ಕಾವ್ಯ ಸಂಗಾತಿ
ಬಿತ್ತನೆ
ಬಾಗೇಪಲ್ಲಿ
ದೂರದೆತ್ತರದ ತಂಪಿನೆಡೆಯಲಿ ಕುಳಿತು
ಸೂರ್ಯಾಸ್ತ ಸೌಂದರ್ಯವ ಸವಿಯುತಿರೆ
ಸಂಧ್ಯಾ ಕಾಲ ರಾಜ್ಯವಾಳಲು ಹಿಂಜರಿಯುವಂತೆ ತೋರೆ
ಕೆಲಸದ ವೇಳೆ ಎಂಬುದಂತೂ ಮುಗಿದಿದ್ದು
ಕತ್ತಲೆಯ ನೆರಳು ಭೂಮಿಯಾವರಿಸುವ ತವಕದಲಿತ್ತು.
ಹೀಗಿರೆ!
ಬಯಲಲಿ ಉಳುತಿದ್ದ ಯೋಗಿಗೆ ಸುತ್ತಲ ವಿದ್ಯಮಾನದ ಪರಿವೆ ಇರಲಿಲ್ಲ
ಸಾವಧಾನದಿ ನಡುವಿಗೆ ಸಿಗಿಸಿದ ಬೊಂತೆಯೊಂದಿಗೆ ಉಳುತಿದ್ದ.
ಆತ ಉತ್ತ ಜಾಡಿಗಿಂತ ಆತನ ನೆರಳಿನಾಕೃತಿ ನೆಲದಿ ವಿಜೃಂಭಿಸಿತ್ತು.
ನನ್ನನು ಪರಮಾಶ್ಚರ್ಯ ರೋಮಾಂಚನಂಗಳಿಗೆ ದೂಡಿತ್ತು
ಉತ್ತಿದಾಕ್ಷಣದ ಕರ್ತವ್ಯ ಆತನದು ಬಿತ್ತುವುದಾಗಿತ್ತು
ಕರಗಳು ನೇಗಿಲು ಬೊಂತೆಯೊಳಗಿನ ಕಾಳು ಎರಡರ ಮಧ್ಯೆ ಜೀಕಿತ್ತು.
ಫಸಲು ಪಡೆವುದು ದೂರವಿಹುದು ಅನಿಶ್ಚಿತವೂ
ಅದನರಿತು ದಣಿವು ಸಹಿಸಿ
ಅತ್ತಿಂದೊಮ್ಮೆ ಇತ್ತಿಂದೊಮ್ಮೆ ಭೂಮಿಯ ಸೀಳುತ
ಮುತ್ತನು ಹೋಲ್ವ ಕಾಳನು
ಬಿತ್ತುತಲಿದ್ದನಾತ.
ಕೃಷಿ ದೇವತೆಯ ಮಾತೃತ್ವದ ಕನಿಕರವೇನೋ! ಕತ್ತಲು ಆವರಿಸಲು ‘ಆರಂಭಿ’ಸಿತು
ಗೈಯ್ವುದ ನಿಲ್ಲಿಸಿ ಹಿಂದುರುಗಲು ‘ಆರಂಭಿ’ಸಿದ
ಆತನ ಆಗಿನ ಅರೆಬೆತ್ತಲ ಮೈ ಚರ್ಯೆ
ಕಾಯಕತತ್ವ ಮುಗಿಲಿಗಿಂತ ಮಿಗಿಲೆಂದು ಸಾರಿದಂತಿತ್ತು
(ನಮ್ಮಕಡೆ ವ್ಯವಸಾಯವನು ಆರಂಭ ಎಂತಲೂ ಕರೆಯುವರು)