ಕೃಷಿಬೆಲೆ ಆಯೋಗ

Image result for images of indian farmers

ಕರ್ನಾಟಕ ರೈತರ ಉತ್ಪನ್ನಗಳಿಗೆ

ಖಾತರಿ ಬೆಲೆ ಕೊಡಿಸಲು…..

Image result for images of krushi bele ayga

ಗಣೇಶಭಟ್ ಶಿರಸಿ.

ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು……
ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ನೇಮಿಸಿರುವ ಕರ್ನಾಟಕ ಕೃಷಿ ಬೆಲೆ ಆಯೋಗವು ಸಕ್ರಿಯವಾಗಿ ಚಿಂತಿಸುತ್ತಿದೆ. ರಾಜ್ಯದ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಮತ್ತು ಸದೃಢ ಮಾರುಕಟ್ಟೆ ಸಿಗಬೇಕೆಂಬ ಉದ್ದೇಶದಿಂದ ಈ ಆಯೋಗವು ಹಲವಾರು ಶಿಫಾರಸ್ಸುಗಳನ್ನು ಮಾಡಿದೆ. ಆಯೋಗ ಮಾಡಿರುವ ಪ್ರತಿಯೊಂದು ಶಿಫಾರಸ್ಸಿನಲ್ಲೂ ರೈತರ, ರೈತಾಬಿಯ ಕುರಿತಾದ ಪ್ರಾಮಾಣಿಕ ಕಾಳಜಿ ಎದ್ದುಕಾಣುತ್ತದೆ. ರಾಜ್ಯಸರ್ಕಾರ ಮನಸ್ಸು ಮಾಡಿದರೆ ಹೆಚ್ಚಿನ ಶಿಫಾರಸ್ಸುಗಳನ್ನು ಬಹು ಸುಲಭದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯ. ಆದರೆ ಉದ್ಯಮಪತಿಗಳಿಂದಲೇ ದೇಶದ ಉದ್ಧಾರವೆಂದು ನಂಬಿರುವ, ಕೃಷಿ ಎಂಬುದು ಸರ್ಕಾರಿ ಕೃಪಾಕಟಾಕ್ಷಕ್ಕಾಗಿ ಕಾಯಬೇಕಾದ ವೃತ್ತಿಯೆಂದು ಎಲ್ಲ ಪಕ್ಷಗಳ ರಾಜಕಾರಣಿಗಳು ನಂಬಿರುವದರಿಂದಾಗಿ ಕೃಷಿ ಬೆಲೆ ಆಯೋಗದ ಶಿಫಾರಸ್ಸುಗಳು, ಕಡತಗಳು ಹೊರಗೆ ಬರುತ್ತಿಲ್ಲ.
ಕೃಷಿ ಬೆಲೆ ಆಯೋಗದ ಶಿಫಾರಸ್ಸುಗಳಲ್ಲಿ ರೈತ ಪರವಾದ ಪ್ರಾಮಾಣಿಕ ಕಾಳಜಿ ಇದ್ದಾಗಿಯೂ ಅವುಗಳ ಅನುಷ್ಠಾನದಿಂದಲೇ ರೈತರ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆಂದು ಭಾವಿಸಲಾಗದು. ಯಾಕೆಂದರೆ ಈ ಶಿಫಾರಸ್ಸುUಳು ಪ್ರಸ್ತುತ ಅರ್ಥವ್ಯವಸ್ಥೆಯ ಅಂದರೆ ಬಂಡವಾಳವಾದದ ಚೌಕಟ್ಟಿಗೆ ಸೀಮಿತವಾಗಿವೆ. ಕೃಷಿಯನ್ನು ಕಚ್ಚಾ ವಸ್ತು ಪೂರೈಸುವ ಒಂದು ವ್ಯವಸ್ಥೆಯನ್ನಾಗಿಯಷ್ಟೇ ಪರಿಗಣಿಸಲಾಗುತ್ತಿದೆ. ಕಚ್ಚಾ ವಸ್ತುಗಳು ಕಡಿಮೆ ಬೆಲೆಗೆ ದೊರಕಿದಷ್ಟು ಉದ್ಯಮ ರಂಗದ ಲಾಭ ಹೆಚ್ಚುತ್ತದೆ. ಉದ್ಯಮಿಗಳ ಲಾಭ ಹೆಚ್ಚಳದ ದಾಹಕ್ಕೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿರುವುದರಿಂದಾಗಿ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳವಾಗುವುದು ಉದ್ಯಮಿಗಳಿಗೆ ಅಪಥ್ಯ.
ಕೈಗಾರೀಕರಣದ ಆಧುನಿಕ ರೂಪವು ಅರ್ಥವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಪ್ರಾರಂಭವಾದಾಗಿನಿಂದ ಕೃಷಿ ರಂಗವು ಲಾಭದಾಯಕವಾಗಿ ಉಳಿದಿಲ್ಲ. ಭಾರತದ ಸಂಪತ್ತನ್ನು ದೋಚುವ ಬ್ರಿಟಿಷರ ಉದ್ದೇಶ ಮತ್ತು ನೀತಿಯ ಪರಿಣಾಮದಿಂದಾಗಿ ಗ್ರಾಮೀಣ ಭಾರತದ ಸ್ವಾವಲಂಬಿ, ಸಮತೋಲನ ವ್ಯವಸ್ಥೆ ನಷ್ಟವಾಗಿ, ಕೃಷಿ ರಂಗದ ಮೇಲೆ ಅತಿಯಾದ ಅವಲಂಬನೆ ಸೃಷ್ಟಿಯಾಗಿದ್ದು ಇತಿಹಾಸ.
ಕೃಷಿ ರಂಗದ ಮೇಲೆ ಶೇ. 70 ರಷ್ಟು ಜನಸಂಖ್ಯೆ ಅವಲಂಬಿತವಾಗಿರುವುದೇ ಗ್ರಾಮೀಣ ಭಾರತದ ಬಡತನಕ್ಕೆ ಕಾರಣವೆಂದು ಶಾಲಾ , ಕಾಲೇಜುಗಳಲ್ಲಿ ಕಲಿಸಲಾಗುತ್ತದೆ. ಆದರೆ ಸರ್ಕಾರದ ನೀತಿಗಳಿಂದಾಗಿ ಕೃಷಿ ಕ್ಷೇತ್ರದ ಮೇಲಿನ ಅವಲಂಬನೆ ಮತ್ತು ಒತ್ತಡ ಹೆಚ್ಚುತ್ತಲೇ ಇದೆ.
ಎಲ್ಲರಿಗೂ ಭೂಮಿಯ ಒಡೆತನ ಸಿಗಬೇಕೆಂಬ ಅನಾರ್ಥಿಕ, ಮೂರ್ಖವಾದವನ್ನೇ ಬಳಸಿ ತಮ್ಮ ತಮ್ಮ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಪ್ರತಿಯೊಂದು ರಾಜಕೀಯ ಪಕ್ಷವೂ ಪ್ರಯತ್ನಿಸುತ್ತಿದೆ. ಪ್ರತಿ ಪೀಳಿಗೆಯಲ್ಲೂ ಒಡೆಯುತ್ತಿರುವ ಕೃಷಿ ಹಿಡುವಳಿಗಳು ಇಂದು ಚಿಕ್ಕ ಮತ್ತು ಅತಿಚಿಕ್ಕ, ಲಾಭದಾಯಕವಲ್ಲದ ಹಿಡುವಳಿಗಳಾಗಿ ರೂಪುಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗಳನ್ನು ರೂಪಿಸದ, ಅಸಮರ್ಥ ಸರ್ಕಾರಗಳಿಂದಾಗಿ ಸಾಂಪ್ರದಾಯಿಕ ಕೃಷಿ ಕುಟುಂಬಗಳು ಅನಿವಾರ್ಯವಾಗಿ ಲಾಭದಾಯಕವಲ್ಲದಿದ್ದರೂ ಕೃಷಿಗೆ ಅಂಟಿಕೊಂಡಿದೆ.

Image result for images of indian farmers


ಕೃಷಿ ರಂಗದ ಮೇಲೆ ಜನಸಂಖ್ಯೆಯ ಹೆಚ್ಚಿನ ಪ್ರಮಾಣದವರು ಅವಲಂಬಿತರಾದಾಗ ನಿರುದ್ಯೋಗ ಮತ್ತು ಅರೆಕಾಲಿಕ ಉದ್ಯೋಗಾವಕಾಶ ಅರ್ಥಾತ್ ಮುಸುಕಿನ ನಿರುದ್ಯೋಗದ ಸಮಸ್ಯೆ ಕಾಡುತ್ತದೆ. ಇದು ಕೃಷಿರಂಗ ಆಕರ್ಷಕವಾಗದಿರಲೂ ಕಾರಣವಾಗುತ್ತದೆ.
ಕೃಷಿ ರಂಗದ ಮೂಲ ಸಮಸ್ಯೆಯಾದ, ಆರ್ಥಿಕವಾಗಿ ಲಾಭದಾಯಕವಲ್ಲದ ಹಿಡುವಳಿಗಳನ್ನು ಲಾಭದಾಯಕ ಹಿಡುವಳಿಗಳಿಗಾಗಿ ಮಾರ್ಪಾಡಿಸಿದಾಗ ಕೃಷಿರಂಗದ ಎಷ್ಟೋ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಲು ಸಾಧ್ಯ. ಕಾನೂನುಗಳ ಮೂಲಕ ಅಥವಾ ಒತ್ತಾಯದ ಒಗ್ಗೂಡಿಸುವಿಕೆಯ ಮೂಲಕ ಸಣ್ಣ ಹಿಡುವಳಿಗಳನ್ನು ದೊಡ್ಡದು ಮಾಡಲು ಸಾಧ್ಯವಿಲ್ಲ. ಕಳೆದ ಶತಮಾನದಲ್ಲಿ ಕಮ್ಯುನಿಸ್ಟ್ ದೇಶಗಳು ಇಂತಹ ಪ್ರಯತ್ನಕ್ಕೆ ಕೈ ಹಾಕಿ ಸೋತಿರುವ ದೃಷ್ಟಾಂತಗಳು ನಮಗೆ ಪಾಠವಾಗಬೇಕು. ಈ ಸಮಸ್ಯೆಗೆ ಪರಿಹಾರವನ್ನು ಸಹಕಾರಿ ರಂಗದ ಬೇಸಾಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಗಳ ಸ್ಥಾಪನೆಯ ಮೂಲಕ ಉದ್ಯೋಗ ಸೃಷ್ಟಿಸಿ ಪರಿಹರಿಸಲು ಸಾಧ್ಯ.
ಸಹಕಾರಿ ಬೇಸಾಯವನ್ನು ಕೈಗೊಳ್ಳಲು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರನ್ನು ಪ್ರೋತ್ಸಾಹಿಸುವ ಕಾರ್ಯಯೋಜನೆಯನ್ನು ರೂಪಿಸಬೇಕು. ಈಗ ಇರುವ ಕಾನೂನುಗಳ ಭಯದಿಂದಾಗಿ ಭೂಮಿಯನ್ನು ಬೇರೆಯವರಿಗೆ ಬೇಸಾಯ ಮಾಡಲು ನೀಡಿದರೆ ಭೂಮಿಯ ಮಾಲಿಕತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಭೂಮಿ ಪಾಳುಬಿದ್ದರೂ ಪರವಾಗಿಲ್ಲ; ಇನ್ನೊಬ್ಬರಿಗೆ ಬೇಸಾಯಕ್ಕೆ ನೀಡುವುದೇ ಬೇಡವೆಂಬ ಭಾವನೆ ರೈತರಲ್ಲಿ ಬಲವಾಗಿದೆ. ರೈತರು ತಮ್ಮ ಕೃಷಿ ಭೂಮಿಯೊಂದಿಗೆ ಅತಿಯಾದ ಭಾವನಾತ್ಮಕ ನಂಟು ಹೊಂದಿರುವುದು, ‘ಉಳುವವನೇ ಹೊಲದೊಡೆಯ’ ಎಂಬ ಅತಾರ್ಕಿಕ ಕಾನೂನು, ಮತ-ಬ್ಯಾಂಕ್ ರಾಜಕಾರಣಗಳಿಂದಾಗಿ ಸಹಕಾರಿ ಬೇಸಾಯಕ್ಕೆ ರೈತರು ಮುಂದಾಗುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಸಂಬಂಧಿತ ಕಾನೂನುಗಳನ್ನು ತುರ್ತಾಗಿ ಬದಲಿಸಬೇಕಿದೆ. ಸಹಕಾರಿ ಬೇಸಾಯ ಪದ್ಧತಿಗೆ ಒಳಪಡುವ ರೈತರು ಯಾವುದೇ ಕಾರಣಕ್ಕೂ ತಮ್ಮ ಭೂಮಿಯ ಮೇಲಿನ ಮಾಲಿಕತ್ವದ ಹಕ್ಕನ್ನು ಕಳೆದುಕೊಳ್ಳುವಂತಿರಬಾರದು. ಅವರು ನೇರವಾಗಿ ಬೇಸಾಯದಲ್ಲಿ ಪಾಲ್ಗೊಳ್ಳಲಿ ಅಥವಾ ಪರೋಕ್ಷವಾಗಿ ಪಾಲ್ಗೊಳ್ಳಲಿ ಅಂದರೆ ತಮ್ಮ ಭೂಮಿಯನ್ನು ಸಹಕಾರಿ ಬೇಸಾಯಕ್ಕೆ ನೀಡಿ ತಾವು ಬೇರೆ ಉದ್ಯೋಗದಲ್ಲಿ ತೊಡಗಿದ್ದರೂ ಭೂಮಿಯ ಮೇಲಿನ ಅವರ ಹಕ್ಕು ಮೊಟಕುಗೊಳ್ಳಬಾರದು.
ಈ ಒಂದು ಬದಲಾವಣೆಯಿಂದ ಹಲವಾರು ಪ್ರಯೋಜನಗಳಾಗುತ್ತವೆ. ಮೊದಲನೆಯದಾಗಿ ಲಾಭದಾಯಕವಲ್ಲದ ಚಿಕ್ಕ ಹಿಡುವಳಿಗಳು ಸೇರಿ ದೊಡ್ಡ ಹಿಡುವಳಿಗಳಾಗುವುದರಿಂದ ಬೆಳೆ ಸಂಯೋಜನೆ, ಯಂತ್ರೋಪಕರಣಗಳ ಬಳಕೆ, ಉತ್ಪಾದನಾ ವೆಚ್ಚದಲ್ಲಿ ಕಡಿತ ಮುಂತಾದ ಲಾಭಗಳು. ಎರಡನೆಯದಾಗಿ ಕೃಷಿಗಿಂತ ಹೆಚ್ಚಿನ ಲಾಭ ಗಳಿಸುವ ಉದ್ದೇಶಕ್ಕಾಗಿ ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳುವವರಿಗೆ ಇದು ವರದಾಯಕ ವ್ಯವಸ್ಥೆ. ತಮ್ಮ ಭೂಮಿ ಕಳೆದುಕೊಳ್ಳುವ ಭಯವಿಲ್ಲದೇ ನಿಶ್ಚಿಂತೆಯಿಂದ ಇರುತ್ತಾರೆ. ಮೂರನೆಯದಾಗಿ ವೈಜ್ಞಾನಿಕ ಭೂ ಬಳಕೆಯ ನೀತಿಯ ಅನುಷ್ಠಾನ ಸುಲಭ. ಬೇಸಾಯದ ನಿರ್ವಹಣೆ, ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮಥ್ರ್ಯ, ಮಾನವ ಹಾಗೂ ಇತರ ಸಂಪನ್ಮೂಲಗಳ ಸಮರ್ಪಕ ಬಳಕೆ ಮುಂತಾದ ಹಲವು ಲಾಭದಾಯಕ ಪ್ರಯೋಜನಗಳು ಸಹಕಾರಿ ಬೇಸಾಯದಲ್ಲಿ ಲಭ್ಯವಾಗುತ್ತವೆ.
ಈ ದಿಶೆಯಲ್ಲಿ ರೈತರನ್ನು ಪ್ರೋತ್ಸಾಹಿಸಲು ಸರಳ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಸಾಕು. ಕೃಷಿಕರಿಗೆ ಇಂದಿನ ವ್ಯವಸ್ಥೆಯಲ್ಲಿ ನೀಡುತ್ತಿರುವ ಹಲವು ರಿಯಾಯಿತಿ, ಸಬ್ಸಿಡಿಗಳನ್ನು ಸಹಕಾರಿ ವ್ಯವಸ್ಥೆಯಲ್ಲಿ ಬೇಸಾಯ ಮಾಡುವವರಿಗೆ ಮಾತ್ರ ನೀಡುವ ಶರತ್ತನ್ನು ವಿಧಿಸಿದರೆ, ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ಸಹಕಾರಿ ಬೇಸಾಯಕ್ಕೆ ಮುಂದಾಗುತ್ತಾರೆ.
ವೈಯಕ್ತಿಕ ಭೂ ಮಾಲಿಕತ್ವದ ಒಂದು ಪ್ರಮುಖ ದೌರ್ಬಲ್ಯವೆಂದರೆ ಸಮರ್ಪಕ ಭೂ ಬಳಕೆ ನೀತಿಯನ್ನು ಅನುಸರಿಸಲು ಸಾಧ್ಯವಾಗದಿರುವದು. ಪ್ರತಿಯೊಬ್ಬ ರೈತನು ತನ್ನ ಆದಾಯದಲ್ಲಿ ಹೆಚ್ಚಳವಾಗಬೇಕೆಂದು ಬಯಸುತ್ತಾನೆ. ಇದು ಸಹಜ ಕೂಡಾ. ಇದರಿಂದಾಗಿ ಹೆಚ್ಚಿನ ಆದಾಯ ನೀಡುವ ಬೆಳೆಯನ್ನೇ ಎಲ್ಲರೂ ಬೆಳೆಯಬಯಸುತ್ತಾರೆ. ಅದರಿಂದಾಗಿ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿ, ಬೆಲೆ ಕುಸಿತದ ಅಪಾಯ ಸದಾ ಇರುತ್ತದೆ. ಇದರ ಇನ್ನೊಂದು ಮುಖವೆಂದರೆ ಭೂಮಿಯ ದುರ್ಬಳಕೆ. ಉದಾ: ಭತ್ತ ಬೆಳೆಯುವುದಕ್ಕಿಂತ ಅಡಿಕೆ ಬೆಳೆಯುವುದು ಲಾಭದಾಯಕ ಎಂಬ ಕಾರಣಕ್ಕಾಗಿ ಅಡಿಕೆಗೆ ಸೂಕ್ತವಲ್ಲದ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿವೆ ಹಾಗೂ ಹಲವು ರೋಗ, ಕೀಟಬಾಧಿತವಾಗಿವೆ.
ಯಾವ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ಕೃಷಿ ತಜ್ಷರು ಹೇಳಬಲ್ಲರಾದರೂ ಭೂಮಿಯ ಮಾಲಿಕರು ತಮ್ಮ ಇಚ್ಛೆಯನುಸಾರ ಬೆಳೆ ಆಯ್ಕೆ ಮಾಡುತ್ತಿದ್ದಾರೆ. ಸಹಕಾರಿ ತತ್ವದಡಿ ಬೇಸಾಯ ನಡೆದಾಗ ಈ ಸಮಸ್ಯೆಯು ಪರಿಹಾರವಾಗುತ್ತದೆ. ಯಾಕೆಂದರೆ ಸಹಕಾರಿ ಬೇಸಾಯ ಪದ್ಧತಿಯಲ್ಲಿ ಪಾಲ್ಗೊಳ್ಳುವವರಿಗೆ ಎರಡು ರೀತಿಯಿಂದ ಆದಾಯ ಗಳಿಕೆ ಸಾಧ್ಯವಾಗುತ್ತದೆ. ಸಹಕಾರಿ ಬೇಸಾಯ ಪದ್ಧತಿಯಲ್ಲಿ ಪಾಲ್ಗೊಳ್ಳುವ ಭೂ ಮಾಲೀಕರಿಗೆ ಕ್ಷೇತ್ರವಾರು ನಿಗದಿತ ಮೊತ್ತವನ್ನು ನೀಡುವಂತಾಗಬೇಕು. ಆ ಕ್ಷೇತ್ರದಲ್ಲಿ ಯಾವ ಬೆಳೆಯನ್ನು ಬೆಳೆಯಲಾಗುತ್ತದೆ ಎನ್ನುವುದಕ್ಕಿಂತ ಪ್ರತಿ ಎಕರೆಗೆ ಇಂತಿಷ್ಟು ಎಂದು ಮೊತ್ತವನ್ನು ನೀಡಿ ಅದನ್ನು ಬೇಸಾಯದ ಖರ್ಚಿಗೆ ಸೇರಿಸಬೇಕು. ಎರಡನೇಯದಾಗಿ ಕ್ಷೇತ್ರವಾರು ಸಹಕಾರಿ ಶೇರುಗಳನ್ನು ನಿಗದಿಪಡಿಸುವುದು ಅಂದರೆ ಪ್ರತಿ ಎಕರೆಗೆ ಇಂತಿಷ್ಟು ಶೇರುಗಳು ಎಂದು ನಿಗದಿ ಪಡಿಸುವುದು ಹಾಗೂ ನಿವ್ವಳ ಲಾಭದಲ್ಲಿ ಡಿವಿಡೆಂಡ್ ನೀಡುವುದು. ತಮ್ಮ ಭೂಮಿಯನ್ನು ಸಹಕಾರಿ ಬೇಸಾಯಕ್ಕೆ ಒಳಪಡಿಸುವ ಹಿಡುವಳಿದಾರರು ನಿಶ್ಚಿತ ಬಾಡಿಗೆ ರೂಪದಲ್ಲಿ ಹಾಗೂ ಡಿವಿಡೆಂಡ್ ರೂಪದಲ್ಲಿ ಆದಾಯ ಗಳಿಸಲು ಸಾಧ್ಯ.
ಬೇಸಾಯದಲ್ಲಿ ನೇರವಾಗಿ ಪಾಲ್ಗೊಳ್ಳುವ ಭೂ ಮಾಲಿಕರು ಹಾಗೂ ಕೃಷಿ ಕಾರ್ಮಿಕರು ತಮ್ಮ ದುಡಿಮೆಯ ಪ್ರತಿಫಲವನ್ನು ಕೂಲಿ ಅಥವಾ ಸಂಬಳದ ರೂಪದಲ್ಲಿ ಪಡೆಯುವ ವ್ಯವಸ್ಥೆ ಇರಬೇಕು. ಕೃಷಿ ಕಾರ್ಮಿಕರನ್ನು ಕೂಡಾ ಈ ಸಹಕಾರಿಗಳ ಶೇರುದಾರರನ್ನಾಗಿಸಲೇಬೇಕು. ಇದರಿಂದಾಗಿ ಅವರಲ್ಲಿ ದುಡಿಯುವ ಹುಮ್ಮಸ್ಸು ಇರುತ್ತದೆ ಮತ್ತು ಉದ್ಯೋಗಾವಕಾಶದ ಭದ್ರತೆಯೂ ಇರುತ್ತದೆ.
ಮಾರುಕಟ್ಟೆಯ ಬೇಡಿಕೆ ಹಾಗೂ ಕೃಷಿಯ ಉತ್ಪಾದನೆಗೆ ಇಂದು ವ್ಯವಸ್ಥಿತ ಸಂಬಂಧವೇ ಇಲ್ಲ. ತಮಗೆ ತಿಳಿದ ರೀತಿಯಲ್ಲಿ ಮುಂದಿನ ಬೇಡಿಕೆಯನ್ನು ಊಹಿಸಿ, ರೈತರು ಬೆಳೆಯ ಆಯ್ಕೆ ಮಾಡುತ್ತಿರುವುದು ಇಂದಿನ ಸ್ಥಿತಿ. ಮಾಹಿತಿಯ ಲಭ್ಯತೆಯ ಇಂದಿನ ದಿನಗಳಲ್ಲಿ ಬೇಡಿಕೆ ಆಧರಿಸಿ ಬೆಳೆ ಆಯ್ಕೆ ಮಾಡುವ ವಿಧಾನವನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಸಾಧ್ಯ. ತಾಲೂಕಾ ಮಟ್ಟದ ವಿವಿಧ ಇಲಾಖೆÉಗಳ, ಅದರಲ್ಲೂ ವಿಶೇಷವಾಗಿ ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವ ಕ್ಷೇತ್ರ, ಯಾವ ಊರಿನಲ್ಲಿ , ಯಾವ ಬೆಳೆ ಬೆಳೆಯಬೇಕೆಂಬ ಸೂಚನೆಗಳನ್ನು ನೀಡಲು ಸಾಧ್ಯವಿದೆ. ಈ ಶಿಫಾರಸ್ಸುಗಳನ್ನು ಪಾಲಿಸುವವರಿಗೆ ಮಾತ್ರ ಬೆಂಬಲ ಬೆಲೆ ಯೋಜನೆಯ ಸೌಲಭ್ಯ ದೊರಕುವಂತಾಗಬೇಕು.
ಬೆಳೆ ಸಂಯೋಜನಾ ಶಿಫಾರಸ್ಸುಗಳನ್ನು ಸಹಕಾರಿ ಬೇಸಾಯಗಾರರು ಹಾಗೂ ಇತರ ಕೃಷಿಕರು ಪಾಲಿಸುವಂತೆ ಮಾಡುವ ಸುಲಭ ಉಪಾಯವೆಂದರೆ ಬೆಲೆ ಖಾತರಿ ಯೋಜನೆಯ ಲಾಭ ಪಡೆಯಲು ಅವಕಾಶ ನೀಡುವುದಾಗಿದೆ. ಮನಸ್ಸಿಗೆ ಬಂದ ಬೆಳೆಯನ್ನು ತಮಗೆ ಖುಷಿ ಕಂಡಲ್ಲಿ ಬೆಳೆಯುವ ಪ್ರವೃತ್ತಿಗೆ ತಡೆಯೊಡ್ಡದಿದ್ದಲ್ಲಿ ಭೂಮಿಯ ದುರ್ಬಳಕೆ ಆಗುವುದನ್ನು ತಪ್ಪಿಸಲಾಗದು ಹಾಗೂ ಬೆಂಬಲ ಬೆಲೆ ಯೋಜನೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರಲು ಎಂದಿಗೂ ಸಾಧ್ಯವಾಗದು. ಬೆಂಬಲ ಬೆಲೆ ನೀಡುವಿಕೆಯು ರೈತರ ಮೂಗಿಗೆ ತುಪ್ಪ ಸವರುವ ಯೋಜನೆಯಾಗಿಯೇ ಮುಂದುವರಿಯುತ್ತಿರುತ್ತದೆ.
ಕೃಷಿ ರಂಗದ ಸಮಸ್ಯೆಗಳ ಪರಿಹಾರದ ಪ್ರಾರಂಭವಾಗಬೇಕಾದುದು ಭೂಬಳಕೆ ನೀತಿಯ ಅನುಷ್ಠಾನ, ಮಾಲಿಕತ್ವದ ಮೂಲ ಅಂಶಗಳನ್ನು ಸಹಕಾರಿಕರಣಗೊಳಿಸುವ ಮೂಲಕ. ಎಲ್ಲಿಯವರೆಗೆ ವೈಯಕ್ತಿಕ ನೆಲೆಯಲ್ಲಿ ಬೇಸಾಯ ನಡೆಯುತ್ತಿರುತ್ತದೋ ಅಲ್ಲಿಯವರೆಗೆ ಬಂಡವಾಳವಾದಿ ವ್ಯವಸ್ಥೆಯಲ್ಲಿ ರೈತರಿಗೆ ಸೋಲೇ ಗತಿ. ಸಹಕಾರಿ ಆರ್ಥಿಕತೆಯೆಂಬುದು ಬರೀ ಕೃಷಿಗೆ ಮಾತ್ರವಲ್ಲ , ಉದ್ಯಮ ಸೇವೆಗಳಿಗೂ ಅನ್ವಯವಾಗುತ್ತದೆ. ಪ್ರತಿ ತಾಲೂಕಿನಲ್ಲಿಯೂ ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ಯಮಗಳು ಪ್ರಾರಂಭವಾಗುವಂತೆ ಮಾಡುವುದು ಅನಿವಾರ್ಯ.
ಕರ್ನಾಟಕದ ರೈತರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಬೆಲೆ ಆಯೋಗವು ಮಾಡಿರುವ ಶಿಫಾರಸ್ಸುಗಳು ಪರಿಣಾಮಕಾರಿಯಾಗಬೇಕೆಂದರೆ ಕೃಷಿ ಹಿಡುವಳಿ ಹಾಗೂ ಭೂ ಬಳಕೆ ನೀತಿಯಲ್ಲಿ ಸಮಗ್ರ ಬದಲಾವಣೆ ಆಗಲೇಬೇಕು. ಅದಿಲ್ಲವಾದಲ್ಲಿ ರೋಗ ಲಕ್ಷಣಗಳ ಚಿಕಿತ್ಸೆಯಾದೀತೆ ಹೊರತೂ ರೋಗದ ಮೂಲ ಕಾರಣಕ್ಕೆ ಅಲ್ಲ. ಇಂಥಹ ಬದಲಾವಣೆ ತರಲು ಯಾವ ಹೊಸ ಸಂಸ್ಥೆಯೂ ಬೇಕಿಲ್ಲ. ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಬ್ಸಿಡಿ ಹಂಚಿಕೆಯಂತಹ ಕಾರಕೂನಗಿರಿಯಲ್ಲಿ ತೊಡಗಿರುವ ಕೃಷಿ ತಂತ್ರಜ್ಞರು ಹಾಗೂ ಪರಿಣತರ ಸಾಮಥ್ರ್ಯವನ್ನು ಸಮರ್ಪಕವಾಗಿ, ಸಮನ್ವಯತೆಯಿಂದ ಬಳಸುವ ಯೋಚನೆ, ಯೋಜನೆಗಳು ಧುರೀಣರಿಗೆ ಅರ್ಥವಾಗಬೇಕು. ಕೃಷಿಗೆ ಉದ್ದಿಮೆಯ ಸ್ಥಾನಮಾನ ನೀಡುವ ಹೆಜ್ಜೆಗಳ ಅನುಷ್ಠಾನ ಪ್ರಾರಂಭವಾಗಬೇಕು.
ಇದೆಲ್ಲ ಎಲ್ಲಿ ಸಾಧ್ಯವೆಂಬ ಸಿನಿಕರ ಅನಿಸಿಕೆ, ಟೀಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಯಾಕೆಂದರೆ ಇಡೀ ವ್ಯವಸ್ಥೆ ಪರಿವರ್ತನೆಯ ಪಥದಲ್ಲಿದೆ. ಸಹಕಾರಿ ತತ್ವದ ಬೇಸಾಯ ಪದ್ಧತಿಯ ಅನುಷ್ಠಾನ ಈ ಮಹತ್ತರ ಬದಲಾವಣೆಯು, ನವ ಸಹಕಾರ ಅರ್ಥವ್ಯವಸ್ಥೆಯ ಭಾಗ ಮಾತ್ರ. ಮಾನವತೆಯ ಪ್ರಗತಿಗೆ ಪೂರಕವಾದ ಈ ಪರಿವರ್ತನೆ ಅನಿವಾರ್ಯ ಕೂಡಾ.

***************************************************

Leave a Reply

Back To Top