ಪುಸ್ತಕ ಸಂಗಾತಿ
ಒಡಲ ತುಡಿತಕ್ಕೆ ಕೇಡು
ಎಂ.ಮಂಜುನಾಥ ಅದ್ದೆಯ ಪತ್ರಿಕೋದ್ಯಮ, ಹಾಗೂ ಸಾಹಿತ್ಯಕ
ಮತ್ತು ಸಾಮಾಜಿಕ ಹೋರಾಟಗಳ ಜೀವನವೂ..! —
ಪತ್ರಿಕೋದ್ಯಮ, ಸಾಹಿತ್ಯ, ಹೋರಾಟ — ಈ ಮೂರೂ ದೋಣಿಗಳಲ್ಲಿ ಪಯಣಿಸುತ್ತಿರುವ ಎಂ.ಮಂಜುನಾಥ ಅದ್ದೆ ಅವರದ್ದು ಪ್ರತಿಭಾವಂತ ವ್ಯಕ್ತಿತ್ವ.
ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದೆ ಗ್ರಾಮದವನಾದ ಎಂ.ಮಂಜುನಾಥ ಅದ್ದೆ ಮೂಲತಃ ಕೃಷಿಕ ಕುಟುಂಬಕ್ಕೆ ಸೇರಿದವರು. 1973 ರ ನಡುಭಾಗದಲ್ಲಿ ಹುಟ್ಟಿದ ಎಂ.ಮಂಜುನಾಥ ಅದ್ದೆಯ ತಂದೆ ಮುನಿಹನುಮಯ್ಯ, ತಾಯಿ-ಲಕ್ಷ್ಮಮ್ಮ ಅಂತ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ನಂತರ ಬದುಕಿನ ಮಾರ್ಗದ ಬಗ್ಗೆ ಎಂ.ಮಂಜುನಾಥ ಅದ್ದೆಗೆ ಗೊಂದಲಗಳೇ ಇರಲಿಲ್ಲ. ದೊಡ್ಡಬಳ್ಳಾಪುರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸಿದವರು.
ಈ ಹೊತ್ತಿಗಾಗಲೇ ಸಮಾಜಮುಖಿ ಚಳವಳಿ, ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಎಂ. ಮಂಜುನಾಥ ಅದ್ದೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದವನು. ತನ್ನೊಳಗಿನ ವಿಚಾರಗಳನ್ನು ಲೋಕದೊಡನೆ ಹಂಚಿಕೊಳ್ಳಲು ಪತ್ರಿಕೆಯೇ ಸೂಕ್ತ ಅನ್ನಿಸಿದಾಗ ಪತ್ರಿಕೋದ್ಯಮಕ್ಕೆ ನೇರವಾಗಿ ಪ್ರವೇಶಿಸಿದನು.
1997 ರಲ್ಲಿ ಪತ್ರಿಕಾ ಜಗತ್ತಿಗೆ ಕಾಲಿಟ್ಟ ಎಂ.ಮಂಜುನಾಥ ಅದ್ದೆ ಗೆಳೆಯರ ಗುಂಪಿನಲ್ಲಿ ಕರಗಿಹೋಗಲಿಲ್ಲ. ಅಲ್ಲೂ ಅವರು ಪ್ರತ್ಯೇಕವಾಗಿಯೇ ಕಾಣಿಸಿಕೊಂಡವರು. ಸರ್ಕಾರ, ರಾಜಕಾರಣ, ಅಧಿಕಾರಶಾಹಿ, ಸಂಸ್ಥೆಗಳು — ಹೀಗೆಯೇ ಯಾವುದೇ ಪ್ರಕಾರಕ್ಕೆ ಸೇರಿದ ಅವ್ಯವಹಾರಗಳನ್ನು ನಿರ್ದಾಕ್ಷಿಣ್ಯವಾಗಿ ತನ್ನ ಹರಿತ ಬರಹಗಳ ಮೂಲಕ ಒಂದು ನಮೂನೆ ದಾಳಿ ನಡೆಸುತ್ತಲೇ ಬಂದಿದವರು..!
ಎಂ.ಮಂಜುನಾಥ ಅದ್ದೆ ಅವರಲ್ಲಿನ ಮಾನವೀಯ ಸೆಲೆಯ ಹನಿಗಳನ್ನು ಪುಸ್ತಕಗಳ ಮೂಲಕವೂ ಹೊರಹಾಕಿದ್ದಾರೆ. ‘ಒಡಲ ತುಡಿತಕ್ಕೆ ಕೇಡು’, ‘ಗಾಳಿ-ಗಮಲು’, ‘ಸಾಮುದಾಹಯಿಕ ಭೂಮಿ ಮತ್ತು ಜನಜೀವನ’, ‘ಕನ್ನಡಿ ಕಣ್ಣು’, ‘ಈತಕ್ಕೆ- ಈತರ’, ‘ಕಣ್ಣಂಚಿನ ಚಿತ್ರಗಳು’, ಹಾಗೂ ‘ಮಾತಿಗೆ ಮಾತು’ ಕೃತಿಗಳ ಮೂಲಕ ಅವರ ಚಿಂತನೆ ಧಾರೆಧಾರೆಯಾಗಿ ಹರಿದಿದೆ..!
ಪತ್ರಕರ್ತನಾಗಿ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರಲ್ಲದೇ ಖೋ-ಖೋ ಕ್ರೀಡಾಪಟುವಾಗಿಯೂ ಮೊದಲು ಬೆಸ್ಟ್ ಜ್ಯೂನಿಯರ್ ಪ್ಲೇಯರ್ ರಾಜ್ಯ ಪ್ರಶಸ್ತಿ ಪಡೆದಿದ್ದ ಎಂ. ಮಂಜುನಾಥ ಅದ್ದೆಗೆ ಆನಂತರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ..!
ಅವರ ‘ಒಡಲ ತುಡಿತಕ್ಕೆ ಕೇಡು’ ಕೃತಿಗೆ 2008 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಗಾಳಿ-ಗಮಲು’ ಕೃತಿಗೆ 2010 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪತ್ರಿಕೋದ್ಯಮದ ಸೇವೆಗಾಗಿ 2014 ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಎಂ.ಮಂಜುನಾಥ ಅದ್ದೆಯನ್ನು ಹುಡುಕಿಕೊಂಡು ಬಂದಿವೆ..!
ಹೀಗೆಯೇ ಸಾಗುವ. ಎಂ.ಮಂಜುನಾಥ ಅದ್ದೆಯ ವ್ಯಯಕ್ತಿಕ ಜೀವನ, ಸಾಹಿತ್ಯಿಕ ಪಯಣ, ಅಲ್ಲದೇ ಸಾಮಾಜಿಕ ಹೋರಾಟಗಳ ಯಾತ್ರೆ ಸಾಗುತ್ತದೆ..!
# ಈಗ ಮಂಜುನಾಥ ಅದ್ದೆಯ ‘ಒಡಲ ತುಡಿತಕ್ಕೆ ಕೇಡು’ ಎಂಬ ಸಂಶೋಧನಾ ಪ್ರಬಂಧದ ಬಗೆಗೆ ನೋಡೋಣ —
‘ಒಡಲ ತುಡಿತಕ್ಕೆ ಕೇಡು’ ಎಂಬ ಪ್ರಬಂಧದ ವಿಚಾರ..!ಎಂ.ಮಂಜುನಾಥ ಅದ್ದೆಯ ಸಂಶೋಧನಾ ಪ್ರಬಂಧ ಕೃತಿ ‘ಒಡಲ ತುಡಿತಕ್ಕೆ ಕೇಡು’ ಎಂಬುದು. ‘ವರದಕ್ಷಿಣೆ’ ಎಂಬುದು ಹುಟ್ಟದಿರುವ ಹೆಣ್ಣುಮಗುವಿಗೂ ಕಡುವೈರಿ‘. ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುವ ಜಿಲ್ಲೆಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಮಂಡ್ಯ ಜಿಲ್ಲೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಂಡುಕೊಂಡ ಅಂಶವಿದು ಎಂದು ಪುಸ್ತಕದ ಮುನ್ನುಡಿಯಲ್ಲಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಯ ಡೋನಾ ಫರ್ನಾಂಡೀಸ್ ಹೇಳುತ್ತಾ ಹೊಗುತ್ತಾರೆ..!
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ‘ಹೆಣ್ಣು ಭ್ರೂಣ ಹತ್ಯೆ’ಗಳಿಗೆ ಕಾರಣಗಳೇನು ಎಂಬುದನ್ನು ಕ್ಷೇತ್ರ ಕಾರ್ಯ ಆಧರಿಸಿದ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳನ್ನು ಈ ಕೃತಿಯು ವಿವರವಾಗಿ ದಾಖಲಿಸಿದೆ. `ಮಂಡ್ಯದ ಏಳು ತಾಲ್ಲೂಕುಗಳ ನೂರಾರು ಹಳ್ಳಿಗಳಲ್ಲಿ ಎಲ್ಲ ವಯೋಮಾನದ ಜನರೂ ಹೆಣ್ಣು ಭ್ರೂಣ ಹತ್ಯೆಗೆ ಕೊಡುವ ದೊಡ್ಡ ಕಾರಣವೆಂದರೆ ವರದಕ್ಷಿಣೆಯಾಗಿದೆ. ತಮ್ಮ ಹೆಣ್ಣುಮಗಳ ಮದುವೆಗಾಗಿ ಸಾಲ ಮಾಡಿ ನರಳುವ, ಅದಕ್ಕಾಗಿ ಇದ್ದ ಹೊಲ ಗದ್ದೆ ಕಳೆದುಕೊಂಡು ನರಳುವ ಜನರು ಮಂಡ್ಯದ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯ ಎಂದು ಇಲ್ಲಿ ವಿಶ್ಲೇಷಿಸಲಾಗಿದೆ.
ಆಧುನಿಕ ಅಭಿವೃದ್ಧಿಯ ನೀತಿಗಳು ಆಳದಲ್ಲಿ ಜನಮಾನಸವನ್ನು ಕಂಗೆಡಿಸುವಂತಹದಾಗಿರುತ್ತದೆ. ಕೃಷ್ಣರಾಜಸಾಗರದ ನೀರಾವರಿಗೆ ಬೃಹತ್ ವಿಸ್ತರಣೆ ಸಿಕ್ಕಂತೆಲ್ಲಾ ಸಾಮಾಜಿಕ ಬದುಕಿನಲ್ಲಿ ತಮಗಿದ್ದ ಪಾತ್ರ ಮತ್ತು ಮನ್ನಣೆ ಎರಡನ್ನೂ ಮಂಡ್ಯದ ಮಹಿಳಾ ಸಂಕುಲ ಕಳೆದುಕೊಳ್ಳುತ್ತಾ ಬಂದಿದೆ ಎಂಬುದನ್ನೂ ಈ ಕೃತಿ ಗುರುತಿಸುತ್ತದೆ..!
ಇದೇ ರೀತಿಯಾಗಿ ಸರಿಸುಮಾರು ಸಂಪೂರ್ಣವಾಗಿ ನೀರಾವರಿಗೆ ಒಳಗಾಗಿರುವ ‘ಸಕ್ಕರೆಯ ಕಣಜ’ ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಜಿಲ್ಲೆಯಾಗಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಆಸಕ್ತಿಯ ಸಂಗತಿ ಎಂದರೆ, 0-6 ವಯೋಮಾನದ ಗಂಡು-ಹೆಣ್ಣು ಮಕ್ಕಳ ಅನುಪಾತ ಹೆಚ್ಚಿರುವ ಜಿಲ್ಲೆಗಳಲ್ಲಿ ಕೊಡಗು ಮೊದಲ ಸ್ಥಾನ ಪಡೆದರೆ ಕೋಲಾರ ಎರಡನೆಯ ಸ್ಥಾನ ಪಡೆದಿದೆ. ‘ವೈದಿಕ ಧರ್ಮ’ದ ಹೊರತಾದ ಕೊಡವ ಸಂಸ್ಕೃತಿಯನ್ನು ಹೊಂದಿರುವ ಕೊಡಗು ಹಾಗೂ ವೈದಿಕ ಧರ್ಮಕ್ಕೆ ಪಾರಂಪರಿಕವಾಗಿ ಸೆಡ್ಡು ಹೊಡೆದಿರುವ ಪರಿಶಿಷ್ಟ ಜಾತಿಗಳು ಹೆಚ್ಚಾಗಿರುವ ಕೋಲಾರದಲ್ಲಿ ಹೆಂಗಸರ ಸಂಖ್ಯೆ ಹೆಚ್ಚಾಗಿ ಇರುವುದು ಸಾಮಾಜಿಕವಾಗಿ ಅತಿ ಮಹತ್ವದ ವಿಚಾರವಾಗಿದೆ‘..!
ಇದೇ ರೀತಿಯಾಗಿ ಹುಣಸೂರು ತಾಲ್ಲೂಕಿನಲ್ಲಿ 1000 ಗಂಡು ಮಕ್ಕಳಿಗೆ 1009 ಹೆಣ್ಣು ಮಕ್ಕಳಿರುವ ಸಕಾರಾತ್ಮಕ ಪ್ರವೃತ್ತಿಗೆ, ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಆದಿವಾಸಿ ಜನಸಮುದಾಯದ ಕೊಡುಗೆ ಕಾರಣ ಎಂಬಂತಹ ಹೆಚ್ಚಿನ ಸಾಮಾಜಿಕ ಅಧ್ಯಯನಗಳಿಗೆ ಪ್ರೇರಕವಾಗಬಹುದಾದ ಅಂಶಗಳನ್ನೂ, ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ಇಲ್ಲಿ ದಾಖಲಾಗಿರುವ ಮಂಡ್ಯ ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲಿ ನಡೆದಿರುವ ಹೆಣ್ಣು ಭ್ರೂಣಹತ್ಯೆಗಳ ವೈವಿಧ್ಯಮಯ ಪ್ರಕರಣಗಳು ಮತ್ತು ಪುತ್ರ ವ್ಯಾಮೋಹದ ನೈಜ ಕಥೆಗಳು ಬೆಚ್ಚಿ ಬೀಳಿಸುವಂತಿವೆ. ಹೆಣ್ಣು ಭ್ರೂಣಹತ್ಯೆ ಪಿಡುಗಾಗಿ ಬೆಳೆಯುತ್ತಿರುವುದಕ್ಕೆ ತಂತ್ರಜ್ಞಾನದ ಕೊಡುಗೆಗಳು, ನರ್ಸಿಂಗ್ ಹೋಮ್ ಗಳ ಪಾತ್ರ, ಕಾನೂನಿನ ಮಿತಿ ಹಾಗೂ ಈ ಪಿಡುಗಿನ ವಿರುದ್ಧ ನಡೆಯುತ್ತಿರುವ ಹೋರಾಟಗಳ ಚಿತ್ರಣವನ್ನೂ ಈ ಕೃತಿ ಕಟ್ಟಿ ಕೊಡುತ್ತದೆ..!
ಕಳೆದ ಎರಡೂವರೆ ದಶಕಗಳಲ್ಲಿ ಆಧುನಿಕ ಭಾರತವು ಪಿಡುಗಾಗಿ ತೀರಾ ನಲುಗಿದೆ. ಅಲ್ಲದೇ ಹೆಣ್ಣು ಭ್ರೂಣ ಹತ್ಯೆ ಬೆಳೆದ ಬಗೆಯ ಅವಲೋಕನ ಇಲ್ಲಿದೆ. ಜಾಗತಿಕ ನೋಟದಿಂದ ಹಿಡಿದು ಭಾರತದಲ್ಲಿ ಇದು ಆವರಿಸಿದ ರೀತಿಯ ಹಿನ್ನೋಟವೂ ಇದೆ.
`ಇಂದಿಗೂ ಈ ಪಿಡುಗಿನ ವಿರುದ್ಧ ಇರುವ ಪಿಸಿ ಹಾಗೂ ಪಿಎನ್ಡಿಟಿ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ದೇಶದ ಉದ್ದಕ್ಕೆ ಹೆಣ್ಣು ಭ್ರೂಣಹತ್ಯೆಯ ಪ್ರಕರಣಗಳನ್ನು ಕಾನೂನಿನ ಅಡಿಯಲ್ಲಿ ದಾಖಲಿಸಿಕೊಂಡು ಸರಿಯಾದ ಕ್ರಮದಲ್ಲಿ ವಿಚಾರಣೆ ನಡೆಸಿದ ಒಬ್ಬ ಜಿಲ್ಲಾ ಆರೋಗ್ಯ ಅಧಿಕಾರಿಯೂ ನಮಗೆ ನೋಡಲು ಸಿಗುವುದಿಲ್ಲ. ಈ ಕಾಯ್ದೆಯ ಅಡಿಯಲ್ಲೇ ಹೆಣ್ಣು ಭ್ರೂಣ ಹತ್ಯೆಗಳು ಅಬಾಧಿತವಾಗಿ ನಡೆಯುತ್ತಲೇ ಇವೆ ಎಂದು ಹೇಳುವ ಈ ಪುಸ್ತಕ ಹೆಣ್ಣು ಮಗುವಿನ ಉಳಿವಿನ ಬಗ್ಗೆ ಚಿಂತನೆಗೆ ಪ್ರೇರೇಪಿಸುತ್ತದೆ..!
ಎಂ.ಮಂಜುನಾಥ ಅದ್ದೆಯ ಈ ಮಹತ್ವದ ಕೃತಿಗೆ 2008 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಲಭಿಸಿತು.
ಹೀಗೆಯೇ ಸಾಗುತ್ತದೆ ಎಂ.ಮಂಜುನಾಥ ಅದ್ದೆಯ ವ್ಯಯಕ್ತಿಕ ಬದುಕು, ಸಾಹಿತ್ಯಕ ಬರಹ, ಸಾಮಾಜಿಕ ಹೋರಾಟಗಳ ಬದುಕು..!
ಆನಂತರ ಗೆಳೆಯ ಮತ್ತು ನನ್ನ ಅಣ್ಣನಾದ ಎಂ.ಮಂಜುನಾಥ ಅದ್ದೆಯ ಉಳಿದ ಕೃತಿಗಳ ಬಗೆಗೆ ನೋಡೋಣ..!
ಕೆ.ಶಿವು.ಲಕ್ಕಣ್ಣವರ