ಕರ್ನಾಟಕ 371ಜೆ. ಹೈದರಾಬಾದ್‌ ಕರ್ನಾಟಕ ಮೀಸಲಾತಿ

ವಿಶೇಷ ಲೇಖನ

ಕರ್ನಾಟಕ 371ಜೆ. ಹೈದರಾಬಾದ್‌ ಕರ್ನಾಟಕ

ಮೀಸಲಾತಿಯೂ..!

ಸಾಧಕ ಬಾಧಕಗಳೂ..!

ಕೆ.ಶಿವು.ಲಕ್ಕಣ್ಣವರ

ಕರ್ನಾಟಕ 371ಜೆ. ಹೈದರಾಬಾದ್ಕರ್ನಾಟಕ ಮೀಸಲಾತಿಯೂ..!

ಸಾಧಕ ಬಾಧಕಗಳೂ..! —

ಹೈದ್ರಾಬಾದ್ ಕರ್ನಾಟಕ ಪ್ರದೇಶವು ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು 71  ವರ್ಷಗಳಾಗುತ್ತ ಬಂದರೂ ಇಂದಿಗೂ ಅಭಿವೃದ್ಧಿ ಮರೀಚಿಕೆಯಾಗಿದೆ..!

ಈ ಭಾಗವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿ ಪೂರಕ ವಾತಾವರಣದಿಂದ ಹಿನ್ನಡೆಯನ್ನು ಅನುಭವಿಸುತ್ತಿದೆ..!

ಮೀಸಲಾತಿ ಎಂಬುದು ಒಂದು ಕಣ್ಣಗಾಯಕ್ಕೊಂದು ಕನ್ನಡಿ  —

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ 560 ಕ್ಕೂ ಹೆಚ್ಚು ರಾಜಮಹಾರಾಜರ ಸಂಸ್ಥಾನಗಳನ್ನು ಹೊಂದಿದ್ದ ಈ ದೇಶದಲ್ಲಿ ಭೌತಿಕ ಅಭಿವೃದ್ಧಿಯಾಗಲೀ, ಸಾಮಾಜಿಕ ವ್ಯವಸ್ಥೆಯಾಗಲಿ, ಸಾಂಸ್ಕøತಿಕವಾಗಿಯಾಗಲಿ, ಶೈಕ್ಷಣಿಕವಾಗಿಯಾಗಲಿ ಏಕ ರೀತಿಯಾಗಿ ಇರಲಿಲ್ಲ. ಈ ವಿಭಿನ್ನ ದೃಷ್ಟಿಕೋನದ ಭಾರತವು ಒಂದು ಮಾನದಂಡದಲ್ಲಿ ಒಂದಾಗುವದು ಭವಿಷ್ಯದ ದೃಷ್ಟಿಯಿಂದ ಅವಶ್ಯಕತೆಯಿದ್ದ ಕಾರಣ ಸಂವಿಧಾನ ನಿರ್ಮಾತೃಗಳು ಸಂವಿಧಾನ ರಚನೆ ಸಂದರ್ಭದಲ್ಲಿ ಯಾವುದೇ ರಾಜ್ಯದಲ್ಲಿ ಒಂದು ಪ್ರದೇಶ ಮತ್ತೊಂದು ಪ್ರದೇಶಕ್ಕಿಂತ ಅಭಿವೃದ್ಧಿಯಲ್ಲಿ, ಶಿಕ್ಷಣದಲ್ಲಿ ವಿಭಿನ್ನವಾಗಿದ್ದರೆ ಅಂತಹ ರಾಜ್ಯಗಳಲ್ಲಿ ಆ ಒಂದು ಪ್ರದೇಶಕ್ಕೆ ವಿಶೇಷ ಕಾನೂನು ರಚನೆ ಮಾಡುವ ಅಧಿಕಾರವನ್ನು ಸಂವಿಧಾನದ ಅನುಚ್ಛೇದ 371 ರಲ್ಲಿ ನೀಡಲಾಗಿದೆ..!

ಅದರ ಆಧಾರದಲ್ಲಿ ಈಗಾಗಲೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ, ನಾಗಾಲ್ಯಾಂಡ, ಒಡಿಸ್ಸಾ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ತ್ರಿಪುರಾ ಹಾಗೂ ಗೋವಾ ರಾಜ್ಯಗಳಿಗೆ ಅನುಚ್ಛೇದ 371 ರ ಅಡಿಯಲ್ಲಿ ವಿಶೇಷ ಕಾನೂನು ರಚಿಸಲು ಅವಕಾಶ ನೀಡಲಾಗಿದೆ..!

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮತ್ತು 1956 ರವರೆಗೆ ಹೈದ್ರಾಬಾದ್ ರಾಜ್ಯದ ಅಧೀನದಲ್ಲಿ ಇದ್ದಂತಹ ಹೈದ್ರಾಬಾದ್ ಕರ್ನಾಟಕ (ಬೀದರ, ಗುಲ್ಬರ್ಗಾ, ಯಾದಗೀರ, ರಾಯಚೂರು ಮತ್ತು ಕೊಪ್ಪಳ) ಪ್ರದೇಶ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಲಾಗಿತ್ತು..!

ಹೈದ್ರಾಬಾದ್ ಸಂಸ್ಥಾನದಲ್ಲಿ ಜಾರಿಯಲ್ಲಿದ್ದಂತಹ ಮುಲ್ಕಿ ಕಾನೂನಿನ ಸಂವಿಧಾನದ ಮಾನ್ಯತೆಯನ್ನು ಆಂಧ್ರಪ್ರದೇಶ ರಾಜ್ಯದ ತೆಲಂಗಾಣ ಪ್ರದೇಶಕ್ಕೆ 1957 ರಲ್ಲಿ ಸಂವಿಧಾನ ಅನುಚ್ಛೇದ 371(1) ರ ಅಡಿಯಲ್ಲಿ ನೀಡಲಾಗಿತ್ತು,.!

ಅದರಂತೆ, ಹೈದ್ರಾಬಾದ್ ಸಂಸ್ಥಾನದ ಭಾಗವಾಗಿದ್ದ ಇಂದಿನ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶವು ಸೇರಿದಂತೆ ವಿದರ್ಭಾ, ಕಚ್, ಸೌರಾಷ್ಟ್ರ ಪ್ರದೇಶಕ್ಕೆ ಅನುಚ್ಛೇದ 371(2) ಅಡಿಯಲ್ಲಿ ಮುಲ್ಕಿ ಕಾನೂನಿನ ಮಾದರಿಯಲ್ಲಿ ವಿಶೇಷ ಕಾನೂನು ರಚನೆ ಅಧಿಕಾರ ನೀಡಲಾಗಿದೆ.

ಆದರೆ, 1956 ರಲ್ಲಿ ಮೈಸೂರು ರಾಜ್ಯವನ್ನು ಸೇರಿದ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಮುಲ್ಕಿ ಕಾನೂನಿನ ಸೌಲಭ್ಯ ಸಿಗಲಿಲ್ಲವಾದ್ದರಿಂದ ಈಗ ಅನುಚ್ಛೇದ 371ಜೆ ಅಡಿಯಲ್ಲಿ ಮುಲ್ಕಿ ಕಾನೂನಿನ ಸೌಲಭ್ಯವನ್ನು ವಿಶೇಷವಾಗಿ ಕಾನೂನು ಮೂಲಕ ರಚಿಸಲು ಅವಕಾಶ ನೀಡಲಾಗಿದೆ..!

ಹೈದ್ರಾಬಾದ್ ಕರ್ನಾಟಕ ಪ್ರದೇಶವು ಈಗ ಆರು ಜಿಲ್ಲೆಗಳನ್ನೊಳಗೊಂಡ ಕಂದಾಯ ವಿಭಾಗವಾಗಿದ್ದು, ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು 70 ವರ್ಷಗಳಾಗುತ್ತ ಬಂದರೂ ಇಂದಿಗೂ ಅಭಿವೃದ್ದಿ ಮರೀಚಿಕೆಯಾಗಿದೆ..!

ಈ ಭಾಗವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿ ಪೂರಕ ವಾತಾವರಣದಿಂದ ಹಿನ್ನಡೆ ಅನುಭವಿಸಿದೆ..! ಎನ್.ಧರ್ಮಸಿಂಗ ಮುಖ್ಯ ಮಂತ್ರಿಯಾಗುವವರೆಗೆ ಹೈದ್ರಾಬಾದ್ — ಕರ್ನಾಟಕ ಪ್ರದೇಶದಲ್ಲಿ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು, ಸರಕಾರಿ ಇಂಜಿನಿಯರಿಂಗ್ ಕಾಲೇಜು ಇರಲಿಲ್ಲ..!

ಇಂದಿಗೂ ಇಡೀ ಪ್ರದೇಶದಲ್ಲಿ ಒಂದೇ ಒಂದು ಕಾನೂನು ಮಹಾವಿದ್ಯಾಲಯವಿಲ್ಲ, ಯಾವುದೇ ವೃತ್ತಿಪರ ತಾಂತ್ರಿಕ ಅಥವಾ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳಿಲ್ಲ..!

2011 ರವರೆಗೆ ಕೇವಲ ಒಂದೇ ವಿಶ್ವವಿದ್ಯಾಲಯ ಅದೂ ಗುಲ್ಬರ್ಗಾ ವಿಶ್ವವಿದ್ಯಾಲಯ ಈ ಭಾಗದ ಉನ್ನತ ಶಿಕ್ಷಣ ಪೂರೈಸುವ ಸಂಸ್ಥೆಯಾಗಿತ್ತು. 2015 ರವರೆಗೆ ಈ ಭಾಗದಲ್ಲಿ ಇರುವ ಪದವಿ ಮಹಾವಿದ್ಯಾಲಯಗಳಲ್ಲಿ ಶೇಕಡಾ 50 ರಷ್ಟು ಹುದ್ದೆಗಳು ಖಾಲಿ ಇದ್ದವು..!

ಗ್ರಾಮೀಣ ಭಾಗದ ಯಾವ ಪದವಿ ಪೂರ್ವ ಕಾಲೇಜುಗಳಲ್ಲಿಯೂ ಇಂದಿಗೂ ಪೂರ್ಣ ಪ್ರಮಾಣದ ಉಪನ್ಯಾಸಕರಿಲ್ಲ. 371ಜೆ ಕಾನೂನು ಜಾರಿಯಾಗಿ ಆರು ವರ್ಷವಾದರೂ ಹೈದ್ರಾಬಾದ್ — ಕರ್ನಾಟಕ ಪ್ರದೇಶದಲ್ಲಿ 12,000 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ, 2000 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ವ್ಯವಸ್ಥೆ ಇದ್ದೂ ಇಲ್ಲದಂತಾಗಿರುವದು ಈ ಭಾಗದ ದುರಂತವೇ ಸರಿ ಎನ್ನಬಹುದು..!

ಇಂತಹ ವ್ಯವಸ್ಥೆಯಲ್ಲಿ ಓದಿದಂತಹ ಈ ಭಾಗದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವ ರೀತಿಯಲ್ಲಿ ಭಾಗವಹಿಸಲು ಸಾಧ್ಯ.!?

ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇರುವಂತಹ ಬಡತನ, ನಿರುದ್ಯೋಗ ಮತ್ತು ಉದ್ಯೋಗ ಅವಕಾಶ ಇಲ್ಲದಿರುವ ಕಾರಣದಿಂದ ಬಹುತೇಕ ಗ್ರಾಮೀಣ ಭಾಗದ ಜನ ಪ್ರತಿವರ್ಷ ಮಹಾನಗರಗಳಿಗೆ ಕುಟುಂಬ ಸಮೇತ ಗುಳೆ ಹೋಗುವ ಪರಿಸ್ಥಿತಿಯೂ ಇದೆ..!

ಈ ಗುಳೆ ಹೋಗುವ ಕಾರಣಕ್ಕೆ ತಮ್ಮ ಜೊತೆಗೆ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದರಿಂದ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ, ಶಾಲೆಯಿಂದ ಹೊರಗುಳಿದ ಮಕ್ಕಳು, ಉನ್ನತ ಶಿಕ್ಷಣದಿಂದ ವಂಚಿತರಾಗುವ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತ ಬಂದಿದೆ..!

ಇತ್ತೀಚಿಗೆ ಬಂದ 2018-19 ನೇ ಸಾಲಿನ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವರದಿಯ ಪ್ರಕಾರ ದೇಶದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಅನುಪಾತ (Gross Enrollment Ratio) ಶೇಕಡಾ 26.3 ರಷ್ಟಿದೆ, ರಾಜ್ಯದ ಉಲ್ಲೇಖ ಸರಾಸರಿ ಅನುಪಾತ ಶೇಕಡಾ 28.2 ರಷ್ಟಿದೆ..!

ಅದೇರೀತಿ ಹೈದ್ರಾಬಾದ್ ಕರ್ನಾಟಕದ ಈ ಆರು ಜಿಲ್ಲೆಗಳ ಉಲ್ಲೇಖ ಕೇವಲ ಶೇಕಡಾ 10.14 ಎಂದು ವರದಿಯಾಗಿದೆ..! ಅದರಲ್ಲಿಯೂ ಯಾದಗೀರಿ ಜಿಲ್ಲೆಯ ಉಲ್ಲೇಖ ರಾಷ್ಟ್ರಮಟ್ಟದಲ್ಲಿಯೇ ಅತ್ಯಂತ ಕಡಿಮೆ ಅಂದರೆ ಕೇವಲ ಶೇಕಡಾ 4.07 ಇರುವುದು ಸರಕಾರದ ನಡೆಗೆ ಹಿಡಿದ ಕನ್ನಡಿಯಾಗಿದೆ..!

ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾನವ ಆರೋಗ್ಯ ಮತ್ತು ಪಶು ಆರೋಗ್ಯ ಸೇವೆಗಳ ಪರಿಸ್ಥಿತಿ ಭಿನ್ನವಾಗಿಲ್ಲ..! ಕನಿಷ್ಠ ತಾಲ್ಲೂಕು ಆಸ್ಪತ್ರೆಯಲ್ಲಿಯೂ ಕೂಡ ವೈದ್ಯರಿಲ್ಲದ ಪರಿಸ್ಥಿತಿಯಿದೆ..!

ಗ್ರಾಮೀಣ ಭಾಗದಲ್ಲಿ ಸ್ಟಾಫ್ ನರ್ಸ್‍ಗಳೇ ವೈದ್ಯರಾಗಿ ಸೇವೆ ಸಲ್ಲಿಸುವಂತಹ ಪರಿಸ್ಥಿತಿಯಿದೆ. ಒಟ್ಟಾರೆಯಾಗಿ ಆರೋಗ್ಯ ಸೇವೆ ಅತ್ಯಂತ ಕೆಳಮಟ್ಟದಲ್ಲಿವೆ ಎಂದು ಹಲವಾರು ವರದಿಗಳು ಸರಕಾರಕ್ಕೆ ಹೇಳಿವೆಯಾದರೂ ಸರಕಾರ ಯಾವುದೇ ಕ್ರಮ ಕೈಗೊಂಡಿರುವ ಉದಾಹರಣೆ ಇಲ್ಲ..!

ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಹೆರಿಗೆ ಆಸ್ಪತ್ರೆಯಿರುವುದರಿಂದ ಶೇಕಡಾ 70 ರಷ್ಟು ಹೆರಿಗೆಗಳು ಈ ಭಾಗದಲ್ಲಿ ಅಸುರಕ್ಷಿತವಾಗಿ ನಡೆಯುತ್ತಿವೆ ಎಂದೂ ಹೇಳಲಾಗಿದೆ..!

ಬಡತನ, ಅನಕ್ಷರತೆ ಕಾರಣದಿಂದ ಶೇಕಡಾ 57 ರಷ್ಟು ತಾಯಂದಿರು ಹಾಗೂ ಶೇ.65 ರಷ್ಟು ಮಕ್ಕಳು ಅಪೌಷ್ಠಿಕಾಂಶದಿಂದ ಬಳಲುತ್ತಿದ್ದಾರೆ..!

ಇಂತಹ ಸ್ಥಿತಿ ಇದ್ದಾಗಲೂ ಕರ್ನಾಟಕ ರಾಜ್ಯದ ಘನ ಸರಕಾರ ಯಾವುದೇ ದೂರದೃಷ್ಟಿಯುಳ್ಳ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಲಿಲ್ಲ..!

ಹೈದ್ರಾಬಾದ್ ಕರ್ನಾಟಕ ಪ್ರದೇಶವು ನೈಸರ್ಗಿಕವಾಗಿ ಅತ್ಯಂತ ಸಂಪದ್ಭರಿತ ಪ್ರದೇಶವಾಗಿದೆ, ಇಲ್ಲಿ ನೈಸರ್ಗಿಕವಾಗಿ ಸಿಗುವ ಖನಿಜ ಸಂಪತ್ತು ವಿಶೇಷವಾಗಿ ಕಬ್ಬಿಣದ ಅದಿರು, ತಾಮ್ರದ ಅದಿರು, ರಾಜ್ಯದಲ್ಲಿ ಚಿನ್ನದ ಅದಿರು ಸಿಗುವ ಏಕೈಕ ಗಣಿ ಪ್ರದೇಶ ಹಟ್ಟಿ ಚಿನ್ನದ ಗಣಿ, ಗುಲ್ಬರ್ಗಾ ಜಿಲ್ಲೆಯಲ್ಲಿ ಸುಣ್ಣದ ಕಲ್ಲು, ಇತ್ತೀಚಿಗೆ ಶಹಾಪುರ ತಾಲ್ಲೂಕಿನ ಗೋಗಿಯಲ್ಲಿ ಯುರೇನಿಯಂ ಅದಿರು ಸಿಗುತ್ತಿದೆ ಎನ್ನಲಾಗಿದೆ..!

ಅದೇರೀತಿ ಅತೀಹೆಚ್ಚು ನದಿಗಳು ಈ ಭಾಗದಲ್ಲಿವೆ. ಈ ಪ್ರದೇಶವು ಕೃಷ್ಣ ಮತ್ತು ಗೋದಾವರಿ ನದಿ ಪಾತ್ರ ಹೊಂದಿದ್ದು ಸಾಕಷ್ಟು ನೀರು ಪ್ರತಿವರ್ಷ ಹರಿಯುತ್ತದೆ. ಆದರೆ, ಈ ನೀರು ರೈತರ ಹೊಲಗಳಿಗೆ ಹರಿಯುವಂತಹ ಯೋಜನೆಗಳ ಕುರಿತು ರಾಜಕೀಯ ಪಕ್ಷಗಳು ಮಾತನಾಡುತ್ತಿವೆಯೋ ಹೊರತು ಕಾರ್ಯರೂಪಕ್ಕೆ ತರುವುದಿಲ್ಲ..!

ಮಳೆಗಾಲದಲ್ಲಿ ಸಾವಿರಾರು ಟಿ.ಎಂ.ಸಿ. ಅಡಿ ನೀರು ನದಿಗಳಲ್ಲಿ ಹರಿಯುವುದನ್ನು ನೋಡಿ ಯಾರಿಗಾದರೂ ಹೊಟ್ಟೆಗೆ ಬೆಂಕಿ ಬೀಳದೇ ಇರಲಿಕ್ಕೆ ಸಾಧ್ಯವಿಲ್ಲ..!

ಏಕೆಂದರೆ ರಾಜ್ಯದ ಇತರೆ ಪ್ರದೇಶದಲ್ಲಿ ಕೇವಲ ಒಂದು — ಎರಡು ಟಿ.ಎಂ.ಸಿ. ಅಡಿ ನೀರಿಗೆ ರಕ್ತಸಿಕ್ತ ಹೋರಾಟ ಮಾಡಿದ್ದನ್ನು ನೋಡಿದ್ದೇವೆ. ಕೃಷ್ಣ ಬಿ-ಸ್ಕೀಂ ಅಡಿಯಲ್ಲಿ 170 ಟಿ.ಎಂ.ಸಿ. ಅಡಿ ನೀರು ಕರ್ನಾಟಕ ರಾಜ್ಯಕ್ಕೆ ಹಂಚಿಕೆ ಮಾಡಿ ತೀರ್ಪು ಪ್ರಕಟವಾಗಿ ದಶಕವಾಗುತ್ತ ಬಂದರೂ ಅದನ್ನು ಗೆಜೆಟ್‍ನಲ್ಲಿ ಇಲ್ಲಿಯವರೆಗೂ ಪ್ರಕಟಿಸದೇ ಇರುವದರಿಂದ ಕೃಷ್ಣ ನದಿ ನೀರು ಬಳಕೆ ಮಾಡಲು ಈ ಭಾಗಕ್ಕೆ ಸಾಧ್ಯವಾಗಿಲ್ಲ..!

ರಾಜ್ಯ ಸರಕಾರ ನಿರ್ದಿಷ್ಟ ಯೋಜನೆಯೊಂದನ್ನು ರೂಪಿಸಿ ಇಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲವನ್ನೇ ಸಮರ್ಪಕವಾಗಿ ಬಳಕೆ ಮಾಡಿ ಉದ್ಯೋಗ ಸೃಷ್ಟಿ ಮಾಡಿದಲ್ಲಿ ಗುಳೆ ಹೋಗುವ ವ್ಯವಸ್ಥೆಯನ್ನು ತಡೆಯಬಹುದು, ಅದೇ ರೀತಿ ಈ ಭಾಗದಲ್ಲಿ ಲಭ್ಯವಿರುವ ನೀರನ್ನು ವಿವಿಧ ನೀರಾವರಿ ಯೋಜನೆಗಳ ಮೂಲಕ ಕಾಲಮಿತಿಯೊಳಗೆ ಪೂರ್ಣಗೊಳಿಸಿದಲ್ಲಿ ರಾಜ್ಯಕ್ಕೆ, ದೇಶಕ್ಕೆ ಆಹಾರ ಉತ್ಪಾದಿಸುವ ಕಣಜವಾಗಿ ಈ ಪ್ರದೇಶ ಬದಲಾಗುವದರ ಜೊತೆಗೇನೇ ಜನರ ಜೀವನಮಟ್ಟ ಸುಧಾರಣೆಯಾಗುವದರಲ್ಲಿ ಸಂಶಯವಿಲ್ಲ..!

ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಸರಕಾರ ಹಲವಾರು ಸರಕಾರಿ ಸೌಮ್ಯದ ಕಾರ್ಖಾನೆಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ ವಿಶೇಷವಾಗಿ ಹಟ್ಟಿ ಚಿನ್ನದ ಗಣಿ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಯರಮರಸ್ ಶಾಖೋತ್ಪನ್ನ ವಿದ್ಯುತ ಕೇಂದ್ರ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಪೂರೈಕೆ ಕೇಂದ್ರಗಳಿದ್ದು,

ಈ ಕೈಗಾರಿಕೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದರೂ ಬೇರೆ ರಾಜ್ಯ, ಬೇರೆ ಭಾಗದಿಂದ ಬಂದವರಿಗೆ ಇಲ್ಲಿ ಉದ್ಯೋಗ ನೀಡಿರುವುದರಿಂದ ಸ್ಥಳೀಯರೂ ಜಮೀನು, ನೀರು, ವಾತಾವರಣ ಕಳೆದುಕೊಂಡು ಕೂಡುವಂತಾಗಿದೆ..!

ಹಲವಾರು ಖಾಸಗಿ ಕೈಗಾರಿಕೆಗಳು ಈ ಭಾಗದಲ್ಲಿದ್ದರೂ ಅವುಗಳಲ್ಲಿಯೂ ಕೇವಲ ದಿನಗೂಲಿ ಅಥವಾ ಡಿ — ಗ್ರೂಪ್ ಹುದ್ದೆಗಳಿಗೆ ಮಾತ್ರ ಸ್ಥಳೀಯರಿಗೆ ಅದೂ ಕಡಿಮೆ ಅವಕಾಶ ನೀಡಲಾಗಿದೆ..! ಹೀಗಾಗಿಯೇ ಉದ್ಯೋಗಾವಕಾಶ ಇಲ್ಲದೇ ಸಾಕಷ್ಟು ಜನ ವಿದ್ಯಾವಂತರೂ ಸಹ ಗುಳೆ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಿದೆ..!

ಈ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಸರಕಾರಿ ಹುದ್ದೆಗಳು ಸಹ ಬೇರೆ ಭಾಗದವರ ಪಾಲಾಗಿರುವುದು ಸತ್ಯ..!

ಪ್ರಾಥಮಿಕ ಶಾಲಾಶಿಕ್ಷಕರ ಹುದ್ದೆಗಳಲ್ಲಿ ಶೇಕಡಾ 80 ರಷ್ಟು ಶಿಕ್ಷಕರು, ಪ್ರೌಢ ಶಾಲಾ ವಿಭಾಗದಲ್ಲಿ ಶೇ 51 ರಷ್ಟು ಶಿಕ್ಷಕರು, ವಿಶ್ವವಿದ್ಯಾಲಯಗಳಲ್ಲಿ ಶೇ 75 ರಷ್ಟು ಹುದ್ದೆಗಳು, ಬಹುತೇಕ ಇಲಾಖೆಗಳ ಅಧಿಕಾರಿಗಳು ಬೇರೆ ಭಾಗದವರೇ ಇಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ..!

2014 ಕ್ಕಿಂತ ಮುಂಚೆ ಕರ್ನಾಟಕ ಸರಕಾರದಿಂದ ನೇರವಾಗಿ ಕೆ.ಎ.ಎಸ್ ಪರೀಕ್ಷೆ ಬರೆದು ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ, ಸಹಾಯಕ ಆಯುಕ್ತ, ಅಪರ ಜಿಲ್ಲಾಧಿಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹೈದ್ರಾಬಾದ್ — ಕರ್ನಾಟಕ ಪ್ರದೇಶದ ಅಧಿಕಾರಿಗಳು ಕೇವಲ 19 ಜನ ಮಾತ್ರ, ಅದೇ ಸಂದರ್ಭದಲ್ಲಿ ಚಿತ್ರದುರ್ಗ ಒಂದು ಜಿಲ್ಲೆಯಿಂದ 21 ಜನ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವದು ಕಂಡುಬಂದಿದೆ..! ಅಂದರೆ, ಕಳೆದ 70 ವರ್ಷಗಳಿಂದ ಈ ಭಾಗ ಎಷ್ಟೊಂದು ನಲುಗಿ ಹೋಗಿದೆ ಎನ್ನುವದಕ್ಕೆ ಇದೊಂದು ಉದಾಹರಣೆಯೂ ಆಗಿದೆ..!

ಅದೇರೀತಿ ಕರ್ನಾಟಕ ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ ಇತ್ಯಾದಿ ಸಚಿವಾಲಯಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಸಿಬ್ಬಂದಿಗಳ ಸಂಖ್ಯೆ 3885 ಜನ, ಅದರಲ್ಲಿ ಕೇವಲ 37 ಜನ ಮಾತ್ರ ಹೈದ್ರಾಬಾದ್ — ಕರ್ನಾಟಕ ಪ್ರದೇಶದ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, ಶೇಕಡಾ 1 ಕ್ಕಿಂತ ಕಡಿಮೆ ನೌಕರರು ಹೈದ್ರಾಬಾದ್ — ಕರ್ನಾಟಕ ಭಾಗದವರು.

ಈ ಎಲ್ಲಾ ಕಾರಣಗಳಿಂದಾಗಿ ಸಂವಿಧಾನದ ಅನುಚ್ಛೇದ 371 ತಿದ್ದುಪಡಿಗಾಗಿ ಬಹುದಿನಗಳ ಕಾಲ ಸುದೀರ್ಘ ಹೋರಾಟ ನಡೆದು, ಕೊನೆಗೂ ಡಿಸೆಂಬರ್ 2012 ರಲ್ಲಿ ಅನುಚ್ಛೇದ 371 ರ ತಿದ್ದುಪಡಿಯ ಮೂಲಕ ಹೈದ್ರಾಬಾದ್ ಕರ್ನಾಟಕವನ್ನು ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲಿ ಸೇರಿಸಲಾಯಿತು..!

ಕಳೆದ ಆರು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ, ಅದರಂತೆ ಹೈದ್ರಾಬಾದ್ ಕರ್ನಾಟಕದಲ್ಲಿಯೂ ಬದಲಾವಣೆಗಳಾಗುತ್ತಿವೆ.

ಆದರೆ, ಅನುಚ್ಛೇದ 371ಜೆ ಈ ಭಾಗಕ್ಕೆ ಬಂದಿರುವ ಸಂವಿಧಾನಬದ್ದ ಹಕ್ಕು ಎನ್ನುವುದನ್ನು ಮರೆತಿರುವ ಸರಕಾರ ಮತ್ತು ನಾವು ಬಂದಷ್ಟು ಬಂತು ಪಂಚಾಮೃತವೆಂದು ಬಳಸುತ್ತಿದ್ದೇವೆ..!

ಕನಿಷ್ಠ ಒಂದು 371ಜೆ ಅರ್ಹತಾ ಪ್ರಮಾಣಪತ್ರವೂ ಸಹ ಹಕ್ಕುಬದ್ಧವಾಗಿ ಪಡೆಯಲು ಸಾಧ್ಯವಾಗದೇ ಕಚೇರಿಯಿಂದ ಕಚೇರಿಗೆ ಅಲೆಯುತ್ತ ಮೂರು — ಮೂರು ತಿಂಗಳಾದರೂ ಪಡೆಯದೇ ಕೊರಗುವಂತಾಗಿದೆ ನಮ್ಮ ಪರಿಸ್ಥಿತಿಯು.

ಇದಕ್ಕೆ ಮೂಲಕಾರಣ, ಈ ನಮ್ಮ ಭಾಗದ ವಿದ್ಯಾವಂತ ಜನ 371ಜೆ ಕಾನೂನನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿರುವುದು ಮತ್ತು ಯಾವುದೇ ಕಾನೂನು ನಮ್ಮ ದೇಶದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕೆಂದರೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದರಲ್ಲಿರುವ ಪ್ರತಿಯೊಂದು ಅಂಶವೂ ಮನವರಿಕೆ ಮಾಡಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ..!


ಕೆ.ಶಿವು.ಲಕ್ಕಣ್ಣವರ

Leave a Reply

Back To Top