ಕಾವ್ಯ ಸಂಗಾತಿ
ಬಚ್ಚಿಟ್ಟ ಕನಸಿನ ಪೀಠಾರ….!
ದೇವರಾಜ್ ಹುಣಸಿಕಟ್ಟಿ
ನನ್ನವ್ವ ಅದೆಷ್ಟು ಕನಸುಗಳ
ಸಾಸಿವೆ ಜೀರಿಗೆ ಡಬ್ಬಗಳಲಿ
ಬಚ್ಚಿಟ್ಟಿದ್ದಾಳೆ ಗೊತ್ತೇ…?
ಅದೆಷ್ಟೋ ವರ್ಷಗಳಿಂದ ತದೇಕ ಚಿತ್ತದಿಂದ ಕಾದಿದ್ದಾಳೆ ಗೊತ್ತೇ…?
ಕೂಡಿಟ್ಟ ಕನಸಿನ ಬಳ್ಳಿಗೆ ಸರಿದಿಯಂತೆ ನೀರು ಗೊಬ್ಬರ ಬೆಚ್ಚನೆಯ ಅಂಗೈಅಗಲದ
ಸ್ಪರ್ಶ…ನೀಡಿದ್ದಾಳೆ…!
ಒಂದೊಂದು ಕನಸು ತುಂಬು
ಬಸಿರಿಯಾದಗಲೂ
ತೀರಾ ಬಿಸಿಯ ಎದೆ
ಅಪ್ಪುಗೆಯಲಿ ಕಣ್ಣಾಲೆ ತುಂಬಿದ್ದಾಳೆ…!
ಅವಳ ಬೆವರ ಹನಿಯಲ್ಲಿ
ಬಳ್ಳಿ ಬಲಗೊಂಡು….
ಕನಸು ಹಡೆಯುವುದು ಇದೆ…..!
ನೆಲಬಿರಿದು ಕುಡಿ ಚಿಗುರೊಡೆದ
ಅನುಭವ ಅವಳಿಗೆ…!
ಮಗಳು ಮೈ ನೆರದಳೆಂದು…!
ಮಗನ ಉನ್ನತ ಓದಿಗೆಂದು…!
ಇದೆಲ್ಲಾ ಅವಳ ಖುಷಿಯ
ಕನಸಿನ ಪೀಠಾರದ ಭಾಗವೇ…!
ಒಮ್ಮೊಮ್ಮೆ ಅವಳಿಗೆ ಕೆಟ್ಟ ಕನಸು ಬೀಳುವುದುoಟು….!
ಅದು ನಿಜವಾಗುವುದೂ ಉಂಟು…
ಅಪ್ಪನ ಕುಡಿತದ ತೆವಲಿಗೆ
ಒಮ್ಮೊಮ್ಮೆ ಅಮ್ಮನ ಈ ಕನಸ
ಪೀಠಾರಕ್ಕೆ ಕತ್ತರಿ ಬಿದ್ದು…!
ಅಮ್ಮನ ಕನಸ ಕಟ್ಟೆ ತಾತ್ಕಾಲಿಕ ಒಡೆದು..!
ನೀರು ಅವಳ ಕಂಗಳು ತುಂಬಿ…
ರಾತ್ರಿಯ ನಿದ್ರೆ ಕದ್ದು..!
ಮನೆಯ ಒಂದೆರಡು ದಿನದ ನೆಮ್ಮದಿ ಮೆದ್ದು…!
ಹೊರಳುವುದಿದೆ ಸದ್ದಿಲ್ಲದೇ….!!
ಆಷಾಡಕ್ಕೆ ಸುರಿದ ಅಕಾಲಿಕ ಮಳೆಯಂತೆ…!!
ತುಂಬಿ ಬಿಡುವುದು ಮನೆ ತುಂಬ
ಚಿಂತೆ ..!
ಎರಡು ದಿನ ಅಮ್ಮ ಬಿಸಿ
ಎಣ್ಣೆಗೆ ಹಾಕಿದ ಸಾಸುವೆಯಂತೆ ಸಿಡಿಯುತ್ತಲೇ ಇರುತ್ತಾಳೆ….!
ಆಗಾಗ ಮಾತಿನಲ್ಲಿ ಅಪ್ಪನನ್ನು
ಇರೀಯುತ್ತಲೇ ಇರುತ್ತಾಳೆ…!!
ಅಪ್ಪನ ನಶೆಯ ಕನಸಿಗೆ
ಅದೆಷ್ಟು ಶಕ್ತಿ…!!
ಸೋತುಬಿಡುವುದು ಅಮ್ಮನೆಲ್ಲ ಯುಕ್ತಿ…!!
ಇಷ್ಟಾದರೂ
ಅವಳ ಕನುಸು ಹೆಣೆಯುವ
ಕಸುಬು ಮಾತ್ರ ಇನ್ನೂ ನಿಂತಿಲ್ಲ…!!