ಪುಸ್ತಕ ವಿಮರ್ಶೆ

ವಲಸೆ, ಸಂಘರ್ಷ ಮತ್ತು ಸಮನ್ವಯ

ಪುಸ್ತಕ ವಿಮರ್ಶೆ
ಪುಸ್ತಕದ ಹೆಸರು: ವಲಸೆ ಸಂಘರ್ಷ ಸಮನ್ವಯ
ಲೇಖಕರು: ಪುರುಷೋತ್ತಮ ಬಿಳಿಮಲೆ
ಪ್ರಕಟನ ವರ್ಷ: 2019
ಬೆಲೆ: 400 ರೂಪಾಯಿ 
ಪ್ರಕಾಶಕರು: ಅಕೃತಿ ಆಶಯ ಪಬ್ಲಿಕೇಶನ್ ಮಂಗಳೂರು

ಲೋಕೇಶ ಕುಂಚಡ್ಕ

ಡಾ. ಪುರುಷೋತ್ತಮ ಬಿಳಿಮಲೆಯವರ 400 ಪುಟಗಳ ಈ ಕೃತಿಗೆ 1985ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಪ್ರಸ್ತುತ ಸಂಶೋಧನ ಕೃತಿಯು ಇದೀಗ ಪ್ರಕಟವಾಗಿದೆ. ಒಮ್ಮೆ ಬರೆದಾದ ಸಂಶೋಧನ ಪ್ರಬಂಧವನ್ನು ಪರಿಷ್ಕರಣೆ ಮಾಡುವುದು ಸುಲಭದ ಕೆಲಸವಲ್ಲ, ಇನ್ನೊಂದು ಪ್ರಬಂಧವನ್ನು ಬರೆದ ಹಾಗೆ ಆಗುತ್ತದೆ. ದೆಹಲಿಯಲ್ಲಿ ಕುಳಿತುಕೊಂಡು ಈ ಕೆಲಸ ಮಾಡಿದ ಡಾ.ಬಿಳಿಮಲೆಯವರ ಸಾಹಸ ಅಭಿನಂದನೀಯವಾಗಿದೆ. ಇವತ್ತು ಪ್ರತಿಯೊಬ್ಬ ಗೌಡರ ಮನೆಯಲ್ಲಿ ಇರಬೇಕಾದ ಪುಸ್ತಕವಿದು. ಮುನ್ನುಡಿಯಲ್ಲಿ ಪ್ರೊ. ವಿವೇಕ ರೈಅವರು ಹೇಳಿದಂತೆ ‘ನಿಚ್ಚಮ್ ಪೊಸತು’ ಎನ್ನುವ ಮಾತಿಗೆತಕ್ಕಂತೆ ಈ ಕೃತಿ ಸಿದ್ದಗೊಂಡಿದೆ.
ಪುಸ್ತಕದಲ್ಲಿ ಅನೇಕ ಹಳೆಯ ವಿಚಾರಗಳೂ ಇವೆ, ಹೊಸ ಸಂಗತಿಗಳೂ ಇವೆ. ಈ ನಿಟ್ಟಿನಲ್ಲಿ ‘ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಮಾತುಇಲ್ಲಿ ಸಾರ್ಥಕಗೊಂಡಿದೆ. ತಲೆಮಾರುಗಳ ಜೊತೆಗಿನ ನಮ್ಮ ಸಂಬಂಧಗಳನ್ನು ಈ ಕೃತಿಯು ಗಟ್ಟಿಯಾಗಿ ಬೆಸೆಯುತ್ತದೆ. ‘ಮುಂದೇನು?’ ಎನ್ನುವ ಪ್ರಶ್ನೆಗೂ ಪುಸ್ತಕವು ಕೆಲವು ಉತ್ತರಗಳನ್ನು ನೀಡುತ್ತದೆ. 


ಒಂದು ಸಮುದಾಯದ ಚರಿತ್ರೆಯನ್ನು ಕಟ್ಟುವ ಸಮಯದಲ್ಲಿ ಅಧ್ಯಯನಕಾರ ಅದನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಇದು ಒಂದು ಮಾದರಿ. ಇಂದು ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ಬಾವುಟ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿರುವಾಗ ಪ್ರಸ್ತುತ ಪುಸ್ತಕವು ಗೌಡರು ಮತ್ತು ಅವರಂಥ ಅನೇಕ ಸಣ್ಣ ಸಮುದಾಯಗಳು ಭಾರತವನ್ನು ಹೇಗೆ ಕಟ್ಟಿವೆ ಎಂಬ ಕುರಿತು ನಮ್ಮ ಗಮನವನ್ನು ಸೆಳೆಯುತ್ತದೆ. ಆ ಮೂಲಕ ಸುಳ್ಯದಲ್ಲಿ ಬಹುಸಂಖ್ಯಾತರಾದ ಗೌಡ ಸಮುದಾಯದ ಕುರಿತು ನಡೆಸಿದ ಅಧ್ಯಯನಗಳಲ್ಲಿ ಈ ಕೃತಿ ಮೇರು ಪಂಕ್ತಿಯಲ್ಲಿ ನಿಲ್ಲುವ ಅರ್ಹತೆಯನ್ನು ಪಡೆದುಕೊಂಡಿದೆ. ಲಿಖಿತ ಸಾಮಗ್ರಿಗಳಿಲ್ಲದೇ ಇರುವ ಸಮುದಾಯವೊಂದg Àಚರಿತ್ರೆಯನ್ನು ಕಟ್ಟುವ ಕ್ರಮ ಹೇಗೆ ಎಂದು ಸಂಶೋಧಕರಿಗೆ ತಿಳಿದಿಲ್ಲದಿರುವಾಗ, ಅವರಿಗೆ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ. ಇದು ಸುಲಭದ ಕೆಲಸವೇನೂ ಅಲ್ಲ. 


ವಲಸೆ ಸಂಘರ್ಷ ಸಮನ್ವಯಗಳ ಕಥನ
ಪುಸ್ತಕದ ಶೀರ್ಷಿಕೆಗೆ ತಕ್ಕಂತೆ, ‘ವಲಸೆ ,ಸಂಘರ್ಷ, ಮತ್ತು ಸಮನ್ವಯ” ಎನ್ನುವ ಪರಿಕಲ್ಪನೆಗಳು ವಿಶಾಲವಾದ ವ್ಯಾಪ್ತಿಯನ್ನು ಹೊಂದಿವೆ. ಈ ಕೃತಿ ಸುಳ್ಯ ಪರಿಸರದ ಗೌಡರ ಚರಿತ್ರೆಯನ್ನು ಕಟ್ಟಿಕೊಡುತ್ತಾ, ಅಸ್ತಿತ್ವ ಮತ್ತು ಅಸ್ಮಿತೆಗಳ ನಡುವೆ ಒಂದು ರೀತಿಯಲ್ಲಿ ಕೊಂಡಿಯಾಗಿ, ಮತ್ತೊಂದು ಕಡೆ ತನ್ನೊಳಗಿನ ಅನೇಕ ಅಂಶಗಳನ್ನು ಕೃತಿಯೊಳಗೆ ದಾಖಲಿಸುತ್ತದೆ. ಗೌಡ ಸಮುದಾಯವು ತನ್ನ ವಲಸೆಯ ಸಮಯದಲ್ಲಿ, ಪ್ರಭುತ್ವದ ಜೊತೆಗೆ ನಡೆಸಿದ ಸಂಘರ್ಷ, ಮತ್ತು ಆ ಬಳಿಕ ಸಾಧಿಸಿಕೊಂಡ ಸಮನ್ವಯತೆಯನ್ನು ಕೃತಿಯು ಸಾಧಾರವಾಗಿ ವಿವೇಚಿಸುತ್ತದೆ. 


ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ಒಂದು ಹಂತದಲ್ಲಿ ನಾನು ಯಾರು? ನನ್ನ ಅಜ್ಜ ಯಾರು? ನನ್ನ ಅಜ್ಜಿ ಎಲ್ಲಿಯವರು?. ಎಲ್ಲಿಂದ ಬಂದರು? ಹೇಗೆ ಬಂದರು?  ನನ್ನ ಜಾತಿ ಯಾವುದು? ನನ್ನ ಸಮುದಾಯದ ಚರಿತ್ರೆ ಏನು? ನನ್ನ ಮೂಲ ಯಾವುದು? ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ. ಗೌಡರಿಗೆ ಸಂಬಂಧಿಸಿದ ಹಾಗೆ ಅಂತ ಪ್ರಶ್ನೆಗಳಿಗೆ ಈ ಕೃತಿಯು ಸಮಾಧಾನಕರವಾದ ಉತ್ತರವನ್ನು ನೀಡುತ್ತದೆ.


ಬೇರಿನ ಸಂಬಂಧ
ಇಂದು ಬೇರಿನ ಜೊತೆಗಿನ ಸಂಬಂಧ ಕಡಿದುಕೊಳ್ಳಲಾಗುತ್ತಿದೆ. ಈ ಕಾಲದಲ್ಲಿ, ಈ ಕೃತಿಯು ಬೇರಿನ ಸಂಬಂಧದ ಪ್ರಾಮುಖ್ಯವನ್ನು ದಾಖಲಿಸುತ್ತದೆ, ಜೊತೆಗೆ ಅದರ ವಿಶ್ಲೇಷಣೆಯನ್ನು ನಡೆಸುತ್ತದೆ. ಕೂಡುಕಟ್ಟಿನ ಅಯಾಮದೊಳಗೆ ಗೌಡಸಂಪ್ರದಾಯದ ಬೇರಿನ ಅನೇಕ ಸಂಬಂಧಗಳು ಇವೆ ಎನ್ನುವುದನ್ನು ಹೇಳುತ್ತಾ, ಸಾಂಪ್ರದಾಯಿಕ ಕ್ರಮಗಳಲ್ಲಿ ಇರುವ ಅನನ್ಯತೆಯನ್ನೂ ಇಲ್ಲಿ ದಾಖಲು ಮಾಡಲಾಗಿದೆ.


ಅಸ್ಮಿತೆಯ ಹುಡುಕಾಟ
ಗೌಡಸಮಾಜದೊಳಗೆ ಏನೆಲ್ಲಾ ಹುದುಗಿಕೊಂಡಿದೆ ಎನ್ನುವುದನ್ನು ಈ ಕೃತಿ ಪರಿಶೀಲಿಸುತ್ತದೆ. ಗೌಡರ ಇತಿಹಾಸ, ಕಲ್ಯಾಣಪ್ಪನ ಹೋರಾಟದ°è ಗೌಡರ ಪಾತ್ರ, ಗೌಡರ ಸಾಂಪ್ರದಾಯ ವಸತಿ ಮತ್ತು ಆಹಾರ ಕ್ರಮಗಳು, ಕುಟುಂಬ ಪದ್ಧತಿ, ಬಳಿಗಳು, ಒಳಾಡಳಿತ, ಹುಟ್ಟು, ಮದುವೆ, ಸಾವಿನ ಆಚರಣೆಗಳು, ಧಾರ್ಮಿಕ ಸಂಪ್ರದಾಯಗಳು, ಸಿದ್ಧವೇಶ, ಅರೆಭಾಷೆ, ಜನಪದ ಸಾಹಿತ್ಯ, ಬೇಟೆ ಮತ್ತು ಆಟಗಳ ಜೊತೆಗೆ ಇತರೆಡೆಯ ಗೌಡರುಗಳ ಬಗೆಗೂ ಇಲ್ಲಿ ಮಾಹಿತಿಗಳಿವೆ. ಇತರ ಸಮುದಾಯದೊಳಗೆ ಇಲ್ಲದೆ ಇರುವ ಅನೇಕ ಅಂಶಗಳು ಗೌಡರಲ್ಲಿರುವುದನ್ನು ಈ ಪುಸ್ತಕದ ಮೂಲಕ ಗುರುತಿಸಬಹುದು. ಈ ಅರ್ಥದಲ್ಲಿ ಇದು ಗೌಡ ಸಂಸ್ಕøತಿಯ ಭಂಡಾರ. 


   ಈ ಕೃತಿಯನ್ನು ಪ್ರತಿಯೊಬ್ಬರು ಓದಿ “ನಮ್ಮದು” ಎನ್ನುವ ಸಂಸ್ಕøತಿಯ ಮರೆತ ಕಾಯಿಗಳನ್ನು ಮತ್ತೆ ಮಾಲೆಗೆ ಪೋಣಿಸಿ ಧರಿಸಿದರೆ ಗೌಡ ಸಮುದಾಯಕ್ಕೆ ತುಂಬ ಪ್ರಯೋಜನವಿದೆ. ವಲಸೆ ಸಂಘರ್ಷ ಸಮನ್ವಯ ಕೃತಿಯು ಗೌಡ ಸಮುದಾಯದ ಹೆಮ್ಮೆಯ ಕೃತಿ ಎಂದು ಹೇಳಬಹುದು. ಈ ಕೃತಿಯಲ್ಲಿ ಸಂಶೋಧನೆಗೆ ಅನೇಕ ಹೊಳಹುಗಳನ್ನು ನೀಡಲಾಗಿದೆ ಅವುಗಳನ್ನು ಆಧರಿಸಿ ಅಧ್ಯಯನ ನಡೆಸುವವರಿಗೆ ಉತ್ತಮ ಅವಕಾಶಗಳು ಸಿಗಬಹುದು.

*******

One thought on “ಪುಸ್ತಕ ವಿಮರ್ಶೆ

  1. Sir i by this book from sapna book house After ರೀಡಿಂಗ್ this book ಮಚ್ know about Gowda comunity

Leave a Reply

Back To Top