ಸ್ತ್ರೀ ಸಮಾನತೆ ಇಂದು ಸಾಗುತ್ತಿರುವ ದಾರಿ

ವಿಶೇಷ ಲೇಖನ

ಸ್ತ್ರೀ ಸಮಾನತೆ ಇಂದು ಸಾಗುತ್ತಿರುವ ದಾರಿ

ಶಾಲಿನಿ ಕೆಮ್ಮಣ್ಣು

ವಿದೇಶೀಯರ ಆಳ್ವಿಕೆಯ ಮೊದಲು ಭಾರತ ದೇಶದಲ್ಲಿ  ಸ್ತ್ರೀ  ಮತ್ತು ಪುರುಷರ  ಸಮಾನತೆಯ ಪರಿಕಲ್ಪನೆ ಇತ್ತು.  ವೇದಕಾಲದಲ್ಲಿ ಸನಾತನ ಧರ್ಮದ  ಸ್ತ್ರೀಯರು ಪುರುಷರಿಗಿಂತ ಒಂದು ತೂಕ ಮೇಲೆ ಇದ್ದರು…!!  ಶಿವ ಮತ್ತು ಶಿವೆ, ಪ್ರಕೃತಿ ಮತ್ತು ಪುರುಷ ಸೃಷ್ಟಿ ಕ್ರಿಯೆಯಲ್ಲಿ ಇಬ್ಬರೂ ಸಮಾನರು.

ಕಾಲಘಟ್ಟದಲ್ಲಿ ಬದಲಾಗುತ್ತಿರುವ ಪರಂಪರೆ, ಶಿಷ್ಟಾಚಾರ ಇತ್ಯಾದಿಗಳ ಜೊತೆ  ಲಿಂಗಬೇಧ, ಅಸಮಾನತೆಯ ಮಾತುಗಳು ಕೇಳಿಬರುತ್ತಲೇ ಇವೆ.ಲಿಂಗ ಎನ್ನುವುದು ಜೈವಿಕ ಹುಟ್ಟಿನೊಂದಿಗೆ ನಿರ್ಧಾರವಾಗುತ್ತದೆ. ಅದರಲ್ಲಿ ಭೇದದ ಪರಿಕಲ್ಪನೆ ಇರುವುದಿಲ್ಲ.ಇದು ಸಂತಾನೋತ್ಪತ್ತಿಗಾಗಿ ದೈಹಿಕ ರಚನೆಯಲ್ಲಿ ಪ್ರಕೃತಿದತ್ತವಾಗಿ ಕೊಡಲ್ಪಟ್ಟ ಕೊಡುಗೆ.

ಮಾನವರು ತಮ್ಮ ಜೀವನಕ್ಕಾಗಿ ದುಡಿಮೆಯನ್ನು ಅವಲಂಬಿಸಿದಾಗ ದೈಹಿಕ ಪ್ರಕೃತಿಗೆ ಹಾಗೂ ಸಾಮರ್ಥ್ಯದ ಚೌಕಟ್ಟಿನಲ್ಲಿ  ಜವಾಬ್ದಾರಿಗಳನ್ನು ಹಂಚಿಕೊಂಡು ಬದುಕತೊಡಗಿದರು. ನಂತರ ಈ ವ್ಯತ್ಯಾಸವು ಸಾಮಾಜಿಕ ಹಾಗೂ ಕೌಟುಂಬಿಕ ಜೀವನದಲ್ಲೂ  ಮುಖ್ಯವಾಹಿನಿಯಲ್ಲಿ ಹೆಣ್ಣನ್ನು ಕಡೆಗಣಿಸುವತ್ತ ದಾರಿಮಾಡಿಕೊಟ್ಟಿತು. ಭೇದಭಾವಗಳು ಪ್ರಕೃತಿಗೆ ಇಲ್ಲ. ಮನುಷ್ಯ ಇದನ್ನು ಸಂಸ್ಕೃತಿ, ರೀತಿ ನೀತಿಯ ಕಟ್ಟಳೆಯೊಳಗೆ ಬಂಧಿಸಿ ಜನರಲ್ಲಿ ಲಿಂಗದ ಬಗ್ಗೆ ವ್ಯತಿರಿಕ್ತ ಮನೋಭಾವವನ್ನು ಹುಟ್ಟಿಸಿದ.  ಲಿಂಗ ಅಸಮಾನತೆಗಳ ಬಗ್ಗೆ ವೈಜ್ಞಾನಿಕ ಚಿಂತನೆಯ ಕೊರತೆಯಿಂದ, ಮೊದಲಿನಿಂದಲೂ ಸ್ತ್ರೀಯು ಪುರುಷನಿಗೆ ಅಧೀನಳಾಗಿರುವಳು. ಆದರೂ ಎಲ್ಲಾ ಕಾಲದಲ್ಲೂ ಅಲ್ಲಿ-ಇಲ್ಲಿ ಬೆರಳೆಣಿಕೆಯಷ್ಟು ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಔದಾರ್ಯವನ್ನು ಮೆರೆದು ಶ್ರೇಷ್ಠರಾಗಿ ಗುರುತಿಸಲ್ಪಟ್ಟಿದ್ದಾರೆ.

ಅಸಮಾನತೆ ಎಲ್ಲೆಲ್ಲಿ ಅಧಿಕವಾಗಿ ಬಾಧಿಸುತ್ತಿದೆ?

ಸ್ತ್ರೀ-ಪುರುಷ ಲಿಂಗ ಅನುಪಾತ

ಆರೋಗ್ಯ ರಕ್ಷಣೆ

ಜನನ ಮರಣದಲ್ಲಿ ಅನುಪಾತ

ಕೌಟುಂಬಿಕ ಅಸಮಾನತೆ

ಪ್ರಾಥಮಿಕ ಸೌಲಭ್ಯಗಳಲ್ಲಿ ಅಸಮಾನತೆ

ವೃತ್ತಿಪರತೆಯಲ್ಲಿ ಅಸಮಾನತೆ

ನಾಯಕತ್ವ/ಮಾಲೀಕತ್ವದಲ್ಲಿ, ಆರ್ಥಿಕ ಅಸಮಾನತೆಗಳು

ರಾಜಕೀಯ ಕ್ಷೇತ್ರದಲ್ಲಿ ಅಸಮಾನತೆ

ಧಾರ್ಮಿಕ ಅಸಮಾನತೆ

ಶೈಕ್ಷಣಿಕ ಅಸಮಾನತೆ

ಎಷ್ಟೇ ಮುಂದುವರಿದರೂ ಕಾರಣಾಂತರಗಳಿಂದ ಇಂದಿನ ಸ್ತ್ರೀ ತನ್ನ ಮೇಲಾಗುತ್ತಿರುವ ಅನ್ಯಾಯ, ಅತ್ಯಾಚಾರಗಳನ್ನ ತಡೆಯುವಲ್ಲಿ ವಿಫಲಳಾಗುತ್ತಿದ್ದಾಳೆ.  ಕುಟುಂಬಗಳಲ್ಲಿ ಹಾಗೂ ವೃತ್ತಿ ಮಾಡುವ ಸ್ಥಳಗಳಲ್ಲಿ ಸ್ತ್ರೀ ಶೋಷಣೆ ನಿರಂತರವಾಗಿ ನಡೆಯುತ್ತಿದೆ.  ಪ್ರೀತಿ, ಸ್ನೇಹ, ಆತ್ಮವಿಶ್ವಾಸದ ಬದುಕು ದುಸ್ತರವಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಅಸಮಾನತೆ ಮಹಿಳೆಯನ್ನು ಇನ್ನೂ ದೌರ್ಬಲ್ಯಕ್ಕೆ ಒಡ್ಡುತ್ತಿದೆ. ಕಾನೂನು ಸ್ತ್ರೀಯರ ಪರವಾಗಿದ್ದರೂ, ಮಹಿಳೆ ತನಗಿರುವ ಮಿತಿಗಳಿಂದ ಹೊರಬಾರಲಾರದೆ ಮನದೊಳಗೆ ಕುಗ್ಗುತ್ತಿದ್ದಾಳೆ.

 ಲಿಂಗ  ಸಮಾನತೆಯಲ್ಲಿ ಮಹಿಳಾ ಸಬಲೀಕರಣದ ಪಾತ್ರ

ಮಹಿಳಾ ಸಬಲೀಕರಣ ಯೋಜನೆಗಳಿಂದ ಸಮಾಜದಲ್ಲಿ ಆಚರಣೆಯಲ್ಲಿರುವ ಲಿಂಗ ತಾರತಮ್ಯವನ್ನು ತೊಡೆದು ಹಾಕಿ ಮಹಿಳೆಯರ ಘನತೆ, ಗೌರವ ಹಾಗೂ ಸಾಮಾಜಿಕಸ್ಥಾನ ಮಾನಗಳನ್ನು ಉನ್ನತಿಗೊಳಿಸುವುದಲ್ಲದೆ, ಮಹಿಳೆಯರಲ್ಲಿ ಸುಪ್ತವಾಗಿರುವ ಅಪೂರ್ವ ಸಾಮರ್ಥ್ಯಗಳನ್ನು, ಸೃಜನಶೀಲ ಯೋಚನೆಗಳನ್ನು ವೃದ್ಥಿಗೂಳಿಸಿ ಅವರು ಬದಲಾವಣೆಯ ನಿಯೋಗಿಗಳಾಗಿ ರೂಪುಗೊಳಿಸುವ  ಚಟುವಟಿಕೆಗಳು ನಡೆಯುತ್ತಿವೆ. ಈ ಮೂಲಕ ಸ್ತ್ರೀ ಪುರುಷರನ್ನು ಜವಾಬ್ದಾರಿಯುತ ಪಾಲಕತ್ವಕ್ಕೆ ತರಬೇತಿಗಗೊಳಿಸುವುದು, ಮಹಿಳೆಯರ ಕಾರ್ಯ‍‍ಕ್ಷೇತ್ರ ಹಾಗು ಜೀವನ ಕ್ರಮದಲ್ಲಿ ಪುರು‍ಷರ ಸಹಬಾಗಿತನವನ್ನು ಬೆಳೆಸುವುದೂ.  ಹದಿಹರೆಯದ ಬಾಲಕ ಬಾಲಕಿಯರಲ್ಲಿ ಸ್ವಸ್ಥವಾದ ಲಿಂಗತ್ವ ಪಾತ್ರಗಳನ್ನು ಬೆಳೆಸುವುದು. ಶಿಕ್ಷಣ ಮತ್ತು ಉದ್ಯೋಗ ಸೌಲಭ್ಯಗಳನ್ನು ಉನ್ನತ್ತಿಗೊಳಿಸಿ ಅವರನ್ನು ಆತ್ಮವಿಸ್ವಾಸದೊಂದಿಗೆ ಸ್ವಾವಲಂಬಿಗಳನ್ನಾಗಿ ರೂಪಿಸುವುದು ಇಂತಹ ಕಾರ್ಯಗಳಿಂದ ಲಿಂಗತಾರತಮ್ಯ ವನ್ನು ನಿಯಂತ್ರಿಸಬಹುದು.

ಸ್ತ್ರೀ ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿ, ಪುರುಷಪ್ರಧಾನ ಸಮಾಜದಲ್ಲಿ  ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ಸಾಧನೆಗಳ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ವಿಶ್ವದ ಗಮನ ಸೆಳೆದಿದ್ದಾಳೆ.

ಸ್ಪರ್ಧಾತ್ಮಕ  ನಡವಳಿಕೆಯನ್ನೆ ಅಭಿವೃದ್ಧಿ ಸಂಕೇತವಾಗಿ ಬಿಂಬಿಸುವುದು ಎಷ್ಟು ಸರಿ??

ತಮ್ಮ ಅಸ್ತಿತ್ವವನ್ನು ಪರಸ್ಪರ ಬರೆ ಸ್ಪರ್ಧಾತ್ಮಕ   ದಷ್ಟಿಯಲ್ಲಿ ಕಾಣುವ ತರಾತುರಿಯಲ್ಲಿ ಲಿಂಗ ತಾರತಮ್ಯವನ್ನು ಅದರ ಮೂಲ ರೂಪದಲ್ಲಿ ಹೊಲಿಸಿಕೊಳ್ಳುತ್ತಿರುವುದು  ಶೋಚನೀಯ ಬೆಳವಣಿಗೆಯಾಗಿ ಕಂಡುಬರುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಪ್ರದರ್ಶನದ ವಸ್ತುವಾಗಿ,ಭೋಗದ ವಸ್ತುವಾಗಿ  ಪರಿಗಣಿಸುತ್ತಿರುವುದು ಒಂದೆಡೆಯಾದರೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿ ನಮ್ಮ ಹೆಣ್ಣು ಮಕ್ಕಳು ಅರೆನಗ್ನ ಉಡುಪು ಧರಿಸಿ ಕಾಮುಕರ ಕಣ್ಣಿಗೆ ಆಹಾರ ವಾಗುತ್ತಿರುವುದು ಖೇದಕರ ಸಂಗತಿ.

ಪಾಶ್ವಾತ್ಯ ಸಂಸ್ಕೃತಿಯ ದಾಸ್ಯತೆಗೆ ಬಲಿಯಾದ  ಆಧುನಿಕ ಸ್ತ್ರೀಯಲ್ಲಿ ಕೆಲವರು ಅಶಾಂತಿ, ಅಶಿಸ್ತು ಮತ್ತು ಅಜಾಗರೂಕ ನಡವಳಿಕೆಯಿಂದ ಸಮಾಜದೊಳಗಿನ ಶಿಸ್ತು, ಕಟ್ಟುಪಾಡುಗಳನ್ನು ಸಡಿಲಗೊಳಿಸುತ್ತಿದ್ದಾರೆ. ಅತೃಪ್ತಿ ಅವರಲ್ಲಿ ಮನೆಮಾಡಿ ವ್ಯವಸ್ಥೆಯನ್ನು ಹಾಳುಗೆಡಹುವ ಮಟ್ಟಕ್ಕೆ ವಾಲುತ್ತಿದ್ದಾರೆ. ಸ್ತ್ರೀ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗಿ, ಮದ್ಯಪಾನ, ಧೂಮಪಾನ ಮಾಡುತ್ತಾ ಎಗ್ಗಿಲ್ಲದಂತೆ ನಡೆದುಕೊಂಡು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿದ್ದಾರೆ. ಕಾನೂನಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ತಾಳ್ಮೆ, ಸಂಯಮ ಇಲ್ಲವಾಗಿ ಅಹಂ, ದರ್ಪ, ದೌಲತ್ತನ್ನು ಪ್ರದರ್ಶಿಸುತ್ತಿದ್ದಾರೆ.

  ಗಂಡು ಮತ್ತು ಹೆಣ್ಣು ದೈಹಿಕ, ಬೌದ್ಧಿಕ ಸಾಮರ್ಥ್ಯ, ಭಾವನಾತ್ಮಕತೆ ಗಳಲ್ಲಿ ಪರಿಪೂರ್ಣವಾಗಿ ಸಮಾನತೆಯನ್ನು ಸಾಧಿಸಲು ಸಾಧ್ಯವೆ? ಹಾಗಿದ್ದರೆ ನಾವೇಕೆ  ಸಮರ್ಪಕವಾಗಿ ಪ್ರಕೃತಿದತ್ತವಾಗಿ ಸಮರ್ಥವಾದ ಲೈಂಗಿಕ ಅಸಮಾನತೆಯನ್ನು ವ್ಯಂಗ್ಯವಾಡುತ್ತ ಏನೋ ಸಾಧಿಸುವಂತೆ  ಅನ್ಯಥಾ  ಹೋರಾಟ ಮಾಡಿಕೊಳ್ಳಬೇಕು? ಹಾಗೆ  ಕಾಣ ಬಯಸುವುದು ಪ್ರಕೃತಿಗೆ ವಿರುದ್ಧವಾಗುತ್ತದೆ. ಇಂತಹ ವೈಚಾರಿಕತೆ ಇಲ್ಲದ ಹೋರಾಟಗಳಿಂದ ಲೈಂಗಿಕ ವೈವಿಧ್ಯತೆ ತನ್ನ ನೈಜ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಮೂಲಭೂತ ಹಕ್ಕುಗಳು, ಸೌಲಭ್ಯಗಳಲ್ಲಿ ಸಮಾನತೆಯನ್ನು ಕಾಣಬೇಕೆ ಹೊರತು ದೈಹಿಕ ರಚನೆ, ಭಾವನಾತ್ಮಕ ಹಾಗೂ ಮಾನಸಿಕ ಶಿಸ್ತು ಇತ್ಯಾದಿಗಳನ್ನು ನಮ್ಮ ವೈಯುಕ್ತಿಕ ಹಾಗೂ ಪ್ರಾಕೃತಿಕ ನೆಲೆಯಲ್ಲಿ ಕಾಣಬೇಕು. ಸ್ತ್ರೀ ಪುರುಷರು ಪರಸ್ಪರ ಸೌಜನ್ಯದಿಂದ ನಡೆದುಕೊಂಡು ಸೃಜನಶೀಲತೆಯಿಂದ ಒಗ್ಗೂಡಿ  ಸಹಬಾಳ್ವೆಯನ್ನು ನಡೆಸುವುದರಿಂದ ಮಾತ್ರ  ಸ್ವಸ್ಥ ಸಮಾಜವನ್ನು ಕಾಪಾಡಿಕೊಳ್ಳಬಹುದು. ಸ್ಪರ್ಧೆಗಳು ಮನುಕುಲದ ಉದ್ಧಾರಕ್ಕೆ ದಾರಿಯಗಬೇಕೆ ಹೊರತು ಸೃಷ್ಟಿಯ ವಿನಾಶದ ಅಂಚಿಗೆ ಕಾರಣವಾಗಬಾರದು.


One thought on “ಸ್ತ್ರೀ ಸಮಾನತೆ ಇಂದು ಸಾಗುತ್ತಿರುವ ದಾರಿ

Leave a Reply

Back To Top