ಅಂಕಣ ಸಂಗಾತಿ
ಅನಸೂಯಜಹಗೀರದಾರ ಅವರ ಹೊಸ ಅಂಕಣದ ಮೊದಲ ಕಂತು
ವೃತ್ತಿ ವೃತ್ತಾಂತ
ಪ್ರವೀಣನೂನಿಪುಣನೂ.
ದಡ್ಡ, ಉಡಾಳ ಎಂದು ಹೆಸರಾಗಿದ್ದ ಪ್ರವೀಣ ತನ್ನದೇ ಹೆಸರಿನ ಅಂಕಿತಕ್ಕೆ ಎರವಾಗಿದ್ದ.ಅವನ ಮಾತು,ಗಲಾಟೆ,ತರಗತಿಯ ತಪ್ಪಿಸಿ ಹೊರ ಬಯಲಲಿ ಅಲೆದಾಟ ಅಲ್ಲಿಯ ಶಿಕ್ಷಕರನ್ನು ಯೋಚಿಸುವಂತೆ ಮಾಡಿತ್ತು.ಆಟದಲಿ ಮಾತ್ರ ನಂ ಒನ್ ಆತ. ತರಗತಿ ಶಿಕ್ಷಕಿಯಾದ ನನಗೆ ಎಲ್ಲ ಮಕ್ಕಳಂತೆ ಈತನೂ ಅಚ್ಚುಮೆಚ್ಚು.ಸದಾ ವಹಿಸಿಕೊಂಡೇ ಮಾತಾಡುತ್ತಿದ್ದೆ. “ಆತ ಹಾಗಲ್ಲ ಒಂಚೂರು ಸುಳಿ ಸುಮಾರು ಅಷ್ಟೇ..!ನೋಡಿ ಮುಂದಕ್ಕೆ ಹೇಗಾಗುತ್ತಾನೆ ಅಂತ..! ” ಹೀಗೆ ಅನ್ನುವಾಗಲೆಲ್ಲ ಅವರೆಲ್ಲ ವಿಚಿತ್ರವಾಗಿ ನನ್ನ ದೃಷ್ಟಿಸಿ ಮುಂದಕ್ಕೆ ನಡೆಯುತ್ತಿದ್ದರು. ಹತ್ತು ಸಾರಿ ಹೇಳಿದಾಗ ಒಂದು ಸಾರಿ ಬರೆಯುತ್ತಿದ್ದ. ಹತ್ತಾರು ಬಾರಿ ತಿದ್ದಿ ತಿದ್ದಿ ಬರೆಯಿಸಿ ಕಲಿತ. ಅಂತೂ ನಾಲ್ಕನೆಯ ತರಗತಿಗೆ ಬಂದ.ಪ್ರವೀಣನ ತರಲೆ ಗುಣಗಾನ ಅವರೆಲ್ಲ ಮಾಡುತ್ತಿದ್ದರೆ ನಾನು ಸುಮ್ಮನಾಗುತ್ತಿದ್ದೆ.”ಮಕ್ಕಳು ಮರಳು ಈಗ ಹಾಗಿರುವುದು ಸಹಜವೆ…! ಅವರೇನು ಹಿರಿಯ ನಾಗರೀಕರಂತಿರಲು ಸಾಧ್ಯವೆ..?! ಮಕ್ಕಳನ್ನು ಬೈಯ್ಯುವ ಮುನ್ನ ನಮ್ಮ ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಬೇಕಂತೆ..! ” ಆಗಾಗ ಹೇಳುತ್ತಿದ್ದೆ.ವೃತ್ತಿ ಬಾಂಧವರೂ ಹೂಂಗುಟ್ಟುತ್ತಿದ್ದರು ಹಾಗೆ.
ಪ್ರವೀಣನ ತಾಯಿ ಯಾವಾಗಲಾದರೊಮ್ಮೆ ಬರುವಾಕಿ. ತಂದೆ ಬರುತ್ತಿರಲಿಲ್ಲ.ಆಕೆ ತವರು ಮನೆಯಲ್ಲಿದ್ದೇ ಮಗನನ್ನು ಓದಿಸುತ್ತಿದ್ದಾಳೆಂದೂ ತಾನೂ ಹೊಲದ ಕೆಲಸ, ದನಕರುಗಳ ಕೆಲಸ ಹೈನು ಒಂದಿಷ್ಟು ಟೇಲರಿಂಗ್ ಕೆಲಸದಲ್ಲಿ ಸಮಯ ಕಳೆಯುತ್ತಾ ದಿನದೂಡುವ ಕಾಯಕ ಕರ್ಮಿ ಆಕೆ ಎಂದು ಹೇಳುತ್ತಿದ್ದಳು.
“ದನಾಲೂ ಬಿಡದ ಹ್ವಾರೆವ್ವು ಇರ್ತದ ಟೀಚರ್ ನನ್ ಮಗನ ಉಡ್ಯಾಗ ಹಾಕ್ಕೊಳ್ರಿ.” ಆಕೆ ಆರ್ತಳಾಗಿ ಹೇಳುತಿದ್ಲು.ನಾನೂ ಆ ಆರ್ದ್ರ ಮಾತಿಗೆ ಕರಗಿಬಿಡುತ್ತಿದ್ದೆ. ಮಗ ಒಂದಿಷ್ಟು ಸುಧಾರಿಸಿದರೆ ಸಾಕು.ಒಂದಿಷ್ಟು ಓದು ಬರಹ ಕಲಿತರೆ ಸಾಕು.ಬದಲಾದರೆ ಸಾಕು. ಅನ್ನುವ ಆಶಾಭಾವ ಆಕೆಯದು.ಇದೂ ನಿಜವೇ..!! ಶಿಕ್ಷಣವೆಂದರೆ ನಮ್ಮ ವರ್ತನೆಯಲ್ಲಾಗುವ ಅಪೇಕ್ಷಿತ ಮಹತ್ತರ ಬದಲಾವಣೆ.ಶಿಕ್ಷಣ ಕಲಿಕೆಯಾಗಬೇಕು. ಅನುಭವ ಅನುಭಾವವಾಗಬೇಕು.ಕೋಟಿ ವಿಧ್ಯೆಗಳಲ್ಲಿ ಮೇಟಿ ವಿದ್ಯ ಮೇಲು ಎಂದಿಲ್ಲವೆ ಸರ್ವಜ್ಞ.ಶಿಕ್ಷಣ ಎಂದರೆ ಕೇವಲ ಓದು ಬರಹ ಅಲ್ಲ. ಅದು ಸಾಕ್ಷತ್ಕಾರ ಕೇವಲ ಸಾಕ್ಷರ ಅಲ್ಲ. ವ್ಯಕ್ತಿ ಅನುಭವ ಲೋಕಾನುಭವ ವ್ಯವಹಾರಿಕತೆಯ ಜ್ಞಾನ ತಂದುಕೊಡಬಲ್ಲದು. ಹಂಸ ಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ಹೆಕ್ಕಿ ತೆಗೆಯಬೇಕು. ಅದು ಎಲ್ಲಾದರಿರಲಿ. ಕೆಸರಲ್ಲಿದ್ದೂ ಕಮಲ ಕೆಸರಿಗಂಟಿಕೊಳ್ಳದೇ ಬಾಳದೇ ಅದನ್ನೇ ನಾವಿಲ್ಲಿ ತಿಳಿಯಬೇಕಾದುದು.ಅಕ್ಷರಸ್ಥರೆಂದರೆ ಸಂಸ್ಕಾರಯುತ ನಾಗರೀಕರು ಹಾಗಾದಾಗಲೇ ಅದು ಶಿಕ್ಷಣ. ಇದು ಆಗಾಗ ನಾ ಹೇಳುವ ಮಾತುಗಳಾಗಿತ್ತು.
ಪ್ರವೀಣ ತನ್ನ ಕೆಲಸ ಮಾಡಿ ತೋರಿಸುವಂತಹ ದಿನವೊಂದು ಬಂದೇಬಿಟ್ಟಿತು. ನಿಜಕ್ಕೂ ಆ ಸಮಯ, ಗಳಿಗೆ ಹಾಗಿತ್ತು.ಅಂದು ಸ್ವಾತಂತ್ರ್ಯ ದಿನಾಚರಣೆ.ನಮ್ಮ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ. ಶಾಲೆಯಲ್ಲೆಲ್ಲ ಸಂಭ್ರಮದ ಸಡಗರ.ಅಂದು ಬೆಳಗಿನ ಜಾವದಿಂದ ಆರಂಭಗೊಂಡ ಮಳೆ ನಿಲ್ಲುವ ಸೂಚನೆ ಕೊಡಲಿಲ್ಲ. ಸುಪ್ರಭಾತ ಸಮಯದಲ್ಲಿಯೇ ರಾಷ್ಟ್ರಧ್ವಜ ಏರಬೇಕು.ತ್ರಿವರ್ಣಗಳ ಸೂಚಿಸುತ್ತ ತ್ಯಾಗ, ಬಲಿದಾನ ಶಾಂತಿ ಸಮೃದ್ಧಿ ವಿವರಣೆಯ ಸಂಕೇತ ಸಾರುತ್ತ ನಮ್ಮ ದೇಶದ ಏಕತೆ ಸಧೃಡತೆಯನ್ನು ಸಮತೆಯನ್ನೂ ಬಿಂಬಿಸಬೇಕು ಅನ್ನುವ ಭಾಷಣ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಬೇಕಿತ್ತು.ಧ್ವಜದ ಕಂಬ ಲೋಹದ್ದು.ಸ್ಟೀಲ್ ಕೋಟೆಡ್ ಕಬ್ಬಿಣದ ಮಜಬೂತಾದ ಕಂಬವದು.ಪಕ್ಕದ ಗೋಡೆಗಾನಿಸಿದ ನಿಚ್ಚಣಿಕೆ ಏರಿ ಧ್ವಜ ಕಟ್ಟಬೇಕಿತ್ತು.ಕಾರಣ ಮಡಚಿ ಕಟ್ಡಿದ ಮೇಲೆ ಎಳೆದು ಕಟ್ಟ ಹೋದಲ್ಲಿ ಬರದಂತಾಗಿತ್ತು ಅಂದು.ಜಿನುಗು ಮಳೆಗೆ ಹಗ್ಗ ಮತ್ತು ಕಂಬ ಒದ್ದೆಯಾಗಿದ್ದತ್ತು ನಮಗೆಲ್ಲ ಇದು ಪೇಚಾಟದ ಸಂಗತಿಯಾಗಿತ್ತು.ದುಗುಡವನ್ನು ಕ್ಷಣ ಕ್ಷಣಕ್ಕೂ ನಾವೆಲ್ಲ ಅನುಭವಿಸತೊಡಗಿದೆವು.
ಆಗ ಬಂದ ಆಪತ್ಪಾಂಧವ ಈ ನಮ್ಮ ಪ್ರವೀಣ.ನಾನು ” ಯಾಕೋ.. ಲೇಟು ಮಾಡಿದೆಯಲ್ಲೋ?” ಕೇಳಬೇಕೆಂದೆ.ಅಷ್ಟರಲ್ಲಿಯೇ “ತಡೀರಿ ಟೀಚರ್” ಅಂದವನೇ ಏಣಿ ತಂದು ಕಂಬಕ್ಕಾನಿಸಿ ಸರಸರನೆ ಏರಿದ.ಉಳಿದ ಮಕ್ಕಳು ನಾವೂ ತಕ್ಷಣವೇ ಆ ಏಣಿ ಹಿಡಿದೆವು.ಮರವನ್ನು, ಶಾಲಾ ಕಂಪೌಂಡ್ ಗೋಡೆಯನ್ನು ಮಾಳಿಗೆಯನ್ನು ಮಲ್ಲಗಂಬವನ್ನು ನಮ್ಮೂರ ಬೆಟ್ಟಗಳನ್ನು ಏರುವ ಪರಿಣಿತ ಅವನು.ಅವನಿಗಿದೆಲ್ಲ ಸಲೀಸು ಕಾರ್ಯ.ಅಗಾಧ ಕಗ್ಗಂಟಿನ ವಿಷಯವೇನಲ್ಲ.ದೈಹಿಕ ಶಿಕ್ಷಕರ ಕೈಗೂಡಿ ಧ್ವಜವನ್ನು ಕಂಬದ ಮೇಲ್ತುದಿ ಕಬ್ಬಿ ಬಳೆಗೆ ಕಟ್ಟಿ ಸರಿಗಂಟು ಹಾಕಿದ.ಸರಸರ ಕೆಳಗಿಳಿದು ನನ್ನನ್ನು ಎಲ್ಲರನ್ನು ನೋಡಿದ.ಅದೇ ನಗು.ನಾನೋ ಹೆಮ್ಮೆಯಿಂದ ಅವನ ಕಡೆಗೆ ನೋಡಿದೆ.ತದನಂತರ ಧ್ವಜಾರೋಹಣ ಸರಾಗವಾಗಿ ನಡೆಯಿತು. ಮುಂದಿನ ಎಲ್ಲ ಕಾರ್ಯಕ್ರಮವೂ ಸರಾಗವಾಗಿ ನಡೆದವು.ಜಿಟಿ ಜಿಟಿ ಮಳೆ ಬರುತ್ತಲೇ ಇತ್ತು. ಪ್ರವೀಣ ಅಂದು ತನ್ನ ಹೆಸರ ಸಾರ್ಥೈಕ್ಕಿಸಿಕೊಂಡು ಎಂತಹ ಸಂದರ್ಭದಲ್ಲೂ ಬಂದದ್ದನ್ನು ಎದುರಿಸುವ ನಿಪುಣನೂ ಆದ.
ಈ ಸಂದರ್ಭದಲ್ಲಿ ನಾ ಓದಿದ ನನ್ನಿಷ್ಟದಲೇಖನವೊಂದುನೆನಪಾಗುತ್ತದೆ.ಅದುಸರ್.ಎಂ.ವಿಶ್ವೇಶ್ವರಯ್ಯನವರ ಕುರಿತದ್ದು.ಅವರು ಮೈಸೂರಿನ ದಿವಾನರಾಗಿದ್ದಾಗ ಉದ್ಯೋಗವೊಂದರ ನೇಮಕಾತಿ ಸಂದರ್ಶನಕ್ಕೆ ಒಬ್ಬ ಅಭ್ಯರ್ಥಿ ಭಾಗವಹಿಸುತ್ತಾನೆ.ಆದರೆ ಆತ ಅಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ಕೊಟ್ಟಿರುವುದಿಲ್ಲ.ಬೇರೆ ಉದ್ಯೋಗಾಕಾಂಕ್ಷಿ ಆದ ಅಭ್ಯರ್ಥಿಗಳೂ ಭಾಗವಹಿಸಿರುತ್ತಾರೆ.ಪ್ರಶ್ನೆಗಳಿಗೆ ಉತ್ತರಿಸಿರುತ್ತಾರೆ.ವಿಶ್ವೇಶ್ವರಯ್ಯನವರು ಈ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ.ಅದಕ್ಕೆ ಸಕಾರಣವನ್ನು ಅವರು ಕೊಡುತ್ತಾರೆ.ಈ ವ್ಯಕ್ತಿಯಲ್ಲಿ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆ ಇದೆ. ಕೆಲಸ ಮಾಡುವ ಹುಮ್ಮಸ್ಸು ಇದೆ. ಮುಂದೆ ಬದ್ಧನಾಗಿರಬಲ್ಲ ದಕ್ಷನಾಗಿರಬಲ್ಲ.ನಂಬಿಕೆ ವಿಶ್ವಾಸಕ್ಕೆ ಅರ್ಹನಾಗಿರುವ ವ್ಯಕ್ತಿ ಬೇಕು. ಜ್ಞಾನದ ಕೊರತೆ ಇದ್ದಲ್ಲಿ ಅದನು ತುಂಬಬಹುದು. ತರಬೇತಿಯಿಂದ ಕೆಲಸ ಮತ್ತು ನಿಪುಣತೆ ಕಲಿಸಬಹುದು. ಆದರೆ ಪ್ರಮಾಣಿಕತನ ನಿಷ್ಠೆ ಕಲಿಸಲಾಗದು.ಅದು ಆಂತರ್ಯದಲಿ ಹುದುಗಿದ್ದು ಸಮಯ ಬಂದಾಗ ಹೊರಬಂದು ತನ್ನ ಹೊಳಪನ್ನು ಪ್ರತಿಫಲಿಸಬೇಕು.ಸಹಜ ಗುಣವಾಗಿರಬೇಕು ಉದ್ಯೋಗಿಗೆ ಸಮರ್ಪಣ ಭಾವ ಬೇಕು. ಹೀಗೆ ಅವರು ವಿವರಣೆ ಕೊಡುತ್ತಾರೆ.
ಈ ಲೇಖನ ಓದಿದ್ದ ನನಗೆ ಇಲ್ಲಿಯೂ ಈ ಮಾತನ್ನು ಅನ್ವಯಿಸಬಹುದು ಅನಿಸಿತು.ಈ ನನ್ನ ವಿದ್ಯರ್ಥಿ ನಿಷ್ಕಲ್ಮಷ ಮನಸ್ಸಿನವನು. ಸಮರ್ಪಣ ಭಾವದವನು.ಮೇಲಾಗಿ ಸಮಯ ಪ್ರಜ್ಞೆಯ ಹಾಗು ಕಾರ್ಯ ಅನುಷ್ಠಾನಿಸುವ ಸಾಂದರ್ಭಿಕ ಜಾಣ.ಈತನನ್ಮು ದಡ್ಡನೆನ್ನಲು ಹೇಗೆ ಸಾಧ್ಯ..?!ಪ್ರವೀಣನಲ್ಲಿ ಈ ವಿಚಾರ ಕಂಡುಕೊಂಡೆ. ಅದಕ್ಕೆಂದೇ ಆತ ನನಗೆ ಆಪ್ತನಾಗುತ್ತಿದ್ದ. ಇಷ್ಟವಾಗುತ್ತಿದ್ದ.ಮತ್ತು ಅಂದು ಎಲ್ಲರೆದುರು ಸಾಬೀತು ಮಾಡಿದ.
ಈ ಮಾತಿಗೆ ಬಹಳ ದಿನಗಳಾಗಿವೆ. ಪ್ರವೀಣ ಆಗಾಗ ಕಾಣಲು ಬರುತ್ತಾನೆ. ಎತ್ತರವಾಗಿದ್ದಾನೆ. ಸಧೃಡ ಬೆಳೆದಿದ್ದಾನೆ. ಈಗಲೂ “ಟೀಚರ್ ..! “ಅನ್ನುವ ಅದೇ ಮುಗ್ಧ ದನಿ. ಅದೇ ಪ್ರಾಮಾಣಿಕತನದ ನೋಟ.ಅದೇ ಮಾಸದ ನಗು..!!
ಅನಸೂಯ ಜಹಗೀರದಾರ.
ಲೇಖಕರ ಪರಿಚಯ:
ಅನಸೂಯ ಜಹಗೀರದಾರ
ಕೊಪ್ಪಳದ ಅನಸೂಯ ಜಹಗೀರದಾರ.
ತಂದೆ :- ದಿ. ಪರಮಹಂಸ ಜಹಗೀರದಾರ
ತಾಯಿ :- ಶ್ರೀಮತಿ ಶಾಂತಾಬಾಯಿ ಜಹಗೀರದಾರ
ಒಬ್ಬ ಸಹೋದರ ಒಬ್ಬ ಸಹೋದರಿ ಇದ್ದಾರೆ.
ತಾಯಿ ಹಾಡುತ್ತಿದ್ದರು. ತಂದೆ ತಬಲ ವಾದಕರಾಗಿದ್ದರು
ಅಜ್ಜ ಪುಟ್ಟಭಟ್ಟ ಜಹಗೀರದಾರ ಕೀರ್ತನೆ , ಹರಿಕಥೆ ಹೇಳುತ್ತಿದ್ದರು. ಭಾಗವತ, ಅಧ್ಯಾತ್ಮಿಕ ದರ್ಶನಗಳನ್ನು ಹೇಳುತ್ತಿದ್ದರು ಅವರೂ ಗಾಯಕರಾಗಿದ್ದರು.
ಜೊತೆಗೆ ಗಾಂಧೀವಾದಿ ಮತ್ತು ಭಾರತ ಸ್ವಾತಂತ್ಯ ಹೋರಾಟಗಾರರಲ್ಲಿ ಈ ಭಾಗದಲ್ಲಿ ಪ್ರಮುಖರಾಗಿದ್ದರು.ಸಮಾನತೆ ದಲಿತಪರ ಹಾಗು ದೌರ್ಜನ್ಯ ವಿರೋಧಿ ಆಂದೋಲನಗಳಲ್ಲೂ ಭಾಗವಹಿಸಿ ನಾಯಕತ್ವವಹಿಸುತ್ತಿದ್ದರು. ಅನಸೂಯ ಜಹಗೀರದಾರ ರ ಮಾನವೀಯ ಕಳಕಳಿ ಗುಣಗಳಿಗೆ ಅವರ ಕುಟುಂಬ ದ ದೇಣಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಹಿಂದುಸ್ತಾನಿ ಸಂಗೀತ ಕಲಾವಿದೆ. ಮತ್ತು ಕವಯತ್ರಿ ಬರಹಗಾರರು.ಸ. ಪ್ರೌಢ ಶಾಲಾ ಶಿಕ್ಷಕರು, ಕನ್ನಡ ಪರ ವಿವಿಧ ಸಂಘಟನೆಗಳಲಿ ಪದಾಧಿಕಾರಿ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಅಧ್ಯಕ್ಷರು.
ಶಿಕ್ಷಣ :- ಎಂ ಎ ಬಿಎಡ್.
ಎಂ ಎ : ಕನ್ನಡ ಮತ್ತು ಸಮಾಜಶಾಸ್ತ್ರ.
ಕಾವ್ಯ ಕೃತಿಗಳು – ಒಡಲಬೆಂಕಿ – ೨೦೧೪ *ಆತ್ಮಾನುಸಂಧಾನ(ಗಜಲ್–೨೦೨೧)
ನೀಹಾರಿಕೆ (ಹನಿಗವಿತೆಗಳು– ೨೦೨೧)
*ಕಥಾಸಂಕಲನ – ಪರಿವರ್ತನೆ(ಅಚ್ಚಿನಲ್ಲಿದೆ – ೨೦೨೧)
*ಪ್ರಶಸ್ತಿ ಪುರಸ್ಕಾರ:- ಡಾ.ಡಿ. ಎಸ್. ಕರ್ಕಿ ರಾಜ್ಯ ಕಾವ್ಯ ಪ್ರಶಸ್ತಿ ( ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನ. ಬೆಳಗಾವಿ–ಒಡಲಬೆಂಕಿ ಕೃತಿಗೆ ೨೦೧೫ ರಲ್ಲಿ)
*ಕಾವ್ಯಶ್ರೀ ಪ್ರಶಸ್ತಿ ( ಕಸ್ತೂರಿ ಸಿರಿಗನ್ನಡ ಬಳಗ ಮಂಡ್ಯ)
*ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ ( ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು. ಜಿಲ್ಲಾ ಘಟಕ ಶಿವಮೊಗ್ಗ)
“ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ(ಕೊಪ್ಪಳ ಜಿಲ್ಲಾಡಳಿತ– ೨೦೧೫ ರಲ್ಲಿ)
*ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ
*ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ದೆ
ಮೆಚ್ಚುಗೆ ಬಹುಮಾನ.
*ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ ( ಕರ್ನಾಟಕ ಸರ್ಕಾರ ೨೦೦೭)