ವಿಶ್ವನಾಥ ಎನ್ ನೇರಳಕಟ್ಟೆ
ನನ್ನ ಕಣ್ಣಲ್ಲಿ ಅಂಬೇಡ್ಕರ್
ಬಹುತೇಕರು ಪ್ರವಾಹದ ಜೊತೆಗೇ ಸಾಗುವ ಅನಿವಾರ್ಯತೆಗೆ ಸಿಲುಕಿರುತ್ತಾರೆ. ಆದರೆ ಪ್ರವಾಹಕ್ಕೆ ಎದುರಾಗಿ ಈಜಿ, ದಡ ಸೇರುವವರು ಕೆಲವರು ಮಾತ್ರ. ಅಂತಹ ಧೈರ್ಯ, ಛಾತಿ ತೋರಿದವರು ಇತಿಹಾಸದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ; ಇತಿಹಾಸವನ್ನೇ ಸೃಷ್ಟಿಸುತ್ತಾರೆ. ರೂಢೀಗತವಾದ ಸಾಮಾಜಿಕ ವ್ಯವಸ್ಥೆಯ ಬದಲಾವಣೆಗೆ ಪ್ರಯತ್ನಿಸಿ, ಕಾಲ ಪ್ರವಾಹದೆದುರು ಈಜಿ, ಗುರಿಯನ್ನು ತಲುಪಿದ ಕಾರಣಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್ ಮುಖ್ಯರಾಗುತ್ತಾರೆ, ಮಾನ್ಯರಾಗುತ್ತಾರೆ. ಬ್ರಿಟೀಷರಿಂದ ಮಾತ್ರವಲ್ಲದೆ ತಮ್ಮ ದೇಶದ ಜನರಿಂದಲೂ ತಿರಸ್ಕಾರಕ್ಕೆ, ಅವಮಾನಕ್ಕೆ ಒಳಗಾಗಬೇಕಾದ ದುಃಸ್ಥಿತಿಯನ್ನು ಈ ದೇಶದ ದಲಿತ ಸಮುದಾಯದವರು ಅನುಭವಿಸುತ್ತಿದ್ದ ಕಾಲಘಟ್ಟ ಅದಾಗಿತ್ತು. ಹೀಗೆ ಅಸ್ಪೃಶ್ಯತೆ- ಜಾತಿಪದ್ಧತಿಗಳ ಕತ್ತಲ ಕೂಪದಲ್ಲಿ ಬಿದ್ದು ಒದ್ದಾಡುತ್ತಿದ್ದ, ಕತ್ತಲೆಯೇ ತಮ್ಮ ಸರ್ವಸ್ವ ಎಂದು ಭಾವಿಸಿದ್ದ ನಿರ್ಲಕ್ಷಿತ ಸಮುದಾಯದ ಜನರಿಗೆ ಸಮಾನತೆಯ ಬೆಳಕಿನ ಪರಿಚಯವನ್ನು ಮಾಡಿಕೊಟ್ಟ ಮಹಾನ್ ಚೇತನವಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಗುರುತಿಸಬಹುದಾಗಿದೆ. ಕಾಲಧರ್ಮವನ್ನು ಮೀರಿನಿಂತ ಕಾರಣದಿಂದಲೇ ಅಂಬೇಡ್ಕರ್ ಅವರು ಬುದ್ಧ, ಮಹಾತ್ಮ ಗಾಂಧೀಜಿಯವರಂತಹ ದಾರ್ಶನಿಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. “ಕುಲುಮೆಯಲ್ಲಿ ಬೆಂದು, ನಿರಂತರವಾಗಿ ಏಟು ತಿಂದ ಕಬ್ಬಿಣ ಹರಿತವಾದ ಕತ್ತಿಯಾಗಿ ರೂಪುಗೊಳ್ಳುತ್ತದೆ” ಎನ್ನುವ ಸಾಲಿನ ಮೂರ್ತರೂಪ ಡಾ. ಬಿ. ಆರ್. ಅಂಬೇಡ್ಕರ್ ಅವರು. ಬಾಲ್ಯದಿಂದಲೂ ಜಾತಿ ತಾರತಮ್ಯದ ಕುಲುಮೆಯಲ್ಲಿ ಬೆಂದ ಅಂಬೇಡ್ಕರ್ ಅವಮಾನ- ಸವಾಲುಗಳ ಏಟನ್ನು ಎದುರಿಸಿ, ತೀಕ್ಷ್ಣ ಜ್ಞಾನದ ಕತ್ತಿಯಾಗಿ ರೂಪುಗೊಂಡು, ಜಾತಿಯ ಹೆಮ್ಮರವನ್ನು ಸೀಳಿದ ಬಗೆ ನಿಜಕ್ಕೂ ಆಶ್ಚರ್ಯವನ್ನು ಹುಟ್ಟಿಸುತ್ತದೆ. ತಮ್ಮಂತಹ ಶೋಷಿತರು ಮಾತ್ರವಲ್ಲದೆ ಶೋಷಕರನ್ನೂ ಪ್ರಭಾವಿಸುವ ವಿಶಿಷ್ಟ ಶಕ್ತಿ ಅಂಬೇಡ್ಕರ್ ಅವರಲ್ಲಿತ್ತು. ಶತ್ರುಗಳನ್ನೂ ಗೆದ್ದ ಅವರು ಶತಮಾನದ ಅದ್ಭುತ ಎನ್ನುವುದಂತೂ ಸತ್ಯ.
ಜಗತ್ತನ್ನೇ ಅಚ್ಚರಿಗೆ ಕೆಡವಬಲ್ಲ ಅಗಾಧ ಪ್ರತಿಭೆ, ತಿಳಿವಳಿಕೆ ಅವರಲ್ಲಿತ್ತು. ಹುಟ್ಟಿನಿಂದಲೂ ಜೊತೆಯಾಗಿದ್ದ ಸಂಕಷ್ಟಗಳು ಜಗತ್ತನ್ನೇ ಎದುರಿಸಿ ನಿಲ್ಲಬಲ್ಲ ಇಚ್ಛಾಶಕ್ತಿಯನ್ನು ಅವರಲ್ಲಿ ಹುಟ್ಟುಹಾಕಿದ್ದವು. ಹಂತಹಂತವಾಗಿ ಮೇಲೇರಿದ ಅವರು ಸಾಧನೆಯ ಅರಮನೆಯ ಒಡೆಯರೆನಿಸಿಕೊಂಡರು. ಶೋಷಣೆಯನ್ನು ಎದುರಿಸಿ ನಿಲ್ಲುವ ಪ್ರತಿ ಸಂದರ್ಭದಲ್ಲಿಯೂ ಹೋರಾಟಕ್ಕಿಳಿದವರ ಮನದ ಭಿತ್ತಿಯಲ್ಲಿ ಅಂಬೇಡ್ಕರ್ ರೂಪುಗೊಳ್ಳುತ್ತಾರೆ. ನಿರ್ಲಕ್ಷಿತರ ಪಾಲಿನ ದನಿಯಾಗಿ, ದೌರ್ಜನ್ಯಕ್ಕೊಳಗಾದವರ ಸಂಘಟಿತ ಹೋರಾಟದ ನೆಲೆಯಾಗಿ, ಅಸಹಾಯಕರ ಅಸ್ಮಿತೆಯಾಗಿ ಡಾ. ಬಿ. ಆರ್. ಅಂಬೇಡ್ಕರ್ ಇಂದಿಗೂ ಜೀವಂತರಾಗಿದ್ದಾರೆ.
ಸಾರ್ವಕಾಲಿಕವಾಗಿ- ಸಾರ್ವತ್ರಿಕವಾಗಿ ಮಾದರಿಯಾಗಿ ನಿಲ್ಲಬಲ್ಲ ಗುಣ- ಸ್ವಭಾವಗಳು ಅಂಬೇಡ್ಕರ್ ಅವರಲ್ಲಿ ರೂಪುಗೊಂಡದ್ದರ ಹಿನ್ನೆಲೆಯನ್ನು ಅವರ ಜೀವನಾನುಭವದ ಅಧ್ಯಯನದ ಮೂಲಕ ಕಂಡುಕೊಳ್ಳುವುದು ಹೆಚ್ಚು ಮುಖ್ಯ ಎನಿಸುತ್ತದೆ. ಅವರ ಬಾಲ್ಯಕಾಲದ ಎರಡು ಅನುಭವಗಳನ್ನು ಪ್ರಧಾನವಾಗಿ ಗುರುತಿಸಬಹುದೆಂದು ನನಗನ್ನಿಸುತ್ತದೆ.
ಅವುಗಳಲ್ಲಿ ಒಂದು ಅನುಭವ ಹೀಗಿದೆ: ಸತಾರ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಅಂಬೇಡ್ಕರ್ ಅಸ್ಪೃಶ್ಯತೆಯ ಕರಾಳತೆಯನ್ನು ಪ್ರತಿದಿನವೆಂಬಂತೆ ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಫೆಂಡೆಸೆ ಅಂಬೇಡ್ಕರ್ ಎನ್ನುವ ಬ್ರಾಹ್ಮಣ ಶಿಕ್ಷಕರು ಅಂಬೇಡ್ಕರ್ ಅವರ ಕುರಿತು ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ತಾವು ತಂದಿದ್ದ ಊಟದಲ್ಲಿ ಅಂಬೇಡ್ಕರ್ ಅವರಿಗೂ ಪಾಲನ್ನು ನೀಡುತ್ತಾರೆ. ಇಂತಹ ಶಿಕ್ಷಕರ ಕುಲನಾಮವೇ ಅಂಬೇಡ್ಕರ್ ಅವರ ಹೆಸರಿನ ಉತ್ತರಾರ್ಧದಲ್ಲಿ ಸೇರಿಕೊಂಡಿದೆ. ಭೀಮರಾವ್ ರಾಮ್ ಜಿ ಅಂಬಾವಾಡ್ಕರ್ ಎಂಬ ಹೆಸರು ಭೀಮರಾವ್ ರಾಮ್ ಜಿ ಅಂಬೇಡ್ಕರ್ ಆಗಿ ಪರಿವರ್ತನೆಗೊಳ್ಳುತ್ತದೆ.
ಇನ್ನೊಂದು ಅನುಭವವಿದು: ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಅಂಬೇಡ್ಕರ್ ಬಾಂಬೆಯ ಎಲಿಫಿನ್ ಸ್ಟನ್ ಪ್ರೌಢಶಾಲೆಗೆ ಸೇರಿಕೊಳ್ಳುತ್ತಾರೆ. ಪಟ್ಟಣ ಪ್ರದೇಶವಾದ್ದರಿಂದ ಅಸ್ಪೃಶ್ಯತೆ ಇರಲಿಕ್ಕಿಲ್ಲ ಎಂಬ ಊಹೆ ಅಂಬೇಡ್ಕರ್ ಅವರದ್ದಾಗಿರುತ್ತದೆ. ಆದರೆ ಶಾಲೆಗೆ ಸೇರಿ ಕೆಲವು ದಿವಸಗಳಲ್ಲಿಯೇ ಕೆಟ್ಟ ಅನುಭವ ಇವರದ್ದಾಗುತ್ತದೆ. ಅಧ್ಯಾಪಕರು ನೀಡಿದ ಬೀಜಗಣಿತದ ಸಮಸ್ಯೆಯನ್ನು ಬಗೆಹರಿಸಲು ತರಗತಿಯ ಯಾವ ವಿದ್ಯಾರ್ಥಿಗೂ ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಅಂಬೇಡ್ಕರ್ ಸಮಸ್ಯೆಯನ್ನು ಬಿಡಿಸಲು ಇಚ್ಛಿಸುತ್ತಾರೆ. ಅಧ್ಯಾಪಕರು ಅನುಮತಿಯನ್ನೂ ನೀಡುತ್ತಾರೆ. ಆದರೆ ವಿದ್ಯಾರ್ಥಿಗಳು ಕರಿಹಲಗೆಯ ಹಿಂದುಗಡೆಯೇ ತಮ್ಮ ಊಟದ ಬುತ್ತಿಯನ್ನು ಇರಿಸಿರುತ್ತಾರೆ. ಅಂಬೇಡ್ಕರ್ ಕರಿಹಲಗೆಯನ್ನು ಸ್ಪರ್ಶಿಸಿದರೆ ಕರಿಹಲಗೆಗೆ ತಾಗಿಕೊಂಡಂತೆ ಇರುವ ತಮ್ಮ ಊಟದ ಬುತ್ತಿ ಮೈಲಿಗೆಯಾಗುತ್ತದೆ ಎಂಬ ಆಕ್ಷೇಪ ವಿದ್ಯಾರ್ಥಿಗಳಿಂದ ವ್ಯಕ್ತಗೊಳ್ಳುತ್ತದೆ. ಉತ್ಸಾಹದಿಂದಿದ್ದ ಬಾಲಕ ಅಂಬೇಡ್ಕರ್ ತಮ್ಮ ಬುದ್ಧಿವಂತಿಕೆಯನ್ನು ತೋರ್ಪಡಿಸಲಾರದೆ, ಕೀಳರಿಮೆಗೆ ಒಳಗಾಗುವಂತಾಗುತ್ತದೆ.
ಈ ಎರಡು ಅನುಭವಗಳು ಅಂಬೇಡ್ಕರ್ ಅವರ ಜೀವನದುದ್ದಕ್ಕೂ ಹಲವಾರು ಹಂತಗಳಲ್ಲಿ ಪ್ರಭಾವ ಬೀರಿವೆ. ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಜಾತಿ ತಾರತಮ್ಯ- ಅಸ್ಪೃಶ್ಯತೆಯ ವಿರುದ್ಧದ ಹೋರಾಟವನ್ನು ಚಾಲ್ತಿಯಲ್ಲಿರಿಸಿಕೊಂಡ ಅಂಬೇಡ್ಕರ್ ಒಂದು ನಿರ್ದಿಷ್ಟ ಜಾತಿಯನ್ನು ವಿರೋಧಿಸಲಿಲ್ಲ ಎನ್ನುವುದು ಗಮನಾರ್ಹ. ಒಂದು ಜಾತಿಗೆ ಸೇರಿದ ಜನರೆಲ್ಲರೂ ಕೆಟ್ಟವರಲ್ಲ ಎಂಬ ಸ್ಪಷ್ಟತೆ ಅವರಲ್ಲಿತ್ತು. ಅವರ ಸಾರ್ವಜನಿಕ ಬದುಕಿನಲ್ಲಿಯೂ ಈ ಅಂಶ ವ್ಯಕ್ತಗೊಂಡಿತ್ತು. ಅವರ ಹೋರಾಟವು ಜಾತಿ ಪಾರಮ್ಯವನ್ನು ಹೊಂದಿರುವ ಕೆಟ್ಟ ಮನಃಸ್ಥಿತಿಯ ವಿರುದ್ಧವಾಗಿತ್ತು. ವ್ಯಕ್ತಿ ದ್ವೇಷ ಹಾಗೂ ವರ್ಗ ದ್ವೇಷಗಳಿಂದ ಮುಕ್ತವಾದ ಹೋರಾಟ ಅವರದ್ದಾಗಿತ್ತು. ಎಲ್ಲಾ ಜಾತಿಯೊಳಗಡೆಯೂ ತಾರತಮ್ಯ, ಶೋಷಣೆಗೊಳಗಾದ ಜನರಿದ್ದಾರೆ ಎಂಬ ಬಲವಾದ ನಂಬಿಕೆ ಅವರಲ್ಲಿತ್ತು. ಅಂಬೇಡ್ಕರ್ ಅವರ ಹೋರಾಟವು ಇಡೀ ಮಾನವ ಸಮಾಜವನ್ನು ಉದ್ಧರಿಸುವ ವಿಶಾಲ ವ್ಯಾಪ್ತಿಯನ್ನು ಹೊಂದಿತ್ತು ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಅಸ್ಪೃಶ್ಯರ ಪರವಾದ ಹೋರಾಟವನ್ನು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ನಡೆದ ‘ಮನುಸ್ಮೃತಿ ದಹನ’ವು ಅಂಬೇಡ್ಕರ್ ಅವರನ್ನು ಆ ಕಾಲಕ್ಕೆ ಚರ್ಚಾಸ್ಪದ ವ್ಯಕ್ತಿಯನ್ನಾಗಿಸಿತು. ಮನುಸ್ಮೃತಿ ಗ್ರಂಥವು ಹಿಂದೂ ಧರ್ಮದಲ್ಲಿ ವರ್ಣವ್ಯವಸ್ಥೆ ಹಾಗೂ ಮಹಿಳೆಯರ ಸ್ಥಾನಮಾನದ ಕುರಿತಂತೆ ಹಲವು ವಿಚಾರಗಳನ್ನು ತಿಳಿಸಿಕೊಡುತ್ತದೆ ನಿಜ. ಆದರೆ ಹಿಂದೂ ಧರ್ಮೀಯರ ಒಟ್ಟು ಜೀವನಕ್ರಮದಲ್ಲಿ ಮನುಸ್ಮೃತಿಯ ಪಾತ್ರ ತುಂಬಾ ಸಂಕ್ಷಿಪ್ತವಾದುದು. ಭಗವದ್ಗೀತೆ ಹಾಗೂ ವೇದ- ಉಪನಿಷತ್ತುಗಳನ್ನು ಹಿಂದೂ ಧರ್ಮವು ಪ್ರಧಾನ ಆಕರಗಳಾಗಿ ಮಾನ್ಯ ಮಾಡಿದೆ. ಹೀಗಿರುವಾಗ ಮನುಸ್ಮೃತಿಯನ್ನು ಸುಟ್ಟ ಮಾತ್ರಕ್ಕೆ ಹಿಂದೂ ಧರ್ಮದ ಒಳಗಡೆ ಸಮಾನತೆಯನ್ನು ಜಾರಿಗೊಳಿಸುವ ಅಂಬೇಡ್ಕರ್ ಅವರ ಉದ್ದೇಶ ಈಡೇರಿತೇ? ಒಂದು ಗ್ರಂಥವನ್ನು ಸುಟ್ಟಮಾತ್ರಕ್ಕೆ ಆ ಗ್ರಂಥದಲ್ಲಿರುವ ವಿಚಾರಗಳನ್ನು ಅರ್ಥೈಸಿಕೊಂಡವರ ಜ್ಞಾನಭಂಡಾರವು ನಾಶವಾಗುತ್ತದೆಯೇ? ಎನ್ನುವ ಪ್ರಶ್ನೆಗಳು ಅವತ್ತಿನ ಕಾಲಕ್ಕೂ ವ್ಯಕ್ತಗೊಂಡಿದ್ದವು; ಇವತ್ತಿಗೂ ವ್ಯಕ್ತಗೊಳ್ಳುತ್ತಲೇ ಇವೆ.
ಬಹುತೇಕರು ತಿಳಿದುಕೊಂಡಿರುವ ಮನುಸ್ಮೃತಿ ದಹನದ ಈ ಘಟನೆಯನ್ನು ನಾನು ಅರ್ಥೈಸಿಕೊಂಡಿರುವ ರೀತಿಯಿದು: ಪ್ರಾಯೋಗಿಕತೆಗಿಂತಲೂ ಕೂಡಾ ಸಾಂಕೇತಿಕತೆಯ ದೃಷ್ಟಿಯಿಂದ ಇದು ಮಹತ್ವವನ್ನು ಪಡೆದುಕೊಳ್ಳುತ್ತದೆ. ಅಂಬೇಡ್ಕರ್ ಅವರ ಕೃತಿಗಳನ್ನು ಗಮನಿಸಿಕೊಂಡಾಗ ಇದು ಸ್ಪಷ್ಟಗೊಳ್ಳುತ್ತದೆ. ಹಿಂದೂ ಧರ್ಮದಲ್ಲಿ ಪ್ರಬಲವಾಗಿದ್ದ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವುದರ ಸಂಕೇತವಾಗಿ ಮನುಸ್ಮೃತಿಯನ್ನು ದಹಿಸಲಾಯಿತು. ಸಾರ್ವಜನಿಕವಾಗಿ ಇದನ್ನು ನಡೆಸುವ ಮೂಲಕ ದಮನಿತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ, ಇಚ್ಛಾಶಕ್ತಿಯನ್ನು ಬೆಳೆಸುವ ಉದ್ದೇಶ ಅಂಬೇಡ್ಕರ್ ಅವರಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮನುಸ್ಮೃತಿ ದಹನವು ಅಸ್ಪೃಶ್ಯತಾ ವಿರೋಧಿ ಹೋರಾಟದ ತೀಕ್ಷ್ಣತೆಯನ್ನು ಸಂಪ್ರದಾಯವಾದಿಗಳಿಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನದ ಪ್ರಮುಖ ಭಾಗವಾಗಿತ್ತು. ಈ ಉದ್ದೇಶ ಸಾಕಾರಗೊಂಡಿತು ಎನ್ನುವುದು ಸ್ಪಷ್ಟ.
ಸ್ವಭಾವತಃ ಜಿಜ್ಞಾಸುವಾಗಿದ್ದ, ಜ್ಞಾನ ಪಿಪಾಸುವಾಗಿದ್ದ ಅಂಬೇಡ್ಕರ್ ಅವರು ಬೇರೆಯವರ ಜ್ಞಾನದಾಹವನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಯತ್ನ ಗಮನಾರ್ಹವಾದುದು. ತಮ್ಮ ಚಿಂತನೆ- ಆಲೋಚನೆಗಳನ್ನು ಸಮರ್ಥವಾಗಿ ಬರೆಹದ ರೂಪದಲ್ಲಿ ಸಮಾಜದ ಮುಂದೆ ಪ್ರಸ್ತುತಪಡಿಸಿದ್ದಾರೆ. ನಿರಂತರ ಅಧ್ಯಯನದ ಮೂಲಕ ಅವರು ಗಳಿಸಿಕೊಂಡ ತಿಳಿವಳಿಕೆಯು ಇಂದು ಕೃತಿ ರೂಪದಲ್ಲಿ ನಮ್ಮ ಮುಂದಿದೆ. ಅವರ ಪೂರ್ವಮುದ್ರಿತ ಕೃತಿಗಳೆಲ್ಲವುಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಗಳಿಸಿಕೊಳ್ಳಲು ‘ಹಿಂದೂ ಧರ್ಮದಲ್ಲಿನ ಒಗಟುಗಳು’ (Riddles in Hinduism) ಕೃತಿಯು ಅರ್ಹವಾಗಿದೆ. ಈ ಕೃತಿ ರಚನೆಯನ್ನು ೧೯೫೪ರ ಜನವರಿ ತಿಂಗಳ ಮೊದಲ ವಾರದಲ್ಲಿ ಆರಂಭಿಸಿದ ಅಂಬೇಡ್ಕರ್, ೧೯೫೫ರ ನವೆಂಬರ್ ತಿಂಗಳಿನಲ್ಲಿ ಪೂರ್ಣಗೊಳಿಸಿದರು. ಆದರೆ ಅವರ ಜೀವಿತಾವಧಿಯಲ್ಲಿ ಈ ಕೃತಿ ಪ್ರಕಟಗೊಳ್ಳಲಿಲ್ಲ. ೨೦೦೮ರಲ್ಲಿ ಪ್ರಕಟಗೊಂಡ ಇದು ಹಿಂದೂ ಧರ್ಮದ ಆಂತರಿಕ ರಹಸ್ಯಗಳ ಕುರಿತ ತಳಸ್ಪರ್ಶಿ ಅಧ್ಯಯನದ ಪ್ರತಿಫಲವಾಗಿದೆ.
ಈ ಕೃತಿ ರಚನೆಯಲ್ಲಿ ಅಂಬೇಡ್ಕರ್ ಅವರ ಅಧ್ಯಯನಶೀಲತೆಯ ಪಾತ್ರ ಪ್ರಮುಖವಾಗಿದೆ. ಅಸ್ಪೃಶ್ಯತೆಯ ಉಗಮದ ಶೋಧನೆಗಾಗಿ ವೇದ, ಉಪನಿಷತ್ತು, ಸ್ಮೃತಿಗಳ ಅಧ್ಯಯನವನ್ನು ಬಯಸಿದ ಅಂಬೇಡ್ಕರ್ ಈ ಕಾರಣಕ್ಕಾಗಿಯೇ ಸಂಸ್ಕೃತ ಭಾಷೆಯನ್ನು ಕಲಿಯುತ್ತಾರೆ. ಶೈಕ್ಷಣಿಕ ಹಂತದಲ್ಲಿಯೇ ಸಂಸ್ಕೃತ ಭಾಷೆ ಕಲಿಯುವ ಉತ್ಸುಕತೆ ಇದ್ದರೂ ಕೂಡಾ ಜಾತಿಯ ಕಾರಣದಿಂದಾಗಿ ಅದು ಸಾಧ್ಯವಾಗಿರುವುದಿಲ್ಲ. ವೇದಮಂತ್ರಗಳನ್ನು ಸ್ವತಃ ಓದಿ, ಅರ್ಥೈಸಿಕೊಳ್ಳಬೇಕೆಂದು ಬಯಸಿದ ಅಂಬೇಡ್ಕರ್ ಮಹಾರಾಷ್ಟ್ರದ ಸಂಸ್ಕೃತ ಪಂಡಿತರೊಬ್ಬರ ಮೂಲಕ ಸಂಸ್ಕೃತ ಭಾಷೆಯನ್ನು ಬಹುಬೇಗ ಕಲಿತುಕೊಳ್ಳುತ್ತಾರೆ.
ಹೀಗೆ ತಾವೇ ಓದಿ, ಗ್ರಹಿಸಿಕೊಂಡ ವಿಚಾರಗಳ ಆಧಾರದಲ್ಲಿ ಅಸ್ಪೃಶ್ಯತೆಯ ಕುರಿತಾದ ತರ್ಕಗಳನ್ನು ತಮ್ಮ ಕೃತಿಯಲ್ಲಿ ಮಂಡಿಸುತ್ತಾರೆ. ವೇದಗಳ ಕಾಲಘಟ್ಟದಲ್ಲಿ ಆಚರಣೆಯಲ್ಲಿಲ್ಲದ ಅಸ್ಪೃಶ್ಯತೆಯು ಆ ಬಳಿಕದ ಕಾಲಘಟ್ಟದಲ್ಲಿ ರೂಪುಗೊಳ್ಳುವುದಕ್ಕೆ ಕಾರಣವೇನು? ಎನ್ನುವ ಮೂಲಭೂತ ಪ್ರಶ್ನೆ ಈ ಕೃತಿಯಲ್ಲಿದೆ. ಇದೇ ಪ್ರಶ್ನೆಯನ್ನು ಮುಂದಿರಿಸಿಕೊಂಡು ಅನ್ವೇಷಣೆಗೆ ತೊಡಗುವ ಅಂಬೇಡ್ಕರ್ ಇದಕ್ಕೆ ಪೂರಕವಾಗಿ ಆಹಾರದ ಕುರಿತಾಗಿರುವ ನಿಷೇಧ- ನಿರ್ಬಂಧಗಳು, ವೃತ್ತಿ ಸಂಬಂಧೀ ತೊಡಕುಗಳು ಮೊದಲಾದವುಗಳ ಕುರಿತಾದ ಚರ್ಚೆಯನ್ನು ಕೈಗೆತ್ತಿಕೊಂಡಿದ್ದಾರೆ. ವೇದಕಾಲದಲ್ಲಿ ಸ್ಪರ್ಶಕ್ಕೆ ಅರ್ಹವಾಗಿದ್ದ ಜಾತಿ ಸಮುದಾಯವು ತದನಂತರದಲ್ಲಿ ಅಸ್ಪೃಶ್ಯತೆಗೆ ಒಳಗಾದುದನ್ನು ಚರ್ಚಿಸುತ್ತಲೇ ಅದರ ಹಿಂದಿನ ಕಾರಣವಾಗಿ ಧಾರ್ಮಿಕ ಮುಖಂಡರ, ಧರ್ಮ ಪಂಡಿತರ ಪಾತ್ರವನ್ನು ಪ್ರಧಾನವಾಗಿ ಗುರುತಿಸಿದ್ದಾರೆ. ಧರ್ಮ- ದೇವರುಗಳ ಕುರಿತಾದ ವಿಚಾರಗಳನ್ನು ತಪ್ಪಾಗಿ ಆಖ್ಯಾನಿಸಿದ ಕಾರಣದಿಂದಲೇ ಹಿಂದೂ ಧರ್ಮದಲ್ಲಿ ಜಾತ್ಯಾಧಾರಿತವಾದ ಅಸಮಾನತೆ ರೂಪುಗೊಂಡಿದೆ ಎಂಬ ಸ್ಪಷ್ಟ ಅಭಿಪ್ರಾಯ ಅಂಬೇಡ್ಕರ್ ಅವರದ್ದಾಗಿದೆ. ಹಿಂದೂ ಧರ್ಮದ ಮೂಲಭೂತ ಲಕ್ಷಣಗಳನ್ನು ಆಧುನಿಕ ಸಂದರ್ಭದಲ್ಲಿ ಮತ್ತೆ ಭಾರತೀಯ ಸಮಾಜಕ್ಕೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಸೂಚ್ಯವಾಗಿ ತಿಳಿಸಿಕೊಟ್ಟಿದ್ದಾರೆ. ಅಸ್ಪೃಶ್ಯತೆಯನ್ನು ನಿವಾರಿಸುವ ದೃಷ್ಟಿಯಿಂದ ಅಂಬೇಡ್ಕರ್ ಅವರ ಈ ಕೃತಿಯು ಮಾರ್ಗದರ್ಶಕ ಕೃತಿಯಾಗಿ ಮಹತ್ವವನ್ನು ಗಳಿಸಿಕೊಳ್ಳುತ್ತದೆ.
ಪ್ರಸ್ತುತ ಕಾಲಘಟ್ಟದಲ್ಲಿ ಮೀಸಲಾತಿಯ ಕಾರಣಕ್ಕಾಗಿ ಡಾ| ಅಂಬೇಡ್ಕರ್ ಹೆಸರು ಪದೇ ಪದೇ ಪ್ರಸ್ತಾಪಗೊಳ್ಳುತ್ತಿದೆ. ಮೀಸಲಾತಿಯ ಕಾರಣಕ್ಕಾಗಿಯೇ ಅಂಬೇಡ್ಕರ್ ಪ್ರಣೀತ ವೈಚಾರಿಕತೆಯನ್ನು ಟೀಕಿಸುವವರೂ ಇದ್ದಾರೆ. ವಾಸ್ತವವಾಗಿ ಮೀಸಲಾತಿಯ ಕುರಿತು ಅಂಬೇಡ್ಕರ್ ಅವರ ಅಭಿಪ್ರಾಯ ಏನಾಗಿತ್ತು? ಮೀಸಲಾತಿಯ ಬಗೆಗಿನ ಅವರ ಕಾಣ್ಕೆ ಏನು? ಎನ್ನುವುದನ್ನು ಪರಿಶೀಲಿಸಿಕೊಳ್ಳುವುದು ಇಂದಿನ ಕಾಲಘಟ್ಟದ ಅಗತ್ಯತೆಯಾಗಿದೆ.
ಮೀಸಲಾತಿಗೆ ಸಂಬಂಧಪಟ್ಟಂತೆ ಅಂಬೇಡ್ಕರ್ ಅವರ ಅನಿಸಿಕೆ ಸ್ಪಷ್ಟವಾಗಿದೆ. ಅವರು ಮೀಸಲಾತಿಯನ್ನು ಸೀಮಿತ ಕಾಲಾವಧಿಯ ಸೌಲಭ್ಯವಾಗಿ ಪರಿಗಣಿಸಿದ್ದರು. ಕೀಳರಿಮೆಯಿಂದ ನರಳುತ್ತಿದ್ದ, ಶೈಕ್ಷಣಿಕ- ಔದ್ಯೋಗಿಕ ಅವಕಾಶಗಳನ್ನೇ ಹೊಂದಿಲ್ಲದ ವರ್ಗಗಳಲ್ಲಿ ಭರವಸೆ ಮೂಡಿಸುವ, ಆತ್ಮನಂಬಿಕೆಯನ್ನು ಜಾಗೃತಗೊಳಿಸುವ ಮಾರ್ಗವಾಗಿ ಮೀಸಲಾತಿಯನ್ನು ಕಂಡಿದ್ದರು. ಭಾರತೀಯ ಸಂವಿಧಾನ ರಚನೆಯ ಸಂದರ್ಭದಲ್ಲಿ ಅವರು “ಮುಂದಿನ ಹತ್ತು ವರ್ಷಗಳವರೆಗೆ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಆ ಬಳಿಕ ಮರು ಅವಲೋಕಿಸಬೇಕು” ಎಂದಿದ್ದರು. ಸಂಪೂರ್ಣವಾಗಿ ಮೂಲೆಗುಂಪಾಗಿದ್ದ ಜನರಿಗೆ ಆರಂಭಿಕ ಸ್ಫೂರ್ತಿಯು ಮೀಸಲಾತಿಯ ಮೂಲಕ ದೊರಕುವಂತಾಗುತ್ತದೆ ಎಂಬ ಸ್ಪಷ್ಟ ಕಲ್ಪನೆ ಅವರಲ್ಲಿತ್ತು. ಹೀಗೆ ನಿರ್ಲಕ್ಷಿತರನ್ನು ಉದ್ಧರಿಸುವ ಮಹಾತ್ವಾಕಾಂಕ್ಷೆಯಿಂದ ಜಾರಿಗೊಂಡ ಮೀಸಲಾತಿ ವ್ಯವಸ್ಥೆಯು ಆಧುನಿಕ ಭಾರತದಲ್ಲಿ ಅನ್ವಯಗೊಳ್ಳುತ್ತಿರುವ ವಿಧಾನವು ಅಂಬೇಡ್ಕರ್ ಅವರ ವೈಚಾರಿಕತೆಗೆ ವಿರುದ್ಧವಾಗಿದೆ. ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರನ್ನು, ಅವರ ಸಿದ್ಧಾಂತಗಳನ್ನು, ಅವರು ಸೂಚಿಸಿದ ಮೀಸಲಾತಿ ವ್ಯವಸ್ಥೆಯನ್ನು ಇಂದು ರಾಜಕೀಯ ದುರುದ್ದೇಶದ ಸಾಧನಗಳಾಗಿ ಮಾರ್ಪಡಿಸಿಕೊಳ್ಳಲಾಗಿದೆ. ಅಂಬೇಡ್ಕರ್ ಅವರಿಂದ ಹತ್ತು ವರ್ಷಗಳವರೆಗೆ ನಿಗದಿಯಾಗಿದ್ದ, ಮರು ಅವಲೋಕನಕ್ಕೆ ಸೂಚಿತವಾಗಿದ್ದ ಮೀಸಲಾತಿಯು ಚುನಾವಣಾ ಮತಗಳಿಕೆಯ ಕಾರಣಕ್ಕಾಗಿ ಇಷ್ಟು ವರ್ಷಗಳ ನಂತರವೂ ಮುಂದುವರಿದುಕೊಂಡು ಬಂದಿದೆ.
ಇದನ್ನು ಗಮನಿಸಿಕೊಂಡಾಗ, ಇಷ್ಟು ವರ್ಷಗಳ ಕಾಲ ಮೀಸಲಾತಿಯನ್ನು ಪಡೆದ ಬಳಿಕವೂ ನಿರ್ಲಕ್ಷಿತರ ಉದ್ಧಾರ ಸಾಧ್ಯವಾಗಿಲ್ಲವೇ? ಮೀಸಲಾತಿಯ ಮೂಲಕವೇ ಅವಕಾಶಗಳನ್ನು ಪಡೆದುಕೊಳ್ಳುವ ಹೀನಸ್ಥಿತಿಯಲ್ಲಿ ನಿರ್ದಿಷ್ಟ ವರ್ಗಗಳು ಇವೆಯೇ? ಹಾಗಿದ್ದರೆ ಅಂಬೇಡ್ಕರ್ ಅವರ ಸಲಹೆಗನುಸಾರವಗಿ ರೂಪುಗೊಂಡ ಮೀಸಲಾತಿ ವ್ಯವಸ್ಥೆ ವಿಫಲವಾಗಿದೆಯೇ? ಎನ್ನುವ ಪ್ರಶ್ನೆಗಳು ಮೂಡುತ್ತವೆ. ವಾಸ್ತವವಾಗಿ ಅಂಬೇಡ್ಕರ್ ಅವರ ಸಲಹೆಯ ಆಧಾರದಲ್ಲಿ ರೂಪುಗೊಂಡ ಮೀಸಲಾತಿ ವ್ಯವಸ್ಥೆಯು ಸಕಾರಾತ್ಮಕ ಪರಿಣಾಮವನ್ನು ಬೀರಿದೆ. ನಿರ್ಲಕ್ಷಿತರ ಬದುಕಿನಲ್ಲಿ ಗಮನಾರ್ಹವಾದ ಬೆಳೆವಣಿಗೆಗೆ ದಾರಿ ಮಾಡಿಕೊಟ್ಟಿದೆ.
ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಮೀಸಲಾತಿಯು ನಿರ್ದಿಷ್ಟ ವರ್ಗದ ಜನರ ಬೌದ್ಧಿಕ ಪ್ರದರ್ಶನಕ್ಕೆ ಅಡ್ಡಿಯುಂಟುಮಾಡುತ್ತಿರುವುದು ನಿಜ. ಪ್ರತಿಭೆ, ಬುದ್ಧಿವಂತಿಕೆಗಳಿದ್ದರೂ ಮೀಸಲಾತಿಯನ್ನು ಪಡೆದುಕೊಂಡ ಜನರು ತಮ್ಮ ಜಾತಿಯ ಮೂಲಕವೇ ಗುರುತಿಸಲ್ಪಡುತ್ತಿದ್ದಾರೆ. ಮೀಸಲಾತಿಯನ್ನು ಪಡೆದುಕೊಂಡ ಏಕಮಾತ್ರ ಕಾರಣಕ್ಕೆ ವ್ಯಕ್ತಿಯ ಬೌದ್ಧಿಕ ಶ್ರೀಮಂತಿಕೆ ಅರ್ಥವನ್ನು, ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಇದು ಸಮಾನತೆಯ ಹರಿಕಾರ ಅಂಬೇಡ್ಕರ್ ಅವರಿಗೆ ಎಸಗಿದ ಅಪಮಾನವಾಗಿದೆ.
೨೦ನೇ ಶತಮಾನದ ಪೂರ್ವಾರ್ಧದಲ್ಲಿ ವ್ಯಕ್ತಗೊಂಡಿರುವ ಅಂಬೇಡ್ಕರ್ ಅವರ ಚಿಂತನೆಗಳು ೨೧ನೇ ಶತಮಾನಕ್ಕೂ ಹೊಂದಿಕೊಳ್ಳಬಲ್ಲವೇ? ಎನ್ನುವುದು ಮಹತ್ವಪೂರ್ಣವಾದ ಹಾಗೂ ಔಚಿತ್ಯಸಹಿತವಾದ ಪ್ರಶ್ನೆಯಾಗಿದೆ. ಅಂಬೇಡ್ಕರ್ ಅವರ ಚಿಂತನೆಗಳ ರೂಪುಗೊಳ್ಳುವಿಕೆಗೆ ಕಾರಣವಾದ ಸಾಮಾಜಿಕ ವ್ಯವಸ್ಥೆಯು ಇಂದಿನ ಕಾಲಘಟ್ಟದಲ್ಲಿಯೂ ಅಸ್ತಿತ್ವದಲ್ಲಿದೆ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಗಮನಾರ್ಹ ಬದಲಾವಣೆ ಸಂಭವಿಸಿದ್ದರೂ ಅಸ್ಪೃಶ್ಯತೆ, ಜಾತ್ಯಾಧಾರಿತ ತಾರತಮ್ಯ ಸಂಪೂರ್ಣವಾಗಿ ನಶಿಸಿಲ್ಲ ಎನ್ನುವುದು ಸತ್ಯ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಮುಂದಿರಿಸಿಕೊಂಡು ಸಾಗುವುದು ಸೂಕ್ತವಾಗಿದೆ.
ಅತ್ಯಂತ ಆಧುನಿಕವೆಂದು ಗುರುತಿಸಲ್ಪಡುವ ೨೧ನೇ ಶತಮಾನದಲ್ಲಿಯೂ ಅಸ್ಪೃಶ್ಯತೆ, ಜಾತಿ ಅಸಮಾನತೆಯಂತಹ ಘಟನೆಗಳು ಸಾಕಷ್ಟು ನಡೆದಿವೆ; ನಡೆಯುತ್ತಲೇ ಇವೆ. ಇಂತಹ ಘಟನೆಗಳನ್ನು ಕೇಳಿಸಿಕೊಂಡಾಗ ತಕ್ಷಣವೇ ಅಂಬೇಡ್ಕರ್ ನೆನಪಾಗುತ್ತಾರೆ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ಅಸ್ಪೃಶ್ಯತಾ ನಿವಾರಣೆಗೆ ಸಂಬಂಧಪಟ್ಟಂತೆ ಕಠಿಣ ಕಾನೂನುಗಳಿವೆ. ಮಾಧ್ಯಮಗಳ ಬೆಂಬಲವಿದೆ. ಆದರೂ ಅಸ್ಪೃಶ್ಯತೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ದೇಶದ ಎಲ್ಲಾ ಜನರಲ್ಲಿಯೂ ಸಮಾನತೆಯ ಭಾವನೆ ಮೂಡಿದಾಗ ಮಾತ್ರ ಇದು ಸಾಧ್ಯವಿದೆ. ಮೀಸಲಾತಿ ಕುರಿತಾದ ಚರ್ಚಾಸ್ಪರ್ಧೆಯೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನನ್ನ ಸ್ನೇಹಿತ ಹೇಳಿದ ಮಾತುಗಳಿವು- “ಮೀಸಲಾತಿ ಎನ್ನುವುದು ಶೈಕ್ಷಣಿಕ- ಔದ್ಯೋಗಿಕ ವಲಯಗಳಿಗಿಂತಲೂ ಹೆಚ್ಚಾಗಿ ನಮ್ಮ ನಿಮ್ಮೆಲ್ಲರ ಮನೆ- ಮನಗಳಲ್ಲಿ ರೂಪುಗೊಳ್ಳಬೇಕಾಗಿದೆ.” ಹೌದು! ನಮ್ಮ ಮನೆ- ಮನಗಳಲ್ಲಿ ಎಲ್ಲಾ ಜಾತಿಯ ಜನರಿಗೂ ಸಮಾನ ಸ್ಥಾನವನ್ನು ಮೀಸಲಿರಿಸಿದಾಗ ಅಂಬೇಡ್ಕರ್ ಅವರ ಕನಸಾಗಿದ್ದ ಜಾತ್ಯತೀತ ಭಾರತ ರೂಪುಗೊಳ್ಳುವಂತಾಗುತ್ತದೆ. ಅಸ್ಪೃಶ್ಯತೆಯಿಂದ ಮುಕ್ತವಾದ, ಜಾತ್ಯಾಧಾರಿತ ಶೋಷಣೆಗಳಿಂದ ಅತೀತವಾದ ಭಾರತವನ್ನು ರೂಪಿಸುವುದೇ ಅಂಬೇಡ್ಕರ್ ಅವರಿಗೆ ನಾವು ನೀಡುವ ಬಹುದೊಡ್ಡ ಗೌರವವಾಗಿದೆ.
ನಮಸ್ಕಾರ ವಿಶ್ವನಾಥ್ ಅವರೆ ಚಿಂತನಾರ್ಹ ಲೇಖನ ಬರೆದಿದ್ದೀರಿ.ಮೀಸಲಾತಿಯ ಬಗ್ಗೆ ಮರುಚಿಂತನೆ ಆಗುವುದಕ್ಕೂ ಮೊದಲು ಅಸ್ಪೃಶ್ಯತೆ ಆಚರಣೆ ಮೂಲಕ ಪರಿಶಿಷ್ಟರನ್ನು ಪ್ರಾಣಿಗಳಿಗೂ ಕಡೆಯಾಗಿ ಹಿಂಸಿಸುವವರ ವಿರುದ್ದ ಕಠಿಣಾತಿಕಠಿಣ ಕಾನೂನುಗಳು ಜಾರಿಯಾಗಬೇಕು ಕಾನೂನು ಭಕ್ಷಕರ ಜಾಲದಲ್ಲಿ ಸಿಲುಕಿ ಭಯಾನಕ ಅಂತ್ಯ ಕಂಡ ಕಾಣುತ್ತಿರುವ ಪರಿಶಿಷ್ಟ ಹಾಗೂ ಹಿಂದುಳಿದವರ ಕುಟುಂಬಗಳು ಎಲ್ಲರಂತೆ ಎಲ್ಲರೊಂದಿಗೆ ಸಹಜವಾಗಿ ಬದುಕಲು ಎಂದು ಅವಕಾಶವಾಗುವುದೋ ಅಂದಿನಿಂದಲೇ ಮೀಸಲಾತಿ ಇಲ್ಲದಂತಾಗಲಿ.