ಅಂಕಣ ಸಂಗಾತಿ
ಸಕಾಲ
ನಿರ್ಲಿಪ್ತ-ನಿರ್ಭಾವುಕತೆಯ
ಅವಿನಾಭಾವಸಂಬಂಧ.
ಮನುಷ್ಯನ ಬಯಕೆಗಳು ಅಥವಾ ಭಾವನೆಗಳು ಎಂತಹ ಕ್ಷಣದಲ್ಲಾದರೂ,ಚಿತ್ರ,ವಿಚಿತ್ರ ನಡೆಗಳಿಂದ ಭಾವುಕ ಪ್ರಪಂಚದಿಂದ ಹಿಂಜರಿಯಬಹುದು.ಒಂದು ಹಂತಕ್ಕೆ ಎಲ್ಲವೂ ಅಮೂಲ್ಯವೇ.ಹಣ,ಆಸ್ತಿ,ಪಾಸ್ತಿ ಹಾಗೂ ಪ್ರಪಂಚದ ಎಲ್ಲ ಸುಖಬೇಕೆನ್ನುವ ಆತುರದಿ ಮುನ್ನುಗ್ಗುವ ಪ್ರತಿಯೊಬ್ಬರ ಗುರಿ ತಾನು ಎಲ್ಲರಿಗಿಂತ ಖುಷಿಯಾಗಿರಬೇಕು ಹಾಗೂ ಭಿನ್ನವಾಗಿರಬೇಕು. ಅದರ ತೀವ್ರತೆಯ ಮಟ್ಟ ಯಾವ ಆಣೆಕಟ್ಟಿನ ಹುಮ್ಮಸ್ಸಿಗಿಂತ ಕಡಿಮೆಯಿರುವುದಿಲ್ಲ,ಹಿಡಿದಿಟ್ಟ ಜಲಾಶಯದ ಒತ್ತಡಕ್ಕೆ ಮಣಿದು ಧುಮುಕುವ ಜಲಧಾರೆ ಹಾಲ್ನೋರೆಯಾದರೆ,ಇನ್ನೊಂದು ಕ್ಷಣಕೆ ಜಲಪ್ರಳಯವಾಗಬಹುದು.ಆಗ ಕಾಣುವ ಭಾವ ಇನ್ನೇನುಳಿದಿದೆ ಜೀವನದಲ್ಲಿ. ನಿರ್ಲಿಪ್ತ ಮನೋಭಾವ ತಾಳುವುದು ಸಹಜವಾದರೂ,ಅದರ ಒಳನಿಲುವು ಚಿಂತನಾರ್ಹ.
ನಿರ್ಲಿಪ್ತರಾಗುವುದು ಎಂದರೆ ಕಾವಿ ತೊಟ್ಟು ಮನೆ ಬಿಟ್ಟು ಹೊರಡುವುದೆಂದು, ಸಂಸಾರ ತ್ಯಜಿಸಿ ಅಲೆಯುತ್ತಾ ಇರುವುದು, ಹಿಮಾಲಯ, ಗುಹೆ, ಕಾನನ ಇನ್ನೆಲ್ಲೋ ಏಕಾಂತದಲ್ಲಿ ಕೂರುವುದೆಂದು ತಮ್ಮಷ್ಟಕ್ಕೆ ತಾವೇ ಏನೇನೊ ಕಲ್ಪಿಸಿಕೊಳ್ಳತೊಡಗುತ್ತಾರೆ.ಆದರೆ ಈ ಎಲ್ಲವೂ ಕೇವಲ ತಪ್ಪು ಕಲ್ಪನೆಗಳಷ್ಟೆ.ಎಲ್ಲವೂ ಶೂನ್ಯವೆಂದರೆ ಮುಗಿಯದು,ಅವುಗಳಿಂದ ನಿರ್ಲಿಪ್ತರಾಗುವುದು.ವಿಚಿತ್ರವಾದರೂ ಈ ಭಾವಕೆ ಬೆಲೆ ಜಾಸ್ತಿ. ನಿರ್ಲಿಪ್ತತೆ ಎನ್ನುವುದು ಮನುಷ್ಯನ ಒಂದು ಅತ್ಯುತ್ತಮ ಅವಸ್ಥೆಯಾಗಿದ್ದು,ಅದೊಂದು ಅಗೋಚರ ಪ್ರಪಂಚದಲ್ಲಿ ಮಗ್ನರಾಗುವ ಸಂಕಲ್ಪವಾಗಿದೆ.
ನಿರ್ಲಿಪ್ತರಾಗಿರಲಿಕ್ಕೆ ಅಥವಾ ವೈರಾಗಿಯಾಗಿರಲು ಮನೆಯನ್ನು, ಉದ್ಯೋಗವನ್ನು ತೊರೆದು ಹೋಗಬೇಕಿಲ್ಲ,ಬದಲಿಗೆ ಈ ಅವಸ್ಥೆಯು ನಿಮಗೆ ಇನ್ನೂ ಹೆಚ್ಚಿನ ಸಂತೋಷ, ಶಾಂತಿ, ನೆಮ್ಮದಿ ಹಾಗೂ ಸವಲತ್ತುಗಳನ್ನು ಒದಗಿಸಿಕೊಡಬಲ್ಲದು ಎಂಬುದನ್ನು ಮನಗಾಣಬೇಕು. ಹಣಕ್ಕಾಗಿ ಅಲ್ಲದೆ ಮಾನವೀಯತೆ ದೃಷ್ಟಿಯಿಂದ ಹಾಗೂ ಸೇವೆಯ ದೃಷ್ಟಿಯಿಂದ ಕೆಲಸ ಮಾಡುವಂಥವರು ನಮ್ಮ ನಡುವೆ ಸಿಗುತ್ತಾರೆ. ಹಣ, ಖ್ಯಾತಿ ಮೊದಲಾದವುಗಳು ಅಂಥವರನ್ನು ಸಹಜವಾಗಿ ಅರಸಿಕೊಂಡು ಬರುತ್ತವೆ. ನೀವು ಭೌತಿಕ ವಸ್ತುಗಳ ಹಿಂದೆ ಓಡುತ್ತಲೆ ಇದ್ದರೆ ಅದು ನಿಮ್ಮನ್ನು ಕಾಡಿಸುತ್ತಾ ಮತ್ತಷ್ಟು ಓಡಿಸುತ್ತದೆ.ಇದು ಪ್ರಕೃತಿಸಹಜ ವಿದ್ಯಮಾನ. ನೀವು ನಿಮ್ಮ ಕುಟುಂಬ ಮತ್ತು ಸಮಾಜಕ್ಕೆ ಪ್ರತಿಯಾಗಿ ಕೆಲವು ನಿರ್ದಿಷ್ಟ ಜವಾಬ್ದಾರಿಗಳನ್ನು ಹೊಂದಿರುತ್ತೀರೆಂಬ ಭಾವನೆ ಸ್ಪಷ್ಟ..
ಭಗವದ್ಗೀತೆಯಲ್ಲಿ “ನಿಮಗೆ ನಿಗದಿಪಡಿಸಲಾಗಿರುವ ಕರ್ತವ್ಯಗಳನ್ನು ನೀವು ಮಾಡಿ” ಏಕೆಂದರೆ ಏನೂ ಕೆಲಸ ಮಾಡದೆ ಇರುವುದಕ್ಕಿಂತ ಉತ್ತಮವಾದುದು. ಕೆಲಸ ಮಾಡದೆ ಇರುವ ವ್ಯಕ್ತಿಯು ತನ್ನ ಭೌತಿಕ ದೇಹವನ್ನು ನಿಭಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಶ್ರೀ ಕೃಷ್ಣನು ಹೇಳುತ್ತಾನೆ. ಆದ್ದರಿಂದ ನಿರ್ಲಿಪ್ತರಾಗುವುದು ಎಂದರೆ ಕರ್ತವ್ಯಗಳನ್ನು ಮಾಡದೆ ಉಳಿಯುವುದಲ್ಲ. ಹಾಗೇನಾದರೂ ಇದ್ದಿದ್ದರೆ ಶ್ರೀಕೃಷ್ಣನು ಕರ್ತವ್ಯಗಳ ಬಗ್ಗೆ ಒತ್ತಿ ಹೇಳುತ್ತಿರಲಿಲ್ಲ.
‘ಸುಖ ಅಥವಾ ಸಾಧನೆಗೆ ಹಿಗ್ಗದಿರುವುದು, ದುಃಖ ಅಥವಾ ವೈಫಲ್ಯಕ್ಕೆ ಕುಗ್ಗದೆ ಇರುವುದು. ಇದು ವ್ಯಕ್ತಿಯು ಫಲಿತಾಂಶಗಳ ಪ್ರಭಾವಕ್ಕೆ ಒಳಗಾಗದೆ ಇರುವಂತಹ ಸ್ಥಿತಿ. ಇಂತಹ ವ್ಯಕ್ತಿಯು ತನ್ನ ಕೆಲಸದ ಮೇಲೆ ನೂರು ಪ್ರತಿಶತ ಪ್ರಯತ್ನವನ್ನು ಹಾಕುತ್ತಿದ್ದರೂ ಅದರ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ಬಹಳ ಸರಳ. ನಿಮ್ಮ ಕೆಲಸವನ್ನು ನೀವು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿರಬೇಕು ಅಷ್ಟೆ.ನಿರ್ಲಿಪ್ತತೆ ಸಾಧಿಸಿದವನು ಯಾವಾಗಲೂ ಸಂತುಷ್ಟ ಹಾಗೂ ಸಂತೃಪ್ತನಾಗಿರುತ್ತಾನೆ. ವನ ಸಂತೃಪ್ತಿಯೇನೂ ಅವನನ್ನು ಕರ್ತವ್ಯದಿಂದ ವಿಮುಖನನ್ನಾಗಿಸುವುದಿಲ್ಲ. ಮನುಷ್ಯನು ತನ್ನ ಬಳಿ ಏನಿದೆಯೋ ಅದರಿಂದಲೇ ಸಂತೋಷಪಡುತ್ತಾ ತನ್ನ ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ಹಂತವೇ ಸಂತೃಪ್ತಿ.
ದೇಶ ದೇಶಗಳ ನಡುವೆ ನಡೆವ ಸಮರದಲ್ಲಿ ಬಲಿಯಾಗುವ ಹಾಗೂ ಸ್ಥಳಾಂತರಗೊಳ್ಳುವ ಸಮಯ ನೇರ ಆಗದಿದ್ದರೂ ಕಳ್ಳದಾರಿಗೆ ಜೀವದ ಹಂಗು ತೊರೆದು ಹೊರಟವರಲ್ಲಿ ಅಬ್ದುಲ್ ಕುರ್ದಿ, ಟರ್ಕಿಯಿಂದ ಗ್ರೀಸ್ ದೇಶಕ್ಕೆ ಹೋಗಲು ಮೋಟಾರ್ ಚಾಲಿತ ದೋಣಿಯನ್ನು ನೀಡುವುದಾಗಿ ಸಂತ್ರಸ್ತರನ್ನು ಕಳ್ಳ ಮಾರ್ಗದಲ್ಲಿ ಬೇರೆ ದೇಶಕ್ಕೆ ಕರೆದೊಯ್ಯುವವರು ಕುರ್ದಿಗೆ ಭರವಸೆ ನೀಡಿದ್ದರು.ಗ್ರೀಸ್ ದೇಶವನ್ನು ಒಮ್ಮೆ ತಲುಪಿದರೆ,ಕೆನಡಾ ದೇಶದಲ್ಲಿ ಹೊಸ ಜೀವನ ಆರಂಭಿಸಲು ಮೊದಲ ಹೆಜ್ಜೆ ಇಟ್ಟಂತೆ ಆಗುತ್ತಿತ್ತು. ಆದರೆ ಕಳ್ಳಸಾಗಣೆದಾರರು 15 ಅಡಿ ಉದ್ದದ ರಬ್ಬರ್ ದೋಣಿ ಕೊಟ್ಟು,ಸಮುದ್ರದಲ್ಲಿ ಏಳುವ ದೊಡ್ಡ ದೊಡ್ಡ ಅಲೆಗಳಿಗೆ ಈ ರಬ್ಬರ್ ದೋಣಿ ಮಗುಚಿಕೊಳ್ಳುತ್ತಿತ್ತು.
ಪ್ರತಿಯೊಂದು ಅಲೆಯು ಸಾಮಾನ್ಯದಲ್ಲ.ಒಂದು ಭಯಾನಕ ಅಲೆ ಅಬ್ದುಲ್ಲಾ ಹಾಗೂ ಆತನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ರಬ್ಬರ ದೋಣಿ ಸಮೇತ ಮಗುಚಿಹಾಕಿತು.ಮೂವರನ್ನೂ ಉಳಿಸಿಕೊಳ್ಳಲು ಅಬ್ದುಲ್ಲಾ ಯತ್ನಿಸಿದ. ಆದರೆ ಅವನ ಪ್ರಯತ್ನ ಫಲ ಕೊಡಲಿಲ್ಲ.ಕೊನೆಯಲ್ಲಿ ಜೀವ ಉಳಿಸಿಕೊಂಡಿದ್ದು ಅಬ್ದುಲ್ಲಾ ಮಾತ್ರ.ಅದೊಂದು ಘಟನೆಯಿಂದ ‘ನನಗೆ ಯಾವುದೂ ಬೇಡವಾಗಿದೆ. ಜಗತ್ತಿನ ಎಲ್ಲ ದೇಶಗಳನ್ನು ನನಗೆ ಉಡುಗೊರೆಯಾಗಿ ನೀಡಿದರೂ,ಅದು ನನಗೆ ಬೇಡ. ನನ್ನ ಪಾಲಿಗೆ ಅತ್ಯಂತ ಅಮೂಲ್ಯವಾಗಿದ್ದನ್ನು ಕಳೆದುಕೊಂಡಾಗಿದೆ’ ಎಂದು ಅಬ್ದುಲ್ಲಾ, ಟರ್ಕಿಯ ಮುಗ್ಲಾದ ಒಂದು ಶವಾಗಾರದಲ್ಲಿ ಕೆಲವು ದಾಖಲೆಗಳಿಗೆ ಸಹಿ ಮಾಡಿದ ನಂತರ ಹೇಳಿದ. ಪತ್ನಿ, ಮಕ್ಕಳ ಮೃತ ದೇಹ ಪಡೆಯಲು ಅಲ್ಲಿಗೆ ಬಂದ್ವ್ಗೆ ಟರ್ಕಿಯ ಸಮುದ್ರ ತೀರದಲ್ಲಿ ಹೆಣವಾಗಿ ಬಿದ್ದಿದ್ದ ಎರಡನೆಯ ಮಗನ ಚಿತ್ರಣ ತಂದೆಯ ಮನ ಕಲಕುವಂತಿತ್ತು.ಸಂತ್ರಸ್ತರ ಸ್ಥಿತಿಗೆ ಮರಗುವವರಾರು? ಅನುಭವಿಸಿದವರಿಗೆ ಮಾತ್ರ ಗೊತ್ತು. ತನಗಾದ ಕಹಿ ಅನುಭವದಿಂದ ಇನ್ನೊಬ್ಬರಿಗೆ ಹೀಗಾಗದಿರಲೆಂದು ಕಳಕಳಿ ಹೊತ್ತು ಶ್ರಮಿಸಿದ ಪರಿಣಾಮ ಒಂದಿಷ್ಟು ಜನರ ಪ್ರಾಣ ಉಳಿಸಿದ ಸಾರ್ಥಕ ಭಾವ ಕುರ್ದಿಗೆ.ನಿರ್ಲಿಪ್ತ ಹಾಗೂ ನಿರ್ಭಾವುಕತೆ ಬದುಕಿಗೆ ಸರಿ ತಪ್ಪುಗಳ ಕಲ್ಪನೆಯನ್ನು ವಾಸ್ತವದ ಅಡಿಯಲ್ಲಿ ಚಿತ್ರಿತಗೊಳ್ಳುತ್ತವೆ.
ಯವ್ವನದಲ್ಲಿ ಉತ್ಸಾಹಿಯಾಗಿ ರೇಸ್ ಕಾರ್‌ನಂತೆ ಓಡೋ ಈ ದೇಹ, ವಯಸ್ಸಾಗ್ತಿದ್ದ ಹಾಗೆ ಹಂಪ್‌ಗಳಲ್ಲಿ ಸಿಕ್ಕಾಕ್ಕೊಂಡ ಕಾರ್‌ನ ಥರ ಆಡುತ್ತೆ. ವಯಸ್ಸಾಗೋದು ಇಷ್ಟಅಲ್ಲ ಅಂತ ಮನಸ್ಸು ಬಯಸಿದರೂ, ವಯಸ್ಸು ನಿರ್ಭಾವುಕವಾಗಿ ಮುಂದೆ ಹೋಗುತ್ತಲೇ ಇರುತ್ತದೆ. ಗಡಿಯಾರದ ಮುಳ್ಳಿನ ಥರಾ! ಸಮಯ ಯಾರಿಗೂ ಕಾಯುವುದಿಲ್ಲ ಹಾಗೂ ನಿಲ್ಲುವುದಿಲ್ಲ.ಇದೊಂದು ಅವಿನಾಭಾವ ಸಂಬಂಧವೆದ್ದಂತೆ.ಇರುವಷ್ಟು ಗಳಿಗೆ ಇವೆರಡರ ಸಮಚಿತ್ತ ಅರ್ಥೈಸಿಕೊಳ್ಳಲು ಸಫಲವಾದರೆ ಬದುಕು ಸಾರ್ಥಕ.
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…
ತಲ್ಲಣಿಸದಿರು ಮನವೇಎಂದು ಮನಸ್ಸನ್ನು ಮುಟ್ಟುವ ಲೇಖನ ರೀ ಮೇಡಂ ಒಂದೊಂದು ಅಕ್ಷರವೂ ಅತೀ ಸುಂದರ ಮನೋಜ್ಞವಾಗಿ ಮೂಡಿಬಂದಿದೆ.