ನನ್ನಲ್ಲಿ ನಾನಿದ್ದು ಬಿಡಬೇಕು

ಕಾವ್ಯ ಸಂಗಾತಿ

ನನ್ನಲ್ಲಿ ನಾನಿದ್ದು ಬಿಡಬೇಕು

ಶ್ರೀಕಾಂತಯ್ಯ ಮಠ

ಎಲ್ಲರ ಜೊತೆಯಲ್ಲಿದ್ದು ಎಲ್ಲಾ ಬಲ್ಲವನಾಗಬೇಕು
ಏನೂ ಗೊತ್ತಿಲ್ಲದಂತೆ
ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರ ಜೊತೆಯಲ್ಲಿದ್ದು
ಎಲ್ಲಾ ಪಡೆದುಕೊಳ್ಳಬೇಕು
ಕಸಿದುಕೊಳ್ಳದೆ ಏನೂ ಇಲ್ಲದಂತೆ ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರ ಜೊತೆ ಬಾಳಬೇಕು
ಬಾಳು ಬಂಗಾರವಾಗಬೇಕು
ಅವರಂತೆ ಆಗದಿದ್ದರೂ ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರ ಜೊತೆ ಸ್ನೇಹ ಚಾಚಬೇಕು
ಎಲ್ಲರ ಕನಸುಗಳಂತೆ ಬಯಕೆಯಿರಬೇಕು
ನನಸಾಗದಿದ್ದರೂ ತುಸು ನಗುತ ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರ ಜಗತ್ತಿದು ನನಗೂ ಜಗವಿದು
ಜಾಗೃತವಿರಬೇಕು
ಅಜಾಗುರಕತೆ ಕಂಡರೆ ದೂರವಿದ್ದು ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರ ಜೀವನವೊಂದೆ ತಿಳಿದಿರಬೇಕು
ನನ್ನ ಜೀವನವೆ ಬೇರೆಯಾದರೆ ತಾಳ್ಮೆ ಸಹನೆಯೊಂದಿಗೆ ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರ ಆಸೆಯಂತೆ ನನ್ನಾಸೆಯಿರಲೆಂದು ಬಯಸಬೇಕು
ದುರಾಸೆಯಿಂದ ಕೂಡಿದ್ದರೆ
ದೂರಾಚೆ ಹೋಗಿ ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರಲ್ಲಿ ಸಾಧನೆ ಕಾಣುತ್ತಿದ್ದರೆ
ನಾನು ಸಾಧನೆಯ ಹಾದಿಯಲ್ಲಿರಬೇಕು
ತಪ್ಪಿದರೆ ಗುರಿಯೊಂದಿಗೆ ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರಂತೆ ಬದುಕು ಆಗದಿದ್ದರೆ
ಬದುಕಿನ ನಿಯಮ ಬದಲಿಸಬೇಕು
ಬದುಕಿರಲು ಆತ್ಮ ಸಾಕ್ಷಿಯಿಂದ ನನ್ನಲ್ಲಿ ನಾನಿದ್ದು ಬಿಡಬೇಕು.

ಎಲ್ಲರಲ್ಲಿ ಏನೀದೆ ಏನಿಲ್ಲ ಬೇಕಿಲ್ಲವೆಂದು ಬಿಡಬೇಕು
ಪಾಲಿಗೆ ಬಂದದ್ದು ಪಂಚಾಮೃತ
ನನಗೇನಿದೆ ಅಷ್ಟೆ ಸಾಕೆಂದು ನನ್ನಲ್ಲಿ ನಾನಿದ್ದು ಬಿಡಬೇಕು


Leave a Reply

Back To Top