಗೆ ಸುರಿಯುತ್ತಾರೆ.ತಳ ಸಮುದಾಯಗಳಲ್ಲಿ ಇದು ಹೆಚ್ಚಾಗಿ ಕಾಣಬಹುದು. ದೂರ ದೂರದ ಊರುಗಳಿಗೆ ವಲಸೆ ಹೋಗಿ ದುಡಿದು ತಂದ ಹಣವನ್ನೆಲ್ಲ ದೇವರ ಕಾರ್ಯ ಮಾಡಲು ವಿನಿಯೋಗಿಸುತ್ತಾರೆ.ಹರಕೆಯ ಹೆಸರಲ್ಲಿ ಬಲಿಕೊಟ್ಟು ನೆಂಟರಿಷ್ಟರಿಗೆಲ್ಲ ಊಟ ಹಾಕಿ ದುಡಿದದ್ದನ್ನೆಲ್ಲ ಖಾಲಿಮಾಡಿಕೊಂಡು ಮತ್ತೆ ದುಡಿಯಲು ವಲಸೆ ಹೋಗುತ್ತಾರೆ.
ವಿದ್ಯಾವಂತರಾದವರು ಇದಕ್ಕೆ ಹೋರತಾಗಿಲ್ಲ.ನೆಮ್ಮದಿಯನ್ನರಸುತ್ತ ಜೋತಿಷಿಗಳ ಮೋರೆ ಹೋಗಿ ಅವರು ಹೇಳಿದ ಹಾಗೆ ಕೇಳಿ ಇದ್ದದ್ದು ಕಳೆದುಕೊಂಡ ಎಷ್ಟೋ ಉದಾಹರಣೆಗಳುಂಟು. ನನ್ನ ಪರಿಚಯದ ಮಹಿಳೆಯೊಬ್ಬರು ಉನ್ನತ ಹುದ್ದೆಯಲ್ಲಿರುವರು.ಒಳ್ಳೆ ಸಂಸಾರ ಹಣ ಎಲ್ಲವೂ ಇದ್ದರು ಸದಾ ಅಸಮಾಧಾನದಿಂದ ಬಳಲುತಿದ್ದರು. ಸದಾ ತಮಗೆ ಯಾವದೋ ಗ್ರಹಗತಿಯ ಕಾಟವಿದೆ ಎಂದೇ ಭಾವಿಸುತಿದ್ದರು.ಅವರಿವರ ಹತ್ತಿರ ಕೇಳಿಸಿ ನೋಡುವದು , ಅವರು ಸೂಚಿಸಿದ ಪೂಜೆಗಳನ್ನು ಮಾಡುವದು. ಹೀಗೆ ಒಂದಾದ ನಂತರ ಒಂದು ಪೂಜೆ ಹೋಮ ಮಾಡುತ್ತ ಸದಾ ಆತಂಕದಲ್ಲೆ ಇರುತಿದ್ದರು. ಒಮ್ಮೆ ಒಬ್ಬ ಸ್ವಾಮಿಗಳು ಒಂದು ದೇವಸ್ಥಾನ ದಲ್ಲಿ ಹರಾಜಿನಲ್ಲಿ ಕೊಡುವ ಮೂರ್ತಿ ತಂದು ಮನೆಯಲ್ಲಿ ನಿತ್ಯ ಪೂಜಿಸಿದರೆ ಎಲ್ಲಾ ಕಷ್ಟ ಪರಿಹಾರವಾಗುತ್ತವೆಂದು ಹೇಳಿದರು . ಎಷ್ಟು ದುಡ್ಡಾದರು ಸರಿ ಆ ದೇವರ ಮೂರ್ತಿ ತಮಗೆ ದಕ್ಕಬೆಕೆಂದು ಹಠಕ್ಕೆ ಬಿದ್ದು ಎಲ್ಲರಿಗಿಂತ ಅಧಿಕ ದುಡ್ಡನ್ನು ಹರಾಜಿನಲ್ಲಿ ಕೂಗಿ ಒಂದು ಲಕ್ಷ ಹಣವನ್ನು ದೇವಸ್ಥಾನ ದ ಕಮಿಟಿಯವರಿಗೆ ಕೊಟ್ಟು ಆ ಮೂರ್ತಿಯನ್ನು ಮನೆಗೆ ಕೊಂಡು ತಂದರು. ಶುರುವಿನಲ್ಲಿ ಸಾಕ್ಷಾತ್ ದೇವನೆ ತನ್ನ ಮನೆಗೆ ಬಂದಿರುವನೆಂಬಂತೆ ಸಂತೋಷದಿಂದ ಪೂಜೆಯಲ್ಲಿ ತಲ್ಲಿನರಾಗಿ ನೆಮ್ಮದಿಯಿಂದಿದ್ದರು. ಕೃಮೇಣ ಆ ಮೂರ್ತಿ , ಪೂಜೆ ಎಲ್ಲವೂ ಬೇಸರವಾಗಿ ಮತ್ತೆ ಅಸಮಾಧಾನದಿಂದ ಬಳಲತೊಡಗಿದರು.ಅಷ್ಟು ಹೋರಾಡಿ ತಂದ ಆ ಬೆಳ್ಳಿಯ ಮೂರ್ತಿ (ದೇವರು) ಇಟ್ಟಲ್ಲೆ ಕಪ್ಪಾಗಿ ಕುಳಿತಿದೆ.
ಹೀಗೆ ನೆಮ್ಮದಿ ಸಲುವಾಗಿ ಮಾಡುವ ಪೂಜೆಗಳು ಅವರು ನಿರಿಕ್ಷಿಸಿದ ಫಲ ಕೊಡದೆ ಇದ್ದಾಗ ಖಿನ್ನತೆಗೊಳಪಡುತ್ತಾರೆ. ಅಂಧಾನುಕರಣೆ ಅನುಸರಿಸುವರಿಗೆ ತಿಳಿ ಹೇಳುವದು ಕಷ್ಟವೆ. ಪೂಜೆ ವೃತಗಳಿಗಾಗಿ ಸಮಯ ವ್ಯಯಿಸದೆ ನಿಮ್ಮ ನಿಮ್ಮ ಕಾಯಕದಲ್ಲಿ ತಲ್ಲಿನರಾಗಿ ಆರೋಗ್ಯ ಚನ್ನಾಗಿ ನೋಡಿಕೊಳ್ಳಿ ಎಂದು ನಾನು ಹೇಳಿದರೆ ಮೂಗು ಮುರಿಯುವವರೆ ಹೆಚ್ಚು.
ನಮ್ಮ ಸಮಾಜದಲ್ಲಿ ನಾಸ್ತಿಕ ರಾಗಿರುವದು ಸುಲಭ ಅಲ್ಲವೆ ಅಲ್ಲ.
ಜ್ಯೋತಿ ಡಿ.ಬೊಮ್ಮಾ.
..
ಚನ್ನಾಗಿದೆ..
ದೇವರು ಬಂದವರ ಕಪಾಳ ಮೋಕ್ಷ