ಅಮ್ಮಂದಿರ ದಿನದ ವಿಶೇಷ

ಲೇಖನ

ಅಮ್ಮಂದಿರ ದಿನದ ವಿಶೇಷ

ಸಿದ್ದರಾಮ ಹೊನ್ಕಲ್

ನನ್ನ ತಾಯಿ ಹೀಗಿದ್ದಳು

ನಾನೊಬ್ಬ ಸಾಮಾನ್ಯ ಲೇಖಕ.ನನ್ನ ತಾಯಿ ನಿಜಕ್ಕೂ ಸಾಮಾನ್ಯನ ಅಸಮಾನ್ಯ ತಾಯಿಗರುಳಿನ ತಾಯಿ. ತಾಯಿ, ಅವ್ವ,ಅಮ್ಮ, ಎಂದು ಕರೆಸಿಕೊಳ್ಳುವ ಈ ನನ್ನವ್ವ ಜಗದ ಎಲ್ಲ ತಾಯಿಯರ ಪ್ರತಿನಿಧಿ.ತಾಯಿಯ ಹೋಲಿಕೆ ತಾಯಿಗಲ್ಲದೆ ಅನ್ಯರಿಗೆ ಹೋಲಿಸಲಾಗದು.ಕಡು ಬಡವನ ತಾಯಿಗೂ; ಕೋಟ್ಯಾಧೀಶ್ವರನ ತಾಯಿಗೂ ಒಂದೇ ತಾಯಿ ಕರುಳು ಆ ಸೃಷ್ಟಿಕರ್ತ ನೀಡಿರಬಹುದು.

ಗಂಡು ಮಕ್ಕಳು ತಾಯಿಯ ಕಡೆಗೆ, ಹೆಣ್ಣು ಮಕ್ಕಳು ತಂದೆಯ ಕಡೆಗೆ ಒಲವು ಹೊಂದಿರುತ್ತಾರಂತೆ.ನಮ್ಮ ತಾಯಿ ಶ್ರೀಮತಿ ಕಾಂತಮ್ಮ ಹೊನ್ಕಲ್,ಆಕೆಯ ಹಿರಿಮಗ ನಾನು. ನನ್ನ ಹಿಂದೆ ಇನ್ನೂ ಆರು ಜನ.ಮೂರು ಜನ ಗಂಡು ಮಕ್ಕಳು, ಮೂರು ಜನ ಹೆಣ್ಣು ಮಕ್ಕಳು.ತಂದೆ ಶ್ರೀ ಶರಣಬಸಪ್ಪ ಹೊನ್ಕಲ್.ನಮ್ಮ ತಂದೆ ಹೆಸರಿಗೆ ತಕ್ಕ ಹಾಗೆ ಶರಣಬಸಪ್ಪನೇ…ಸದಾ ಭಜನೆ,ಪುರಾಣ, ಪುಣ್ಯಕಥೆ, ಉಪನ್ಯಾಸ ಅಂತ ಮಠ ಮಂದಿರಗಳ ಸುತ್ತಲೇ ಸುತ್ತುವ ಒಂದು ತರಹದ ಅನುಭಾವಿ ವ್ಯಕ್ತಿತ್ವ. ಹಾಗಾಗಿ ಬದುಕಿನಲ್ಲಿ ಯಾವುದನ್ನು ಸಿರಿಯಸ್ ಆಗಿ ತಗೋತಿರಲಿಲ್ಲ.ನಾಟಕದ ಗೀಳು ಬೇರೆ.ಹವ್ಯಾಸಿ ನಾಟಕಗಳಲ್ಲಿ ಅನೇಕ‌ ಪಾತ್ರ ವಹಿಸುತ್ತಿದ್ದ.

    ನಮ್ಮದು ನೂರಾರು ಏಕರೆ ಭೂಮಿಯ ರೈತಾಪಿ ಲಿಂಗಾಯತ ಕುಟುಂಬ,ಹಾಗಾಗಿ ಸಗರ ಮತ್ತು ಶಾರದಹಳ್ಳಿ ಎಂಬ ಎರಡು ಊರುಗಳಲ್ಲಿ ಹೆಸರಾಂತ ಕಿರಾಣಿ ವ್ಮಾಪಾರ. ನಮ್ಮ ಅಜ್ಜಂದಿರು ಶ್ರೀ ಬಸಪ್ಪ ಸಾಹುಕಾರ, ಮುನೆಪ್ಪ ಸಾಹುಕಾರ ಅಂತ ತಮ್ಮ ಸುತ್ತಲಿನ ಹತ್ತಾರು ಹಳ್ಳಿಗಳ ಬಡವರಿಗೆ ಸದಾ ಮದುವೆ ಮುಂಜಿ ಧಾನ ದರ್ಮ ಹೀಗೆ ಮಾಡಿ ಜನಪದ ಹಾಡಾದಂತಹ ಜನ. ಬೆಳೆ ಬಂದ ತಕ್ಷಣ ನಮ್ಮ ಬಂಡಿಯಲ್ಲಿ ಜೋಳ ಕಾಳು ಏರಿಸಿಕೊಂಡು ಸುತ್ತಲಿನ ಮಠದ ದಾಸೋಗಗಳಿಗೆ ಕೊಟ್ಟು ಬರುತ್ತಿದ್ದರು. ಮನೆಯಲ್ಲಿ ಹತ್ತಾರು ಯತ್ತಿನ ಒಕ್ಕಲುತನ, ಹತ್ತಾರು ಆಳು ಕಾಳು,ಓಡಾಡಲು ಕುದುರೆ ಇದ್ದವು.ನಾನು ಆಗ ತುಂಬಾ ಚಿಕ್ಕವ.ನಮ್ಮ ತಾಯಿ ತವರು ಮನೆಯವರು ಸಹ ದೊಡ್ಡ ಕುಳ.ಇಡೀ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿಗೇನೇ ದೊಡ್ಡ ಶ್ರೀಮಂತರು.ನಾಲ್ಕುನೂರು ಏಕ್ರೆ ಹೊಲ ಇರುವ ರೈತರು. ಶ್ರೀ ಗೂಳಪ್ಪ ಸಾಹು ಕಾಮಾ ಎಂಬ ಹೆಸರು ಅವರದು. ಅವರ ಹಿರಿಯ ಮಗಳೇ  ನಮ್ಮ ತಾಯಿ ಕಾಂತಮ್ಮ. ಇಂತಹ ಶ್ರೀಮಂತ ದಾಸೋಹಿ ಕುಟುಂಬದ ನಾವು ಬಾಯಲ್ಲಿ ಬಂಗಾರದ ಚಮಚ ಇಟ್ಟುಕೊಂಡು ಹುಟ್ಟಿದವರು. ಬಾಲ್ಯದಲ್ಲಿ ಕಷ್ಟ ಅನ್ನೋದು ಗೊತ್ತು ಇರಲಿಲ್ಲ.ಆಗ ಸಸ್ತಾಕಾಲ.೧೯೭೨ ರ ಬರಗಾಲದಲ್ಲಿ ಬಡ ಜನರಿಗೆ ಎಲ್ಲ ಹಗೆ ತೆಗೆದು ಮನೆಗೆ ಬೇಕಾದಷ್ಟು ಇಟ್ಟುಕೊಂಡು ಉಚಿತವಾಗಿ ಜನರಿಗೆ ನಮ್ಮ ತಾತ ಜೋಳ ಕಾಳು ಹಂಚಿ ಆ ಕಾಲಕ್ಕೆ ಸಾವಿರಾರು ರೂಪಾಯಿ ಬಡವರ ಸಾಲ,ಬಾಕಿ ಮನ್ನಾ ಮಾಡಿ ಬಿಟ್ಟಿದ್ದರು.ಅಂತಹ ದೊಡ್ಡ ಕುಟುಂಬ ನಮ್ಮದು.ಮುಂದೆ ನಮ್ಮ ತಾತಂದಿರು ಬೇರೆ ಬೇರೆ ಆದರು. ಅವರವರ ಮಕ್ಕಳು ದೊಡ್ಡವರಾದ ಮೇಲೆ ಕೂಡು ಕುಟುಂಬ ಉಳಿಯಲಿಲ್ಲ. ಎರಡು ಊರಲ್ಲಿ ಆಸ್ತಿ, ಮನೆಗಳು, ದುಕಾನಗಳು ಇದ್ದವು.ನಾವು ಸಗರ ಉಳಿದೆವು. ನಮ್ಮ ಇನ್ನೊಬ್ಬ ತಾತ ಜನರಿಗೆ ಆಯುರ್ವೇದ ಔಷಧ ಇತ್ಯಾದಿ ಕೊಡುತ್ತಾ ೧೦೩ ವರ್ಷ ಬದುಕಿದ್ದ.ಆತನಿಗೆ ಎರಡನೇ ಸಲ ಹಲ್ಲು ಬಂದಿದ್ದವು.ಮತ್ತೊಮ್ಮೆ ತೊಟ್ಟಿಲು ಕಾರಣ ಮಾಡಿದ್ದೆವು.ಅವರು ಶಾರದಹಳ್ಳಿ ಇದ್ದರು. ಶಹಾಪುದ ತಾಲೂಕು ನಮ್ಮದು.

ನಾನು ಸಗರದಲ್ಲೆ sslc ವರೆಗೆ ಓದಿ ಪಿಯು ಓದಲು ಸುರಪುರ ಹೋದೆ.ನಮ್ಮ ಊರಿಂದ ಬರುತ್ತಿದ್ದ ಆ ಕಾಲದ ಸರ್ವಿಸ ಬಸ್ ಗಳಲ್ಲಿ ನಮ್ಮ ತಾಯಿ ದಿನಾ ಬೆಳಿಗ್ಗೆ ಬೇಗ ಎದ್ದು ಅಡುಗೆ ಮಾಡಿ ಬುತ್ತಿ ಕಳಿಸ್ತಾ ಇದ್ದಳು.ಆಗಿನಿಂದ ಬುತ್ತಿ ಊಟದ ರುಚಿ ಹಚ್ಚಿಕೊಂಡ ನನಗೆ ಈಗಲೂ ಆ ಬುತ್ತಿ ಊಟದ ರುಚಿ ಹೋಗಿಲ್ಲ.ಹೊರಗೆ ಹೋಗಬೇಕಾದರೆ ಎತ್ತು ಬಂಡಿಕಟ್ಟಿ ಸವಾರಿ ಇಟ್ಟುಕೊಂಡು ನಮ್ಮ ತಾಯಿ ಮನೆಯ ಇತರರು ಹೊಲಕ್ಕೆ, ಊರಿಗೆ ಹೋಗುವ ಪದ್ದತಿ ಇತ್ತು.ಅವರ ತವರು ಮನೆಯಿಂದಲೂ ಇದೇ ಪರಸ್ಥಿತಿ ಇತ್ತು. ಅವಿಭಕ್ತ ಕುಟುಂಬ ನೋಡುವಂತಿದ್ದವು.ಅವರ ತವರಿನಲ್ಲಿ ೨೫-೩೦ ಜನ.ನಮ್ಮ ಮನೆಯಲ್ಲಿ ಅಷ್ಟೇ ಜನ.

   ನಮ್ಮ ತಾತ ಇರೋವರೆಗೂ ಇದೆಲ್ಲ ಚೆಂದ ಇತ್ತು.೧೯೭೯ ರ ಒಂದು ಬೆಳಿಗ್ಗೆ ನಮ್ಮ ತಾತ ಹಾರ್ಟ ಅಟ್ಯಾಕ್ ಆಗಿ ತೀರಿಕೊಂಡ. ನಾ ಸುರಪುರದಿಂದ ಬಂದೆ.ಆಗಿನ್ನೂ ಪಿಯು ಪ್ರಥಮ ಕ್ಲಾಸ್ ಓದುತ್ತಾ ಇದ್ದೆ. ನಂತರ ಚಿತ್ರವೇ ಬದಲಾಯಿತು.ನಮ್ಮ ತಂದೆ ಶರಣಬಸಪ್ಪನೇ. ನಮ್ಮ ಮಧ್ಯದ ಕಾಕನ ಕೈಗೆ ಸಂಸಾರ ಹೋಯಿತು.ದುಕಾನದ ಗೋದಾಮಿನಲ್ಲಿ ನಮ್ಮ ತಂದೆ ಪುರಾಣ ಕಾವ್ಯ,ಶರಣ ಸಾಹಿತ್ಯ ಓದುತ್ತಾ ಮಲಗುತಿದ್ದ. ಅಂಗಡಿಯ ನಾಲ್ಕಾರು ಗುಮಾಸ್ತರೇ ಎಲ್ಲಾ ವಹಿವಾಟು ನೋಡಿಕೊಂಡು ಬಂದು ಮನೆಯ ತಿಜೇರಿ ಕೀಲಿ ತೆರೆದು ಅಂದಿನ ವ್ಯಾಪಾರದ ಹಣ ಇಟ್ಟು ಕೀಲಿ ನಮ್ಮ ತಾಯಿಯ ಕೈಯಲ್ಲಿ ಕೊಟ್ಟು ಹೋಗುವ ಪದ್ದತಿ ಇತ್ತು.

 ನಮ್ಮ ಸಂಸಾರ ನಡೆಸುವ ಚಿಕ್ಕಪ್ಪನಿಗೆ ಪತ್ನಿಯ ಕಡೆಯ ಒಂದು ಆಸ್ತಿಯ ಸಲುವಾಗಿ ಕೋರ್ಟ್ ನಲ್ಲಿ ಕೇಸು ನಡೆದಿದ್ದವು. ನಮ್ಮ ತಂದೆ ಆ ಕೇಸಿಗಾಗಿ ಆ ಕಾಲದಲ್ಲಿ ಸಾಕಷ್ಟು ಬೆಂಗಳೂರು,ವಕೀಲರು ಕೋರ್ಟ್ ಅಂತ ತಿರುಗಾಡುತ್ತ ಹಣ ಖರ್ಚು ಮಾಡುತ್ತಿದ್ದ.ಇಲ್ಲಾ ಪುರಾಣ ಪುಣ್ಯ ಕಥೆಗಳ ಕೇಳಲು ಮಠ ಮಂದಿರ ತಿರುಗಾಡುತ್ತ ಇದ್ದ. ನಾಟಕಗಳ ಹುಚ್ಚು ಬೇರೆ.ನಮ್ಮದೇ ಊರಿನ ನಮ್ಮದೇ ಗುರುಲಿಂಗೇಶ್ವರ ನಾಟ್ಯ ಸಂಘ ಬೇರೆ ಇತ್ತು.ಇದರಲ್ಲೆ ತೊಡಗಿದ್ದರಿಂದ ಹಣ,ಬಂಗಾರ ಕರಗುತ್ತಾ ಹೋಯಿತು. ೧೯೭೨ ಬರಗಾಲದ ನಂತರ ಬೆಳೆ ಬಿತ್ತು ಕಡಿಮೆ ಆಗುತ್ತಾ ಹೋಯಿತು.ನಮ್ಮ ತಾಯಿ ಮಾತ್ರ ನಮ್ಮ ದೊಡ್ಡ ಕುಟುಂಬದ ಯಜಮಾನಿತ್ವ ವಹಿಸಿ ಕುಟುಂಬ ಮುನ್ನೆಡೆಸಿದಳು.

    ಪಾಲಾದ ಮೇಲೆ ಹೊಲವು ಕಡಿಮೆ ಆದವು.ಒಂದಷ್ಟು ಮಾರೋದು ಆಯಿತು.ವ್ಯಾಪಾರದ ಹಣ ಕೆಲ ಗುಮಾಸ್ತರ ಕೈ ಚಳಕಕ್ಕೆ ಕಡಿಮೆ ಆಗುತ್ತಾ ಬಂತು.ಲಾರಿಗಟ್ಟಲೇ ಬರುತ್ತಿದ್ದ ಒಂದೊಂದು ಐಟಂ ಮಾಲು ನಿಧಾನವಾಗಿ ಕಡಿಮೆ ಆಗಿ ನಗದಿಕೊಟ್ಟು ಒಯ್ಯಿರಿ.ಉದ್ರಿ ಇಲ್ಲ ಅನ್ನುವ ಮಟ್ಟಕ್ಕೆ ವ್ಯಾಪಾರ ಕುಸಿಯಿತು.ನಮ್ಮ ತಾಯಿ ಸಗರದಿಂದ ಶಾರದಹಳ್ಳಿಗೆ ಸವಾರಿ ಬಂಡಿಯಲ್ಲಿ ಹೋಗುವವಳು ಹೋಗೀವಾಗ ನಾಲ್ಕು,ಬರುವಾಗ ನಾಲ್ಕು ಹೀಗೆ ಎಂಟು ಕಿಲೋಮೀಟರ್ ನಡೆದುಕೊಂಡು ತಿರುಗಾಡಿ ಹೊಲದ ಉಸ್ತುವಾರಿ ನೋಡಿಕೋಬೇಕಾಯಿತು.ಅವಳ ತವರಿನವರು,ನಮ್ಮ ಕುಟುಂಬದವರು ಹಾಕಿದ ನೂರಾರು ತೊಲೆ ಬಂಗಾರ ಎರಡು ನೂರುದಿಂದ ಆರಂಭಗೊಂಡು ಐದು ನೂರು,ಎರಡು ಸಾವಿರದವರೆಗೆ ಮಾರಬೇಕಾಯಿತು.

 ಮಠ ಮಾನ್ಯಗಳಿಗೆ‌ ಕೊಟ್ಟು ಬರುತ್ತಿದ್ದ ನಮ್ಮ ಕುಟುಂಬಕ್ಕೆ ನಮ್ಮ ತಾಯಿಯ ತವರಿನಿಂದ ಜೋಳ ದನಕರುಗಳಿಗೆ ಸೊಪ್ಪಿ ಮೇವು ತರುವ ಪರಸ್ಥಿತಿ ಎರಡು ವರ್ಷಗಳ ವರೆಗೆ ನಡಿತು.ಆ ಕಷ್ಟಗಳ ದಿನಗಳಲ್ಲಿ ನಾನು‌ ಸುರಪುರ ಪದವಿ ಓದಿ ಮುಗಿಸಿದೆ.ಈ ಕಷ್ಟದ ದಿನಗಳಲ್ಲಿ ಒಬ್ಬ ತಂಗಿಯ ಮದುವೆ ಬೇರೆ ನಡೆಯಿತು.ತನ್ನ ತಮ್ಮನಿಗೆ ಕೊಟ್ಟು ವಿವಾಹ ನೆರವೇರಿಸಲಾಯಿತು. ನಮ್ಮ ಕಕ್ಕಂದಿರು ಅದೇ ಸಮಯ ಬೇರೆ ಆಗುವ ಪರಿಸ್ಥಿತಿ ಬಂತು.ಪಾಲಾದರು. ನಮ್ಮ ತಂದೆ ಆಗಲೂ ಶರಣಬಸವಪ್ಪನೇ. ಆಗಲೂ ಎದೆಗುಂದದೇ ಕುಟುಂಬ ಮುಂದೆ ನಡೆಸಲು ಪರೋಕ್ಷ ದೈರ್ಯ ನಮ್ಮ ತಾಯಿದೇ.ಆಗಲೂ ಆಸ್ತಿ ಇತ್ತು.ಬೆಳಸು ಉತ್ಪನ್ನ ಇರಲಿಲ್ಲ.

   ಊರಲ್ಲಿಯ ದುಕಾನ‌ ಸಹ ನಮ್ಮ ಚಿಕ್ಕಪ್ಪಂದಿರ ಪಾಲಿಗೆ ಬಂತು.ನಾನೇ ಪಾಲು ಮಾಡಿಕೊಟ್ಟಿದ್ದೆ.ಅವರೆಲ್ಲ ಒಳ್ಳೆಯವರೇ,ನಮ್ಮ ಗುಮಾಸ್ತರು‌ ನಮ್ಮ ದುಕಾನದ  ಮುಂದೆಯೇ ದೊಡ್ಡ ದೊಡ್ಡ ದುಕಾನ ತೆಗೆದು ವ್ಯಾಪಾರದಲ್ಲಿ ಸ್ಪರ್ಧೆ ಮಾಡಿದರು.ನಮ್ಮ ತಾಯಿ ಬುತ್ತಿ ಕಳಿಸಿ ಕಳಿಸಿಯೇ ನನಗೆ ದೈರ್ಯ ತುಂಬಿ ಓದಿಸಿದಳು. ಆಗ ಆಕೆ ಕೊಟ್ಟ ದೈರ್ಯ,ತನ್ನದು ನಿನ್ನದು ಎಂದು ನೋಡದೇ ಬಿಚ್ಚಿ ಕೊಟ್ಟ ನೂರಾರು ತೊಲೆ ಬಂಗಾರ ನಮ್ಮ ಕುಟುಂಬ ಪೂರಾ ಹದಗೆಡದಂತೆ ಉಳಿಯಿತು. ನಾ ಎಕನಾಮಿಕ್ಸ್, ಸೋಸಿಯಾಲಜಿ, ಸೈಕಾಲಜಿ ಓದಿದ್ದೆ.ಮುಂದೆ ಡಿಗ್ರಿ ಮುಗಿಯುತ್ತಲೇ ನಾ‌ ಬ್ಯಾಂಕ್ ಪರೀಕ್ಷೆ ಪಾಸಾದೆ. ಕಲಬುರ್ಗಿಯಲ್ಲಿ ನೌಕರಿ ಸಿಕ್ಕಿತು.ಅದು ಮಾಡುತ್ತಾ ಸಂಜೆ ಕಾಲೇಜು ಲಾ ಓದಿದೆ. ಕರ್ನಾಟಕ ವಿವಿಯಿಂದ ಎಂ.ಎ. ಮುಗಿಸಿದೆ. ನಂತರ ನಮ್ಮ ಶಹಾಪುರ ತಾಲೂಕಿನ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕ ಆಗಿ ಕೆಲಸ ಮಾಡಿದೆ. ಕೆಪಿಎಸ್ಸಿ ಮೂಲಕ ಮುಂದೆ ಕಾಯಂ ಉದ್ಯೋಗ ಸಿಕ್ಕು ವರ್ಗಾವಣೆ ಪಡೆದು ನಮ್ಮ ತಾಲೂಕಿಗೆ ಹಿಂದಿರುಗಿ ೧೯೮೮ ರಲ್ಲಿ ನಮ್ಮ ಊರಿಗೆ ಮತ್ತೇ ಮರಳಿದೆ.

ನಮ್ಮ ತಾಯಿಯ ದೈರ್ಯ ಗಟ್ಟಿ ಇತ್ತು. ಆರ್ಥಿಕ ಪರಿಸ್ಥಿತಿ ಚೇತರಿಕೆ ಇರಲಿಲ್ಲ.ಎರಡನೇ ಸಹೋದರಿ ವಿವಾಹ ಮಾಡಿದೆವು. ಅನೇಕ ಆಳುಕಾಳು ಇಟ್ಟುಕೊಂಡು ಶ್ರೀಮಂತ ಜೀವನ ನಡೆಸಿದ ನಮ್ಮ ತಾಯಿ ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ನಮಗೆ ಧೈರ್ಯ ಹೇಳುತ್ತಾ ಬೆಂಗಾವಲಾಗಿದ್ದಳು.ಹೇಗೋ ಕಷ್ಟಪಟ್ಟು ನಮ್ಮ ವಿಜಯಕುಮಾರನಿಗೆ ಗುತ್ತೆದಾರಿಕೆ ಆರಂಭಿಸಿದೆವು. ಇನ್ನೊಬ್ಬಾತ ಜಗದೀಶನಿಗೆ ಮೂಲ ವ್ಯವಹಾರ ಮಾಡಲು ಊರಲ್ಲಿಯ ಒಂದು ಪ್ಲಾಟ್ ಮಾರಿ ಶಹಾಪುರ ಬಂದು ೧೯೯೧ ರಲ್ಲಿ ಒಂದು ಜನರಲ್ ಸ್ಟೋರ್ ಬುಕ್ ಸ್ಟಾಲ್ ಆರಂಭಿಸಿದೆವು.

ನಮ್ಮ ತಾಯಿ ದಿನಾ ನಡೆದು ಹೋಗಿ ನೋಡಲು ದೂರ ಆಗುತ್ತದೆ ಎಂದ ಕಾರಣ ಆಕೆಯ ಸಲಹೆ ಮೇರೆಗೆ ಶಾರದಹಳ್ಳಿಯ ಆರು ಏಕ್ರೆ ಹೊಲ ಮಾರಿ ಶಹಾಪುರದಲ್ಲಿ ಅದೇ ಹಣದಿಂದ ಒಂದಷ್ಟು ಅಂಗಡಿ ಹಾಕಬಹುದಾದ ಜಾಗಗಳ ಕೊಂಡೆ.ಅವೇ ಈಗ ನಮ್ಮ ಕೈ ಹಿಡಿದಿವೆ. ನಮ್ಮತಾಯಿಯ, ತಂದೆಯ, ನಮ್ಮ ತಾತಂದಿರ ಪುಣ್ಯದ ಫಲ ನಮಗೆ ತಟ್ಟಿತು.ಮುಂದೆ ನಾಲ್ಕಾರು ವರ್ಷಗಳಲ್ಲಿ ಮುಟ್ಟಿದ್ದೆಲ್ಲ ಚಿನ್ನವಾಗಿ ಬದಲಾಯಿತು. ಸಮಾಜಶಾಸ್ತ್ರ ಬೋಧಕನಾಗಿದ್ದ ನಾ ಲೇಖಕನಾಗಿ, ಕವಿಯಾಗಿ ಬೆಳಿತಾ ಹೋದೆ.ಏನೇ ಮಾಡಿದರು ನಮ್ಮ ತಾಯಿಯ ಕೇಳದೇ ನಾನೇನು ಮಾಡುತ್ತಿರಲಿಲ್ಲ.ಹಣ ಬಂಗಾರ ಹೋಗಿತ್ತು. ಭೂಮಿ ಆಸ್ತಿ ಇತ್ತಲ್ಲ.ಕಾಕಂದಿರು ಪಾಲಾದ ಕಾರಣ ಭೂಮಿಯು ಕಡಿಮೆ ಆಗಿತ್ತು.ಕಕ್ಕಂದಿರಾದ ಶ್ರೀ ಪ್ರಭಣ್ಣ,ಶ್ರೀ ಬಾಪುಜಿ ಸಹ ತುಂಬಾ ಒಳ್ಳೆಯವರೇ.ನಾವು ಎಲ್ಲರೂ ವಿಶ್ವಾಸದಿಂದ ಇರುವಂತೆ ಮನೆಯಲ್ಲಿ ನಮ್ಮ ತಾಯಿ ನೋಡಿಕೋತಾ ಇದ್ದಳು.ಜನರಲ್ ಸ್ಟೋರ್  ಬೆಳಿಸುತ್ತಾ ವ್ಯಾಪಾರ ವಹಿವಾಟು ಸ್ವಂತ ಸಹೋದರರೇ ಮಾಡತೊಡಗಿದ ಕಾರಣದಿಂದ ಏನೇನು ಕರಗಿತ್ತೋ ಅದೆಲ್ಲ ಮರಳಿ ಬಂತು. ಆಗಲೂ ನಮ್ಮ ತಂದೆ ಶರಣಬಸವಪ್ಟನೇ.

ನಮ್ಮ ತಾಯಿಯ ಸಲಹೆ, ಆಶಿರ್ವಾದ, ಗಟ್ಟಿತನ ಮೂಲಕ್ಕೆ ಮುಟ್ಟಿಸಿತು.೭-೮ ವರ್ಷಗಳ ಹಿಂದೆ ತಮ್ಮ ೭೮ ನೇ ವಯಸ್ಸಿನಲ್ಲಿ ನಮ್ಮ ತಂದೆ ಹೃದಯಾಘಾತದಿಂದ ಲಿಂಗೈಕ್ಯ ಆದರು.ನಮ್ಮ ತಾಯಿಯು ಕಣ್ಣೀರು ಒರೆಸಿಕೊಂಡು ನಮ್ಮ ಬೆನ್ನ ಹಿಂದೆ ನಿಂತಳು.ಅವಳಿಗೆ ಅರಿವಿಲ್ಲದೇ ಕ್ಯಾನ್ಸರ್ ಆವರಿಸಿಕೊಂಡಿತ್ತು.

ಅವ್ವ ಒಂದು ಗಜಲ್

ತಪಾಸಣೆಯ ಕರೆಗಾಗಿ ದಿನಗಟ್ಟಲೇ ಕಾದು ಕುಂತು ನಿಂತು ಚಡಪಡಿಸುತ್ತಾನೆ

ಪ್ರಪಂಚದಲ್ಲಿ ಮನೆಗೊಬ್ಬ ವೈದ್ಯಬೇಕು ಡಾಕ್ಟರ್ ಆಗಬೇಕಿತ್ತೆಂದುಕೊಳ್ಳುತ್ತಾನೆ

ಪೆಶೆಂಟ್ ನ ಕರೆದಾಗೊಮ್ಮೆ ಫ್ರೀ ಮೆಡಿಕಲ್ ಶೀಟ್ ಸಿಕ್ಕ ಪಾಲಕರ ಖುಷಿ ಮುಖದಲ್ಲಿ

ಕೈ ಹಿಡಿದು ಒಳ ಹೋಗುತ್ತಾನೆ ಮನದೊಳಗೆ ಬಿಕ್ಕುತ್ತಾ ಹೊರಬರುತ್ತಾನೆ

ಸಾಕು ಸತ್ತರೆ ಹಿಂಗೆ ಸಾಯುತ್ತೇನೆ ಇನ್ನೆಲ್ಲೂ ಬರಲಾರೆ ಅನ್ನುತ್ತಾಳೆ ಅವನಮ್ಮ

ಕಷ್ಟ ನೋಡಲಾಗದೆ ಆಯಿತು ಕೊನೆಯ ಸಾರಿ ಪ್ರತಿ ಸಾರಿಯು ಹೇಳುತ್ತಾನೆ

ಹೀಗೆ ಜನ್ಮಕೊಟ್ಟ ತಾಯಿಗಾಗಿ ಆಕೆಯ ಋಣ ತೀರಿಸಲಾಗದ ಈ ಜನ್ಮಕ್ಕಾಗಿ

ಬಾಲ್ಯದಿ ಕುಣಿದರೇನು ನೊಂದು ಬೆಂದರೇನು ತುತ್ತಿಟ್ಟ ಜೀವಕ್ಕೆ ಹಂಬಲಿಸುತ್ತಾನೆ

ಹೊನ್ನಸಿರಿ’ ಓ,ದೇವರೆ ನೀನೇ ಈ ಸುಂದರ ಪ್ರಪಂಚ ನಿರ್ಮಾಣ ಮಾಡಿದ್ದೆ ನಿಜವಾದರೆ

ಈ ಅನಂತ ರೋಗಗಳನ್ನೇಕೆ ಸೃಷ್ಠಿಸಿದೆ ಇವುಗಳಿಂದ ಜನತೆಗೆ ಮುಕ್ತಿಕೊಡು ಕೋರುತ್ತಾನೆ

ಸಾಕಷ್ಟು ಸ್ಥಿತಿವಂತರಾಗಿದ್ದ ನಾವು ಎಲ್ಲಾ ಚಿಕಿತ್ಸೆ ಕೊಡಿಸಿದೆವು.ಅನೇಕರಿಗೆ ಸಹಾಯ ಸಹಕಾರ ಮಾಡಿದ ನಮ್ಮ ತಾಯಿಗೆ ಇದೊಂದು ದೊಡ್ಡ ಚಿಂತೆ ಆಗಿತ್ತು.ನಿಮ್ಮ ತಂದಿಗೆ ಪಟ್ ಅಂತ ಕರಕೊಂಡು ದೇವರು ನನಗೇಕೆ ಇಷ್ಟು ಶಿಕ್ಷೆ ಕೊಟ್ಟ ಅಂತ ಸದಾ ಚಿಂತಿಸುತ್ತ ಇದ್ದಳು. ಶಹಾಪುರ, ಕಲಬುರ್ಗಿ, ಹೈದರಾಬಾದ್, ಬೆಂಗಳೂರು ಹೀಗೆ ಎಲ್ಲಾ ಕಡೆ ರೇಡಿಯೋ ಥೆರಪಿ,ಕಿಮೋ ಥೆರಪಿ ಮಾಡಿಸಿದರು ಗುಣವಾಗಲೇ ಇಲ್ಲ.ಕೊನೆಗೆ  ಈ ೨-೩ ವರ್ಷಗಳ ಕಾಲ ಬದಾಮಿ ಹತ್ತಿರ ಶ್ರೀ ಮಳಲಿ ಅನ್ನುವವರ ಹತ್ತಿರ ಪರಂಪಾರಾಗತ ಔಷದಿ ಕೊಡಿಸಿದೆ.

ಕೊನೆ ಕೊನೆಗೆ ತಮ್ಮ ಹೆಣ್ಣು ಮಕ್ಕಳಿಗೆ ಅಂದರೆ ನನ್ನ ತಂಗಿಯರಿಗೆ ಮತ್ತು ಮೊಮ್ಮಗಳು ಜಗದೀಶನ ಪತ್ನಿ ಸಂಗಿತಾಗೆ ಆಕೆಯೇ ಮಗುವಾಗುವಂತಹ ಪರಸ್ಥಿತಿ ತಲುಪಿದಳು.ನನ್ನ ಪತ್ನಿ ಶಿವಲೀಲಾ, ತಮ್ಮನ ಪತ್ನಿ ಶೋಭಾ ಹೀಗೆ ಮನೆಯ ಎಲ್ಲರೂ ಬಹಳ ಚೆನ್ನಾಗಿ ನೋಡಿಕೊಂಡರು.ನಮ್ಮ ಅವ್ವನದು ಬಹಳ ಗಟ್ಟಿ ಜೀವ.ಅಷ್ಟು ರೇಡಿಯೋ ಥೆರಪಿ ಕಿಮೋ ಥೆರಪಿ ಕೊಟ್ಟರು ಆಕೆಯ ಒಂದು ಕೂದಲು ಸಹ ತಲೆಯಿಂದ ಬಿಚ್ಚಿರಲಿಲ್ಲ. ಹೊನ್ಕಲ್ ಹಾಗೂ ಕಾಮಾ ಕುಟುಂಬದ ನೂರಾರು ಬಂಧು ಬಳಗ ಹಚ್ಚಿಕೊಂಡು ಕೊನೆಯವರೆಗೂ ಎಲ್ಲರ ಕಷ್ಟ ಸುಖಕ್ಕೆ ಸ್ಪಂದಿಸಿದಳು. ೧೯೭೯ ರಿಂದ ೧೯೯೦ ರವರೆಗೆ ಹನ್ನೊಂದು ವರ್ಷ ವನವಾಸ ಜೀವನ ಆಕೆಯ ಬದುಕಿನಲ್ಲಿ.ಎಲ್ಲಾ ಇದ್ದು ಸಹ ನೋವು ಸಂಕಟ ಅನುಭವಿಸಿ ಧೈರ್ಯದಿಂದ ಹಲ್ಲುಕಚ್ಚಿ ಸಂಸಾರದ ರಥ ಮುನ್ನೆಡೆಸಿದಳು.

ನಾನು ಸಂಸಾರದ ನೊಗ ಹೊತ್ತ ಮೇಲೆ ೧೯೮೮ ರಿಂದ ಈ ೨೦೨೧ ರವರೆಗೆ ಅಕ್ಷರಶ: ಆಕೆಯನ್ನು ನಾನು ಮೆರೆದಲ್ಲಿ ಮೆರೆಯಿಸಿದ್ದೆ. ಕಳೆದುಕೊಂಡದ್ದು ಮರಳಿ ಕೊಡಿಸಿ ಅವಳಿಗೆ ಸುಖದ ಸೋಪಾನದಲ್ಲಿ ಇಟ್ಟಿದ್ದೇವು.ಆಸ್ಪತ್ರೆ ತೋರಿಸುವ ಹೊಣೆ ನಾನು ವಹಿಸಿಕೊಂಡಿದ್ದೆ.ನಮ್ಮ ಸಹೋದರರು, ನಮ್ಮ ಇಡೀ ಕುಟುಂಬ ಸಹೋದರಿಯರು,ಪತ್ನಿ, ಮಕ್ಕಳು ಹೀಗೆ ಇಡೀ ಕುಟುಂಬದ ಸೊಸೆಯಂದಿರು ಎಲ್ಲರೂ ಚೆನ್ನಾಗಿ ನೋಡಿಕೊಂಡ ಕಾರಣ ಸೇವೆ ಪಡೆಯಲು ಬೇಸತ್ತ ನಮ್ಮ ತಾಯಿ ಬೇಗ ಕರಕೋ ಶಿವಾ ಅಂತ ಬೇಡುವಂತೆ ಮಾಡಿದ್ದು; ಹಿಂಸೆ ನೀಡಿದ್ದು ಆ ಕ್ಯಾನ್ಸರ್. ದೇವರೇ ಅವಳ ಕಷ್ಟ ನೋಡಲಾಗದು ಕರಕೋ ಮಾರಾಯ,ಇಲ್ಲಾ ಅವಳಿಗೆ ಆರೋಗ್ಯ ಕೊಡು ಅಂತ ಅಸಹಾಯಕವಾಗಿ ಕೇಳುವ ಪರಸ್ಥಿತಿ ನಿರ್ಮಾಣ ಆಗಿತ್ತು.

 ತನ್ನ ೮೧-೮೨ ರ ಈ ಇಳೀ ವಯಸ್ಸಿನಲ್ಲಿ ಇನ್ನೂ ಗಟ್ಟಿಯಿದ್ಜ ನಮ್ಮ ತಾಯಿಗೆ ನಾವು ಬದುಕುಳಿದವರು ಆರು ಜನ ಮಕ್ಕಳು. ಒಬ್ಬ ತಮ್ಮ ಪಿಯು ಫೇಲಾದೇ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದ.ಆ ಒಂದು ನೋವು ನಮ್ಮ ತಾಯಿಯ ಅಪಾರ ಸಂಕಟಕ್ಕೆ ಕಾರಣ ಆಗಿತ್ತು.ಉಳಿದಂತೆ ಹದಿನೆಂಟು ಮೊಮ್ಮಕ್ಕಳು,೨೧ ಗಿರಿ ಮೊಮ್ಮಕ್ಕಳು ಕಂಡ‌ ನಮ್ಮ ತಾಯಿಯದು ಸಂತೃಪ್ತ ಜೀವ.ದೊಡ್ಡ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ ನಮ್ಮ ತಾಯಿಯ ಬಗ್ಗೆ ಒಂದೇ ಮಾತಲಿ ಹೇಳಬೇಕಾದರೆ ಆಕೆ ಇಲಕಲ್ ಸೀರೆ ಉಟ್ಟ ನಿಜದ ದೇವತೆ. ಮನೆಗೆ ಯಾರೇ ಬರಲಿ, ಉಣ್ಣಿಸದೇ,ಏನಾದರೂ ಕೊಡದೇ ಕಳಿಸಿದ್ದು ನಾ ಕಾಣೆ.

ನಮ್ಮ ತಾಯಿ ತವರಿಗೆ ಹೋದರೇ ಇಂದು ರುಚಿ ರುಚಿಯಾದ ಬುತ್ತಿ ಮಾಡಿಕೊಂಡು ಬಂಡಿ ತುಂಬಾ ಬುತ್ತಿ ಗಂಟು, ಕರ್ಚಿಕಾಯಿ,ಸೆಂಗಾದ ಹೊಳಿಗೆ ತರುತ್ತಾಳೆಂದು ಅವಳ ತವರಿನವರು ಸಹ ಈಕೆಯ ಸವಾರಿ ಎತ್ತಿನ ಬಂಡಿ ಬರೋವರೆಗೂ ಉಣ್ಣದೇ ಕಾಯುತ್ತಾ ಇದ್ದರಂತೆ.ಒಟ್ಟಾರೆ ನೂರಾರು ಜನ ಆಳು ಮಕ್ಕಳು ಮನೆಯಲ್ಲಿ ದುಡಿದವರು, ಯಪ್ಪಾ, ಅವ್ವನದು ರಸ ಗೈಯಿರಿ ಅಂತ ನನ್ನ ಮುಂದೆ ಹೇಳಿ ಅದೇ ನಿಮಗೆ ಮರಳಿ ಸುಖ ಸಂಪತ್ತು ತಂದಿದೆ ಅಂತ ನೂರಾರು ಸಲ ಅಂದಿದ್ದಾರೆ.ನಮ್ಮ ದೊಡ್ಡ ಮನೆಯ ದೊಡ್ಡ ಸೊಸೆ. ಎಲ್ಲರನ್ನೂ ಸಮಾನವಾಗಿ ಕಂಡಿದ್ದಾಳೆ. ಊರಲ್ಲಿ,ಸಮಾಜದ, ಕುಟುಂಬದ ಯಾರೇ ಬಂದು ಏನು ಕೇಳಿದರು ಕೊಟ್ಟು ನೆರವಾಗಿದ್ದಾಳೆ.ತಾನೇ ಮುಂದೆ ನಿಂತು ಎಲ್ಲಾ ಕಾರ್ಯಗಳನ್ನು ಮಾಡಿಸಿದ್ದಾಳೆ.ಅವರ ತವರಿನ ಕುಟುಂಬ ಸಹ ಬಹು ದೊಡ್ಡದು.ಬಂಧು ಬಳಗವು ಜಾಸ್ತಿ. ಹೀಗಾಗಿ ಸದಾ ಮದುವೆ,ತೊಟ್ಟಿಲು,ಕುಪ್ಪಸ್,ಸಾವು, ನೋವು ದವಾಖಾನೆ ಅಂತ ಬಂದವರಿಗೆಲ್ಲ ಹಚ್ಚಿಕೊಂಡು ಮಾಡುತ್ತಾ ಬಂದು ಇಡೀ ಎಲ್ಲಾ ಕುಟುಂಬಗಳಿಗೆ ಒಂದು ಜೀವ ಚೈತನ್ಯ ಆಗಿದ್ದಳು.ತನ್ನ ಖಾಸಾ ತಮ್ಮನ ಮಗಳನ್ನು ನನಗೆ ತಂದುಕೊಂಡು ಮದುವೆ ಮಾಡಿಕೋ ಅಂದಳು.ನನ್ನ ಪತ್ನಿ ಶಿವಲೀಲಾ ನಮ್ಮವ್ವನ ತಮ್ಮನ ಮಗಳು.ಅದಕೂ ಹೂಂ ಅಂದೆ.ಅವಳು ಹೇಳಿದ ಒಂದೇ ಒಂದು ಮಾತು ನಾನು ಜೀವನದಲ್ಲಿ ಆಗಲ್ಲ ಅಂದಿಲ್ಲ. ಆಕೆ ಆರು ವರ್ಷ ತಪ್ಪದೇ ಕಳಿಸಿದ ಬುತ್ತಿಯ ರುಚಿಬಲ್ಲ ನನಗೆ ನಮ್ಮ ತಾಯಿ ಸಾಕ್ಷಾತ ಅನ್ನಪೂರ್ಣೇಶ್ವರಿಯಾಗಿ ಕಾಣುತ್ತಾಳೆ.

ಹನ್ನೊಂದು ವರ್ಷಗಳ ವನವಾಸದ ಜೀವನ ಬಿಟ್ಟರೆ ಅವಳ ಬದುಕಿನಲ್ಲಿ ಪಡೆದದ್ದಕಿಂತ ಕೊಟ್ಟದ್ದೆ ಜಾಸ್ತಿ.ಆ ೧೧ ವರ್ಷ ಯಾರ ಮುಂದೆಯೂ ಹೋಗಿ ಕಷ್ಟ ಹೇಳಿಕೊಂಡವಳಲ್ಲ. ಇರುವಷ್ಟರಲ್ಲಿ ಹಲ್ಲುಕಚ್ಚಿ ಸಂಸಾರದ ರಥ ಸಾಗಿಸಿದವಳು. ನಾನು ಸಾಹಿತ್ಯದಲ್ಲಿ ಬೆಳೆದದ್ದು,, ಸಾಮಾಜಿಕ ಬದುಕಿನಲ್ಲಿ ನಮ್ಮ ಇಡೀ ಕುಟುಂಬ ಕಳೆದಕೊಂಡಿದ್ದ ವೈಭೋಗ ಮರಳಿ ಪಡೆದದ್ದು ನೋಡಿ ಸದಾ ಖುಷಿ ಪಡುತ್ತಿದ್ದ ಜೀವ ಅವಳು.

 ನಮ್ಮ ತಂದೆ ಸಹ ಸಂತೃಪ್ತವಾಗಿ ಕಣ್ಣು ಮುಚ್ಚಿದ್ದ.ಆದರೆ ಆತನಿಗೆ ಹಾರ್ಟ ಅಟ್ಯಾಕ್.ಈಕೆಗೇಕೆ ಈ ಸಾವೋ ತಿಳಿಯಲಿಲ್ಲ. ನಾನು ಆಕೆ ಸಾಯುವ ದಿನದ ಹಿಂದಿನ ರಾತ್ರಿ ಗೆಳೆಯನೊಂದಿಗೆ ಕಲಬುರ್ಗಿಯಿಂದ ಬೆಂಗಳೂರು ಹೊಂಟಿದ್ದೆ. ಉದ್ಯಾನ ಏಕ್ಸಪ್ರೆಸ್ ಮೂಲಕ.ಯಾದಗಿರಿ ಹತ್ತಿರವಾಗುತ್ತಾ ಇರುವ ಮುಂಚೆ ತುಂಬಾ ನೋವು ಸಂಕಟ ಸುಸ್ತು ಅನಿಸಿ ಗೆಳೆಯನಿಗೆ ನೀನು ಹೋಗು ನಾ ಒಲ್ಲೆ ಅಂತ ಹತ್ತಿದ ಟ್ರೇನು ಯಾದಗಿರಿ ಇಳಿದು ರಾತ್ರಿ ಮನೆಗೆ ಬಂದೆ. (ಹೋಗಿದ್ದರೆ ನಮ್ಮ ತಾಯಿ ಜೀವ ಬಿಡುವಾಗ ಹತ್ತಿರ ಇರಲು ಆಗುತ್ತಿರಲಿಲ್ಲ.)

 ಬೆಳಿಗ್ಗೆ ಇಡ್ಲಿ ತಿಂದು ಒಂದಷ್ಟು ತಿನ್ನಲು ಒಯ್ಯೋಣ ಅನ್ನುತ್ತಿರುವಾಗಲೇ ಆಕೆಯ ಮೊಮ್ಮಗಳು ಸಂಗಿತಾ,ತಮ್ಮ ಜಗದೀಶನ ಹೆಂಡತಿ ಮಾಮಾ ಬೇಗ ಬಾ.ಆಯಿ ಉಸಿರಾಡಲು ಸಂಕಟ ಪಡುತ್ತಿದ್ದಾಳೆ ಅಂದಾಕ್ಷಣ ಓಡಿ ಹೋದೆ.ಆಕೆಯ ಕೈ ಹಿಡಿದುಕೊಂಡೆ. ಸಹೋದರಿ ನಿರ್ಮಲಾ, ರೇಣುಕಾ, ಪಾರ್ವತಿ ಬಾಯಲ್ಲಿ ಒಂದು ಚಮಚ ನೀರು ಹಾಕ್ರಿ ಅಂದರು. ಎಲ್ಲರೂ ಒಂದೊಂದು ಚಮಚ ನೀರು ಹಾಕಿದೆವು.ಕಳೆದ ಹಲವು ದಿನಗಳಿಂದ ಸಿರಿಯಸ್ ಇದ್ದ ಕಾರಣದಿಂದ ನನ್ನ ಮಕ್ಕಳು ಸಹ ಎಲ್ಲರೂ ಬಂದು ಇಲ್ಲಿಯೇ ಇದ್ದರು.ಪ್ರಾಣಪಕ್ಷಿ ಹಾರಿ ಹೋಯಿತು.ಕೈ ಮೈ ತಣ್ಣಗೆ ಆಗಿತ್ತು.ಅಲ್ಲಿಗೆ ಈ ಕಾಂತಮ್ಮ ಎಂಬ ನಮ್ಮ ತಾಯಿ ಕೊನೆಯ ಶ್ರಾವಣ ಸೋಮವಾರದ ಶುಭದಿನ ಹನ್ನೆರಡು ಗಂಟೆ ಮೂರು ನಿಮಿಷಕ್ಕೆ ಇಲ್ಲವಾದಳು.ನಾವು ಈಗ ಅನಾಥಪ್ರಜ್ಞೆಯಲ್ಲಿ…ಅವಳ ನೆನಪಿನಲಿ ಕಣ್ಣೀರು ಹನಿಸುತ್ತಾ ಈ ಕಥೆ ವ್ಯಥೆ ಮುಗಿಸುವೆ.

ಆ ಹಿರಿಯ ಜೀವ ಶೂನ್ಯದಲ್ಲಿ ಒಂದಾಯಿತು.ತಂದೆಯ ಸ್ಮರಣಾರ್ಥವಾಗಿ ಏಳು ವರ್ಷಗಳಿಂದ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ದ ಮೂಲಕ ಕಾರ್ಯಕ್ರಮ ಮಾಡುತ್ತಾ ಬಂದಿದ್ದೆ.ಇನ್ನೂ ಮುಂದಿನ ವರ್ಷ ಗಳಿಂದ ಈರ್ವರ ನೆನಪಿನಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಿರುವೆ. ತಾಯಿ ಕಾದಂಬರಿಯ ತಾಯಿ ಪಾತ್ರದಿಂದ ಹಿಡಿದು ಲಂಕೇಶರ ಅವ್ವ,ನಮ್ಮ ಅವ್ವ,ಹೀಗೆ ಜಗತ್ತಿನ ಎಲ್ಲರ ಅವ್ವರು ಶ್ರೇಷ್ಠರೇ.ಕೆಟ್ಟ ಮಕ್ಕಳು ಹುಟ್ಟಬಹುದು.ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ. ಅಂತಹ ತಾಯಿ ನಮ್ಮವ್ವ. ಆಕೆ ಮಾಡಿದ ಪುಣ್ಯ ಕಾರ್ಯಗಳು ಬರೆಯಲಾರೆ.ಬರೆದರೆ ನಾವು ನಮ್ಮ ಬಗ್ಗೆ ಹೊಗಳಿಕೊಂಡಂತೆ ಆಗುತ್ತದೆ.ಹಾಗಾಗಿ ಅವೆಲ್ಲ ಬರೆಯಲಾರೆ.ಆದರೆ ಅದು ನೋಡಿದರೆ ಜೀವಿತ ಕೊನೆಯ ಕಾಲದಲ್ಲಿ ಇಂತಹ ರೋಗದಿಂದ ನರಳಬಾರದಿತ್ತು. ಅದೆಷ್ಟು ನೋವು ಅನುಭವಿಸಿದಳು ಅಂದ್ರೆ ನಾ ಹೇಳಲಾರೆ.ಈ ಪಾಪ ಪುಣ್ಯಗಳು ಭ್ರಮೆಗಳೇ! ಅಂದುಕೊಳ್ಳುವಂತಾಗಿತ್ತು ನನಗೆ.ಇರಲಿ.ಈ ಅವಕಾಶ ಒದಗಿಸಿ ಹೃದಯ ಹಗುರ ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಈ ಪತ್ರಿಕೆಯ ಸಂಪಾದಕರಿಗೂ ಗೌರವದ ಶರಣುಗಳು.

===============================

ಸಿದ್ಧರಾಮ ಹೊನ್ಕಲ್

Leave a Reply

Back To Top