ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಗಂಗಮ್ಮಳೆಂಬ ಭರವಸೆ
ಗಂಗಮ್ಮ ಸದಾ ಹಸನ್ಮುಖಿ ಹ್ಯೂಮರಸ್ ವ್ಯಕ್ತಿತ್ವದ ವಿಧ್ಯಾರ್ಥಿನಿ. ಒಮ್ಮೊಮ್ಮೆ ಅತಿಯಾದ ಮಾತಿನಿಂದಲೂ, ಅಧಿಕ ಪ್ರಸಂಗದಿಂದಲೂ ನಮ್ಮೆಲ್ಲ ಶಿಕ್ಷಕರ ಕೋಪಕ್ಕೆ ಗುರಿಯಾಗುತ್ತಿದ್ದಳಾದರೂ ತನ್ನ ಹಾಸ್ಯಾಮೃತ ಲೇಪಿಸಿದ ಶರವ ನಮಗೆ ತಿರುಗುಬಾಣವಾಗಿರಿಸಿ ಮತ್ತೆ ನಮ್ಮೆಲ್ಲ ಶಿಕ್ಷಕರ ಹೃದಯ ಗೆಲ್ಲುತ್ತಿದ್ದ ಹುಡುಗಿ.
ಗಂಗಮ್ಮ ತರಗತಿ ಒಳಗಿದ್ದ ತರಗತಿ ಶಾಂತತೆಯನ್ನು ಕಾಯ್ದುಕೊಳ್ಳುತ್ತಿತ್ತು. ಪ್ರತಿ ತರಗತಿಯ ಶಿಕ್ಷಕರು ಆಕೆಯನ್ನು ಲೀಡರ್ ಮಾಡಿರುತ್ತಿದ್ದರು. ನಾಯಕತ್ವದ ಗುಣ, ಸೆರೆ ಹಿಡಿವ ಮಾತುಗಾರಿಕೆ ಆ ಬಾಲೆಯದು. ಮತ್ತೊಂದು ಕಾರಣವೂ ಇತ್ತು. ಗಂಗಮ್ಮ ಲೇಟಾಗಿ ಸ್ಕೂಲ್ ಗೆ ಎಡ್ಮಿಶನ್ ಪಡೆದವಳು. ಆದ್ದರಿಂದಲೇ ಸಹಜವಾಗಿ ಆಕೆ ಎಲ್ಲರಲ್ಲೂ ಎಲ್ಲದರಲ್ಲೂ ಹಿರಿಯಳೆನಿಸುತ್ತಿದ್ದಳು. ಹೆಣ್ಣು ಮಕ್ಕಳು ದೊಡ್ಡವರಾದ ಮೇಲೆ ಮಹಿಳೆಯರಂತೆ.ಅಂತ ಹೇಳುತ್ತಾರೆ.ಇದು ಕೂಡ ನಿಜವೆ.
ಹೀಗಿರಲು ಒಮ್ಮೆ ಆಕೆಯ ಮನೆಗೆ ಹೋಗುವ ಪ್ರಸಂಗ ನಮ್ಮೆಲ್ಲರ ಪಾಲಿಗೆ ಒದಗಿ ಬಂದಿತು. ಅಂದು ಶಾಲೆಯ ಪುನರಾರಂಭ. ಮೇ ೨೮ ನೇ ತಾರೀಖು.
ಬಹುತೇಕವಾಗಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರೀ ಓಪನ್ ದಿನ ಮಕ್ಕಳು ಬರುವುದು ಕಡಿಮೆ. ಕಾರಣಗಳು ಹಲವಾರು. ಅವರದೇ ಪ್ರಕಾರ ಅವರ ಗೃಹಕೃತ್ಯಗಳು ಇನ್ನೂ ಮುಗಿದಿರುವುದಿಲ್ಲ.ಇಲ್ಲಿ ಗೃಹ ಎಂದರೆ ವಿಶಾಲಾರ್ಥ. ಅವರ ನೆರೆಹೊರೆ ಬಂಧು ಬಳಗ ಹಾಗು ಓಣಿಯವರೂ ಬರುತ್ತಾರೆ. ಅವರೆಲ್ಲರ ಶುಭ ಸಮಾರಂಭಗಳೂ ಇವರ ಹಾಜರಾತಿಯಲ್ಲೇ ನೆರವೇರಬೇಕು.ಊರಿನ ಗುಡ್ಡಗಳಲ್ಲಿ, ಹೊಲಮಾಳಗಳಲ್ಲಿ ಇವರ ಅಲೆದಾಟ ಮುಗಿದಿರುವುದಿಲ್ಲ. ಕೆರೆ ಬಾವಿಗಳಲ್ಲಿ ಈಜುವುದೂ ದನಕರುಗಳನ್ನು ಮೇಯಿಸುವುದೂ, ಉತ್ಸವ, ಜಾತ್ರೆಗಳಲ್ಲಿ ಕುಣಿದು ಕುಪ್ಪಳಿಸುವುದೂ ಇದ್ದೇ ಇತ್ತು. ಯಾವುದೂ ಮುಗಿದಿರುವುದಿಲ್ಲ. ಇತ್ತೀಚೆಗೆ ಟಿವಿ ಗಳ ಹಾವಳಿಯೂ ಜೊತೆ ಸೇರಿತ್ತು ನಮ್ಮ ಶಾಲೆಯ ಮಕ್ಕಳ ಮನೆಮನೆಗಳಲ್ಲಿ. ತಂಗಿ ತಮ್ಮಂದಿರ ಪೋಷಣೆ, ಅಡಿಗೆ ಮನೆಕೆಲಸ ಓಣಿ ಹಿರೇತನ ಇವೂ ಹೆಣ್ಣುಮಕ್ಕಳ ಪ್ರಮುಖ ಅಗತ್ಯದ ಕೆಲಸಗಳಾಗಿದ್ದವು.
ಇಂಥದ್ದರಲ್ಲಿ ನಾವು ಶಾಲೆಯ ಪುನರಾರಂಭದ ದಿನ ಮಕ್ಕಳನ್ನು ಮನೆ ಮನೆಗೆ ಕರೆಯಲು ಹೋಗಬೇಕಿತ್ತು. ನಮ್ಮ ಎಚ್ ಎಮ್ ಸ್ಟ್ರಾಂಗ್ ಆಗಿದ್ದರು. ಗರಂ ಆಗಿದ್ದರು. ಅನಿವಾರ್ಯ ನಾವು ಇವರನ್ನೆಲ್ಲ ಕರೆಯಲು ಹೋಗಲೇಬೇಕಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಶಾಲೆಯ ಸ್ವಚ್ಚತೆ ಕಾಯ್ದುಕೊಳ್ಳುವವರು, ಶ್ರಮದಾನ ವಿಧಾನದಿಂದ ನೆರವೇರಿಸುವವರೂ ಸರಾಗವಾಗಿ ನಿರ್ವಹಿಸುವವರೂ ವಿಧ್ಯಾರ್ಥಿಗಳೆ. ನಂತರದ್ದು ಶಿಕ್ಷಕರ ಪಾತ್ರ. ಈಗೀಗ ಅಡಿಗೆ ಸಿಬ್ಬಂದಿಯೂ ಸ್ವಚ್ಚತಾ ಆಂದೋಲನದಲ್ಲಿ ಭಾಗಿಯಾಗುತ್ತಾರೆ. ಸ್ವಚ್ಚತೆ ಕಾಯ್ದುಕೊಳ್ಳುತ್ತಾರೆ.
ಇಂತಿರಲು ನಾವು ನಾಲ್ಕು ಜನ ಶಿಕ್ಷಕಿಯರು ಅಲ್ಲೇ ಶಾಲೆಯ ಸುತ್ತ ಮುತ್ತಲಿನ ಮನೆ ಮನೆಗೆ ಮಕ್ಕಳನ್ನು ಕರೆತರಲು ನಡೆದೆವು. ಈಗಿನಂತೆ ಮೊಬೈಲ್ ಗಳಾಗಲಿ, ಸ್ಮಾರ್ಟ ಫೋನುಗಳಾಗಲಿ, ವ್ಯಾಟ್ಸ್ಯಾಪ್ ಗ್ರುಪ್ ಗಳಾಗಲಿ ಇರಲಿಲ್ಲ. ಮೆಸೇಜುಗಳನ್ನು ರವಾನಿಸಲು ಸಾಧ್ಯವಾಗುತ್ತಿರಲಿಲ್ಲ. ಖುದ್ದು ಸಶರೀರವಾಗಿ
ಭೇಟಿಯಾಗಬೇಕು.ಮುಖಾಮುಖಿ ಮಾತಾಡಬೇಕು.ಸುಖ ದುಃಖ ಕೇಳಬೇಕು.ಸಮಸ್ಯೆ ಆಲಿಸಬೇಕು.ಪರಿಹಾರ ಶೋಧಿಸಬೇಕು. ಸಮಾಧಾನ ಕಂಡುಕೊಳ್ಳಬೇಕು.ಇವೆಲ್ಲ ನಿರಂತರ ಪ್ರಕ್ರಿಯೆಗಳು ಆಗ.ಸಿರಿವಂತರ ಒಂದಿಷ್ಟು ಅನುಕೂಲಸ್ಥರ ಮನೆಯಲ್ಲಿ ಮಾತ್ರ ಲ್ಯಾಂಡ್ ಲೈನ್ ಫೋನ್ ಇರುತ್ತಿದ್ದವು.ಅವು ಒಮ್ಮೊಮ್ಮೆ ಮಳೆ ಗಾಳಿ ವಿಪರೀತವಾದಾಗ, ಮಿಂಚು ಗುಡುಗು ಆರ್ಭಟಿಸಿದಾಗ
ತಟಸ್ಥನೀತಿಯನ್ನು ಅನುಸರಿಸಿ ತಣ್ಣಗಾಗಿರುತ್ತಿದ್ದವು.
“ಮನೇಲಿ ಫೋನಾ..ಡೆಡ್ ಆಗಿದೆ..!” ಕಾಂಟ್ಯಾಕ್ಟ್ ಸಿಗುತ್ತಿಲ್ಲ, ಕನೆಕ್ಷನ್ ಆಗುತ್ತಿಲ್ಲ.ಹೀಗೆಲ್ಲ ಡೈಲಾಗ್ ಗಳು.
ಆಗ….!!
ಬಿಸಿಲೇರುತ್ತಿತ್ತು.ನಾವು ನಾಲ್ಕು ಜನ ಶಿಕ್ಷಕಿಯರು ಎತ್ತೆತ್ತ ಹೋಗಬೇಕೆಂದು ಪರಸ್ಪರ ಮಾತುಕತೆಯಿಂದ ಡಿಸೈಡ್ ಮಾಡಿಕೊಂಡೆವು.ಆಗ ನಮಗೆ ಪ್ರಪ್ರಥಮವಾಗಿ ನೆನಪಾದವಳೇ ಗಂಗಮ್ಮ.ಏಳನೆಯ ತರಗತಿ ವಿಧ್ಯಾರ್ಥಿನಿ.ಸರಿ ಗಂಗಮ್ಮನ ಮನೆಯತ್ತ ಪಯಣ ಮೊದಲಿಗೆ. ಎಚ್. ಎಮ್. ಶುಭವಾಗಲೆಂದು ನಮ್ಮನ್ನು ಬೀಳ್ಕೊಟ್ಟರು.
ನನ್ನ ಮುಂದಾಗಿಸಿ ಅವರೆಲ್ಲ ಹಿಂದೆ ಬಂದರು.
ನಿಜ ಬೆನ್ನ ಹಿಂದೆ ಬಲ ಬೇಕು.ನಾನು ಮುನ್ನಡೆದೆ ಗಂಗಮ್ಮನ ಮನೆ ಸಮೀಪ ಬರುವುದರೊಳಗಾಗಿ ಬೆವರಿಳಿಯತೊಡಗಿತು.ಉರಿ ಉರಿ ವೈಶಾಖ. ಗಂಗಮ್ಮನ ಮನೆ ಕಟ್ಟೆಮೇಲೆ ಕುಳಿತೆವು.ಉಳಿದ ಶಿಕ್ಷಕಿಯರು “ಟೀಚರ್ ನೀವು ಅವಳ ಜೊತೆ ಮಾತಾಡಿ
ಅಷ್ಟರಲ್ಲಿ ನಾವು ಮತ್ತೊಂದಿಷ್ಟು ಮನೆಗೆ ಹೋಗಿ ಬರುತ್ತೇವೆ.”ಅನ್ನುತ್ತ ನಡೆದರು.ನಾನು ತಣ್ಣಗಿನ ಕಟ್ಟೆಯಲ್ಲಿ ಕುಳಿತು ” ಗಂಗಮ್ಮ” ಇನಿದನಿಯಲ್ಲಿ ಕರೆದೆ. ಟೀಚರ್ ಅನ್ನುತ್ತ ಬಂದಳು ಗಂಗೆ.ಕಣ್ಣಲ್ಲಿ ನೀರು ತುಂಬಿಕೊಂಡು ತಿಕ್ಕುತ್ತ.. ಮುಖ ಕೆಂಪಾಗಿತ್ತು.ಕಾರಣ ಅಲ್ಲೆ ಎದ್ದಿದ್ದ ಹೊಗೆ. ನಾನು ಕೆಮ್ಮುತ್ತ ಮಾತಾಡತೊಡಗಿದೆ.”ಟೀಚರ್ ತಡೆಯಿರಿ” ಅನ್ನುತ್ತ ಒಳ ಹೋಗಿ ಅನ್ನಕ್ಕಿಟ್ಟ ಗುಂಡಿಯಲ್ಲಿ ಸೌಟಿನಿಂದ ಕೈಯಾಡಿ ಬೆಂಕಿಯಲ್ಲಿ ಊದುಗೊಳವೆಯಿಂದ ಊದಿ ಒಲೆ ಹೊತ್ತಿಸಿ ಬಂದಳು. ಸ್ವಲ್ಪ ಹೊಗೆ ಕಡಿಮೆಯಾಗತೊಡಗಿತು.ನನ್ನ ಕಟ್ಟೆಮೇಲೆ ಕೂಡಿಸಿ ಮಧ್ಯ ಮಧ್ಯ ಒಲೆಕಾಯ್ದು ಅನ್ನ ಟೊಮ್ಯಾಟೊ ಸಾರು ಮಾಡಿದಳು.ಅವಳವ್ವ ಅಪ್ಪ ದಿನದ ದುಡಿಮೆಗೆ ಹೊಲಕ್ಕೋ , ದನಕರು ಮೇಯಿಸುವುದಕ್ಕೋ ಹೋಗಿರುತ್ತಿದ್ದರು. ನಾನು ಕುಳಿತೆ ಸುಮ್ಮನೆ…! ಕರೆದರೂ ಆಗ ಆಕೆ ಬರುವುದಿಲ್ಲವೆಂದು ಗೊತ್ತು ನನಗೆ.
ಹೈಫೈ ಫ್ಯಾಮಿಲಿಯಲ್ಲಿ ಬುತ್ತಿ ಬಾಕ್ಸಗಳನ್ನು ವಿದ್ಯಾರ್ಥಿಗಳು ಇದ್ದಲ್ಲಿಗೆ ಮನೆಯ ಆಳುಕಾಳುಗಳು ಇಲ್ಲವೆ ತಾಯಂದಿರು ತಂದು ಕೊಡುವುದು ವಾಡಿಕೆ.ಬೆಳಿಗ್ಗೆಯೇ ಅವರನ್ನು ಶಾಲಾ ವಸ್ತ್ರಸಹಿತ ತಯಾರುಗೊಳಿಸಿ ಅಡುಗೆ ಸಿದ್ಧಗೊಳಿಸಿ ಕ್ಯಾರಿಯರ್ ತುಂಬಿ ಶಾಲಾ ಬಸ್ ಗಳಲ್ಲಿ ಇಲ್ಲವೆ ಸ್ವಂತ ವಹಿಕಲ್ ಗಳಲ್ಲಿ ಸ್ಕೂಲ್ ಬ್ಯಾಗ್ ಸಹಿತ ಪೆನ್ನು ಪುಸ್ತಕ ನೋಟ್ ಬುಕ್ ಇದೆಯೋ ಇಲ್ಲವೋ ಹೋವರ್ಕ ಮಾಡಿದೆಯೋ ಇಲ್ಲವೋ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ ಮನೆಯ ಬಾಗಿಲಿಗೋ ಗೇಟ್ ಆಚೆಯೋ ಸ್ಕೂಲ್ ಬಸ್ ಸ್ಟಾಪ್ ತನಕವೂ ಬಂದು ಮಕ್ಕಳಿಗೆ ಮುತ್ತಿಟ್ಟು ಚಾಕಲೇಟ್ ಕೊಟ್ಟು ಬಸ್ ಇಲ್ಲವೆ ವಹಿಕಲ್ ಹತ್ತಿಸಿ ಟಾ ಟಾ, ಬೈ ಬೈ ಹೇಳಿ ಕಳುಹಿಸುವುದೂ ಸಾಮಾನ್ಯ.ಮೊದಲೇ ಹೇಳಿದಂತೆ ಅದು ಹೈ ಫೈ ಕಥೆ..!ಅದರ ರೀತಿ ರಿವಾಜುಗಳೂ ಸಾಮಾನ್ಯರಿಗಿಂತ ಅದರಲ್ಲೂ ಬಡವರಿಗಿಂತ ವಿಭಿನ್ನವೆ.! ಆದರೆ ಈ ನಮ್ಮ ಮಕ್ಕಳು..?! ನಿಜವಾದ ಜೀವನದ ಜೀವಂತಿಕೆಯ ಪ್ರತೀಕ..! ಹಸಿ ಹಸಿ ಜೀವನಾನುಭವ ಇವರದು…!ಬದುಕು ಬವಣೆಯಲಿ ಬೆಂದು ಮಾಗುವ ಹವಣೆಯಲಿ ಬದುಕಿ ಬೀಗುವ ಹಾಗೆಯೇ ಎಲ್ಲ ನೋವುಗಳನ್ನೂ ನಲಿವುಗಳನ್ನಾಗಿ ಪರಿವರ್ತಿಸಿ ನಗುವ
ಜೀವಿಗಳು. ನಳನಳಿಸುವ ಹಸಿರು ಪೈರುಗಳು.ಬಾಡಿದ್ದನ್ನು ಮರೆಯುವ ಗಿಡ ಮತ್ತೇ ಪ್ರತಿ ಮುಂಜಾನೆ ಅರಳಿ ನಗುವ ಕುಸುಮಗಳ ಕೊಡುವಂತೆ, ಇಬ್ಬನಿಯ ಜೇನಲಿ ತೊಯ್ದ ಸ್ನಿಗ್ಧ ಚೆಲುವಿನಂತೆ ನಲಿವ ಮೊಗಗಳು. ಶಾಲಾ ಆವರಣದಲಿ ಅಲೆದಾಡುತ್ತಿದ್ದರೆ… ಅದ ನೋಡುವುದೇ ಖುಶಿ ನಮಗೆ..!
ಗಂಗಮ್ಮನ ಅಡುಗೆ ಮುಗಿಯಿತು. ” ಬಾರೆ..ಬಾಮ್ಮಾ ಶಾಲೆಗೆ ಹೋಗೋಣ.” ನಾನು ಕರೆದೆ.
” ಹುಂ ..ಟೀಚರ್. ಇವತ್ತೇನೋ ಮನೆವರೆಗೆ ಬಂದಿದ್ದೀರಿ. ಬರುತ್ತಿರುವೆ.” ಅಂದಳು.ನಾನು “ಹೌದವ್ವ” ಅಂದೆ.ಅಷ್ಟರಲ್ಲಿ ನಮ್ಮ ಉಳಿದ ಶಿಕ್ಷಕ ಸಹೋದ್ಯೋಗಿ ಮಿತ್ರರು ಬಂದರು.ಗಂಗಮ್ಮನ ಮನೆ ಮುಂದೆ ಹಾಯ್ದೇ ನಾವು ಶಾಲೆಗೆ ಹೋಗಬೇಕಿತ್ತು.
ದಾರೀಲಿ ಬರುವಾಗ ಗಂಗಮ್ಮ ಮತ್ತೇ ಹೇಳಿದಳು” ಟೀಚರ್ರ..ಇವತ್ತೇನೋ ಕರದ್ರಿ ಬಂದ್ವಿ..ನಾಳೆ ಕರದ್ರ ಬರ್ತಿದ್ದಿಲ್ಲ ನೋಡ್ರಿ..! ” “ಯಾಕ ನಾಳೇನ ಐತಿ ಬೇ.?” ನಮ್ಮ ಶಾಲೆಯ ಸಾವಿತ್ರಿ ಟೀಚರ್ ಕೇಳಿದರು.
“ನಾಳೆ ಓಣ್ಯಾಗ ಒಂದ ಲಗ್ನ ಐತ್ರಿ..ಟೀಚರ್ರಾ..ಓಣ್ಯಾಗಿನ ಲಗ್ನ ಬಿಟ್ಟ ಹೆಂಗ ಬರಾದ ನೋಡ್ರಿ..?!” ನಾವು ಶಿಕ್ಷಕರು ಪರಸ್ಪರ ಮಾರಿ ಮಾರಿ ನೋಡಿಕೊಂಡೆವು. ಮುಸಿ ಮುಸಿ ನಗುತ್ತ ಶಾಲೆಯತ್ತ ದಾಪುಗಾಲು ಹಾಕುತ್ತ ಶಾಲಾ ವಿದ್ಯಾರ್ಥಿಗಳ ಸಮೇತ ಶಾಲಾ ಆವರಣ ಪ್ರವೇಶಿಸಿದೆವು.ಆದಾಗ್ಯೂ ನಾನು ಹೇಳುತ್ತಿದ್ದೆ.. ಈ ಮಕ್ಕಳು ನಮ್ಮಭರವಸೆಯ ಆಶಯ.ಹಾಗೆಯೇ ನಮ್ಮ ನೆಚ್ಚಿನ ಈ ಗಂಗಮ್ಮನೂ..!ಗಂಗಮ್ಮ ಇಲ್ಲದಿದ್ದಲ್ಲಿ ಜೀವನ ನಡೆದೀತೆ..!!
ಅನಸೂಯ. ಜೆ.ಎಸ್.
ಲೇಖಕರ ಪರಿಚಯ:
ಅನಸೂಯ ಜೆ.ಎಸ್.
ಕೊಪ್ಪಳದ ಅನಸೂಯ ಜೆ.ಎಸ್.
ತಂದೆ :- ದಿ. ಪರಮಹಂಸ ಜಹಗೀರದಾರ
ತಾಯಿ :- ಶ್ರೀಮತಿ ಶಾಂತಾಬಾಯಿ ಜಹಗೀರದಾರ
ಒಬ್ಬ ಸಹೋದರ ಒಬ್ಬ ಸಹೋದರಿ ಇದ್ದಾರೆ.
ತಾಯಿ ಹಾಡುತ್ತಿದ್ದರು. ತಂದೆ ತಬಲ ವಾದಕರಾಗಿದ್ದರು
ಅಜ್ಜ ಪುಟ್ಟಭಟ್ಟ ಜಹಗೀರದಾರ ಕೀರ್ತನೆ , ಹರಿಕಥೆ ಹೇಳುತ್ತಿದ್ದರು. ಭಾಗವತ, ಅಧ್ಯಾತ್ಮಿಕ ದರ್ಶನಗಳನ್ನು ಹೇಳುತ್ತಿದ್ದರು ಅವರೂ ಗಾಯಕರಾಗಿದ್ದರು.
ಜೊತೆಗೆ ಗಾಂಧೀವಾದಿ ಮತ್ತು ಭಾರತ ಸ್ವಾತಂತ್ಯ ಹೋರಾಟಗಾರರಲ್ಲಿ ಈ ಭಾಗದಲ್ಲಿ ಪ್ರಮುಖರಾಗಿದ್ದರು.ಸಮಾನತೆ ದಲಿತಪರ ಹಾಗು ದೌರ್ಜನ್ಯ ವಿರೋಧಿ ಆಂದೋಲನಗಳಲ್ಲೂ ಭಾಗವಹಿಸಿ ನಾಯಕತ್ವವಹಿಸುತ್ತಿದ್ದರು. ಅನಸೂಯ ಜಹಗೀರದಾರ ರ ಮಾನವೀಯ ಕಳಕಳಿ ಗುಣಗಳಿಗೆ ಅವರ ಕುಟುಂಬ ದ ದೇಣಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಹಿಂದುಸ್ತಾನಿ ಸಂಗೀತ ಕಲಾವಿದೆ. ಮತ್ತು ಕವಯತ್ರಿ ಬರಹಗಾರರು.ಸ. ಪ್ರೌಢ ಶಾಲಾ ಶಿಕ್ಷಕರು, ಕನ್ನಡ ಪರ ವಿವಿಧ ಸಂಘಟನೆಗಳಲಿ ಪದಾಧಿಕಾರಿ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಅಧ್ಯಕ್ಷರು.
ಶಿಕ್ಷಣ :- ಎಂ ಎ ಬಿಎಡ್.
ಎಂ ಎ : ಕನ್ನಡ ಮತ್ತು ಸಮಾಜಶಾಸ್ತ್ರ.
ಕಾವ್ಯ ಕೃತಿಗಳು – ಒಡಲಬೆಂಕಿ – ೨೦೧೪ *ಆತ್ಮಾನುಸಂಧಾನ(ಗಜಲ್–೨೦೨೧)
ನೀಹಾರಿಕೆ (ಹನಿಗವಿತೆಗಳು– ೨೦೨೧)
*ಕಥಾಸಂಕಲನ – ಪರಿವರ್ತನೆ(ಅಚ್ಚಿನಲ್ಲಿದೆ – ೨೦೨೧)
*ಪ್ರಶಸ್ತಿ ಪುರಸ್ಕಾರ:- ಡಾ.ಡಿ. ಎಸ್. ಕರ್ಕಿ ರಾಜ್ಯ ಕಾವ್ಯ ಪ್ರಶಸ್ತಿ ( ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನ. ಬೆಳಗಾವಿ–ಒಡಲಬೆಂಕಿ ಕೃತಿಗೆ ೨೦೧೫ ರಲ್ಲಿ)
*ಕಾವ್ಯಶ್ರೀ ಪ್ರಶಸ್ತಿ ( ಕಸ್ತೂರಿ ಸಿರಿಗನ್ನಡ ಬಳಗ ಮಂಡ್ಯ)
*ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ ( ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು. ಜಿಲ್ಲಾ ಘಟಕ ಶಿವಮೊಗ್ಗ)
“ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ(ಕೊಪ್ಪಳ ಜಿಲ್ಲಾಡಳಿತ– ೨೦೧೫ ರಲ್ಲಿ)
*ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ
*ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ದೆ
ಮೆಚ್ಚುಗೆ ಬಹುಮಾನ.
*ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ ( ಕರ್ನಾಟಕ ಸರ್ಕಾರ ೨೦೦೭)
ಅಭಿನಂದನೆಗಳು. ತಮ್ಮ ಶೈಕ್ಷಣಿಕ, ಸಾಹಿತ್ಯಿಕ ಸಾದ್ಜನೆಗಾಗಿ.
ಧನ್ಯವಾದಗಳು ಸರ್ ನಿಮ್ಮ ಸ್ಪಂದನೆ ಇಷ್ಟವಾಯ್ತು..!