ಅಂಕಣ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

‘ವರ್ಜಿನ’ಲ್ ವಿಚಾರಗಳು 

ಪುಸ್ತಕ  ; ರಿಚರ್ಡ್ ಬ್ರಾನ್ಸನ್ ನ   ವರ್ಜಿನಲ್ ವಿಚಾರಗಳು 

ಲೇಖಕರು ವಿಶ್ವೇಶ್ವರ ಭಟ್

ಮೊದಲ ಮುದ್ರಣ ೨೦೧೦

ಪ್ರಕಾಶಕರು : ಸ್ವಪ್ನ ಬುಕ್ಹೌಸ್

ಪುಸ್ತಕ  ; ರಿಚರ್ಡ್ ಬ್ರಾನ್ಸನ್ ನ   ವರ್ಜಿನಲ್ ವಿಚಾರಗಳು 

ಲೇಖಕರು ವಿಶ್ವೇಶ್ವರ ಭಟ್

ಮೊದಲ ಮುದ್ರಣ ೨೦೧೦

ಪ್ರಕಾಶಕರು : ಸ್ವಪ್ನ ಬುಕ್ಹೌಸ್

ಸರ್ ರಿಚರ್ಡ್ ಚಾರ್ಲ್ಸ್ ನಿಕೊಲಸ್ ಬ್ರ್ಯಾನ್ ಸನ್ ಈ ಶತಮಾನ ಕಂಡ ದಿಗ್ಗಜ ಉದ್ಯಮಪತಿ . ವರ್ಜಿನ್ ನಾಮದಡಿ  ೩೫೦ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿರುವ ಪ್ರಪಂಚದ ಸಿರಿವಂತರಲ್ಲೊಬ್ಬ. 

ವಿಶ್ವೇಶ್ವರ ಭಟ್ ಅವರು ವಿಜಯವಾಣಿ ಹಾಗೂ ಕನ್ನಡಪ್ರಭ ಪತ್ರಿಕೆಗಳಲ್ಲಿನ ತಮ್ಮ ಅಂಕಣದಲ್ಲಿ ಬರೆದಿರುವ ಇವರ ಬಗೆಗಿನ ಲೇಖನಗಳ ಸಂಗ್ರಹ ಈ ಪುಸ್ತಕ ರಿಚರ್ಡ್ ಬ್ರಾನ್ ಸನ್ ನ ‘ವರ್ಜಿನ’ಲ್ ವಿಚಾರಗಳು. 

ವಿಶ್ವೇಶ್ವರ ಭಟ್ ಅವರು ಎಲ್ಲರಿಗೂ ಪರಿಚಿತ ಸೃಜನಶೀಲ ಬರಹಗಾರ ಅಂಕಣಕಾರ . “ನೂರೆಂಟು ನೋಟ” “ಜನಗಳ ಮನ” “ನಂಗೆ ಇಷ್ಟ” ಹಾಗೂ “ಸುದ್ದಿಮನೆ ಕತೆ” ಇವರ ಜನಪ್ರಿಯ ಅಂಕಣಗಳು.  ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ . ಅಬ್ದುಲ್ ಕಲಾಂ ಜತೆ ಹದಿನಾಲ್ಕು ದಿನ ನಾಲ್ಕು ದೇಶಗಳಲ್ಲಿ ಪಯಣ. ೨೦೦೫ರ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ .ಅರುವತ್ತ ಮೂರು ಪುಸ್ತಕಗಳ ಲೇಖಕ .

ಅಂಕಣಗಳಲ್ಲಿ ಮೊದಲ ಬಾರಿ ಬ್ರ್ಯಾನ್ಸನ್ ಬಗ್ಗೆ ಬರೆದ ಮೇಲೆ ಅವನ ಬಗ್ಗೆಯೇ ಹೆಚ್ಚು ಬರೆಯಬೇಕೆಂಬ ಓದುಗರ ಅಭಿಮಾನಿಗಳ ಪ್ರೀತಿ ಪೂರಕ ಆಗ್ರಹಗಳಿಂದ ತಾನು ಇವರ ಬಗ್ಗೆ ಅಷ್ಟೊಂದು ಬರೆಯಬೇಕಾಯಿತು ಅನ್ನುತ್ತಾರೆ ಲೇಖಕರು . ಓದುಗರ ಒತ್ತಡ ಇವರನ್ನು ಹೆಚ್ಚು ಹೆಚ್ಚು ಬ್ರ್ಯಾನ್ಸನ್ ಅವರ ಬಗ್ಗೆ ಓದುವಂತೆ ಮಾಡಿದ್ದು ಮತ್ತು ಓದುಗರ ಬಲವಂತದಿಂದಲೇ ಈ ಎಲ್ಲಾ ಅಂಕಣ ಬರಹಗಳ ಸಂಗ್ರಹವಾಗಿ ಪುಸ್ತಕದ ಹುಟ್ಟಿಗೆ ಕಾರಣವಾಯಿತು ಎನ್ನುತ್ತಾರೆ.   ಮುನ್ನುಡಿಯಲ್ಲಿ “ಪ್ರಪಂಚದಲ್ಲಿ ಎಷ್ಟೋ ಉದ್ಯಮಿಗಳಿದ್ದಾರೆ ಶ್ರೀಮಂತರೂ ಇದ್ದಾರೆ ಇವರ ಮಧ್ಯೆ ಬ್ರಾನ್ಸನ್ ವಿಶಿಷ್ಟ ಎನಿಸಿಕೊಳ್ಳುವುದು ಅವನ ಹುಚ್ಚು ಸಾಹಸಗಳಿಂದ.  ಹಣ ಮಾಡುವುದೊಂದೇ ಅವನ ಧ್ಯೇಯವಲ್ಲ ಜೀವನದ ಆಚರಣೆ ಆರಾಧನೆ ಅವನ ಆಶಯ. ಹೀಗಾಗಿಯೇ ಅವನ ವಿಚಾರಗಳು ವೈಯಕ್ತಿಕತೆಯ ಚೌಕಟ್ಟನ್ನು ಮೀರಿ ಸಾರ್ವತ್ರಿಕ ಮಹತ್ವ ಪಡೆಯುತ್ತವೆ”  ಎಂದು ಹೇಳುತ್ತಾ ಬ್ರಾನ್ಸನ್ ಬಗ್ಗೆ ತಿಳಿಯುವ ಕುತೂಹಲವನ್ನು ಹೆಚ್ಚಿಸುತ್ತಾರೆ 

ಒಟ್ಟು ಮೂವತ್ತು ನಾಲ್ಕು ಅಧ್ಯಾಯಗಳಲ್ಲಿ ಬ್ರಾನ್ಸನ್ನ ಮಾತು ಲೇಖನಗಳ ಅನುವಾದದಲ್ಲಿ ಅವನ ಜೀವನವನ್ನು ಜೀವನಶೈಲಿಯನ್ನು ವಿಚಾರಧಾರೆಯನ್ನು ಓದುಗರಿಗೆ ಉಣಬಡಿಸುತ್ತಾ ಹೋಗುತ್ತಾರೆ.  ನಾಟಕಗಳಲ್ಲಿನ ಸೂತ್ರಧಾರನಂತೆ ಓದುಗನಿಗೂ ಬ್ರಾನ್ಸನ್ ನಿಗೂ ಕೊಂಡಿಯಾಗುತ್ತಾ ಹೋಗುತ್ತಾರೆ.  ಈ ಶೈಲಿಯ ಕಥನ ಆಪ್ತವೆನಿಸುತ್ತದೆ .

ತನ್ನ ಹದಿನಾರನೆಯ ವಯಸ್ಸಿನಿಂದಲೂ ಸಂಗೀತ ಆಲ್ಬಂಗಳನ್ನು ಬಿಡುಗಡೆ ಮಾಡುತ್ತಾ  ಈಗ ಬಾಹ್ಯಾಂತರಿಕ್ಷ ಯಾನಕ್ಕೆ ಇಳಿಯುವ ತನಕದ ವರೆಗಿನ ಯಶೋಗಾಥೆ ಯೊಂದಿಗೆ ಸೋಲುಗಳನ್ನು ಮೆಟ್ಟಿಲು ಮಾಡಿಕೊಂಡು ಅದರಿಂದ ಪಾಠ ಕಲಿತ ಅನನ್ಯ ನಿರೂಪಣೆಗಳು ನಮಗೂ ಬ್ರ್ಯಾನ್ಸನ್ ಮೇನಿಯಾ ತಗಲುವಂತೆ ಮಾಡುತ್ತದೆ .

ಕೆಲಸದ ಬಗೆಗಿನ ಅವರ ನಿಷ್ಠೆಯನ್ನು “ಇಂದಿನ ಕೆಲಸ ಈಗಲೆ ಮುಗಿಸಿ ನಾಳೆಯ ಕೆಲಸ ಇಂದಿಗೆ ಮುಗಿಸಿ” (ಅಧ್ಯಾಯ೧) ಮಜವಾಗಿ ಕೆಲಸ ಮಾಡೋದೇ ಯಶಸ್ಸಿನ ಗುಟ್ಟು (ಅಧ್ಯಾಯ೫) ಸುಮ್ಮನೆ ಕೆಲಸ ಮಾಡುತ್ತಾ ಹೋಗಿ ಯಶಸ್ಸು ಹಿಂಬಾಲಿಸುತ್ತದೆ (ಅಧ್ಯಾಯ ೭)ಕೆಲಸ ಮಾಡದೆ ತಿನ್ನಬೇಡಿ ತಿಂದು ಕೆಲಸ ಮಾಡಿ (೧೦)ಅಧ್ಯಾಯ ಹೀಗೆ ವಿವಿಧ ಲೇಖನಗಳ ಮೂಲಕ ಪ್ರಸ್ತುತ ಪಡಿಸುತ್ತಾ ಹೋಗುತ್ತಾರೆ .

ವಿಸ್ತಾರ ದೃಷ್ಟಿಕೋನದಲ್ಲಿ ಅನಂತ ಅವಕಾಶಗಳಿದೆ ಹೆಚ್ಚಿನ ಮಟ್ಟಿನ ರಿಸ್ಕ್  ತೆಗೆದುಕೊಳ್ಳುವುದು ಇವರ ವ್ಯಕ್ತಿತ್ವದ ವಿಶೇಷ.  ಅದನ್ನೇ “ಗೆಲುವಿನ ಮೊಟ್ಟೆಗೆ ಕಾವು ಕೊಡುವುದು ಹೇಗೆ (ಅಧ್ಯಾಯ೬) ಎಲ್ಲ ಅವಕಾಶ ತನ್ನದಾಗಿಸಿಕೊಳ್ಳುವವನ ಪರ ಜಗತ್ತು ನಿಲ್ಲುತ್ತದೆ (ಅಧ್ಯಾಯ ೧೩) ಹೊಸತಕ್ಕೆ ತುಡಿಯುವವನ ಜೊತೆ ಜನರು ಮುಖ ಮಾಡುತ್ತಾರೆ (ಅಧ್ಯಾಯ೧೫) ಈ ಅಧ್ಯಾಯಗಳಲ್ಲಿ ಅನಾವರಣಗೊಳಿಸುತ್ತಾರೆ .

ಇನ್ನು ಟೀಕೆಗಳನ್ನು ಎದುರಿಸಿದೆ ಬೆಳೆಯಲು ಸಾಧ್ಯವೇ ಇಲ್ಲ ಅಂತಹ ಟೀಕಾಕಾರರ ಬಗೆಗಿನ ಅಭಿಪ್ರಾಯಗಳು “ನಿಮಗೆ ನಾಲ್ಕು ಟೀಕಾಕಾರರು ಇಲ್ಲವೆಂದರೆ ನೀವು ನಿಷ್ಪ್ರಯೋಜಕರು”  ಟೀಕಾಕಾರರನ್ನು ನಿರ್ಲಕ್ಷಿಸಿದಾಗ ಸಿಗುವ ಸುಖ ಸಮಾಧಾನ ಗೊತ್ತೇ ಇರಲಿಲ್ಲ ಈ ಅಧ್ಯಾಯಗಳಲ್ಲಿ ವ್ಯಕ್ತಪಡಿಸುತ್ತಾರೆ. 

ನಷ್ಟಕ್ಕೆ ಹೆದರಿದ್ದರೆ ವರ್ಜಿನ್ ಕಂಪನಿ ಹುಟ್ಟುತ್ತಲೇ ಇರಲಿಲ್ಲ ಎನ್ನುತ್ತಾ “ಕನಸು ಕಾಣುವುದು ತಪ್ಪಲ್ಲ ಆದರೆ ನನಸಾಗಿಸದಿರುವುದು” ಎಂದು ಸ್ಫೂರ್ತಿ ತುಂಬುತ್ತಾರೆ. 

ಇವರ ಅದಮ್ಯ ಉತ್ಸಾಹದ ಸೆಲೆ ಏನನ್ನಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ “ಆಕಾಶಕ್ಕೆ ಏಣಿ ನಿಲ್ಲಿಸಲು ಸಾಧ್ಯಾನಾ ಅಂದರೆ ಏನರ್ಥ”  (ಅಧ್ಯಾಯ೨೦) “ಹೇಳಿ ಯಾಕಾಗಲ್ಲ ಈ ಜಗತ್ತನ್ನು ಬದಲಿಸಲು”  ಎಂದು ಕೇಳುತ್ತಾರೆ .

ತಮ್ಮ ಜೀವನದಲ್ಲಿ ತಾಯಿ ತಂದೆ ಅಜ್ಜಿಯಿಂದ ಕಲಿತ ಪಾಠಗಳನ್ನು ಜೀವನದುದ್ದಕ್ಕೂ ಸ್ಮರಿಸಿಕೊಳ್ಳುವ ಇವರು ಅದರಿಂದ ಸ್ಫೂರ್ತಿ ಪಡೆದು ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದೇನೆ ಎನ್ನುತ್ತಾರೆ . ಇವರ ತಾಯಿಯು ಚಿಕ್ಕಂದಿನಿಂದ ಇವರಲ್ಲಿ ಬೆಳೆಸಿದ ಆತ್ಮವಿಶ್ವಾಸ ರಿಸ್ಕ್ ತೆಗೆದುಕೊಳ್ಳುವ ಗುಣ ಹಣಕ್ಕೆ ನೀಡುವ ಮೌಲ್ಯ ಸೋಲಿಗೆ ಹೆದರದಿರುವುದು ಇವುಗಳ ಬಗ್ಗೆ ಹೇಳುತ್ತಾ ತಾವು ತಮ್ಮ ಮಕ್ಕಳನ್ನು ಅದೇ ಹಾದಿಯಲ್ಲಿ ಬೆಳೆಸುತ್ತಿದ್ದೇನೆ ಎನ್ನುತ್ತಾರೆ .

ಕಾನೂನು ಬಾಹಿರವಾಗಿ ಹೋಗಿ ರಾತ್ರಿ ನಿದ್ದೆಗೆಡುವಂತೆ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಎಚ್ಚರಿಕೆ ಕೊಡುತ್ತಾ ಧನ್ಯವಾದ ಹೇಳುವುದರ ಮಹತ್ವ ತಿಳಿಸಿಕೊಡುತ್ತಾರೆ 

ಇಷ್ಟೆಲ್ಲ ಉದ್ಯಮಗಳ ನಿರ್ವಹಣೆಯ ಮಧ್ಯವೂ ಸಂಸಾರಕ್ಕೆ ತನ್ನ  ಬಗೆಗೆ ಸಮಯ ಕೊಟ್ಟುಕೊಳ್ಳುತ್ತಾ ಬಹುತೇಕ ಶ್ರೀಮಂತರು ಕೈಗೊಳ್ಳಲು ಹೆದರುವ ರಿಸ್ಕುಗಳಿಗೆ ಕೈಹಾಕುತ್ತಾರೆ.  ಅಟ್ಲಾಂಟಾ ಸಾಗರ ದಾಟುವುದಿರಬಹುದು ಬಿಸಿ ಬಲೂನಿನಲ್ಲಿ ಯಾನ ಕೈಗೊಳ್ಳುವುದಿರಬಹುದು ಅಥವಾ ಶಾರ್ಕ್ಗಳ ಜೊತೆ ಈಜು ವುದಿರಬಹುದು ಇಂತಹ ಹುಚ್ಚಾಟದಲ್ಲಿ ಭಾಗವಹಿಸುತ್ತ ವಿಶಿಷ್ಟವಾಗುತ್ತಾರೆ.  ಗಾಂಧೀಜಿ ಬುದ್ದರಿಂದ ಪ್ರಭಾವಿತರಾಗಿರುವ ವಿಷಯಗಳನ್ನು 

ತಿಳಿಸುತ್ತಾರೆ .ಹಣ ಸಂಪಾದಿಸುವ ನ್ನಷ್ಟೇ ಅಲ್ಲದೆ ಚಾರಿಟಿ ಗಳಿಗೆ ದಾನ ಮಾಡಿ ಸದ್ವಿನಿಯೋಗಿಸುವುದು ಇವರ ಮಾನವೀಯತೆಯ ಸಮಾಜಮುಖಿ ಗುಣಗಳಲ್ಲೊಂದು. 

“ಇಷ್ಟೆಲ್ಲಾ ಲೇಖನಗಳ ಮೂಲಕ ಅವರ ಸಂದೇಶ ಬಿಜಿನೆಸ್ ಬಗ್ಗೆ ಅಲ್ಲ ಆನಂದದ ಸಂತೃಪ್ತ ಬದುಕು ನಡೆಸುವ ಬಗ್ಗೆ ಇದನ್ನು ಯಾರಾದರೂ ಗುರುವೋ ಭಾಷಣಕಾರರೋ ಹೇಳಿದ್ದರೆ ಅದು ಎರವಲು ಸರಕು. ಇದು ಸಾಧಕನೊಬ್ಬನ ಹೃದಯದ ಮಾತು ಆತ್ಮನಿವೇದನೆ” 

ಲೇಖಕರ ಮಾತುಗಳಲ್ಲೇ ಕೇಳುವುದಾದರೆ ಈ ಪುಸ್ತಕವನ್ನು ಓದಿ ನೀವು ಅವನಂತೆ ಉದ್ಯಮಿಯಾಗದೆ ಹೋಗಬಹುದು ಆದರೆ ಜೀವನವನ್ನು ಅತ್ಯಂತ ಖುಷಿಯಿಂದ ನೋಡುವುದು ಅನುಭವಿಸುವುದು ಹೇಗೆ ಎಂಬುದರ ಬಗ್ಗೆ ಯೋಚಿಸುತ್ತಾ ಹೋಗುತ್ತೀರಿ. ಬದುಕನ್ನು ಇನ್ನಷ್ಟು ಉತ್ಕಟವಾಗಿ ಪ್ರೀತಿಸಲು ಆರಂಭಿಸುತ್ತೀರಿ ಬದುಕಿನ ಅನೇಕ ಮಜಕೂರುಗಳು ನಿಮ್ಮನ್ನು ಆಕರ್ಷಿಸಲು ಆರಂಭಿಸುತ್ತದೆ. ಅಂತಹ ಬದಲಾವಣೆಗೆ ನಾವು ತೆರೆದುಕೊಳ್ಳುತ್ತೇವೆ .

ಮುನ್ನುಡಿಯಲ್ಲಿ ಹೇಳಿದಂತೆ “ಬ್ರಾನ್ಸನ್ ಇಷ್ಟವಾಗುವುದು ಅವನು ಬದುಕನ್ನು ಸ್ವೀಕರಿಸುವ ಪರಿಯಿಂದಾಗಿ ನಮ್ಮಲ್ಲಿ ಜೀವನ ಪ್ರೀತಿಯನ್ನು ಮೂಡಿಸುವ ಕಳಕಳಿಯಿಂದಾಗಿ ಈ ರಿಚರ್ಡ್ ವಾಟ್ಸನ್ ನನ್ನ ಪಾಲಿಗಂತೂ ಬಿಟ್ಟೆನೆಂದರೂ ಬಿಡದ ಮಾಯೆ”.

ಈ ಪುಸ್ತಕ ಓದಿದ ಮೇಲೆ ಆ ಮಾಯೆಯ ಮಯಕ ನಮ್ಮನ್ನೂ ಆವರಿಸುವುದರಲ್ಲಿ ಸಂದೇಹವೇ ಇಲ್ಲ .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top