ತರ್ಕದ ಹಾದಿಯಲ್ಲಿ

ಕಾವ್ಯ ಸಂಗಾತಿ

ತರ್ಕದ ಹಾದಿಯಲ್ಲಿ

ದೀಪಾ ಗೋನಾಳ

ಬಸ್ಸಿನ ಕಿಟಕಿಹಾದು ತೇಲುತ್ತಾ
ಒಳಬಂದ ಗಾಳಿಯಲ್ಲಿ,
ಕವಿತೆ ಇತ್ತು,
ಕಂಡಕ್ಟರ್ ಹರಿದು ಕೊಟ್ಟು
ಟಿಕೇಟಿನಲ್ಲಿ ಅಕ್ಷರಗಳು:

ಟಿಕೇಟಿಗೆ ಮುಖಾಮುಖಿಯಾದ
ಕವಿತೆಗೆ ನಿಖರ ಬೆಲೆ ಇಲ್ಲ
ಹಾಗೆ ನೋಡಿದರೆ
ಕವಿತೆಗೆ ಎಂದೂ ಬೆಲೆ ದಕ್ಕಿಲ್ಲ!!

ಊರುಕೇರಿ ಹೆಸರು
ದಿಕ್ಕುದೆಸೆ ತಾರೀಖು ಹರಿದು
ಕೊಟ್ಟ ಕಂಡಕ್ಟರ್ ಗುರುತು
ಕಾಲ-ಮಾನ
ಎಷ್ಟೆಲ್ಲ ಇದೆ
ಈ ಪುಟ್ಟ ಟಿಕೇಟಿಗೆ

ಆ ಕವಿತೆಗೊ ಆದಿ,ಅಂತ್ಯ,
ಹುಟ್ಟಿದ ಜಾಗ!?
ಹೊರಟ ದಾರಿ!?
ತಲುಪುವ ನಿಲ್ದಾಣ!?
ಜೊತೆಗಾರರು!? ಏನೆಂದರೆ
ಏನೂ ಇಲ್ಲ!

ಬೇವಾರಸಿಯಾಗಿ
ಗಾಳಿಯಲ್ಲಿ ತೇಲಿ ಬಂದು
ಯಾರ್‍ಯಾರದೋ‌ ಎದೆ ಸವರಿ
ಯಾವಯಾವ ಬಾಯಲ್ಲೊ
ಲೊಚಪಚವಾಗಿ
ಮತ್ತಾವುದೊ ಕಿಟಕಿ ಹಾದು
ಇನ್ನಾವುದೊ ಬಸ್ಸೇರುವ
ಕವಿತೆಗೆ ಟಿಕೇಟಿಲ್ಲ,
ವಿಹರಿಸುತ್ತಿದೆ ಅದು
ರೆಕ್ಕೆ ಹಚ್ಚಿಕೊಂಡ
ಚಿಟ್ಟೆಯಂತೆ ಎಲ್ಲ ಬನದಲ್ಲೂ

ಶತಮಾನಗಳಿಂದಲೂ
ಬಾಯಿಂದ ಬಾಯಿಗೆ
ಊರಿಂದ ಊರಿಗೆ
ಕಾಲದಿಂದ ಕಾಲಕ್ಕೆ
ಸತತ ಪ್ರಾಯಾಣಿಸುತ್ತಿರುವ
ಎಷ್ಟೋ…
ಕವಿತೆಗಳಿಗೆ ಜನಪದವೆಂದಷ್ಟೆ ಹೆಸರು,

ಒಂದಿಷ್ಟು ಕವಿತೆಗಳದೊ‌
ಭಾರಿ ಗೋಳು;
ನನ್ನದು ತನ್ನದು ಎಂದು
ಎಳೆದಾಡುವರ ಕೈಗೆ ಸಿಕ್ಕು
ನುಜ್ಜುಗುಜ್ಜಾಗಿ
ಕೃತಿಚೌರ್ಯದ ಚೌಕಟ್ಟಲ್ಲೆ
ಉಳಿದಾಗ
ಬಿಕ್ಕಿದ ಕವಿತೆಗೆ ದನಿ ಹೊರಡಲಿಲ್ಲ,
ಥೇಟ್
ಜಾತ್ರೆಯಲಿ ಅಪ್ಪನ ಕಳೆದುಕೊಂಡ
ಮಗುವಿನ ಕೂಗಿನಂತೆಯೆ

ಟಿಕೇಟಿಗೊ ಬಸ್ಸು ಇಳಿದ ಮೇಲೆ
ಬಾಳಿಲ್ಲ
ಕವಿತೆಗೊ ಕರ್ತೃ ಸತ್ತರು
ಮುಕ್ತಿ ಇಲ್ಲ

ಕೊನೆ ಸೀಟಿನಲ್ಲಿ
ಕುಳಿತ ಕವಿ-ತಾ
ಏನೋ ಗೀಚುತ್ತಿದ್ದ
ತೂಫಾನಿನಂತೆ ಒಳನುಗ್ಗಿ
ಹೊರಗೋದ ಗಾಳಿ
ಕವಿತೆಯನ್ನು ಹಾರಿಸಿಕೊಂಡೆ‌ ಹೋಗಿತ್ತು
ಪೆನ್ನು ಕೈಯ್ಯಲ್ಲೆ ಭದ್ರವಾಗಿತ್ತು
ಟಿಕೇಟೂ;

ತರ್ಕದ ಹಾದಿಯಲ್ಲಿ
ಟಿಕೇಟು – ಕವಿತೆ
ಮತ್ತೆ ಮುಖಾಮುಖಿಯಾಗಿದ್ದವು
ಟಿಕೇಟಿನ ಜಾತಕ ಪ್ರಾಯಾಣಿಕನ
ಬೆವರಲಿ ಕರಗಿ ಅಸ್ತಿತ್ವವೇ ಇಲ್ಲದೆ
ನಿಂತಾಗ
ಶಾಯಿಯ ಅಸ್ಪಷ್ಟಗುರುತು ಹೊತ್ತ
ಅನಾಥ ಚೀಟಿಯನು
ಕವಿತೆಯು ಆರ್ದ್ರವಾಗಿ
ಅಪ್ಪಿ ಸಂತೈಸಿತ್ತು.

Leave a Reply

Back To Top