ಕಾವ್ಯ ಸಂಗಾತಿ
ಬಲ್ಲೇಯೇನು ನೀನು!?
ಮಂಜುನಾಥ ನಾಯಕ
ಕಂಡೂ ಕಾಣದಹಾಗೆ ಇರಬಹುದೆ
ನೀ ಹೀಗೆ?
ಬೀಜ ಮೊಳೆತಾಗ ಮಣ್ಣಿಗೆ ಪುಳಕ
ಬಿತ್ತಿದವನ ತನು ಮನಕೆ ಮೊಳಕೆ
ತಂದ ಸಂತಸದ ಚಿಗುರು ಬಲ್ಲೇಯೇನು ನೀನು?
ಬಲ್ಲಿದರೂ ಬಲ್ಲೆಯೇನೊ!?
ಬಾಯ್ಬಿಟ್ಟು ಹೇಳಲೊಲ್ಲೆ ನೀನು!
ಕಂಡು ಕಾಣದಂತಿರುವೆ ನನಗಾದ ಆನಂದ,
ಚಿಗುರ ಕಂಡರೆ ತಂಪಾಗದೆ
ಈ ಜೀವದ ಜೀವ ಸಂಗಾತಿಗೆ?
ಕಾಣದೇ…..ಕಂಡೂ ಕಾಣದೇ…..?
ಕಣ್ಣ ಹನಿಗಳಲೇ ಪೋಷಿಸಿದ
ಪ್ರೀತಿ ಕಾಣದಾಯಿತೆ !?
ಕಂಡದ್ದು ಬರೀ ಕಾಂಡವೇ
ಚಿಗುರು ಮೊಳೆತ ಸಂತಸದ ಹಾದಿ
ದೂರವಾಯಿತಾದರೂ ಹೇಗೆ!?
ಅರಳಿದ ಹೂ ತಾ ತೆರಳಿತಾದರೂ ಹೇಗೆ!?
ಇಟ್ಟ ಬೀಜವು ತಾ ಕುಡಿಯೊಡದಿದೆ
ಕಣ್ಣು ಬಿಟ್ಟು ನೋಡಿ
ಹರಸಬಾರದೆ ನೀ ಒಮ್ಮೆ
ನಿನ್ನ ಬೆಳಕಿಲ್ಲದ ಬದುಕಿಲ್ಲ
ಈ ನನ್ನ ಬೆಳೆಗೆ
ಈ ನನ್ನ ಬಾಳಿಗೆ
ಮಂಜುನಾಥ ನಾಯಕ