ಕಾವ್ಯ ಸಂಗಾತಿ
ಮುನ್ನುಗ್ಗು ಗೆಳೆಯಾ…
ವಿಷ್ಣು ಆರ್. ನಾಯ್ಕ
ಮುನ್ನುಗ್ಗು ಗೆಳೆಯಾ… ಮುನ್ನುಗ್ಗು..
ನಿನ್ನ ಸುತ್ತ ಕಿತ್ತು ತಿನ್ನುವ ಹಸಿದ ರಣಹದ್ದುಗಳು…
ಬಸಿದ ರಕ್ತಕೆ ಬಾಯ್ತೆರೆದ ಕ್ರೂರ ಮೃಗಗಳು..
ಕಣ್ಣ ನಕ್ಷತ್ರವ ಕೀಳ್ವ ‘ಸೈತಾನರು’
ನಿನ್ನ ಮೂಳೆಗಂಟಿದ
ರಕ್ತರಂಜಿತ ದೇಹ….
ಒಡಲ ತುಂಬಿದ ನೋವ ಲೆಕ್ಕಿಸದೆ
ಮೂಕಸಾಕ್ಷಿಗಳಾಗಿ
ನಿಂತು ನೋಡುವ ಜನರು..
||ಮುನ್ನುಗ್ಗು… ||
ಕೈ ಹಿಡಿದು ಮೇಲೆತ್ತುವರಿಲ್ಲ..
ಹುಸಿಯಾದ ಕನಸುಗಳ ಮತ್ತೆ
ಹೊಸೆಯುವರಿಲ್ಲ…
ತಬ್ಬಿ ಸಂತೈಸುವರಿಲ್ಲ..
ಎತ್ತಲೆತ್ತಲೋ ಬದುಕ ಪಯಣ..
ಗುರಿಯಿಲ್ಲದ ದಾರಿಯಲಿ
ಕಾದುಕೂತಿದೆ ಮರಣ…!
ಇದ ಮೀರಿ ಸಾಗು ಗೆಳೆಯಾ…!
||ಮುನ್ನುಗ್ಗು..||
ಸಾವು- ಬದುಕಿನ ಹೋರಾಟದ
ಬಾಳ ರಣರಂಗದಲಿ
ನಿನ್ನ ಹೃದಯ ಚೈತನ್ಯ ದುಮ್ಮಿಕ್ಕುವ
ಜಲಧಾರೆಯಾಗಿ…
ಹರಿವ ನೆತ್ತರು ಪ್ರವಹಿಸುವ
ವಿದ್ಯುತ್ ಪ್ರವಾಹವಾಗಿ…
ಮೃತ್ಯು ಚುಂಬಿಸಿ ಗೆಲುವ
ಯಶದ ಕಾರ್ಯದಿ ಕೂಡಿ…!
||ಮುನ್ನುಗ್ಗು…||
‘ಓಯಸಿಸ್’ ಹುಡುಕಿ ಹೊರಟಿರುವ
ನಿನ್ನ ಮನದ
ಮರುಭೂಮಿಯಲಿ
ಬುದ್ಧನ ‘ಲಾಟೀನ್’ ಹಿಡಿದು,
ಕ್ರಿಸ್ತನ ಕರುಣೆಯ ಸೆಲೆವೊಡೆದು,
‘ಗಾಂಧಿ ತತ್ವ’ದ ಪಾನಕ ಕುಡಿದು
ನೀ ಸಾಗು ಗೆಳೆಯಾ..
ಆದರೆ ..
ನೀ ಕಣ್ರೆಪ್ಪೆ ಮುಚ್ಚದೇ…
ಹಸಿದು ಜತನವಾಗಿ ಕಾದಿರುವ
ನಿನ್ನ ಕನಸುಗಳ ಸಾಕಾರರೂಪಿ
‘ಸ್ವಾತಂತ್ರ್ಯದ ಹಣ್ಣ’ ಕಸಿಯಲು
ಬಂದವರ ಪಾಲಿಗೆ
‘ಕಲ್ಕಿ’ಯಾಗು ಗೆಳೆಯಾ..
ನೀ ‘ಕಲ್ಕಿ’ಯಾಗು…
||ಮುನ್ನುಗ್ಗು…|