ಒಂದು ಬೊಗಸೆ ನೀರು

ಕಾವ್ಯ ಸಂಗಾತಿ

ಒಂದು ಬೊಗಸೆ ನೀರು

ಅನಸೂಯ ಜಹಗೀರದಾರ

ಎರಡು ಹಸ್ತಗಳ ಜೊತೆಯಾಗಿ ಜೋಡಿಸಿ
ಬೆರಳುಗಳನು ಒತ್ತೊತ್ತಾಗಿ ಹೆಣೆದಾಗ
ಅದು ಪಾತ್ರೆಯಾಕಾರವಾಗುತ್ತದೆ

ಸಾಗರದಿ ನಿಂದು ಅಲ್ಲಿಯ ಆ ನೀಲಿ ನೀರನು
ಸಂಭ್ರಮದಿ ಆ ಬೊಗಸೆಯಲಿ ಹಿಡಿದು
ಮೇಲಿನಿಂದ ಹಾದು ಬಂದ
ರವಿ ರಶ್ಮಿಯ ನೋಡುತ್ತ
ಏಕ ಚಿತ್ತದಿ ಆಕೆ ನಿಲ್ಲುತ್ತಾಳೆ

ಗಾಳಿ ಸೋಕಿ ಅಲುಗಾಡುವ ನೀರಲಿ
ಸೂರ್ಯ ಕಿರಣ ಹಾದು
ಅದು ಬಣ್ಣ ಬಣ್ಣಗಳಲಿ ಮಿಂಚಾಗಿ
ಸಣ್ಣ ಗುಳ್ಳೆಗಳಾಗಿ ಹೊಳೆಯುತ್ತದೆ
ಅವಳ ಕಿವಿಯೋಲೆಯ ಕೊರಳ ಸರದ
ಬಿಲ್ ಕುಲ್ ಮುತ್ತುಗಳಂತೆಯೇ..!!

ಸಮಯ ಸರಿದಂತೆಯೇ ಕೆಲ ಚಣಗಳಲಿ
ಆ ನೀರು ಬೆರಳ ಸಂದುಗಳಲಿ ಇಳಿದು
ಹನಿ ಹನಿಗಳಾಗಿ ಮರಳಿ ಅದೇ ಸಾಗರವ
ಸೇರಿ ಹೋಗುತ್ತದೆ.

ಹೇಳುತ್ತಾಳೆ ಅವಳು..
ಇದೋ ನನ್ನ ಪಾಲಿಗೆ ಬಂದಿತ್ತು
ಮರಳಿ ಮತ್ತೇ ನಿನ್ನದೇ ಆಯಿತು..!!

ಸಾಗರ ತನ್ನ ಭೋರ್ಗರೆತದಲಿ
ಹೂಂ ಗುಟ್ಟುತ್ತದೆ
ಅವಳಿಗೆ ಮಾತ್ರ ಕೇಳುವ ಹಾಗೆ..!!

ಸೂರ್ಯ ರಶ್ಮಿಯ ಬಣ್ಣ ಚದುರುತ್ತದೆ
ಅವಳಿಗೆ ಮಾತ್ರ ಕಾಣುವ ಹಾಗೆ..!!

ಬೊಗಸೆಯಲಿ ಉದಕ
ತುಂಬಿಕೊಂಡಿದ್ದಾಗ
ಅವಳ ಮೈಮನದ ದುಂಬಿ
ಝೇಂಕರಿಸುತ್ತದೆ
ನಾದವಾಗಿ, ಗಾನವಾಗಿ,
ಮೌನವಾಗಿ, ಮಾತಾಗಿ
ಜಾನವಾಗಿ, ಧ್ಯಾನವಾಗಿ
ಅವಳು ತಲ್ಲೀನ
ಆ ಅಂತರಂಗದಲಿ ಲೀನ..!!


Leave a Reply

Back To Top