ಅವ್ಯಕ್ತಳ ಅಂಗಳದಿಂದ

ಅವ್ಯಕ್ತ

ಸಿಟ್ಟು ಸಿಟ್ಟು


ಒಬ್ಬ ಮನುಷ್ಯ ಅಂದಮೇಲೆ ಅವನಿಗೆ ಎಲ್ಲಾತರದ ಭಾವನೆಗಳು ಇರುವುದು ಸಹಜ. ಭಾವನೆಗಳ ಸರಮಾಲೆಯಲ್ಲಿ ಅವನು ತನ್ನನ್ನು ತಾನು ವೈಯಕ್ತಿಕವಾಗಿ, ಮಾನಸಿಕವಾಗಿ ಬೆಳೆಸುತ್ತಾನೆ.ಶಾಲೆಗಳಲ್ಲಿ ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ಪ್ರಭಾವಗಳು ಕಡಿಮೆಯೇ. ಸಮಯದ ಅಭಾವವೊ, ಹೊಸ ಹೊಸ ಕಾನೂನುಗಳ ಮಧ್ಯಸ್ತಿಕೆಯೊ, ಅಂಕಪಟ್ಟಿ ಹಾಗೂ ಅಂಕಗಳ ನಡುವಿನ ಹೋರಾಟವೋ, ತಿಳಿಯದು. ಹೀಗೆ ಒಬ್ಬ ಭಾವನಾ ಲೋಕದ ತಿರುವುಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಾನೆ.  ಇವನೊಬ್ಬ ಅತಿ ತೆಳು ಮೈಕಟ್ಟಿನ ಸರಳ ಜೀವಿ. ‘ಮಿಸ್’ ‘ಮಿಸ್’ ಎಂದು ಹೇಳಿಕೊಂಡು ಇರುವುದೇ ಒಂದು ಕಾಯಕ. ಸಿಟ್ಟು ಬಂದರೆ ಮಾತ್ರ ಅವನ ಹುಚ್ಚಾಟ ತಡೆಯಲಾಗದು…. ತನ್ನನ್ನು ತಾನು ನಿಯಂತ್ರಿಸಿಕೊಳ್ಳುವುದರಲ್ಲಿ ಅತಿ ಶೂನ್ಯ. ಸಿಟ್ಟು ಏನಕ್ಕೆ ಬೇಕಾದರೂ ಬರಬಹುದು! ಯಾಕೆ ಬಂತು? ಎಲ್ಲಿಗೆ ಹೋಯ್ತು? ಏನು ಮಾಡಿದ? ಯಾವುದಕ್ಕೂ ಲೆಕ್ಕ ಚುಕ್ತಾ ಇಲ್ಲ.. ಒಂದಿಷ್ಟು ಕಾರಣಗಳ ಕಂತೆಯಷ್ಟೇ.. ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಅವನ ಜೊತೆ ಇನ್ನಷ್ಟು ಮಕ್ಕಳು…ನನ್ನ ವಿಚಾರಧಾರೆಗಳು, ರೀತಿ-ನೀತಿಗಳು, ಇವರಿಗೆ ತಿಳಿದಿರಲಿಲ್ಲ.. ಓದುತ್ತಿದ್ದ ಶಾಲೆಯಲ್ಲಿ ಅವನದೇ ದರ್ಬಾರು.. ಬರಿಯ ಆಟ ಆಟ ಆ…ಟ. ಯಾವುದೊಂದರ ಜವಾಬ್ದಾರಿಯೂ ಇದೆ ಎನಿಸುತ್ತಿರಲಿಲ್ಲ…ಈ ಹುಡುಗನಲ್ಲಿ ಮೊದಲಿನಿಂದಲೂ ಸಭ್ಯವಾದ ಅಸಭ್ಯತೆ…ತಾಳ್ಮೆ-ಸಿಟ್ಟು ಎರಡರ ವಿಚಿತ್ರ ಮಿಶ್ರಣ. ಇವನದೊಂದು ಹೊಸ ತತ್ವ-ಸಿಟ್ಟು ಬಂದರೆ ಹೊಡ್ದು ಬಿಡೋದು.. ಯಾರು? ಏನು? ಎತ್ತ? ಎಷ್ಟು ಪೆಟ್ಟು? ಯಾವುದರ ಲೆಕ್ಕ  ಗೊತ್ತಿಲ್ಲದವ. ವಿಚಿತ್ರ ಏನು ಅಂದ್ರೆ ತಾಯಿಗೆ ಬೇಜಾರ್ ಮಾಡುವುದಿಲ್ಲ. ತಾಯಿಗೆ ಬೇಜಾರಾದರೆ, ಅವಳನ್ನು ಖುಷಿಪಡಿಸಲು ಏನು ಬೇಕಾದ್ರೂ  ಮಾಡುತ್ತಾನೆ. ತಾಯಿ “ಹೊಡಿಬೇಡ!” ಅಂದ್ರೆ ಮಾತ್ರ ಕೇಳಕ್ಕಾಗಲ್ಲ..ಇದು ಇವನ ನಿತ್ಯದ ಕಾರ್ಯ…ಒಂದಿನ ಕ್ಲಾಸಿನೊಳಗೆ ಬಂದ… “ಮಿಸ್, ಇವತ್ತು ಅವನಿಗೆ ಹೊಡೆದು ಬಂದೆ, ಬಹಳ ದಿಮಾಕ್ ತೋರಿಸುತ್ತಿದ್ದ!”  ನಾನು“ಯಾಕೋ? ನಿನಗದೇ ಕೆಲಸನಾ?  ಎಷ್ಟು ಸಂಬಳ ಕೊಡುತ್ತಾರೆ ಎಲ್ಲರಿಗೆ ಹೊಡೆಯೋಕೆ? ಹೊಡೆಯೋದು ಗಂಡಸ್ತನ ಅಲ್ಲಾ ,ನಿಜವಾದ ಗಂಡಸು ಸುಮ್ ಸುಮ್ನೆ ಕೈ ಎತ್ತಲ್ವೋ..” ಸಮಾಧಾನವಾಗಿ ಹೇಳೋದು-ಪ್ರತೀ ಸಲ…ಸುಮ್ಮನೆ ಇವನಿಗೊಂದು ಕಾರಣ ಬೇಕು ಹೊಡೆಯಕ್ಕೆ ಕೈ ಕಾಲು ತುರಿಸ್ತಾ ಇರುತ್ತೇನೋ?..ಇವನ ಹೊಡೆತಕ್ಕೆ ಇವನ ತಾಯಿ ಸ್ಕೂಲಿಗೆ ಹೋಗಿ ತಲೆ ತಗ್ಗಿಸಬೇಕು…ಮನೆಗೆ ಬಂದು ಬೊಬ್ಬೆ. ಹೀಗಾದರೆ ಸಮಸ್ಯೆ ಬಗೆಹರಿಯುತ್ತಾ….ತಾಯಿ- ಗುರುಗಳ ಬಗ್ಗೆ ಗೌರವ ಇರುವವನು, ಮಾತು ಕೇಳದೆ ಇರ್ತಾನಾ? ಅವನ ಹಳೆಯ ಅನುಭವಗಳು, ಹೊಸ  ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನೋಡಲು ಬಿಡುತ್ತಿರಲಿಲ್ಲ…. ಇದು ತಿಳಿದು ಬಂತು ನನಗೆ.ಈಸಾರಿ ಮನಸ್ಸು ಮಾಡಿ ಹೇಳಿಬಿಟ್ಟೆ… “ನೀನು ಹೊಡೆದಾಡಿಕೊಂಡು ಬಂದರೆ ನನ್ನ ಹತ್ತಿರ ಪಾಠ ಕಲಿಯಲು ಬರಲೇಬೇಡ…”ಗುಂಪನ್ನು ಸೇರಿ ಹೊಡೆದಾಡೋದು, ಕೀಟಲೆ ಮಾಡೋದು, ಎಲ್ಲ ಬಿಡಲು ಪ್ರಯತ್ನ ಮಾಡಲು ಪ್ರಾರಂಭಿಸಿದ. “ಯಾವತ್ತಾದರೂ ನಿನ್ನೆದುರಿಗೆ ನಿನಗಿಷ್ಟವಾಗದವರು ಬಂದರೆ ಅವರನ್ನ ಬಿಟ್ಟುಬಿಡು……. ಸಿಟ್ಟು ಬಂದರೆ ಸುಮ್ಮನೆ ಜಾಗ ಖಾಲಿ ಮಾಡು. ನಾಯಿ ಎದುರು ಹೋಗಿ ಸುಮ್ಮನೆ ಅಲ್ಲಾಡಿದರೆ ಸಾಕು, ಅದು  ಬೊಗಳಲು ಶುರು ಮಾಡುತ್ತೆ. ಅದೇ ಹುಲಿ ಎದುರು ಹೋಗಿ ನೀನೇನೇ ಮಾಡಿದರೂ, ಅದಕ್ಕೆ ಹಸಿವಿದ್ದಾಗ ಮಾತ್ರ ನಿನ್ನ ತಿನ್ನುತ್ತೆ! ಇಲ್ಲ, ಅದರ ಪಾಡಿಗೆ ಅದು ಇರುತ್ತೆ…ಅರ್ಥ ಮಾಡ್ಕೊಳೋ….” ಅಂದೆ.. ಹುಟ್ಟಿದಾಗಿನಿಂದ ಬಂದ ಸಿಟ್ಟನ್ನು ಸುಲಭವಾಗಿ ತೆಗೆಯಲಾಗದು.. ಅವನಿಗೆ ಸಿಟ್ಟು ಬಂದಾಗಲೆಲ್ಲಾ, ಬೆವರು ಇಳಿಯುವ ಹಾಗೆ ಎಕ್ಸಸೈಜ್ ಮಾಡಿಸ್ತಿದ್ದೆ.“ಸಾರಿ ಮಿಸ್, ನಾ ಇನ್ಮೇಲೆ ಸಿಟ್ಟು ಮಾಡಿಕೊಳ್ಳಲ್ಲ” ಅಂತ ಹೇಳಿ ಎರಡು ದಿನಕ್ಕೆ ಮತ್ತೊಬ್ಬರಿಗೆ ಹೊಡೆದು ಬಂದಿದ್ದ…ಇವನ ಸಿಟ್ಟನ್ನು   ಹೇಗಾದರೂ ಸರಿ ಮಾಡಬೇಕು, ಇವನ ಸಿಟ್ಟನ್ನು ನಿಯಂತ್ರಿಸೋದು ಅಥವಾ ಸರಿ ಹಾದಿಯಲ್ಲಿ ಹೊರ ಹಾಕುವುದು ಅತ್ಯಗತ್ಯ. ಕಲಿಸಲೇಬೇಕು ಅಂತ ನಾನು ಪಣತೊಟ್ಟು….. ದಿನವೂ ಒಂದು ಹತ್ತು ನಿಮಿಷನಾದ್ರೂ ಅವನನ್ನು ಉರ್ಸೋದು, ಸಿಟ್ಟು ಬರೋಹಾಗೆ ಮಾಡೋದು, ಆಮೇಲೆ, “ಊಟ ಮಾಡು, ನೀರು ಕುಡಿ, ಹೊಡಿತೀಯಾ ಹೊಡಿ ಬಾ” ಅಂತ ರೇಗ್ಸೋದು… ಸಿಟ್ಟಾಗುವುದಕ್ಕೆ , ಆಗದೆ ಇರುವುದಕ್ಕೆ, ಇರುವ ಹಲವು ಕಾರಣಗಳನ್ನು ತಿಳಿಸಿ, ಅದನ್ನು ನಿಯಂತ್ರಿಸುವ ಬಗ್ಗೆ ಎಲ್ಲ ವಿಷಯ ಪ್ರಾಕ್ಟಿಕಲ್ ಆಗಿ ಮಾಡಿಸಿಲಿಕ್ಕೆ ಶುರುಮಾಡಿದೆ…. ಅವನ ಸಿಟ್ಟಿನಿಂದ ಆಗುವ ತೊಂದರೆಗಳನ್ನು ಅವನೇ ಅನುಭವಿಸುವ ಹಾಗೆ ಮಾಡಿದೆ.. ಅವನ ತಾಯಿ ನನ್ನ ಮಾತಿಗೆ ಬೆಲೆ ಕೊಟ್ಟು, ನಾನು ಹೇಳೋ ಹಾಗೆ ಮಾಡುತ್ತಿದ್ದರು…ದಿನ ಕಳೆದಂತೆ ಅವನ ಸಿಟ್ಟು ಸ್ವಲ್ಪ ಸ್ವಲ್ಪ ಹತೋಟಿಗೆ ಬರತೊಡಗಿತ್ತು…ಹತ್ತನೇ ಕ್ಲಾಸಿನ ಪರೀಕ್ಷೆಗೆ ಒಂದು ವಾರ ಇದೆ ಎನ್ನುವಾಗ,  ಮತ್ತೊಬ್ಬ ಹುಡುಗನಿಗೆ ಹೊಡೆದು ಬಂದ…. ನಾನು ‘ಯಾಕೆ? ಏನು?’ ಎಂದು ಕೇಳಲಿಲ್ಲ. “ಪೆಟ್ಟು ತಿಂದವನಿಗೆ ಆದ ಗಾಯ ಮಾಸುವರೆಗೂ ನಿನ್ನಲ್ಲಿ ಸಲಿಗೆಯಿಂದ ಇರುವುದಿಲ್ಲ” ಎಂದು ಹೇಳಿಬಿಟ್ಟೆ..


ತಾಯಿಯ ಅನುರಾಗದ ಮಾತು, ನನ್ನ ತಿಳುವಳಿಕೆಯ ಚಾಟಿ ಮಾತುಗಳು, ಆಪ್ತ ಸ್ನೇಹಿತರ ಬುದ್ಧಿವಾದ, ಎಲ್ಲಾ ಸೇರಿ ಮೋಡಿಯಂತು ಮಾಡಿತು.. ಇದಾದ ನಂತರ ಬಹಳ ಬದಲಾವಣೆ ಕಾಣತೊಡಗಿತ್ತು…ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟು ಮಾಡೋದು, ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುವುದು, ಎಲ್ಲಾ ಕಡಿಮೆಯಾಯಿತು…ಆದರೆ ಈ ಪಯಣದಲ್ಲಿ ಅವನು ಕಲಿತದ್ದು ಬಹಳ.. “ಜರ್ನಿ ಫ್ರಮ್ ಮ್ಯಾನ್ ಟು ಜಂಟಲ್ಮ್ಯಾನ್”  ಅಂದರೂ ತಪ್ಪೇನಿಲ್ಲ…. ಜೊತೆಜೊತೆಗೆ ಓದುವುದರಲ್ಲೂ ಗಮನ ಹೆಚ್ಚಿತು ಜವಾಬ್ದಾರಿ ಹೆಚ್ಚಿತು, ತರಗತಿಯಲ್ಲಿ ಒಳ್ಳೆ ಅಂಕಗಳನ್ನು ತೆಗೆದ.ಪ್ರತಿ ಸಾರಿ ಅವನನ್ನು ಒಂದೇ ಮಾತಲ್ಲಿ ರೇಗಿಸೋದು …”ಸಿಟ್ಟು ಕಾಲಲ್ಲಿ ಇದೆಯೋ ತಲೆಯಲ್ಲಿ ಇದೆಯೋ ಹೇಳು, ನಾನು ಸರಿ ಮಾಡ್ತೀನಿ. ಮರದ್ ಬನ್ರೇ ಮರದ್…!ಜನ್ ತೊ ಬಹುತ್ ಮಿಲೇಂಗೆ! ಸಜ್ಜನ್ ಬನ್ ಮೇರೆ ಬಚ್ಚೆ! “ಹೇಗೆ ಕಾಲಚಕ್ರ ಉರುಳಿತೊ ಗೊತ್ತಾಗದು.. ಈಗಲೂ ಅದೇ ಹುಡುಗ ನನ್ನೊಂದಿಗೆ ತಿಳಿಸಾರು ತಿನ್ನಲು ಆಶಿಸುತ್ತಾ ಬರುತ್ತಾನೆ.ನಾನು ಮಾಡುವ ಕೆಲಸಗಳಿಗೆ ಕರೆದಾಗಲೆಲ್ಲಾ ಬಲಗೈ ಬಂಟನಾಗಿ ನಿಲ್ಲುತ್ತಾನೆ.ಆದರೆ ತಾಳ್ಮೆ ಇದೆ ಈಗ. ಬೇರೆ ಬೇರೆಯವರೊಂದಿಗೆ ಹೇಗೆ ಸಂಭಾಷಣೆ ಮಾಡೋದು ಎನ್ನುವುದು ಗೊತ್ತಿದೆ.. ಸ್ವಲ್ಪ ಸ್ನೇಹಿತರ ಪ್ರಭಾವವಿದ್ದರೂ ತನ್ನನ್ನು ತಾನಾಗಿಯೇ ಉಳಿಸಿಕೊಂಡಿದ್ದಾನೆ.. ಅದೇ ಸಂತೋಷ ತರುವುದು.

ಸಿಟ್ಟು ಸಹಜ. ಅಭ್ಯಾಸದಿಂದ ನಿಯಂತ್ರಿಸು.ಇಲ್ಲ ಸರಿದಿಕ್ಕಿನಲ್ಲಿ ಹಾರಿಬಿಡು. ಆಗ ಮಾತ್ರ ಗೆಲುವು ನಿನ್ನದು.

=========


ReplyForward

2 thoughts on “ಅವ್ಯಕ್ತಳ ಅಂಗಳದಿಂದ

Leave a Reply

Back To Top