ಸಂಧ್ಯಾ ಕಾಲ

ಕಾವ್ಯಸಂಗಾತಿ

ಸಂಧ್ಯಾ ಕಾಲ

ಡಾ.ಡೋ ನಾ ವೆಂಕಟೇಶ

ಸಂಜೆ ಒಬ್ಬನೇ ಕುಳಿತಿದ್ದೇನೆ

ಬಂದ ನನ್ನ ಮಗ
ನನ್ನೊಳ ಹೊಕ್ಕು ಬಾಲ್ಯದ ರಂಗಿನಾಟ ನಾಟ್ಯವಾಡುತ್ತ ನಿಂತ ನನ್ನಂತರಂಗ

ಹೇಗೆ ಬಂದನೋ ಗೊತ್ತಿಲ್ಲ
ಸಂಜೆಯಾಗಿದೆ ಅವನ ಮನೆಯಲ್ಲಿ ಮಡದಿ
ಕುಳಿತಿದ್ದಾಳೆ ಇವನಿಗಾಗಿ ಕಾದು
ಹಂಬಲಿಸುತ್ತಿದ್ದಾಳೆ ಮಗೂ
ನಿನಗಾಗಿ.
ಹೋಗೋ!

ಕುಳಿತಿದ್ದೇನೆ ನಾ
ಒಬ್ಬಂಟಿಯಾಗಿ
ಹಸುಗೂಸು ತನ್ನಮ್ಮನಿಗಾಗಿ
ಕಾತರಿಸುವಂತೆ!

ನೆನಪಿದೆಯಾ ಮಗನೇ
ನಿನಗೆ ತಂಗಿ ಹುಟ್ಟಿದ್ದು
ಹೆಜ್ಜೆ ಹೆಜ್ಜೆಯಿಟ್ಟು ಮಗು
ನಮ್ಮೆಲ್ಲ ಆಸೆ ಸಾಕಾರ
ಅವಳು ಬೆಳೆದದ್ದು
ಜಾಣೆ ನಿನ್ನ ಸೋದರಿ
ನನ್ನ ಕುವರಿ
ಬರಲಾರಳೀಗ ತನ್ನದೇ
ಮನೆಯಿಂದ,
ಮನದಿಂದ .ಸದ್ಯ ಜತನದಿಂದ
ಕಾಯಬೇಕವಳ
ತನ್ನತನದಿಂದ !

ಈಗ
ಬಂದಳು ನನ್ನರಸಿ
ನಿಮ್ಮಿಬ್ಬಿರಾ ತಾಯಿ
ಗಾಂಭೀರ್ಯ ಮೂರ್ತಿವೆತ್ತಂತೆ
ಕಿಲಕಿಲ ನಗು ಮಾರ್ದನಿಸುತ್ತಿದ್ದಂತೆ

ಬಂದಳಾ
ಬಿಡಲಿಲ್ಲ ನನ್ನ
ಮಾಡಿದಿರಾ ವಂದನೆ?
ಹೇಗೆ ಮಾಡಿದರೆ ಯೋಗ?
ಪ್ರಾಣಾಯಾಮ ಮಾಡಿರಿ
ಅಣುಅಣುವಿನ ಆಯಾಮ
ಅರಿತು ಕೊಳ್ಳಿ ಮಾಡಿ
ಸಪ್ತಸ್ವರಗಳ ಝೇಂಕಾರಗಳನ್ನ
ಅರಿಯಿರಿ ಜೀವನದಿಗಳ
ಉತ್ಪಾತಗಳನ್ನ!

ಹೇಳುತ್ತಾ ಹೇಳುತ್ತಾ ಮುಗಿಯಿತು ಎಪ್ಪತ್ತು !

ಈಗ ಮಾಡಿ ನಿರಾಕಾರ ಮೋಡಿ
ಮಾಡಿ ಅತ್ಯುಗ್ರ ನಿರ್ಧಾರ
ಹೊರಡಿ ಇಲ್ಲಿಂದ
ನಾನಿಲ್ಲವೇ ಇಲ್ಲಿ ನಿಮ್ಮ ಪ್ರಾಕಾರ
ನಿಮ್ಮ ವಿಚಾರಗಳಿಗೆ ಬೀಗ
ಹಾಕಿ ಪಟ್ಟಿ ಮಾಡಿ ರೆಡಿ ಇಡಿ

ಇಲ್ಲಿಂದ ಹೊರಡಲಿಕ್ಕೆ ಜಾಗ
ಸಿಕ್ಕಿದೆ ನಿಮಗೊಬ್ಬರಿಗೇ.
ಬಸ್ಸು ಹೊರಡುವ ಹೊತ್ತು
ಗೊತ್ತಿಲ್ಲ ಇನ್ನೂ.

ಏನೆಂದಿರಿ,ನಾನಾ?
ಬರುವೆನು ನಿಮ್ಮ ಹಿಂದೆ ಅಥವಾ ಆಗಬಹುದು
ಸ್ವಲ್ಪ ಹಿಂದೆ ಮುಂದೆ
ಮತ್ತೆ ಅಥವಾ
ಆ ಕಂಡಕ್ಟರನ ದಯೆ
ಒಂದೇ ಜಾಗದಲ್ಲೂ
ಸಿಗಬಹುದು ಸೀಟು !

ಅಲ್ಲ –
ಎಂಥ ಆತ್ಮಾವಲೋಕನವೋ
ಆಕೆಗೆ ನಿನ್ನ ತಾಯಿಗೆ

ಬಿಡು ಅವಳಿರುವ ತನಕ
ನನಗಿಲ್ಲ ಇರುಳು
ಉತ್ತರ ಧೃವ ಅವಳು
ಉತ್ತರ ಧೃವ!!


4 thoughts on “ಸಂಧ್ಯಾ ಕಾಲ

Leave a Reply

Back To Top