ಸ್ವಾತ್ಮಗತ

ಪಾಟೀಲ್ ಪುಟ್ಟಪ್ಪನವರಿಗೆ ನೂರರ ಸಂಭ್ರಮ

ಕೆ.ಶಿವುಲಕ್ಕಣ್ಣವರ

ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತ, ಪತ್ರಿಕೋದ್ಯಮ ಭೀಷ್ಮ ನಾಡೋಜ ಡಾ.ಪಾಟೀಲ ಪುಟ್ಟಪ್ಪರಿಗೆ ನೂರಾರ ಸಂಭ್ರಮ..!

ಪಾಟೀಲ ಪುಟ್ಟಪ್ಪರು 1921ರಿಂದ ಪತ್ರಿಕೋದ್ಯಮವನ್ನು ಕನ್ನಡ ಪರ ಹೋರಾಟಕ್ಕೆ ದುಡಿಸಿಕೊಳ್ಳುತ್ತಿರುವ ಧೀಮಂತ. ಪಾಟೀಲ ಪುಟ್ಟಪ್ಪನವರು ಹುಟ್ಟಿದ್ದು 1921ರಲ್ಲಿ. ಈಗಿನ ಹಾವೇರಿ ಜಿಲ್ಲೆಯ ಕುರುಬಗೊಂಡದಲ್ಲಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ…

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಅಪರೂಪದ ಪ್ರತಿಭಾವಂತ ಪಾಪು. ಸ್ವಾತಂತ್ರ್ಯ ಬರುವುದಕ್ಕೆ ಒಂದು ವರ್ಷ ಮೊದಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಪಾಪು, ಬರಹಗಳು ಅಂದೂ ಸಿಡಿಗುಂಡು, ಇಂದೂ ಸಿಡಿಗುಂಡು. 1946ರಲ್ಲಿ ವಿಶಾಲ ಕರ್ನಾಟಕ ಸಾಪ್ತಾಹಿಕಕ್ಕೆ ಸಂಪಾದಕರಾದ ಅವರು ಅದೇ ಪತ್ರಿಕೆಯನ್ನು 1947ರಲ್ಲಿ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ದಿನಪತ್ರಿಕೆಯನ್ನಾಗಿ ಮಾಡಿದರು. ಆದರೆ ಪುಟ್ಟಪ್ಪನವರ ಪ್ರತಿಭೆಯ ದರ್ಶನ ಸಾರ್ಥಕ ರೀತಿಯಲ್ಲಿ ಆಗಿದ್ದು 1954ರಲ್ಲಿ ಅವರು ಪ್ರಪಂಚ ಸಾಪ್ತಾಹಿಕವನ್ನು ಆರಂಭಿಸಿದ ಬಳಿಕವೇ. ಹಲವು ಅಂಕಣಗಳ ಮೂಲಕ ಅವರು ನೀಡುತ್ತಿದ್ದ ಜ್ಞಾನದಾಸೋಹ ಆ ಸಾಪ್ತಾಹಿಕವನ್ನು ಬೌದ್ಧಿಕ ವಲಯದಲ್ಲಿ ಜನಪ್ರಿಯವನ್ನಾಗಿಸಿತು. 1959ರಲ್ಲಿ ಅವರು ವಿಶ್ವವಾಣಿ ದೈನಿಕವನ್ನು ಆರಂಭಿಸಿದರು. ಬರಹ-ಭಾಷಣ ಪಾಪು ಅವರ ಎರಡು ಪ್ರಮುಖ ಅಸ್ತ್ರಗಳು. ಕನ್ನಡ ಭಾಷೆ, ಕರ್ನಾಟಕದ ಗಡಿ, ಕನ್ನಡಿಗರ ಹಿತ-ಈ ಮೂರಕ್ಕೆ ಧಕ್ಕೆ ಎದುರಾಗುತ್ತಿದೆ ಎನಿಸಿದಾಗಲೂ ಪಾಪು ಗುಡುಗಿದ್ದಾರೆ. ಅನ್ಯಾಯಕ್ಕೆ ಕಾರಣರಾದವರನ್ನು ಅವರು ಎಷ್ಟೇ ದೊಡ್ಡವರಿರಲಿ-ಪಾಪು ಗುಡಿಸಿಹಾಕಿದ್ದಾರೆ. ಹರಿತ ಬರಹ, ಚುರುಕು ನಾಲಗೆಯ ಚಾಟಿ ಏಟಿನ ಮೂಲಕ ಪಾಪು, ಕರ್ನಾಟಕದ ಎಷ್ಟೋ ರಾಜಕಾರಣಿಗಳ ನಿದ್ದೆಯನ್ನೂ ನೆಮ್ಮದಿಯನ್ನೂ ಕೆಡಿಸಿದ್ದಾರೆ…

ಪಾಪು ಅವರನ್ನು ಪತ್ರಿಕೋದ್ಯಮಿ ಎಂದು ಕರೆದರೆ ಅವರನ್ನು ಪೂರ್ಣವಾಗಿ ಅರ್ಥಮಾಡಿಕೊಂಡಂತೆ ಆಗುವುದಿಲ್ಲ. ಅವರು ಮೂಲತಃ ಅವಿರತ ಹೋರಾಟಗಾರ. ಪಾಪು ಅವರಿಗೆ ಬರಹ ಎನ್ನುವುದು ಪಾದರಸ ಚಟುವಟಿಕೆ. ತಮ್ಮದೇ ಪತ್ರಿಕೆಗಳಿಗೆ ಪ್ರತಿನಿತ್ಯ. ಪ್ರತಿವಾರ ಬರೆಯುವುದು ಒಂದು.ಇತರ ನಿಯತಕಾಲಿಕಗಳಿಗೆ, ದೈನಿಕಗಳಿಗೆ ಅಂಕಣ ಬರೆಯುವುದು ಇನ್ನೊಂದು. ಆದರೆ ಬರಹದ ತಂತು ಒಂದೇ ಅದು ಕನ್ನಡಪರ ಕಾಳಜಿ. ಕರ್ನಾಟಕ ಏಕೀಕರಣ, ಆಂದೋಳನ, ಗೋಕಾಕ ಚಳವಳಿ, ಕರ್ನಾಟಕ-ಮಹಾರಾಷ್ಟ್ರ ಗಡಿ ತಂಟೆ-ಹೀಗೆ ಹತ್ತು-ಹಲವು ಯಾವುದೇ ವಿಚಾರವಿರಲಿ ಅಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಕತ್ತಿ ಝಳಪಿಸಿದವರು ಪಾಪು. ರಾಜ್ಯಸಭೆ (1962ರಿಂದ 75ರವರೆಗೆ) ಸದಸ್ಯರಾಗಿದ್ದಾಗಲೂ ಅವರು ಅದೇ ಪಾಪು; ಅದೇ ಛಾಪು…

ಕರ್ನಾಟಕಕ್ಕೆ ಆಗಿರುವ, ಆಗುತ್ತಿರುವ ಅನ್ಯಾಯಗಳತ್ತ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯುವ ನಿರ್ಣಾಯಕ ಪಾತ್ರವನ್ನು ಅವರು ಆಗ ನಿರ್ವಹಿಸಿದರು. ಮತ್ತು ಈ 100ರ ಹೊಸ್ತಲಲ್ಲಿದರೂ ಹಾಗೇ ಕನ್ನಡ ಪರವಾಗಿ ಕನ್ನಡ ಪರ ಮತ್ತು ಕರ್ನಾಟಕ ಪರ ಅದೇ ಜವಾಬ್ದಾರಿ ಹೊತ್ತವರು…

ವಿಶ್ವದ ಹತ್ತಾರು ದೇಶಗಳಿಗೆ ಭೇಟಿ ನೀಡಿ ಉಪನ್ಯಾಸ, ಭಾಷಣಗಳ ಮೂಲಕ ಭಾರತವನ್ನು ಆ ಮೂಲಕ ಕರ್ನಾಟಕವನ್ನು ದರ್ಶನ ಮಾಡಿಸಿದ ಹಿರಿಮೆ ಅವರದು. ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ ಮುಂದಿನ ಪೀಳಿಗೆಗೆ ಕನ್ನಡ, ಕರ್ನಾಟಕ ಕುರಿತಂತೆ ಅಧ್ಯಯನ ವಸ್ತು, ಆಕರ ಸಾಮಗ್ರಿ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಸೆನೆಟ್‍ಗೂ ಸದಸ್ಯರಾಗಿದ್ದ ಪಾಪು, ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮೂರ್ನಾಲ್ಕು ದಶಕಗಳಿಗೂ ಹೆಚ್ಚು ಅವಧಿಗೆ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಪಾಪು.
ನನ್ನದು ಈ ನಾಡು, ನಮ್ಮದು ಈ ಭರತಭೂಮಿ, ಸೋವಿಯತ್ ದೇಶ ಕಂಡೆ, ಸಾವಿನ ಮೇಜವಾನಿ ಮತ್ತಿತರ ಸಣ್ಣ ಕಥೆಗಳು, ಬದುಕುವ ಮಾತು (2 ಸಂಪುಟ) ಪಾಪು ಪ್ರಪಂಚ (4 ಸಂಪುಟ) ಪಾಪು (ಪ್ರಕಟಿಸಿರುವ ಕೃತಿಗಳು) ಇನ್ನಿತರ ಕೃತಿಗಳನ್ನು ರಚಿಸಿದ್ದಾರೆ ಪಾಪು…

ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಪ್ರಮುಖರನೇಕರಲ್ಲಿ ಪಾಪು ಸಹ ಒಬ್ಬರು. ಕನ್ನಡದ ಪಾರಮ್ಯಕ್ಕಾಗಿ ನಡೆದ ಗೋಕಾಕ್ ಚಳವಳಿಯಲ್ಲಿ ಅವರದು ಮುಂಚೂಣಿಯ ಪಾತ್ರ. ಗೊಂದಲ, ಗೋಜಲು ಇಲ್ಲದ ಸರಳ, ನೇರ ವಾಕ್ಯ ರಚನೆ ಅವರ ಅಗ್ಗಳಿಕೆಗಳಲ್ಲಿ ಒಂದು. ಈ ಮಾತಿಗೆ ಜ್ವಲಂತ ನಿದರ್ಶನ ಪ್ರಪಂಚ ಸಾಪ್ತಾಹಿಕದಲ್ಲಿ ಅವರು ಪ್ರತಿವಾರವೂ ಬರೆಯುತ್ತಿದ್ದ ವ್ಯಕ್ತಿ ಪರಿಚಯ ಅಂಕಣ. ಒಂದು ಅವಧಿಗೆ ರಾಜ್ಯ ಸಭೆ ಸದಸ್ಯರಾಗಿ, ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆ ನಿಸ್ಸಂಶಯದಾಗಿ ಅನನ್ಯ. ರಾಜ್ಯೋತ್ಸವ ಪ್ರಶಸ್ತಿ (1976) ಕರ್ನಾಟಕ ವಿಶ್ವವಿದ್ಯಾನಿಲಯ ಡಿಲಿಟ್ ಪತ್ರಿಕಾ ಅಕಾಡೆಮಿ ಪ್ರಶಸ್ತಿ (1993), ಹಂಪಿ ಕನ್ನಡ ವಿಶ್ವವಿದ್ಯಾನಿಲಯ ನಾಡೋಜ ಪ್ರಶಸ್ತಿ (1996) ಪಡೆದಿರುವ ಪಾಪು ಅವರನ್ನು ನಾಡಿನ ಹೊರನಾಡಿನ ಬಹುತೇಕ ಎಲ್ಲೂ ಕನ್ನಡ ಹಾಗೂ ಕನ್ನಡಪರ ಸಂಘಟನೆಗಳೂ ಗೌರವಿಸಿವೆ. ಕನ್ನಡ ಪತ್ರಿಕೋದ್ಯಮದಲ್ಲಿ ಅಪರಿಮಿತ ಸಾಧನೆ ಮಾಡಿದ ಪರ್ತಕರ್ತರನ್ನು ಗೌರವಿಸುವ ದೃಷ್ಟಿಯಿಂದ ಆರಂಭವಾದ ಟಿಯೆಸ್ಸಾರ್ ಪ್ರಶಸ್ತಿಗೆ (1994) ಆಯ್ಕೆಯಾದವರಲ್ಲಿ ಪಾಪು ಮೊದಲಿಗರು…

ಹೀಗೆಯೇ ಕನ್ನಡ, ಕರ್ನಾಟಕ ಕಂಡ ಧೀಮಂತ ಪತ್ರಕರ್ತ, ಪತ್ರಿಕೋದ್ಯಮಿ, ಬರಹಗಾರ, ಕನ್ನಡ-ಕರ್ನಾಟಕದ ಧ್ವನಿ ಡಾ.ಪಾಟೀಲ ಪುಟ್ಟಪ್ಪನವರಿಗೆ ಈಗ ನೂರರ ಸಂಭ್ರಮ…

ಇದೋ ಅವರಿಗೆ ಅನಂತಾನಂತ ಹಾರೈಕೆಗಳು…

****************

Leave a Reply

Back To Top