ಎದೆಯ ತಿದಿ

ಕಾವ್ಯಯಾನ

ಎದೆಯ ತಿದಿ

ಬೆಂಶ್ರೀ ರವೀಂದ್ರ

Women of Abstract Expressionism | Denver Art Museum

ಹುಡುಗಿ ಒಪ್ಪಿಸಿದೊಡನೆ ಪುಗ ಒಡೆದಂತಾಯ್ತು
ಗಾಳಿ ಗಾಳಿಯನು‌ ಸೇರಿತು.

ಉಸಿರು ಬಿಗಿಹಿಡಿದು ಎದೆಯಲಿ
ತುಂಬಿಸಿಟ್ಟ ಗಾಳಿ ಪುಸ್ಸೆಂದು ಹೊರಬಂದು ನಿರಾಳವಾಯ್ತು
ಎದೆ ಹಗುರಾಗಿ ನಿಸೂರಾಯ್ತು
ಖಾಲಿ..ಖಾಲಿತನ ಬದುಕು ಇನ್ನುಮುಂದೆ ಹೀಗೇ ಇರುತ್ತದೆಯೇ.

ಬಾಗಿನ ಸ್ವೀಕರಿಸಿದ ಕರೆಯ ಕಟ್ಟೆಯೊಡೆದು
ಪ್ರವಾಹ ಬಂದಂತಾಯ್ತು
ನೀರು ಮಣ್ಣನು ಸೇರಿತು
ಮಣ್ಣು ಎಷ್ಟೊ ಶತಮಾನದ ಕಣ್ಣು
ಒಡಲ ತುಂಬಾ ಒಡೆಯಲು ಸಿದ್ದವಾದ ಬೀಜಗಳು ; ಕೆಲವು ಬರಡು
ಇನ್ನೇನು ಮತ್ತೆ ಮಣ್ಣಾಗಿ ಎಂದೋ‌ ಹರಳುಗಟ್ಟುತ್ತವೆ
ಈಗಂತೂ ಅದು ಇಲ್ಲ ಇದೂ ಇಲ್ಲ

ಮೊನ್ನೆ ಮದುವೆ ಮನೆಗೆ ಬಂದಾಗ
ಸಿಂಗಾರವಾಗಿತ್ತು ಅರಮನೆಯಂತೆ
ಝಗ.. ಝಗ… ಬೆಳಕು
ಮಗಮಗಿಸುವ ಮಾಗಿದ ಹುಡುಗಿಯರ ರವರವ
ಅವಳು ಅಲ್ಲೆಲೋ ಕನಸುಗಣ್ಣೊಳಗೆ ಒಂದಿಷ್ಟು ಕಣ್ಣೀರು ತುಂಬಿ
ಈಲೋಕ ಅಲ್ಲ, ಆಲೋಕ ಅಲ್ಲ ಅಲೋಕದಲ್ಲೇನೋ ಹುಡುಕು.

ಕೈಮೇಲೆ ಕಕ್ಕ
ನಗೆಯ ಮುಗಳಲ್ಲಿ ಚೆಲ್ಲಿದ ಬಂಗಾರ
ಚಿಂಗಾರಿ ಸಿಂಗಾರಿಯಾಗಿ
ಸುಂದರಿ ಬಂಗಾರಿಯಾಗಿದ್ದಾಳೆ
ಅಕ್ಕಸಾಲಿಗನದಿಷ್ಟೆ ಕೆಲಸ
ಕಾಸಿ ಪುಟವಿಡಿಸಿ ಕುಸುರಿಯಾಡಿಸಿ
ಕಾಣದೂರಿಂದ‌ ಬಂದ ಯಜಮಾನನಿಗೆ‌ ಒಪ್ಪಿಸಿ ಬಿಡುವುದಷ್ಟೆ
ಬಂಗಾರಕವ ಯಜಮಾನನಲ್ಲ

ಯುಗಗಳೆಷ್ಟೊ ಸರಿದಿದೆ
ಅನಂಗರಂಗವು‌ ನಿತ್ಯ ನಿರಂತರ
ಶಿವಕಣ್ಣುರಿಗೆ ಭಸ್ಮವಾದರೂ ರತಿ ಇದ್ದಾಳೆ ಬದುಕಿಸಲು.

ಹುಡುಗಿ ಬಸ್ಸು ಹತ್ತಿದಳು
ಅವ, ಯಾರೋ ಕೈಕೈ ಸಿಕ್ಕಿಸಿಕೊಂಡಿದ್ದಾನೆ
ಅವಳ ಮುಖದಲಿ ನಗೆಯಿದೆ
ಕಣ್ಣಲಿ ತೆಳುನೀರ ಪರದೆ ಇರಬಹುದೊ
ಇವನು ನಿಂತಿದ್ದಾನೆ ಮದುವೆಯಂಗಳದ
ದೊಡ್ಡದೀಪದ ಕೆಳಗೆ
ಎಲ್ಲಾ ದೀಪಗಳು ಆರಿದೆ
ಕೆಲಸದವರು ಕಸ ಗುಡಿಸುತ್ತಿದ್ದಾರೆ
ನಾಳೆಯ ದಿಬ್ಬಣ ಒಳಗೆ ಬರುತ್ತಿದೆ.


Leave a Reply

Back To Top