ನ್ಯಾಯ ಪ್ರಸಂಗ 

ಕಥಾ ಸಂಗಾತಿ

ನ್ಯಾಯಪ್ರಸಂಗ

ಬಿ.ಟಿ.ನಾಯಕ್

ಅದೊಂದು ದಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸತೀಶ ಮತ್ತು ಆತನ ಹೆಂಡತಿ ಸರಳಾಳ ವಿಚ್ಛೇದನ ಕುರಿತು ದಾವೆ ನಡೆಯುತ್ತಿತ್ತು.  ಆಗ ಎರಡೂ ಪಕ್ಷದ ವಕೀಲರ ವಾದಗಳನ್ನು ಅದಾಗಲೇ ನ್ಯಾಯಾಲಯಲ್ಲಿ  ಮಂಡನೆಯಾಗಿತ್ತು. 

ಈಗ ನ್ಯಾಯಾಧೀಶರು ಗಂಡ-ಹೆಂಡಂದಿಬ್ಬರನ್ನು ಎರಡು ಬೇರೆ ಬೇರೆ ಕಟಕಟೆಯಲ್ಲಿ ನಿಲ್ಲಿಸಿ, ತಾವೇ ಪ್ರಶ್ನೆಗಳನ್ನು ಕೇಳತೊಡಗಿದರು;

‘ಮಿ. ಸತೀಶ್ ನಿಮಗೆ ವಿಚ್ಛೇದನೆ ಅವಶ್ಯಕತೆ ಇದೆಯೇ ?’

‘ಮಾನ್ಯರೇ , ನನಗೆ ಜೀವನದಲ್ಲಿ ಅತಿಯಾದ ಜಿಗುಪ್ಸೆ ಬಂದಿದೆ. ಅವಳಿಂದ ನನಗೆ ಏನೂ ಸುಖವಿಲ್ಲ. ಸಂಸಾರದಲ್ಲಿ ನೆಮ್ಮದಿಯೂ ಇಲ್ಲ ‘ ಎಂದ. 

‘ಏನೂ ಸುಖವಿಲ್ಲ ಮತ್ತು ನೆಮ್ಮದಿ ಇಲ್ಲ ಎಂದು ಹೇಳುತ್ತೀರಿ, ಅದಕ್ಕೆ ಕಾರಣಗಳನ್ನು ತಿಳಿಸಿ ‘ ಎಂದರು ನ್ಯಾಯಾಧೀಶರು. 

‘ಮಾನ್ಯರೇ,ನಾನು ಮದುವೆಯಾಗಿ ಆರು ವರ್ಷವಾಯಿತು, ಸಂಸಾರ ಮುಂದೆ ಸಾಗುತ್ತಿಲ್ಲ, ನೆಮ್ಮದಿ ಸಿಗುತ್ತಿಲ್ಲ.  ಇನ್ನು ನನ್ನ ತಂದೆ-ತಾಯಿಯವರ ಜೊತೆ ಅವಳ ಹೊಂದಾಣಿಕೆ ಇಲ್ಲವೇ ಇಲ್ಲ ‘ ಎಂದ. 

‘ ಸ್ವಲ್ಪ ಇರೀ, ಆರು ವರ್ಷವಾಯಿತು ಸಂಸಾರ ಮುಂದೆ ಹೋಗುತ್ತಿಲ್ಲವೆಂದರೆ ಏನರ್ಥ ?’

‘ ಅದೇ.. ಅದೇ… ನಮಗೆ ಸಂತತಿ ಬೇಕೆಂದನಿಸಿದಾಗ..ಇಲ್ಲದ ಹಾಗೆ ಆಗಿದೆ’

‘ಒಹ್ ! ಇದೇನಾ ಮೂಲ ಸಮಸ್ಯೆ ?’

‘ಮಾನ್ಯರೆ, ಇದು ಒಂದಷ್ಟೇ , ಇನ್ನೊಂದು ಅವಳು ನನ್ನ ತಾಯಿಯನ್ನು ತನ್ನ ಅಮ್ಮನಂತೆ ನೋಡುತ್ತಿಲ್ಲ’ ಎಂದ. 

‘ನಿಮ್ಮ ತಂದೆ ತಾಯಿಯವರನ್ನು ಸರಿಯಾಗಿ ನೋಡುತ್ತಿಲ್ಲವೆಂದು ಆಕೆಯನ್ನಷ್ಟೇ ದೂಷಿಸಿದರೆ ಹೇಗೆ ? ಆಕೆ ಹಾಗೆ ಮಾಡಲು ಕಾರಣಗಳೂ ಇರಬಹುದು. ಈ ವಿಷಯದಲ್ಲಿ ನಿಮ್ಮ ತಾಯಿಯನ್ನು 

ನಾವು ಪ್ರಶ್ನಿಸಲಾಗದು. ಪರಸ್ಪರ ಅರಿತು ಬಾಳಿದರೆ ಸಂಸಾರದಲ್ಲಿ ಸುಖ ಸಿಗುತ್ತದೆ ಎಂದು ಇಡೀ ಪ್ರಪಂಚಾನೇ ಹೇಳುತ್ತದೆ ಅಲ್ವ ? ಹಾಗಾಗಿ ವಿಚ್ಛೇದನಕ್ಕೆ ನಿಮ್ಮ ತಾಯಿಯ ಮನಸ್ಥಾಪ ಮುಖ್ಯ ಕಾರಣ ಇರಲಿಕ್ಕಿಲ್ಲ ಅಲ್ವ ?’

‘ಹೌದು ಸ್ವಾಮಿ, ಅದು ಮುಖ್ಯ ಕಾರಣವಲ್ಲ ‘

ಆಗ ನ್ಯಾಯಾಧೀಶರು ಅವನ ಹೆಂಡತಿಯ ಕಡೆಗೆ ತಿರುಗಿ ಹೀಗೆ ಕೇಳಿದರು;

‘ಏನಮ್ಮ ನಿನ್ನ ವಿಚಾರ ಏನು ? ವಿಚ್ಛೇದನ ಪಡೆದರೆ ನೆಮ್ಮದಿಯಾಗಿ ಇರುವೆಯಾ ?’ ಆಗ ಅವಳು ಮುಖ ಮುಚ್ಚಿಕೊಂಡು ಅಳುತ್ತಲೇ ಇದ್ದಳು. ಸ್ವಲ್ಪ ಹೊತ್ತು ಆಕೆ ಏನೂ ಹೇಳಲಿಲ್ಲ. ಮಾನ್ಯ ನ್ಯಾಯಾಧೀಶರು ಆಕೆ ಸಮಾಧಾನವಾಗುವದನ್ನೇ ಕಾಯುತ್ತಿದ್ದರು.  ಇಡೀ ನ್ಯಾಯಾಂಗಣದ ದೃಷ್ಟಿ ಅವಳ ಮೇಲೆಯೇ ಇತ್ತು.  ಆಕೆ ಸಾವರಿಸಿಕೊಂಡು ಮೆಲ್ಲಗೆ ಹೀಗೆ ಹೇಳಿದಳು;

‘ದೇವ ಸ್ವರೂಪಿ ನ್ಯಾಯಾಧೀಶರೇ, ನಾನು ನಿಜವಾಗಿ ಈಗ ಅಬಲೆ.  ನನ್ನ ಗಂಡನೇ ನನ್ನನ್ನು ನಂಬದಿದ್ದಾಗ ನಾನು ಏನು ಮಾಡಲಿಕ್ಕೆ ಸಾಧ್ಯ ? ಹೌದು, ನನಗೆ ಮತ್ತು ನನ್ನ ಅತ್ತೆಗೆ ವ್ಯತ್ತ್ಯಾಸ ಬಂದಿದೆ. ಅದನ್ನು ಸರಿಪಡಿಸಿಕೊಳ್ಳಲು ನಾನು ಬಹಳೇ ಸಹನೆಯಿಂದ ಪ್ರಯತ್ನಿಸಿದೆ.  ಆದರೇ, ನನ್ನ ಸಹನೆ ಅವರಿಗೆ ಅರ್ಥವಾಗಲಿಲ್ಲ, ಬದಲಿಗೆ ಅದು ನನ್ನ ಅಪರಾಧಿತ್ವ ಎಂದು ಕೊಂಡರು. ಹೀಗಾಗಿ, ಮೇಲೆ ಮೇಲೆ ಮಾತಿನ ಪ್ರಹಾರಗಳು ಮೂಡ ತೊಡಗಿದವು. ಅದರಿಂದ ನಾನು ನೊಂದಿದ್ದೇನೆ. 

ನನಗೆ ಶಿಶು ಆಗಲಿಲ್ಲವೆಂಬ ಅವರ ಬಯಕೆಯೇನೋ ನಿಜ.  ಆದರೇ, ಭಗವಂತ ಮನಸ್ಸು ಮಾಡಿ ನನ್ನ ಮಡಿಲಲ್ಲಿ ಕಂದಮ್ಮನನ್ನು ಹಾಕಬೇಕಲ್ಲವೇ ? ಅದು ನನ್ನೊಬ್ಬಳ ಕೈಯಲ್ಲಿ ಇದೆಯೇ ?’

ಆಮೇಲೆ ನ್ಯಾಯಾಧೀಶರು ಗಂಡನ ಕಡೆಗೆ ತಿರುಗಿ;

‘ಮಿ. ಸತೀಶ್ ನಿಮ್ಮ ಹೆಂಡತಿಯನ್ನು ವೈದ್ಯಕೀಯವಾಗಿ ಪರೀಕ್ಷೆಗೆ ಒಳಪಡಿಸಿದ್ದೀರಾ ?’

‘ಮಾನ್ಯರೆ, ಒಂದೆರಡು ಬಾರಿ, ಅವಳನ್ನು ವೈದ್ಯರ ಹತ್ತಿರ ಕರೆದೊಯ್ದಿದ್ದೆ. ಆದರೇ, ಸಮಯ ಇನ್ನೂ ಕೂಡಿ ಬಂದಿಲ್ಲ ಎಂದಿದ್ದರು’ ಎಂದ. 

‘ಒಹ್ ! ಹಾಗಾದರೆ, ಆಕೆಗೆ ಗರ್ಭ ಧರಿಸುವ ಅವಕಾಶವೇ ಇಲ್ಲ ಎಂದು ವೈದ್ಯರು ಹೇಳಿಲ್ಲವಲ್ಲ  ?’

‘ಹೌದು, ಅವರು ಹಾಗೆ ಹೇಳಿಲ್ಲ, ಆದರೇ ನಮಗೆ ಅದರ ಭರವಸೆ ಹೋಗಿಬಿಟ್ಟಿದೆ ‘

‘ಭರವಸೆಯು ಗಂಡನಾದ ನಿಮಗೆ ಮತ್ತು ನಿಮ್ಮ ತಂದೆ ತಾಯಿಗಳಿಗೆ ಇಲ್ಲವೇ ಇಲ್ಲ ಎಂಬುದು ನಿಜಾನಾ ?’

‘ಹೌದು ಸ್ವಾಮಿ’

ಆಗ ನ್ಯಾಯಾಧೀಶರು ಹೆಂಡತಿ ಕಡೆಗೆ ತಿರುಗಿ ಹೀಗೆ ಕೇಳಿದರು;

‘ಏನಮ್ಮ, ಇದಕ್ಕೆ ನಿನ್ನ ಉತ್ತರ ಏನು ?’ ಆಗ ಅವಳು ಹೇಳಿದಳು;

‘ನನಗೆ ಮಗುವಾಗುವ ಭರವಸೆ ಇದೆ. ಆದರೇ, ಅವರಿಗೆ ಆ ಭರವಸೆ ಇಲ್ಲವಲ್ಲ ಸ್ವಾಮಿ ನಾನೇನು ಮಾಡಲಿ.

ಅವರೆಲ್ಲರೂ ನೆಮ್ಮದಿಯಾಗಿರುತ್ತಾರೆಂದರೇ ವಿಚ್ಛೇದನೆ ಅನುಮೋದಿಸಿ ಬಿಡಿ ಸ್ವಾಮಿ’ ಎಂದು ಎರಡೂ ಕೈ ಜೋಡಿಸಿ ಕಣ್ಣೀರು ಪ್ರವಾಹಿಸಿದಳು.  

ಆಗ ನ್ಯಾಯಾಧೀಶರು ಹೀಗೆ ಹೇಳಿದರು;

‘ಅವರು ವಿಚ್ಛೇದನ ಕೇಳುತ್ತಾರೆಂದು ನೀವು ಕೊಟ್ಟರೆ ಹೇಗೆ ? ನಿಮ್ಮ ಒಪ್ಪಿಗೆಯೂ ಬೇಕಲ್ಲ !’

‘ನಾನು ಅಸಹಾಯಕಳು ಸ್ವಾಮಿ. ಎಲ್ಲಿಯಾದರೂ ಆಶ್ರಮದಲ್ಲಿ ಇದ್ದು ಉಳಿದ ಜೀವನ ಕಳೆಯುತ್ತೇನೆ. ಹಾಗಾಗಿ, ವಿಚ್ಛೇದನಕ್ಕೆ ನಾನು ಅನುಮೋದನೆ ಕೊಡುತ್ತಿದ್ದೇನೆ. ತಾವು ತೀರ್ಪು ನೀಡಿ’ ಎಂದು ಹೇಳುತ್ತಿದ್ದಂತೆಯೇ ಆಕೆ ಕುಸಿದು ಕಟಕಟೆಯಲ್ಲಿಯೇ ಬಿದ್ದು ಬಿಟ್ಟಳು.  ಅದನ್ನು ನೋಡಿದ ಸಿಬ್ಬಂದಿ, ಹಲವಾರು ವಕೀಲರು ಮುಂದೆ ಬಂದು ಆಕೆಯ ಮುಖಕ್ಕೆ ನೀರು ಸಿಂಪಡಿಸಿದರು. ಅವಳಿಗೆ ಎಚ್ಚರವಾಗಲೇ ಇಲ್ಲ.  ಆಮೇಲೆ ನ್ಯಾಯಾಧೀಶರು ಅಲ್ಲಿಯೇ ಹಾಜರಿದ್ದ ಪೊಲೀಸರಿಗೆ ಮತ್ತು ಒಬ್ಬ ಮಹಿಳಾ ವಕೀಲರಿಗೆ ಕರೆದು, ಅವಳನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು. ಆಮೇಲೆ, ಆ ಕೇಸಿನ ಬಗ್ಗೆ ತೀರ್ಪು ಒಂದು ವಾರದ ನಂತರ ಕೊಡುವುದಾಗಿ ಹೇಳಿ ಕೇಸನ್ನು ಮುಂದಕ್ಕೆ ಹಾಕಿದರು. 

ಅಲ್ಲಿದ್ದ ವಕೀಲರು, ನ್ಯಾಯಾಲದ ಸಿಬ್ಬಂದಿ ವರ್ಗದವರು ಮತ್ತಿತರು ಆ ಮಹಿಳೆಗೆ ಆಸರೆಯಾದಾಗ, ಆಕೆಯ ಗಂಡ ಸ್ಥಬ್ದವಾಗಿ ಹಾಗೆಯೇ ಸುಮ್ಮನೇ ನೋಡುತ್ತಾ ನಿಂತುಬಿಟ್ಟ ! ಅವನಿಗೆ ಏನೂ ತಿಳಿಯದಾಯ್ತು. ಆಮೇಲೆ ಆತನ ಮನಸ್ಸು ತಲ್ಲಣಗೊಂಡು ಆಸ್ಪತ್ರೆಗೆ ತನ್ನ ವಾಹನದಲ್ಲಿ ಅವರ ಹಿಂದೆಯೇ ಹೋಗಿಬಿಟ್ಟ.

ಆತ ಆಸ್ಪತ್ರೆಯನ್ನು ತಲುಪಿದಾಗ ಬಹಳೇ ಜನರು ಜಮಾಯಿಸಿದ್ದರು. ಆಗ ಆತ ಒಂದು ಕಡೆ ಮೂಲೆಯಲ್ಲಿ ನಿಂತು ಬಿಟ್ಟ.  ಆಕೆಯ ದೇಹದ ಪರೀಕ್ಷೆಯನ್ನು ವೈದ್ಯರು ಮಾಡುತ್ತಿದ್ದರು. ಈತನಿಗೋ, ಆಕೆಗೆ ಎಲ್ಲಿ ‘ಹೃದಯ ಸ್ತಂಬನ’ ಆಗಿದೆಯೋ ಎಂದು ಗಾಬರಿಗೊಂಡ. ಸುಮಾರು ಒಂದು ಗಂಟೆಯ ನಂತರ ಒಳಗೆ ಹೋದವರು ಒಬ್ಬೊಬ್ಬರಾಗಿಯೇ ಮೆಲ್ಲಗೆ ಹೊರಗೆ ಬಂದರು. ಆಕೆಗೆ ಏನಾಗಿದೆಯೆಂದು ಕೇಳುವ ಧೈರ್ಯ ಈತನಲ್ಲಿ ಬರಲಿಲ್ಲ. ಅವರೆಲ್ಲ ಈತನ ಮುಂದೆಯೇ ಹಾಯ್ದು ಹೋಗುತ್ತಿದ್ದರು, ಏನು ತಿಳಿಸಲಿಲ್ಲ. ಬಹುಷಃ ಅವರೆಲ್ಲರೂ ಈತನ ವರ್ತನೆಗೆ ಕೋಪಗೊಂಡಿದ್ದರೋ ಏನೋ ? ಆತನಿಗೆ ವಿಷಯ ತಿಳಿಯಲಿಲ್ಲ. ಆಮೇಲೆ, ಕೆಲವು ಗಂಟೆಗಳಾದ ಮೇಲೆ, ಅವಳನ್ನು  ಹೊರಗೆ ಕರೆ

ತಂದು ಆಸನದಲ್ಲಿ ಕುಳಿಸಿದರು. ಈತನು ಆಕೆಯನ್ನೇ ನೋಡುತ್ತಲೇ  ಇದ್ದನು.   

ಒಬ್ಬ ನರ್ಸ್ ಆಕೆಯ

ತಲೆ ನೇವರಿಸುತ್ತಿದ್ದಳು. ಆಗ, ಈತ ಆಕೆಯ ಹತ್ತಿರ ಹೋಗಿ ;

‘ಅವಳಿಗೆ ಏನಾಯಿತು ಸಿಸ್ಟರ್ ?’ ಎಂದ. 

‘ನೀನ್ಯಾರಪ್ಪ..?’

‘ನಾನು ಅವಳ ಪತಿ. ಆಕೆಯ ಆರೋಗ್ಯದ ಏರು ಪೇರಿನ ಬಗ್ಗೆ ಆತಂಕದಲ್ಲಿದ್ದೇನೆ ‘ ಎಂದ. 

‘ಹೌದಾ.. ಆದರೇ ನೀನು ಅಲ್ಲಿ ಕಾಣಲೇ ಇಲ್ವಲ್ಲ ‘ ಎಂದಾಗ;

‘ನಾನು ಒಳಗೆ ಹೋಗಲಿಕ್ಕೆ ಅನುಮತಿ ಇತ್ತೋ ಇಲ್ವೋ ತಿಳಿಯಲಿಲ್ಲ, ಹಾಗಾಗಿ ಇಲ್ಲಿಯೇ ಕಾಯುತ್ತಾ ನಿಂತೆ ‘ ಎಂದ. 

‘ಸರಿ..ಆಕೆಗೆ ತೊಂದರೆ ಏನೂ ಇಲ್ಲ.. ತಾಯಿಯಾಗುತ್ತಿದ್ದಾಳಷ್ಟೇ’ ಎಂದಾಗ ಆತ;

‘ಏನಮ್ಮ.. ನಿಜಾನಾ ?’ ಆಶ್ಚರ್ಯದಿಂದ ಹರ್ಷಗೊಂಡ.

‘ಏಕೆ ಅನುಮಾನಾನಾ  ? ವೈದ್ಯರೇ ಪರೀಕ್ಷೆ ಮಾಡಿ ತಿಳಿಸಿದ್ದಾರೆ. ನೀವು ಅವರನ್ನು ಕರೆದುಕೊಂಡು ಹೋಗಬಹುದು.’ ಎಂದಳು. ಆಗ ತಕ್ಷಣವೇ ಅವನ ಹೆಂಡತಿ ;

‘ನಾನು ನನ್ನ ಮನೆಗೆ ಹೋಗಬೇಕು. ನಿಮ್ಮೊಡನೆ ಬರಲಾರೆ’ ಎಂದಳು. 

‘ನನ್ನ ಮನೆ ನಿನ್ನ ಮನೆ ಬೇರೆ ಏನು ? ಹಾಗೇಕೆ ಹೇಳ್ತೀಯಾ ?’ ಎಂದ.

‘ನಿನ್ನೆವರೆಗೆ ನೀವು ಏನು ಹೇಳಿದ್ದೀರಿ, ಅದಕ್ಕೆ ನಾವಿಬ್ಬರೂ ಬದ್ಧರಾಗಿರಬೇಕು ‘ ಎಂದಳು ಆಕೆ.  ಆಗ ಆತನಿಗೆ ತನ್ನ ತಪ್ಪಿನ ಅರಿವಾಗಿ ಕಣ್ಣಲ್ಲಿ ನೀರು ತುಂಬಿಕೊಂಡ. ಅದನ್ನು ಗ್ರಹಿಸಿದ ಆಕೆ ಸುಮ್ಮನಾಗಿಬಿಟ್ಟಳು ! 

ಅವರಿಬ್ಬರ ಪ್ರೇಮ ಫಲದ ಚಿಕ್ಕ ಮೂರ್ತಿ ಅವಳಲ್ಲಿ ಉಧ್ಬವವಾಗಿದ್ದುದರ ಅರಿವು ಆಕೆಗೆ ಮೂಡಿತು ಮತ್ತು ತಾನು ‘ಗರ್ಭಿಣಿ’ ಎನ್ನಿಸಿಕೊಳ್ಳುವುದು ಸಂತೋಷ ತಂದಿತ್ತು. ಆತ ದುಃಖಿಸಿ ಅಳುವದನ್ನು ನೋಡಿ ;

‘ಅಳಬೇಡಿ ನಮ್ಮ ಮನೆಗೆ ಹೋಗೋಣ ನಡೆಯಿರಿ ‘ ಎಂದಳು. ಆಕೆ ಹಾಗೆ ಹೇಳಿದ್ದನ್ನು ಕೇಳಿ, ಆತನ ಆನಂದಕ್ಕೆ ಪಾರವೇ ಇಲ್ಲದಂತಾಯಿತು.  ಇಬ್ಬರೂ ತಮ್ಮ ಮನೆಗೆ ಹೋದರು. ಆತನ ತಂದೆ ತಾಯಿಗಳಿಗೂ ಆಕೆ ಗರ್ಭಿಣಿ ಮತ್ತು ವಂಶೋದ್ಧಾರಕನನ್ನು ಕೊಡುವಾಕೆ ಎಂದು ಮನದಟ್ಟಾದಾಗ ತಮ್ಮ ಕಠಿಣ ಮನಸ್ಸುಗಳನ್ನು  ಮೆತ್ತಗೆ ಮಾಡಿಕೊಂಡರು.  ಆಮೇಲೆ, ಆಕೆಗೆ ಉಪಚಾರವೋ ಉಪಚಾರ.  ಕೆಳಗೆ ಕೂಡ್ರುವಂತಿಲ್ಲ, ಆರಿದ ಪದಾರ್ಥ ತಿನ್ನುವಂತಿಲ್ಲ, ಕೆಲಸ ಮಾಡುವಂತಿಲ್ಲ ಇತ್ಯಾದಿ ಇತ್ಯಾದಿ ಮೂಡಿ ಬಂದವು. 

ಒಂದು ವಾರದ ನಂತರ. ನ್ಯಾಯಾಲದಿಂದ ಇಬ್ಬರಿಗೂ ನೋಟೀಸು ಬಂದವು. ಆ ಕರೆಯಂತೆ ನ್ಯಾಯಾಲಯಕ್ಕೆ ಹೋದಾಗ, ಇವರಿಬ್ಬರೂ ಜೋಡಿಯಾಗಿ ಬಂದದ್ದನ್ನು ನೋಡಿದ ನ್ಯಾಯಾಧೀಶರು

ಬಹಳೇ ಆನಂದ ಪಟ್ಟರು. 

ಅದಾಗಲೇ, ನ್ಯಾಯಾಲಕ್ಕೆ ಆ ಹೆಂಗಸು ಗರ್ಭಿಣಿಯಾಗಿರುವ ಸೂಚನೆ ಲಿಖಿತ ರೂಪದಲ್ಲಿ ಬಂದಿತ್ತು. ಆಗ ಅವರು ಕೇಳಿದರು;

‘ಈಗ ಏನು ನಿಮ್ಮಿಬ್ಬರ ವಿಚಾರ ?’

ಅದಕ್ಕೆ ಇಬ್ಬರೂ ಜೋಡಿಯಾಗಿ ನಿಂತಲ್ಲಿಯೇ ಎರಡೂ ಕೈಗಳಿಂದ ಭೂಮಿಯನ್ನು ಮುಟ್ಟಿ, ಅವರಿಗೆ ನಮಸ್ಕಾರ ಮಾಡಿದರು. ತೀರ್ಮಾನವು ಅವರಲ್ಲಿಯೇ ಆದಾಗ ನ್ಯಾಯಾಲಯ ಕೂಡ ಸಹಕರಿಸಿ ಕೇಸನ್ನು ವಜಾ ಮಾಡಿ ಅವರಿಬ್ಬರಿಗೆ ಸಿಹಿ ತಿಂಡಿ ಕೊಟ್ಟು ಕಳಿಸಿತು. 


4 thoughts on “ನ್ಯಾಯ ಪ್ರಸಂಗ 

  1. ಸಾಮಾನ್ಯವಾಗಿ ಈ ತರಹದ ಕುಟುಂಬಗಳಲ್ಲಿ ಬರುವ ಸಮಸ್ಯೆಗಳಿಗೆ ಸಮಾಧಾನದ ಉತ್ತರ ಕಂಡುಹಿಡಿದಿದ್ದಾರೆ ಲೇಖಕ ನಾಯಕರು. ಅತ್ತೆ ಸೊಸೆ ಜಗಳಗಳಿಗೆ ಪರಿಹಾರ ಕಂಡು ಹಿಡಿಯುವುದು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ. ಇಬ್ಬರ ಜಗಳದ ನಡುವೆ ಬಡಪಾಯಿ ಗಂಡನ ಪರಿಸ್ಥಿತಿ ಅಯೋಮಯ.

    1. ನಿಮ್ಮ ವಿಮರ್ಶೆ ತಾತ್ವಿಕ ಮತ್ತು ಸಮಂಜಸ. ಧನ್ಯವಾದಗಳು.

Leave a Reply

Back To Top