ಅಂಕಣ ಸಂಗಾತಿ

ಗಜಲ್ ಲೋಕ

ಅಭಿಜ್ಞಾರವರ ಗಜಲ್ ಗಳಲ್ಲಿ ಪದ ಲಾಲಿತ್ಯ…

ಹೇಗಿದ್ದೀರಾ, ಏನು ಮಾಡ್ತಾ ಇದ್ದೀರಾ ಗಜಲ್ ಪ್ರೇಮಿಗಳೆ, ಗಜಲ್ ಗುರುವಾರಕ್ಕಾಗಿ ಕಾಯುತ್ತಿರುವಿರೊ.. ತುಂಬಾ ಸಂತೋಷವಾಗುತ್ತಿದೆ, ತಮ್ಮೆಲ್ಲರ ಗಜಲ್ ಪ್ರೀತಿಯ ಕಂಡು! ತಮಗೆಲ್ಲರಿಗೂ ಗಜಲ್ ಪಾಗಲ್ ನ ದಿಲ್ ಸೇ ಸಲಾಮ್…ತಮ್ಮೆಲ್ಲರ ಪ್ರೀತಿಗೆ ಸೋತು ಪ್ರತಿ ವಾರದಂತೆ ಈ ವಾರವೂ ಸಹ ಓರ್ವ ಗಜಲ್ ಗೋ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬಂದಿರುವೆ. ಸ್ವಾಗತಿಸುವಿರಲ್ಲವೇ….!!

ನಾಲ್ಕು ದಾರಿ ಕೂಡುವಲ್ಲಿ ಕಲ್ಲಿನಿಂದ ಜಜ್ಜಿ ಮಹಿಳೆಯನ್ನು ಕೊಂದರು

ಎಲ್ಲರೂ ಸೇರಿ ಅವಳೇನು ತಪ್ಪು ಮಾಡಿದ್ದಳು ಎಂದು ಯೋಚಿಸಿದರು”

ಜಿಯಾ ಜಮೀರ್

        ಅಳುವ ಕಂದನನ್ನು ಸಂತೈಸುವ ಜೋಗುಳ ಹಾಡುಗಳೊಂದಿಗೆ ಸಾಹಿತ್ಯ, ಸಂಗೀತ ಮತ್ತು ಕಲೆ ರೂಪುಗೊಂಡಿವೆ. ಪದಗಳಲ್ಲಿ ಹೇಳಲಾಗದ ಮತ್ತು ಮೌನವಾಗಿರಲು ಅಸಾಧ್ಯವಾದಾಗ ಸಂಗೀತವು ಉದಯಿಸುತ್ತದೆ. ಇದರ ಪ್ಯಾರಲಲ್ ಆಗಿ ಅಕ್ಷರದ ಅಕ್ಕರೆಯ ತೊಟ್ಟಿಲು ನುಲಿಯುತ್ತಿರುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಎನ್ನುವುದು ಹಲವು ಆಯಾಮಗಳಿಂದ, ವೈವಿಧ್ಯಮಯ ಸಂವೇದನೆಗಳಿಂದ, ಸಮಾಜಮುಖಿ ಚಿಂತನೆಗಳಿಂದ ರೂಪುಗೊಳ್ಳುತ್ತದೆ. ಇದೊಂದು ಭಾಷೆಯ ಉತ್ಪಾದನೆಯ ಪುನರ್ ಸೃಷ್ಟಿ. ಈ ದಿಸೆಯಲ್ಲಿ “Without literature, life is hell” ಎಂಬ ಚಾರ್ಲ್ಸ್ ಬುಕೋವಸ್ಕಿ ಯವರ ಮಾತು ಸಾಹಿತ್ಯದ ಮಹತ್ವವನ್ನು ಸಾರುತ್ತದೆ. ಇದು ಕೇವಲ ಮನೋರಂಜನೆಯ, ಸಮಯ ಕಳೆಯುವ ಸಾಧನವಲ್ಲ. ಇದು ನಮ್ಮನ್ನು ನಮ್ಮ ಪೂರ್ವಜರೊಂದಿಗೆ ಮುಖಾಮುಖಿಯಾಗುವಂತೆ ಮಾಡುತ್ತದೆ. ಜೊತೆಗೆ ಹಳೆಯ ಮತ್ತು ಹೊಸ ತಲೆಮಾರಿನ ಕೊಂಡಿಯಾಗಿ ಸಮಾಜದಲ್ಲಿ ಪಾರಿವಾಳವನ್ನು ಹಾರಿಸುತ್ತದೆ. ಈ ನೆಲೆಯಲ್ಲಿ “The reading of all good books is like conversation with the finest men of past centuries” ಎಂಬ ರೇನೆ ಡೆಸ್ಕಾರ್ಟ್ಸ್ ರವರ ಮಾತನ್ನು ಇಲ್ಲಿ ಅನುಲಕ್ಷಿಸಬಹುದು.‌ ಈ ಸಾಹಿತ್ಯದ ಹೃದಯ ಭಾಗವಾದ ಕಾವ್ಯವು ಹಕ್ಕಿಯಂತೆ ಹಾರಾಡುತ್ತ ಗಡಿಗಳನ್ನು ನಿರ್ಲಕ್ಷಿಸುತ್ತ, ಬಂಡಾಯ, ಕ್ರಾಂತಿ ಮತ್ತು ಪ್ರಜ್ಞೆಯನ್ನು ಹೆಚ್ಚಿಸುವ ಜೀವಾಳವಾಗಿದೆ. ಇಂಥಹ ಕಾವ್ಯದ ಓಘ ಪರಪಂಚದ ಹೆಚ್ಚಿನ ಭಾಷೆಗಳಲ್ಲಿ ಕಾಣುತ್ತೇವೆ. ಅರಬ್ ನ ‘ಗಜಲ್’

ಎನ್ನುವ ಶಬ್ದ ಪರ್ಷಿಯನ್ ನ ಸಾಂಸ್ಕೃತಿಕ ಮಡಿಲಲ್ಲಿ ಬೆಳೆದು ಇಡೀ ಮನುಕುಲದ ನಿದ್ದೆಯನ್ನು ಕಂಗೆಡಿಸಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಈ ನೆಲೆಯಲ್ಲಿ ‘ಗಜಲ್’ ಎಂದರೆ ನೋವಿನ ಜನ್ಹಾಜವನ್ನು ಹೊತ್ತು ಸಾಗುತ್ತಿರುವ ಹೃದಯವಂತೆ!! ಈ ಹೃದಯವಂತೆಯನ್ನು ಪ್ರೀತಿಸುತ್ತ, ಗಜಲ್ ಗೋಯಿಯಲ್ಲಿ ಸಕ್ರಿಯರಾಗಿರುವ ಅಸಂಖ್ಯಾತ ಗಜಲ್ ಅವರುಗಳಲ್ಲಿ ಶ್ರೀಮತಿ ಅಭಿಜ್ಞಾ ಪಿ.ಎಮ್ ಗೌಡ ಅವರೂ ಒಬ್ಬರು.

       ಶ್ರೀಮತಿ ಅಭಿಜ್ಞಾ ಪಿ ಎಮ್ ಗೌಡ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಪ್ಪಟ ರೈತ ಕುಟುಂಬದ ಶ್ರೀ ರಾಮಣ್ಣ ಮತ್ತು ಶ್ರೀಮತಿ ಪುಟ್ಟಮ್ಮ ದಂಪತಿಗಳ ಮಗಳಾಗಿ ಜನಿಸಿದ್ದಾರೆ. ಇವರು ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಹುಟ್ಟುರಾದ ನಾಗಮಂಗಲದಲ್ಲಿ ಮುಗಿಸಿ ನಂತರ ಬಿ.ಎ ಪದವಿಯನ್ನು ಮಂಡ್ಯದಲ್ಲಿ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ತುಮಕೂರಿನಲ್ಲಿ ಬಿ ಎಡ್. ಪದವಿಯನ್ನು ಪಡೆದಿದ್ದಾರೆ. ಶ್ರೀ ಮಂಜುನಾಥ ಗೌಡ ಎಂಬುವವರೊಂದಿಗೆ ಸಪ್ತಪದಿಯನ್ನು ತುಳಿದಿರುವ ಇವರಿಗೆ ಮಾ.ಕುಶಾಲ್ ಪಿ.ಎಂ. ಗೌಡ ಎಂಬ ಮಗನಿದ್ದು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತವಾಗಿ ಇವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸುತಿದ್ದಾರೆ.

       ವಿದ್ಯಾರ್ಥಿ ದಿಸೆಯಿಂದಲೇ. ಪ್ರಬಂಧ, ಚರ್ಚಾಸ್ಪರ್ಧೆ, ಭಾಷಣಕಲೆಗಳಲ್ಲಿ ಮುಂದಿದ್ದ ಶ್ರೀಯುತರು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಕ್ರಮೇಣವಾಗಿ ಕನ್ನಡ ಸಾರಸ್ವತ ಲೋಕದ ಪರಂಪರೆಯನ್ನು ಓದಿಕೊಂಡು ಇಂದು ತಮ್ಮನ್ನು ತಾವು ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಛಂದಸ್ಸಿನ ಫ್ಯಾಶನ್ ಹೊಂದಿರುವ ಇವರು ತಮ್ಮ ಬರವಣಿಗೆಯುದ್ದಕ್ಕೂ ಛಂದಸ್ಸನ್ನು ದುಡಿಸಿಕೊಳ್ಳುತ್ತ ಬಂದಿದ್ದಾರೆ!! ಕಾವ್ಯದ ಹಲವು ಪ್ರಕಾರಗಳಲ್ಲಿ ಅಂದರೆ ಷಟ್ಪದಿ, ಚತುಶ್ರಯಲಯ, ಏಳೆ, ಅಕ್ಕರಿಕೆ, ರಗಳೆ, ವೃತ್ತ, ಚುಟುಕು, ಹನಿಗವನ, ಮುಕ್ತಕ, ಜಾನಪದ… ಮುಂತಾದವುಗಳಲ್ಲಿ ವೃತ್ತಾನುಪ್ರಾಸ, ಛೇಕಾನುಪ್ರಾಸ, ಚಿತ್ರಕವಿತ್ವ ಹಾಗೂ ಶ್ಲೇಷಾಲಂಕಾರವನ್ನು ಬಳಸಿಕೊಂಡು ಕವನಗಳನ್ನು ಬರೆದಿದ್ದಾರೆ, ಬರೆಯುತಿದ್ದಾರೆ. ಇವರ ಕವನಗಳು ಭಾವಪೂರಿತವಾಗಿದ್ದು ಸುಂದರ ಪದಪುಂಜಗಳಿಂದ ಕೂಡಿದ್ದು, ಸಹೃದಯ ಓದುಗರ ಮನವನ್ನು ಸೂರೆಗೊಂಡಿವೆ. ಇವುಗಳೊಂದಿಗೆ ಕಥೆ, ನ್ಯಾನೋಕಥೆ, ಹಾಸ್ಯಕಥೆ, ಪ್ರಬಂಧ, ವಿಮರ್ಶೆ, ಲೇಖನಗಳ ಜೊತೆ ಜೊತೆಗೆ ರುಬಾಯಿ, ತಂಕಾ, ಹೈಕು, ಗಜಲ್.. ಹೀಗೆ ಹತ್ತಾರು ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ‘ಕಾನನದ ಅರಸಿ’, ‘ನೆಲಸಿರಿಯ ಮಣಿಗಳು ಶಿಶು ಸಾಹಿತ್ಯ’, ‘ಅಭಿಭಾವನ ಭಾವಗೀತೆ’, ಕೃತಿಗಳೊಂದಿಗೆ ‘ಎದೆ ತೇರಿನೊಳ್ ರಂಗೇರಿದ ಗಝಲ್’ ಎನ್ನುವ ಗಜಲ್ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

     ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಸಕ್ರೀಯರಾಗಿರುವ ಶ್ರೀಯುತರ ಹಲವಾರು ಬರಹಗಳು ಕರುನಾಡಿನ ವಿನಯವಾಣಿ, ಜನ ಮಿಡಿತ, ಸಿಂಹಧ್ವನಿ, ಕ್ರಾಂತಿಧ್ವನಿ ಹಾಗೂ ಅಂತರ್ಜಾಲದ ಹಲವಾರು ಬ್ಲಾಗ್, ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರಿಗೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಮಾಣಿಕ್ಯ ಪ್ರಕಾಶನ ಹಾಸನ ವತಿಯಿಂದ ಕೊಡಲ್ಪಡುವ ರಾಜ್ಯಮಟ್ಟದ ‘ಜನ್ನಕಾವ್ಯ ಪ್ರಶಸ್ತಿ’, ಕುವೆಂಪು ಜನ್ಮದಿನೋತ್ಸವ ಪ್ರಯುಕ್ತ

ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ‘ಶತಶೃಂಗ ಪ್ರಶಸ್ತಿ’, ೨೦೨೧ ನೇ ಸಾಲಿನ ನಾಗಮಂಗಲ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ೨೦೨೦-೨೧ ನೇ ಸಾಲಿನ ರಾಜ್ಯ ಬರಹಗಾರರ ಬಳಗ ಹೂವಿನ ಹಡಗಲಿ ಘಟಕದ ವತಿಯಿಂದ ನೀಡಲ್ಪಡುವ ‘ಸಾಹಿತ್ಯ ಸಿಂಧು ಪ್ರಶಸ್ತಿ’… ಮುಂತಾದವುಗಳು ಶ್ರೀಮತಿ ಅಭಿಜ್ಞಾ ಪಿ.ಎಮ್.ಗೌಡ ರವರ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳಾಗಿವೆ.

       ಗಜಲ್.. ಆಲದ ಮರದಂತೆ ವಿಶಾಲವಾಗಿ ವ್ಯಾಪಿಸಿದೆ. ಇದರ ಬೇರುಗಳು ಪ್ರೀತಿ, ಪ್ರೇಮ, ಪ್ರಣಯ ಹಾಗೂ ವಿರಹದಿಂದ ಕೂಡಿದ್ದರೂ ಇಂದು ಈ ಮರದ ಟೊಂಗೆಗಳ ಮೇಲೆಲ್ಲ ಸಾಮಾಜಿಕ ಸ್ಥಿತ್ಯಂತರ ಸಾರಿದ, ಸಾರುತ್ತಿರುವ ಹಕ್ಕಿಗಳು ಆಶ್ರಯ ಪಡೆದಿವೆ; ಪಡೆಯುತ್ತಿವೆ. ಉಪದೇಶ, ನೀತಿ, ಚಿಂತನೆ, ದೇಶಭಕ್ತಿಯ ವಿಷಯಗಳು, ರಾಜಕೀಯ ತಲ್ಲಣಗಳು, ಸಾಮಾಜಿಕ ಬೇಗುದಿ.. ಎಲ್ಲವೂ ಗಜಲ್ ಗಳಲ್ಲಿ ಪ್ರಸ್ತಾಪವಾಗುತ್ತಿವೆ. ಇದರಿಂದ ಗಜಲ್ ಗಳು ರಾಷ್ಟ್ರೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು‌ ಅರುಹಲು ಸಾಧ್ಯವಾಗಿದೆ. ಇಂದಿನ ಕನ್ನಡದ ಗಜಲ್ ಗಳು ಜೀವನದ ಪ್ರತಿಯೊಂದು ಸಮಸ್ಯೆಗೆ ಮುಖಾಮುಖಿಯಾಗುತ್ತಿವೆ. ಕನ್ನಡದ ಹಲವು ಗಜಲ್ ಗೋ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳ ಮೇಲೆ ಬಹಿರಂಗವಾಗಿ ಅಶಅರ್ ಮೂಲಕ ಚರ್ಚಿಸುತ್ತಿದ್ದಾರೆ. ಭ್ರಷ್ಟ ಸಮಾಜದಿಂದ ಹೊರ ಬರಲು ಹವಣಿಸುತ್ತಿರುವ ಮನಸುಗಳು ಪ್ರೀತಿ, ಪ್ರೇಮಕ್ಕೆ ಅಷ್ಟೊಂದು ಜೋತು ಬೀಳುತ್ತಿಲ್ಲ. ಮನುಕುಲವು ಇಂದು ಮೇಲು-ಕೀಳು, ಭ್ರಷ್ಟಾಚಾರದ ಶೋಷಣೆ, ಕೋಮು ಸಂಕುಚಿತ ಮನೋಭಾವದಿಂದ ವಿಚಲಿತವಾಗಿದೆ. ಹಾಗಾಗಿ ಸಹಜವಾಗಿಯೇ ಹತಾಶೆ, ಸಿಟ್ಟು, ಅತೃಪ್ತಿ, ಬಂಡಾಯದ ಧ್ವನಿಗಳು ಇಂದಿನ ಕನ್ನಡದ ಗಜಲ್ ಗಳಲ್ಲಿ ಹೆಚ್ಚು ಕೇಳಿಬರುತ್ತಿವೆ. ಈ ಕಾರಣಕ್ಕಾಗಿಯೇ ಇಂದಿನ ಸುಖನವರ್ ಅವರ ವಾಸ್ತವದ ನೆಲೆಯಲ್ಲಿ ಗಜಲ್ ಕನ್ಯೆಗೆ ಉಡುಗೆಯನ್ನು ತೊಡಿಸುತಿದ್ದಾರೆ. ಗಜಲ್ ಗೋ ಅಭಿಜ್ಞಾ ರವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮದ ಮಾಧುರ್ಯಕ್ಕಿಂತಲೂ ದಿನಂಪ್ರತಿ ನಡೆಯುವ, ನಡೆಯುತ್ತಿರುವ ವಿದ್ಯಮಾನಗಳ ಪ್ರತಿಬಿಂಬ ಕಾಣಿಸುತ್ತದೆ. ಸಮಾಜಮುಖಿ ಚಿಂತಕರ ವ್ಯಕ್ತಿ ಪರಿಚಯ, ಪೌರಾಣಿಕ ವಿಷಯ, ಹಬ್ಬ-ಹರಿದಿನಗಳ ವಿಶೇಷತೆ, ಸ್ತ್ರೀ ಸಂವೇದನೆಯ ಝಲಕ್, ಮಾನವೀಯ ಸಂಬಂಧಗಳ ಪಲ್ಲಟ, ಭಾರತೀಯ ಸಾಂಸ್ಕೃತಿಕ ಪರಂಪರೆಯ ಕಾಳಜಿ, ಗ್ರಾಮೀಣ ಬದುಕಿನ ಚಿತ್ರಣ, ಮೌಲ್ಯಗಳ ಹುಡುಕಾಟ… ಎಲ್ಲವುಗಳ ಹದವಾದ ಮಿಶ್ರಣ ಗಜಲ್ ಗೋ ಅವರ ಗಜಲ್ ಗಳಲ್ಲಿ ಕಾಣುತ್ತೇವೆ.

      ಹಲವು ಸಂವೇದನೆಗಳಲ್ಲಿ ಸ್ತ್ರೀ ಸಂವೇದನೆ ಕಟುಕರ ಮನವನ್ನು ಕರಗಿಸುತ್ತದೆ. ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆಯನ್ನು ನೀಡಬೇಕು ಎನ್ನುವ ಕೂಗುಗಳೊಂದಿಗೆ ಪ್ಯಾರಲಲ್ ಆಗಿ ಶೋಷಣೆ, ಅವಮಾನ, ಅತ್ಯಾಚಾರಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಏಕಕಾಲದಲ್ಲಿಯೆ ಮಾನವ ಹಾಗೂ ದಾನವನ ರೂಪ ತಾಳಿದ, ತಾಳುತ್ತಿರುವ ಪುರುಷನಿಂದ ಹೆಣ್ಣಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬ ತಿರುಳನ್ನು ಈ ಕೆಳಗಿನ ಷೇರ್ ಪ್ರತಿಧ್ವನಿಸುತ್ತಿದೆ. ಹೆಣ್ಣಿನ ಜನ್ಮ ಇರುವುದೇ ನೋವು, ಸಂಕಟವನ್ನು ಸಹಿಸುತ್ತ ಕಂಬನಿಯಲ್ಲಿ ಮುಳುಗಲು ಎಂಬ ಬಾಲಿಶ ಭಾವನೆಯನ್ನು ಪುರುಷ ಪ್ರಧಾನ ಸಮಾಜ ಮಹಿಳೆಯ ಎದೆಯಲ್ಲಿ ಬಿತ್ತಿಬಿಟ್ಟಿದೆ. ಈ ಕಾರಣಕ್ಕಾಗಿಯೇ ಕಂಬನಿಯ ಉಪ್ಪಿನಲ್ಲಿ ಅಡುಗೆ ಮಾಡುವ ನಳಪಾಕರ ದಂಡಿನಿಂದ ನಮ್ಮ ಸಮಾಜ ನಲುಗಿ ಹೋಗುತ್ತಿದೆ.

ಎದೆಯ ಬೀದಿಗಳು ಪಾಳು ಬಿದ್ದಂತಿದ್ದರು ನೋಡುವವರು ಯಾರು ಇಲ್ಲ

ನದಿಯಂತೆ ಹರಿದ ಕಣ್ಣೀರ ಧಾರೆಯನು ಒರೆಸುವವರು ಯಾರು ಇಲ್ಲ”

        ಆಧುನಿಕತೆ, ಬದಲಾವಣೆ ಎನ್ನುವ ಪದಗಳ ಅರ್ಥಗಳು ಜಾಗತಿಕ ಜಗತ್ತಿನಲ್ಲಿ ಭೋಗದ ಪರಿಭಾಷೆಯಲ್ಲಿ ಬಳಕೆಯಾಗುತ್ತಿವೆ. ಅಂತೆಯೇ ಮನುಷ್ಯನಿಗೆ ಪ್ರೀತಿ, ಪ್ರೇಮ, ಮಮತೆಗಳಿಗಿಂತಲೂ ತುಂಬಿದ ಜೇಬು, ಅಲಮಾರಿಗಳೆ ಮುಖ್ಯವಾಗುತ್ತಿವೆ. ಉಸಿರಿಗಿಂತಲೂ ಬ್ಯಾಂಕ್ ಬ್ಯಾಲೆನ್ಸ್ ಪ್ರಧಾನವಾಗುತ್ತಿದೆ. ಇಲ್ಲಿ ಗಜಲ್ ಗೋ ಅವರು ಸವೆಯುತ್ತಿರುವ ಮೌಲ್ಯಗಳನ್ನು ಕಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಇರುವ  ಅಸಮಾನತೆಯನ್ನು ಕಂಡು ತಣ್ಣನೆಯ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಬೇವನ್ನು ಬಿತ್ತಿ ಮಾವನ್ನು ಬಯಸುತ್ತಿರುವ ಮನುಕುಲದ ಹುಚ್ಚಾಟವನ್ನು ತಮ್ಮ ಷೇರ್ ನಲ್ಲಿ ಸೆರೆ ಹಿಡಿದಿದ್ದಾರೆ.

ಮಮತೆ ಮರೆತು ಮಸಣದಲೂ ಧನಕನಕಕೆ ಕಾಡಿದೆಯಲ್ಲ ನೀನು

ಸಮತೆಯ ತೊರೆದಿಹ ಬಾಳಲಿ ಸಂತಸವ ಬೇಡಿದೆಯಲ್ಲ ನೀನು”

        ಗಜಲ್ ಳು ಸಹೃದಯ ಓದುಗರು ಹಾಗೂ ಶ್ರೋತೃಗಳು ಓದುತ್ತಲೇ, ಕೇಳುತ್ತಲೇ ತಮ್ಮ ಹೃದಯಗಳೊಂದಿಗೆ ಸಂಮೀಕರಿಸುವಂತೆ ಇರಬೇಕು. ಸರಳ ಹಾಗೂ ಮೆದುತನದಿಂದ ಕೂಡಿದ್ದು ಮನುಕುಲದ ಹೃದಯದಲ್ಲಿ ಉಲ್ಲಾಸದ ಸಸಿಯನ್ನು ಅರಳಿಸುವಂತಿರಬೇಕು. ಇದುವೆ ಗಜಲ್ ನ ನಾಡಿಮಿಡಿತವಾಗಿದೆ. ಗಜಲ್ ಗೋ ಶ್ರೀಮತಿ ಅಭಿಜ್ಞಾ ಪಿ.ಎಮ್.ಗೌಡ ಅವರಿಂದ ಗಜಲ್ ಮಹಲ್ ಮತ್ತಷ್ಟು ಸಿರಿತನದಿಂದ ಕಂಗೊಳಿಸಲಿ ಎಂದು ಶುಭ ಹಾರೈಸುತ್ತೇನೆ.

ಸತ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ರಾಜಕೀಯ ಅವಕಾಶ ನೀಡುವುದೇ ಇಲ್ಲ

ಕೆಲವೊಮ್ಮೆ ಮುಖಗಳ ಗುರುತು ಸಿಗುವುದಿಲ್ಲ ಕೆಲವೊಮ್ಮೆ ಕನ್ನಡಿ ಸಿಗುವುದಿಲ್ಲ”

ಅನಾಮಿಕ

      ಪ್ರತಿ ಗುರುವಾರದ ಗಜಲ್ ಗುಲ್ಜಾರ್ ನ ಸುತ್ತಾಟ ತಮ್ಮ ಮನಸುಗಳಿಗೆ ಮುದ ನೀಡುತ್ತಿದ್ದರೆ ನನ್ನ ಪ್ರಯತ್ನ ನಿಜಕ್ಕೂ ಸಾರ್ಥಕವಾಗುವುದು. ಗಜಲ್, ಗಜಲ್ ಗೋ ಕುರಿತು ಎಷ್ಟು ಬೇಕಾದರೂ ಬರೆಯಬಹುದು, ಮಾತಾಡಬಹುದು. ಆದರೆ ಏನು ಮಾಡುವುದು, ಸಮಯದ ಮುಂದೆ ಮಂಡಿಯೂರಲೆ ಬೇಕಲ್ಲವೇ! ಸೋ…ಇವಾಗ ನನ್ನ ಈ ಲೆಕ್ಕಣಿಕೆಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ಸುಖನವರ್ ಒಬ್ಬರ ಗಜಲ್ ಅಶಅರ್ ನೊಂದಿಗೆ ತಮ್ಮ ಮುಂದೆ ಹಾಜರಾಗುವೆ.‌ ಅಲ್ಲಿಯವರೆಗೆ….!!

ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top