ಅಂಕಣ ಸಂಗಾತಿ

ಕಾವ್ಯದರ್ಪಣ

ಮುಟ್ಟು ಕಂಡವಳನ್ನು ಮುಟ್ಟಲೊಲ್ಲರು ನೋಡl

 ಮುಟ್ಟು ತಾ ಪಡೆದು ಹುಟ್ಟಿದಾ ದೇಹವನುl

 ಮುಟ್ಟುತಿಹರೇಕೆ ಸರ್ವಜ್ಞll

ಕಾವ್ಯ ಪ್ರವೇಶಿಕೆಯ ಮುನ್ನ

ಮುಟ್ಟು ಹೆಣ್ತನದ ಪ್ರತೀಕ. ಋತುಚಕ್ರವೆಂಬುದು ಸೃಷ್ಟಿಕ್ರಿಯೆಯ ಅವಿಭಾಜ್ಯ ಅಂಗ. ಹೆಣ್ಣಿಗೆ ನಿಸರ್ಗದತ್ತವಾಗಿ ಬಂದ ಕೊಡುಗೆ. ಜಗತ್ತಿನ ಯಾವೊಬ್ಬ ಹೆಣ್ಣು ಮುಟ್ಟನ್ನು ಶಾಪವೆಂದು, ಹಿಂಸೆಯೆಂದು ಪರಿಗಣಿಸುವುದಿಲ್ಲ. ಕಾರಣ ಹೆಣ್ಣೊಬ್ಬಳು ತಾಯಾಗಿ ಮತ್ತೊಂದು ಜೀವಕ್ಕೆ ಜನ್ಮ ನೀಡಿ ಮಾತೃವಾತ್ಸಲ್ಯ ನೀಡಿ ತಾಯ್ತನವನ್ನು ಅನುಭವಿಸಲು ಮೂಲ ವೇದಿಕೆಯೆ ಈ ಮುಟ್ಟು. ಮುಟ್ಟು ಎಂಬುದು ಮುಟ್ಟದಿರುವಂತಹ ಸಂಗತಿಯಲ್ಲ.ಮುಕ್ತವಾಗಿ ಸಾರ್ವಜನಿಕವಾಗಿ ಚರ್ಚಿಸದ ಮೈಲಿಗೆಯ ವಿಷಯವೂ ಅಲ್ಲ.

ಈ ಮುಟ್ಟು ಹೆಣ್ಣನ್ನು ದೈಹಿಕ ಸಮಸ್ಯೆಯಾಗಿ ಕಾಡಿದ್ದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಮಾನಸಿಕ ಹಿಂಸೆ ನೀಡಿದ್ದೆ ಹೆಚ್ಚು. ಅದೊಂದು ವಿಜ್ಞಾನದ ಒಂದಂಶವಾಗಿ ಎಂದಿಗೂ ಪರಿಗಣಿತವಾಗಿಲೆಯಿಲ್ಲ. ಮುಟ್ಟು ಎಂದರೆ ಮುಟ್ಟಿಸಿಕೊಳ್ಳದಿರುವುದು ಎಂಬ ಮೌಡ್ಯವೇ ಬಲವಾಗಿ ಬೇರೂರಿ, ಗಂಡು ಆ ನಂಬಿಕೆಗೆ ಬಲಯಾಗಿ ಹೆಣ್ಣನ್ನು ಮೈಲಿಗೆಯಂತೆ ಭಾವಿಸುವುದು ಒಂದು ವಿಪರ್ಯಾಸವಾದರೆ, ಸ್ವತಃ ಹೆಣ್ಣು ಕೂಡ ಈ ಸಮಯದಲ್ಲಿ ಅಸ್ಪೃಶ್ಯರಂತ ಭಾವನೆ ಹೊಂದುವುದು ಆತಂಕಕಾರಿ ಬೆಳವಣಿಗೆ. ಮುಟ್ಟನ್ನು ಮೈಲಿಗೆಯಾಗಿ ಪರಿಗಣಿಸುವುದಾದರೆ ಮುಟ್ಟು ಹುಟ್ಟುವ ಜಾಗದಲ್ಲಿ ಜನಿಸಿದ ಮನುಷ್ಯರೇಗೆ ಪರಿಶುದ್ಧವಾಗಿರಲು ಸಾಧ್ಯ .ಋತುಚಕ್ರವನ್ನು ತಮ್ಮ ದೈಹಿಕ ಸುಖದ ಪ್ರತೀಕವೆಂದು ಸಂಭ್ರಮಿಸುವ ದಂಪತಿಗಳು ಹೆಣ್ಣಿನ ರಕ್ತಸ್ರಾವವನ್ನು ಕಾಣುತ್ತಲೆ ಕೀಳರಿಮೆಯ ಜೋಕಾಲಿ ಜೀಕುವುದು ದೊಡ್ಡ ದುರಂತವೇ ಸರಿ. ಈ ಸಮಯದಲ್ಲಿ ಹೆಣ್ಣಿನ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಅಗತ್ಯ‌.

ಮುಟ್ಟಾದಾಗ ಮನೆಯಿಂದ ಹೊರಗೆ ಹೋಗಬಾರದು. ಶುಭಕಾರ್ಯಗಳಲ್ಲಿ ಪಾಲ್ಗೊಳ್ಳಬಾರದು. ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಬಾರದು ಎಂಬೆಲ್ಲ ಒತ್ತಡಗಳು ಹೆಣ್ಣಿನ ಮನಸ್ಸಿನ ಮೇಲೆ ತೀವ್ರವಾದ ಪೆಟ್ಟು ಕೊಟ್ಟು ತನಗೆ ಏನೋ ಆಗಿದೆ  ಎಂದು ಜರ್ಜರಿತವಾಗುವಂತೆ ಮಾಡುತ್ತದೆ. ದೈಹಿಕ ಸಮಸ್ಯೆಯು ಸ್ವಲ್ಪ ಕಾಡುವುದರಿಂದ ಈ ಸಮಯದಲ್ಲಿ ಸ್ತ್ರೀಗೆ ನಿಜವಾಗಿ ಬೇಕಿರುವುದು ಮಾನಸಿಕ ಬೆಂಬಲ. ಈಗಲೂ ಮುಟ್ಟಿನ ರಕ್ತಸ್ರಾವಕೆ ಅಂಜುವ ಹೆಣ್ಣುಮಕ್ಕಳಿದ್ದಾರೆ. ಅವರಿಗೆಲ್ಲ ಅದೊಂದು ಸೃಷ್ಟಿಯ ಸಹಜ ಕ್ರಿಯೆ ಎಂಬ ಅರಿವು ಮೂಡಿಸುವುದು ತುಂಬಾ ಅಗತ್ಯವಿದೆ.

ಆದರೂ ಇತ್ತೀಚಿನ ದಿನಗಳಲ್ಲಿ ಈ ವಿಷಯದಲ್ಲಿ ಅಲ್ಪಸ್ವಲ್ಪ ವೈಚಾರಿಕತೆ ಮೂಡುತ್ತಿರುವುದು ಕಗ್ಗತ್ತಲ ಕೂಪದೊಳಗೆ ಒಂದು ಬೆಳಕಿನ ಕಿರಣ ಹಾದು ಹೋದಂತಾಗಿದೆ. ಮುಟ್ಟು ಇಂದು ಬಹಿರಂಗವಾಗಿ ಚರ್ಚಿಸುವ ವಿಷಯವಾಗುತ್ತಿದೆ. ಗಂಡು ಮಕ್ಕಳಲ್ಲಿ ಇದರ ಬಗ್ಗೆ ಒಂದಷ್ಟು ಜಾಗೃತ ಭಾವ ಮೂಡುತ್ತಿದೆ. ಅನೇಕ ವಿಚಾರವಾದಿಗಳು ಇದರ ಹಿಂದಿನ ವೈಜ್ಞಾನಿಕ ಅಂಶಗಳ ಕಡೆಗೆ ಬೆಳಕು ಚೆಲ್ಲುವ ಮೂಲಕ ಜನರ ಮನದಲ್ಲಿನ  ತಮವ ಸರಿಸಿ ಅವರ ಮನದಲಿ ಜ್ಞಾನ ದೀವಿಗೆಯನ್ನು ಹಚ್ಚುತ್ತಿದ್ದಾರೆ.

ಹಿಂದೆಲ್ಲಾ ಈ ಮುಟ್ಟು ತುಂಬಾ ಗುಟ್ಟಿನ ವಿಷಯವಾಗಿತ್ತು. ಗಂಡು ಮಕ್ಕಳ ಕಿವಿಗೆ ಈ ವಿಷಯ ಬೀಳದಂತೆ ಮನೆಯಲ್ಲಿ ಎಚ್ಚರ ವಹಿಸುತ್ತಿದ್ದರು. ಪ್ರಥಮ ಬಾರಿ ಋತುಮತಿಯಾದಾಗ ಅವಳಿಗೆ ಆರತಿ ಶಾಸ್ತ್ರ ಮಾಡಿದರೆ ಗಂಡು ಮಕ್ಕಳ ತಲೆಗೊಂದು ಹುಳ ಹೊಕ್ಕಿ ಏನಿದು, ಯಾವುದು ಎಂದು ಕೊರೆಯುತ್ತಿತ್ತು. ಆದರೆ ಇಂದು ಯುವಕರು ಮುಟ್ಟಿನ ಬಗ್ಗೆ ಹೆಣ್ಣು ಮಕ್ಕಳಿಗಿಂತ ನವಿರಾಗಿ ಪ್ರಬುದ್ಧವಾಗಿ, ವೈಜ್ಞಾನಿಕವಾಗಿ ಕವಿತೆ , ಲೇಖನಗಳನ್ನು, ಪ್ರಬಂಧಗಳನ್ನು ಬರೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಅನುಮಾನಿಸದೆ ಅವಳನ್ನು ಗೌರವಿಸುವುದು ಹಾಗೂ ಅಂತಹ ಸಂದರ್ಭದಲ್ಲಿ ಅವಳಿಗೆ ಅಗತ್ಯ ಪರಿಕರಗಳನ್ನು ಒದಗಿಸಲು ಜಾಗೃತಿ ಮೂಡಿಸುವಂತಹ ಅನೇಕ ಕಿರುಚಿತ್ರಗಳನ್ನು ಇಂದಿನ ಯುವಜನತೆ ತೆಗೆಯುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ ಎಂದು ಭಾವಿಸಬಹುದು.

ಕವಿ ಪರಿಚಯ

ಅಭಿಜ್ಞಾ ಪಿ ಎಮ್ ಗೌಡ

ಮೂಲತಃ ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೋಕಿನವರು. ವೃತ್ತಿಯಲ್ಲಿ ಶಿಕ್ಷಕರಾಗಿ ನಾಗಮಂಗಲದಲ್ಲೆ ಕಾರ್ಯ ನಿರ್ವಹಿಸುತಿರುವರು. ಇವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಡ್.ಎಮ್ .ಎ ಸ್ನಾತಕೋತರ ಪದವಿಧರೆ. ಓದುವ ಹವ್ಯಾಸ ಮೊದಲಿನಿಂದಲು ಇದೆ. ಹಾಗೆಯೆ ವಿದ್ಯಾರ್ಥಿದೆಸೆಯಲ್ಲಿ ಪ್ರಬಂಧ ಹಾಗು ಲೇಖನಗಳನ್ನು ಬರೆಯುವ ಹವ್ಯಾಸವಿತ್ತು.‌ಈಗ ತಮ್ಮನ್ನು ಸಂಪೂರ್ಣವಾಗಿ ಬರಹದಲ್ಲಿ ತೊಡಗಿಸಿಗೊಂಡಿರುವರು.

ಕವನಗಳಲ್ಲಿ ಛಂದೋಬದ್ಧವಾಗಿ ಹತ್ತು ಹಲವು ಪ್ರಯೋಗಗಳಲ್ಲಿ ಬಹುವಾಗಿ ತೊಡಗಿಕೊಂಡಿದ್ದು‌ ಎಲ್ಲಾ  ಪ್ರಕಾರಗಳಲ್ಲಿ ಕವನಗಳನ್ನು ಬರೆದಿರುವರು. ಗಜಲ್ , ಕಥೆ , ನ್ಯಾನೋಕತೆ ,ಹಾಸ್ಯಕಥೆ , ಪ್ರಬಂಧ, ರುಬಾಯಿ ,ಟಂಕ ,ಹಾಯ್ಕು ,ಚುಟುಕು , ಹನಿಗವನ ಹೀಗೆ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿದ್ದಾರೆ.

*ಕಾನನದ ಅರಸಿ

*ನೆಲಸಿರಿಯ ಮಣಿಗಳು ಶಿಶು ಸಾಹಿತ್ಯ

*ಅಭಿಭಾವನ ಭಾವಗೀತೆ ಸಂಕಲನ

*ಎದೆಯ ತೇರಿನೊಳ್ ಗಝಲ್

ಮೇಲಿನ ಎರಡು ಕವನ ಸಂಕಲನ ಬಿಡುಗಡೆಯಾಗಿದ್ದು

ರಾಜ್ಯ ಬರಹಗಾರರ ಬಳಗ ಹೂವಿನಹಡಗಲಿ ಘಟಕದ ವತಿಯಿಂದ ನೀಡಲ್ಪಟ್ಟ 2020-21ನೇ ಸಾಲಿನ ರಾಜ್ಯಮಟ್ಟದ

ಸಾಹಿತ್ಯ ಸಿಂಧು ಪ್ರಶಸ್ತಿ

ಮಾಣಿಕ್ಯ ಪ್ರಕಾಶನ ಹಾಸನ ವತಿಯಿಂದ ರಾಜ್ಯಮಟ್ಟದ

ಜನ್ನಕಾವ್ಯ ಪ್ರಶಸ್ತಿ

ಕುವೆಂಪು ಜನ್ಮದಿನೋತ್ಸಹ ಪ್ರಯುಕ್ತ

ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯಮಟ್ಟದ ಶತಶೃಂಗ ಪ್ರಶಸ್ತಿ

ಹಾಗೆಯೆ ೨೦೨೧ ನೇ ಸಾಲಿನ ತಾಲ್ಲೋಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಳಾಗಿರುವರು..

ಕವಿತೆಯ ಆಶಯ

ಯೋನಿಜರು ಯೋನಿಯನ್ನು ಹೀನ ಮಾಡುವುದೇಕೆ

ಆನಂದಮಯ ಶಿವಯೋಗಿ

ಅದಲ್ಲದಿನ್ನೆಲ್ಲಿಂದ ಬಂದ

         – ಸರ್ವಜ್ಞ

ಹೆಣ್ಣು ಯೌವನಕೆ ಕಾಲಿಡುತ್ತಿದ್ದಂತೆ ಅವಳಲ್ಲಿ ಮೂಡುವ ವಯೋ ಸಹಜ ಭಾವನೆಗಳನ್ನು ಓದುಗರ ಮುಂದಿಡುವ ಮೂಲಕ ಸ್ತ್ರೀಯ ಮನೋಗತವನ್ನು ವಿವರಿಸಿದ್ದಾರೆ.

ಋತುಚಕ್ರ ಹೆಣ್ಣಿನ ಬದುಕಿನ ಪರಮ ಆದ್ಯತೆಯಾಗಿದ್ದು, ಅದಕ್ಕೆ ಭಾಜನರಾದಾಗ ಅವಳಲ್ಲಿ ಉಂಟಾಗುವ ದೈಹಿಕ ಮಾನಸಿಕ ಭಾವನೆಗಳನ್ನು ಓದುಗರಿಗೆ ಪರಿಚಯಿಸುವ ಜೊತೆಗೆ ಸ್ತ್ರೀ ಸಂವೇದನೆಗಳನ್ನು ಸಮಾಜಕ್ಕೆ ಪರಿಚಯಿಸುತ್ತಾ ಅದಕ್ಕೆ ಪೂರಕವಾಗಿ ಜನರು ಸ್ಪಂದಿಸಬೇಕೆಂದು ಕವಿತೆ ಆಶಿಸುತ್ತದೆ.

ಜೊತೆಗೆ ಮುಟ್ಟಿನಿಂದ ಹೆಣ್ಣು ಅನುಭವಿಸುವ ಶೋಷಣೆಯನ್ನು, ಮಾನಸಿಕ ಯಾತನೆಯನ್ನು, ಕಿರಿಕಿರಿಯನ್ನು ಮನುಕುಲಕ್ಕೆ ಅರ್ಥೈಸುವುದು. ಅದರೊಟ್ಟಿಗೆ ನಾವೆಲ್ಲರೂ ಮೂಢನಂಬಿಕೆಗೆ ಬಲಿಯಾಗಿ ಸ್ತ್ರೀಯನ್ನು ಹರಕೆಯ ಕುರಿಯಾಗಿಸುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕವಿತೆಯು ಋತುಚಕ್ರದ ಬಗ್ಗೆ ಸಮಾಜ ಪ್ರಗತಿಪರವಾಗಿ ಚಿಂತಿಸಬೇಕು ಎಂದು ಮಡಿ ಮೈಲಿಗೆಗಳ ಪೂರ್ವಾಗ್ರಹದಿಂದ ಮುಟ್ಟನ್ನು ಹೊರತಂದು ಅದನ್ನು ವೈಜ್ಞಾನಿಕ ಮತ್ತು ನೈಸರ್ಗಿಕ ಕ್ರಿಯೆ ಎಂದು ಅರಿಯಬೇಕೆಂದು ಬಯಸುತ್ತದೆ. ಜೊತೆಗೆ ಮುಟ್ಟಾದ ಹೆಣ್ಣು ಮಕ್ಕಳನ್ನು ಸಮಾಜ ನಡೆಸಿಕೊಳ್ಳುವ ಪರಿಯನ್ನು ಕವಿತೆ ವಿರೋಧಿಸಿ ನರಕಯಾತನೆಯಿಂದ ಹೆಣ್ಣನ್ನು ಕಾಪಾಡಬೇಕೆಂದು ವಿನಂತಿಸುತ್ತದೆ.

ಬಹುಮುಖ್ಯವಾಗಿ ಪ್ರಥಮ ಋತುಸ್ರಾವಕ್ಕೆ ಅವಳಿಗೆ ಮಾಡುವ ಹಬ್ಬ ಆಚರಣೆಗಳನ್ನು ಕವಯತ್ರಿ ಕಟ್ಟುವಾಗಿ ವಿಶ್ಲೇಷಿಸುತ್ತಾರೆ. ಹೆಣ್ಣು ಅನುಭವಿಸುವ ದೈಹಿಕ ವೇದನೆ ಮತ್ತು ಸಾಮಾಜಿಕ ಅಸ್ಪ್ರಶ್ಯತೆಗೆ ಬಲಿಯಾಗಿ ಅವಳಿಗೆ ನರಕಯಾತನೆಯ ಹಬ್ಬ ಬೇಕೆ ಎಂದು ಪ್ರಶ್ನಿಸುತ್ತಾ, ಬಂದು ಬಳಗ,  ನೆರೆಹೊರೆಯವರನ್ನು ಕರೆದು ಮಗಳು ಋತುಮತಿಯಾದಳೆಂಬ ಹೇಳಿಕೊಳ್ಳುವ ಬಿಗುಮಾನಕ್ಕೆ ಬಿದ್ದು ಜನರು ಅವಳ ಮೇಲೆ ಗೌರವ ತೋರಬೇಕೆಂದು ಕವಿತೆ ಆಶಿಸುತ್ತದೆ.

ಕವಿತೆಯ ಶೀರ್ಷಿಕೆ

ಮುಟ್ಟು

ಈ ಕವಿತೆ ಹೆಣ್ಣಿನ ಮುಟ್ಟಿನ ಸಮಯದ ಭಾವಗಳನ್ನು ತೆರೆದಿಡುತ್ತದೆ. ಆಗಿನ ಅವಳ ಅನುಭವಗಳು, ಅವಳ ಮನಸ್ಥಿತಿ ,ಸಾಮಾಜಿಕ ಸಂಬಂಧಗಳನ್ನು ಎಳೆಎಳೆಯಾಗಿ ಓದುಗರ ಮುಂದಿಟ್ಟಿದ್ದಾರೆ. ಈ ವಿಷಯವು ಬಹಿರಂಗವಾಗಿ ಚರ್ಚೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಾಗಾಗಿ ಈ ಶೀರ್ಷಿಕೆ ಕವಿತೆಗೆ ಪೂರ್ಣವಾದ ಅರ್ಥ ಕೊಡುತ್ತದೆ.

ಕವಿತೆಯ ವಿಶ್ಲೇಷಣೆ

ಮುಟ್ಟು

ಹೆಣ್ಣಿನ ಹದಿಹರೆಯದ ಹೊಸ್ತಿಲ

ಚೆಲುವಾಂಕುರದ

ನವಿರೇಳುತಿಹ ಪರಿಯದುವೆ

ನಿಗಿನಿಗಿ ಹೊಮ್ಮುವ

ನವಯೌವ್ವನದ ರಂಗಿನ

ಸಂಭ್ರಮವೇನೋ ಸುಂದರ.!

ಆಂತರ್ಯದ ನೋವಿನಾಳದ

ರಕ್ಕಸ ನಡೆಯದು

ಭೀಭತ್ಸದ ಆಗರ ಲಾವರಸದಂತೆ..

ದುರ್ವೃತ್ತ ದುರ್ವೇಶದ

ಪೊರೆಯ ಆಗಮನದಲಿ

ದುಶ್ಚಿತ್ತದ ಕನ್ಯತ್ವ ಪೊರೆ

ಒಲವಿನರಮನೆಯಾಗದೆ

ದುರ್ಧರದ ಅಳಲಿನ

ಮಹಾ ಕಣಿವೆಯಾಗಿದೆ

ಹೆಣ್ಣು ಯೌವನಕ್ಕೆ ಕಾಲಿಡುತ್ತಿದ್ದಂತೆ ನೂರಾರು ಬಯಕೆಗಳು ಗರಿಗೆದರುತ್ತವೆ. ಅವಳ ಮನಸ್ಸು ಸ್ವಚ್ಛಂದ ಪಕ್ಷಿಯಂತೆ ಹಾರಾಡ ಬಯಸುತ್ತದೆ. ಅಂದುಕೊಂಡಿದ್ದನ್ನು ಸಾಧಿಸುವ ಛಲ ಬೆಳೆಯುತ್ತದೆ. ತನ್ನ ಸೌಂದರ್ಯದ ಬಗ್ಗೆ ತಾನೇ ಖುಷಿಪಟ್ಟು ಸಂಭ್ರಮಿಸುತ್ತಾಳೆ. ಕನ್ನಡಿ ಮುಂದೆ ನಿಂತು ಮನಸಾರೆ ತನ್ನನ್ನು ತಾನು ಮೆಚ್ಚಿಕೊಳ್ಳುತ್ತಾಳೆ. ಸಮಾಜದಲ್ಲಿ ಎಲ್ಲರಂತೆ ಸುತ್ತಬೇಕು. ಸ್ವಾತಂತ್ರ್ಯವಾಗಿ ಬದುಕಬೇಕೆಂದು ಬಯಸುತ್ತಾಳೆ.

ಯವ್ವನಕ್ಕೆ ಕಾಲಿಡುತ್ತಿದ್ದಂತೆ ಹೆಣ್ಣಿನ ದೇಹಕ್ಕೊಂದು ನಿಗದಿತ ರೂಪ ದೊರೆತು ಸೌಂದರ್ಯದ ಗಣಿಯಂತೆ ಮಿಂಚುತ್ತಾಳೆ. ಮನಸ್ಸಿನಲ್ಲಿ ರಂಗುರಂಗಿನ ಸಹಸ್ರ ಕನಸುಗಳನ್ನು ಕಾಣುತ್ತಾಳೆ. ನಲಿದು ಕುಣಿಯುತ್ತಾಳೆ. ಸ್ವರ್ಗಕ್ಕೆ ಮೂರು ಹೆಜ್ಜೆ ಅವಳ ಬದುಕು. ಆಗ ಒಮ್ಮೆಲೇ ಅವಳ ಬಯಕೆಗಳಿಗೆ ತಣ್ಣೀರೆಚಲು ಬರುವುದೆ ಮುಟ್ಟು ಎನ್ನುವ ಕವಯತ್ರಿ ಮುಟ್ಟು ಅವಳಿಗೆ ಬೇಸರ ತರಿಸುತ್ತದೆ ಎನ್ನುತ್ತಾರೆ. ಋತುಮತಿಯಾದ ನಂತರ ಅವಳಿಗರಿವಿಲ್ಲದಂತೆ ಅವಳ ಸುತ್ತ ಗೋಡೆಗಳೇಳುತ್ತವೆ. ಆಚಾರ ವಿಚಾರಗಳ ನಿರ್ಬಂಧಗಳು ಜೊತೆಯಾಗುತ್ತವೆ. ಕೂತರೂ ತಪ್ಪು ,ನಿಂತರೂ ತಪ್ಪು, ಗಂಡು ಮಕ್ಕಳೊಂದಿಗೆ ಮಾತನಾಡುವಂತಿಲ್ಲ, ತಲೆಯೆತ್ತಿ ನಡೆಯುವಂತಿಲ್ಲ, ಇಂತಹ ವಿಚಾರಗಳು  ಅವಳನ್ನು ಬಂಧಿಯನ್ನಾಗಿ ಮಾಡುತ್ತವೆ‌

ಅವಳೊಳಗೆ ಕನ್ಯಾಪೊರೆ ಬೆಳೆಯುತ್ತಾ ಹೋಗುತ್ತದೆ. ಆಂತರ್ಯದಲ್ಲಿ ನೋವು ನರ್ತನ ಮಾಡುತ್ತದೆ‌ ಅವಳ ಕನ್ಯತ್ವದ ಆದ ದೈಹಿಕ ಮತ್ತು ಸಾಮಾಜಿಕ ನೋವಿನಿಂದ ಅವಳ ಆಸೆಗಳು ಪ್ರಪಾತ ಸೇರುತ್ತದೆ ಎಂದು ಕವಯತ್ರಿ ಬಿಂಬಿಸಿದ್ದಾರೆ.

ಋತುಚಕ್ರದ ಉಗುಳುತನಕೆ

ದಾವಣಿಯು ಕೆಂಪಾಗಿ

ರಂಗೇರಿದೆ ನೋವಿನಾಳ

ಸದ್ದಿಲ್ಲದೆ ತೊಟ್ಟಿಕ್ಕುತಿಹ ನೆತ್ತರಿನೊಳ್

ಬೊಬ್ಬಿಡುತಿಹ ಕಿಬ್ಬೊಟ್ಟೆ

ಸೋತು ಸೊರಗುತಿಹ ಮೈಮನ

ಪ್ರಕ್ಷುಬ್ಧತೆಯ ಒಡಲೊಳಗೆ

ಮುಗಿಲು ಮುಟ್ಟಿಹ ಆಕ್ರಂದನ.!

ಯೋನಿಯ ನಿರ್ದಯ ನಡೆಯಲಿ

ಹೆಣ್ಮನಗಳ ಮುಷ್ಕರದ

ಒಡ್ಡೋಲಗ ದುಃಖ ದುಮ್ಮಾನದ

ದಿಬ್ಬಣದ ಆಕ್ರಂದನದಲಿ

ನೋವಿನಾರ್ತನಾದದ

ಕಟ್ಟೆ ಹೊಡೆಯುತಿದೆ

ಋತುಚಕ್ರ ಹೆಣ್ಣನ್ನು ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ತರುತ್ತದೆ. ಹಾಗಂತ ಮುಟ್ಟು ಬೇಡವೆಂದು ತಿರಸ್ಕರಿಸಲಾಗದು. ಅದೆಂತಹ ದೈಹಿಕ ಯಾತನೆ ಭಾವನಾತ್ಮಕ ಕಿರಿಕಿರಿ ಉಂಟು ಮಾಡಿದರು ಅದು ಮಾನವಕುಲದ ಮುಂದುವರಿಕೆಗೆ ತುಂಬಾನೇ ಅಗತ್ಯವಾದ ಪ್ರಕ್ರಿಯೆಯಾಗಿದೆ. ಮೊದಮೊದಲು ಹೆಣ್ಣಿಗೆ ಇದು ಅಸಹಜವೆಂದು, ಅಸಹ್ಯವೆಂಬ ಭಾವ ಕಾಡುವುದು ಸಹಜ. ಆನಂತರ ಅವರಲ್ಲಿ ಪ್ರೌಢಿಮೆ ಬೆಳೆದು, ಅರಿವಿನಾಳ ಹೆಚ್ಚುತ್ತಾ ಹೋದಂತೆ ಪ್ರತಿ ಹೆಣ್ಣಿಗೂ ತನ್ನ ಮುಟ್ಟಿನ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ.

ಋತುಚಕ್ರದ ಉಗುಳುತನಕ್ಕೆ ಅಂದರೆ ರಕ್ತಸ್ರಾವಕ್ಕೆ ಬಟ್ಟೆ ಕಲೆಯಾದರೆ, ಮೂರರಿಂದ ಐದು ದಿನಗಳ ಕಾಲ ತೊಟ್ಟಿಕ್ಕುವ ನೆತ್ತರಿನಿಂದಾಗಿ ಹೆಣ್ಣು ಅನುಭವಿಸುವ ನೋವು ಅಷ್ಟಿಷ್ಟಲ್ಲ.  ಕಿಬ್ಬೊಟ್ಟೆ ನೋವಿನಿಂದ ಬೊಬ್ಬಿಡುತ್ತದೆ. ಕೈಕಾಲುಗಳ ನಿತ್ರಾಣವಾಗಿ ಮೈಮನಗಳು ಸೋತು ಸೊರಗುತ್ತವೆ. ನಿರಂತರ ರಕ್ತಸ್ರಾವ ಒಂದೆಡೆಯಾದರೆ, ಅವರಿಂದ ಉಂಟಾಗುವ ದೈಹಿಕ ಸಂಕಟಗಳು ಮತ್ತೊಂದೆಡೆ ಬಾಧಿಸುತ್ತವೆ.

ಈ ನೋವಿನ ಆಕ್ರಂದನ ಮುಗಿಲು ಮುಟ್ಟುತ್ತದೆ ಎನ್ನುವ ಕವಯತ್ರಿ ಹೆಣ್ಣಿನ ಮನಸ್ಸು ಆ ಸಮಯದಲ್ಲಿ ನಿರ್ಭಾವ ತೋರುತ್ತ ಮುಷ್ಕರ ಹೂಡುತ್ತದೆ .ಎಂದರೆ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆಗುಂದುತ್ತದೆ ಎನ್ನುತ್ತಾರೆ. ಹಾಗಾಗಿ ಸ್ತ್ರೀಯು ಪಡುವ ಹಿಂಸೆಯನ್ನು ದಿಬ್ಬಣದ ಆಕ್ರಂದನಕ್ಕೆ ಹೋಲಿಸುತ್ತಾರೆ. ತಾಳ್ಮೆಯ ಕಟ್ಟೆ ಹೊಡೆಯುವುದನ್ನು ನೋಡಿ ಆರ್ತನಾದವಿರುತ್ತದೆಂದು ಕವಯತ್ರಿ  ಪ್ರತಿಪಾದಿಸುತ್ತಾರೆ.

ಆದರೆ ಸ್ನೇಹಿತರೆ ಇಷ್ಟೆಲ್ಲಾ ಸಂಕಟಗಳು ಮುಟ್ಟಿನ ಬಳುವಳಿಯಾದರೂ ಹೆಣ್ಣು ಎದೆಗುಂದಿ ಹೆದರಿ ಮೂಲೆಯಲ್ಲಿ ಕೂರಲಾರಳು. ಗಟ್ಟಿತನ ಮೆರೆಯುತ್ತಲೇ ಗಂಡಿಗೆ ಸಮಾನಳಾಗಿ ದುಡಿಯುವಳು  ಎಂಬುದರಲ್ಲಿ ಎರಡುಮಾತಿಲ್ಲ. ಕೆಲವರು ಕಚೇರಿ, ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ಹೋಗಿ ಬಂದರೆ ಮುಟ್ಟಿನ ಸಮಯದಲ್ಲಿ ಯಾತನೆಯನ್ನು ಬದಿಗಿಟ್ಟು ಹೊಟ್ಟೆ ಪಾಡಿಗಾಗಿ ಅಸಂಘಟಿತ ವಲಯಗಳಲ್ಲಿ ದುಡಿಯುವ ಹೆಣ್ಣುಮಕ್ಕಳ ಆತ್ಮವಿಶ್ವಾಸ ನಿಜಕ್ಕೂ ಶ್ಲಾಘನೀಯವೆನ್ನಬಹುದು.

ಮನೆ ಕೆಲಸಗಳ ಕಡೆಗೆ ತಿರುಗಿ ನೋಡದ ಗಂಡಸರು ಕೊನೆಪಕ್ಷ ಇಂತಹ ಸಂದರ್ಭಗಳಲ್ಲಿ ಆದರೂ ಹೆಣ್ಣಿನ ಕೆಲಸಕಾರ್ಯಗಳಲ್ಲಿ ನೆರವಾದರೆ ಅವಳಿಗೂ ತುಸು ಸಮಿಧಾನ ದೊರೆಯುತ್ತದೆ. ಅಂತಹ ಸ್ಪಂದನ ಗುಣವನ್ನು ಗಂಡು ಮಕ್ಕಳು ಹೊಂದಬೇಕು ಎಂಬುದು ನನ್ನ ಅಭಿಮತ.

ಹೆಣ್ಣನ್ನು ವೈರುಧ್ಯಗಳ ಗಂಟಿನೊಳಗೆ

ಸಿಲುಕಿಸಿ ಮುಟ್ಟು ಮುಟ್ಟೆಂದು

ಹೌಹಾರಿ ಹೊರಗಟ್ಟಿ ದೂಡುವರು

ಕಾಡುತ ಮನೆ ಒಳ ಹೊರಗೆ….

ಮುಟ್ಟು ಮುಟ್ಟಬೇಡಿರೆನ್ನುವ ಮೂಢಾತ್ಮ

ಗೊಡ್ಡು ಸಂಪ್ರದಾಯಗಳಿಗೆ

ಜೋತುಬಿದ್ದ ಗಾಂಪರರ ಗುಂಪಲಿ

ಆಚಾರ ವಿಚಾರದಿ ಮುಟ್ಟಿಗೆ

ಮುಟ್ಟುಗೋಲು ಹಾಕುತ

ಮುಟ್ಟಾದ ಮೂರುದಿನ ಹೊರಗಾಕಿ

ಅದರೊಳಗೂ ಸಂಪ್ರದಾಯದ

ಹಾರಾಟದ ತೂರಾಟ ದ್ವಿಗುಣದೊಳ್

ಮೂರು ರಾತ್ರಿ ಹೊರಗೆ ನರಕ ಸದೃಶ್ಯ

ಮುಟ್ಟು ಎಂಬುದು ನಮ್ಮ ನಿತ್ಯಕರ್ಮಗಳಂತೆ ಅದು ಸಹಜ ತ್ಯಾಜ್ಯ. ಮಲ ಮೂತ್ರ ವಿಸರ್ಜನೆಗಳು ಪ್ರತಿದಿನದ ಕರ್ಮಗಳು. ಆದರೆ ಮುಟ್ಟು ಎನ್ನುವುದು ತಿಂಗಳಿಗೊಂದು ಬಾರಿ ಬರುತ್ತದೆ. ಹಾಗಿದ್ದರೂ ಅವುಗಳಿಲ್ಲದ ಮಡಿ ಮೈಲಿಗೆಯ ಶೋಷಣೆ ಇದಕ್ಕೆ ಮಾತ್ರ ಸೀಮಿತವಾಗಿದೆ. ಹೆಣ್ಣಿನ ಅಂಡಾಶಯದಿಂದ ಹೊರಬಿದ್ದ ಅಂಡಾಣು ವೀರ್ಯಾಣುವನ್ನು ಸೇರಲು ಕಾಯುತ್ತದೆ. ಅದು ಲಭ್ಯವಾಗದಿದ್ದಲ್ಲಿ ಅಂಡಾಶಯ ಹೊಡೆದು ರಕ್ತದ ಪದರಿನೊಂದಿಗೆ ಯೋನಿಯ ಮೂಲಕ ಸ್ರವಿಸುತ್ತದೆ. ಇದು ಸಂಪೂರ್ಣ ವೈಜ್ಞಾನಿಕ ವಿಚಾರವಾಗಿದೆ. ಆದರೆ ಅದೇಕೋ ಈ ವಿಜ್ಞಾನಕೆ ಮೂಢನಂಬಿಕೆಯ ಪರದೆ ಆವರಿಸಿದೆ. ಮುಟ್ಟಿನ್ನು ಅತಿ ದೊಡ್ಡ ಸೂತ್ರದಂತೆ, ಮುಟ್ಟಾದ ಹೆಂಗಸರುಗಳನ್ನು ಮೈಲಿಗೆ ಹೆಣ್ಣು ಎಂದು ಪರಿಗಣಿಸಿ ನಮ್ಮ ಸಮಾಜ ಸ್ತ್ರೀಯೊಂದಿಗೆ ಅಮಾನವೀಯವಾಗಿ ವರ್ತಿಸುತ್ತದೆ. ಇಷ್ಟೆಲ್ಲಾ ಆಧುನಿಕತೆ, ವೈಚಾರಿಕತೆ ಬೆಳೆಯದಿದ್ದರೂ ಈ ವಿಷಯದಲ್ಲಿ ಸಾಕಷ್ಟು ಪ್ರಗತಿಪರ ಚಿಂತನೆಗಳು ಜನಸಮುದಾಯದಲ್ಲಿ ಮೂಡದಿರುವುದು ನಮ್ಮ ಸಮಾಜದ ಅತಿ ದೊಡ್ಡ ದೌರ್ಭಾಗ್ಯವೇ ಸರಿ.

ಬಹುಶಃ ಹಿಂದಿನ ಕಾಲದಲ್ಲಿ ಹೆಣ್ಣಿಗೆ ದೈಹಿಕ ಶ್ರಮ ಹೆಚ್ಚಾಗಿದ್ದರಿಂದ ವಿರಮಿಸುವ ಅವಕಾಶಗಳು ಬಹಳ ಕಡಿಮೆ ಇರುತ್ತಿದ್ದವು. ನಿತ್ಯ ಗಾಣದೆತ್ತಿನಂತೆ ದುಡಿಯುತ್ತಿದ್ದ ಮಹಿಳೆಗೆ ಈ ಸಮಯದಲ್ಲಿ ದೇಹ ಸ್ವಲ್ಪ ಮಟ್ಟಿಗೆ  ಸೂಕ್ಷ್ಮವಾಗಿರುತ್ತದೆ. ಆದುದರಿಂದ ಅವರಿಗೆ ವಿಶ್ರಾಂತಿ ನೀಡಲು ಕೆಲಸದಿಂದ ಹೊರಗಿಡುತಿದ್ದರೇನೊ. ಇದು ಸತ್ಯವೆನಲು ಪುರಾವೆಗಳಿಲ್ಲ. ಕಾಲಾಂತರದಲ್ಲಿ ಇದೊಂದು ದೊಡ್ಡ ಅಂಟುರೋಗವೇ ಆಗಿ ಹೆಣ್ಣಿನ ದೈಹಿಕ ಶ್ರಮ ಕಡಿಮೆ ಮಾಡಿದರೂ ಸ್ವಲ್ಪ ಮಟ್ಟಿಗೆ ಗೆಲುವು ಸಾಧಿಸಿದರೂ ಅವಳ ಮಾನಸಿಕ ಯಾತನೆ ರೋದನೆ ದುಪ್ಪಟ್ಟಾದವು.

ಮುಡ ಚಟ್ಟಿನೊಳ ಬಂದು ಮುಟ್ಟು ತಟ್ಟು ಅಂತೀರಿl

ಮಡುಚೆಟ್ಟು ಎಲ್ಲಾದ ಹೇಳಣ್ಣl

 ಮುಟ್ಟಾದ ಮೂರು ದಿನಕ ಹುಟ್ಟಿ ಬಂದೀರಿ ನೀವುll”

       – ಕಡಕೋಳ ಮಡಿವಾಳಪ್ಪ

ಅವರ ಮಾತು ಈ ಸಂದರ್ಭದಲ್ಲಿ ‌ಎಷ್ಟು ಪ್ರಸ್ತುತ ಎನಿಸದಿರದು.

ನಮ್ಮ ಕೆಲವೊಂದು ಸಮುದಾಯಗಳಲ್ಲಿ ಮುಟ್ಟಿನ ಸಮಯದಲ್ಲಿ ಹೆಣ್ಣನ್ನು ತುಂಬಾ ದಹನೀಯವಾಗಿ ನಡೆಸಿಕೊಳ್ಳುತ್ತಾರೆ.ಮುಟ್ಟು ಮುಟ್ಟೆಂದು ಹೌಹಾರಿ ಹೊರಗಟ್ಟಿ ದೂಡುವರು ಎಂಬ ಸಾಲುಗಳು ‌ಶೋಷಣೆಯ ವಿರಾಟ ದರ್ಶನ ಮಾಡಿಸುತ್ತವೆ. ಗೊಡ್ಡು ಸಂಪ್ರದಾಯಗಳಿಗೆ ಬಲಿಯಾಗಿ ಮನೆಯಲ್ಲಿ ಮೂಲೆಯಲ್ಲಿ ಕೂಡಿಸಿ ಯಾರನ್ನು ಮುಟ್ಟಬಾರದೆಂದು ಆದೇಶಿಸುತ್ತಾರೆ. ಜೊತೆಗೆ ಮನೆಯ ಕೆಲಸಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಪಾತ್ರೆ ಪರಿಕರಗಳನ್ನು ಮುಟ್ಟುವಂತಿಲ್ಲ. ಶುಭ ಸಮಾರಂಭಗಳಿಗೆ ಹೋಗುವಂತಿಲ್ಲ ಎಂಬ ನಿಷಿದ್ಧಗಳು ಹೆಣ್ಣಿನ ಹೆಣ್ಣಿನ ಮನಸ್ಸನ್ನು ಮತ್ತಷ್ಟು ಜರ್ಜರಿತಗೊಳಿಸಿ ಅವಮಾನದ ಕೂಪದಲ್ಲಿ ಬಿದ್ದು ನರಳುವಂತೆ ಮಾಡುತ್ತವೆ. ಅಂತಹ ಸಮಯದಲ್ಲಿ ಮನೆಗೆ ಹೊರಗಿನವರು ಬಂದರಂತೂ ಮುಗಿಯಿತು ಅವರ ಮನೆಯಲ್ಲಿಯೇ ಇವರು ಅಸ್ಪ್ರಶ್ಯರಾಗಿರುವ ಯಾತನೆ ಅಷ್ಟಿಷ್ಟಲ್ಲ ಎನ್ನುತ್ತಾರೆ ಕವಯತ್ರಿ. ತಾರ್ಕಿಕವಾಗಿ ವೈಚಾರಿಕವಾಗಿ ಆಲೋಚಿಸದೆ ಮುಟ್ಟು ಮುಟ್ಟಬೇಡಿರೆನುವ ಮೂಢಾತ್ಮರಿಗೆ ಚಾಟಿ ಬೀಸಿದ್ದಾರೆ. ಅದರಿಂದ ಹೊರಬಂದು ಯೋಚಿಸುವಂತೆ ಸಲಹೆ ನೀಡುತ್ತಾರೆ. ಇದನ್ನೆಲ್ಲ ನಂಬುವ ಗೊಡ್ಡು  ಸಂಪ್ರದಾಯವಾದಿಗಳಿಂದ ನಮ್ಮ ಮನಸ್ಸನ್ನು‌ ಹೊರ ತರಬೇಕು ಎಂದು ಹೇಳುತ್ತಾರೆ.

ಕೆಲವು ಸಮುದಾಯಗಳಲ್ಲಿ ಒಂದು ಹೆಣ್ಣನ್ನು ಮನೆಯಿಂದ ಹೊರಗಿರಿಸುವ ಕರಾಳ ಛಾಯೆಯನ್ನು ನಾವು ಕಾಣಬಹುದು. ಇಷ್ಟೆಲ್ಲಾ ಹತಾಶೆ ನಿರಾಸೆ ನಡುವೆಯೂ ಕೊಂಚವಾದರೂ ನೆಮ್ಮದಿ ದೊರೆಯುತ್ತಿರುವುದು ಕೆಲವು ಪ್ರಗತಿಪರ ಚಿಂತಕರಿಂದ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಬದಲಾವಣೆಗಳು ಆಗುತ್ತಿವೆ. ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಗುರುತಿಸುವಷ್ಟರ ಮಟ್ಟಿಗೆ ಬದಲಾವಣೆಗಳಾಗುತ್ತಿದ್ದು ಈ ಮಡಿವಂತಿಕೆಯಿಂದ ಹೊರಬಂದು ಜನರು ವೈಜ್ಞಾನಿಕವಾಗಿ ಚಿಂತಿತರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದ್ಯಾವಂತರು ಮತ್ತು ನಗರ ಪ್ರದೇಶದ ಜನರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೂರು ದಿನ ಮನೆಯಿಂದ ಹೊರ ಹಾಕುವುದು ಕಡಿಮೆಯಾಗುತ್ತಿರುವುದು ಒಂದು ನೆಮ್ಮದಿಯ ಸಂಗತಿಯಾಗಿದೆ.

ಆಧುನಿಕತೆಯ ಸೋಗಲಿ ಗೊಡ್ಡು ಸಂಪ್ರದಾಯಗಳು ಜೆಡ್ಡಿಡಿದು ಕೂತಿವೆ.!

ನಿಂತ ನೀರೊಳ್ ಪಾಚಿಗಟ್ಟಿದಂತೆ

ನಿತ್ಯವು ಮಹಾಪ್ರಪಾತ ಅತಿರೇಕ

ಹೆಣ್ಣು ಋತುಮತಿಯಾಗಬೇಕಷ್ಟೆ

ಮುಟ್ಟಾದ ಹೆಣ್ಣಿಗೆ ರಕ್ಷಣೆ ಮಾತಿಲ್ಲ….

ಹೆಣ್ಣಿನ ದಿನದ ದೌರ್ಭಾಗ್ಯಕೆ

ಮೇಲಿಂದ ಹಾಕುವರು ಭಿಕ್ಷೆ

ಅಸ್ಪೃಶ್ಯ ನಡೆಯಂತೆ ನೀರು ತಿನಿಸು

ಬಟ್ಟೆ ಇತ್ಯಾದಿ ಬಿಸಿಲು ಗಾಳಿ

ಮಳೆ ಚಳಿ ಕತ್ತಲೆನ್ನದೆ

ದೇವರ ನೆನೆದು ಕಾಲಕಳೆಯುತ

ಹಲುಬುವ ಕ್ಷಣ ಅಬ್ಬಬ್ಬಾ

ನರಕಯಾತನೆಗೊಂದು ಹಬ್ಬ

ಆಧುನಿಕತೆ ಬೆಳೆಯುತ್ತಿದೆ. ಜನರು ಬುದ್ಧಿವಂತರಾಗುತ್ತಿದ್ದಾರೆ. ಆದರೆ ಸಂಪ್ರದಾಯಗಳು ಜಡ್ಡು ಹಿಡಿದು ಕೂತಿವೆ. ಸುಲಭವಾಗಿ ಅವುಗಳಿಂದ ಹೊರಬಂದು ಹೊಸತನವನ್ನು ಒಪ್ಪಿಕೊಂಡು ಒಪ್ಪಿಕೊಳ್ಳುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಕವಯತ್ರಿ ಬಳಸಿರುವ ನಿಂತ ನೀರಿನಲ್ಲಿ ಪಾಚಿ ಕಟ್ಟಿದಂತೆ ಎನ್ನುವ ರೂಪಕ ಅದ್ಭುತವಾಗಿ ಮೂಡಿಬಂದಿದೆ.

ನೀರು ನಿತ್ಯ ಹರಿಯುತ್ತಿದ್ದರೆ ಸ್ವಚ್ಛವಾಗಿ ಶುಭ್ರವಾಗಿರುತ್ತದೆ. ಇಲ್ಲವಾದರೆ ಪಾಚಿ ಕಟ್ಟುತ್ತದೆ. ಹಾಗೆ ಮನುಷ್ಯನ ಮನಸ್ಸು ಪರಿವರ್ತನೆಗೆ ತೆರೆದುಕೊಂಡರೆ ಮೂಢನಂಬಿಕೆಯಿಂದ ಹೊರಬರಬಹುದು. ಅವರು ಆಚರಿಸುವ ಅನಿಷ್ಟ ಪದ್ಧತಿಯಲ್ಲಿರುವ ಸತ್ಯ ಮಿಥ್ಯಗಳನ್ನು ವಿಶ್ಲೇಷಿಸಿ ಒಳಿತನ್ನು ಪಾಲಿಸುವರು ‌ಎಂದು ಕವಯತ್ರಿ ಹೇಳುತ್ತಾರೆ.

ಮುಟ್ಟಾದ ಹೊಲೆಯೊಳಗೆ ಹುಟ್ಟುವುದು ಜಗವೆಲ್ಲl

 ಮುಟ್ಟು ಬೇಡೆಂದು ತೊಲಗುತಾl

 ಹಾರುವನು ಹುಟ್ಟಿದನು ಎಲ್ಲಿಂದ” ll

          – ಸರ್ವಜ್ಞ

 ಈ ಮಾತಿಗೆ ಮಡಿ ಮೈಲಿಗೆಯ ಢಂಬಾಚಾರಿಗಳು ಉತ್ತರಿಸಲೇಬೇಕು. ಹೆಣ್ಣು ಋತುಮತಿ ಆಗಲೇಬೇಕೆಂಬ ಹಂಬಲ ಎಲ್ಲರದ್ದು. ಕಾರಣ ಆಕೆ ಮಗುವನ್ನು ಪಡೆಯುವ ಸಾಮರ್ಥ್ಯ ಪಡೆದಳು ಎಂದು ಸಾಬೀತು ಪಡಿಸಿ ಕೊಳ್ಳಬೇಕು. ಆದರೆ ಮುಂದೆ ಅವಳ ರಕ್ಷಣೆಗೆ ಮಾತ್ರ ಯಾರೂ ಮನಸ್ಸು ಮಾಡುವುದಿಲ್ಲ. ಅಂದರೆ ಅವಳನ್ನು ಈ ಮೌಢ್ಯದಿಂದ ಹೊರತಂದು ನೆಮ್ಮದಿಯಾಗಿರಲು ಬಿಡುವುದಿಲ್ಲ ಎಂದು ಕವಯತ್ರಿ ದುಃಖ ಭಾವವನ್ನು ವ್ಯಕ್ತಪಡಿಸುತ್ತಾರೆ.

ಇನ್ನೂ ಋತುಮತಿಯಾದರೆ ಮುಗಿಯಿತು ಕತ್ತಲ ಕೋಣೆಯ ಮೂಲೆಯಲ್ಲಿ ಕುಡಿಸುತ್ತ ಅಲ್ಲಿಗೆ ಎಲ್ಲ ಊಟ-ತಿಂಡಿ ನೀರನ್ನು ನೀಡಲಾಗುತ್ತದೆ. ಅದು ಹೇಗೆಂದರೆ ಭಿಕ್ಷುಕನಿಗೆ ಬಿಕ್ಷೆ ನೀಡುವಂತೆ, ಅವಳಿಗದು ಹಾಕಿದಂತೆ, ಇದಕ್ಕಿಂತ ಅಸ್ಪೃಶ್ಯತೆ ಅನುಕರಣೆ ಬೇಕೆ ಎನ್ನುವುದು ಕವಯತ್ರಿಯ ಪ್ರಶ್ನೆ.

ಆ ಸಮಯದಲ್ಲಿ ಈ ನರಕಯಾತನೆಗೆ ಆರತಿ ಎಂಬ ಹಬ್ಬದ ಸಂಭ್ರಮ ಬೇರೆ ಎನ್ನುತ್ತಾರೆ. ಈ  ಎಲ್ಲ ಮಡಿವಂತ ಆಚರಣೆಗಳು ಹೆಚ್ಚಿನಲ್ಲಿ ಮುಜುಗರ ಉಂಟುಮಾಡುತ್ತವೆ. ಇಂತಹ ಹೆಣ್ಣಿನ ಜನ್ಮವೇಕೆ ಬೇಕು ಎಂಬ ಭಾವ ಮೂಡಿಸುತ್ತದೆ. ಹೆಣ್ಣು ಹುಟ್ಟಿನ ಮುಟ್ಟನ್ನು ಖುಷಿ ಖುಷಿಯಾಗಿ ಸ್ವೀಕರಿಸಿ ಅದನ್ನು ಸಂಭ್ರಮಿಸಲು ಅವಕಾಶ ದೊರೆಯಬೇಕಾದರೆ ಮೊದಲು ಅರ್ಥವಿಲ್ಲದ ಆಚರಣೆಗಳಿಂದ ಸಮಾಜ  ಹೊರಬರಬೇಕು ಎಂದು ಕವಯತ್ರಿ  ಆಗ್ರಹಿಸುತ್ತಾರೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಇಲ್ಲಿ ಕವಯತ್ರಿಯು ಮಹಿಳೆ ಯಾವುದರಿಂದ ಸ್ತ್ರೀ ಸಂವೇದನೆಯನ್ನು ತ್ರಾಸವಿಲ್ಲದೆ ಕವಿತೆಯಾಗಿಸಿದ್ದಾರೆ. ಪ್ರತಿಯೊಂದು ಸಾಲು ತುಂಬಾ ಪ್ರಜ್ಞಾಪೂರ್ವಕವಾಗಿ ಜೋಡಿಸಿಕೊಂಡು ಹೆಣ್ಣಿನ ಮನದ ದನಿಯಾಗಿ ಹೊರಹೊಮ್ಮಿದೆ. ಪ್ರಬುದ್ಧವಾದ ಶಬ್ದ ಭಂಡಾರದಿಂದ, ಭಾವಪೂರಿತವಾಗಿ ಬರೆಸಿಕೊಂಡ ನವ್ಯಕಾವ್ಯ ಇದಾಗಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯ ಭಾವಲೋಕದ ತುಮುಲಗಳನ್ನು, ತನ್ನದೇ ಅನುಭವಗಳನ್ನು, ಅನುಭವವಾಗಿಸಿ ಅನುಸಂದಾನಿಸಿದ್ದಾರೆ. ಈ ಸಮಯದಲ್ಲಿ ಹೆಣ್ಣಿನ ತಾಕಲಾಟಗಳನ್ನು ಗಂಡಿನಲ್ಲಿ ಅರಿಯಲು ಸಾಧ್ಯವೇ ಅದನ್ನು ಅವರು ತಮ್ಮ ವಿಶಿಷ್ಟ ಬರಹದ ಮೂಲಕ ಪ್ರತಿಪಾದಿಸಿದ್ದಾರೆ.

 ಆ ಮೂಲಕ ಮುಟ್ಟಿನ ಬಗ್ಗೆ ಚರ್ಚೆಗೆ ಹೊಸ ದಾರಿ ಸೃಷ್ಟಿಸಿದ್ದಾರೆ. ವಿಜ್ಞಾನವನ್ನು ತಿರಸ್ಕರಿಸುತ್ತಾ ಅಜ್ಞಾನದ ಅಂಧಾನುಕರಣೆಯನ್ನು, ಮೌಢ್ಯ ಮಡಿವಂತಿಕೆಯನ್ನು ತ್ಯಜಿಸುವ ಉದಾರತೆಯನ್ನು ಸಮಾಜ ಮಾಡಬೇಕೆಂದು ಆಗ್ರಹಿಸುತ್ತಾರೆ.

ಈ ಕವಿತೆಯು ಏಕಾತ್ಮಕ ಗುರಿಯನ್ನು ಮಾತ್ರ ಹೊಂದಿರದೇ, ವಿಭಿನ್ನ ಆಯಾಮಗಳಲ್ಲಿ ವೈಯಕ್ತಿಕವಾಗಿ ಸಾಮಾಜಿಕವಾಗಿ ಚರ್ಚಿಸುತ್ತಾ ಸಾಗಿದೆ‌ ಹೆಣ್ಣಿನ ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಒಂದು ಮುಖವಾದರೆ, ಸಾಮಾಜಿಕವಾಗಿ ಮುಟ್ಟನ್ನು ನೋಡುವ ದೃಷ್ಟಿಕೋನ ಮತ್ತೊಂದು ಆಯಾಮವಾಗಿದೆ. ಈ ಎರಡು ಪರಿಯಲ್ಲಿ ಚರ್ಚಿಸಿದ ಕವಿತೆಯು ಮಾನವೀಯ ನೆಲೆಯಲ್ಲಿ ಚಿಂತನೆಗಚ್ಚುತ್ತದೆ. ಹೆಣ್ಣಿನ ಮನದ ಸೂಕ್ಷ್ಮ ಭಾವಗಳು ಈ ಕವಿತೆಯ ಗೆಲುವಾಗಿದೆ.

 ಮುಟ್ಟಿನ ಬಗ್ಗೆ ಜನರಿಗಿರುವ ತಾತ್ಸಾರ ಮತ್ತು ತಿರಸ್ಕಾರ ಮನೋಭಾವ ಬದಲಾಗಬೇಕೆಂದು ಕವಯತ್ರಿ ಆಶಿಸಿದ್ದಾರೆ. ಕವಿತೆಯಲ್ಲಿ ಗಂಭೀರವಾದ ವಿಷಯವೊಂದನ್ನು ಗಹನವಾಗಿ ಚರ್ಚಿಸುತ್ತಿದ್ದಾರೆ. ಯಾವುದೇ ವಿಷಯವನ್ನು ಹರಳುಗಟ್ಟುವಂತೆ ಬರೆಯುವ ಚಾಕಚಕ್ಯತೆ ಕವಯತ್ರಿಯದು. ಅದನ್ನು ಈ ಕವಿತೆ ರುಜುವಾತು ಮಾಡುತ್ತದೆ. ಅದ್ದೂರಿಯಾಗಿ ಭಾಷೆಯನ್ನು ಬಳಸುವ ಸಾಹಿತ್ಯ ಪ್ರಜ್ಞೆ ಮತ್ತು ಪದಗಳ ಸಂಯೋಜನೆ, ಅಂತಃಕರಣದ ಭಾವ ಓದುಗರನ್ನು ಸುಲಭವಾಗಿ ಸೆಳೆಯುತ್ತದೆ.

ಒಟ್ಟಾರೆ ಕವಯತ್ರಿ ಮುಟ್ಟು ಎಂದರೆ ಹುಟ್ಟು ಅದನ್ನು ಗೌರವಿಸಿ ಹೆಣ್ಣಿನ ಮನೋಗತವನ್ನು ಅರಿಯಿರಿ. ಮುಟ್ಟಿನ ಸಮಯದಲ್ಲಿ ಅವಳ ಭಾವನೆಗಳಿಗೆ ಸ್ಪಂದಿಸುವ ರೀತಿ ಆತ್ಮವಿಶ್ವಾಸ ತುಂಬಿ ಸಕಾರತ್ಮಕವಾಗಿ ಬೆಂಬಲಿಸಬೇಕೆಂದು ಅಗ್ರಹಿಸಿದ್ದಾರೆ . ಈ ಕವಿತೆ ಓದಿ ಜನಸಮುದಾಯದಲ್ಲಿ ಸ್ವಲ್ಪ ಬದಲಾವಣೆಯಾದರೂ ಆಗಲಿ ಎಂದು ನಾನು ಆಶಿಸುವೆ.

ಸ್ನೇಹಿತರೆ ನನ್ನ ಈ ವಾರದa ಕವಿತೆ ಹಾಗೂ ವಿಶ್ಲೇಷಣೆ ನಿಮಗೆ ಆಪ್ತವಾಗಿದೆ ಎಂದು ಭಾವಿಸುತ್ತಾ ಮುಂದಿನ ವಾರ ಮತ್ತೊಂದು ಕಾವ್ಯ ವಸ್ತುವಿನೊಂದಿಗೆ ನಿಮ್ಮ ಮುಂದೆ ಬರಲಿದ್ಧೇನೆ. ಅಲ್ಲಿಯವರೆಗೂ ನಿಮ್ಮ ಓದಿನ ನಿರೀಕ್ಷೆಯಲ್ಲಿ ನಾನಿರುವೆ.

ಧನ್ಯವಾದಗಳು.


ಅನುಸೂಯ ಯತೀಶ್

ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

One thought on “

  1. ಮೇಡಮ್ ನಮಸ್ತೆ….

    ಕಾವ್ಯದರ್ಪಣ ಮಾಲಿಕೆಯಲ್ಲಿ ನನ್ನೊಂದು ‘ಮುಟ್ಟು’ ಎಂಬ ಶೀರ್ಷಿಕೆಯ ಕವನಕ್ಕೆ ತಮ್ಮ ಸವಿಸ್ತಾರವಾದ ವಿಶ್ಲೇಷಣೆ ವಿಮರ್ಶೆ ನಿಜಕ್ಕೂ ಹೆಮ್ಮೆ ಅನ್ನಿಸುತದೆ..

    ಮುಟ್ಟು ಎನ್ನುವ ವಿಷಯವಸ್ತುವಿಗೆ ಸರ್ವಜ್ಞ ಮಹಾಕವಿಯ ವಚನಗಳೊಂದಿಗೆ ಹಾಗು ಮತ್ತಿತರ ಮಹೋದಯರ ಬರಹಗಳನು ನೆನಪಿಸಿಕೊಳ್ಳುವುದರ ಮೂಲಕ ನನ್ನೀ ಕವನಕ್ಕೆ ಅದ್ಭುತ ಮೆರಗನ್ನು ತಂದು ಕೊಟ್ಟು ನನ್ನ ಕಾವ್ಯ ವಸ್ತುವಿಗೆ ಮತ್ತಷ್ಟ ಗರಿಮೆಯನ್ನು ನೀಡಿರುವುದು ನನಗೆ ತುಂಬಾ ಖುಷಿಯಾಗುತಿದೆ..

    ಹೌದು ಮುಟ್ಟು ಎಂದರೆ ಈಗಲ್ಲೂ ಅದೆಷ್ಟೊ ಮಂದಿ ಮೂಗು ಮುರಿಯುವರು
    ಇದ್ದಾರೆ..ಆಧುನಿಕತೆಯ ಅಟ್ಟಹಾಸದಲ್ಲೂ ಇಂತಹ ಹೀಯಾಳಿಸುವ ಮಡಿ ಮೈಲಿಗೆ ಎಂದು ಬೆಬ್ಬಿಡುವ ಜನರಿಗೇನು ಕಡಿಮೆಯಿಲ್ಲ…ಇದು ಪ್ರಕೃತಿ ಸಹಜಕ್ರಿಯೆ ಅಂತ ಗೊತ್ತಿದ್ದರು ಮೂಢನಂಬಿಕೆಗಳಿಗೆ ಜೋತು ಬೀಳುವರು..

    ಮುಟ್ಟಾಗುವ ಆದಿ ಅದು ಹದಿಹರಯದ ವಯಸ್ಸು ದೇಹದೊಳಗೆ ಹಲವಾರು ಬದಲಾವಣೆಗಳು ಉಂಟಾಗುತಿರುತ್ತವೆ.ಅದನ್ನ ಎಲ್ಲರೂ ಕೂಡ ಒಪ್ಪಲೆ ಬೇಕು..ಹೇ ನನಗೆ ಆಗಲ್ಲಪ ನನಗೆ ಅವೆಲ್ಲ ನೋವು ಹಿಂಸೆ ಇದೆಲ್ಲ ಬೇಡ ಅಂದ್ರೆ ಕೇಳೋರು ಯಾರು ಇಲ್ಲ.
    ಆಯಾಯ ವಯಸ್ಸಿಗೆ ಏನೇನು ಆಗಬೇಕೊ ಅದೆಲ್ಲ ಆಗುತ್ತಲೆ ಇರುತ್ತದೆ..ಅದನ್ನ ಎಲ್ಲರೂ ಸ್ವೀಕರಿಸಲೆ ಬೇಕು.ಅದರಿಂದಾಗುವ
    ನೋವು ಸಂಕಟಗಳನ್ನು ಅನುಭವಿಸಲೆ ಬೇಕು..ಇದರಲ್ಲಿ ಅಸಹ್ಯ ಮಡಿ ಮೈಲಿಗೆ ಅಂತದೇನು ಇಲ್ಲ..ಮುಟ್ಟಾದವರನ್ನು ಮುಟ್ಟಬಾರದು ಒಳಗೆ ಬಾರದು ಅನ್ನೋದು ಮೂರ್ಖತನ.ಇತ್ತೀಚೆಗೆ ಎಲ್ಲರೂ ಕೂಡ ಸಾಕ್ಷರರು ಜ್ಞಾನವಂತರು ಇದರ ಬಗ್ಗೆ ತಿಳಿದಿರುವವರೆ ಈಗಲಾದರೂ ಇಂತಹ ಮೂಡನಂಬಿಕೆಗಳನ್ನು ಬಿಟ್ಟು ವಾಸ್ತವ ಚಿತ್ರಣಕ್ಕೆ ಬಂದು ಬದುಕಿರಿ..ಈ ಒಂದು ವಿಚಾರಧಾರೆಯ ಸಾರವನ್ನು Anusuya ಮೇಡಮ್ ಅದ್ಭುತವಾಗಿ ನನ್ನ ನವ್ಯ ಕವನದ ಸಾಲುಸಾಲುಗಳನ್ನು ಎಳೆಎಳೆಯಾಗಿ ಬಿಡಿಸಿ ವಿಮರ್ಶಿಸಿದ್ದಾರೆ.ಅವರಿಗೆ ನಾನು ಶರಣು..
    ಧನ್ಯೋಸ್ಮಿ ಮೇಡಮ್..

    ಹೀಗೆ ನಿಮ್ಮ ವಿಮರ್ಶಾ ಲೇಖನಗಳು ಮತ್ತಷ್ಟು ಮಗದಷ್ಟು ಬರುತಿರಲಿ ಈ ಮುಖೇನ ನಿಮ್ಮ ಸಾಹಿತ್ಯಕೃಷಿ ಎಲ್ಲೆಡೆಯೂ ಪಸರಿಸಲಿ..ಶುಭವಾಗಲಿ,
    ಅಭಿನಂದನೆಗಳು ಮೇಡಮ್

    ನನ್ನ ಕವನವನ್ನು ನನ್ನ ಕುತೂಹಲಕ್ಕೂ ಮೀರಿ ವಿಮರ್ಶೆ ಮಾಡಿರುವಿರಿ ನಿಮಗೆ ಹತ್ಫೂರ್ವಕ ಧನ್ಯವಾದಗಳು..

Leave a Reply

Back To Top