ಸೀರೆಯ ಸಹವಾಸ
ತ್ರಿವೇಣಿ ಜಿ.ಹೆಚ್
ಸೀರೆಯ ಸಹ ವಾಸ.
ಸೆರಗು ನಿರಿಗೆಗಳ ಸಮೀಕರಿಸಿ
ಉಬ್ಬಿದೆದೆ ಕಂಡೂ ಕಾಣಿಸದಂತೆ ಮಣಿಸಿ
ನಡುವೆ ”ನಡು”ವಿನ ಆಕಾರವ
ಅಂದಗಾಣಿಸಿದರೂ ಜಗ್ಗುವ ಬೊಜ್ಜು.
ಒಂದೊಂದು ಸೀರೆ ಉಟ್ಟಾಗಲೂ
ಮತ್ತೆಷ್ಟೋ ನೆನಪುಗಳ ಕದ ಬಡಿದು
ಅಳಿಸಲಾಗದವನ್ನಲ್ಲೇ ಮುಚ್ಚಿಟ್ಟು…
ಕಣ್ಣ ಕನಸುಗಳನ್ನೂ ಬೆಚ್ಚಗಿಟ್ಟು…
ಜರಿ ಅಂಚಿನ ಸೀರೆ, ಅಲ್ಲಲ್ಲಿ ಸಣ್ಣ
ಹೂಬಳ್ಳಿಯಂಚು, ನವಿರು ಭಾವ
ಒಲವ ಮೆಲುಕು. ಚಿತ್ತಾಕರ್ಷಕ ಚಿತ್ತಾರ.
ಉಟ್ಟು ತೊಟ್ಟು ಸಂಭ್ರಮಿಸಿದ ಆ ಘಳಿಗೆ.
ಅಷ್ಟೊಂದು ಸುಲಭವಲ್ಲ ಸೆರಗ
ತುದಿಯಲ್ಲಿ ಕನಸು ಕಟ್ಟಿಕೊಂಡೇ
ಸಾಗುವುದು, ಅತ್ತಿತ್ತ ಓಲಾಡುವ
ನಿರಿಗೆಗಳ ಸಂಭಾಳಿಸುತ್ತಲೇ ನಡೆಯವುದು,
ಅಷ್ಟಕ್ಕೇ ಮುಗಿಯುವುದಿಲ್ಲ, ಊಹೂಂ
ಸೀರೆಗೊಪ್ಪುವ ರವಿಕೆ, ಕುಚ್ಚು, ಬಿಂದಿ
ಫಾಲು, ಕೇಶ ವಿನ್ಯಾಸ , ಪಿನ್ನು, ಚಪ್ಪಲಿ,
ಉಫ್ ಒಂದೇ ಎರಡೇ ಸಾಲು ಸಾಲು ಸಾಲದು.
ಮೊದಲ ಸಲ ಸೀರೆಯುಟ್ಟು ಮುಗ್ಗರಿಸಿದ್ದು
ಅಮ್ಮನ ಕಣ್ಣು ತಪ್ಪಿಸಿ ಕ್ಲಾಸ್ ಮೇಟಿಗೆ ಸೀರೆ ಕೊಟ್ಟದ್ದು
ವಾರ್ಡ್ರೋಬಿನ ತುಂಬ ತುಂಬಿರುವ ಥರಾವರಿ ಕಂಡು
ತುಟಿಯಲ್ಲಿ ಮಂದಹಾಸ ಮೂಡಿದ್ದು…
ಈಗಲೂ ಅಷ್ಟೇ ಅಮ್ಮನ ತಬ್ಬಿದ ಕಂದನಂತೆ
ನಿರಿಗೆಗಳು ಅಪ್ಪಿವೆ. ಅದೆಂತಹ ಕಚಗುಳಿ,
ಒಳಗೊಳಗೇ ಪುಳಕ. ನಿನ್ನೆಗಳ ಕಳೆದದ್ದು ,
ನಲ್ಲನ ಜೊತೆಗೆ ಸಾಗಿದ್ದು, ಭ್ರಮೆಯಲ್ಲಿ ತೇಲಿದ್ದು
*********