“ಎಲೆಯ ಎದೆಯನು ಗಾಳಿಗೊಪ್ಪಿಸಿ”

ಕಾವ್ಯ ಸಂಗಾತಿ

“ಎಲೆಯ ಎದೆಯನು ಗಾಳಿಗೊಪ್ಪಿಸಿ”

ಅಂಜನಾ ಹೆಗಡೆ

ನೇರಳೆಬಣ್ಣದ ಎಲೆಯ
ಎದೆಯಂಚಿಗೊಂದು
ಸುರುಟು ಗಂಟು
ಎದೆಗೊಂದು ಎದೆಯಂಟಿ
ದುಪ್ಪಟಿಯ ಮೇಲೊಂದು
ನೇರಳೆಬಳ್ಳಿ
ಬೆಳಕಿಗೆ ಬಳುಕುತ್ತ
ಬಿರುಕುಬಿಟ್ಟ ಹಿಮ್ಮಡಿಗಳ ಸಂತೈಸಿ
ಕತ್ತಲೆಗೆ ನೆರಳಾಗಿಬಿಡುತ್ತದೆ

ನೆರಳಿಗೊಂದು ಕನಸಿರಬಹುದು;
ಅದರಲ್ಲೊಂದು ಬಣ್ಣದ ಗುಳ್ಳೆ
ತೇಲಾಡುತ್ತಿರಬಹುದು!
ಒಡೆದ ಹಿಮ್ಮಡಿ
ಕನಸಿನಲ್ಲಿ
ಪರೀಕ್ಷೆ ಬರೆಯುತ್ತಿರಬಹುದು
ದುಪ್ಪಟಿಯ ಕನಸಿನಲ್ಲೂ
ಇರಬಹುದೊಬ್ಬ ರಾಜಕುಮಾರ
ಕುದುರೆಯೇರಿ!
ಇನ್ಯಾರದೋ
ಕನಸಿನ ದುಪ್ಪಟಿಯ ಮೇಲೆ
ಹಸಿರು ಹೂವೊಂದಿರಬಹುದು
ಅಥವಾ
ಹೂ ಬಳ್ಳಿ ಬಣ್ಣಗಳ
ಹಂಗಿಲ್ಲದ ಹೃದಯ!

ದುಪ್ಪಟಿಯೊಂದು
ಕನಸಾಗುವುದ ಕಂಡಿದ್ದೇನೆ ನಾನು

ಕನಸಾಗುವುದೆಂದರೆ
ಮೊಗ್ಗು ಹೂವಾಗಿ ಅರಳಬೇಕು
ಕಾಯಿ ಹಣ್ಣಾಗಿ ಹಣ್ಣು ನೆಲಕ್ಕುರುಳಿ
ಹೀಗೇ ಇನ್ನೇನೋ!
ಕನಸಲ್ಲೊಂದು ಕಥೆ ಹುಟ್ಟಿ
ಅಲ್ಲೊಂದು ಕಾಗೆ
ಸಗಣಿಯಿಂದೊಂದು ಮನೆ ಮಾಡಿ
ಮಳೆ ಬಂದು ಮನೆ ಕರಗಿ
ಇವೆಲ್ಲ ಜರುಗಬೇಕು
ರಗಳೆಯೇ ಬೇಡವೆಂದು
ನಾನು ಒಮ್ಮೊಮ್ಮೆ ಕನಸಿನಲ್ಲಿ
ಕಲ್ಲಾಗಿಬಿಡುತ್ತೇನೆ

ಸರಳಾತಿಸರಳ
ಕನಸೊಂದರಲ್ಲಿ ನಾನು
ಕೆಂಪನೆಯ ಕಲ್ಲಾಗಿ
ಮರವೊಂದನ್ನೇರಿ ಕುಳಿತಿದ್ದೆ!
ಬಳ್ಳಿಯಂತಲ್ಲ ಕಲ್ಲು
ಗಾಳಿ ಬಂತೆಂದು ಅಲ್ಲಾಡುವುದಿಲ್ಲ

ಒಮ್ಮೊಮ್ಮೆ ದುಪ್ಪಟಿಯೂ


ಕಲ್ಲಾಗುವುದುಂಟು
ಎದೆಯಂಚಿನ ಗಂಟು ಸಡಿಲಿಸಿ
ಎಲೆಗಳನೆಲ್ಲ ಗಾಳಿಗೊಪ್ಪಿಸಿ
ಬಣ್ಣಗಳ ಬದಿಗೊತ್ತಿ
ಹೂಬಿಸಿಲಿಗೆ ಹೊರಳಿ
ಹೆಣ್ಣಾಗಿಬಿಡುವುದುಂಟು

ಕಲ್ಲೊಂದು
ಹೆಣ್ಣಾಗಿಬಿಡುವುದ ಕಂಡಿದ್ದೇನೆ ನಾನು


One thought on ““ಎಲೆಯ ಎದೆಯನು ಗಾಳಿಗೊಪ್ಪಿಸಿ”

Leave a Reply

Back To Top