ಕ್ಷಮಿಸದಿರಿ
ಸಂಕಟಗಳನ್ನು ಕವಿತೆ ಮಾಡುವುದು ಕ್ರೂರ ಅನ್ನಿಸಿ ಎಷ್ಟೋ ಸಲ ಸುಮ್ಮನಾಗುತ್ತೇನೆ.. ಇದು ಕವಿತೆಯಲ್ಲ; ಒಡಲ ಉರಿ.
ವಿಜಯಶ್ರಿ ಹಾಲಾಡಿ
ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆ
ಬೆಂದ ನರಳಿದ ನೊಂದ
ಅಳಿಲುಗಳೇ ಮೊಲಗಳೇ
ಜಿಂಕೆಗಳೇ ನವಿಲುಗಳೇ
ಹುಲಿ ಚಿರತೆ ಹಾವುಗಳೇ
ಕ್ರಿಮಿ ಕೀಟ ಜೀವಾದಿಗಳೇ
ಮರ ಗಿಡ ಪಕ್ಷಿಗಳೇ
ಕೆಲಸಕ್ಕೆ ಬಾರದ’ ಕವಿತೆ’
ಹಿಡಿದು ನಿಮ್ಮೆದುರು
ಮಂಡಿಯೂರಿದ್ದೇನೆ
ಕ್ಷಮಿಸದಿರಿ ನನ್ನನ್ನು
ಮತ್ತು
ಇಡೀ ಮನುಕುಲವನ್ನು
ಹಸಿರು ಹೂವು ಚಿಗುರೆಂದು
ಈ ನೆಲವನ್ನು ವರ್ಣಿಸುತ್ತಲೇ
ಕಡಿದು ಕೊಚ್ಚಿ ಮುಕ್ಕಿ
ಸರ್ವನಾಶ ಮಾಡಿದ್ದೇವೆ
ಇಷ್ಟಾದರೂ
ಹನಿ ಕಣ್ಣೀರಿಗೂ ಬರಬಂದಿದೆ
ನಮ್ಮ ನಮ್ಮ ಲೋಕಗಳು
ಮಹಲುಗಳನ್ನು ನಾವಿನ್ನೂ
ಇಳಿದಿಲ್ಲ ಇಳಿಯುವುದೂ ಇಲ್ಲ
ಕ್ಷಮಿಸಲೇಬೇಡಿ
ಕೊನೆಗೊಂದು ಅರಿಕೆ
ಪ್ರಾಣಿಪಕ್ಷಿಗಳೇ
ಮತ್ತೊಂದು ಜನ್ಮವಿದ್ದರೆ ನನಗೆ
ದಯಮಾಡಿ ನಿಮ್ಮ ಸಂಕುಲಕ್ಕೆ
ಕರೆದುಕೊಳ್ಳಿ- ಇಲ್ಲವೆಂದಾದರೆ
ನಿಮ್ಮ ಪಾದ ಸೋಕಿನ
ಕಲ್ಲೋ ಮುಳ್ಳೋ ಮಣ್ಣೋ
ಆಗಲಾದರೂ ಹರಸಿಬಿಡಿ
ಹೆಚ್ಚು ಹೇಳುವುದಿಲ್ಲ
ನಿಮ್ಮುಸಿರಿನ ಬೇಗುದಿ
ನಮ್ಮೆಲ್ಲರ ಜೀವಾತ್ಮಗಳ ಬೇಯಿಸಲಿ.
*******