ಕಾವ್ಯ ಸಂಗಾತಿ
ಯುಗಧರ್ಮದಹಾಡು
ದೀಪ್ತಿ ಭದ್ರಾವತಿ
ಹಾಡುತ್ತೇವೆ ನಾವು
ಏರುದನಿಯಲ್ಲಿ
“ನಾನು ಸೀತೆ, ನಾನು ದ್ರೌಪದಿ, ನಾನು ಅಹಲ್ಯಾ”
ನಮ್ಮ ಯುಗಧರ್ಮದ ಹಾಡು ಅದು..
ಬರೆದದ್ದು ಯಾರೆಂದು ಗೊತ್ತಿಲ್ಲ
ಮಟ್ಟುಗಳ ಹೆಕ್ಕಿದವರು ತಿಳಿದಿಲ್ಲ
ಆದಿ ಅನಾದಿಗಳ ಅರಿವಿನಿಂದಾಚೆ
ಹುಟ್ಟಿದ ಸಾಲುಗಳ ಹೆಪ್ಪು ಹಾಕಿ
ದಾಟಿಸಿದರು ಬೆರಳಿನಿಂದ ಬೆರಳಿಗೆ
ಅಮ್ಮಂದಿರು ಅವರ ಅಮ್ಮಂದಿರು
ಮತ್ತವರ ಅಮ್ಮಂದಿರು
ಮಿಳಿತಗೊಂಡ ಮಿಡಿತಗಳಲ್ಲಿ
ಹುಟ್ಟಿಕೊಳ್ಳುತ್ತವೆ ಆಗೀಗ
ಹತ್ತಾರು ಅಂತ:ಪುರಗಳು
ಎಲ್ಲಿಯೋ ಯಾರೋ ಪಿಸುಗುಟ್ಟುವಂತೆ
ಮತ್ಯಾರೋ ಬಿಕ್ಕಿದಂತೆ..
ಮತ್ತೆ ಇನ್ಯಾರೋ ಕೂಗಲು ಕೊರಳು
ದಕ್ಕದೆ ಬೊಬ್ಬೆ ಹಾಕಿದಂತೆ..
ನಿಯಮಿತದ ಆಗಸದಲ್ಲಿ ಅಸಹನೆಯ
ಮೋಡವೊಂದು ಅಚಾನಕ್ ಚಲಿಸಿ
ಧೂಳೇಳುತ್ತದೆ..
ತುಸು ಹೊತ್ತು ತಡೆದು ನಿಲ್ಲುತ್ತೇವೆ
ದನಿಗಳು ಬಂದ ಕಡೆಯೆಲ್ಲ ಕತ್ತುಗಳು ಹೊರಳುತ್ತವೆ
“ಒಂದಿಷ್ಟುಸಂಸ್ಕೃತಿಯಿಲ್ಲ” ಬೈಯ್ಯುತ್ತಾಳೆ ಹಳೆಯ
ಮುತ್ತೈದೆಯೊಬ್ಬಳು
“ಹೌದುಹೌದು”ಕಂಠಗಳು ಉದ್ಘರಿಸುತ್ತವೆ..
ಲಯ ತಪ್ಪಿಸಿಕೊಂಡವರು ಎದ್ದ ಗೀರುಗಳ
ನೇವರಿಸಿಕೊಳ್ಳುತ್ತ ಮತ್ತೆ ಆಲಾಪದಲ್ಲಿ
ಸೇರಿಕೊಳ್ಳುತ್ತಾರೆ.
ರಾಗ ಬದಲಿಸಿದ ನೋವಿನಲಿ
ಮುಲಾಮು ಹಚ್ಚುವ ನೆವಕೆ
ತಮ್ಮದೇ ಮಕ್ಕಳ ಜಡೆಗಳ ಬಿಗಿ ಹೆಣೆದು
ದನಿಗಳ ಶೃತಗೊಳಿಸುತ್ತಾರೆ..
ಹಾಡು ಮತ್ತೆ ಹುರುಪುಗೊಳ್ಳುತ್ತದೆ..
“ನಾನುಸೀತೆ, ನಾನುದ್ರೌಪದಿ,..
ನಾನು…?
ದೀಪ್ತಿ ಭದ್ರಾವತಿ