ಆತ್ಮದೊಡನೆ ಅನುಸಂಧಾನಗೈದ ಗಜಲ್ ಗಳು

ಪುಸ್ತಕ ಸಂಗಾತಿ

ಆತ್ಮದೊಡನೆಅನುಸಂಧಾನಗೈದ

ಗಜಲ್ ಗಳು

ಕೃತಿ : ಆತ್ಮಾನುಸಂಧಾನ

ಕವಯಿತ್ರಿ : ಅನಸೂಯ ಜಹಗಿರ್ದಾರ

ಫೋನ್ ಸಂಖ್ಯೆ :94493 10955

ಶ್ರೀಮತಿ ಅನುಸೂಯ ಜಹಗಿರ್ದಾರ ಅವರ ಮೊದಲ ಗಜಲ್ ಕೃತಿ ಆತ್ಮಾನುಸಂಧಾನ ಇವರು ಕೊಪ್ಪಳದ ಪ್ರೌಢ ಶಾಲೆಯ ಸಹಶಿಕ್ಷಕಿಯಾಗಿದ್ದು ತಮ್ಮ ವೃತ್ತಿಯೊಂದಿಗೆ ಕಾವ್ಯ, ಕಥೆ, ಗಜಲ್ ರಚನೆಗಳಂತಹ ಸಾಹಿತ್ಯದ ಒಲವುಳ್ಳವರಾಗಿರುವರು ಇವರ ಕವನ ಸಂಕಲನಕ್ಕೆ  ಡಿ ಎಸ್ ಕರ್ಕಿ ಕಾವ್ಯ ಪ್ರಶಸ್ತಿ ದೊರಕಿದ್ದು ಇದು ಅವರ ಕಾವ್ಯ ರಚನೆಯ ಪ್ರೌಢಿಮೆಯನ್ನು ಸಾರುತ್ತದೆ ಕೃತಿಯ ಮುಖಪುಟ  ಮುದ್ರಣ ಶೈಲಿ ಎಲ್ಲವೂ ಬಹುಸುಂದರವಾಗಿದ್ದು ತುಂಬಾ ಆಕರ್ಷಕವಾಗಿ ಮೂಡಿಬಂದಿದೆ. . ಪ್ರಸ್ತುತ ವಿಷಯಕ್ಕೆ ಬರುವುದಾದರೆ ಗಜಲ್ ಇದೊಂದು ಅರೇಬಿಕ್ ಶಬ್ಧ, ಜಿಂಕೆಯ ಆರ್ತನಾದ, ಸ್ತ್ರೀಯರೊಡನೆ ಮಾತನಾಡುವುದು, ಪ್ರೇಮ ಅನುರಾಗ, ವಿರಹ ಕರುಣರಸಗಳನ್ನು ಬಲು ನಯವಾಗಿ ಅಷ್ಟೇ ಪರಿಣಾಮಕಾರಿಯಾಗಿ ಅಭಿವ್ಯಕ್ತ ಪಡಿಸುವ ಕಾವ್ಯ ಪ್ರಾಕಾರವಾಗಿದೆ.ಅರಬ್ ನಲ್ಲಿ ಹುಟ್ಟಿ ಪರ್ಷಿಯ ಭಾಷೆಯಲ್ಲಿ ಬಲು ವಿಸ್ತಾರವಾಗಿ ಬೆಳೆದು ಉರ್ದು ಭಾಷೆಯಲ್ಲಿ ತನ್ನ ಔನ್ಯತ್ಯವನ್ನು ಸಾಧಿಸಿ ಉರ್ದು ಕಾವ್ಯದ ಘನತೆಯಾಗಿ ಮೆರೆದಿದೆ,ಇಂದಿಗೂ ಮೆರೆಯುತ್ತಿದೆ. ಗಜಲ್ ಗೆ  ಏಳನೇ ಶತಮಾನವನ್ನು ಇದರ ಆರಂಭದ ಕಾಲಮಾನ ಎಂದು ಗಣಿಸಲಾಗಿದೆ, ಒಂಭತ್ತನೆಯ ಶತಮಾನದ ಒಂದು ರಚನೆ ಮೊದಲ ದಾಖಲೆಯಾಗಿ ದೊರಕಿದೆ. ಅರಬ್ಬರ ಕಸಿದಾ ಎನ್ನುವ ಕಾವ್ಯ ಮೂಲದಿಂದಲು ಮತ್ತು ಇರಾನ್ ನ ಚಾಮ ಎನ್ನುವ ಗ್ರಾಮೀಣರ ಹಾಡುಗಬ್ಬದ ತಳದಿಂದಲೂ ಬೆಳೆದು ಬಂದದ್ದು ಎಂದು ಅಭಿಪ್ರಾಯಿಸಲಾಗುತ್ತಿದೆ.ಮೂಲತಃ ಹಾಡುವ ಗುಣ ಇದರ ಮೂಲವಾದದ್ದರಿಂದ ಚಾಮವೇ ಇದರ ಮೂಲವೆಂಬುದು ಭಾಷಾ ತಜ್ಞರ ಅಂಬೋಣ.

ಇನ್ನು ಗಜಲ್ ಅನ್ನು ಆಸ್ಥಾನದಿಂದ ಸಾಮಾನ್ಯ ಜನರತ್ತ  ತರುವಲ್ಲಿ ಜನ ಸಾಮಾನ್ಯರ ಕವಿಗಳು, ಸೂಫಿಸಂತ ಕವಿಗಳು ಪ್ರಮುಖರು.ಸರಳ ಗಜಲ್ ಗಳ ಮೂಲಕ ಲೌಕಿಕ ಅಲೌಕಿಕ ಪ್ರೇಮ, ವಿರಹ, ತ್ಯಾಗ, ಸಾಮಾಜಿಕ ವಿಡಂಬನೆ, ಆಧ್ಯಾತ್ಮ ಎಲ್ಲವನ್ನೂ ಒಳಗೊಳಿಸಿಕೊಂಡು ಬಲು ಸೊಗಸಾಗಿ ಎರಡೇ ಸಾಲುಗಳಲ್ಲಿ ನಿವೇದಿಸುತ್ತ ಲೋಕಕ್ಕೆ ಸಾರಿದರು ಗಜಲ್ ಕವಿಗಳು.ಉರ್ದು ಭಾಷೆ ಮತ್ತು ಗಜಲ್ ಒಂದು ಇನ್ನೊಂದರಿಂದ ಬೆಳೆದಿವೆ ಕಾವ್ಯ ರಸಿಕರ ಮನ ಬೆಳಗಿವೆ ಎಂದರೆ ತಪ್ಪಾಗಲಾರ್ದು. ಅಮೀರ್ ಖುಸ್ರೋ, ಮೀರ್ ತಖೀಮಿರ, ಮಿರ್ಜಾ ಗಾಲಿಬ್, ಕವಿ ಅಲ್ಲಮ ಇಕ್ಬಾಲ್, ವಲಿ ದಖನಿ, ದಾಘ್ ದೆಹಲ್ವಿ, ಮೋಮಿನ್, ಫಿರಾಕ್ ಗೋರಕಪುರಿ,ಬಶೀರ್ ಬದ್ರ್, ಫಾಸಲಿ,ಕೌಸರ್ ಹೀಗೆ ಅನೇಕ ಗಜಲ್ ಕಾರರು ಗಜಲ್ ಕ್ಷೇತ್ರಕ್ಕೆ ನೀಡಿದ ಕಾಣಿಕೆ ಅನನ್ಯವಾದದ್ದು.

ಕನ್ನಡ ಭಾಷೆಗೆ ಮೊದ ಮೊದಲು ಗಜಲ್ ಅನುವಾದ ಸಾಹಿತ್ಯವಾಗಿ ಪರಿಚಯವಾಯ್ತು, ಡಾಕ್ಟರ್ ಕೆ ಮುದ್ದಣ್ಣ, ನಾಡೋಜ ಶ್ರೀ ಶಾಂತರಸರು, ದೇವೇಂದ್ರ ಕುಮಾರ್ ಹಕಾರಿ, ಪಂಚಾಕ್ಷರಿ ಹಿರೇಮಠ,ತನಹಾ ತಿಮ್ಮಾಪುರಿಯವರಂತಹ ಅನೇಕ ಕಾವ್ಯ ಪ್ರೇಮಿಗಳು ಗಜಲ್ ನ ಫರ್ಧಗಳನ್ನ,(ಬಿಡಿ ದ್ವಿಪದಿ)ಇಡೀ ಗಜಲ್ ಗಳನ್ನ ಬಲು ಸೊಗಸಾಗಿ ಅನುವಾದಿಸಿ ಕನ್ನಡಿಗರಿಗೆ ಗಜಲ್ ನ ರಸಾಸ್ವಾದವನ್ನ,ಅದರ ಸೌಂದರ್ಯವನ್ನ ಪರಿಚಯಿಸಿದರು.

ಮುಂದೆ ಶ್ರೀ ಶಾಂತರಸ ಅವರೇ ಕನ್ನಡದಲ್ಲಿ ಪ್ರಪ್ರಥಮವಾಗಿ ನಿರ್ಧಿಷ್ಟ ಚಂದ ಲಕ್ಷಣವುಳ್ಳ ಬಿಡಿ ದ್ವಿಪದಿಗಳನ್ನು ರಚಿಸಿ ಗಜಲ್ ಕಾವ್ಯ ಜಲಧಿಯುಕ್ಕಿಸಿ ಕನ್ನಡದ ಗಜಲ್ ರಚನಾ ಪರಂಪರೆಗೆ ನಾಂದಿಹಾಡಿದರು. ಅವರ ಗಜಲ್ ಮತ್ತು ಬಿಡಿ ದ್ವಿಪದಿಗಳು ಎನ್ನುವ ಕೃತಿ ಕನ್ನಡ ಗಜಲ್ ರಚನಾಕಾರರಿಗೆ ಮಾಹಿತಿ ನೀಡುವ ಮೂಲ ಆಕರ ಗ್ರಂಥವಾಗಿದೆ. ಮುಂದೆ ಈ ಗಜಲ್ ರಚನೆಯ ಗಂಗೋತ್ರಿ ಹಲವು ಕವಲಾಗಿ ಹರಿಯುವಲ್ಲಿ,ನಜೀರ್ ಚಂದಾವರ,ಎಚ್ ಎಸ್ ಮುಕ್ತಾಯಕ್ಕ, ಡಾ ಬಸವರಾಜ್ ಸಬರದ್,ಹೇಮಲತಾ ವಸ್ತ್ರದ ಕಾಶಿನಾಥ್ ಅಂಬಲಗಿ,ಚಿದಾನಂದ ಸಾಲಿ, ಗಿರೀಶ್ ಜಕಾಪುರೆ, ಅಲ್ಲಾ ಗಿರಿರಾಜ್ ಕನಕಗಿರಿ, ಸಿದ್ಧರಾಮ ಕೂಡ್ಲಿಗಿ ಡಾ.ಮಲ್ಲಿನಾಥ ತಳವಾರ,ಅಬ್ದುಲ್ ಹೈ ತೋರಣಗಲ್,  ಶ್ರೀ ಸಿದ್ರಾಮ್ ಹೊನ್ಕಲ್ ಅಮ್ಮ ಪ್ರಭಾವತಿ ದೇಸಾಯಿ, ನಿರ್ಮಲಾ ಶೆಟ್ಟರ್ , ಶ್ರೀದೇವಿ ಕೆರೆಮನೆ,ಪ್ರೇಮಾ ಹೂಗಾರ್ ಅರುಣಾ ನರೇಂದ್ರ,ಶಮಾ ಜಮಾದಾರ್, ಮತ್ತು ಎಸ್ ಎಸ್ ಅಲಿ,ನೂರ್,ಸಾವನ್, ಕರನಂದಿ,ನಮೃಷಿ,ಚೇತನ್,ಮಹಾಂತೇಶ್ ಗೋನಾಲ್ ,ಚಂಪೂ, ಸಹದೇವ್ ಯರಗೊಪ್ಪ,ಮಹದೇವ್ ಪಾಟೀಲ್,ನಿಲೂರೆ,ಮಮದಾಪೂರ ನಮ ಅಮ್ಮಾಪೂರ ಹೀಗೆ ಅನೇಕ ಗಜಲ್ ರಚನಾ ಸೌಂದರ್ಯ ಉಪಾಸಕರ ದಂಡನ್ನೆ ನಾವೀಗ ಕಾಣ್ಬಹುದು.

ಇಂದಿನ ಗಜಲ್ ಕರ್ತೃ  ಸಹೋದರಿ ಅನುಸೂಯ ಜಹಾಗಿರ್ದಾರ್ ಅವರ ಆತ್ಮಾನುಸಂಧಾನ ಅವರ ಈ ಕೃತಿಯಲ್ಲಿ ಒಟ್ಟು ಅರವತ್ತು ಬಿಡಿ ಗಜಲ್ ಹೂಗಳಿದ್ದು ಆತ್ಮವೆಂಬ ದಾರದಿಂದ ಅನುಸಂಧಾನ ಗೈಯ್ಯುತ್ತಲೆ ಈ ಗುಚ್ಛವನ್ನು ಸಿದ್ಧಪಡಿಸುವಲ್ಲಿ, ಸುಂದರ ಮಾಲೆಯಾಗಿಸುವಲ್ಲಿ ಕವಿಯಿತ್ರಿಯ ಜಾಣ್ಮೆ ಮೆಚ್ಚುವಂತಹದ್ದು. ಹೋಗಲಿ ಬಿಡು ಎನ್ನುವ ರದೀಫ್ ಬಳಸಿ ಬರೆದ ಮೊದಲ ಗಜಲ್ ಬದುಕಿನ ವೈರುಧ್ಯ ಗಳಿಗೆ ನಾವು ಸಹಜವಾಗಿ ಮುಖಾಮುಖಿಯಾಗಲೇ ಬೇಕಾದಾಗ ಬೇಕಾಗುವ, ಸಂಯಮ ಮತ್ತು ಪ್ರಜ್ಞಾಪೂರ್ವಕ ಉಪೇಕ್ಷೆ ಎಷ್ಟು ಅಗತ್ಯ ಎನ್ನುವುದನ್ನ ಪ್ರತಿ ಶೇರ್ ಗಳು ಮನಗಾಣಿಸುತ್ತವೆ

ಖುದಾ ಮರೆಯದೆ ಛೇಡಿಸಿದವರನ್ನೂ ಕಾಪಾಡು

ಅನುಬೇಡುತ್ತಾಳೆ ದುವಾ ಪ್ರತಿದಿನ ಅಲ್ಲಾಹುವಿನಲ್ಲಿ

ತನಗೆ ತೊಂದರೆ ಕೊಟ್ಟವರನ್ನು ರಕ್ಷಿಸು ಎಂದು ನಾನು ಪ್ರತಿದಿನ ಅಲ್ಲಾಹುವಿನಲ್ಲಿ ಪ್ರಾರ್ಥಿಸುತ್ತೇನೆ ಎನ್ನುವ ಸಾಲುಗಳು ನಿನ್ನ ವೈರಿಯನ್ನು ಪ್ರೀತಿಸು ಎಂದು ಕರೆಕೊಟ್ಟ ಏಸು ಕ್ರಿಸ್ತನ ಉಪದೇಶವನ್ನು ನೆನಪಿಸುತ್ತದೆ. ತನ್ನ ತಲೆಯಮೇಲೆ ಮುಳ್ಳಿನ ಕಿರೀಟವಿತ್ತು ವಿಧವಿಧವಾಗಿ ಹಿಂಸಿಸಿ ಶಿಲುಬೆಗೆ ನೇತುಹಾಕಿದವರ ಕುರಿತು ಏಸು ಹೀಗೆ ಪ್ರಾರ್ಥಿಸುತ್ತಾನೆ “ಇವರು ಮಾಡುತ್ತಿರುವ ಪಾಪಕಾರ್ಯದ ಬಗ್ಗೆ ಅರಿವಿಲ್ಲ ತಾವು ಏನು ಮಾಡುತ್ತಿರುವೆವು ಎನ್ನುವುದನ್ನು ಇವರು ಅರಿಯರು ದೇವರೇ ಇವರನ್ನು ಕ್ಷಮಿಸು” ಎಂದು  ಮೇಲಿನ ಶೇರ್ ಸಾಲುಗಳು ಕೂಡ ಇದನ್ನೇ ಪ್ರತಿಧ್ವನಿಸಿದೆ. ಇಲ್ಲಿನ ಸಾಮರಸ್ಯ ಗಮನಿಸುವುದಾದರೆ ದುವಾ ಬೇಡುತ್ತಿರುವವರು  ಹಿಂದೂ, ಇಲ್ಲಿನ ಸಾಲುಗಳ ಮೂಲ ಇರುವುದು ಬೈಬಲ್ ನಲ್ಲಿ ಮತ್ತು ಕವಿ ದುವಾ ಕೇಳುತ್ತಿರುವುದು ಅಲ್ಲಾಹುವಿನಲ್ಲಿ ಇದೇ ಅಲ್ಲವೇ ಧರ್ಮ ಸಾಮರಸ್ಯ ಎನ್ನುವುದು ? ಸೂಫಿಗಳ ಛಾಯೆಯನ್ನು ಇಲ್ಲಿ ಕಾಣಬಹುದು

ಬಹು ದೂರ ನಿನ್ನಯ ನೆಲೆಯು ತಿಳಿಲಾಗದೆ ಪರದಾಡುತಿಹೆನು

ಪ್ರಣಯ ಸಂದೇಶ ತಲುಪಿಸುವ ಮುಗಿಲ ಮೇಘವಾದೆ ನೋಡುತ್ತಲಿರುವೆ

ನೀವು ಯಾರನ್ನಾದರೂ ಪ್ರೀತಿಸಿದರೆ ನೀವು ಯಾವಾಗಲೂ ಅವರೊಂದಿಗೆ ಸಂತೋಷದಲ್ಲಿ, ಅನುಪಸ್ಥಿತಿಯಲ್ಲಿ, ಏಕಾಂತದಲ್ಲಿ,ಜಗಳದಲ್ಲಿ ಸೇರಿಕೊಳ್ಳುತ್ತೀರಿ ಎನ್ನುತ್ತಾನೆ ಜಲಾಲುದ್ದೀನ್ ರೂಮಿ , ಇಲ್ಲಿ ತಮ್ಮ ಪ್ರೇಮಿಯನ್ನು ತಲುಪಲಾಗದ ವೇದನೆ ಮತ್ತು ತಲುಪುವತ್ತ ಪ್ರಯತ್ನ ಎರಡನ್ನೂ ಕಾಣಬಹುದು.

 ಪ್ರೇಮಿ ಮತ್ತು ಪ್ರೇಮಿಕೆಯ ನಡುವಿನ ಪರಿತಪನೆಯೂ ಅಲ್ಲದೆ ದೇವರನ್ನು ನೋಡಲು ತವಕಿಸುವ ಭಕ್ತನ ಮನದಿಂಗಿತ ಎಂತಲೂ ಅರ್ಥೈಸಬಹುದಾಗಿದೆ.

ಅಲೆಗಳು ದಡಕಪ್ಪಳಿಸಿ ಕೇಂದ್ರದೆಡೆಗೆ  ಮರಳುತ್ತ ಸಾಗುತ್ತವೆ

ಕೆಲ ಅಲೆಗಳು ಹಿಂದಿರುಗದೇ ಇಲ್ಲವಾಗುತ್ತವೆ ಹೀಗೆ ಸುಮ್ಮನೆ

ಸಮುದ್ರದಲ್ಲಿ ಅಲೆಗಳ ಏರಿಳಿತ ಸಾಮಾನ್ಯ ಅಲೆಗಳೇ ಸಮುದ್ರದ ಚಲನೆಯನ್ನು ಸಾರುವ ಗುರುತುಗಳು ಎಂದರೂ ತಪ್ಪಲ್ಲ ಇಂತಹ ಅಲೆಗಳು ತಮ್ಮ ಮೂಲದಿಂದ ಹೊರಟು ತೀರಕ್ಕೆ ಬಂದು ತಲುಪುತ್ತವೆ ಆನಂತರ ಮತ್ತೆ ತಮ್ಮ ಕೇಂದ್ರ ಸ್ಥಾನಕ್ಕೆ ಮರಳುತ್ತವೆ, ಇಲ್ಲವೇ ಕೆಲವೊಂದು ಅಲೆಗಳು ನಡು ಮಾರ್ಗದಲ್ಲಿಯೇ ಇಲ್ಲವಾಗಿ ಬಿಡುತ್ತವೆ ಇದು ಸಮುದ್ರದಲ್ಲಿ ನಡೆಯುವ ನಿತ್ಯ ವೃತ್ತಾಂತ ಆದರೆ ಈ ರೂಪಕವನ್ನು ಇಟ್ಟುಕೊಂಡು ಮತ್ತೊಂದು ಸಾದೃಶ್ಯವನ್ನು ನಿರೂಪಿಸಲಾಗಿದೆ ಮನೆಯಿಂದ ಅಥವಾ ಕಣ್ಣಿಂದ ದೂರ ಹೋದ ನಮ್ಮ ಆತ್ಮೀಯ ಜೀವಗಳು ಮತ್ತೇ ನಮ್ಮ ಎದುರುಗೊಳ್ಳುತ್ತವೆ ಎನ್ನುವ ಖಾತ್ರಿ ಇಲ್ಲ ಅವು ಮರಳುವ ಮಾರ್ಗ ಮಧ್ಯದಲ್ಲಿಯೇ ನಮ್ಮನ್ನು ತೊರೆಯಬಹುದು ಎನ್ನುವ ಭೀತಿ ಕವಿಮನಕ್ಕಿದೆ, ಅಲ್ಲದೆ, ತಾನು ನೆಚ್ಚಿಕೊಂಡ ಪ್ರೀತಿ ಎಲ್ಲೋ ಒಂದು ಸಂದರ್ಭದಲ್ಲಿ ಕೈಜಾರಿ ಮರೆಯಾಗಿ ಹೋಗುವುದೋ ಎನ್ನುವ ಭಯವಾಗಿವೂ ಇದನ್ನು ಅರ್ಥೈಸಬಹುದು.

ನೀನೊಮ್ಮೆ ಮುಗುಳ್ನಕ್ಕು ಹೀಗೆ ಸೆಳೆದದ್ದು ತರವೆ

ದಿನರಾತ್ರಿಯೆಲ್ಲ ವಿರದುರಿಗೆ ದೂಡಿದ್ದು ತರವೆ

ವಿರಹದ ಮಧುರ ಯಾತನೆಯನ್ನು ಬಿಡಿಸಿಟ್ಟ ನವಿರಾದ ಭಾವಗಳು ಇಲ್ಲಿ  ಮೈಮುರಿದು ಓದುಗರಲ್ಲಿ ಆಪ್ತ ಭಾವ ಮೂಡುತ್ತವೆ

“ಪ್ರೀತಿ ನಮ್ಮನ್ನು ಯಾವತ್ತೂ ಒಂಟಿಯಾಗಿರಲು ಬಿಡುವುದಿಲ್ಲ” _  ಬಾಬ್ ಮಾರ್ಲೆ

ಒಮ್ಮೆ ಮನುಷ್ಯ ಪ್ರೀತಿಯ ಬಂಧನಕ್ಕೆ ಒಳಗಾದರೆ ಅದು ಜೀವನಪೂರ್ತಿ ಜೊತೆಯಾಗುವ ಸಂಗತಿ.

ಸಂಸಾರ ಗುಟ್ಟು ವ್ಯಾಧಿ ರಟ್ಟೆನ್ನುವರು ಜಗದ ಜನರು

ನೋವ ನಂಜು ನುಂಗಿ ಹೀಗೆ ನಕ್ಕಿದ್ದು ತರವೆ

ಸಂಸಾರದ ಗುಟ್ಟನ್ನು ಎಲ್ಲರಲ್ಲಿ ಎಲ್ಲೆಂದರಲ್ಲಿ ಚರ್ಚಿಸಬಾರದು ಅದು ನಮ್ಮೊಳಗಿನ ಹುಳುಕನ್ನು ಎಲ್ಲರಿಗೂ ತೋರಿದಂತಾಗುತ್ತದೆ ಇದು ನಮ್ಮನು ಕೆಲವರ ದೃಷ್ಟಿಯಲ್ಲಿ ಕೀಳಾಗಿ ಕಾಣಲು ಇಲ್ಲವೇ ನಮ್ಮವರ ನಡುವಿನ ಅಂತರ ಹೆಚ್ಚುಮಾಡಲು ನಾವೇ ಆಸ್ಪದ ಕೊಟ್ಟಂತಾಗುತ್ತದೆ ಎನ್ನುವುದು ಲೋಕಾರೂಢಿಯ ಮಾತು ಆದರೆ ನಮಗೆ ಆಪ್ತರಾದವರ ಮುಂದೆಯೂ ನಮ್ಮ ನೋವು ಸಂಕಟಗಳನ್ನು ಹೇಳಿಕೊಳ್ಳದಿದ್ದಾಗ ಅವರು ಅದನ್ನು ಹೇಗೋ ಅರಿತುಕೊಂಡು ಪ್ರಶ್ನಿಸುವ ಮಾತಾಗಿ ಇಲ್ಲಿ ಎರಡನೇ ಸಾಲು ಮೂಡಿಬಂದಿದೆ, ನೋವಿನ ನಂಜು ನುಂಗಿ ನನ್ನೆದುರು ಹೀಗೆ ನಗುತ್ತಾ ಇರುವಿಯಲ್ಲ ಇದು ಸರಿಯೇ ಎನ್ನುವ ಆಪ್ತ ಮಿಡಿತವನ್ನು ಇಲ್ಲಿ ಕಾಣಬಹುದು. ಮುಖದ ಮೇಲಿರುವ ಶುಭ್ರ ನಗುವಿನಲ್ಲಿಯೂ ನೋವಿನ ಗೆರೆಗಳನ್ನು ಅಂತರಂಗ ಅರಿತವರು ಮಾತ್ರ ಗುರುತಿಸುತ್ತಾರೆ.

ಹುಟ್ಟುತ್ತಲೇ ಮುಳ್ಳ ಪೊದೆಯಲ್ಲಿದ್ದೇವೆ ನಾವು

ಹೇಳಲೇನಿದೆ ಎಲ್ಲಿಯೂ ಸಲ್ಲದವರು ನಾವು

ಇದೊಂದು ಸ್ತ್ರೀ ಸಂವೇದನೆಯ ಗಜಲ್ ನ ಸಾಲುಗಳು ಹೆಣ್ಣನ್ನು ಹೇಗೆ ಕಾಲಾಂತರದಿಂದ ಶೋಷಣೆಗೆ, ಅವಗಣನೆಗೆ, ಪರಾಧಿನಕ್ಕೆ ಒಳಗಾಗಿಸಿ ತನ್ನ ಅಂತಃಸತ್ವ ವನ್ನು ಮರೆಯಾಗಿಸಲಾಗಿದೆ ಎನ್ನುವ ಚಿತ್ರಣವನ್ನು ನೀಡಲಾಗಿದೆ. ಹುಟ್ಟುತ್ತಲೇ ಮುಳ್ಳುಪೊದೆಯಲ್ಲಿದ್ದೇವೆ ಎನ್ನುವ ಸಾಲು ಜನ್ಮದಾರಭ್ಯ ಪುರುಷ ನಿಯಂತ್ರಣದಲ್ಲಿ ಕಟ್ಟಳೆಗಳ ಅಡಿಯಲ್ಲಿ ಬದುಕುವ ನಮ್ಮ ಬಗ್ಗೆ ಹೇಳಲೆನಿದೆ ನಾವು ಎಲ್ಲಿಯೂ ಸಲ್ಲದವರು ಎಂದು ಅವಲತ್ತುಕೊಳ್ಳಲಾಗಿದೆ. ಇದು ಸ್ತ್ರೀಯರ ಪರಿಸ್ಥಿತಿಯನ್ನು ತೆರೆದಿಡುವುದಲ್ಲದೆ ಎದುರಿರುವವರ ನಡೆಯನ್ನು ಪ್ರಶ್ನಿಸುತ್ತದೆ.

ಯಾರಿಗೆ ಬೇಕಿತ್ತು ಏಕಾಂಗಿತನದ ಸ್ವಾತಂತ್ರ

ಅನುಬಂಧಕೆ ಮನ ಅಣಿಯಾಗಿದೆ ತಿಳಿಯದೆ ನಿನಗೆ

ಮಿಲನಕ್ಕೆ ಮನ ಕಾತರಿಸುವಾಗ ಮನ ಅಣಿಯಾಗಿರುವಾಗ ಪ್ರೇಮಿಯ ಹಾಜರಿಯೇ ಇಲ್ಲದ ಸ್ವಾತಂತ್ರದ ಏಕಾಂತ ಯಾರು ಬಯಸಲಾರರು ಇಲ್ಲಿ ಒಂಟಿ ಪ್ರೇಮಿಯ ವಿರಹ ನೋವಿನ ಛಾಯೆಯಿದೆ.

ಸುತ್ತಲಿನ ಇರುವಲ್ಲಿ ಏನು ಘಟಿಸಿದರು ಅಚ್ಚರಿಯಾಗುವುದಿಲ್ಲ, ಸಂತಸವಾಗುವುದಿಲ್ಲ, ಮೃಷ್ಟಾನ್ನವನ್ನಿತ್ತರು ರುಚಿಸುವುದಿಲ್ಲ ವಿರಹಿಗಳಿಗೆ, ಆದರೆ ಪ್ರೇಮಿಗಳು ಜೊತೆಗಿದ್ದರೆ ಎಲ್ಲವೂ ಅಚ್ಚರಿಯ, ಖುಷಿಯ ಸಂಗತಿಗಳಾಗಿಯೆ ತೋರುತ್ತವೆ ಇದನ್ನು ಸಮರ್ಥಿಸುವಂತೆ ಕವಿ ಜಾವೇದ್ ಅಖ್ತರ್ ಹೀಗೆ ಹೇಳುತ್ತಾರೆ.

ಸೂರ್ಯ ಚಂದ್ರರು ಬೆಳಗಿದರು ಅಂಥ ದೊಡ್ಡ ವಿಷಯವೇನಲ್ಲ

ಒಮ್ಮೆ ನೀನು ಬಂದು ನೋಡು

ಹೇಗೆ ಹೆಚ್ಚುತ್ತದೆ

ರಾತ್ರಿಯ ಸೊಕ್ಕು _ ಜಾವೇದ್ ಅಖ್ತರ್.

ನಿಂತನೀರ ಕಲಕಿ ದೂರವಾದೆ ಹೇಳಲೇನಿದೆ

ಒಮ್ಮೆ ಮಿಂಚಿ ಮಾಯವಾದೆ ಹೇಳಲೇನಿದೇ

ಪ್ರೇಮ ಅಂಕುರಿಸುವ ಮುನ್ನ ಮನ ಶಾಂತ ಸರೋವರದಂತೆ ನಿಶ್ಚಲವಾಗಿರುತ್ತದೆ ಆದರೆ ಒಮ್ಮೆ ಪ್ರೀತಿ ಮೂಡಿದರೆ ಅದು ಸಾಗರವಾಗಿ ರುಪಾಂತರಗೊಳ್ಳುತ್ತದೆ ಸಾಗರದಲ್ಲಿ ಅಲೆಗಳ ಹೊಯ್ದಾಟ ಬಿರುಗಾಳಿಯ ಹೊಡೆತ ಎಲ್ಲವೂ ಸಹಜ ಅಂತೆಯೇ ನಿನ್ನನ್ನು ಪ್ರೇಮಿಸುವಮುನ್ನ ನನ್ನ ಮನ ಶಾಂತವಾಗಿತ್ತು ಅದನ್ನು ಕಲಕಿ ಒಮ್ಮೆ ಮಿಂಚಿ ಮಾಯವಾಗಿ ಹೋಗಿರುವೆ ಮನದ ಹೊಯ್ದಾಟ ಹೇಳಲೇನಿದೆ ಅದು ನಿನಗೆ ನಾನು ಹೇಳುವ ಮೊದಲೇ ತಿಳಿಯಬೇಕಾಗಿತ್ತು ಎನ್ನುವುದು ಇದರ ತಾತ್ಪರ್ಯ.ಪ್ರೇಮ ಒಂದು ಕ್ಷಣದಲ್ಲಿ ಘಟಿಸಿಬಿಡುವ, ಮಿಂಚಿ ಮೂಡುವ ಪ್ರಜ್ಞೆಯ ಅನುಭವವದು ಅದನ್ನು ಪೂರ್ವ ತಯಾರಿಯಿಂದ ಪಡೆಯುವ ಅಥವಾ ಆನಂತರದ ಕಡಗಣೆಯಿಂದ ದೂರ ಸರಿಯಲಾಗದ ಭಾವ ಇದಕ್ಕೆ ಪೂರಕವಾಗಿವೆ ಕೆಳಗಿನ ಸಾಲುಗಳು

ಕೆಲವು ಕ್ಷಣಗಳು ಮಳೆಯ ಹನಿಗಳಂತೆ

ಸಿಗುವುದೇ ಇಲ್ಲ ಕೈಗೆ ಹಿಡಿಯಾಗಿ

ಎದೆಗೆ ಅಪ್ಪಳಿಸಿ ಸುಖವನ್ನೇನೋ ಕೊಡುತ್ತವೆ

ಹಿಡಿಯಲು ಹೋದರೆ ಚೂರಾಗಿ ಹೋಗುತ್ತವೆ ಹೊಡೆದು.

 _ಖ್ಯಾತ ಹಿಂದಿ ನಟಿ ಕವಯಿತ್ರಿ ಮೀನಾಕುಮಾರಿ.”

ಮುಖ ಮುಚ್ಚಿಕೊಂಡು ಓಡಾಡುತ್ತಿರುವೆ

ಲೋಕ ಜನಕೆ ಹೆದರಿದ್ದಕ್ಕೆ ಬೇಸರವಿಲ್ಲ

ನಿನ್ನನ್ನು ಪ್ರೇಮಿಸಿದ್ದಕ್ಕಾಗಿ ಲೋಕದ ಎದುರು ಮುಖ ಮುಚ್ಚಿಕೊಂಡು ತಿರುಗುತ್ತಿರುವೆ ಜನರಿಗೆ ಹೆದರಿರುವದಕ್ಕಾಗಿ ನನಗೆ ಬೇಸರವಿಲ್ಲ ಎನ್ನುವಲ್ಲಿ ಪ್ರೇಮಕ್ಕಾಗಿ ಪ್ರೇಮಿಯು ತನ್ನನ್ನು ನೋಯಿಸುವ ಯಾವ ಸಂಗತಿನ್ನಾದರು ಸಹಿಸಬಲ್ಲರು ಎನ್ನುವ ರುಜುವಾತಿದೆ ಅಲ್ಲದೆ ಮುಂದೆ ಎಂದಾದರೂ ತಾವು ಸೇರುವ ಖಾತ್ರಿಯ ಭರವಸೆಯನ್ನು ಇಲ್ಲಿ ಕಾಣಬಹುದು. ಬರುವ ಎಲ್ಲಾ ಅಡೆತಡೆಗಳನ್ನು ಎದುರಿಸುವ ಮನೋಬಲವನ್ನು ಶುದ್ಧವಾದ ಪ್ರೀತಿ ನೀಡುತ್ತದೆ ಎನ್ನುವುದು ಇಲ್ಲಿ ಕಾಣಬಹುದು

ಖುದಿಕೋ ಕರ್ ಬುಲಂದ್ ಇತನಾ ಕೆ ಹರ್ ತಕದೀರ್ ಸೆ ಪಹಲೆ, ಖುದಾ ಬಂದೇಸೆ ಖುದ್ ಪೂಛೆ ಕೆ ಬತಾತೇರಿ ರಜಾಕ್ಯಾ ಹೈಸುಪ್ರಸಿದ್ಧ ಗಜಲ್ ಕವಿ ಅಲ್ಲಮ ಇಕ್ಬಾಲ್

( ನಿನ್ನ ಚೈತನ್ಯವನ್ನು ದೃಡಮಾಡು ಎಷ್ಟೆಂದರೆ, ದೈವವೇ ಖುದ್ದಾಗಿ ಬಂದು ನಿನ್ನ ಭವಿಷ್ಯ ಏನೆಂದು ಬರೆಯಲಿ ಎಂದು ಕೇಳುವಂತೆ )

ಗಜಲ್ ನ ಮೂಲ ನವಿರು ಭಾವ ಅದನ್ನು ಸಾಧಿಸುವಲ್ಲಿ ಕವಿಯಿತ್ರಿ ಯಶಸ್ಸು ಕಂಡಿದ್ದಾರೆ ಎನ್ನಬಹುದು ಪ್ರೇಮಿಗಳ ಪ್ರೇಮ, ವಿರಹಗಳ ಭಾವ ತೆರೆದಿಡುವ , ಸ್ತ್ರೀವಾದದ ನೆಲೆಯಲ್ಲಿ ಮೂಡಿಬಂದ, ಸಾಮಾಜಿಕ ಜೀವನದ ವೈರುಧ್ಯಗಳಲ್ಲಿಯೂ ಸೌಹಾರ್ದಯುತವಾಗಿ ಬದುಕುವ ಇಂಗಿತವನ್ನು ಹೇಳುವ ಸಶಕ್ತ ಶೇರ್ ಗಳು ಇರುವ ಸಂಕಲನವಾಗಿದ್ದು , ಪುರುಷ ಪಾರಮ್ಯಕ್ಕೆ ತನ್ನ ಸ್ವಂತಿಕೆಯನ್ನು ಕೊಂದುಕೊಂಡ ಸ್ತ್ರೀಯರ ಪ್ರತಿನಿಧಿಯಾಗಿ, ಕಾಲದ ಕಟ್ಟಳೆಯ ಕಥೆಯನ್ನು ನಿವೇದಿಸುವ ಆಮ್ರಪಾಲಿಯ ದುರಂತ ಬದುಕಿನ ಕುರಿತಾದ ಗಜಲ್ ,ಭವ್ಯ ಭಾರತದ ಇಂದಿನ ಪರಸ್ಥಿತಿಯನ್ನು ತುಂಬಾ ನೋವಿನಿಂದ ತೆರೆದಿಡುವ ಮಹಾತ್ಮ ಎನ್ನುವ ರದೀಫ್ ಇರುವ ಗಜಲ್ ಕೂಡ ಇಲ್ಲಿ ಮನಸೆಳೆಯುವಂತಹದ್ದಾಗಿದೆ. ಏಕ್ ಅಲಾಮತ್, ಬಹು ಅಲಾಮತ್, ಜುಲ್ಕಾಫಿಯ, ಕಾಫಿಯಾನ ಗಜಲ್ ಎಲ್ಲ ರೀತಿಯ ಗಜಲ್ ರಚಿಸುವಲ್ಲಿ ಗಜಲ್ ಕಾರ್ತಿ ಪ್ರೌಢಿಮೆ ಮೆರೆದಿದ್ದಾರೆ.

ಉರ್ದು ಮತ್ತು ಹಿಂದಿಯಲ್ಲಿನ ಗಜಲ್ ಗಳು ಮಾತ್ರಾ ಗಣಗಳ ಆಧಾರದಲ್ಲಿ ರಚಿಸಲ್ಪಟ್ಟಿವೆ ಆದರೆ ಭಾಷೆಯ ವ್ಯಾಕರಣದಲ್ಲಿ ಅಗಾಧ ವಿಭಿನ್ನತೆ ಇರುವ ಕನ್ನಡದಲ್ಲಿ ಅಲ್ಲಿನ ಛಂದಸ್ಸಿನ ಮಾದರಿ ಅಳವಡಿಸಿಕೊಳ್ಳಲು ತುಸು ಕಷ್ಟ ಆದರೆ ಅಕ್ಷರ ಗಣಗಳ ಮಾದರಿಯಲ್ಲಿ ಅಥವಾ ಎರಡು ಶೇರ್ ಗಳನ್ನೂ ಬರೆಯುವ ಸಾಲುಗಳಲ್ಲಿ ಸಮಸಾಲು ತರುವ ಪ್ರಯತ್ನ ಮಾಡಬಹುದು ಕವಯಿತ್ರಿ ಯವರು ಈ ನಿಟ್ಟಿನಲ್ಲಿ ಯೋಚಿಸಲಿ.


ಜ್ಯೋತಿ ಬಿ ದೇವಣಗಾವ್

Leave a Reply

Back To Top