ಅಂಕಣ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರಿಂದ ಹೊಸ ಅಂಕಣ
ಒಲವ ಧಾರೆ
ಹೃದಯ ಮಿಡಿದಾಗ ಮೌನವಾಗಿರುವುದಾದರೂ ಹೇಗೆ..?
ಬದುಕಿನ ಸುತ್ತಮುತ್ತಲೂ ನಡೆಯುವ ಹಲವಾರು ಸಂಗತಿಗಳು ಕಣ್ಣು ಮತ್ತು ಕಿವಿಯ ಮೂಲಕ ಸಾಗುವುದರ ಜೊತೆ ಜೊತೆಗೆ ಕೆಲವು ಸಲ ಹೃದಯವನ್ನು ಮಿಡಿಯುತ್ತವೆ. ಹೃದಯ ಮೀಟಿದಾಗ ಮೌನವಾಗಿರಲು ಹೇಗೆ ಸಾಧ್ಯ..? ಯೌವನದಲ್ಲಿ ಚೆನ್ನಾಗಿ ದುಡಿದು ಮಕ್ಕಳಿಗೆ ಒಳ್ಳೆಯ ಸ್ಥಾನವನ್ನು ಕೊಡಿಸಿ, ವೃದ್ಯಾಪ್ಯದಲ್ಲಿ ಏಕಾಂಗಿಯಾಗಿ ಮಕ್ಕಳಿಂದ ದೂರಾಗುವ ಹಿರಿಯ ಜೀವಿಗಳ ನೋವು. ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶವಿರದ್ದರೂ ಮೇಲುಕೀಳಿನ ಪೆಟ್ಟುಗಳನ್ನು ತಿನ್ನುತ್ತಾ, ದೌರ್ಜನ್ಯಕ್ಕೆ ಒಳಗಾದ ಮನಸ್ಸುಗಳನ್ನು ಕಂಡಾಗ, ಹೃದಯ ಮೀಟಿದಾಗ ಕಣ್ಣಾರೆ ಕಂಡು ಸುಮ್ಮನಿರುವುದು ಹೇಗೆ..? ಪ್ರಕೃತಿ ಸಹಜದಂತೆ ಯೌವನದಲ್ಲಿ ಪ್ರೇಮ ಪ್ರೀತಿಯ ಸೆಳೆತಕ್ಕೆ ಒಳಗಾಗಿರುವ ಮನಸ್ಸುಗಳಿಗೆ ಜಾತಿ-ಧರ್ಮದ ಸುಳಿಯೊಳಗೆ ಮರ್ಯಾದ ಹತ್ಯೆಗಳು ಕಣ್ಣೆದುರಿಗೆ ನಡೆದಾಗ ಮೌನವಾಗಿರುವದಾದರೂ ಹೇಗೆ..?
ಕುಟುಂಬದೊಳಗಿನ ಸಣ್ಣ ಸಣ್ಣ ಗೆಲುವುಗಳನ್ನು ಕೂಡ ಅನುಭವಿಸದೆ ಹೋದರೆ, ಸದಾ ನೋವಿನಲ್ಲಿರುವ ಮನಸ್ಸುಗಳಿಗೆ ತಂಪಾದ ನಾಲ್ಕು ಪ್ರೀತಿಯ ಮಾತುಗಳನ್ನು ಆಡದೇ ಹೋದರೆ..? ಬಾಲ್ಯದಲ್ಲಿ ನಮಗೆ ಅಕ್ಷರ ಬಿತ್ತಿ, ಸಂಸ್ಕಾರವನ್ನು ಕಲಿಸಿ ಒಂದು ಸುಂದರ ಮೂರ್ತಿಯನ್ನಾಗಿ ಮಾಡಿದ ಗುರುಗಳಿಗೆ ಧನ್ಯವಾದ ಹೇಳದೇ ಹೋದರೆ.. ಹೃದಯವು ಕ್ಷಮಿಸುವದಾದರೂ ಹೇಗೆ..? ಹಗಲು-ರಾತ್ರಿಯೆನ್ನದೆ ಗಡಿಯಲ್ಲಿ ದೇಶವನ್ನು ಕಾಯುತ್ತಾ, ತನ್ನ ಕುಟುಂಬವನ್ನು ತ್ಯಾಗ ಮಾಡಿದ ಸೈನಿಕನ ತ್ಯಾಗಮಯಿ ಸೇವೆಯನ್ನು ನೆನಪಿಸಿದೆ ಹೋದರೆ.. ನಮ್ಮದು ತಪ್ಪಾದೀತು..!! ಚಳಿ ಗಾಳಿಗೆ ಮೈಯೊಡ್ಡಿ ಭೂಮಿತಾಯಿಗೆ ಬೆವರು ಸುರಿಸಿ ಅನ್ನ ಹಾಕುವ ರೈತನ ಸಮಸ್ಯೆಗಳ ಬಗ್ಗೆ ಮಾತನಾಡದೇ ಹೋದರೆ ಉಂಡ ಅನ್ನ ಜೀರ್ಣವಾಗುವದಾದರೂ ಹೇಗೆ..?
ನಮಗೆ ನೋವಾದಾಗ, ಸಮಸ್ಯೆಗಳು ಧುತ್ತೆಂದು ನಮ್ಮ ಮೇಲೆರಗಿದಾಗ, ಕೆಲವು ಸಲ ಬದುಕಿನಲ್ಲಿ ಒಂಟಿಯಾಗಿ ಕಣ್ಣೀರು ಸುರಿಸುವಾಗ, ನಮ್ಮವರಿಗಾಗಿ ನಾವು ಎಷ್ಟೇ ಮಿಡಿದರೂ ಅವರು ನಮಗೆ ಗೊತ್ತಿಲ್ಲದೆ ಮಾಡುವ ಮೋಸಗಳು ನಮ್ಮ ಮನಸ್ಸು ಹೊಕ್ಕು ವಿಲವಿಲನೆ ಚಡಪಡಿಸು ವಾಗ, “ ಹೆದರಬೇಡ ನಾನಿದ್ದೇನೆ. ನಿನ್ನ ಕಣ್ಣೀರ ವರೆಸುತ್ತೇನೆ. ನಿನ್ನ ಹೆಗಲಿಗೆ ಹೆಗಲಾಗುತ್ತೇನೆ. ಚಿಂತಿಸಬೇಡ ಕಷ್ಟವೋ ಸುಖವೋ ನಲಿವು-ನೋವು ಎಲ್ಲದರಲ್ಲಿಯೂ ಭಾಗಿಯಾಗವೆ” ಎನ್ನುವ ಪ್ರೀತಿಯ ಮನಸ್ಸುಗಳನ್ನು ಸದಾ ಸ್ಮರಿಸಲು ನನ್ನ ಹೃದಯ ಹಾತೊರೆಯುವ ಧನ್ಯತಾಭಾವಗಳನ್ನು ನಿಮ್ಮೆದುರಿಗೆ ಹಂಚಿಕೊಳ್ಳಲು “ಒಲವಧಾರೆ” ಅಂಕಣದ ಮೂಲಕ ನಮ್ಮದೇ ಪತ್ರಿಕೆಯಾದ ‘ಸಂಗಾತಿ’ಯೊಡನೆ ನಿಮ್ಮೊಂದಿಗೆ ಬರುವೆ ಸ್ವೀಕರಿಸಿ, ಓದಿ, ಅಭಿಪ್ರಾಯಿಸಿರಿ.
————————————-
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಲೇಖಕರ ಪರಿಚಯ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.
Super sir