
ಅಂಕಣ ಸಂಗಾತಿ
ಕಾವ್ಯದರ್ಪಣ
ಅನುಸೂಯ ಮಹಾಲಿಂಗಯ್ಯ

“ಯಾತರದು ಹೂವಾದರೂ
ನಾತರೇ ಸಾಲದೆ
ಜಾತಿ ವಿಜಾತಿ ಏನಬೇಡ
ಶಿವನೊಲು ಇದಾತನೇ ಜಾತ ಸರ್ವಜ್ಞ“
– ಸರ್ವಜ್ಞ
ಕಾವ್ಯ ಪ್ರವೇಶಿಕೆಯ ಮುನ್ನ
ಹೂವು ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಹೂವಿನ ಸೌಂದರ್ಯಕ್ಕೆ ಬೆಕ್ಕಸ ಬೆರಗಾಗದ ಜನರಿಲ್ಲ.
ಪ್ರಕೃತಿಯಲ್ಲಿ ಮೊಗ್ಗೊಂದು ಹೂವಾಗಿ ಅರಳುವುದೊಂದು ವಿಸ್ಮಯ ಲೋಕವನ್ನು ತೆರೆದಿಟ್ಟಂತೆ. ವೈವಿದ್ಯಮಯವಾದ ಹೂಗಳು ನಿಸರ್ಗದ ಚೆಲುವನ್ನು ಹೆಚ್ಚಿಸಿದರೆ, ಹೂವನರಸಿ ಬರುವ ದುಂಬಿಗಳ ಝೇಂಕಾರ ಕೇಳುವುದು ಮತ್ತೊಂದು ಸಂಭ್ರಮ. ಇಂತಹ ಅವಕಾಶ ಹೆಚ್ಚಾಗಿ ಸಿಗುವುದು ಹಳ್ಳಿಯಲ್ಲಿ ವಾಸಿಸುವ ಜನರಿಗೆ ಹಾಗೂ ಪ್ರಕೃತಿಯ ಮಡಿಲಲ್ಲಿ ಸಸ್ಯಶಾಮಲೆಯ ನೆರಳಲ್ಲಿ ಬದುಕುವ ಜನರಿಗೆ. ಹೆಣ್ಣನ್ನು ಹೂವಿಗೆ ಹೋಲಿಸುವ ಪರಿಯುಂಟು. ಅದರ ಪಕಳೆಗಳಷ್ಟು ಹೆಣ್ಣು ಮೃದುಮಧುರವೆಂದು ಭಾವಿಸಲಾಗುತ್ತದೆ. ಮಗುವಿನ ನಗುವನ್ನು ಹೂವಿಗೆ ಹೋಲಿಸಲಾಗುತ್ತದೆ. ಅಂದರೆ ಅಷ್ಟೊಂದು ಸೌಮ್ಯ ಮತ್ತು ಮೃದು ಸ್ವಭಾವ ಹೂವಿನದಾಗಿರುತ್ತದೆ.
ಪರಿಸರದ ತುಂಬಾ ಹಸಿರಿನ ಚಾದರವಿದ್ದರೂ ಅದು ರಮಣಿಯ ವೆನಿಸುವುದು ಅದರೊಳಗೊಂದು ಹೂವರಳಿ ನಕ್ಕಾಗ. ಇಂದಿನ ದಿನಮಾನದಲ್ಲಿ ಹೂವು ಇಲ್ಲದೆ ಯಾವುದೇ ಶುಭಕಾರ್ಯ ಜರುಗುವುದಿಲ್ಲ. ಪ್ರೇಮಿಗಳು ತಮ್ಮ ಪ್ರೀತಿಯ ನಿವೇದನೆ ಮಾಡಿಕೊಳ್ಳುವುದರಿಂದ ಹಿಡಿದು ಹಾರ ತುರಾಯಿವರೆಗೆ, ಸುಗಂಧದ್ರವ್ಯ ತಯಾರಿಕೆ ಇಂದ ಹಿಡಿದು ಅತಿಥಿ ಮಹೋನ್ನತರ ಸ್ವಾಗತ ಬೀಳ್ಕೊಡುಗೆಯವರಿಗೆ, ದೇವರ ಶಿರದಿಂದ ದೇವರ ಪಾದದವರೆಗೆ ಎಲ್ಲೆಡೆ ತನ್ನ ಛಾಪು ಮೂಡಿಸಿ ಸ್ಥಾನ ಗಿಟ್ಟಿಸಿಕೊಂಡಿರುವುದು ಹೂವಿಗೆ ಹೆಮ್ಮೆಯ ವಿಷಯವೇ ಸರಿ.
ಇಂತಹ ಅದ್ಭುತ ರೂಪಕವನ್ನು ಇಟ್ಟುಕೊಂಡು ಕಥೆ ಕವನಗಳನ್ನು ಬರೆದ ಕವಿ ಸಾಹಿತಿಗಳ ಸಂಖ್ಯೆಗೇನು ಕೊರತೆಯಿಲ್ಲ. ಎಲ್ಲ ಕವಿಗಳ ಮನಸೆಳೆದು ವೈವಿಧ್ಯಮಯವಾಗಿ ವರ್ಣಿಸಿಕೊಂಡು ಕಾವ್ಯವನ್ನು ಕಟ್ಟಿಸಿಕೊಂಡ ಅದ್ಭುತ ಕಾವ್ಯಕನ್ನಿಕೆ ಈ ಹೂವು.
ಹೂವಿನ ವಿಶೇಷತೆ ಕುರಿತು ಕವಯತ್ರಿ ಅನುಸೂಯ ಮಹಾಲಿಂಗ ರಚಿಸಿದ ಕವಿತೆಯನ್ನೂ ಇಂದು ನೋಡೋಣ.
ಕವಿ ಪರಿಚಯ
ಅನುಸೂಯ ಮಹಾಲಿಂಗಯ್ಯ ಇವರು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಚಿನ್ನಹಳ್ಳಿ ಗ್ರಾಮದವರು. ರೈತ ಕುಟುಂಬದ ಮಗಳಾಗಿ ಬೆಳೆದು, ಈಗ ರೈತ ಮಹಿಳೆಯಾಗಿ ಪರಿಸರದ ಬಗ್ಗೆ ಅಪಾರ ಒಲವನ್ನು ಬೆಳೆಸಿಕೊಂಡು, ಹೊಲಗದ್ದೆಗಳಲ್ಲಿ ಸಂಚರಿಸಿ ಪ್ರಕೃತಿಯ ರಮ್ಯ ವಾತಾವರಣದಲ್ಲಿ ತನ್ನ ಮನಸ್ಸಿಗೆ ಹಿತ ನೀಡಿದ ಭಾವಗಳನ್ನು ಕವಿತೆಯಾಗಿಸಿ ಕಾವ್ಯ ಕಟ್ಟುವ ಪರಿ ಅನನ್ಯವಾಗಿದೆ.
ಕವಿತೆಯ ಆಶಯ
ಈ ಕವಿತೆಯಲ್ಲಿ ಕವಯತ್ರಿ ಹೂವು ಮತ್ತು ಮಾನವನ ನಡುವೆ ಇರುವ ಗುಣಗಳನ್ನು ವಿಶ್ಲೇಷಣೆ ಮಾಡುತ್ತಾ ಸಾಗಿದ್ದಾರೆ. ಆ ಮೂಲಕ ಪ್ರಕೃತಿ ಮತ್ತು ಮನುಷ್ಯನ ನಡುವಿನ ವ್ಯತ್ಯಾಸಗಳನ್ನು ತೆರೆದಿಡುತ್ತಾರೆ.
ಪ್ರಕೃತಿ ಸಕಲ ಸಿರಿ ಸಂಪತ್ತನ್ನು ಹೊಂದಿದ ಹಸಿರಿನ ಕಾನನವನ್ನು ಸೃಷ್ಟಿಸಿದರೆ, ಗಿಡಮರಗಳೆಲ್ಲ ವಯ್ಯಾರದಿಂದ ನಳನಳಿಸುತ್ತವೆ. ಇಲ್ಲಿ ಹೂವು ನಿಸರ್ಗದ ರಮಣೀಯ ಹಾಗೂ ಸುಂದರವಾದ ಭಾಗ. ಆದರೂ ಅದೇ ಪರಿಸರದ ಆಕರ್ಷಕ ಸೃಷ್ಟಿ ಎಂದು ಹಮ್ಮು ಬಿಮ್ಮು ತೋರದು. ಇದು ಎಲ್ಲ ಮಾನವರಿಗೂ ಜೀವನಪಾಠವಾಗಬೇಕೆಂದು ಕವಿತೆ ಆಶಿಸುತ್ತದೆ.
ತನ್ನೆಲ್ಲಾ ಕೆಲಸಗಳನ್ನು ಸದ್ದಿಲ್ಲದೆ ಮಾಡುತ್ತಾ ತನ್ನ ವಿಜಯ ಪತಾಕೆ ಹಾರಿಸುವ ಮೂಲಕ ತನ್ನನ್ನು ಗುರುತಿಸಿಕೊಳ್ಳುತ್ತದೆ. ಹಾಗೆಯೇ ಜನರು ಊರಿನ ತುಂಬೆಲ್ಲ ತನ್ನ ಕೆಲಸಗಳ ಬಗ್ಗೆ ಸಾರಬೇಕಾಗಿಲ್ಲ. ಅವನ ಕಾಯಕ ನಿಷ್ಠೆ, ಅದರಿಂದ ಬರುವ ಫಲಗಳೇ ಅವನನ್ನು ಸಮಾಜ ಮಾನ್ಯ ವ್ಯಕ್ತಿಯನ್ನಾಗಿ ರೂಪಿಸುತ್ತವೆ ಎಂದು ಕವಿತೆಯ ಹೇಳುತ್ತದೆ.
ಕಷ್ಟ ಬರಲಿ ಸುಖವಿರಲಿ, ಮೇಲಿನ ಸ್ಥಾನವೇ ದೊರೆಯಲಿ, ಕೆಳಗಿನ ಸ್ತರವೇ ಆಗಲಿ ಭೇದಭಾವ ತೋರದೆ ಎಲ್ಲ ಸಂದರ್ಭಗಳಲ್ಲೂ ಸಮಾನ ಚಿತ್ತ ಇಟ್ಟುಕೊಂಡು ವರ್ತಿಸಬೇಕೆಂದು ಕವಿಯು ಹೂವಿನ ನಿದರ್ಶನದ ಮೂಲಕ ವ್ಯಕ್ತಪಡಿಸುತ್ತಾರೆ.
ಕವಿತೆಯ ಶೀರ್ಷಿಕೆ
“ಸದ್ದು ಮಾಡಿತೇ ಮೊಗ್ಗು“
ಮೊಗ್ಗೊಂದು ಹೂವಾಗಿ ಅರಳುವ
ಚಂದದ ವರ್ಣನೆಯ ಮೂಲಕ
ಕವಯತ್ರಿ ಮಾನವ ಕುಲಕ್ಕೆ ಬುದ್ದಿ ಹೇಳ ಹೊರಟಿದ್ದಾರೆ. ಸದ್ದು ಗದ್ದಲವಿಲ್ಲದೆ ನಿಶ್ಯಬ್ದದಿಂದ ಹೂವೊಂದು ಬಾಳಿ ಬದುಕುವ
ಕಾವ್ಯವೇ ಈ ಸದ್ದು ಮಾಡೀತೆ ಮೊಗ್ಗು ಕವಿತೆ. ಆ ದೃಷ್ಟಿಯಿಂದ ಕವಿತೆಗೆ ಶೀರ್ಷಿಕೆ ಚೆಂದವಾಗಿ ಮೂಡಿಬಂದಿದೆ.
ಕವಿತೆಯ ವಿಶ್ಲೇಷಣೆ
೧
“ಸದ್ದು ಮಾಡಿತೇ ಮೊಗ್ಗು
ನಲ್ಲನ ಮನದೊಳಗೆನದು ಹಿಗ್ಗು
ಬಿರಿದೆ ಬಿರಿದೆನೆಂದು
ಹಿರಿದು ಘಮವ ಚೆಲ್ಲಿ
ಎಲ್ಲರನ್ನೂ ಸೆಳೆಯುವಾಗ
ಸದ್ದು ಮಾಡಿತೇ ಮೊಗ್ಗು//
ಈ ಕವಿತೆಯ ಸಾಲುಗಳು ಹೂಗಳು ಅರಳುವ ಸದ್ದು ಯಾರಿಗೂ ಕೇಳಿಸದು ಎಂಬ ಭಾವದಲ್ಲಿ ಮೂಡಿಬಂದಿದ್ದು ಇಲ್ಲಿ ಮೊಗ್ಗು ಹೂವಾಗಿ ಅರಳುತ್ತ ಪರಿಮಳವನ್ನು ಸೂಚಿ ಹೂದೋಟವನ್ನೆಲ್ಲಾ ಪಸರಿಸಿ ಎಲ್ಲರನ್ನೂ ತನ್ನ ಕಂಪಿನಿಂದ ಸೆಳೆಯುವಾಗ ಸದ್ದು ಮಾಡಿತೇ ಎಂಬ ಕುತೂಹಲಕಾರಿಯಾದ, ಚಿಂತನಾಶೀಲವಾದ ಪ್ರಶ್ನೆಯೊಂದನ್ನು ಓದುಗರಲ್ಲಿ ಹುಟ್ಟುಹಾಕಿ ಹೌದಲ್ವಾ ಎಂಬ ಉದ್ಗಾರವನ್ನು ಬರಿಸುತ್ತದೆ.
“ಸಂಪಿಗೆಯ ಮರವನೇರಿ
ಪರಿಮಳವ ಕೆಂಪು ಕೊಯ್ವನರೆಲೊ
ಇಂಪುಳ್ಳ ಜಾಣ ನಲ್ಲದು ಕಾಣೆ ಕೆಳದಿ“
ಮಾದರಸನ ಕೀರ್ತನೆ
ಹೂ ಅಷ್ಟೆಲ್ಲಾ ಸುಗಂಧ ಸೂಸಿ ಜನರನ್ನು ತನ್ನಡೆ ಆಕರ್ಷಿಸಿದರೂ ಅದು ತಾನೇ ಶ್ರೇಷ್ಠ ಎಂಬ ಹೆಚ್ಚುಗಾರಿಕೆ ತೋರದು. ಅದು ಹೂವಿನ ಮನೋಗತ ಎನ್ನುವ ಕವಯತ್ರಿ ಸದ್ದು ಮಾಡದೇ ಅರಳಿ ನಗುತ್ತಾ ನಲ್ಲನ ಅಂದರೆ ದುಂಬಿಯ ಮನದೊಳಗೆ ಹರ್ಷೋಲ್ಲಾಸ ಹುಟ್ಟುಹಾಕುತ್ತದೆ. ನಲ್ಲೆಯನ್ನರಸಿ ದುಂಬಿ ಬರುತ್ತದೆ ಎಂಬ ಭಾವ ವ್ಯಕ್ತವಾಗುತ್ತದೆ.
ಇದು ಮಾನವನಿಗೆ ಸಂದೇಶವನ್ನು ಹೊತ್ತು ತಂದಿದೆ. ನೀನು ಎಲ್ಲವನ್ನೂ ಸೆಳೆಯುವ ಪ್ರಯತ್ನ ಮಾಡಬೇಡ .ನೀನು ಹೂವಿನಂತೆ ಮೌನವಾಗಿ ಕಾರ್ಯಸಾಧಿಸೆಂದು ಸಲಹೆ ನೀಡುತ್ತದೆ.
೨
ಮೆಲ್ಲ ಮೆಲ್ಲನೆ ಮೊಗ್ಗು
ಹೂವಾಗುತ ಹಿಗ್ಗು
ಬೇಡಿತೇನು ಕರಗಂಟೆಯ ನಾದ?
ಕುರುಹಿಲ್ಲ ಅರುಹಲೂ ಇಲ್ಲ
ನಲ್ಲ ದುಂಬಿಗೆ ಮಾತ್ರ
ಸದ್ದು ಮಾಡಿತೇ ಮೊಗ್ಗು//
ಮಲ್ಲಿಗೆ ಮೊಗ್ಗು ಹೂವಾಗಿ ಅಳುತ ತನ್ನೊಳಗೆ ಹಿಗ್ಗಿನಿಂದ ಸಂಭ್ರಮಿಸುವುದು ಅದಕ್ಕೆ ತನ್ನ ಸಂತಸ ಸಂಭ್ರಮಿಸಲು ಯಾರು ಹೊಗಳು ಭಟ್ಟರು ಇಲ್ಲ. ಅದು ಸಹಜವಾಗಿ ಅರಳಿ ಕಂಪು ಸೂಸುತ್ತದೆ.ಮೊಗ್ಗು ತಾನರಳುವುದನ್ನು ತೋರಿಸಿಕೊಳ್ಳಲು, ಅದು ಜನರನ್ನು ಕರೆಯಲು ಗಂಟೆಯ ನಾದ ಮಾಡುವುದಿಲ್ಲ. ಮೌನವಾಗಿ ಯಾರ ಅರಿವಿಗೂ ಬಾರದಂತೆ ತನ್ನ ಪಾಲಿನ ಕಾರ್ಯವನ್ನು ತಾನೆ ಮಾಡಿಕೊಳ್ಳುತ್ತದೆ.
ಸುಮವರಳಿದ ಸುಳಿವಿಲ್ಲ, ಕುರುಹಿಲ್ಲ, ಅದು ತಾನು ಅರಳುವೆ ನಾನೀಗ ಎಂದು ಎಲ್ಲರ ಬಳಿ ಹೇಳಿಕೊಳ್ಳಲು ಇಲ್ಲ. ಆದರೂ ಅದು ಅರಳಿದ್ದು ನಲ್ಲನಾದ ದುಂಬಿಗೆ ತಿಳಿದು ನಲ್ಲೆಯನ್ನರಸಿ ಬರುವುದು, ಸದ್ದುಗದ್ದಲವಿಲ್ಲದೆ ತನ್ನಿರುವಿಕೆಯನ್ನು ಹೂವು ಸ್ಥಾಪಿಸುವುದು ಎನ್ನುವ ಕವನ ಪರೋಕ್ಷವಾಗಿ ಮನದೊಳಗೆ ಮನುಜನಿಗೆ ಚಾಟಿ ಬೀಸುತ್ತದೆ.
ಮಾಡಿದ ಕೆಲಸಗಳನ್ನು ನೀನು ಎಲ್ಲರಿಗೂ ತಿಳಿಯುವಂತೆ ತಮಟೆ ವಾದ್ಯಗಳೊಂದಿಗೆ ಮಾಡಬೇಕಿಲ್ಲ. ನೀನು ನಿನ್ನ ಕರ್ತವ್ಯವನ್ನು, ಸೇವೆಯನ್ನು ನಿಷ್ಠೆಯಿಂದ ನಿನ್ನ ಪಾಡಿಗೆ ನೀನು ಮಾಡಿದರೆ ಕೆಲಸದ ಪ್ರತಿಫವಲವೇ ನಿನ್ನ ಸಾಧನೆಯನ್ನು ಜಗತ್ತಿಗೆ ಸಾರಿ ಹೇಳುತ್ತದೆ. ಕೇವಲ ಬಡಾಯಿಕೊಚ್ಚಿಕೊಳ್ಳುವುದನ್ನು ಬಿಟ್ಟು ತನ್ನ ಚಿತ್ತವನ್ನು ಹರಿಸುವಂತೆ ಮನುಜನಿಗೆ ಸಲಹೆ ನೀಡುತ್ತದೆ.
೩
ಹೂವು ದುಂಬಿಯ ಸರಸ
ಕಾಣಲಿಲ್ಲವೆಂದಿಗೂ ವಿರಸ
ಮೆಲ್ಲ ಕಲಿಯಬಾರದೇ ಮನುಜ
ಕೂಡಿಬಾಳುವ ಸುಖವ
ಹೇಳಲಿಲ್ಲವೇ ನಿನಗೆ ನಿಸರ್ಗ
ಸದ್ದು ಮಾಡಿತೇ ಮೊಗ್ಗು//
ಸೌಂದರ್ಯದ ರಾಣಿ ಹೂವಿನ ಘಮಲಿಗೆ ಮಾರು ಹೋಗದವರು ಯಾರಿದ್ದಾರೆ. ಪ್ರತಿಯೊಬ್ಬರೂ ಅದರ ಸೊಬಗಿಗೆ ಮರುಳಾಯಾಗುವರು. ಹೂವು ಪ್ರೇಯಸಿ, ದುಂಬಿ ಪ್ರಣಯರಾಜ. ಇವರಿಬ್ಬರ ಪ್ರಣಯದಾಟ ಸೃಷ್ಠಿಯ ವಿಸ್ಮಯ. ಹೂದೋಟಕ್ಕೆ ಕಾಲಿಟ್ಟರೆ ಸಾಕು ಸುಗಂಧ ಬೀರುವ ಹೂಗಳೊಂದಿಗೆ ದುಂಬಿಗಳ ಸರಸ ನೋಡಲೆಷ್ಟು ಸೊಬಗು.
ಈ ಹೂವು ದುಂಬಿಗಳ ನಡುವೆ ಎಂದಿಗೂ ಜಗಳ ಹೊಡೆದಾಟ ಬಾರದು. ಅವುಗಳ ನಡುವೆ ಪ್ರೀತಿ ಪ್ರೇಮವಿದೆ. ಕೋಪ ಮನಸ್ತಾಪ ಗಳಿಗೆ ಅವಕಾಶವಿಲ್ಲ. ಹೂವಿನ ಸೆಳೆತಕ್ಕೊಳಗಾದ ದುಂಬಿಯ ಝೇಂಕಾರ ಕಿವಿಗೆ ಇಂಪು ನೋಡಿದರೆ, ಹೂವಿನ ಸೊಬಗು ಮನಸ್ಸಿಗೆ ಮುದ ನೀಡುತ್ತದೆ.
ಇಲ್ಲಿ ಕವಿಯು ಹೂವು ದುಂಬಿಗಳ ಸರಸವನ್ನು ಉಲ್ಲೇಖಿಸುತ್ತಾ, ಈ ಜೀವಗಳ ನಡುವೆ ಇರುವ ಸಮರಸವು ಮನುಜ ದಂಪತಿಗಳಿಗೆ ಬರುತ್ತಿಲ್ಲವೆಂದು ಮರುಗುತ್ತಾರೆ. ಜೀವ ಸಂಕುಲದಲ್ಲಿ ಪರಮ ಜ್ಞಾನಿ ಎನಿಸಿಕೊಂಡವನು ಮನುಜ. ಇವನು ಎಲ್ಲರೊಂದಿಗೆ ಕೂಡಿ ಬಾಳಬೇಕು. ಏನೇ ಸವಾಲುಗಳನ್ನು ಬಂದರೂ ಧೈರ್ಯವಾಗಿ ಎದುರಿಸಬೇಕು. ಸಮಸ್ಯೆ ಬಂದಾಗ ಮನಸ್ತಾಪಗಳನ್ನು ಕುರಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ವಿಪರ್ಯಾಸವೆಂದರೆ ಮನುಷ್ಯನಿಗೆ ಈ ತಾಳ್ಮೆಯಿಲ್ಲ. ಪತಿ ಪತ್ನಿಯರ ನಡುವೆ ಹೊಂದಾಣಿಕೆ ಇಲ್ಲದೆ, ಹಮ್ಮು ಬಿಮ್ಮುಗಳನ್ನು ಬೆಳೆಸಿಕೊಂಡು ನಿತ್ಯ ಕಚ್ಚಾಡುತ್ತಾ, ಹೂವು ದುಂಬಿಯಂತೆ ಸುಮಧುರವಾಗಿ ಇರಬೇಕಿದ್ದ ಪ್ರೀತಿ ಜಟಾಪಟಿಯಲ್ಲಿ ಮುರುಟಿ ಹೋಗುತ್ತಿದೆ ಎಂದು ಕವಯತ್ರಿ ಕೊರಗುತ್ತಾರೆ. ಅವುಗಳ ಸಮರಸವನ್ನು ನೋಡಿಯಾದರೂ ನೀನು ಕಲಿಯಬಾರದೆ ಮನುಜ ಎಂದು ಪ್ರಶ್ನಿಸುತ್ತಾರೆ. ವಿವಿಧ ಗಿಡಮರಗಳು ಜೊತೆಯಾಗಿ ಬದುಕುತ್ತವೆ. ಪಂಚಭೂತಗಳು ಸಮಾನತೆ ಕಾಪಾಡುತ್ತವೆ. ಆಗಿರುವಾಗ ಮನುಜ ನಿನಗೇಕೆ ಬುದ್ಧಿ ಬಂದಿಲ್ಲ. ನಿಸರ್ಗವನ್ನು ನೋಡಿಯಾದರೂ ನೀನು ಕೂಡಿ ಬಾಳುವುದನ್ನು ಕಲಿಯಬಾರದೆ ಎಂದು ಪ್ರಶ್ನಿಸುತ್ತಾರೆ. ನಿನ್ನ ಖುಷಿ ಸದ್ದು ಮಾಡುತ್ತಾ ಕೂಡಿ ಬಾಳುವುದನ್ನು ಮರೆಸಿದೆ ಎಂದು ಆತಂಕಪಡುತ್ತಾರೆ. ಪ್ರಕೃತಿಯ ಮಹಿಮೆಯನ್ನು ಸಾರುವ ಮೂಲಕ ನರಜನ್ಮಕ್ಕೆ ಬುದ್ಧಿ ಹೇಳುತ್ತಾರೆ.
೪
ಕದ್ದು ಕೊಯ್ವರ ಕಂಡು
ಕೂಗಿ ಕರೆಯುತಾ ಅಬ್ಬರಿಸಿ
ದೂರು ನೀಡಿತೇ ಒಡೆಯನಿಗೆ
ಕಳ್ಳ ಕಾಕರ ಜೇಬು ತುಂಬಿ
ದಾರಿಹೋಕರ ಮುಡಿಯ ನಂಬಿ
ಸದ್ದು ಮಾಡಿತೇ ಮೊಗ್ಗು//
ಈ ಗಿಡದ ತುಂಬಾ ಹೂಗಳು ಅರಳಿ ನಗೆ ಬೀರಲು ಎಂಥ ಸೊಗಸು. ಆದರೆ ನಾವು ಹೂವನ್ನು ಗಿಡದಲ್ಲಿ ಹಾಗೆ ಬಿಡುತ್ತೇವೆಯೇ. ಅವುಗಳ ಸೌಂದರ್ಯಕ್ಕೆ ಮಾರುಹೋಗಿ ಅವುಗಳನ್ನು ಕಿತ್ತು ಮುಡಿಯಲ್ಲಿ ಅಲಂಕರಿಸಿಕೊಳ್ಳುತ್ತೇವೆ. ಅವು ಇರುವುದು ನಮಗಾಗಿಯೇ ಎಂದು ಬೀಗುತ್ತೇವೆ. ಜನರು ಜಂಭದಿಂದ ಬಾಳುವುದನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಅವು ಹೂವಿನ ತೊಟ್ಟನ್ನು ಕತ್ತರಿಸಿ ಗಿಡದಿಂದ ಬೇರ್ಪಡಿಸುತ್ತೇವೆ. ಗಿಡದ ದೇಹವನ್ನು ನಾವು ಕದ್ದಿದ್ದೇವೆ.ಆದರೆ ಹೂ ತನಗೆ ಮನುಜ ನೋವು ಮಾಡಿದ ಎಂದು ಎಂದಾದರೂ ಅಬ್ಬರಿಸಿ ಬೊಬ್ಬಿರಿಯುತ್ತದೆಯೇ? ತನ್ನ ಒಡೆಯನಿಗೆ ಅಂದರೆ ಗಿಡಕ್ಕೆ ಅದು ದೂರು ನೀಡುತ್ತದೆಯೇ ಎಂದು ಪ್ರಶ್ನಿಸುತ್ತಾರೆ.
ಕಳ್ಳಕಾಕರು ಹೂವನ್ನು ಕದ್ದು ಕಿತ್ತು ಮಾರಿಕೊಂಡು ಜೇಬು ತುಂಬಿಸಿಕೊಂಡರು ಅದು ಅರಚುವುದಿಲ್ಲ, ಕಿರುಚುವುದಿಲ್ಲ, ಶಾಂತವಾಗಿ ವರ್ತಿಸುತ್ತದೆ. ಜೊತೆಗೆ ದಾರಿಹೋಕರು ಗಿಡದ ಪಕ್ಕ ನಡೆದುಕೊಂಡು ಹೋಗುವಾಗ ಕಾಣುವ ಸುಂದರ ಪುಷ್ಪಗಳನ್ನು ಕಿತ್ತು ಮುಡಿಗೇರಿಸಿಕೊಳ್ಳುತ್ತಾರೆ. ಅವೆಲ್ಲವನ್ನು ಕಂಡರೂ ಮೊಗ್ಗು ಸದ್ದು ಮಾಡುತ್ತದೆಯೇ ಎನ್ನುವ ಮೂಲಕ ಮನುಷ್ಯನ ಆರ್ಭಟವನ್ನು ಕವಿಯತ್ರಿ ವ್ಯಂಗ್ಯ ಭಾವದಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ.
೫
ದೇವರ ಶಿರವೇ ಬೇಕೆಂದು
ಅಧಿಕಾರಕ್ಕೆ ಕೂಗಾಡಿತೇ ಮೊಗ್ಗು
ಅವನ ಪಾದಕ್ಕೂ ನಲಿದು, ಮುತ್ತೈದೆ
ಮುಡಿಯೇರಿ ನಗಲಿಲ್ಲವೇ ಮೊಗ್ಗು
ಅದಕ್ಕಿರದ ಭೇಧ ನಿನಗೇಕೆ
ಸದ್ದು ಮಾಡಿತೇ ಮೊಗ್ಗು//
ಮನುಷ್ಯ ಅಧಿಕಾರದ ಗದ್ದುಗೆ ಹಿಡಿಯಲು ಪಡುವ ಪಡಿಪಾಟಲನ್ನು ಕವಯತ್ರಿ ನೆನೆದು ಅದನ್ನು ಹೂವಿನ ಸಾರ್ಥಕ ನಡೆಯ ಮೂಲಕ ಟೀಕಿಸುತ್ತಾರೆ. ಮನುಷ್ಯ ಯಾವಾಗಲೂ ಮೇಲಿನ ಸ್ಥಾನವೇ ಬೇಕೆಂದು, ತನಗೆ ಪ್ರಥಮ ಪ್ರಾಶಸ್ತ್ಯ ವೇ ದೊರೆಯಬೇಕೆಂದು ಹಂಬಲಿಸುವ ಪರಿಯನ್ನು ನೆನೆದು ಈ ಸಾಲುಗಳಿಗೆ ಜೀವ ತುಂಬಿದ್ದಾರೆ
ಮನುಜನಲ್ಲಿ ಶಿರ ಎಂಬುದು ಒಂದು ಉನ್ನತ ಭಾಗವೆಂಬ ಭಾವವಿದೆ.ಆದರೆ ಹೂವಿಗೆ ಆ ತಾರತಮ್ಯವಿಲ್ಲ.ಹೂವು ಶಿರವನ್ನು ಏರಬೇಕೆಂದು ಕೂಗಾಡುವುದಿಲ್ಲ. ಅದಕ್ಕೆ ದೈವದ. ಶಿವೂ ಒಂಧೇ, ಪಾದವೂ ಒಂದೇ. ದೇವನ ಪಾದಗಳಿಗೆ ಹೂವನ್ನು ಅರ್ಪಿಸಿದರು ಅದು ಸಂತೋಷದಿಂದ ನಲಿದು ಬದುಕು ಸಾರ್ಥಕವಾಯಿತೆಂದು ಸಂಭ್ರಮಿಸುತ್ತದೆ ಎನ್ನುವ ಕವನದಲ್ಲಿ ಎಂದು ಬಯಸುತ್ತಾರೆ
“ಯಾವ ಮರಕಿಟ್ಟರು ಜೇನು ಜೇನೆ
ಚೆಲುವ ಹೂವಾದ ಮುಡಿಯನ್ನು ಸೇರಿದರೂ ಹೂವೆ
ಬೇವಿಗಿಡದೆ ಮಾವಿಗಿಡೆ ದೇವಗಿಡೆ ಲೇಸು ಪಾವನತೆ
ಹೆಚ್ಙುವುದು –ಮರುಳಸಿದ್ದ“
ಕವಿಗಳಾದ ಡಾ. ಸಿದ್ದಯ್ಯ ಪುರಾಣಿಕ ಅವರ ಈ ನುಡಿಗಳು ಹೂವಿನ ಬದುಕಿನ ಸಾರ್ಥಕತೆಯನ್ನು ಬಿಂಬಿಸುತ್ತವೆ.
ಮುತ್ತೈದೆಯರ ಮೂಡಿಯೇರಿ ಸಡಗರ ಪಡುವ ಹೂವಿನ ಜೀವನವನ್ನು ವರ್ಣಿಸುತ್ತ ಅದು ಯಾವುದೇ ಭೇದಭಾವ ತೋರುವುದಿಲ್ಲ ಅದಕ್ಕೆ ಶ್ರೇಷ್ಠ ಕನಿಷ್ಠವೆಂಬ ಭಾವವಿಲ್ಲ ಎಂಬುದು ಕವಯತ್ರಿಯ ಮನೋಗತವಾಗಿದೆ.
೬
ಸಾವಿನ ಅರಮನೆಯಲ್ಲಿ
ಕೂಗಿ ಹೊಸಕಾಕುವಾಗ
ಮುತ್ತೈದೆ ಮುಡಿಯಿಂದ
ಮೂಢರು ಹಿಡಿದೆಳೆವಾಗ
ಬೆಂಕಿಯಲ್ಲಿ ಬೆಂದರೂ ತಾ
ಸದ್ದು ಮಾಡಿತೇ ಮೊಗ್ಗು//
ಹೂವಿನ ವೈವಿಧ್ಯಮಯ ಬಳಕೆಯನ್ನು ಕುರಿತು ಕವಿಯು ಕಾವ್ಯ ಇದ್ದಾರೆ. ಇಲ್ಲಿ ಅವರು ತುಂಬಾ ಗಂಭೀರವಾದ ಚಿಂತನೆಯೊಂದನು ಹುಟ್ಟುಹಾಕುತ್ತಾರೆ. ಹೂವಿನ ಹಾರ ಸತ್ತವರ ಎದೆಯನ್ನು ಅಲಂಕರಿಸುವುದು. ಬಂಧು ಬಾಂಧವರು ಪ್ರೀತಿಯ ಪ್ರತೀಕವಾಗಿ ತಮ್ಮನ್ನಗಲಿದ ವ್ಯಕ್ತಿಗಳಿಗೆ ಹೂಮಾಲೆಯ ಮೂಲಕ ಅಂತಿಮ ನಮನಗಳನ್ನು ಸಲ್ಲಿಸುವರು.
ಹೇಳಿಕೇಳಿ ಇದು ದುಃಖದ ಸಮಯ. ಸಾವಿನ ಅರಮನೆಯಲ್ಲಿ ಗೋಳಿನ ವಾದ್ಯಗಳು, ನೋವಿನ ಆಲಾಪನೆ, ಕಿರುಚಾಟ, ಕೂಗಾಟಗಳ ಮೂಲಕ ಅತ್ತು ತಮ್ಮ ಎದೆಯ ಭಾರವನ್ನು ನಡೆಸಿಕೊಳ್ಳುವುದು ಆಗ ಹೇಳಿದ ಮೇಲೆ ಗಮನ ನೀಡಲು ಅದನ್ನು ಇಳಿಸಿಕೊಳ್ಳುವರು. ಆಗ ಅವರ ನೋವಿನ ಆಕ್ರಂದನದಲ್ಲಿ ಸಿಲುಕಿ ಹೂವು ಹೊಸಕಿಸಿಕೊಂಡು ಸಹಿಸಿಕೊಂಡು ನಲುಗುವುದು.
ಹೂವು ಹೆಣ್ಣಿನ ಜನ್ಮತಹ ಸೌಭಾಗ್ಯ ಆದರೆ ಮೂಢ ಹಾಗೂ ಸಂಪ್ರದಾಯಗಳಿಗೆ ಬಲಿಯಾಗಿ ಗಂಡನ ಸಾವಿನ ನಂತರ ಮುತ್ತೈದೆಯ ಮುಡಿಯಿಂದ ಹೂವನ್ನು ಬಲವಂತವಾಗಿ ಹಿಡಿದು ಚೆಲ್ಲಾಪಿಲ್ಲಿ ಮಾಡುವರು. ಆಗ ಮೊಗ್ಗಿಗೆ ನೋವಾಗುತ್ತದೆ ಅದು ಎಷ್ಟು ಹಿಂಸೆ ಪಡುತ್ತದೆ ಎಂದು ಬಣ್ಣಿಸಲಾಗದು. ಆ ಹೂವು ಇಷ್ಟೆಲ್ಲ ದಬ್ಬಾಳಿಕೆ, ಶೋಷಣೆಯ ಬೆಂಕಿಯಲ್ಲಿ ಬೆಂದರೂ ಅದು ಸದ್ದುಮಾಡಿ ಕಿರುಚಾಡದು ಎನ್ನುವ ಮೂಲಕ ಮಾನವನಿಗೆ ಕಷ್ಟಗಳು ಬಂದಾಗ ಹೂವಿನಂತೆ ನಡೆದುಕೊಂಡು ಧೈರ್ಯದ ಹೆಜ್ಜೆಯಿನಿಡಬೇಕು ಎಂಬ ಸಂದೇಶವನ್ನು ಸಾರುತ್ತದೆ.
೭
ಪ್ರತಿಷ್ಠಿತರ ಕೊರಳಲ್ಲಿ
ಮಧುಮಕ್ಕಳ ಕರದಲ್ಲಿ
ಮದರಂಗಿ ಎಳೆಯಲ್ಲಿ
ಅರಿಸಿನದ ಜೊತೆಯಲ್ಲಿ
ಸಡಗರದೀ ಸಂಭ್ರಮಿಸುವಾಗಲಾದರೂ
ಸದ್ದು ಮಾಡಿತೇ ಮೊಗ್ಗು
ಹೇ ಮನುಜ ನಿನಗ್ಯಾಕೋ ಬರೀ ಹಿಗ್ಗು.
ಇಲ್ಲಿ ಹೂವಿಗೆ ಹಮ್ಮು, ಬಿಮ್ಮುಗಳಿಲ್ಲ ಅದು ಹೆಚ್ಚುಗಾರಿಕೆಯನ್ನು ತೋರುವುದಿಲ್ಲ ಎನ್ನುವ ಕವಿಯು, ಹೂವಿನ ವಿಶಿಷ್ಟತೆಗಳನ್ನು ಓದುಗರ ಮುಂದಿಡುತ್ತಾರೆ. ಇಂದು ಹೂವು ಗೌರವದ ಸಂಕೇತ ಮತ್ತು ಪ್ರೀತ್ಯಾಧರಗಳ ಕೊಡುಗೆಯಾಗಿದೆ.ಹೂವನ್ನು ಬಳಸುವ ಸಂತೋಷದ ಸಂದರ್ಭಗಳನ್ನು ಪಟ್ಟಿ ಮಾಡುತ್ತಾ ಹೋಗಿದ್ದಾರೆ.
ಸಭೆ ಸಮಾರಂಭಗಳಲ್ಲಿ, ಸನ್ಮಾನ ಗಳಲ್ಲಿ, ಪ್ರತಿಷ್ಠಿತರ ಕೊರಳನೇರಿ ರಾರಾಜಿಸುತ್ತದೆ. ವಿವಾಹ ಮಹೋತ್ಸವದಲ್ಲಿ ಮಧು ಮಕ್ಕಳ ಕರದಲ್ಲಿ ಶುಭ ಕಲ್ಯಾಣಕ್ಕೆ ಸಾಕ್ಷಿ ಹಾಕಲು ಅಣಿಗೊಂಡಿರುತ್ತದೆ. ಮುತ್ತೈದೆಯರಿಗೆ ನೀಡುವ ಅರಿಶಿನ ಕುಂಕುಮ ಜೊತೆಯಲ್ಲಿ, ಮದರಂಗಿಯಲ್ಲಿ ಹೂವಿನ ಅಲಂಕಾರ ಕಾಣಬಹುದು. ಒಟ್ಟಿನಲ್ಲಿ ಎಲ್ಲಾ ಶುಭಕಾರ್ಯಗಳಲ್ಲಿ ಹೂವಿನದೇ ಕಾರುಬಾರು. ಅದಿಲ್ಲದೇ ಸಂಭ್ರಮವೇ ಇಲ್ಲ. ಅಷ್ಟಾದರೂ ಈ ಮೊಗ್ಗು ಹಿಗ್ಗಿ ಮೆರೆಯುವುದಿಲ್ಲ.ತಾನೇ ಶ್ರೇಷ್ಠವೆಂದು ಜಂಭ ಪಡುವುದಿಲ್ಲ. ತನ್ನ ಮಹಿಮೆಯ ಬಗ್ಗೆ ಗರ್ವವಿಲ್ಲ. ಆದರೆ ಮನುಜ ಮಾತ್ರ ತಾನೇ ಮುಖ್ಯ, ತನ್ನಿಂದಲೇ ಎಲ್ಲಾ, ತಾನಿಲ್ಲದೆ ಏನಿಲ್ಲ ಎಂಬ ಕೋಡಿಗೇನು ಕಡಿಮೆಯಿಲ್ಲ ಎಂದು ಮನುಜನಿಗೆ ಹೂವಿನ ಮಹತ್ವ ಸಾರುವ ಮೂಲಕ ತಗ್ಗಿಬಗ್ಗಿ ವಿನಯ ವಿಧೆಯತೆಯಿಂದ ಬಾಳಲು ಸಲಹೆ ನೀಡುತ್ತಾರೆ ಕವಯತ್ರಿ.
೮
ಹಿರಿ ಹಿರಿ ಹಿಗ್ಗುತ್ತಾ
ಕಿರುಕಷ್ಟಕ್ಕೆ ಬೊಬ್ಬಿಡುತ್ತಾ
ಪೊಳ್ಳು ಬಾಳಿನ ಹಾಡು
ಸಿಕ್ಕಲ್ಲೆಲ್ಲಾ ಹರಡುತಾ
ಲಲ್ಲೆ ಹೊಡೆಯುವುದ ನಿಲ್ಲಿಸಿ
ಮೌನದ ಮಾತಾಗು ಮನುಜ.
ಹೂವಿನ ಮೃದು ಸ್ವಭಾವವನ್ನು ಮನುಜನ ಮುಂದೆ ತೆರೆದಿಡುತ್ತಾರೆ. ಅಲ್ಪ ಸಾಧನೆಗೆ ಹಿರಿ ಹಿರಿ ಹಿಗ್ಗುತ್ತ ಮೆರೆಯುವ ಮನುಜನ ಕುರಿತು ಕವಯತ್ರಿ ಚರ್ಚಿಸುತ್ತಾರೆ. ಹೂವು ಎಷ್ಟೇ ಕಷ್ಟ ಬಂದರೂ ಕುಗ್ಗದೇ ಆತ್ಮವಿಶ್ವಾಸದಿಂದ ಆ ನೋವುಗಳನ್ನೆಲ್ಲಾ ಸಹಿಸಿಕೊಂಡು ತಾಳ್ಮೆಯ ಜೀವನ ನಡೆಸುವ ಸಹನಾ ಮಣಿಯಾಗಿ ಇರುವಾಗ ಮನುಜ ಮಾತ್ರ ಎದುರಾದ ಸಣ್ಣಪುಟ್ಟ ಕಷ್ಟಗಳಿಗೂ ಆಕಾಶವೇ ತಲೆಮೇಲೆ ಬಿದ್ದಂತೆ ಭಾವಿಸುತ್ತಾ ಏನೋ ಮಹಾ ಘಾತವಾಗಿದೆ ಎಂದು ಬೊಬ್ಬಿಡುವ ಜನರಿಗೆ ಶಾಂತಿ ರೀತಿಯಲ್ಲಿ ವರ್ತಿಸುತ್ತಾ ಸಮಸ್ಯೆಗೆ ಪರಿಹಾರಕಂಡುಕೊಳ್ಳಲು ಪ್ರೇರೇಪಿಸುತ್ತಾರೆ.
ಜನರು ಸೇರಿದೆಲ್ಲೆಡೆ ಅವರಿಬ್ಬರ ವಿಚಾರ ತೆಗೆದು ಇಲ್ಲ ಸಲ್ಲದ ಸುದ್ದಿಗಳ ಹಬ್ಬಿಸುತ್ತಾ, ಪೊಳ್ಳು ಮಾತುಗಳನಾಡುತ್ತಾ ಅನಾವಶ್ಯಕವಾಗಿ ಲಲ್ಲೆ ಹೊಡೆಯುತ್ತಾ ಜೀವನವನ್ನು ವ್ಯರ್ಥವಾಗಿ ಕಳೆಯುವುದನ್ನು ನಿಲ್ಲಿಸಿ ಗಂಭೀರವಾಗಿ ಚಿಂತಿಸುತ್ತಾ ವಿಚಾರಗಳನ್ನು ಓದುತ್ತಾ ಮೌನದಲ್ಲಿ ಇದ್ದು ಮೆದುಳಿಗೆ ಉತ್ತಮ ಕೆಲಸ ನೀಡಿ ಮಾತಿಗಿಂತ ಕೃತಿಯ ಮೂಲಕ ಸಾಧನೆ ಮಾಡಿ ಕೀರ್ತಿ ಪತಾಕೆ ಹಾರಿಸಿರೆಂದು ಅವರು ಕಿವಿಮಾತು ಹೇಳುತ್ತಾರೆ.
ಕವಿತೆಯಲ್ಲಿ ನಾ ಕಂಡ ಕವಿ ಭಾವ
ಈ ಕವಿತೆಯ ಸಾಲುಗಳು ಒಂದೇ ಓದಿಗೆ ತಟ್ಟನೆ ಎದೆಯೊಳಗಿಳಿದು ಅರ್ಥವನ್ನು ಧ್ವನಿಸುತ್ತವೆ. ಜನರಿಗೆ ಬಹಳ ಪ್ರಿಯವಾದ ವಸ್ತು ಹೂವು.ಅಂತಹ ಆಪ್ತ ಕಾವ್ಯ ವಸ್ತುವನ್ನು ಆಧರಿಸಿ ಅದರೊಟ್ಟಿಗೆ ಮಾನವ ಸಹಜ ಗುಣಗಳನ್ನು ಹೋಲಿಸುತ್ತಾ ಜನರಿಗೆ ತಿಳುವಳಿಕೆ ಹೇಳುವ ಕಾರ್ಯಕ್ಕೆ ಕವಯತ್ರಿಯನ್ನು ಅಭಿನಂದಿಸಲೇಬೇಕು.
ತಮ್ಮ ಬರಹದ ಮೂಲಕ ಇಂತಹ ಒಂದು ಅದ್ಭುತ ಚಿಂತನೆಯನ್ನು ಹುಟ್ಟುಹಾಕಿ, ಸಕಾರಾತ್ಮಕ ಬದಲಾವಣೆಗೆ ಪಥವನ್ನು ಗಟ್ಟಿ ಗೊಳಿಸಲಾಗಿದೆ. ಇಲ್ಲಿ ಕವಯತ್ರಿ ಮನುಜನಿಗೆ ನೀಡಿರುವ ಭಾರಕೋಲಿನ ಏಟಿಗೆ ಹಿಮಸಾಗರದಲ್ಲೊಮ್ಮೆ ಈಜಿ ತನುಮನಗಳನ್ನು ತಣಿಸಿಕೊಳ್ಳಬೇಕು ಎನಿಸದಿರದು.
ಕವಯತ್ರಿ ತನ್ನ ಕಣ್ಣಾರೆ ಕಂಡ ಬಿಸಿ ತುಪ್ಪದಂತ ಕಹಿಸತ್ಯವನ್ನು ಪದರು ಪದರಾಗಿ ತೆರೆದಿಡುವ ಮೂಲಕ ಅದರೊಟ್ಟಿಗೆ ಅಂತರ್ಗತವಾಗಿರುವ ಸಿಹಿ ಹೂರಣವನ್ನು ಹೆಕ್ಕಿ ತೆಗೆದು ತನ್ನ ಬದುಕಿಗೆ ಅಳವಡಿಸಿಕೊಳ್ಳಲು ಸಲಹೆ ನೀಡುತ್ತಾರೆ.
ನಿಗಿನಿಗಿ ಉರಿಯುವಂತಹ ಕಾಠಿಣ್ಯ ಪೂರಿತ ಸಾಲುಗಳು ಕಟುವಾಸ್ತವವನ್ನು, ಬದುಕಿನಲ್ಲಿ ಇರಬೇಕಾದ ಬದ್ಧತೆಯೊಂದಿಗೆ ಸಮೀಕರಿಸಿ ಗಂಭೀರವಾಗಿ ಆಲೋಚಿಸುವೆಡೆ ಮೆದುಳನ್ನು ಸಕ್ರಿಯಗೊಳಿಸುತ್ತದೆ.
ವಸ್ತುಸ್ಥಿತಿಯನ್ನು ಸೊಗಸಾದ ರೂಪಕಗಳ ಮೂಲಕ ನವಿರಾದ ಭಾವದಲ್ಲಿ ಸರಳ ಪದಗಳಲ್ಲಿ ಸಾಮಾನ್ಯರಿಗೂ ಅರ್ಥವಾಗುವ ಭಾವದಲ್ಲಿ ಕವಿತೆಗೆ ಜೀವತುಂಬಿದ್ದಾರೆ.
ಕವಯತ್ರಿ ಪರಿಸರ ಪ್ರೇಮಿಯಾಗಿದ್ದು ನಿಸರ್ಗದೊಂದಿಗಿನ ಅವರ ಒಡನಾಟ ಅವರಲ್ಲಿ ಅಂತಹ ಕವಿತೆಯೊಂದು ಜನಿಸಲು ಮೂಲವಾಗಿದೆ. ಬರಹದ ಮೇಲೆ ಬಿಗಿ ಹಿಡಿತ ಸಾಧಿಸುವ ಮೂಲಕ ಸೂಕ್ಷ್ಮ ವಿಚಾರಗಳನ್ನು ಮನಮುಟ್ಟುವಂತೆ ಪ್ರಸ್ತುತಪಡಿಸುವಲ್ಲಿ ಕವಯತ್ರಿಯ ಪರಿಶ್ರಮ ಮತ್ತು ಅಭಿವ್ಯಕ್ತಿ ಅಭಿನಂದನಾರ್ಹವಾಗಿದೆ.
ಇಂತಹ ಸುಂದರ ಕವಿತೆಯೊಂದನ್ನು ನೀಡಿದ ಕವಯತ್ರಿಯ ಮಹಾಲಿಂಗ ಅವರಿಗೆ ಶುಭವಾಗಲಿ ಎಂದು ಹಾರೈಸುವೆ.
ನಿಮಗೆಲ್ಲರಿಗೂ ಈ ಒಂದು ಕವಿತೆ ಬಹಳ ಇಷ್ಟವಾಗಿದೆ ಎಂದು ಭಾವಿಸುತ್ತಾ ಮುಂದಿನ ವಾರ ಮತ್ತೊಂದು ಹೊಸ ಕವಿ ಕಾವ್ಯ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗಲಿದ್ದೇನೆ. ಅಲ್ಲಿವರಿಗೂ ಎಲ್ಲರಿಗೂ ನಮಸ್ಕಾರಗಳು.
ಅನುಸೂಯ ಯತೀಶ್

ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ