ಬಾಳ ಹೊತ್ತಿಗೆ

ಕಾವ್ಯ ಸಂಗಾತಿ

ಬಾಳ ಹೊತ್ತಿಗೆ

ವಾಣಿ ಯಡಹಳ್ಳಿಮಠ

ಹೀಗೊಂದು ಬಾಳ ಹೊತ್ತಿಗೆಯ,
ನಾ ನೇಯ್ದು ನಲಿಯಲೇ ?
ಬಯಸಿದಂತೆ ಬರೆದು ,
ನಾ ನಿರಾಳವಾಗಲೇ ??

ನನ್ನವರೊಂದಿಗೆ , ಪರರಿಗೂ
ಪ್ರೀತಿಯಲಿ ಪಾಲೆಂಬಂತೆ ,,
ಮಿತ್ರರೊಂದಿಗೆ, ಶತ್ರುಗಳಿಗೂ
ಹರಸಿ ಹಾರೈಸುವಂತೆ ,,,
ಯಾರಿಗೂ ನೋವಾಗದಂತೆ ,
ಯಾರೊಂದಿಗೂ ಮುನಿಸಿಕೊಳ್ಳದಂತೆ
ಪ್ರತಿ ಪುಟದಲ್ಲೂ ,
ಪ್ರೀತಿ ಪುಟಿದೇಳುವಂತೆ ,,
ಪ್ರತಿ ಅಕ್ಷರದಲ್ಲೂ ,
ಅನುರಾಗ ಅರಳುವಂತೆ ,,
ಬರೆದು ನಾ ನಿರಾಳವಾಗಲೇ ?

ಹೊತ್ತಿಗೆಯ ಹೊತ್ತೊಯ್ದು ಹೂತಿಟ್ಟರೂ ,,
ಓದಿದವರ ಮನದುಂಬಿ ಬರುವಂತೆ ,
ನೆನಪಾದರೆ ಕಣ್ತುಂಬಿಕೊಳ್ಳುವಂತೆ ,,
ಹೀಗೊಂದು ಬಾಳ ಹೊತ್ತಿಗೆಯ
ನಾ ನೇಯ್ದು ನಲಿಯಲೇ ?
ಬಯಸಿದಂತೆ ಬರೆದು ,
ನಾ ನಿರಾಳವಾಗಲೇ ??


Leave a Reply

Back To Top