ಅಂಕಣ ಸಂಗಾತಿ
ಎಚ್.ಎಸ್.ಅನುಪಮಾರೂ ಮತ್ತು ಅವರ ‘ಕೋವಿಡ್ — ಡಾಕ್ಟರ್ ಡೈರಿ‘ ಕಥೆಗಳ ಸಂಕಲನಯೂ..! —
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮವೆಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ವೈದ್ಯೆ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಎಚ್.ಎಸ್.ಅನಪಮಾ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳನ್ನು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ – ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು – ಡಾ. ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆ, ನಾನು ಕಸ್ತೂರ್ – ಕಸ್ತೂರಬಾ ಜೀವನ ಕಥನ, ಜನ ಸಂಗಾತಿ ಭಗತ್ ಎಂಬ ಜೀವನ ಚರಿತ್ರೆ ಸೇರಿದಂತೆ ಎಂಟು ಜೀವನ ಚರಿತ್ರೆಗಳನ್ನೂ ರಚಿಸಿದ್ದಾರೆ..!
ಜೊತೆಗೆ ಮಹಿಳೆ, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ, ಮುಟ್ಟು – ವಿಜ್ಞಾನ, ಸಂಸ್ಕೃತಿ ಮತ್ತು ಅನುಭವ ಸೇರಿದಂತೆ ನಾಲ್ಕು ವೈದ್ಯಕೀಯ ಬರಹಗಳ ಸಂಕಲನಗಳನ್ನೂ ಪ್ರಕಟಿಸಿದ್ದಾರೆ.
‘ನೈಲ್ ನದಿಯಗುಂಟ ಶರಾವತಿಯನರಸುತ್ತ – ಈಜಿಪ್ಟ್ ಪ್ರವಾಸ ಕಥನ’, ಅಂಡಮಾನ್: ಕಂಡ ಹಾಗೆ (ಪ್ರವಾಸ ಕಥನ), ಚೆಗೆವಾರನ ನೆಲದಲ್ಲಿ ಸೇರಿದಂತೆ ಮೂರು ಪ್ರವಾಸಕಥನ, ಬುದ್ಧ ಬೆಳಕಿನಲ್ಲಿ ಅಂಬೇಡ್ಕರ್ ಭಾರತ: ಲೇಖನ ಸಂಗ್ರಹ, ಸಂವಿಧಾನ ಮತ್ತು ಮಹಿಳೆ, ಹೆಣ್ಣು ಹೆಜ್ಜೆ (ಮಹಿಳಾ ಮಾದರಿ ಮತ್ತು ಮಾರ್ಗ) ಸೇರಿದಂತೆ 7 ಲೇಖನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ..!
ಇವುಗಳ ಜೊತೆಗೆ ಅನುವಾದ, ಸಂಪಾದನೆ, ಸಹಸಂಪಾದನೆ ಸೇರಿದಂತೆ ಒಟ್ಟು 53 ಕೃತಿಗಳನ್ನೂ ಪ್ರಕಟಿಸಿದ್ದಾರೆ. ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳ ಸೇವೆಗಾಗಿ ಇವರಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ರಮಾಬಾಯಿ ಅಂಬೇಡ್ಕರ್ ಪುಸ್ತಕ ಬಹುಮಾನ’, ‘ಸಕಾಲಿಕ ಸಾಹಿತ್ಯ ಪ್ರಶಸ್ತಿ’, ‘ಎಚ್.ಶಾಂತಾರಾಂ ಪ್ರಶಸ್ತಿ’, ‘ಕುಂದಾಪುರ, ದೆಹಲಿ ಕರ್ನಾಟಕ ಸಂಘ ಪ್ರಶಸ್ತಿ,, ‘ರಾಜಲಕ್ಷ್ಮಿ ಬರಗೂರು ಪ್ರಶಸ್ತಿ’, ‘ಐಎಂಎ ಕನ್ನಡ ವೈದ್ಯ ಬರಹಗಾರರ ಸಂಘದ ಪ್ರಶಸ್ತಿ’, ,ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳೂ ಲಭಿಸಿವೆ. ಡಾ. ಎಚ್.ಎಸ್.ಅನುಪಮಾ ಅವರ ‘ಕೋವಿಡ್ ಡಾಕ್ಟರ್ ಡೈರಿ’ ಕೃತಿಯು ನನಗೆ ತುಂಬಾ ಹಿಡಿಸಿದ ಕೃತಿಯಾಗಿದೆ. ಅದ್ದರಿಂದ ಈ ಕೃತಿಯ ಬಗೆಗೆ ಒಂದಿಷ್ಟು ನೋಡೋಣ..!
ಈ ಪುಸ್ತಕವನ್ನು ಗದಗನ ಬಸವರಾಜ ಸೂಳಿಬಾವಿಯವರ ಲಡಾಯಿ ಪ್ರಕಾಶನವು ಲೋಕಕ್ಕೆ ಅರ್ಪಿಸಿದೆ. ಬಹು ರೋಚಕ ಕಥೆಗಳನ್ನು ಹೊಂದಿರುವ ಈ ಕೋವಿಡ್ ಡಾಕ್ಟರ್ ಡೈರಿಯನ್ನು ಎಲ್ಲರಿಗೂ ಆಸಕ್ತಿದಾಯಕ ಓದು ಕೊಡುತ್ತದೆ ಎಂದು ನನಗೆ ಅನಿಸುತ್ತದೆ. ಹಾಗಾದರೆ ಒಂದಿಷ್ಟು ಈ ಪುಸ್ತಕ ಕುರಿತು ನೋಡೋಣ..!
ಕೃತಿ : ಕೋವಿಡ್ ಡಾಕ್ಟರ್ ಡೈರಿ
ಲೇಖಕರು : ಡಾ.ಎಚ್.ಎಸ್.ಅನುಪಮಾ
ಪುಟ : 278
ಬೆಲೆ : ರೂ. 200
ವಿನ್ಯಾಸ : ಅರುಣಕುಮಾರ್ ಜಿ.
ಪ್ರಕಾಶನ : ಲಡಾಯಿ ಪ್ರಕಾಶನ, ಗದಗ
‘ಕ್ಯಾಸ ಕಥನ’ವೂ ––
‘ಗಂಡ ಹೆಂಡತಿ ಸಮಸ್ಯೆ, ಋತುಮತಿ ಸಮಸ್ಯೆ, ಮದುವೆ ಯೋಗ, ಸಂತಾನ, ಕೋರ್ಟ್ ಕೇಸ್, ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ, ಶತ್ರುಕಾಟ, ಸ್ತ್ರೀ ಪ್ರೇಮ ವಿಚಾರ, ಕುಜದೋಷ, ಗಾಳಿ ಸೋಕು ಮುಂತಾದ ಯಾವುದೇ ಸಮಸ್ಯೆಗೂ ಇಲ್ಲಿದೆ ಪರಿಹಾರ. ಇದು ಒಂದು ಅಮೃತ ಘಳಿಗೆ, ಇಂದೇ ಕರೆ ಮಾಡಿರಿ. ಸ್ತ್ರೀ ಪುರುಷ ವಶೀಕರಣ, ಅನುಪಾರಕೀ ವಶೀಕರಣ, ಲೈಂಗಿಕ ವಶೀಕರಣ, ಜನ ವಶೀಕರಣ – ಭದ್ರಕಾಳಿ ಶಕ್ತಿಯಿಂದ ಪರಿಹಾರ ಶತಸ್ಸಿದ್ಧ. ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್. ಮಕ್ಕಳ ವಿದ್ಯಾಭ್ಯಾಸಕ್ಕೆ ಸರಸ್ವತಿ ಯಂತ್ರ. ಮಾಂಗಲ್ಯ ಭಾಗ್ಯಕ್ಕೆ ಸ್ವಯಂವರ ಕವಚಂ, ಧನಪ್ರಾಪ್ತಿಗೆ ಲಕ್ಷ್ಮೀ ಕವಚಂ, ಸ್ತ್ರೀ ಪುರುಷ ಮಿಲನಕ್ಕೆ ಗಂಧರ್ವ ಕವಚಂ, ಅನಾರೋಗ್ಯಕ್ಕೆ ದಶಮೂಲ ಕವಚಂ, ಮನಶಾಂತಿಗೆ ಅಂಜನ ಕವಚಂ. ನಿಮ್ಮ ಧ್ವನಿ ಆಲಿಸಿ ಪರಿಹಾರ ಹೇಳುತ್ತಾರೆ. ಫೋನ್ ಮೂಲಕವೂ ಸೇವೆ ಲಭ್ಯ’
ದೊಡ್ಡ ಹಸ್ತದ ಚಿತ್ರವಿರುವ ಬೋರ್ಡಿನಲ್ಲಿ ಹೀಗೆಂದು ಬರೆದುಕೊಂಡ ಬಾಗಿಲ ಎದುರು ಕ್ಯಾಸ ಕುಳಿತಿದ್ದಾನೆ.
ಅದು ‘ಶ್ರೀ ಭಗವತಿ ಮಹಾಕಾಳಿ ಮಹಾಮಾಯಿ ಜ್ಯೋತಿಷ್ಯಾಲಯ’. ಅವನ ಕಾಯಂ ಅಡ್ಡೆಯಾಗಿದೆ. ವಾರಕ್ಕೆರಡು ದಿನ ಅವರಲ್ಲಿಗೆ ಬಂದಾಗ ಬರುವವರ ನೋಟ, ನಡೆ, ಮಾತುಗಳ ಕೇಳುತ್ತ ಅವನಿಗೆ ದಿನ ಸರಿದದ್ದೇ ತಿಳಿಯುತ್ತಿರಲಿಲ್ಲ. ಒಂದು ಕೋಣೆಯ ಜ್ಯೋತಿಷ್ಯಾಲಯದ ಎದುರು ಅವರು ಬರುವ ಮೊದಲೇ ಕಸಗುಡಿಸಿ ಕ್ಯಾಸ ಕುಳಿತಿರುತ್ತಿದ್ದನು. ಅವರು ಚಾ ದುಕಾನಿಂದ ಚಾ ತಿಂಡಿ, ಬೇಕರಿಯಿಂದ ಬ್ರೆಡ್ಡು, ಬನ್ಸು, ಹಣ್ಣುಗಳನ್ನು ಇವನ ಬಳಿಯೇ ತರಿಸುತ್ತಿದ್ದರು. ತಂದುಕೊಟ್ಟದ್ದರಲ್ಲಿ ಒಂದು ಪಾಲು ಇವನಿಗೂ ಸಿಗುತ್ತಿತ್ತು. ಈಗ ಲಾಕ್ಡೌನ್ ಎಂದು ಮುಚ್ಚಿಕೊಂಡವು ಒಂದೊಂದಾಗಿ ಬಾಗಿಲು ತೆರೆದರೂ ಜ್ಯೋತಿಷ್ಯಾಲಯ ತೆರೆದಿರಲಿಲ್ಲ. ಮಲಯಾಳ ದೇಶದ ಅವರು ಅಲ್ಲೇ ಹರಹರ ಶಿವಶಿವ ಆಗಿಬಿಟ್ಟರೇ? ಎಂದಿಗೆ ಈ ಜ್ಯೋತಿಷಿಯು ಬಂದಾರು? ಎಂದು ಯೋಚಿಸುತ್ತ ಬೋರ್ಡಿನ ಅಕ್ಷರಗಳ ನೋಡುತ್ತ ಕೂತು ಬಿಟ್ಟಿದ್ದಾನೆ ಕ್ಯಾಸನು.
ಹ್ಞಂ, ಇದು ಯಾರು ಇವನು ಎಂದಿರಾ? ಎಲ್ಲಾರ ಸುದ್ದಿ ಹೇಳಿ ನಮ್ಮೂರಿನ ಕ್ಯಾಸನ ಸುದ್ದಿ ಹೇಳದಿದ್ದರೆ ತುಂಬ ಅನ್ಯಾಯವಾಗುತ್ತದೆ. ಅವನಂಥವರು ಎಲ್ಲಾ ಕಡೆ ಇರುವುದಿಲ್ಲ. ಕೋವಿಡ್ಡೋ, ನೆರೆಯೋ ಬರವೋ ಅವನಂಥವರು ಬದಲಾಗುವುದಿಲ್ಲ. ಅವನ ಬದುಕೇನೂ ಕೋವಿಡ್ಡಿನಿಂದ ಉಲ್ಟಾಸೀದ ಆಗಲಿಲ್ಲ. ಆದರೂ ಕೋವಿಡ್ ಕಾಲದ ಕತೆಯಲ್ಲಿ ಕ್ಯಾಸನ ಕಥನವೂ ಸೇರದಿದ್ದರೆ ಅದು ಪೂರ್ತಿಯಾಗುವುದಿಲ್ಲ.
ಅಂದ ಹಾಗೆ ಅವನ ಹೆಸರು ಕೇಶವ ಎಂದೂ, ಎಲ್ಲಾ ಅವನನ್ನು ಕ್ಯಾಸ ಎನ್ನುವರೆನ್ನುವುದೂ ಅಷ್ಟು ಮುಖ್ಯವಲ್ಲ. ಕರಿಮಗು ಎಂದು ಕರೆಸಿಕೊಳ್ಳುವ ಸಾವಿತ್ರಿಯ ಗಂಡನಾದ ಕ್ಯಾಸನು ಈ ಊರಿಗೆ ಯಾವಾಗ ಬಂದ ಎನ್ನುವುದಾಗಲೀ, ಅವನ ಅಬ್ಬೆ ಅಪ್ಪ ಯಾರು ಎನ್ನುವುದಾಗಲೀ ಯಾರಿಗೂ ಅಷ್ಟು ಮುಖ್ಯವಲ್ಲ.
ಆದರೆ ಅವನಿಲ್ಲದಿದ್ದರೆ ಈ ಊರ ಬೀದಿಗಳು ಕೊಳೆತ ಶವದ ದುರ್ನಾತದಿಂದ ಗಬ್ಬೆದ್ದು ಊರಜನರ ಮೂಗು ಹೊಟ್ಟಿ ಹೋಗುತ್ತಿತ್ತು ಎನ್ನುವುದಂತೂ ನಿಜ. ಅವನ ಕೆಲಸ ಅಂತಹದ್ದು. ಜಾತಿ ಬಾಂಧವರು ಹಾಗೂ ಅವನ ಹೆಂಡತಿ ಇದು ತಮ್ಮ ಜಾತಿಗೆ ತಕ್ಕುದಲ್ಲದ ಕೆಲಸ ಎಂದು ಬೈದು, ಮೂಗು ಮುರಿದರೂ ಅದು ಎಷ್ಟು ಮುಖ್ಯ ಕೆಲಸವೆಂದು ಕ್ಯಾಸನಿಗೆ ಗೊತ್ತಾಗಿ ಹೋಗಿದೆ. ನಮ್ಮೂರಿನ ಯಾವುದಾದರೂ ಮನೆ, ಅಂಗಡಿ ಎದುರು ಸತ್ತು ಬಿದ್ದ ನಾಯಿ, ಬೆಕ್ಕು, ಹಂದಿ, ದನ, ಗೂಳಿ, ಹೆಗ್ಗಳ ಕಂಡರೆ ಆಗವರಿಗೆ ಕ್ಯಾಸನ ನೆನಪಾಗುತ್ತದೆ. ಅವರಿಗೆ ನೆನಪಾಗದಿದ್ದರೂ ಕ್ಯಾಸ ಅಂತಹ ಮನೆ, ಅಂಗಡಿಯೆದುರು ಪ್ರತಿಷ್ಠಾಪಿತನಾಗುತ್ತಾನೆ. ಸತ್ತ ಪ್ರಾಣಿಯನ್ನು ಎಳೆದು ಹಾಕುವ ಘನಕಾರ್ಯ ತನಗಾಗಿ ಕಾದಿರುವುದನ್ನು ಅವರಿಗೆ ನೆನಪಿಸುತ್ತಾನೆ. ಹೇಗೆ ಅದರ ಕಾಲು ಕಟ್ಟಬೇಕೆಂದು, ಕಟ್ಟುವ ಹಗ್ಗಕ್ಕೆ ಎಷ್ಟಾಗುವುದೆಂದು, ಅದನ್ನು ಗುಡ್ಡಕ್ಕೆ ಎಳೆದೊಯ್ದು ಗುಂಡಿ ತೆಗೆದು ಹೂಳಲು ಎಷ್ಟು ಸಮಯ ತಗಲುವುದೆಂದು ಸಂಬಂಧಪಟ್ಟವರಿಗೆ ವಿವರಿಸಿ ಕನಿಷ್ಟ ನೂರು ರೂಪಾಯಿ ಕೇಳುತ್ತಾನೆ. ನೂರು ರೂಪಾಯಿಯೇ ಎಂದು ಆ ಮನೆ /ಅಂಗಡಿಯವರು ಒಂದು ದಿನ ಮುಖ ಮುರಿಯುತ್ತಾರೆ.
ಆದರೆ ಕಸ ತೆಗೆಯುವ ಯಾವ ವ್ಯವಸ್ಥೆಯೂ ಇರದ ಹಳ್ಳಿಗಳಲ್ಲಿ ಅಂಥವನ್ನು ಎತ್ತಲು ಮುನ್ಸಿಪಾಲ್ಟಿ ಲಾರಿ ಬರುತ್ತದೆಯೆ? ಖಂಡಿತಾ ಇಲ್ಲ. ಅದರ ದುರ್ವಾಸನೆ ಒಳಗೂ ಬರತೊಡಗಿದಾಗ ಅನಿವಾರ್ಯವಾಗಿ ಕ್ಯಾಸನನ್ನು ಹುಡುಕಿ ಹೊರಡುತ್ತಾರೆ. ಕೊಳೆತ ಪ್ರಾಣಿಯ ವಾಸನೆ ಹದ್ದಿಗೆಷ್ಟು ಬೇಗ ತಿಳಿಯುವುದೋ ಅದಕ್ಕಿಂತ ಬೇಗ ಗಡಂಗಿನಲ್ಲಿ ಕುಳಿತ ಕ್ಯಾಸನಿಗೆ ತಿಳಿಯುತ್ತದೆ. ಅವ ಮತ್ತೆ ಅವರೆದುರು ಸುಳಿಯುತ್ತಾನೆ. ಅವರು ತೆಗೆ ಮಾರಾಯಾ ಎಂದು ರಾಗ ತೆಗೆದಕೂಡಲೇ ಹೊರಗೊಮ್ಮೆ ಹೋಗಿ ಕಾಗೆಗಳು ಕುಕ್ಕುತ್ತಿರುವ ದುರ್ನಾತ ಬೀರುವ ಮಾಂಸದ ಸುತ್ತ ಒಂದು ಸುತ್ತು ಹಾಕಿ ಅದರ ಮಾಂಸ ಈಗ ಶಿಥಿಲವಾಗಿದೆಯೆಂದೂ, ನಿನ್ನೆಯಾಗಿದ್ದರೆ ನಾಕು ಕಾಲಿಗೆ ಹಗ್ಗ ಕಟ್ಟಿ ಎಳೆದೊಯ್ದ ಹಾಗೆ ಇವತ್ತು ಎಳೆಯಲು ಹರ್ಗಿಸ್ ಆಗುವುದಿಲ್ಲೆಂದೂ, ಅದನ್ನು ಚೀಲಕ್ಕೆ ತುಂಬಿ ಹೊತ್ತೊಯ್ದು ಗುಡ್ಡ ಹತ್ತಬೇಕೆಂದೂ, ಅದಕ್ಕೆ ಇನ್ನೂರು ರೂಪಾಯ್ ಕೊಡದ ಹೊರತು ಅಂಥ ಕೆಲಸ ಮಾಡಲು ಮನಸ್ಸೇ ಬರುವುದಿಲ್ಲವೆಂದೂ ಹೇಳುತ್ತಾನೆ.
ನಿನ್ನೆಗಾದರೆ ನೂರಕ್ಕೇ ಮುಗಿಯುತ್ತಲಿದ್ದದ್ದು ಸುಮ್ಮನೇ ತಡ ಮಾಡಿ ಮತ್ತೆ ನೂರು ಕಳೆದುಕೊಂಡೆವಲ್ಲ ಎಂದವರು ಯೋಚಿಸುವಾಗ ಅವ ಅವರ ಮನೆಯೆದುರೇ ಕೂತು, ‘ಬೆಳುಗ್ಲಿಂದ ಎಂತಾದೂ ಇಲ್ಲ, ಸತ್ತಂವ ಅಂವ ನನ್ ಮಗಾ ದುಡುದ್ ದುಡ್ ಕೊಡುದಿಲ್ಲ. ಸತ್ತುಂದು, ನನ್ ಹೇಡ್ತಿ ಒಂದ್ ಚಾ ಕಣ್ ಕುದಿಸುದಿಲ್ಲ. ಒಂದ್ ಚಾ ಮಾಡಿ ಕಾಂತೆ’ ಎಂದು ಕೃಶ ಕಾಲುಗಳನ್ನು ಮಡಚಿ ಕೂತು ಬಿಡುತ್ತಾನೆ. ಬೆಳಿಗ್ಗೆಯೇ ಎರೆದು ತಣ್ಣಗಾಗಿರುವ ಒಂದೆರೆಡು ದೋಸೆಯೋ, ಅವಲಕ್ಕಿ ಹುಳಿಯೋ, ಕಡುಬೋ, ಎಲ್ಲ ಖಾಲಿಯಾಗಿದ್ದರೆ ಅನ್ನ-ಉಪ್ಪು– ಉಪ್ಪಿನಕಾಯಿ — ಮಜ್ಜಿಗೆಯೋ ಅವನೆದುರು ಬರುತ್ತವೆ. ಜೊತೆಗೊಂದು ಲೋಟ ಚಾ. ಅಷ್ಟಾದ ಮೇಲೆ ಅರ್ಧ ದುಡ್ಡು ಅವನ ಕೈಗೆ ಬೀಳಬೇಕು, ಇಲ್ಲದಿದ್ದರೆ ಏಳುವನಲ್ಲ. ಹಣ ಕಂಡದ್ದೇ ಅವನ ಕನಸುಗಳು ಗರಿಗೆದರುತ್ತವೆ. ಕ್ಯಾಸನಿಗೆ ಊಟದ ಕನಸು ಬೀಳಲು ಒಂದು ಪ್ರಾಣಿ ಸತ್ತು ಹಪ್ಪು ಎಳೆಯುವಂತಾಯ್ತೇ ಎಂದು ನನಗೆ ನಿಮಗೆ ಬೇಜಾರೆನಿಸಬಹುದು. ಆದರೆ ಬೆಳಿಗ್ಗೆಯೇ ಅರ್ಧ ಕೊಟ್ಟೆ ಸಾರಾಯಿ ಏರಿಸಿ ಬಂದಿರುವ ಅವನಿಗೇನೂ ಅನಿಸುವುದಿಲ್ಲ. ಮತ್ತು ಇಂಥ ಸಂದರ್ಭವಲ್ಲದಿದ್ದರೆ, ಅವನು ‘ಸ್ಟಿಕ್‘ ಆಗಿ ಇನ್ನರ‍್ರುಪಾಯ್ ಹರ‍್ತ ಆಗುದಿಲ್ಲ ಎಂದು ಹೇಳದಿದ್ದರೆ, ಅವನನ್ನು ಕರೆದು ಕೂಡಿಸಿ ಅವಲಕ್ಕಿ ಹುಳಿ, ದೋಸೆ ಚಾ ಕೊಟ್ಟು ಯಾರು ಸತ್ಕರಿಸುತ್ತಾರೆ!? ಹಾಗಾಗಿ ಅವನು ತನ್ನ ಕಳೆಯೇರಿಸಿಕೊಂಡು ಊಂಚಾಗೊಳ್ಳುವುದೇ ಈ ಸಂದರ್ಭದಲ್ಲಾದ್ದರಿಂದ ಖುಷಿಯಿಂದ ಎದ್ದು ಹೊರಡುತ್ತಾನೆ.
ಅವತ್ತು ಬೆಳಿಗ್ಗೆಯಿಡೀ ಅವನಿಗೆ ಕೆಲಸವಿರುತ್ತದೆ. ಕೊಳೆತ ದೇಹವನ್ನು ಕಮ್ತೀರ ಹತ್ರ ಬೇಡಿ ತಂದ ಶಿಮಿಟು ಚೀಲದೊಳಗೆ ತುಂಬಿ, ಬಾಳೆಪಟ್ಟೆ ಹಗ್ಗದಿಂದ ಅದರ ಬಾಯಿ ಕಟ್ಟಿ, ಎಳೆದುಕೊಂಡು ಹೋಗಲು ಮೊದಲು ಮಾಡುತ್ತಾನೆ. ಭಾರದ ಪ್ರಾಣಿಯಾಗಿದ್ದರೆ ಪರ್ಬುಗಳ ತೋಟದ ಕಳೆ ತುಂಬುವ ದೂಡು ಗಾಡಿ ತರುತ್ತಾನೆ. ಕ್ಯಾಸನ ಇಂಥಾ ಬೆಳಗುಗಳನ್ನು ನಮ್ಮೂರಿನಲ್ಲಿದ್ದರೆ ನೀವು ಸಾಕಷ್ಟು ಸಲ ನೋಡಬಹುದು.
ಎಲ್ಲಾ ಊರುಗಳಲ್ಲಿರುವಂತೆ ಈ ಊರ ತುಂಬಾ ಆರಾರು ತಿಂಗಳಿಗೊಮ್ಮೆ ಬೆದೆಗೆ ಬರುವ ಹೆಣ್ಣುಗಳು, ಹೆಣ್ಣುಗಳ ಹಿಂದೆ ಉಚ್ಚೆ ಹಾರಿಸುತ್ತಾ ಪರಸ್ಪರ ಕಚ್ಚಾಡುತ್ತ ಓಡುವ ಗಂಡು ನಾಯಿಗಳು ಇವೆ. ದೊಡ್ಡ ನಾಯಿಗಳು ಕಚ್ಚಾಡಿ ಸತ್ತರೆ ಹೆಣ್ಣುನಾಯಿ ಹಾಕುವ ಮರಿಗಳು ಒಂದೆರೆಡು ತಿಂಗಳಾಗುವುದರೊಳಗೆ ಗಾಡಿಯ ಕೆಳಗೆ ಪಚಡಿಯಾಗಿ, ಚರಂಡಿಗೆ ಬಿದ್ದು, ದೊಡ್ಡ ನಾಯಿ ಮುರಿದು, ಬೀದಿ ದನಗಳ ಕಾಲ್ತುಳಿತಕ್ಕೆ ಸಿಕ್ಕು ವಾರಕ್ಕೊಂದರಂತೆ ಸಾಯುತ್ತವೆ. ಗೋರಕ್ಷಕರು ರಿಫ್ಲೆಕ್ಟರು ಕಟ್ಟಿ ಕಾಪಾಡಲು ನೋಡಿದರೂ ಎಲ್ಲೋ ಒಂದೊಂದು ಬೀದಿ ದನಗಳೂ ಸಾಯುತ್ತಿರುತ್ತವೆ. ಅಂಥಾ ಸಾವುಗಳಿಗೆಲ್ಲಾ ದಾತ ನಮ್ಮ ಕ್ಯಾಸನೇ. ಅವನಿಗೆ ಒಂದಲ್ಲಾ ಒಂದು ಪ್ರಾಣಿಯ ಸಂಸ್ಕಾರದ ಕೆಲಸ ವಾರಕ್ಕೊಮ್ಮೆಯಾದರೂ ಸಿಗುತ್ತದೆ. ಹೆಂಡಕ್ಕಾಗುವಷ್ಟು ದುಡ್ಡಿಗೆ ಅದೂಇದೂ ಮಾಡುತ್ತ ಉಳಿದ ಆರು ದಿನಗಳು ಕಳೆಯುತ್ತವೆ. ಆ ಆರು ದಿನಗಳಲ್ಲಿ ಅವನ ದೊಡ್ಡ ಕೆಲಸ ಹೆಂಡತಿಯನ್ನು ಪೀಡಿಸಿ ಬಡಿಯುವುದು. ‘ನಾ ವಬ್ನೆ ದುಡ್ಕಂಬ್ಯರ್ಬಕ? ಸತ್ತಳು ನೀ ಯಾಕಿದಿ? ಅಂವಾ ಮಿಂಡ್ರಿಗುಟ್ಟಿದ ನಿನ್ ಮಗಾ ಅಂವಾ ತಂದುದ್ ಎಲ್ಲೋಯ್ತು, ಐವತ್ರುಪಾಯ್ ಕೊಡು’ ಎಂದವಳನ್ನು ಬೈದು, ಹೊಡೆದು; ಅವಳ ಬಳಿ ಬೈಸಿಕೊಂಡು, ದೂಡಿಸಿಕೊಂಡು; ಮಗನ ಬಳಿ ಹೊಡೆಸಿಕೊಂಡು ಆರು ದಿನ ಕಳೆಯುತ್ತಾನೆ. ‘ಆ ಸತ್ತಳು ಹ್ವಟ್ಟೀಗೂ ಹಾಕ್ತಿಲ್ಲ’ ಎಂದು ಶಾಪ ಹಾಕುತ್ತ ದೊಡ್ಡವರ ಮನೆಯಲ್ಲೋ, ಚಾ ಅಂಗಡಿಯಲ್ಲೋ, ಆಮ್ಲೆಟ್ ಗಾಡಿಯ ಬದಿಯಲ್ಲೋ ಕಸ ಹೊಡೆದು, ನಾಯಿಕಾಗೆಗಳ ಹಚಾ ಎಂದು ಓಡಿಸಿ, ಗಿರಾಕಿಗಳನ್ನು ಕೂಗಿ ಕರೆದು ಹಾಡು ಹೇಳಿ ಎಂಥದೋ ಒಂದನ್ನು ಬೇಡಿ ಅಷ್ಟಿಷ್ಟು ಹೊಟ್ಟೆಗೆ ಹಾಕಿಕೊಳ್ಳುತ್ತಾನೆ. ಜ್ಯೋತಿಷಿಗಳ ಆಪ್ತ ಸಹಾಯಕನಾಗಿ ಹೊಟ್ಟೆಗಷ್ಟು ದಾರಿ ಮಾಡಿಕೊಳ್ಳುತ್ತಾನೆ.
ಅಂಥವನ ಕೈಗೆ ಇನ್ನೂರು ರೂಪಾಯಿ ಬಂದ ದಿನ ಅವನಿಗೆ ತಾನೇ ರಾಜ್ಕುಮಾರ್ ಎನಿಸುವುದು. ಯಾರೇ ಕೂಗಾಡಲಿ ಹಾಡು ಹೇಳುತ್ತ ಅರೆ ಉಂಯ್ಞ್ ಒರೆ ಹುಂಯ್ಞ್ ಎಂದರಚುತ್ತ ಚೀಲ ಎಳೆದೊಯ್ಯುತ್ತಾನೆ.
ಹೀಗಿದ್ದ ನಮ್ಮ ಕ್ಯಾಸನಿಗೆ ಲಾಕ್‌ಡೌನ್ ವಿಚಿತ್ರ ಕಷ್ಟ ತಂದೊಡ್ಡಿತು. ಕೆಲಸವೂ ಇಲ್ಲ, ಪೇಟೆಯೂ ಇಲ್ಲ, ಹೋಟೆಲೂ ಇಲ್ಲ, ಬಾರೂ ಇಲ್ಲದೆ ಸತ್ತಿರುವೆನೋ ಬದುಕಿರುವೆನೋ ತಿಳಿಯದಂತೆ ಉಸಿರಾಡಿಕೊಂಡಿರುವಂತಾಗಿತ್ತು. ಅಂಥದ್ದರಲ್ಲಿ ಇವತ್ತು ಕೆಲಸ ಸಿಕ್ಕಿಬಿಟ್ಟಿದೆ. ಲಾಕ್ಡೌನಂಬೋ ಗ್ರಾಚಾರ ಮುಗಿದುಹೋಗಿ ಅವನಿಗೆ ಬಲು ಖುಷಿಯಾಗಿದೆ. ಆ ಖುಷಿಗೆ ಮತ್ತಷ್ಟು ನಶೆ ಏರುವಂತೆ ಇಷ್ಟುದಿನ ರಸ್ತೆ ಮೇಲೆ ಬಿದ್ದುಕೊಂಡು ರೂಢಿಯಾದ ಎಳೆ ಗೂಳಿಗೆ ಯಾವುದೋ ಒಂದು ಲಾರಿ ಹೊಡೆದು ಹೋಗಿಬಿಟ್ಟಿದೆ. ಕೊಂದವರು ಯಾರೆಂದು ಯಾರಿಗೂ ಗೊತ್ತಿಲ್ಲ. ಆದರೆ ಹಾಲಿನಂಗಡಿ ಎದುರು ಬಿದ್ದ ಗೂಳಿ ವಿಲೇವಾರಿಯಾಗದಿದ್ದರೆ ಸುಖವಿಲ್ಲ. ಕೊನೆಗೆ ಹಾಲಿನಂಗಡಿಯ ಶೇಖರಿಯು ಇನ್ನೂರಕ್ಕೆ ಮಾತಾಡಿ ಕ್ಯಾಸನಿಗೆ ಆ ಪುಟ್ಟ ಗೂಳಿಯನ್ನು ವಿಲೇವಾರಿ ಮಾಡುವ ಕೆಲಸ ಕೊಟ್ಟೇ ಬಿಟ್ಟ.
ಇನ್ನೂರು ರೂಪಾಯಿಗೆ ಕ್ಯಾಸನಿಗೆ ಎಂತೆಂಥ ರಮ್ಯ ಕನಸುಗಳಿವೆ ಗೊತ್ತೆ? ‘ಅದ್ರಲ್ಲಿ ನರ‍್ರುಪಾಯ ಹೆಂಡ್ದಗ್ಡಿ ರೋಯ್ತಪ್ಪನ ಮಕಕ್ಕೆ ಹಳೀ ಸಾಲದ್ ಬಾಬ್ತು ಅಂತ ಒಗ್ದು, ಒಂದು ಕೊಟ್ಟೆ ತಕಂಡಿ, ಜಾನಿ ಹತ್ರೆ ಐವತ್ರುಪಾಯಿ ಮೀನೂಟ ಪುಲ್ ಕೊಡು ಅನ್ಬೇಕು. ಮೊದ್ಲೆ ಮೀನೂಟ ಮಾಡ್ಲ ಅತ್ವ ಕೊಟ್ಟೆ ತಕಳ್ಳಾ? ಊಟುಕ್ ಮದ್ಲೆ ಕೊಟ್ಟೆ ಇಲ್ದಿದ್ರೆ ಸರಿಯಾಗಲ್ಲ, ಅದ್ಕೆ ನರ‍್ರುಪಾಯ ಮದ್ಲು ವಗದು, ಎಳ್ಡು ಪಾಕೀಟ ಸಾರಾಯ್ ಸರ‍್ಕಂಡು, ಐವತ್ರುಪಾಯಿ ಪುಲ್ ಊಟನೆ ತಕಬೇಕು…’
ರೇಶನ್ ಅಕ್ಕಿಗೆ ಎಂಥದೋ ಒಂದು ಚಟ್ನೆನೋ, ಗಸಿನೋ ಮಾಡಿ ಊಟ ಬಡಿಸುವ ಹೆಂಡತಿಯ ಮೇಲೆ ಕೋಪಗೊಂಡು ಒಳ್ಳೇ ಊಟ ಮಾಡುವ ಕನಸಿನಲ್ಲಿ ನಡೆಯುತ್ತಿರಲು ಗಾಜಿನ ಲೋಟದಲ್ಲಿ ನೊರೆ ತುಳುಕುವ ಸಾರಾಯಿ, ಬಂಗ್ಡೆ ಮೀನ ಫ್ರೈ, ಬಳಚಿನ ಸುಕ್ಕಾ, ಚಟ್ಲಿ ಸಾರು, ಚಪಾತಿ ಎಲ್ಲ ಅವನ ಕಣ್ಣೆದುರು ಅರಳತೊಡಗಿದವು. ‘ಥತ್, ಈ ಗೂಳಿ ತಡ್ ಒಡಿಯಾ’ ಎಂದು ಬೈದು, ಸತ್ತ ಗೂಳಿಯನ್ನು ಕಷ್ಟಪಟ್ಟು ಚೀಲದಲ್ಲಿ ತುಂಬಿದ. ಮಲ್ನಾಡು ಗಿಡ್ಡ ಜಾತಿಯ ಹೋರಿ ಕರು. ಇನ್ನೂ ಗೂಳಿ ಅನ್ನುವಷ್ಟೂ ದೊಡ್ಡದಾಗಿಲ್ಲ. ಸೋಂಬೇರಿಯಂತೆ ರಸ್ತೆ ಮೇಲೆ ಮೈ ಕಾಯಿಸುತ್ತ ಮಲಗಿ ಸತ್ತು ಹೋಯಿತಲ್ಲ ಅಂದುಕೊಂಡು ಹಗ್ಗ, ಚೀಲಗಳ ಒಟ್ಟು ಮಾಡಿದ. ಮೊದಲಾಗಿದ್ದರೆ ಗೋ ರಕ್ಷಕರು ಪೂಜೆ ಮಾಡಿ ಅವನೊಡನೆ ಅಷ್ಟುದೂರ ಕೈ ಜೋಡಿಸಿ ಪುಣ್ಯ ಕಟ್ಟಿಕೊಳ್ಳುತ್ತಿದ್ದರು. ಈಗ ಲಾಕ್ಡೌನಲ್ಲಿ ಎಲ್ಲ ನಾಪತ್ತೆಯಾಗಿಬಿಟ್ಟಿದ್ದಾರೆ. ಗೂಳಿ ತುಂಬಿದ ಚೀಲವನ್ನು ಪರ್ಬುಗಳ ಮನೆಯ ಕಳೆ ಗಾಡಿ ಮೇಲೆ ಎಳೆದು ಹಾಕಿ, ಒಬ್ಬನೇ ರಸ್ತೆ ಮೇಲೆ ಎಳೆದುಕೊಂಡು ಹೋಗುವುದರಲ್ಲಿ ಮಧ್ಯಾಹ್ನವಾಯಿತು. ‘ಬೆಗ್ರು ರ‍್ದು ಹಳ್ಳಾತು, ಛೇ, ಇನ್ನರ‍್ರುಪಾಯ್ ರಾಶ್ಶೀ ಕಮ್ಮಿಯಾತು’ ಎಂದು ಮೊದಲ ಬಾರಿ ಅನಿಸಿತು. ಇದನ್ನು ಗುಡ್ಡೆ ಹತ್ತಿಸುವುದರಲ್ಲಿ ತಾನೇ ಹೆಣವಾದೇನು ಅನಿಸಿ ಅಷ್ಟರಲ್ಲಿ ಜಾನಿ ಹೋಟೆಲು ಬಾಗಿಲು ಹಾಕಿಬಿಡಬಹುದಾ ಎಂದು ಭಯವಾಯಿತು. ಸರಸರ ಗಾಡಿ ದೂಡಿಕೊಂಡು ಹೋಗುತ್ತ, ‘ಸತ್ತ ದನಿನೆಲ್ಲ ಹುಗುದ್ ಎಂಥ ಸಾವುಕೆ? ಬಿಸಾಡ್ರೆ ಕಾಕಿ, ಹದ್ದು ನರೀನರೆ ತಿಂತೊ’ ಎಂದುಕೊಂಡು ಊರಗಡಿ ದಾಟಿದ್ದೇ ಸಿಗುವ ದೊಡ್ಡ ಚರಂಡಿಯಲ್ಲಿ ಯಾರೂ ರಸ್ತೆ ಮೇಲಿಲ್ಲದ್ದನ್ನು ಕಂಡು ಎತ್ತಿ ಬಿಸಾಡಿದ.
ಅದೆಲ್ಲಿಂದ ಆ ಕೃಶ ದೇಹಕ್ಕೆ ಅಷ್ಟು ಶಕ್ತಿ ಬಂತೋ, ಬೀಸಿದ ಹೊಡೆತಕ್ಕೆ ಚೀಲ ಸುದರ್ಶನ ಚಕ್ರದಂತೆ ರೊಂಯ್ಞ ರೊಂಯ್ಞ ತಿರುಗುತ್ತ ಅಲ್ಲೆಲ್ಲೋ ಹೋಗಿ ಬಿದ್ದಿತು. ಅದು ಹಳ್ಳದೊಳಗೆ ಬಿತ್ತೋ, ಅಥವಾ ಅಲ್ಲೇ ಇರುವ ಗಾಚ ಹೆಗ್ಡ ತ್ವಾಟದೊಳಗೆ ಬಿತ್ತೋ ಎಂಬ ಯೋಚನೆಯೇ ಅವನಿಗೆ ಬರಲಿಲ್ಲ. ಯಾಕೆಂದರೆ ಒಗಾಸಿದ ಹೊಡೆತಕ್ಕೆ ಅದರ ವಿರುದ್ಧ ದಿಕ್ಕಿಗೆಲ್ಲೋ ಹೋಗಿ ತಾನೇ ಬಿದ್ದಿದ್ದ. ಬಿದ್ದವನೆದ್ದು ಅರೆಗಣ್ಣು ಬಿಟ್ಟುಕೊಂಡು ಹೆಂಡ, ಊಟ ಎರಡನ್ನೂ ಕೊಡುವ ‘ಸನ್‌ಶೈನ್’ಗೆ ರಾಜಠೀವಿಯಿಂದ ಪ್ರವೇಶ ಪಡೆದ. ನೂರು ರೂಪಾಯಿಯನ್ನು ಬಾರ್ ಸೆಕ್ಷನ್ನಿನ ರೋಯ್ತಪ್ಪ ನಾಯ್ಕರ ಎದುರು ‘ಇದ್ ಹಳಿ ಬಾಕಿದು’ ಎಂದು ಟೇಬಲ್ಲಿನ ಮೇಲೆ ಹೊತ್ತಾಕಿ, ಎರಡು ಕೊಟ್ಟೆ ಕೊಂಡ. ‘ಒಂದ್ ಪಿಶ್ ಮೀಲ್ಸ್ ಪುಲ್’ ಎಂದು ಪಕ್ಕದಲ್ಲೇ ಇರುವ ಜಾನಿಯ ಮೀನು ಹೋಟೆಲಿಗೆ ಆಳ್ಡರ್ ಮಾಡಿ ಲೋಟಕ್ಕೆ ಕೊಟ್ಟೆಯಲ್ಲಿರುವುದನ್ನು ಸುರಿಯುತ್ತ ಕೂತ. ಹೀಗೆಯೇ ಸಾಗುತ್ತದೆ ‘ಕ್ಯಾಸ ಕಥನ’ವೂ
ಇಂತಹ ರೋಚಕ ಕಥನಗಳು ಈ ಎಚ್.ಎಸ್.ಅನುಪಮಾರ ‘ಕೋವೀಡ್ — ಡಾಕ್ಟರ್ ಡೈರಿ’ಯಲ್ಲಿ ಸಾಗುತ್ತವೆ..!
ಕೆ.ಶಿವು.ಲಕ್ಕಣ್ಣವರ
ಎಚ್.ಎಸ್.ಅನುಪಮಾರವರ
‘ಕೋವಿಡ್ ಡಾಕ್ಟರ್ಸ್ ಡೈರಿ’
ಮನ ಮುಟ್ಟುವಂಥ ಚಿತ್ರಣ. ಈ ಪುಸ್ತಕಕ್ಕೆ ದಿವಂಗತ ವೈದ್ಯ ಸಾಹಿತಿ ಡಾ. ಹೆಚ್.ಗಿರಿಜಮ್ಮ ಪ್ರಶಸ್ತಿ ದೊರೆತಿದೆ. ಅನುಪಮಾ ಮೇಡಂ ಅವರಿಂದ ಅಭಿನಂದನೆಗಳು.
ಮನ ಮುಟ್ಟುವಂಥ ಚಿತ್ರಣ. ಈ ಪುಸ್ತಕಕ್ಕೆ ದಿವಂಗತ ವೈದ್ಯ ಸಾಹಿತಿ ಡಾ. ಹೆಚ್.ಗಿರಿಜಮ್ಮ ಪ್ರಶಸ್ತಿ ದೊರೆತಿದೆ. ಅನುಪಮಾ ಮೇಡಂ ಅವರಿಗೆ ಅಭಿನಂದನೆಗಳು.