ಬೇಸಿಗೆ ವಿಶೇಷ
ಪ್ರಿಯೆಮತ್ತೆಬಂದಿತುಬೇಸಿಗೆ
ಮಹಾಬಲೇಶ್ವರ ಶಂಕರ ಹೆಗಡೆ
ಪ್ರೀತಿಯ ಬಾರ್ಯೆಗೆ ಒಲವಿನ ಪತ್ರ,
ಪ್ರಿಯೆ,
ನಾವು ಷಹರ ಸೇರಿ ಎಷ್ಟೊಂದು ವರ್ಷಗಳೇ ಕಳೆದು ಹೋಗಿವೆ. ನಮ್ಮ ಕರುಳಿನ ಕುಡಿ ನಮ್ಮ ಯುವರಾಜ ಎದೆಯೆತ್ತರ ಬೆಳೆದು ನಿಂತಿದ್ದಾನೆ. ಮಗಳೂ ಇದೀಗ ಇಂಗ್ಲೀಷ್ ಶಿಕ್ಷಣ ಮುಗಿಸಿ ಉದ್ಯೋಗ ಅರಸುವತ್ತ ಮನಸ್ಸನ್ನು ಹರಿಬಿಟ್ಟಿದ್ದಾಳೆ. ಅದ್ಯಾಕೋ ಏನೋ…… ನಾವಿರುವ ಬಾಡಿಗೆ ಮನೆಯ ನಾಲ್ಕು ಗೋಡೆಗಳು ತುಂಬಾ ತುಂಬಾ ಹಳತಾದಂತೆ ಭಾಸವಾಗುತ್ತಿವೆ. ಮನೆಯೊಳಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ಬಿಸಿಗಾಳಿ, ಬಿಸಿ ಉಸಿರು, ಜೊತೆಯಲ್ಲಿ ಬಿಸಿಲ ಬೇಗುದಿ. ಗೋಡೆಯ ಆಚೆ ಏನಿದೆಯೆಂದು ನೋಡೋಣವೇ? ಕಣ್ಣಳತೆಯ ತನಕವೂ ಭಾರಿ ಗಾತ್ರದ ಲಘುಬಗೆಯ ವಾಹನಗಳು, ಸ್ಕೂಟರ್, ಬೈಕ್, ರಿಕ್ಷಾ, ಕಾರು ಮೊದಲಾದ ವಾಹನಗಳಿಂದಾದ ಟ್ರಾಫಿಕ್ ಜಾಮ್, ಕ್ಷಣಹೊತ್ತೂ ಶಾಂತಿ ಇರದ ಸ್ಥಳಗಳು. ಗಜಿಬಿಜಿ ಕಿವಿಗಡಚುವ ಸಪ್ಪಳಗಳು. ಹತ್ತು ಮಾರು ದೂರ ಹೋಗುವಷ್ಟರಲ್ಲಿಯೇ ಕಾಣುವ ರೆಡ್ ಲೈಟ್ ಗಳ ಸಿಗ್ನಲ್ಗಳು, ಯಾರಿಗೂ ಯಾವುದರ ಬಗ್ಗೆಯೂ ಮಾತನಾಡಲು ವ್ಯವಧಾನವಿಲ್ಲ. ಒಬ್ಬರಿಗೊಬ್ಬರು ಪರಿಚಯವೇ ಇಲ್ಲ. ಚಿಂತನೆಗೆ ಅವಕಾಶವೇ ಇಲ್ಲ ಎನ್ನುವ ದಿನಗಳ ನಡುವೆಯೇ ಸವೆದು ಹೋಗುತ್ತಿರುವ ನಮ್ಮ ಬದುಕು. ಎಲ್ಲರಿಗೂ ಹಾಗೆ. ಉದ್ಯೋಗ ಖಾತ್ರಿ ಆದ ಮೇಲೆ ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗಲೇಬೇಕು. ಆದ್ದರಿಂದ ಎಲ್ಲರಿಗೂ ಅಂದಿನ ಮುಂಜಾನೆಯ ಅವಧಿ ಬಹಳ ಬ್ಯೂಸಿ, ಎಲ್ಲರಿಗೂ ಆತುರ;ಕಾತುರ. ದಿನನಿತ್ಯವೂ ಹೊಸತನ್ನು ಕಲಿಯುವ ಹಂಬಲ. ಅದು ನಮಗೂ ಹಾಗೆ ಅಲ್ವಾ. ಇನ್ನು ನಮ್ಮ ಮಕ್ಕಳಿಗಂತೂ ನಿತ್ಯವೂ ಕಲಿಕೆ ಇದ್ದಿದ್ದೇ….. ಏನು ಮಾಡಲಿ? ಹೇಳು.
ಇನ್ನು ಆಫೀಸಿಗೆ ಹೋದಂತೆ ನಮ್ಮ ಮನೆಯ ಎಲ್ಲಾ ಜಂಜಾಟವೂ ಮಾಯ. ಅಲ್ಲಿಯ ಕೆಲಸ ಕಾರ್ಯಗಳಲ್ಲಿ ನಾವು ಬ್ಯೂಸಿ….ಕಾರಣ ನಾವು ಮಾಡುವ ಉದ್ಯೋಗವೇ ನಮಗೆ ಅನ್ನ ಕೊಡುವ ದೇವರು. ಆಫೀಸ್ ಬಿಟ್ಟ ನಂತರ ನಾವು ಮನೆಗೆ ಸೇರಲು ತೆಗೆದು ಕೊಳ್ಳುವ ಸಮಯಕ್ಕೆ ಮಿತಿಯೇ ಇಲ್ಲ. ಅದೆಷ್ಟೋ ಸಲ ನಮ್ಮ ಮಕ್ಕಳ ಜೊತೆಗೆ ಒಂದಿಷ್ಟು ಕ್ಷಣ ಕುಳಿತುಕೊಂಡು ಕುಶಲೋಪರಿ ಮಾತನಾಡಲು ಸಾಧ್ಯವಾಗದೇ ಹೋದ ದಿನಗಳೂ ಇವೆ. ಮುಂಜಾನೆ ಪ್ಯಾಕೇಟ್ ಹಾಲು, ತರಕಾರಿ,ಪೇಪರ್, ಅಡುಗೆ, ತಿಂಡಿ,ಹಾಗೂ ಸಿಟಿಬಸ್. ಇವಿಷ್ಟರಲ್ಲೇ ನಮ್ಮ ಬಹುತೇಕ ಸಮಯದ ಮುಕ್ಕಾಲು ಭಾಗ ಕಳೆದುಹೋಗಿವೆ. ಇನ್ನು ರಜೆಯ ದಿನಗಳು ಬಂದರೆ ಸಾಕು. ಹಗಲು ಹೊತ್ತಿನಲ್ಲಿ ನೇಸರನ ಕಿರಣಗಳು ಮುಖಕ್ಕೆ ರಾಚಿದರೂ ಹಾಸಿಗೆಯಿಂದ ಎದ್ದೇಳದ ನಮ್ಮ ಮಕ್ಕಳು. ಮುಂಜಾನೆ ಗಂಟೆ ಹತ್ತಾದರೂ ನಿದ್ದೆಯಿಂದ ಏಳಲು ಅವರಿಗೆ ಮನಸ್ಸೇ ಬರೋದಿಲ್ಲ. ಇನ್ನು ನಮಗಂತೂ ಮಕ್ಕಳನ್ನು ಬಿಟ್ಟು ತಿಂಡಿ ತಿನ್ನುವ ಮನಸ್ಸು ಬಂದೀತೇ?. ಇಲ್ಲ. ನಮ್ಮ ದಿನಚರಿಯಲ್ಲಿ ವಾರದ ಭಾನುವಾರದ ದಿನ ಸದ್ದಿಲ್ಲದೆ ಅದೆಷ್ಟೋ ಬದಲಾವಣೆ…. ಇನ್ನು ತಿಂಗಳ ಒಂದನೇ ತಾರೀಖನ್ನು ಮರೆಯಲಾದೀತೆ? ಅಂದೇ ನಮಗೆ ಸಂಬಳ. ಅದರಲ್ಲೂ ಆ ತಿಂಗಳಲ್ಲಿ ನಾವು ಪಡೆದ ರಜೆಯನ್ನು ಲೆಕ್ಕ ಹಾಕಿ ನಮ್ಮ ನಿರೀಕ್ಷೆಗೂ ಮೀರಿ ಕಡಿಮೆ ಸಂಬಳ ಪಡೆದಿದ್ದೂ ಇದೆ. ಮನೆಯ ಓನರ್ ಗೆ ಬಾಡಿಗೆ ಕೊಡಲು ಒಂದೆರಡು ದಿನ ತಡವಾದರೆ ಸಾಕು. ಅದಾಗಲೇ ಅವರಿಂದ ಪೋನ್. ನಯವಾಗಿ ಮಾತನಾಡುವ ಅವರಿಂದ ನಾವೂ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಅರಿತಿದ್ದೇವೆ. ನೋಡು ನೋಡುತ್ತಿದ್ದಂತೆ ಅರವತ್ತು ಬಂದೇ ಹೋಯಿತು.
ಈಗ ನಾವು ಆಡಿ ಬೆಳೆದ ಮನೆ ನಮ್ಮ ಬಾಲ್ಯದ ನೆನಪುಗಳು, ನಾವು ಆಡಿ ಬೆಳೆದ ಕೇರಿ, ಹರಿವ ಹಳ್ಳ, ಕಲಿತ ಶಾಲೆ, ಬಾಲ್ಯದ ಸ್ನೇಹಿತರು, ಕೊಟ್ಟಿಗೆಯ ರಾಸುಗಳು,ತೋಟದ ತಂಪಾದ ಸ್ಥಳಗಳು, ಊರಿನ ದೇವಸ್ಥಾನಗಳು, ಅಶ್ವತ್ಥ್,ಆಲ, ಮುಂತಾದ ವೃಕ್ಷಗಳು ಇವೆಲ್ಲವೂ ಒಟ್ಟೊಟ್ಟಿಗೆ ನೆನಪಿಗೆ ಬರುತ್ತವೆ. ನಾವ್ಯಾಕೆ ಊರಿಗೆ ಹೋಗಬಾರದು?ಅಲ್ಲಿಯೇ ವಿಶ್ರಾಂತ ಜೀವನ ನಡೆಸಬಾರದು? ಎಂದೆನಿಸುತ್ತಿದೆ. ಹೌದು, ಮೂವತ್ತು ವರ್ಷಗಳ ಕಾಲ ಷಹರದಲ್ಲಿಯೇ ಸುಖ, ಸಂತೋಷ, ನೆಮ್ಮದಿ, ಗಳಿಕೆ ಉಳಿಕೆ ಇವೆಲ್ಲವನ್ನೂ ಅನುಭವಿಸಿದ ನಮಗೆ ಈಗ ಊರಿಗೆ ಹೋದರೆ ನಮ್ಮನ್ನು ಸ್ವಾಗತಿಸುವವರು ಯಾರು? ಪ್ರೀತಿಯಿಂದ ನನ್ನ ಸೂಟ್ಕೇಸ್ ಹಿಡಿದು ಬಸ್ಸು ಹತ್ತಿಸಿ ನನ್ನ ಬಗ್ಗೆ ಶ್ರೇಯಸ್ಸು ಬಯಸಿದ ಪಿತಾಶ್ರೀ ಇಲ್ಲ. ಮಗನೇ ನೀನು ಮಾತ್ರ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಕನಸು ಕಂಡ ಮಾತಾಶ್ರೀ ಉಳಿದ ಮಕ್ಕಳ ಜೊತೆಗೆ ಬದುಕನ್ನು ಕಾಣುತ್ತಿದ್ದಾಳೆ. ನಾವೂ ಅಲ್ಲಿಯೇ ಉಳಿದರೆ ಅವರು ಕಟ್ಟಿಕೊಂಡ ಕನಸುಗಳಿಗೆ ನಮ್ಮಿಂದಲೇ ತಾಪತ್ರಯ ಪ್ರಾರಂಭವಾಗುತ್ತದೆ. ಆಗೊಮ್ಮೆ ಈಗೊಮ್ಮೆ ಮನೆಗೆ ಹಬ್ಬ ಹರಿ ದಿನಗಳಂದು ಹೋಗಿ ಬಂದರೆ ಗೌರವ ಹೆಚ್ಚು. ಅದರ ಬದಲು ನಾವು ಈಗ ಆ ಮನೆಯಲ್ಲಿ ಒಟ್ಟಿಗೆ ಅಡುಗೆ ಊಟ ಮಾಡಿದರೆ ಆಗ ಮನೆಯಲ್ಲಿ ಕೆಲಸ ಹೆಚ್ಚಾಗಿ ನಾವೇ ಪರಕೀಯರಾಗಿಬಿಡುತ್ತೇವೆ. ಪ್ರಿಯೆ ನಿನಗೆ ನೆನಪಿರಬಹುದು ತಾನೇ… ಮದುವೆಯಾದ ಹೊಸತರಲ್ಲಿ ನಮ್ಮೂರಿನ ಗೇರು ಬೆಟ್ಟದಲ್ಲಿ ರುಚಿಕರವಾದ ಗೇರು ಹಣ್ಣನ್ನು ತಿಂದಿದ್ದು, ಗರ್ಲಕಾಯಿ ಕೊಯ್ದು ತಂದು ಉಪ್ಪಿನಕಾಯಿ ಮಾಡಿದ್ದು, ನೆಂಟರಿಷ್ಟರ ಮನೆಗೆ ಹೋಗಿ ಅವರ ಜೊತೆಗೆ ಕುಶಲೋಪರಿ ಮಾತನಾಡಿ ಗೆಣಸಲೆ,ತೊಡೆದೇವು, ಹಲಸಿನ ಇಡ್ಲಿ, ಒಂದಗಲ ತಂಬ್ಳಿ, ಕೆಸುವಿನ ಕರಗಲಿ,ಮೊಗೆಕಾಯಿ ದೋಸೆ, ಹಸಿ, ಹುಳಿ,ಉಂಡಿದ್ದು, ತಿಂದಿದ್ದು ಇತ್ಯಾದಿ ಹಲವು ನೆನಪುಗಳು ಸುರುಳಿಯಾಕಾರವಾಗಿ ಬಿಚ್ಚಿಕೊಳ್ಳಲು ಪ್ರಾರಂಭಿಸುತ್ತದೆ. ಅಂದು ಹಿತ್ಲ ಗಿಡ ಹಿತ್ಲ ಬಳ್ಳಿ ಇವನ್ನೆಲ್ಲ ನೆಟ್ಟಿ ಹಟ್ಟಿಗೊಬ್ಬರ ಹಾಕಿ ಬೆಳೆಸಿದ ಬಗೆಬಗೆಯ ತರಕಾರಿಗಳು ಈಗ ನೆನಪಾಗಿ ಕಾಡುತ್ತಿವೆ.
ಪ್ರಿಯೆ, ಈ ಬೇಸಿಗೆ ಕಾಲದಲ್ಲಿ ನಮ್ಮೂರೇ ನಮಗೆ ಮೇಲು. ಆಹ್ಲಾದಕರ ವಾತಾವರಣ ಇರುವುದೇ ನಮ್ಮೂರಿನಲ್ಲಿ. ಅಲ್ಲಿ ಸಿಗುವ ನೆಮ್ಮದಿ ಮತ್ತೆಲ್ಲೂ ಸಿಗದು. ನಮ್ಮ ಮಕ್ಕಳು ಊರಿಗೆ ಬರಲಾರರು. ಅವರಿಗೆ ಇಲ್ಲಿಯೇ ಖಾಯಂ ಕೆಲಸ. ನಮಗೆ ಈಗ ಮೊದಲಿನ ಹಾಗೆ ಯಾವ ಒತ್ತಡವೂ ಇಲ್ಲ. ಮುಂಜಾನೆ ಬೇಗನೆ ಏಳಬೇಕೆಂಬ ತರಾತುರಿ ಇಲ್ಲ. ನಿಧಾನವಾಗಿ ಎದ್ದು ನಮ್ಮ ಕೆಲಸ ಕಾರ್ಯ ಮಾಡಿಕೊಂಡು ನಮ್ಮ ಮನೆ ಮತ್ತು ಊರಿನ ಜನರಿಗೆ ಸಹಕರಿಸೋಣ. ಬೇಸಿಗೆ ರಜೆಯಲ್ಲಿ ಒಂದಿಷ್ಟು ದಿನ ಬದಲಾವಣೆಗೆ ಒಳಗಾಗೋಣ. ಅಂದ ಹಾಗೆ ಯಾವ ದಿನ ಹೊರಡುವುದೆಂದು ನಿರ್ಧರಿಸು. ನಾವು ಬರುವ ತನಕ ನಮ್ಮ ಮಕ್ಕಳು ಅಡುಗೆಮನೆ ಕಡೆ ಸುಳಿಯಲಿ. ಹದಿನೈದು ದಿನ ನಮ್ಮ ಊರಿನ ನೆನಪನ್ನು ಸಾಕ್ಷೀಕರಿಸೋಣ. ನಾನಂತೂ ರೆಡಿಯಾಗಿದ್ದೇನೆ. ನೀನು ಬರುವ ಭರವಸೆಯಿದೆ….. ಮತ್ಯಾಕೆ ತಡ. ಟ್ರೇನ್ಗೆ ಟಿಕೆಟ್ ಮಾಡಿಸುವೆ……
ಇಂತಿ ನಿನ್ನ ಪ್ರೀತಿಯ ಪತಿ