ಸಂಗಾತಿ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಬದುಕು ಹ್ಯಾಕ್ ಆಗಿದೆ 

ಶೀರ್ಷಿಕೆ ; ಬದುಕು ಹ್ಯಾಕ್ ಆಗಿದೆ 

 ಸಣ್ಣ ಕಥೆಗಳ ಸಂಗ್ರಹ 

ಲೇಖಕಡಾ ಶರಣು ಹುಲ್ಲೂರು 

ಪ್ರಕಾಶಕರುಚೇತನ ಬುಕ್ಸ್ ಅಂಡ್ ಮೀಡಿಯಾ ಹೌಸ್         ಹುಬ್ಬಳ್ಳಿ 

ಪ್ರಥಮ ಪ್ರಕಟಣೆ : ೨೦೧೯

ಶ್ರೀ ಶರಣು ಹುಲ್ಲೂರು ಅವರು ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಸಿನಿಮಾ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.  ತಕಧಿಮಿತ, ಮುಂಗಾರಿನ ಕನಸು, ಕಾರ್ತಿಕ ದೀಪ, ಬದುಕು, ಮದರಂಗಿ ಧಾರಾವಾಹಿಗಳಿಗೆ ಕಥೆ ಚಿತ್ರಕಥೆ ಸಂಭಾಷಣೆಗಳನ್ನು ಬರೆದಿದ್ದಾರೆ.  ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ.  ಇವರ ಮೊದಲ ಕವನ ಸಂಕಲನ ಪಿಯುಸಿ ಓದುವಾಗಲೇ ಬಿಡುಗಡೆಯಾಗಿತ್ತು .ಅನೇಕ ದತ್ತಿ ಪ್ರಶಸ್ತಿ ಪುಟ್ಟರಾಜ ಗವಾಯಿ ಪ್ರಶಸ್ತಿ ಸುವರ್ಣ ಪುರಸ್ಕಾರಗಳು ಇವರಿಗೆ ಸಂದಿವೆ. ವಿದ್ಯಾರ್ಥಿ ದೆಸೆಯಲ್ಲೇ ವಿಶೇಷಾಂಕ ಸ್ಪರ್ಧೆಗಳಲ್ಲಿ ಕಥೆ ಕವಿತೆಗಳಿಗೆ ಬಹುಮಾನ ಪಡೆದಿದ್ದರು.  ‘ತಪ್ಪು ಮಾಡಿದೆ ತಾತ’ ‘ಮುಂದಿರುವ ಮೌನ’ ‘ಜುಗಲ್ ಬಂದಿ’ ಕಾವ್ಯ ಕವನ ಸಂಕಲನಗಳು .ಚಂದನ_ಸಿಂಚನ ಬಿ. ಜಿ ಅಣ್ಣಗೇರಿ ಅವರ ಜೀವನ ಚರಿತ್ರೆ,  ಮಲ್ಲಿಗೆ, ಕನಸಿನ ಹುಡುಗ ನಾಟಕಗಳು,  ಹಳ್ಳಿಗಾಡಿನ ಮಕ್ಕಳ ಆಟಗಳು, ಅಂಬರೀಶ್ ವ್ಯಕ್ತಿ ವ್ಯಕ್ತಿತ್ವ ವರ್ಣರಂಜಿತ ಬದುಕು, ಸಿನಿ ಸಾಂಗತ್ಯ ಕೃತಿಗಳು ಪ್ರಕಟಗೊಂಡಿವೆ. 

ಪ್ರಸ್ತುತ ಸಂಕಲನ ಶೀರ್ಷಿಕೆಯ ಕಥೆಯನ್ನೊಳಗೊಂಡ ಒಟ್ಟು ಆರು ಕಥೆಗಳ ಸಂಕಲನ .

. ಬಂಜೆ ಬಸಿರಾಗಿ ಆಲದ ಮರಕ್ಕೆ ತೊಟ್ಟಿಲು ಕಟ್ಟಿದ ಕಥೆ 

ಹಳ್ಳಿಯ ಹೆಣ್ಣುಮಗಳೊಬ್ಬಳು ತನ್ನ ತಪ್ಪಿಲ್ಲದಿದ್ದರೂ ಬಂಜೆ ಎನ್ನಿಸಿಕೊಳ್ಳುವ ಪರಿಸ್ಥಿತಿ . ಹದಗೆಡುವ ಅತ್ತೆ ಸೊಸೆ ಸಂಬಂಧ , ಪತಿಯ ಮರುಮದುವೆಗೆ ಅನಿವಾರ್ಯವಾಗಿ ಒಪ್ಪಲೇಬೇಕಾದ ಸಂದರ್ಭ.  ಕಡೆಯಲ್ಲಿ ಮತ್ತೊಂದು ಹೆಣ್ಣಿಗೂ ಅದೇ ಪರಿಸ್ಥಿತಿ ಅಂತ ಹೇಳಿಸಿ ಮೊದಲ ಹೆಂಡತಿಯ ಸಾವನ್ನು ಸೂಚಿಸುತ್ತದೆ.  ಕಾರಣಿಕ ಹೇಳಿದ ಒಗಟಿನಂತಹ ಭವಿಷ್ಯ ಕಥೆಯುದ್ದಕ್ಕೂ ಸರಿದಾಡಿ ಮುಖ್ಯ ಪಾತ್ರವಾಗಿ ಬಿಡುತ್ತದೆ.  ಹೆಣ್ಣಿನ ಸ್ಥಿತಿಯ ಬಗ್ಗೆ ಒಂದು ತರಹದ ಆಪ್ತತೆ ಕನಿಕರ ಹುಟ್ಟುವ ಸಂದರ್ಭದಲ್ಲಿ ಅವಳ ಮೊದಲ ಪ್ರೀತಿಯ/ಬಸಿರಿನ ವಿಷಯ ಅಮುಖ್ಯವೆನಿಸಿ ಒಂದು ಘೋರ ವಿಷಾದವನ್ನು ಕಟ್ಟಿಕೊಡುವಲ್ಲಿ ಕಥೆ ಸಫಲವಾಗುತ್ತದೆ .

.ಹುಲಿದೊಗಲ ಹೊತ್ತು 

ತಾಯಿ ಮದುವೆಯಾಗದೆ ತನ್ನನ್ನು ಹೆತ್ತು ಸತ್ತಿದ್ದು ಅಜ್ಜಿ ಕಾಲೇಜು ಕಲಿಯಲು ಕಳಿಸದಿರುವುದು ಪುಟ್ಟ ಹುಡುಗಿಗೆ ಹಠ ನಿರಾಶೆ ತರುತ್ತದೆ.  ತನ್ನ ತಾಯಿಯ ವೃತ್ತಾಂತ ತಿಳಿಯಲು ತನ್ನ ಬಗ್ಗೆ ವಾತ್ಸಲ್ಯ ತೋರುತ್ತಿದ್ದ ತನ್ನ ತಾಯಿಯ ಸಹಪಾಠಿಯೂ ಆದ ಮಾಸ್ತರರಿಗೆ ದುಂಬಾಲು ಬೀಳುತ್ತಾಳೆ.  ವಾಸ್ತವ ತಿಳಿಸಲೂ ಆಗದೆ ಬಿಡಲೂ ಆಗದೆ ತೊಳಲುವ ಮಾಸ್ತರು ಹೇಳಿದ ವಿಷಯದಿಂದ ಮಾಸ್ತರುಗಳ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾಳೆ. ನಂಬಿಕೆಯ ಬೇರನ್ನೇ ಕಡೆದುರುಳಿಸುತ್ತದೆ  ತನ್ನ ತಾಯಿಗೆ ಆ ಸ್ಥಿತಿ ಬರಲು ಅವಳ ಮಾಸ್ತರನೇ ಕಾರಣ ಎಂದು ಗೊತ್ತಾಗುವ ಆ ವಿಷಯ . ಹಾಗೆ ಮುಂದಿನ ಊಹೆ ಓದುಗರಿಗೆ ಬಿಡುವಂತೆ ಕಾಣುವ ಈ ತಂತ್ರ ಕಥೆ ಅಪೂರ್ಣವಾಯಿತು ಅನ್ನುವ ಭಾವವನ್ನು ತರುತ್ತದೆ 

*. ಬಣ್ಣದ ಗುರುತು ಸಿಕ್ಕಿತೇನ  ನಿನಗ

ದುರ್ಬಲರನ್ನು ಅಡಗಿಸಿ ಅವರ ಆಸ್ತಿ ಹೆಂಡತಿಯರನ್ನು ಸ್ವಂತ ಮಾಡಿಕೊಳ್ಳುವುದು ಹಳ್ಳಿಯ ಸಬಲರ ಹುನ್ನಾರ .ಅದಕ್ಕೆ ಅಧಿಕಾರಿಗಳ ಕುಮ್ಮಕ್ಕು .ಕಾಶವ್ವ ಹೀಗೆ ದೈವದ ಮತ್ತು ಸಾಮಾಜಿಕವಾಗಿ ಒತ್ತಡದಲ್ಲಿ ದೌರ್ಜನ್ಯಕ್ಕೆ ಸಿಲುಕುತ್ತಾಳೆ.  ಊರು ಬಿಟ್ಟು ಬಂದು ಬದುಕು ಕಟ್ಟಿಕೊಳ್ಳುವಾಗ ಒಬ್ಬ ಮಗಳು ಹುಟ್ಟುತ್ತಾಳೆ . ಆ ಮಗಳು ದೊಡ್ಡವಳಾಗುವಾಗ ಮತ್ತೆ ಅದೇ ಪರಿಸ್ಥಿತಿ ಮೊದಲಿದ್ದ ಊರಿನ ಮುಖಂಡರುಗಳು ತಂದೊಡ್ಡುತ್ತಾರೆ. ಓಡಿ ಹೋಗಿ ಮರಳಿ ಬಂದಿದ್ದ ಕಾಶವ್ವನ ಗಂಡನಿಗೆ ಇವಳ ಮೇಲೆ ಶಂಕೆ ಅಸಮಾಧಾನ.  ತನಗಾದ ಸ್ಥಿತಿಯೇ ಮಗಳಿಗೂ ಬಾರದಿರಲೆಂದು ಆಸರೆ ಪಡೆದಿದ್ದ ಇನ್ನೊಂದು ಊರಿನ ಜನರ ಸಹಾಯದಿಂದ ಎದುರು ಬೀಳುತ್ತಾಳೆ, ಸಫಲಳೂ ಆಗುತ್ತಾಳೆ . ಕಡೆಗೆ ಹಿಂಸೆಗೆ ಹಿಂಸೆಯೇ ಉತ್ತರ ಆದರೂ ಒಂದು ರೀತಿಯ ಸಮಾಧಾನ ಹುಟ್ಟಿಸುತ್ತದೆ .

. ಎಂಟೊಂದ್ಲ್ಲ ಎಂಟು 

ಎಂಟು ಅತಿ ಪುಟ್ಟ ಕಥೆಗಳು ಬದುಕಿನ ವಿವಿಧ ರೀತಿಯ ವೈಪರೀತ್ಯಗಳನ್ನು ಹೇಳುತ್ತಾ ಹೋಗುತ್ತದೆ.  ಎರಡು ಯುವ ಜೀವಗಳ ಮುಗ್ಧ ಮಾತುಕತೆ ಎರಡು ಕೋಮಿನ ಮಧ್ಯೆ ವಿರಸ ತರುವುದು,  ಶ್ರೀಮಂತ ಬಡವರ ಮಧ್ಯದ ವ್ಯವಹಾರ ಚಿಕ್ಕ ಮಗುವಿನ ಕಣ್ಣಲ್ಲಿ ಹೇಗೆ ಕಾಣುತ್ತದೆ ಎಂದು ಚಿತ್ರಿಸಿರುವುದು ಮೊದಲಾದ ಕಥೆಗಳು ವಾಸ್ತವತೆಯ ಚಿತ್ರಣವನ್ನು ಬಿಂಬಿಸುತ್ತವೆ.

. ಬದುಕು ಹ್ಯಾಕ್ ಆಗಿದೆ

 ಕಥಾಸಂಕಲನದ ಹೆಸರೂ ಆದ ಈ ಕಥೆ ಬಡತನದ ಸಾಮಾಜಿಕ ಕೆಳಸ್ತರದ ಹುಡುಗಿ ಬಿಇ ಓದಿ ವಿದೇಶಕ್ಕೂ ಹೋಗಿ ವಾಪಸ್ಸು ಬರುವುದರಿಂದ 

ಪ್ರಾರಂಭವಾಗುತ್ತದೆ.  ಹಳೆಯ ಮನೆಯಲ್ಲಿನ ಅಪ್ಪನ ನೆನಪನ್ನು ಬಿಡಲಾಗದೆ ಮನೆ ನವೀಕರಣಕ್ಕೆ ಒಪ್ಪದ ತಾಯಿ ಹಳೆ ರೀತಿಯಲ್ಲೇ ಇರ ಬಯಸುವಾಗ ಮಗಳು ಸುಮ್ಮನಾಗುತ್ತಾಳೆ.  ಆದರೆ ಇವಳ ಫೋಟೋಗೆ ಬೇರೆ ನಂಬರ್ ಲಗತ್ತಿಸಿ ಕಾಲ್ಗರ್ಲ್ ಎಂಬ ಹಣೆಪಟ್ಟಿ ಹಚ್ಚಿದ್ದನ್ನು ಊರ ಹಿರಿಯರು ತೋರಿಸಿದಾಗ ಯಾವುದು ಆಗಬಾರದೆಂದು ತಾಯಿ ಬಯಸಿದ್ದಳೋ ಅದೇ ಆದೆಯಲ್ಲ ಎಂಬ ಪ್ರಶ್ನೆ ಬಂದಾಗ,  ಅಕೌಂಟ್ ಮಾತ್ರವಲ್ಲ ಬದುಕೇ ಹ್ಯಾಕ್ ಆಗಿದೆ ಅನ್ನುತ್ತಾಳೆ.  ಯಾವುದರಿಂದ ಓಡಿ ಹೋಗಿ ಬದುಕು ಕಟ್ಟಿಕೊಳ್ಳಬಯಸಿದ್ದಳೋ ಅದು  ಬೇರೆ ರೀತಿಯಲ್ಲಿ ಮತ್ತೆ  ಸುತ್ತಿಕೊಂಡಿರುತ್ತದೆ. 

. ಗುಬ್ಬಿಯೊಂದು ಗೂಡು ಕಟ್ಯಾದೋ

ಬೆಂಗಳೂರಿನ ಅನಾಥಾಶ್ರಮದ ಹುಡುಗನೊಬ್ಬನನ್ನು ವಿದೇಶಿ ದಂಪತಿಗಳು ತಮ್ಮಲ್ಲಿಗೆ ಕರೆದುಕೊಂಡು ಹೋಗಿ ಸಾಕಿರುತ್ತಾರೆ.  ಮೂವತ್ತು ವರ್ಷದ ಆ ಯುವಕ ತನ್ನ ನಿಜ ತಂದೆ ತಾಯಿಯರನ್ನು ಹುಡುಕುವ ಬಯಕೆಯಿಂದ ಮತ್ತೆ ಭಾರತಕ್ಕೆ ಮರಳುತ್ತಾನೆ . ಮಸುಕಾದ ತನ್ನ ನೆನಪುಗಳು ಮತ್ತು ಪೊಲೀಸರ ಸಹಾಯದಿಂದ ಕಡೆಗೆ ಅದರಲ್ಲಿ ಸಫಲನೂ ಆಗುತ್ತಾನೆ . ಮಗ ಸಿಕ್ಕಿದ ಸಂತೋಷ ಆ ತಾಯಿಗೂ ಆಗುತ್ತದೆ.  ಪ್ರಾಯಶಃ ಸುಖಾಂತ್ಯದ ಕತೆ ಇದೊಂದೇ. ಅಥವಾ  ಗುಬ್ಬಿ ಮತ್ತೆ ಮಾನವ ಮುಟ್ಟಿದ ಮರಿಯನ್ನು ಬಳಿಗೆ ಕರೆದುಕೊಳ್ಳುವುದಿಲ್ಲ . ಹಾಗೆ ಆದರೂ ಆಗಬಹುದೋ ಏನೋ ಅದನ್ನು ಕಥೆ ಸೂಚಿಸದೆ ಹೆಸರಿನಲ್ಲಿ ಸೂಚಿಸಿರಬಹುದು .   

ಸಮಾಜದ ವಿವಿಧ ಆಯಾಮಗಳ ವಿಭಿನ್ನ ಕಥಾ ವಸ್ತುಗಳು ಮತ್ತು ಸಮರ್ಥ ಅಭಿವ್ಯಕ್ತಿ ಇವರ ಕತೆಗಳ ವಿಶೇಷ .ಪಾತ್ರಗಳು ನೇರವಾಗಿ ಹೃದಯಕ್ಕಳಿದು ನಮ್ಮೆದುರೇ ಕತೆ ನಡೆಯುವಂತೆ ಅನ್ನಿಸುತ್ತದೆ . ಹೆಚ್ಚಿನಂಶ ಕಥೆಗಳು ದುಃಖದ ಮಡುವಿನಲ್ಲಿ ತೇಲಾಡಿಸುತ್ತಾ ವಿಷಾದದ ಆಳದಲ್ಲಿ ಅಂತ್ಯವಾಗುವುದು ಬಹುಶಃ ಈ ಹೆಚ್ಚಿನ ಪ್ರಭಾವಕ್ಕೆ ಕಾರಣವಾಗಿರಲೂ ಬಹುದು.  ಅನ್ಯಾಯ ದೌರ್ಜನ್ಯಗಳನ್ನು ವಿಪರೀತ ವೈಭವೀಕರಿಸದೆ ಸೂಚ್ಯವಾಗಿ ಹೇಳುತ್ತಾ ಸಂಯಮವನ್ನು ಕಾಪಾಡಿಕೊಳ್ಳುತ್ತಾರೆ . ಕಥೆಗಾರ ಎಲ್ಲಾ ಕಡೆ ದೃಷ್ಟಿ ಹರಿಸಬೇಕೆನ್ನುವುದಕ್ಕೆ ಅನುಗುಣವಾಗಿ ಸಣ್ಣ ಸಂಗತಿಗಳನ್ನು ಪ್ರತೀಕವಾಗಿರಿಸುತ್ತಾರೆ . ಬಂಜೆ ಬಸಿರಾಗಿ …….ಕಥೆಯಲ್ಲಿ ಅವಳ ಗೆಳೆಯ ಕೊಡಿಸಿದ ಹಳದಿ ಸೀರೆಯ ಪ್ರಸ್ತಾಪ ಇದಕ್ಕೊಂದು ಉದಾಹರಣೆ.  ಅಂತೆಯೇ ಬದುಕು ಹ್ಯಾಕ್ ಆಗಿದೆ ಕಥೆಯಲ್ಲಿ ಹಳತನ್ನು ಬಿಡಲಾಗದೆ ಹೊಸತನ್ನು ಅಳವಡಿಸಿಕೊಳ್ಳಲಾದ ನಾಯಕಿ ತಂತ್ರಜ್ಞಾನದ ದುರ್ಬಳಕೆಗೆ ಬಲಿಯಾಗುವುದನ್ನು ಗಮನಿಸಬಹುದು.  ಇನ್ನು ಕಡೆಯ ಕಥೆ ಗುಬ್ಬಿ…….ಯಲ್ಲಿ ನಾಯಕನ ಒಂದೊಂದು ಮರುಕಳಿಸಿದ ನೆನಪುಗಳ ಜಾಡು ಹಿಡಿಯುತ್ತಾ ಪೊಲೀಸ್ ಆಫೀಸರ್ ಅವನ ಜನ್ಮ ಕೊಟ್ಟ ತಂದೆ ತಾಯಿಯರನ್ನು ಪತ್ತೆ ಹಚ್ಚುವ ರೀತಿ ಖುಷಿ ಕೊಡುತ್ತದೆ.  ಈ ಕಥೆ ಓದಿದಾಗ ಹಿಂದೆ ಯಾವಾಗಲೋ ಓದಿದ್ದ ಎಂ .ಕೆ ಇಂದಿರಾ ಅವರ ಕಳೆದು ಹೋಗಿದ್ದ ಮಗ ಎದುರು ಬಂದು ನಿಂತಾಗ ತಾಯಿ ಕರುಳು ಗುರುತು ಹಿಡಿಯುವ ಒಂದು ಕಥೆ ನೆನಪಿಗೆ ಬಂತು

 ಶ್ರೀ ಶರಣು ಹುಲ್ಲೂರು ಅವರು ಭರವಸೆ ಮೂಡಿಸುವ ಸಮರ್ಥ ಅಭಿವ್ಯಕ್ತಿಯ ಸೃಜನಶೀಲ ಲೇಖಕ. ಅವರ ಲೇಖನಿಯಿಂದ ಮತ್ತಷ್ಟು ಒಳ್ಳೆಯ ಕಥೆಗಳು ಹೊರಬರಲಿ, ಓದುಗರ ಮನ ಮುಟ್ಟಲಿ ತಟ್ಠಲಿ ಎಂಬ ಶುಭ ಹಾರೈಕೆಗಳು.


                      ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top