ಪುಸ್ತಕ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟು ಹೊತ್ತು

ಸಾಂಗತ್ಯ ~ ೧ 

ಪುಸ್ತಕ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟು ಹೊತ್ತು

ಸಾಂಗತ್ಯ ~  

ಗಿರಿಜಾ ಪರಸಂಗ  :  ಆತ್ಮ ಚರಿತ್ರೆ 

ಲೇಖಕರು   : ಗಿರಿಜಾ ಲೋಕೇಶ್ 

                 ನಿರೂಪಣೆ ಜೋಗಿ 

ಪ್ರಕಾಶಕರು : ಅಂಕಿತ ಪ್ರಕಾಶನ 

ಪ್ರಕಟಣೆಯ ವರ್ಷ : ೨೦೨೧

ಏಕೋ ಈಚೀಚೆಗೆ ಕಲ್ಪನೆ ಫ್ಯಾಂಟಸಿ ಕಥೆಗಳಿಗಿಂತ ವಾಸ್ತವತೆಯ ನೆಲಗಟ್ಟಿನ ಕಥನಗಳು ಪ್ರಿಯವಾಗುತ್ತದೆ . ಅದರಲ್ಲೂ ಆತ್ಮಕಥೆಗಳು ಬಾ ಎಂದು ಕರೆದು ಓದಿಸಿಕೊಳ್ಳುತ್ತಿವೆ, ಹೃದಯಕ್ಕೆ ಹತ್ತಿರವಾಗುತ್ತಿವೆ, ಆಪ್ತವಾಗುತ್ತಿವೆ . ಗಿರಿಜಾ ಲೋಕೇಶ್ ಅವರನ್ನು ಪೋಷಕ ಪಾತ್ರಗಳಲ್ಲಿ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ನೋಡಿದ್ದು ಪಾತ್ರ ಯಾವುದೇ ಆಗಿರಲಿ ಅದರಲ್ಲೇ ಲೀನವಾಗುವ ಅವರಿಗಾಗಿಯೇ ಟೈಲರ್ ಮೇಡ್ ಅನ್ನಿಸುವಂತಹ ಅಭಿನಯ . ಲೋಕೇಶ್ ಅವರ ಅಭಿನಯವು ಅಂತೆಯೇ ನನಗಿಷ್ಟ . ಇನ್ನು ಜೋಗಿ ಅವರು ನನ್ನ ಅಚ್ಚುಮೆಚ್ಚಿನ ಲೇಖಕ . ಇವರೆಲ್ಲರ ಕಾಂಬಿನೇಷನ್ ನ ಈ ಪುಸ್ತಕ ಬಿಡುಗಡೆಯಾಗಿದೆ ಎಂದ ತಕ್ಷಣವೇ ಆನ್ ಲೈನ್ ನಲ್ಲಿ ತರಿಸಿಕೊಂಡು ಆಯಿತು . ನಂತರ ಏನೇನೋ ಅಡಚಣೆಗಳು ಅನಾನುಕೂಲಗಳು.  ಓದಿಗೆ ತೆರೆದುಕೊಳ್ಳಲು ಸ್ವಲ್ಪ ತಡವೇ ಆಯಿತು.  ಆದರೆ ಕೈಗೆತ್ತಿಕೊಂಡಾಗಿನಿಂದ ಕೆಳಗಿಳಿಸದಂತೆ ಓದುವ ಹಾಗೆ ಮಾಡಿಸಿತು.  ನನ್ನ ಈಗಿನ ಓದಿನ ಪ್ರಕ್ರಿಯೆಯಲ್ಲಿ ನಿಜಕ್ಕೂ ಇದು ಅಪರೂಪವೇ. 

ಜೀವನ ಚರಿತ್ರೆಯ ನಿರೂಪಣೆ ಕಷ್ಟದ ಕೆಲಸ.  ಆದರೆ ಅದನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿರುವ ಜೋಗಿಯವರಿಗೆ ನಿಜಕ್ಕೂ ಹ್ಯಾಟ್ಸ್ ಆಫ್.  ಅವರೇ ಹೇಳಿದಂತೆ “ಗಿರಿಜಮ್ಮ ತಮ್ಮ ಭಾವಜಗತ್ತಿನ ಅಭಿವ್ಯಕ್ತಿಯನ್ನು ತಕ್ಕ ಪದಗಳಲ್ಲಿ ಕಟ್ಟಿಡ ಬಲ್ಲವರು . ಅದನ್ನು ಒಂದು ಕ್ರಮದಲ್ಲಿ ಜೋಡಿಸುವುದಷ್ಟೇ ನನ್ನ ಕೆಲಸ”.  ಹೌದು!  ಬಿಡಿ ಬಿಡಿಯಾದ ಹೂಗಳನ್ನು 3 ಕನಕಾಂಬರ 1 ಮಲ್ಲಿಗೆ ಎಂಬಂತೆ ಸುಂದರವಾಗಿ ಕಟ್ಟಿದರೆ ತಾನೇ ಹೂಮಾಲೆ ? ಹೀಗೆ ಕಟ್ಟಿದ ಕಥನವು “ಗಿರಿಜಾ ಪರಸಂಗ” ವಾಗಿ ಅವರ ಬದುಕಿನ ಸುಖ ಕಷ್ಟಗಳನ್ನು ಏಳುಬೀಳುಗಳನ್ನು ನಮಗೆ ದರ್ಶನ ಮಾಡಿಸುತ್ತದೆ. 

ಬಾಲ್ಯಕಾಲದ ಕಥೆಗಳುರಂಗದ ಅಂತರಂಗ,

ಸಿನಿಮಾ ಪ್ರೀತಿ ಪ್ರೇಮ ಮದುವೆ, ದಾಂಪತ್ಯ ಗೀತ, ಮರಳಿ ಅಭಿನಯ ಮಂಟಪಕೆ, ನಾನು ಮತ್ತು ನನ್ನವರು ಎಂಬ 6 ಭಾಗಗಳಲ್ಲಿ ಗಿರಿಜಮ್ಮ ಅವರ ಜೀವನದ ವಿವಿಧ ಘಟ್ಟಗಳ ನೆನಪುಗಳ ಮೆಲುಕುಗಳು  ಸೆರೆಯಾಗಿವೆ . ಪ್ರತಿ ಅಧ್ಯಾಯದ ಆರಂಭದಲ್ಲಿ ಉದಹರಿಸಿದ ಲೋಕೇಶ್ ಅವರ ಎಲ್ಲಿಂದಲೋ ಬಂದವರು ಚಿತ್ರದ ಹಾಡಿನ ಸಾಲುಗಳು ಕೆಎಸ್ಸೆನ್ ಕವಿತೆ ಸಾಲುಗಳು ಅಂದ ಕೊಟ್ಟಿವೆ. 

ಬಾಲ್ಯದ ನೆನಪುಗಳು ಅಂದರೆ ಹಾಗೇ…..

ಸಮುದ್ರದ ದಡದಲ್ಲಿ ಶಂಖ ಕಪ್ಪೆಚಿಪ್ಪು ಆಯ್ದು ಫ್ರಾಕಿನ ಮಡಿಲಿಗೆ ತುಂಬಿಕೊಳ್ಳುವ ಮುಗ್ಧತನ . ತನಗೆ ವಿದ್ಯೆ ಒಲಿಯದಿದ್ದ ಬಗ್ಗೆ ತನ್ನನ್ನು ತಾನೆ ಹಾಸ್ಯ ಮಾಡಿಕೊಂಡು ಬಾಲ್ಯದ ಘಟನೆಗಳಿಗೂ ನಗುವಿನ ಲೇಪ ಕೊಟ್ಟು,  ಕೆಲವೊಮ್ಮೆ ತೀವ್ರ ವಿಷಾದದೊಂದು ಭಾವವು ಇಣುಕುವ ಹಾಗೆ ಮಾಡಿರುವ ರೀತಿ ಅನನ್ಯ.  ಅನುಭವಿಸುವಾಗ ಕಷ್ಟವಾದರೂ ಮುಂದೆ ಕಾಲಘಟ್ಟದ ಏರುಹತ್ತಿ ಹಿಂದಿರುಗಿ ನೋಡಿದಾಗ ಅವು ನಮ್ಮ ಗಟ್ಟಿತನ ರೂಪುಗೊಳ್ಳಲು ನೆರವಾದವೆಂಬುದನ್ನು ಮನಗಾಣುತ್ತೇವೆ.  ಮುಂದೆ ಹೊಟ್ಟೆಪಾಡಿಗಾಗಿ,  ಗೊತ್ತಿದ್ದ ನರ್ತನ ವಿದ್ಯೆಯಿಂದ ನಾಟಕದಲ್ಲಿ ಡಾನ್ಸರ್ ಆಗಿ ನಂತರ ನಟಿಯಾಗಿ ವಿವಿಧ ಪಾತ್ರಗಳಲ್ಲಿ ನಟಿಸುವ ಬಹು ಬೇಡಿಕೆಯ   ನಟಿ

ಆದರೂ ಅವರು ಹೇಳುವ ಈ ಮಾತುಗಳು ಅವರ ವಿನಯವಂತಿಕೆಗೆ ವಸ್ತುನಿಷ್ಠತೆಗೆ ಕನ್ನಡಿ ಹಿಡಿಯುತ್ತದೆ ನೋಡಿ. 

ದಿನಕ್ಕೆ 4 ನಾಟಕಗಳ 4 ಬೇರೆ ಪಾತ್ರಗಳಲ್ಲಿ ನಟಿಸಿದ್ದು , ಆಗ ಅಂಥ ಎನರ್ಜಿ ಇತ್ತು ,ಅನಿವಾರ್ಯತೆಯೂ ಇತ್ತು . ಹೊಟ್ಟೆ ಎಲ್ಲವನ್ನೂ ಕಲಿಸುತ್ತದೆ ಎಷ್ಟು ಬೇಕಾದರೂ ದುಡಿಸುತ್ತದೆ

ಹಾಗೆ ನಾಟಕದಲ್ಲಿ ಅಭಿನಯಿಸುವ ಆಗಿನ ಕೆಲವು ಸಂತಸದ ಹಾಗೆಯೇ ಮನಕ್ಕೆ ನೋವುಂಟು ಮಾಡಿದ ಪ್ರಸಂಗಗಳ ಬಗೆಯೂ ತಿಳಿಸುತ್ತಾರೆ.  ಮುಂದೆ ಲೋಕೇಶರ ಜತೆಗಿನ ಸ್ನೇಹ . ಬಹಿರ್ಮುಖಿ ಸ್ವಭಾವದ ಎಲ್ಲವನ್ನೂ ನಗೆಮೊಗದಿಂದ ಸ್ವೀಕರಿಸುವ ಗಿರಿಜಾ ಅಂತರ್ಮುಖಿಯಾಗಿ ಗಂಭೀರವಾಗಿ ಚಿಪ್ಪಿನೊಳಗಣ ಮುತ್ತಿನಂತ ಲೋಕೇಶ್ ಈ ವಿರುದ್ಧ ಗುಣವೇ ಇವರನ್ನು ಅಯಸ್ಕಾಂತದಂತೆ ಸೆಳೆಯಿತೇನೋ..ಇಲ್ಲಿಂದ ಲೋಕೇಶ್ ಅವರನ್ನು ಒಬ್ಬ ನಟನಾಗಿ ಸ್ನೇಹಿತನಾಗಿ ಪ್ರೇಮಿಯಾಗಿ ಪತಿಯಾಗಿ ಜವಾಬ್ದಾರಿಯುತ ಮನೆಯ ಹಿರಿಯನಾಗಿ ತೆರೆದಿಡುತ್ತಾ ಸಾಗುತ್ತದೆ .ಸ್ನೇಹದಿಂದ ಪ್ರೇಮಕ್ಕೆ ಪರಿಪಕ್ವಗೊಳ್ಳುವ ಪ್ರೇಮ ಅದ್ಭುತ ದಾಂಪತ್ಯ ಗೀತವಾಗುತ್ತದೆ. ಒಮ್ಮೆ ಜೋಗ್ ಜಲಪಾತ ನೋಡುತ್ತಿರುವಾಗ ಲೋಕೇಶ್ ರವರು ಗಿರಿಜಾಗೆ ಒಟ್ಟಿಗೆ ಬಿದ್ದು ಸಾಯೋಣವಾ ಎಂದಾಗ ಹಿಂದೆಮುಂದೆ ಯೋಚಿಸದೆ ಗಿರಿಜ ಹೂಂ ಎಂದರಂತೆ.  ಇದಲ್ಲವೇ ನಿಜ ಪ್ರೀತಿ . ಬ್ರಾಹ್ಮೀ ಮಹೂರ್ತದಲ್ಲಿ ಮರದ ಕೆಳಗೆ ಬಿದ್ದ ಶುಭ್ರ ಶ್ವೇತವರ್ಣದ ಕೆಂಪು ತೊಟ್ಟಿನ ಪಾರಿಜಾತಗಳನ್ನು ಒಂದೊಂದಾಗಿ ಹೆಕ್ಕಿ ಹರಿವಾಣಕ್ಕೆ ತುಂಬಿಡುವಂತೆ ಅವರ ಪ್ರೀತಿಯ ನೆನವರಿಕೆಗಳು.  ಮುಂದೆ ಹದಿನಾಲ್ಕು ವರ್ಷ ತಮ್ಮ ಅಭಿನಯದ ಜೀವನಕ್ಕೆ ಅಲ್ಪ ವಿರಾಮ ಕೊಟ್ಟು ತುಂಬು ಕುಟುಂಬದ ಗೃಹಿಣಿಯಾಗಿ 2 ಮಕ್ಕಳ ತಾಯಿಯಾಗಿ ನಿರ್ವಹಿಸಿದ ಪಾತ್ರ ಲೋಕೇಶರ ಬಗೆಗಿನ ಅಪರಿಮಿತ ಪ್ರೇಮದ ದ್ಯೋತಕವಲ್ಲದೆ ಇನ್ನೇನು?  ಈ ನಾಟಕದ ಹುಡುಗಿ ಮದುವೆಯ ಬಂಧನದಲ್ಲಿ ಇರುತ್ತಾಳಾ ಎನ್ನುವವರ ಅನುಮಾನವನ್ನು ಸುಳ್ಳುಮಾಡಿದ 

ಅನುರೂಪ ದಾಂಪತ್ಯ ಇವರದು.  ಕುವೆಂಪುರವರ ಸಂಸಾರ ಸಂಹಿತೆ ಎಂಬ ಈ ಕವನಕ್ಕೆ ಗಿರಿಜಾ ಮತ್ತು ಲೋಕೇಶ್ ಅವರು ಅತ್ಯುತ್ತಮ ಉದಾಹರಣೆ ಎನಿಸಿಬಿಟ್ಟರು.  ಅದು ಹೀಗಿದೆ .  

ಜನ ನೆರೆದು ಸಭೆಸೇರಿ ಕಯ್ಯ ಚಪ್ಪಾಳೆಯಿಕ್ಕಿ

ಕೊರಳಿಗುರುಳಿಪ ಹಾರ ನನಗೆ ನಿಸ್ಸಾರ 

ತಳಿರ ಬೆರಳಿನ ಕೈಯ್ಯ ಕಂದನ ನಳಿದೋಳು 

ಕೊರಳನಪ್ಪಿದರೆನಗೆ ಸಗ್ಗಕ್ಕೆ ಸಾರ 

ಸಾಮಾನ್ಯತಾ ಸುಖವೆ ಶಾಂತಿ ಜೀವಾಧಾರ

ಸಾಮಾನ್ಯತೆಯೇ ಜಗನ್ ಮಾನ್ಯತಾ ಸಂಸಾರ 

ಕ್ರಮಬದ್ಧವಾಗಿ ಶಾಸ್ತ್ರೀಯ ನೃತ್ಯ ಕಲಿತು ಆರಂಗೇಟ್ರಂ ಮಾಡಬೇಕೆಂಬ ತಮ್ಮ ಬಯಕೆಯನ್ನು ಮಗಳು ಪೂಜಾಳ ಮೂಲಕ,  ತಾತ ಹಾಗೂ ತಂದೆಯರಂತೆ ಕಲಾರಂಗದ ಸೇವೆ ಮುಂದುವರಿಸುವ ಕಾಯಕ ಮಗ ಸೃಜನ್ ಮೂಲಕ ನೆರವೇರಿಸಿಕೊಳ್ಳುವ ಆದರ್ಶತಾಯಿ.  ಲೋಕೇಶ್ ಅವರ ಅನಾರೋಗ್ಯದಲ್ಲಿ ಉಪಚರಿಸಿ ಅವರ ಮರಣಾನಂತರ ಸಂಸಾರ ಕರ್ತವ್ಯವನ್ನು ನೆರವೇರಿಸಿ ಜೀವನದ ಎಲ್ಲ ಪಾತ್ರಗಳಲ್ಲೂ ಸೈ ಎನಿಸಿಕೊಂಡಾಕೆ. ನೇಪಥ್ಯಕ್ಕೆ ಸರಿದು ದುರ್ಭರ ಪರಿಸ್ಥಿತಿಯಲ್ಲಿರುವ ಅದೆಷ್ಟೋ ಹಿರಿಯ ಕಲಾವಿದರಿಗೆ ಇವರು ನೀಡಿರುವ ಸಹಾಯಹಸ್ತ ಮಾನವೀಯತೆಗೆ ಸಂಘ ಜೀವಿಯಾದ ಮನುಷ್ಯನ ಪರಾನುಭೂತಿ ಗೆ ಸಾಕ್ಷಿ . ಒಂದಿಷ್ಟು ಮಾಡಿದರೆ ಅಷ್ಟು ಮಾಡಿದೆನೆಂಬ ಪ್ರಚಾರಪ್ರಿಯರಿರುವ ಈ ಕಾಲದಲ್ಲಿ ತೆರೆ ಮರೆಯ ಕಾಯಿಯಂತಿರುವ ಇವರು ಅನುಕರಣೀಯರು.  ರುಚಿಕಟ್ಟಾದ ಗಸಗಸೆಯ ಪಾಯಸದಂತಿರುವ ಪುಸ್ತಕದಲ್ಲಿ 

ಮಧ್ಯೆ ಮಧ್ಯೆ ಇರುವ ಕಪ್ಪು ಬಿಳುಪು ಹಾಗೂ ಬಣ್ಣದ ಫೋಟೋಗಳು ದ್ರಾಕ್ಷಿ ಗೋಡಂಬಿಗಳ ಸ್ವಾದ ನೀಡುತ್ತದೆ . 

ಮೂರುನೂರು ಪುಟಗಳಲ್ಲಿ ಸಾಗುವ ನೆನಪ ಯಾನದಲ್ಲಿ ಗಿರಿಜಾ ಅವರ ಲವಲವಿಕೆ ಜೀವನಪ್ರೇಮ ಹಾಸ್ಯಪ್ರಜ್ಞೆ ಅಂತಃಸ್ಸರಿತೆಯಾಗಿ  ಓತಪ್ರೋತವಾಗಿ ಹರಿಯುತ್ತದೆ . ತಾಯಿಯ ಬಗ್ಗೆ ಅವರ ಗೌರವ ಪ್ರತಿ ಶಬ್ದದಲ್ಲೂ ಎದ್ದು ಕಾಣುತ್ತದೆ . ಅವರ ಈ ನುಡಿಗಳು ಎಂತಹ ಸಾರ್ವಕಾಲಿಕ ಸತ್ಯ ನೋಡಿ. ” ನಮಗೆ ಮಕ್ಕಳು ಹುಟ್ಟಿದ ಮೇಲೆಯೇ ನಮಗೆ ತಾಯಿಯ ನೋವು ಶ್ರಮ  ಗೊತ್ತಾಗುವುದು “. ತಂದೆ ಎಷ್ಟು ಬೇಜವಾಬ್ದಾರಿಯಿಂದ ಇದ್ದರೂ ಒಂದೇ ಒಂದು ಕಹಿ ನುಡಿಯೂ ಅವರಿಂದ ಹೊರ ಬಂದಿಲ್ಲ . ಇನ್ನು ನಾಟಕರಂಗ ಚಿತ್ರರಂಗದಲ್ಲಿ ಆದ ನೋವು ಅನುಮಾನ ಕಹಿ ಪ್ರಸಂಗಗಳನ್ನು ಸಹ ನಿರ್ವಿಕಾರ ಚಿತ್ತದಿಂದ   ವಾಸ್ತವದ ನೆಲೆಗಟ್ಟಿನಲ್ಲಿ ತಮ್ಮಿಂದ ಆಚೆಗೇ ನಿಂತು ನೆನೆಗುದಿ ತೋಡಿಕೊಂಡರೂ,  ಎಲ್ಲಿಯೂ ಯಾರಿಗೂ ನೋವಾಗದಂತೆ ಬರೆದಿರುವ ರೀತಿ ಖುಷಿ ಕೊಡುತ್ತದೆ.  ಮಕ್ಕಳು ಸೊಸೆ ಸ್ನೇಹಿತರು ಕುಟುಂಬದವರೇ ತನ್ನ ಆಸ್ತಿ ಎನ್ನುವ ಈ ಸ್ನೇಹಜೀವಿಗೆ ಲೋಕೇಶ್ ಅವರಿಂದ ಮೂರು ಆಸೆಗಳ ನಿರೀಕ್ಷೆಯಿತ್ತಂತೆ.  ಅವುಗಳು ಏನು ನೆರವೇರಿತೇ ಅಂತ ಪುಸ್ತಕ ಓದಿ ತಿಳಿದು ಕೊಳ್ತೀರಾ ಅಂತ ನನಗೆ ಖಂಡಿತಾ ಗೊತ್ತು . ಕಡೆಯಲ್ಲಿ ಭರತವಾಕ್ಯ ವಾಗಿ ಹೀಗೆ ಹೇಳುತ್ತಾರೆ “ಒಳ್ಳೆ ಊಟ, ಒಳ್ಳೆ ನಿದ್ದೆ ,ಕೈತುಂಬಾ ಕೆಲಸಕ್ಕೆ ಹಂಬಲಿಸಿದವಳು ನಾನು.  ಎಲ್ಲವೂ ನನಗೆ ಸಿಕ್ಕಿದೆ . ನಟನೆ ಮಾಡುತ್ತಲೇ ಚಿರನಿದ್ರೆಗೆ ಜಾರುವ ಆಸೆ ಮಾತ್ರ ಉಳಿದಿದೆ .” ಇಲ್ಲಿ ಕಗ್ಗದ ಮುಕ್ತಕವೊಂದು ನೆನಪಿಗೆ ಬರುತ್ತಿದೆ. 

ಸದ್ದು ಮಾಡದೆ ನೀನು ಜಗಕೆ ಬಂದವನಲ್ಲ

ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು 

ಗದ್ದಲವ ಬಿಡಲು ಕಡೆದಿನವಾನುಮಾದೀತೆ

ನಿದ್ದೆವೊಲು ಸಾವು ಪಡೆ _ ಮಂಕುತಿಮ್ಮ .

ಜೋಗಿಯವರು ಹೀಗೆ ಹೇಳುತ್ತಾರೆ “ಈ ಸಾರ್ಥಕ ಜೀವನದ ಓದು ನಮ್ಮ ಮನಸ್ಸನ್ನು ತಿಳಿಗೊಳಿಸಿದರೆ ಸಾಕು ಮಿಕ್ಕಿದ್ದು ಅವರ ಧನ್ಯತೆ”. ನಿಜ!  ಗಿರಿಜಮ್ಮ ಅವರು ವರ್ಣಿಸಿರುವ ಆ ಬೆಳದಿಂಗಳ ರಾತ್ರಿಯ ರೈಲು ಯಾನವೇ ಮನಸ್ಸಿನಲ್ಲಿ ಅನುರಣಿಸುತ್ತದೆ.  ಜೀವನದ ಅನಂತ ಯಾನದ ಈ ರೈಲು ಪಯಣದಲಿ ನೆನಪಿನ ಚುಕುಬುಕು ಕೇಳುತ್ತಾ ಅನುಭಾವದ ಅನನ್ಯತೆಯ ಬೆಳದಿಂಗಳು ಸವಿದ ಅನುಭವವಾಗುತ್ತದೆ.  ಏನೋ ಒಂದು ತರಹದ ಧನ್ಯತಾಭಾವದ ಅನುಭೂತಿ ಮೂಡಿಸುವುದಂತೂ ಖಂಡಿತ.


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

  1. ಅಂಕಣ ಬರಹ ಅವಕಾಶಕ್ಕಾಗಿ ಹಾಗೂ ಪ್ರಕಟಣೆಗಾಗಿ ಸಂಪಾದಕರಿಗೆ ಅನಂತಾನಂತ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top