ಹೊಂಗಿರಣ

ಕಥಾ ಸಂಗಾತಿ

ಹೊಂಗಿರಣ

ಪ್ರೊ ರಾಜನಂದಾ ಘಾರ್ಗಿ

ಮಾಲತಿಯ ಹೃದಯ ಒಡೆದು ಚೂರಾಗಿತ್ತು. ಜೀವನದ ಪ್ರೇರಣೆಯಾಗಿದ್ದ ಮಗಳು ಮನೆ ತೊರೆದಿದ್ದಳು.ಮಗಳು ಓದಿ ದೊಡ್ಡ ಅಧಿಕಾರಿಯಾಗಬೇಕು ಎಂದುಕೊಂಡಿದ್ದ ಮಾಲತಿಯ ಆಸೆ ಮಣ್ಣುಗೂಡಿಸಿ ತಾಯಿಯ ವಿರೋಧವನ್ನು ಲೆಕ್ಕಿಸದೆ ಮಗಳು ತನ್ನ ಸಹಪಾಠಿಯನ್ನು ಮದುವೆ ಮಾಡಿಕೊಂಡಿದ್ದಳು. ಮಾಲತಿಯ ಸಂಪ್ರದಾಯಸ್ತ ಮನಸ್ಸು ಬೇರೆ ಜಾತಿಯ ರಾಜೇಶನ್ನು ಅಳಿಯನೆಂದು ಒಪ್ಪಿಕೊಳ್ಳು ಹಟ ಮಾಡಿತ್ತು.ಒಂದೇ ಊರಿನಲ್ಲಿದ್ದ ತಾಯಿ ಮಗಳನ್ನು ಅಹಂಕಾರದ ಗೋಡೆ ಬೇರ್ಪಡಿಸಿತ್ತು.
ಮದುವೆಯಾದ ಮೂರು ವರ್ಷಗಳಲ್ಲಿಯೇ ಪತಿಯನ್ನು ಕಳೆದುಕೊಂಡು ವಿಧವೆಯಾಗಿದ್ದ ಮಾಲತಿ ಒಂದು ವರ್ಷದ ಚಿಕ್ಕ ಮಗುವಾಗಿದ್ದ ಕೀರ್ತಿಯನ್ನು ಸಾಕುವುದರಲ್ಲಿ ತನ್ನ ದುಃಖವನ್ನು ಮರೆತಿದ್ದಳು. ಹತ್ತಿರದಲ್ಲಿಯೇ ಇದ್ದ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಮಗಳನ್ನು ಬೆಳೆಸುವದರಲ್ಲಿ ಜೀವನದ ಉದ್ದೇಶವನ್ನು ಕಂಡುಕೊಂಡಿದ್ದಳು. ಮಗಳು ಮನೆಯ ಬಿಟ್ಟು ಹೋದಾಗ ಮಾಲತಿಯ ಜೀವನದಲ್ಲಿ ಅಂಧಕಾರ ತುಂಬಿಕೊಂಡಿತ್ತು. ಜೀವನ ವ್ಯರ್ಥ ವೆನಿಸಿತ್ತು. ಜೀವನಾ ಯಾಂತ್ರಿಕವಾಗಿತ್ತು. ಅಂದು ರಾತ್ರಿ ಊಟ ಮಾಡಿ ಮಲಗಿದ ಮಾಲತಿಗೆ ಯಾರೋ ಬಾಗಿಲು ಬಡಿದ ಶಬ್ದ ಕೇಳಿ ಎಚ್ಚರವಾಯಿತು. ದೀಪಬೆಳಗಿಸಿ ನೋಡಿದಾಗ ರಾತ್ರಿ 12 ಗಂಟೆ. ಸ್ವಲ್ಪ ಹೆದರಿಕೆ ಹಾಗೂ ಆತಂಕದೊಂದಿಗೆ ಬಾಗಿಲ ಹತ್ತಿರ ಬಂದು ಯಾರು ಎಂದು ಕೇಳಿದಾಗ ಹೊರಗಡೆಯಿಂದ “ನಾನು ಮಮ್ಮಿ ಕೀರ್ತಿ” ಎನ್ನುವ ಧ್ವನಿ ಕೇಳಿ ಬಂದಿತ್ತು …..
ಸಂತೋಷ ಹಾಗು ಆತಂಕ ಎರಡೂ ಒತ್ತಿಕೊಂಡು ಬಂದಿದ್ದವು ಮಾಲತಿಗೆ. ಬಾಗಿಲು ತೆಗೆದಾಗ ಎದುರಿಗೆ ಕಂಡಿದ್ದು ತುಂಬು ಗರ್ಭಿಣಿ ಕೀರ್ತಿ. ಮಾಲತಿ ಮಾತನಾಡಲು ಬಾಯಿ ತೆರಯುವಷ್ಟರಲ್ಲಿ ಹಿಂದಿನಿಂದ ಬಂದ ರಾಜೇಶ ಮುಂದೆ ಬಂದು ಆಕೆಯ ಕಾಲು ಮುಟ್ಟಿ ನಮಸ್ಕರಿಸುತ್ತ “ಕ್ಷಮಿಸಿ ಅತ್ತೆ ಕೀರ್ತಿಗೆ ಆಗಲೇ ನೂವು ಪ್ರಾರಂಭ ಆದ ಹಾಗಿದೆ. ಆಸ್ಪತ್ರೆಗೆ ಹೊರಟಿದ್ದೆವೆ. ನೀವು ಜೋತೆಯಲ್ಲಿ ಇರಲೇ ಬೇಕು ಅಂತ ಹಟ ಹಿಡಿದಿದ್ದಾಳೆ” ರಾಜೇಶನ ಮಾತು ಕೇಳಿದ ಮಾಲತಿಯ ಹೃದಯದಲ್ಲಿ ಹೆಪ್ಪುಗಟ್ಟಿದ್ದ ವಿರೋಧ ಸಿಟ್ಟು ಮೇಣದಂತೆ ಕರಗಿ ಹರಿದಿತ್ತು. ಮಗಳ ಮೇಲಿನ ಪ್ರೀತಿ ಗೆದ್ದಿತ್ತು. ಮಗಳ ತೆಲೆ ಸವರಿ ಬೇಗನೆ ಚೀಲದಲ್ಲಿ ತನಗೆ ಅವಶ್ಯಕ ವಸ್ತುಗಳೊಂದಿಗೆ ಬಾಗಿಲಿಗೆ ಬೀಗ ಹಾಕಿ ಹೊರಟಿದ್ದಳು.ಕೀರ್ತಿ ಉದರದಲ್ಲಿದ್ದ ಮಗು ಇಬ್ಬರ ಹಟದ ಹೆಪ್ಪು ಕರಗಿಸಿ ಎರಡು ಮಾತೃ ಹೃದಯಗಳ ಜೋಡಿಸುವ ಕೊಂಡಿಯಾಗಿತ್ತು. ಮಾಲತಿಯ ಬರಡು ಜೀವನದಲ್ಲಿ ಹೊಸ ಭರವಸೆಯ ಹೊಂಗಿರಣ ಮೂಡಿತ್ತು.


Leave a Reply

Back To Top