ಅಂಕಣ ಸಂಗಾತಿ

ಸಕಾಲ

ಕಣ್ಣೀರಧಾರೆ

Craing girl – face detail with tear

ಜನುಮ ಜನುಮಕೂ ಅಂಟಿಕೊಂಡು ಬರುವ ಜೀವಾತ್ಮಕ್ಕೆ ಕೊಂಚ ಆಸರಿಕೆ,ಬ್ಯಾಸರಿಕೆ ಇದ್ದೆ ಇರುತ್ತದೆ. ಪಾಪ ಅದಕೂ ಮನಮಿಡಿವ ಭಾವದ ನಂಟು ಸುತ್ತಿಕೊಂಡು ತುಂತುರು ಹನಿಯಾಗಿ ಇಲ್ಲವೇ ಧುಮ್ಮಿಕ್ಕುವ ಜಲಧಾರೆಯಂತೆ ಒಮ್ಮೆಲೆ ಸ್ಫೋಟವಾಗಿ ಭಾವ ಸದೃಶದ ಲೇಪನದಲ್ಲಿ ತೊಟ್ಟಿಕ್ಕುವ ತೂತಾದ ಛಾವಣಿಯಂತೆ ಸದಾ ತನ್ನಿರುವಿಕೆಯನ್ನು ತೋರಿಸುವ ಈ ಮಂದಹಾಸದ ಮುಖಾರವಿಂದದ ಕೀಲಿ ಕೈಯೆಂದರೆ ತಪ್ಪಾಗಲಾರದು. ಸಂತೋಷಕ್ಕೂ, ದುಃಖಕ್ಕಕ್ಕೂ ಸಹಭಾಗಿ.ಅಳು ಬಂದರೆ ತಡಿಬೇಡಿ, ಕಣ್ಣೀರು ಸುರಿಸಿದರೆ ಆರೋಗ್ಯಕ್ಕೂ ಒಳಿತೆಂಬ ಭಾವ.

ನಗುವುದರಿಂದ ಆಗುವ ಲಾಭಗಳ ಬಗ್ಗೆ  ಸಾಕಷ್ಟು ಅರಿವಿದೆ.ಒಂದು ಮುಗುಳ್ನಗೆ ಸರ್ವದುಃಖದಿಂದ ಪಾರು ಮಾಡುವ ಸರಳ ಅಪಾಯ.ಆದರೆ ನಗುವಿನಂತೆ ಅಳುವು ಕೂಡ ಎಷ್ಟು ಮಹತ್ವದ್ದು  ಎಂಬುದರ ಬಗ್ಗೆ ತಿಳಿದಷ್ಟು ಆಶ್ಚರ್ಯ ಕೂಡ ಹೌದು, ಅಳುವುದೂ ಒಬ್ಬ ವ್ಯಕ್ತಿಗೆ ಕಡ್ಡಾಯ ಮತ್ತು ಮನಸ್ಸನ್ನು ಅತ್ತು ಹಗುರ ಮಾಡಿಕೊಳ್ಳುವುದು ದೇಹಕ್ಕೆ ಲಾಭ. ಆದ್ದರಿಂದ ಅಳುವುದರಿಂದ ವ್ಯಕ್ತಿಗಿರುವ ಪ್ರಯೋಜನ, ದೇಹದಿಂದ ವಿಷವನ್ನು ಹೊರಹಾಕಿದಂತೆ.ಒಬ್ಬ ವ್ಯಕ್ತಿ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಅನೇಕ ವಿಷಕಾರಿ ವಸ್ತುಗಳು ಉತ್ಪತ್ತಿಯಾಗುತ್ತದೆ.ಈ ವಿಷಕಾರಿ ಅಂಶ ದೇಹದಿಂದ ಹೊರ ಹೋಗಲು ಸಾಧ್ಯವಾಗದಿದ್ದರೆ, ಅವು ದೇಹಕ್ಕೆ ಹಾನಿಯುಂಟು ಮಾಡಬಹುದು. ಆದ್ದರಿಂದ ಅಳುವುದು ಮುಖ್ಯ.ಇದೊಂದು ವೈಜ್ಞಾನಿಕ ಕಾರಣವು ಹೌದು.

ದುಃಖ ಮನಬಿಚ್ಚಿ ಕಣ್ಣೀರಿನೊಂದಿಗೆ ಬಿಕ್ಕಳಿಸಿದಾಗ ಮನಸ್ಸು ಹಗುರವಾಗುವುದು.ದುಃಖವಾದಾಗ ಮನಸಾರೆ ಅತ್ತು ಬಿಡಬೇಕು.ಇಲ್ಲವಾದರೆ ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರತಿ ಕಣ್ಣೀರಿಗಾಗಿ ಕಂಗಳಿಗೆ  ಬೇಡುವ ಸ್ಥಿತಿ ನಿರ್ಮಾಣವಾದಿತು.ಆಗ ಅಸಹಜ ಮನೋವಿಕಾರಗಳು ಆತಂಕದ ಛಾಯೆಯಂತೆ ಕಾಡಬಹುದು.ಅದಕಾಗಿ ಕಣ್ಣೀರು ಜಾರಿ ನಿಂತ ಮೇಲೆ ಅಂದರೆ “ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿದೆ…ಎಂಬ ಹಾಡಿನಂತೆ ಅಳು ಬಂದ ಮೇಲೆ ನಿದ್ರೆ ಚೆನ್ನಾಗಿ ಬರುತ್ತದೆ ಎಂದು ಅಧ್ಯಯನವೊಂದು ಸಾಬೀತು ಪಡಿಸಿದೆ. ವಾಸ್ತವವಾಗಿ ಅಳುವುದು ವ್ಯಕ್ತಿಯನ್ನು ಸುಲಭವಾಗಿ ನಿದ್ರೆಗೆ ಜಾರುವಂತೆ ಮಾಡುತ್ತದೆ.ದುಃಖ ಹೀಗೆಲ್ಲ ಉಮ್ಮಳಿಸುತ್ತದೆಯೆಂದು ನಿರ್ಧರಿಸಲು ಸಾಧ್ಯವಿಲ್ಲ.ಮನಸ್ಸು ಘಾಸಿಗೊಂಡಾಗ ಯಾರ ಹಿಡಿತಕ್ಕೂ ಸಿಗದೆ ಕಂಗಳು ಹನಿಗಳನ್ನು ತುಂಬಿ ನಿಂತಿರುತ್ತದೆ.ಆ ಕ್ಷಣದಲ್ಲಿ ಮನಸ್ಸಿನಲ್ಲಿರುವ ಎಲ್ಲಾ ಆಲೋಚನೆ, ಚಿಂತೆನೆಗಳು ತಲ್ಲಣಗೊಂಡು ತುಟಿಕಚ್ಚಿ ಅಳುವಿನ ಕಟ್ಟೆ ಒಡೆದು ಮನಸು ದೂರ ಆಗುತ್ತವೆ. ಕಂದಮ್ಮಗಳು ಅಳು ಬಂದ ನಂತರ ನಿದ್ರೆಗೆ ಜಾರಿರುವುದನ್ನು ಬಲ್ಲೆವು.

ಒತ್ತಡದಿಂದ ಮುಕ್ತಿ ಸಿಗುವುದು.. ಯಾವುದೇ ವ್ಯಕ್ತಿ ಮಾನಸಿಕ ಒತ್ತಡದಲ್ಲಿ ಸಿಲುಕಿದಾಗಲೆಲ್ಲ ಆತ ತುಂಬಾ ನೋವನ್ನು ಅನುಭವಿಸುತ್ತಾನೆ/ಳೆ. ಈ ಸಂದರ್ಭದಲ್ಲಿ ಅಳು ಬಂದರೆ,ಮನ ಹಗುರವಾದ ಅನುಭವದತ್ತ ಜಾರುತ್ತದೆ.ವಿಜ್ಞಾನದ ಭಾಷೆಯಲ್ಲಿ ಕಣ್ಣೀರಿಗೆ ವಿಶೇಷವಾದ ಗೌರವಿದೆ. ಮನುಷ್ಯನ ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಎಂಡೊರ್ಫಿನ್ ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡಿ, ಮನುಷ್ಯನ ಮನಸ್ಥಿತಿಯನ್ನು ಸುಧಾರಿಸಲು ಅಳು ನೆರವಾಗುತ್ತದೆ.

ಕಣ್ಣುಗಳಿಗೆ ಪ್ರಯೋಜನಕಾರಿ ಕೂಡ.

ಹೆಚ್ಚುತ್ತಿರುವ ಮಾಲಿನ್ಯ ಮತ್ತು ತಂತ್ರಜ್ಞಾನದ ಬಳಕೆ ಕಣ್ಣಿಗೂ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿ ಅಳುತ್ತಾ ಇದ್ದರೆ,ಅದು ತನ್ನ ಕಣ್ಣಿನಿಂದ ಮಾಲಿನ್ಯವನ್ನು ತೆಗೆದು ಹಾಕುತ್ತದೆ ಮತ್ತು ಕಣ್ಣುಗಳನ್ನು ಸ್ವಚ್ಛ ಮಾಡುತ್ತದೆ. ಕಣ್ಣು ಹೆಚ್ಚು ಡ್ರೈ ಆಗಿರುವುದು ಉತ್ತಮವಲ್ಲ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಆದ್ದರಿಂದ ಅಳುವುದು ಮುಖ್ಯ. ಇದರಿಂದ ಕಣ್ಣುಗಳಿಗೆ ಅತ್ಯಂತ ಪ್ರಮುಖವಾದ ದ್ರವತ್ವವು ಕಣ್ಣುಗಳಲ್ಲಿ ಇರುವಂತೆ ಮಾಡುತ್ತದೆ.ಕಣ್ಣೀರು ಕಣ್ಣಿನ ಸ್ರವಿಸುವಿಕೆ, ಮತ್ತು ಹಲವುವೇಳೆ ಕಣ್ಣುಗಳ ಕೆರಳಿಕೆಗೆ ಪ್ರತಿಕ್ರಿಯೆಯಾಗಿ ಕಣ್ಣುಗಳನ್ನು ಸ್ವಚ್ಛಗೊಳಿಸುವ ಹಾಗೂ ಜಾರುವಂತೆಮಾಡುವ ಕಾರ್ಯನಿರ್ವಹಿಸುತ್ತದೆ.

ಕಣ್ಣೀರಿನ ವಿವಿಧ ರೂಪಗಳು ಮಾನವನ ವ್ಯಕ್ತಿತ್ವದ ಮೇಲೆ ಪ್ರಮುಖ ಬದಲಾವಣೆ ತರುತ್ತದೆ.ಕೇವಲ ಕಣ್ಣೀರು ದುಃಖಕ್ಕೆ ಮಾತ್ರ ಸೀಮಿತವಲ್ಲ. ಸುಖ, ಪ್ರೀತಿ, ಬೆರಗು,ಆನಂದ ಮತ್ತು ಸಂತೋಷದಂತಹ ಪ್ರಬಲ ಆಂತರಿಕ ಭಾವನೆಗಳಿಗೆ ನೇರವಾಗಿ ಸಂಬಂಧಿಸಿದೆ.  ನಗು ಅಥವಾ ಆಕಳಿಕೆಯೂ ಕಣ್ಣೀರಿನ ಉತ್ಪತ್ತಿಗೆ ಕಾರಣವಾಗಬಲ್ಲದು.ಆರೋಗ್ಯವಂತ ಸಸ್ತನಿಗಳ ಕಣ್ಣುಗಳಲ್ಲಿ, ಕಾರ್ನಿಯಾವನ್ನು ಕಣ್ಣೀರು ನಿರಂತರವಾಗಿ ಒದ್ದೆಯಾಗಿಟ್ಟು ಪೋಷಿಸುತ್ತದೆ. ಕಣ್ಣೀರು ಕಣ್ಣನ್ನು ನಯವಾಗಿಸಿ ಧೂಳಿನಿಂದ ಮುಕ್ತವಾಗಿಡಲು ನೆರವಾಗುತ್ತದೆ.ಕಣ್ಣು ಅತ್ಯಂತ ಸೂಕ್ಷ್ಮ ಪ್ರದೇಶ…ಜೀವಿಯ ಅಸ್ತಿತ್ವ ಜೀವಪರತೆ ಉಕ್ಕುವುದೇ ಕಂಗಳ ಭಾಷೆಯಿಂದ…

ಎಲ್ಲೋ ಓದಿದ ನೆನಪು..”ಕಣ್ಣೀರಿನ ದ್ರವ ನೀರು, ಮ್ಯೂಸಿನ್, ಲಿಪಿಡ್‍ಗಳು, ಲೈಸೊಜ಼ೈಮ್, ಲ್ಯಾಕ್ಟೊಫ಼ೆರಿನ್, ಲಿಪೊಕ್ಯಾಲಿನ್, ಲ್ಯಾಕ್ರಿಟಿನ್, ಗ್ಲೂಕೋಸ್, ಯೂರಿಯಾ, ಸೋಡಿಯಮ್ ಮತ್ತು ಪೊಟ್ಯಾಷಿಯಮ್ ಅನ್ನು ಹೊಂದಿರುತ್ತದೆ”. ಈ ದ್ರವದಲ್ಲಿನ ಕೆಲವು ವಸ್ತುಗಳು ರೋಗನಿರೋಧಕ ವ್ಯವಸ್ಥೆಯ ಭಾಗವಾಗಿ ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡುತ್ತವೆ. ಇದನ್ನು ಲೈಸೊಜ಼ೈಮ್ ಕೆಲವು ಬ್ಯಾಕ್ಟೀರಿಯಾವನ್ನು ಹೊಂದಿದ, ಪೆಪ್ಟಿಡೊಗ್ಲೈಕಾನ್ ಎಂದು ಕರೆಯಲ್ಪಡುವ ಹೊರಗಿನ ಲೇಪನದ ಒಂದು ಪದರವನ್ನು ಕರಗಿಸಿ ಮಾಡುತ್ತದೆ. ಸಾಮಾನ್ಯವಾಗಿ, ೨೪ ಗಂಟೆಗಳ ಅವಧಿಯಲ್ಲಿ, ೦.೭೫ ರಿಂದ ೧.೧ ಗ್ರಾಂ ಕಣ್ಣೀರು ಸ್ರವಿಕೆಯಾಗುತ್ತದೆ; ಈ ಪ್ರಮಾಣ ವಯಸ್ಸಾದಂತೆ ಕಡಿಮೆಯಾಗುತ್ತದೆಯಂತೆ.

ಈರುಳ್ಳಿ ಬಾಷ್ಪ, ಸುಗಂಧದ್ರವ್ಯಗಳು,ಮೆಣಸು ಘಾಟು ಉದ್ರೇಕಕಾರಿ ವಸ್ತುಗಳ ಉಪಸ್ಥಿತಿಯಿಂದಲೂ ಪ್ರಕಾಶ ಮಾನ ಬೆಳಕು ಮತ್ತು ನಾಲಿಗೆ ಹಾಗೂ ಬಾಯಿಗೆ ಬಿಸಿ ಅಥವಾ ಖಾರದ ಪ್ರಚೋದನೆಯಿಂದಲೂ ಕಣ್ಣೀರು ಉಂಟಾಗುತ್ತದೆ. ಕಣ್ಣೀರು ವಾಂತಿ, ಕೆಮ್ಮು ಮತ್ತು ಆಕಳಿಕೆಗೂ ಸಂಬಂಧಿಸಿದೆ. ಕಣ್ಣಿನ ಸಂಪರ್ಕಕ್ಕೆ ಬಂದ ಉದ್ರೇಕಕಾರಿಗಳನ್ನು ತೊಳೆದುಹಾಕಲು ನಿರಿಚ್ಛಾ ಕಣ್ಣೀರು ಪ್ರಯತ್ನಿಸುತ್ತದೆ.ದೈಹಿಕ ನೊವಿನಿಂದ ಅಳು ಬರುತ್ತದೆ. ಈ ಅಭ್ಯಾಸ ನಕಾರಾತ್ಮಕ ಭಾವನೆಗಳಿಗೆ ಸೀಮಿತವಾಗಿಲ್ಲ.

ಕನಿಷ್ಟಮಿತಿಯ ಕಣ್ಣೀರು,ಪ್ರತಿಕ್ರಿಯಾತ್ಮಕ ಕಣ್ಣೀರು.

ಭಾವನಾತ್ಮಕ ಕಣ್ಣೀರು,ಈ ಮೂರು ಬಗೆಯ ಕಣ್ಣೀರು ಬದುಕಿನ ಎಲ್ಲ ಕ್ಷಣದಲ್ಲಿ ತನ್ನದೇ ಆದ ಗುರುತನ್ನು ಸೃಷ್ಟಿಸಿದೆ.ಅಳುವುದಕ್ಕೆ ಕಾರಣ ಏನೇ ಆಗಿರಲಿ, ಇದೊಂದು ಪ್ರಭಾವಶಾಲಿ ಮೌನ ಭಾಷೆ. ಕಣ್ಣೀರು ನಮ್ಮನ್ನು ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತದೆ. ಉದಾಹರಣೆಗೆ, ಯಾರಾದರೂ ಕಣ್ಣೀರಿಡುವಾಗ ಅದು ಅವರು ಕಷ್ಟದಲ್ಲಿದ್ದಾರೆಂದು ನಮ್ಮನ್ನು ಎಚ್ಚರಿಸುತ್ತದೆ. ಹಾಗಾಗಿ, ಒಬ್ಬರು ದುಃಖದಿಂದ ಕಣ್ಣೀರು ಹಾಕುವಾಗ ಅದನ್ನು ನೋಡಿಯೂ ನೋಡದಂತೆ ಇರಲು ನಮ್ಮಲ್ಲಿ ಅನೇಕರಿಗೆ ಕಷ್ಟ. ಆದ್ದರಿಂದ ನಾವು ಅಳುತ್ತಿರುವವರಿಗೆ ಸಾಂತ್ವನ ನೀಡುತ್ತೇವೆ ಅಥವಾ ನೆರವಾಗುತ್ತೇವೆ.

85℅ ಶೇಕಡಾ ಸ್ತ್ರೀಯರು ಮತ್ತು 73 ℅  ಶೇಕಡಾ ಪುರುಷರು ಅತ್ತ ನಂತರ ಮನಸ್ಸು ಹಗುರವಾಗುತ್ತದೆ ಎಂದು ಸಮೀಕ್ಷೆಯ ವರದಿ ತಿಳಿಸುತ್ತದೆ. “ಕೆಲವೊಮ್ಮೆ ನಾನು ಅಳಬೇಕೆಂದು ನನಗನಿಸುತ್ತದೆ. ಅತ್ತ ನಂತರ ನನಗೆ ನಿರಾಳ ಅನಿಸುತ್ತದೆ, ವಿಷಯಗಳನ್ನು ಸ್ಪಷ್ಟವಾಗಿ ಸರಿಯಾದ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗುತ್ತದೆ” ಎಂದು ನವೋಮಿ ತಿಳಿಸುತ್ತಾರೆ.

ಈ ನಿರಾಳ ಅನಿಸಿಕೆ ಕೇವಲ ಅಳುವುದರ ಮೇಲೆಯೇ ಹೊಂದಿಕೊಂಡಿಲ್ಲ. ನಾವು ಅತ್ತಾಗ ಇತರರು ಪ್ರತಿಕ್ರಿಯಿಸುವ  ರೀತಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ, ನಾವು ಕಣ್ಣೀರು ಹಾಕಿದಾಗ ಇತರರು ಸಾಂತ್ವನ ಅಥವಾ ಸಹಾಯ ನೀಡುವುದಾದರೆ ನಮಗೆ ನಿರಾಳ ಅನಿಸುತ್ತದೆ. ಆದರೆ, ನಾವು ಕಣ್ಣೀರಿಟ್ಟಾಗ ಇತರರು ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ಮುಜುಗರವಾಗಬಹುದು ಅಥವಾ ನಿರ್ಲಕ್ಷ್ಯಮಾಡುತ್ತಿದ್ದಾರೆಂದು ಅನಿಸಬಹುದು.

ಕಣ್ಣೀರ ಹಿಂದಿರುವ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಆದರೆ ನಮಗೆ ಗೊತ್ತಿರುವುದಿಷ್ಟೇ, ಕಣ್ಣೀರಧಾರೆ ಸುರಿಸುವುದು ದೇವರು ಕೊಟ್ಟಿರುವ ಒಂದು ಕುತೂಹಲಕಾರಿ ಭಾವನಾತ್ಮಕ ಪ್ರತಿಕ್ರಿಯೆ


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

7 thoughts on “

  1. ತುಂಬಾ ಉಪಯುಕ್ತ ಲೇಖನ ರೀ ಮೇಡಂ.ಇಷ್ಟೊಂದು ವೈಜ್ಞಾನಿಕ ಸತ್ಯವೂ ತಿಳಿದವು.

  2. ಅಂಕಣ ತುಂಬಾ ಚೆನ್ನಾಗಿ ಮೂಡಿಬಂದಿದೆ…. ಅಷ್ಟೇ ಅರ್ಥಪೂರ್ಣವಾಗಿದೆ…. ಅಭಿನಂದನೆಗಳು ಮೇಡಮ್…..

Leave a Reply

Back To Top