ಆ ನಾಲ್ಕು ಜನ ಮತ್ತು ನಮ್ಮ ಜೀವನ

ಲಹರಿ

ಕಾಂತರಾಜು ಕನಕಪುರ

ಆ ನಾಲ್ಕು ಜನ ಮತ್ತು ನಮ್ಮ ಜೀವನ

ನಾಲ್ಕು ಜನ ಮೆಚ್ಚೋ ರೀತಿ ಬದುಕಬೇಕು

ನೋಡಿದ ನಾಲ್ಕು ಜನ ಏನಂತಾರೆ ಅನ್ನೋ ಪರಿಜ್ಞಾನವಿರಬೇಕು

ನಾಲ್ಕು ಜನ ಒಪ್ಪೋ ಮಾತಾಡಬೇಕು

ಊರಲ್ಲಿ ನಾಲ್ಕು ಜನ ನಾಲ್ಕು ರೀತಿ ಮಾತಾಡುತ್ತಾರೆ

ಮಾಡೋ ಕೆಲಸ ನಾಲ್ಕು ಜನ ಸೈ ಅನ್ನೋ ಹಾಗಿರಬೇಕು

ನಾಲ್ಕು ಜನಕ್ಕೆ ಒಳ್ಳೇದು ಮಾಡಬೇಕು

ಏನು ಮಾಡಿದರೂ ನಾಲ್ಕು ಜನ ಗುರ್ತಿಸುವ ಹಾಗೆ ಇರಬೇಕು

ಸತ್ತಾಗ ನಾಲ್ಕು ಜನ ಬರೋ ಹಾಗಿರಬೇಕು

ಈ ರೀತಿ ಆ ನಾಲ್ಕು ಜನರ ಮಹತ್ವ ಕುರಿತಾದ ನುಡಿಗಳು ನಿಮ್ಮೆಲ್ಲರ ಕಿವಿಗಳಿಗೆ ಬದುಕಿನ ಒಂದಲ್ಲ ಒಂದು ಹಂತದಲ್ಲಿ, ಒಂದಲ್ಲ ಒಂದು ಹಂತ ಏನು ಬಂತು ಎಲ್ಲಾ ಹಂತಗಳಲ್ಲಿ ಎಲ್ಲಾ ದಿನಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಬಿದ್ದಿವೆ, ಬೀಳುತ್ತಿವೆ ಮತ್ತು ಬೀಳುತ್ತಿರುತ್ತವೆ.

ನಮ್ಮ ಹುಟ್ಟು, ಬದುಕು, ಅಷ್ಟೇ ಯಾಕೆ ಸಾವು ಕೂಡಾ ಆ ನಾಲ್ಕು ಜನರಿಂದಲೇ ನಿರ್ದೇಶಿಸಲ್ಪಡುತ್ತಿದೆ, ಅವಲೋಕಿಸಲ್ಪಡುತ್ತಿದೆ ಮತ್ತು ಮೌಲ್ಯಮಾಪನಕ್ಕೊಳಗಾಗುತ್ತಿದೆ. ನಮ್ಮ ಬದುಕಿನುದ್ದಕ್ಕೂ ನಮಗರಿವಿಲ್ಲದಂತೆ ಮತ್ತು ಅವರಿಗೂ ತಿಳಿಯದಂತೆ ಅವರದ್ದೇ ಆದ ಪ್ರಭಾವ ಬೀರಿ ನಮ್ಮ ಜೀವನವನ್ನು ಅವರ ಮೂಗಿನ ನೇರಕ್ಕೆ ರೂಪಿಸಿಕೊಳ್ಳುವುದರಲ್ಲಿ ಆ ನಾಲ್ಕು ಜನ ಬಹಳ ನಿಸ್ಸೀಮರು. ಅವರೇ ನಮ್ಮ ಉಡುಗೆ-ತೊಡುಗೆ, ಊಟ-ಉಪಚಾರ, ನಡೆ-ನುಡಿ, ವೇಷ-ಭೂಷಣ, ಹಾವ-ಭಾವ, ಗುರಿ-ಗಮ್ಯ, ಆಚಾರ-ವಿಚಾರ, ಇತ್ಯಾದಿಗಳನ್ನು ನಿರ್ಧರಿಸುತ್ತಾರೆ, ನಿರ್ದೇಶಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ. ಕೇವಲ ನಮ್ಮ ನಿಮ್ಮ ಬದುಕಷ್ಟೇ ಅಲ್ಲ ನಮ್ಮ ಪೂರ್ವಜರ ಬದುಕು ಕೂಡ ಅವರಿಂದಲೇ ಪ್ರಭಾವಿಸಲ್ಪಟ್ಟಿದೆ ಮತ್ತು ನಮ್ಮ ಮುಂದಿನ ಪೀಳಿಗೆಯ ಬದುಕೂ ಅವರ ಪ್ರಭಾವಕ್ಕೊಳಪಡುತ್ತಲೇ ಇರುತ್ತದೆ. ನಮ್ಮ ಸುತ್ತಲಿನ ಎಲ್ಲರ ವರ್ತನೆಯನ್ನು ಅಗೋಚರವಾಗಿದ್ದಕೊಂಡೇ ಅದ್ಭುತವಾಗಿ ಮತ್ತು ಅವ್ಯಾಹತವಾಗಿ ಆ ನಾಲ್ಕು ಜನರೇ ಇಡಿಯಾಗಿ ನಿರ್ವಹಿಸುತ್ತಿದ್ದಾರೆ. ಆ ನಾಲ್ಕು ಜನ ಪರಮ ಸ್ನೇಹಿತರಂತೆ ನಮ್ಮ ತೇಜೋವೃದ್ಧಿ ಮಾಡಬಲ್ಲರು ಹಾಗೆಯೇ ಪರಮ ಶತ್ರುಗಳಂತೆ ತೇಜೋವಧೆಯನ್ನೂ ಮಾಡಬಲ್ಲರು.

ನಾವೆಲ್ಲ ಮುಂಜಾನೆ ನಿದ್ರೆಯಿಂದ ಎದ್ದು ಪ್ರಾತಃವಿಧಿಗಳನ್ನು ಪೂರೈಸಿ ಶಾಲೆ, ಕಾಲೇಜು, ಕಛೇರಿ, ವ್ಯಾಪಾರ, ವ್ಯವಹಾರ ಎಂದು ತೆರಳುವ ಮುನ್ನ ಕನ್ನಡಿಯ ಮುಂದೆ ನಿಂತು ಮುಖಕ್ಕೆ ಬಣ್ಣ ಹಚ್ಚುವುದು, ಕೂದಲು ಸರಿ ಮಾಡುವುದಲ್ಲದೆ ನಮ್ಮ ಮೂಖ ನೋಡಿ ನಾವೇ ಹಲ್ಲು ಕಿರಿಯುವ ಮಂಗ ಚೇಷ್ಟೆಗಳನ್ನೆಲ್ಲಾ ಮಾಡುವುದು ಯಾರಿಗಾಗಿ? ಅದೇ ನಾಲ್ಕು ಜನರನ್ನು ಮೆಚ್ಚಿಸುವುದಕ್ಕಾಗಿ. ಆಯುಷ್ಕರ್ಮ ಶಾಲೆಯಲ್ಲಿ ನಾಪಿತರು ಮತ್ತೆಮತ್ತೆ ಬೆಳೆಯುವ ಕೂದಲನ್ನು ಸ್ವಲ್ಪ ಹೆಚ್ಚು ಕತ್ತರಿಸಿದ್ದಕ್ಕೆ ತರುಣರ ಮನಸು ಮುದುಡುವುದು ಯಾಕೆ ನೋಡಿದ ನಾಲ್ಕು ಜನ ಆಡಿಕೊಳ್ತಾರೆ ಅಂತ. ತರಳೆಯರು ರೂಪಾಲಯಕ್ಕೆ ಪದೇ ಪದೇ ಎಡತಾಕುವುದು ಯಾಕೆ? ಹೊರ ಬಂದ ನಂತರ ನೋಡಿದ ನಾಲ್ಕು ಜನ ಮೆಚ್ಚಲಿ ಅಂತಲ್ಲವೇ. ತರುಣರ ಠೇಂಕಾರ ತರುಣಿಯರ ಸಿಂಗಾರ ಎಲ್ಲವೂ ಅದೇ ನಾಲ್ಕು ಜನರ ಮೆಚ್ಚಿಸುವುದಕ್ಕಾಗಿ.

ನಮ್ಮ ಜನನಕ್ಕೂ ಆ ನಾಲ್ಕು ಜನರ ಪ್ರೇರಣಾಶಯಗಳೇ ಕಾರಣವೆಂದರೆ ನಿಮಗೆ ಆಶ್ಚರ್ಯವಾಗಬಹುದು.  ಮುಖದ ಮೇಲೆ ಗಡ್ಡ-ಮೀಸೆಗಳು ಬಲಿಯುತಲಿದ್ದರೂ, ಉಂಡ್ಕೊಂಡು ತಿನ್ಕೊಂಡು ಓಡಾಡ್ಕೊಂಡು ಇದ್ದ ನಮ್ಮ ಪಿತೃಗಳನ್ನು ಅವರು ಹಾಗೇ ಇದ್ದರೆ ನೋಡಿದ ಆ ನಾಲ್ಕು ಜನ ಏನೆಂದುಕೊಂಡಾರು ಎಂದೇ ಅವರ ಪಿತೃಗಳು ಅವರನ್ನು ಸದ್ಗೃಹಸ್ಥರನ್ನಾಗಿ ಮಾಡಿದ್ದು ನಂತರ ನಾವು ಜನಿಸಿದ್ದು. ಅಷ್ಟೇ ಯಾಕೆ ನಾವು ನಮ್ಮ ಮುಂದಿನ ಪೀಳಿಗೆಯನ್ನು ಮುಂದುವರಿಸುವ ಅವಕಾಶ ದೊರೆತಿರುವುದು ಕೂಡ ಅವರಿಂದಲೇ ಅಲ್ಲವೇ? ವಿವಾಹವಾಗಲು ಅನುರೂಪರಾದ ಜೋಡಿಯೇ ಆಗಬೇಕು ಎಂದು ಹಟ ಹಿಡಿಯುವುದು, ಸಿಕ್ಕಿದ ಮೇಲೆ ಕೈ-ಕೈ ಹಿಡಿದು ಹೆಜ್ಜೆಗೆಜ್ಜೆ ಇಟ್ಟು ನಡೆಯುವುದು ಯಾಕೆ? ಮದುವೆಗೆ ಮುಂಚೆ, ಮದುವೆಯಲ್ಲಿ ಮತ್ತು ಮದುವೆ ನಂತರ ಅದೇನೇನೊ ಅದೆಲ್ಲೆಲ್ಲೋ ಛಾಯಾಗ್ರಾಹಣ ಮಾಡಿಸಿ ಹಂಚುವುದು ನಮ್ಮನ್ನು ನಾವೇ ಮೆಚ್ಚುವುದಕ್ಕಾಗಿಯೇ? ನೋಡಿದ ಆ ನಾಲ್ಕು ಜನ ಮೆಚ್ಚುವಂತಿರಬೇಕು ಅಂತ ಅಲ್ಲವೇ? ಕೈ ಖಾಲಿ ಇದ್ದರೂ ಸಾಲವೋ ಸೋಲವೋ ಏನೋ ಅಂತು ಭೂಮಿ ಆಕಾಶ ಒಂದುಮಾಡಿ ಧಾಂ ಧೂಂ ಅಂತ ಕಲ್ಯಾಣ ಮಾಡಿಕೊಳ್ಳುವುದು ಯಾಕೆ ಅಂದುಕೊಂಡಿದ್ದೀರಿ, ನೋಡಿದ ಆ ನಾಲ್ಕು ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಲಿ ಎಂದೇ. ಕೊನೆಗೆ ವಿಚ್ಛೇದನ ಪಡೆಯುವುದು ಕೂಡ ಹಾದಿ-ಬೀದಿ ಕಾಳಗ ನೋಡಿದ ಆ ನಾಲ್ಕು ಜನ ಏನೆಂದುಕೊಂಡಾರು ಅಂತ ತಾನೇ? ಅದಾದ ಮೇಲೆ ಒಂಟಿ ಬಡಿಗೆ ರೀತಿ ಓಡಾಡುವುದು ನೋಡಿದರೆ ನೋಡಿದ ನಾಲ್ಕು ಜನ ಏನೆಂದುಕೊಳ್ಳುವುದಿಲ್ಲ ಎಂಬ ಸಕಾರಣಕ್ಕಾಗಿಯೇ ಅಲ್ಲವೇ ಮತ್ತೊಂದು ಮದುವೆಗೆ ಅಣಿಯಾಗುವುದು?

ನಮ್ಮ ಬದುಕಿನ ಬಹುಪಾಲು ಸಮಯ ದುಡಿದು  ಸಂಪಾದಿಸಿದ ಹಣವನ್ನು ವ್ಯಯಿಸಿ ಕಟ್ಟುವ ಮನೆಗೆ  ಬುನಾದಿಯಿಂದ ಮೊದಲ್ಗೊಂಡು ನಿರ್ಮಾಣದ ವರೆಗೆ ಎಷ್ಟು ಸಾಧ್ಯವೋ ಅಷ್ಟು ಪ್ರಚಾರ ಮಾಡಿ ಸಾಲದ ಮೇಲೆ ಸೋಲವಾದರೂ ಮಾಡಿ ಗೃಹಕ್ಕೆ ಪ್ರವೇಶವನ್ನು ನಿರ್ಣಯಿಸಿ ಕೈಮೀರಿ ಖರ್ಚು  ಮಾಡಿ ಕೃತಾರ್ಥರಾಗುವುದು ಮತ್ತು ನಮ್ಮ ಆಹ್ವಾನವನ್ನು ಮನ್ನಿಸಿ ಆಗಮಿಸಿದ ಕೂಳಾಳುಗಳ ಹೊಗಳಿಕೆಗೆ ಅಟ್ಟವೇರಿ, ಕೊಂಕಿಗೆ ಕೇಳದಂತೆ ನಟಿಸಿ ಅಥವಾ ನೂರೊಂದು ನೆಪ ಹೇಳಿ ಸಮಾಧಾನ ಮಾಡಿಕೊಳ್ಳುವುದು ಯಾಕಾಗಿ? ಅದೂ ನಾಲ್ಕು ಜನರ ಕಾರಣಕ್ಕಾಗಿ. ಮುದ್ದಿನಿಂದ ಸಾಕಿದ ಮಗನೊ, ಮಗಳೊ ಅವರ ವಿದ್ಯಾರ್ಜನೆಯ ಉದ್ದಕ್ಕೂ ಪರೀಕ್ಷೆಗಳಲ್ಲಿ ಅಂಕಗಳ ಹಿಂದೆ ಓಡುತ್ತಲೇ ಇರಬೇಕು, ನಾವು ಮಾತ್ರ ಬೃಹಸ್ಪತಿಯ ಆ ಜನ್ಮ ವೈರಿಗಳಾಗಿದ್ದರೂ, ಅವರು ಮಾತ್ರ ಅವನ ಆತ್ಮೀಯ ಗೆಳೆಯರಂತಿರಬೇಕು ಎಂದು ಅಹರ್ನಿಶಿ ಕಾಡುವುದು ಯಾಕಾಗಿ ಅದೇ ನಾಲ್ಕು ಜನರ ಸಮಾಧಾನಕ್ಕಾಗಿ.

ನಮ್ಮ ಮಾತಾಪಿತೃಗಳು ನಮ್ಮನ್ನು ಹಡೆದ ತಪ್ಪಿಗೆ ಅನುನಯದಿ ಹುಡುಕಾಡಿ ಇಟ್ಟ ಅಭಿದಾನಗಳನ್ನು ತಿರಸ್ಕರಿಸಿ ನಮಗೆ ಇದೇ ಇಷ್ಟ ಎಂದು ಹೇಳಿ ಬದಲಾಯಿಸಿಕೊಳ್ಳುವ ಹೆಸರುಗಳು ವಾಸ್ತವವಾಗಿ ನಾಲ್ಕು ಜನರು ಆಡಿಕೊಳ್ಳದಿರಲಿ ಎಂದು ತಾನೇ? ಅದಿಲ್ಲದಿದ್ದರೆ, ರೆಕ್ಕೆಪುಕ್ಕಗಳಿಲ್ಲದ ಗರುಡಾಚಾರ್ರು, ತಲೆಸೀಳಿದರೂ ಎರಡಕ್ಷರವಿರದ ವಿದ್ಯಾಧರ ವಿದ್ಯಾನಿಧಿಗಳು, ಎಲ್ಲಾ ಗಲಬರಿಸಿದರೂ ಎರಡು ಕಾಸು ಹುಟ್ಟದ ಸಂಪತ್ತೈಯ್ಯಂಗಾರ್ರು, ಕೃಷಕಾಯದ ಭೀಮಣ್ಣಗಳು, ತಲೆ ಸರಿ ಇರುವ ಹುಚ್ಚಪ್ಪಂದಿರು, ನಡೆಯಲು ಹೆಣಗುವ ಮಯೂರಿಯರು, ಸದಾ ರೋಗಿಗಳಾದ ಧನ್ವಂತರಿಗಳು ಮೊದಲಾದವರ ಹೆಸರುಗಳು ಅಭಾಸಅವಾಗುತ್ತಿರಲಿಲ್ಲವೇ? ಅದಕ್ಕಾಗಿ ಆ ನಾಲ್ಕು ಜನರಿಗೆ ಧನ್ಯವಾದ ಹೇಳಲೇಬೇಕು.

ಒಟ್ಟಾರೆ ನಮ್ಮ ಆಳು-ಕಾಳು, ಮನೆ-ಮಡದಿ, ಆಸ್ತಿ-ಅಂತಸ್ತು, ಸ್ಥಾನ-ಮಾನ, ಬದುಕು-ಬಡಿವಾರ ಎಲ್ಲವೂ ಆ ನಾಲ್ಕು ಜನರ ಮೂಲದಿಂದಲೇ ಜರುಗಬೇಕು ಮತ್ತು ಅವರ ಒಪ್ಪಿಗೆ-ತೃಪ್ತಿಗೆ ಅನುಸಾರವಾಗಿಯೇ ಇರಬೇಕು. ಅವರು ಗೈಯ್ಯದ ಉಪಕಾರವನ್ನು ನೆನೆಸಬೇಕು. ದಿವ್ಯ ಉದಾಸೀನವನ್ನು ಅಪ್ಪಿಕೊಳ್ಳಬೇಕು. ಉಪೇಕ್ಷೆಯನ್ನು ಒಪ್ಪಿಕೊಳ್ಳಬೇಕು ಅವರ ಉಪಟಳ, ಉಪದ್ರವ ಮತ್ತು ಉದರದುರಿಗಳನ್ನು ಸಹಿಸಿಕೊಳ್ಳಬೇಕು. ಕೊನೆಗೆ ಅವರಂತೆ ಮತ್ತು ಅವರು ಬಯಸಿದಂತೆ ಬದುಕಬೇಕು. ಇಷ್ಟಕ್ಕೂ ಅವರು ಯಾರು? ಎಲ್ಲಿದ್ದಾರೆ? ಹೇಗಿದ್ದಾರೆ? ಎಂಬುದು ಯಾರಿಗೂ ತಿಳಿದಿಲ್ಲ ಆದರೆ ಒಂದು ಮಾತು ಮಾತ್ರ ಸತ್ಯ ಸರ್ವರ ಬಾಳಿನ  ಬಂಡಿಗಳಿಗೆ ಕೀಲೆಣ್ಣೆಯೇ ಆ ನಾಲ್ಕು ಜನ.

ಮನೆಯ ಮುಂದಿನ ಪಡಸಾಲೆಯಲ್ಲಿ ಕುಳಿತು ಹೀಗೆ ಆಲೋಚಿಸುತ್ತಿದ್ದವನ ಕಿವಿಗಳಿಗೆ ನನ್ನ ಶ್ರೀಮತಿ ಹೇಳಿದ “ಯಾಕ್ರೀ ಈ ರೀತಿ ಗಡ್ಡಕ್ಕೆ ಕೈಕೊಟ್ಟು ಜಗತ್ತೇ ತಲೆ ಮೇಲೆ ಬಿದ್ದವರ ರೀತಿ ಆಲೋಚಿಸ್ತಾ ಕುಳಿತಿದ್ದೀರಲ್ಲ? ನೋಡಿದ ನಾಲ್ಕು ಜನ ಏನಂದುಕೊಳ್ಳಲ್ಲ?” ಎಂಬ ನುಡಿಗಳು ಬಿದ್ದ ತಕ್ಷಣವೇ ಯಾರಾದರೂ ನಾಲ್ಕು ಜನ ನೋಡಿಯಾರು ಎಂದು ಎದ್ದು ಒಳಗೆ ಹೋದೆ.

ಅಂತಿಮವಾಗಿ ಈ ಬರಹವನ್ನು  ಓದಿದ ನಾಲ್ಕು ಜನ ಏನನ್ನುವರೋ ಎಂಬ ಆತಂಕದಲ್ಲಿಯೇ ಬರೆದು ಮುಗಿಸಿರುವೆ.


                    

   ಕಾಂತರಾಜು ಕನಕಪುರ                                                                                          

5 thoughts on “ಆ ನಾಲ್ಕು ಜನ ಮತ್ತು ನಮ್ಮ ಜೀವನ

    1. ನಾಲ್ಕು ಜನ ಮೆಚ್ಚುವಂತೆ ಬರೆದಿದ್ದೀರಿ. ಚೆಂದ

  1. ಬರೀ ಚೆನ್ನಾಗಿದೆ ಅಂತ ಕಮೆಂಟಿಸಿದ್ರೆ ಯಾರಾದರೂ ನಾಲ್ಕು ಜನ ನೋಡಿದರೆ ಏನಂದ್ಕೊತಾರೊ ಅದಕ್ಕೆ ತುಂಬ ತುಂಬ ಚೆನ್ನಾಗಿದೆ ಬರಹ ಸರ್

  2. ನಾಲ್ಕು ಜನರ ಮಹತ್ವದ ಕುರಿತು ಬರೆದ ಬರಹ ಖಂಡಿತವಾಗಿಯೂ ಪ್ರಶಂಸನೀಯವಾದುದು ಸರ್..
    ಇದನ್ನು ನಾಲ್ಕು ಜನ ತಿಳಿದು ಬದುಕಿದರೆ ಬದುಕು ಅರ್ಥಪೂರ್ಣವಾದಿತು…

    ಅರ್ಥಪೂರ್ಣ ಬರಹ ಗುರುಗಳೇ….

  3. ನಾಲ್ಕು ಜನರ ಮಹತ್ವದ ಕುರಿತು ಬರೆದ ಬರಹ ಖಂಡಿತವಾಗಿಯೂ ಪ್ರಶಂಸನೀಯವಾದುದು ಸರ್..
    ಇದನ್ನು ನಾಲ್ಕು ಜನ ತಿಳಿದು ಬದುಕಿದರೆ ಬದುಕು ಅರ್ಥಪೂರ್ಣವಾದಿತು…

    ಅರ್ಥಪೂರ್ಣ ಬರಹ ಗುರುಗಳೇ….

Leave a Reply

Back To Top