ಪುಸ್ತಕ ಸಂಗಾತಿ
ಗಾಂಧಿ ನೇಯ್ದಿಟ್ಟ ಬಟ್ಟೆ
ಕೃತಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಲೇ: ರಾಯಸಾಬ ಎನ್ ದರ್ಗಾದವರ
ಪೋ:7259791419
ಪ್ರಕಾಶಕರು: ಅನಾಯ ಪ್ರಕಾಶನ, ಕಟ್ನೂರು, ಹುಬ್ಬಳ್ಳಿ(ತಾ).
ಪುಟಗಳು: ೮೦
ಬೆಲೆ: ೯0/-
_________________________
“ಗಾಂಧಿ ನೇಯ್ದಿಟ್ಟ ಬಟ್ಟೆಯ ಬಿಡಿಸಿದಾಗ….”
ರಾಯಸಾಬ ಎನ್. ದರ್ಗಾದವರ ಚೊಚ್ಚಲ ಕೃತಿಯಾದ, *”ಗಾಂಧಿ ನೇಯ್ದಿಟ್ಟ ಬಟ್ಟೆ”* ಎಂಬ ವಿಶೇಷ ಶೀರ್ಷಿಕೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ, ಆಕರ್ಷಕ ಮುಖಪುಟದೊಂದಿಗೆ ಬಿಡುಗಡೆಯ ಮೊದಲೇ ಸದ್ದು ಮಾಡುತ್ತಿರುವುದು ಕುತೂಹಲವನ್ನು ಹುಟ್ಟುಹಾಕಿದೆ.
“ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ
ಹೂತ ಶವಗಳ ದಿಬ್ಬದಂತಿದ್ದವು“
…ಎಂದು ಪ್ರಾರಂಭವಾಗುವ ‘ಬಿಟ್ಟು ಹೋದವರ ಚರಮಗೀತೆ’ ಎಂಬ ಕವಿತೆಯಿಂದ ಆರಂಭವಾಗುವ ಸಾಲುಗಳು, ತುಳಿತಕ್ಕೊಳಪಟ್ಟವರ ಪರವಾಗಿ, ಶೋಷಿಸುವವರ ವಿರುದ್ಧವಾಗಿ ತಣ್ಣನೆಯ ಬಂಡಾಯದ ಬೂದಿ ಮುಚ್ಚಿದ ಕೆಂಡದಂತಿರುವ, ತಾಕಿದರೆ ಸುಡುವ ಸತ್ಯಗಳನ್ನು ಸಾರುವ, ಬೀಸುವ ಗಾಳಿಗೆ ಎದೆಯೊಡ್ಡಿ ಉರಿವ ಕಂದಿಲಿನಂತೆ ಭಾಸವಾಗುತ್ತದೆ.
ಅನನ್ಯ ನುಡಿಗಟ್ಟುಗಳೊಂದಿಗೆ, ವಿಭಿನ್ನ ಶೀರ್ಷಿಕೆಗಳೊಂದಿಗೆ, ಅಂತರಂಗದ ಆಲಯಕ್ಕೆ ಸುಲಭವಾಗಿ ಬಿಟ್ಟುಕೊಳ್ಳುವ ರಾಯಸಾಬರ ಕವಿತೆಗಳು, ಅಷ್ಟು ಸುಲಭಕ್ಕೆ ಹೊರಹೋಗಲು ಬಿಡದೆ ಕಾಯ್ದುಕೊಳ್ಳುತ್ತವೆ, ಕಾಡುತ್ತವೆ, ಮತ್ತು ಚಿಂತನೆಗೆ ಹಚ್ಚುತ್ತವೆ. ಓದುಗನ ಮನದಲ್ಲಿ ಚಿಂತನೆಯನ್ನು ಬಿತ್ತುವ ಇಂತಹ ಕವಿತೆಗಳಿಂದಲೇ ಪ್ರಸ್ತುತ ಸಂಕಲನ ವೈಶಿಷ್ಟ್ಯತೆಯನ್ನು ಪಡೆದುಕೊಳ್ಳುತ್ತದೆ.
“ದುಡಿದು ದಣಿದ ದೇಹವೀಗ
ಬಿಸಿಲು ಬೆನ್ನ ಮೇಲೆ ಹೊತ್ತು
ಊರಾಚೆ ಗುಡ್ಡದಲ್ಲಿ ಮುಳುಗಿಸಿ“
(ದುಡಿಮೆ ದಣಿವು ಸಾರಾಯಿ)
ಹಾಗೂ “ಕಾಲು ಮುರಿದು ಬಿದ್ದ ನೆರಳು” ಇಂತಹ ರೂಪಕ, ಪ್ರತಿಮೆಗಳನ್ನು ಕಾವ್ಯದಲ್ಲಿ ಸಮರ್ಪಕವಾಗಿ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ.
“ಕವಿತೆಯು ಎಂದೆಂದಿಗೂ ಸಾಯುವುದಿಲ್ಲ
ಬದಲಾಗಿ ಬಸಿರಾಗುತ್ತವೆ“
(ಕವಿತೆಯ ಬಸಿರು)
ಕವಿತೆಗಳು ಹುಟ್ಟುವ ಪರಿಯನ್ನು ತನ್ನದೇ ರೀತಿಯಲ್ಲಿ ದಾಖಲಿಸುವ, ರಾಯಸಾಬರವರ ರಚನೆಗಳನ್ನು ಓದುವಾಗ, ಸರಳ ಭಾಷೆ ಬಳಸಿ, ಮಾರ್ಮಿಕವಾಗಿ ಕವಿತೆ ಬರೆದರೆ… ಹೀಗೆ ಬರೆಯಬೇಕು ಅನಿಸಿವುದಂತು ಸತ್ಯ.
“ಕನ್ನಡಿಯಲ್ಲಿ ನನ್ನದಲ್ಲದ ಬಿಂಬ
ಕೇಕೆ ಹಾಕಿ
ಕಣ್ಣೀರು ಬರುವಂತೆ ನಗುತಿದೆ
ಆದೆಷ್ಟು ಸಲ ಕನ್ನಡಿಯನ್ನು ಯಾಮಾರಿಸಿದ್ದೇನೆ…”
(ಮುಖವಾಡವಿಲ್ಲದ ಆ ದಿನ)
ಇಂದಿನ ಜಗತ್ತಿನಲ್ಲಿ ಮುಖವಾಡವಿಲ್ಲದೆ, ಸತ್ಯಸಂಧನಾಗಿ, ನಿಸ್ವಾರ್ಥಿಯಾಗಿ ಬದುಕುವುದು ಎಷ್ಟು ಕಷ್ಟ ಎಂಬುದನ್ನು ವಾಸ್ತವಿಕ ನೆಲೆಯಲ್ಲಿ ಚರ್ಚಿಸುವ, ಅದರ ಕಾರಣ ಪರಿಣಾಮಗಳನ್ನು ವಿಶ್ಲೇಷಿಸುವ, ಬದುಕಿನ ತಲ್ಲಣಗಳಿಗೆ ತುಡಿಯುವ, ಮುಖಾಮುಖಿಯಾಗುವ – ‘ಮಾನವೀಯತೆ ಮಾರಾಟ’, ‘ಆತ್ಮ ನಿವೇದನೆ’, ‘ಬೆಳಕು ಕೊಲೆಯಾದ ರಾತ್ರಿ’, ‘ಒಂದು ಕವಿತೆಯ ಬದಲಾಗಿ’ ಈ ತೆರನಾದ ಸಾಂದರ್ಭಿಕ ಕವಿತೆಗಳು ಅರ್ಥಪೂರ್ಣ ರಚನೆಗಳಾಗಿ ರಾಯಸಾಬರ ಲೇಖನಿಯಿಂದ ಅನಾಯಾಸವಾಗಿ ಹೊರಹೊಮ್ಮಿವೆ.
“ಶ್…!
ಮತ್ಯಾರೋ ಬಾಗಿಲನ್ನು ಬಡಿಯುತ್ತಿದ್ದಾರೆ
ಬರಿದಾಗ ಭಾವನೆಗಳನ್ನು ತುಂಬಬೇಕು
ಹೊಸಬಳಂತೆ ನಟಿಸುವುದನ್ನು ಅಭ್ಯಾಸಿಸಬೇಕು
ಅತ್ತು ಅತ್ತು ಉಪ್ಪುಗೊಂಡ ಮುಖವನ್ನೊಮ್ಮೆ
ತೊಳೆದು ಮೇಕಪ್ಪು ಮೆತ್ತಬೇಕು
ನಾನಿನ್ನು ಮತ್ತೆ ತುಂಬ ಬಿಜಿ…”
(ದೀಪವಿಲ್ಲದ ಕೋಣೆಯೊಳಗೆ)
ಕೇವಲ ಒಬ್ಬ ಹೆಣ್ಣಿಗೆ ಮಾತ್ರ ಬರೆಯಲು ಸಾಧ್ಯವಾಗುವ, ಹೆಣ್ಣಿನ ಮಾನಸಿಕ ತೊಳಲಾಟದ ವಸ್ತುವಿರುವ ಈ ಮೇಲಿನ ಕವಿತೆ, ಕವಿಯ ಸ್ತ್ರಿ ಸಂವೇದನೆಯ ಪರವಾಗಿ, ಅಂತಃಕರಣ ಮತ್ತು ಕಾಳಜಿಗೆ ಸಾಕ್ಷಿಯಾಗಿ…. ‘ಕ್ಯಾಲೆಂಡರಿನ ಕೆಂಪು ಗೆರೆಗಳು’, ‘ಬೀದಿಗೆ ಬಿದ್ದವಳು’ ಇದೆ ಸಂವೇದನೆಯ ಕವಿತೆಗಳ ಸಾಲಿನಲ್ಲಿ ನಿಲ್ಲುತ್ತವೆ.
ಪ್ರೇಮ ಎಂಬ ಎರಡೂವರೆ ಅಕ್ಷರದ ಮೋಡಿಗೆ ಈಡಾಗದ ಕವಿಗಳೇ ವಿರಳ. ಪ್ರಾಯಶಃ ಇಲ್ಲದಿರಲೂಬಹುದು. ಅಂತಹ ಪ್ರೇಮದ ಪರಿಭಾಷೆಯ,ಉತ್ಕಟ ಮನೋಭಾವದ, ಹೃದಯ ವೇದನೆಯ, ನಿದರ್ಶಕ ಕವಿತೆಗಳಾದ ಹಕೀಕತ್ತು, ನಮ್ಮಿಬ್ಬರ ಇತಿಹಾಸ, ಗೋಡೆಗಂಟಿದ ಮಾತುಗಳು, ಆ ಸಂಜೆ, ಮಾನವೀಯತೆ ಮಾತನಾಡಲಿ, ಕಾಲತೀತ, ಸುಳ್ಳು ಸಾಕ್ಷಿ, ರೀಚಾರ್ಜ್ ಖಾಲಿಯಾದ ದಿನ, ರೆಕ್ಕೆಗಳು ಕವಿತೆಗಳ ಮೂಲ ದ್ರವ್ಯವಾದ ಪ್ರೇಮ ಒಂದೆಯಾಗಿದ್ದರೂ, ಸಂಗತಿಗಳು, ಭಾವಗಳು ವಿಧವಿಧವಾಗಿ, ಪಕ್ವ ಪ್ರೇಮದ ಕುರುಹುಗಳಾಗಿ ಸಂಕಲನದ ಉದ್ದಕ್ಕೂ ಕರಚಾಚುತ್ತವೆ.
“ಕವಿಯ ಮಾತು ಕೇಳಿ ಕವಿತೆ ಕೆಟ್ಟಿತು
ಕವಿತೆ ಬಡೆದುಕೊಂಡ ಡಂಗೂರಕ್ಕೆ
ಕವಿಪಾದ ಸೆರೆವಾಸ ಇಣುಕಿತು
ಇದೆಲ್ಲವನ್ನು ಬರೆದ ಪೆನ್ನು ಮಾತ್ರ
ನಿನ್ನೆ ಬರೆದು ಮುಚ್ಚಿದ ಕವಿತೆಯ
ಒಡಲು ಹೊಕ್ಕು ಜೊಂಪು ಹತ್ತಿತು…”
(ಕವಿತೆಗೇನು ಕೆಲಸ)
ಸಮಾಜದ ಒರೆಕೋರೆಗಳನ್ನು ತಿದ್ದಲು ಹೋರಾಟ ಕವಿಯ ಇಂದಿನ ದಾರುಣ ಪರಿಸ್ಥಿತಿಯನ್ನು ಕವಿತೆ ಸೂಕ್ಷ್ಮವಾಗಿ ಸಾರಿದೆ.
ಸಂಕಲನಕ್ಕೆ ಶೀರ್ಷಿಕೆಯಾದ ‘ಗಾಂಧಿ ನೇಯ್ದಿಟ್ಟ ಬಟ್ಟೆ‘ ಎಂಬ ಕವಿತೆ…
“ಬಣ್ಣಗಳೀಗ ಜಾತಿಗಳಾಗಿ ಮಾರ್ಪಟ್ಟಿವೆ
ಹೊತ್ತು ಮುಳುಗುವ ಹೊತ್ತಿನಲಿ
ನೆತ್ತಿ ಮೇಲೆ ಇಟ್ಟ ಕತ್ತಿಗೂ
ಒಂದು ಜಾತಿಯ ನಂಟಿದೆ…”
….ಎನ್ನುತ್ತ, ಗಾಂಧಿ ನೇಯ್ದಿಟ್ಟ ಬಟ್ಟೆಗೂ ಜಾತಿಯ ಬಣ್ಣ ಮೆತ್ತಿದೆ. ಇಂದಿನ ಧರ್ಮಗಳ ಕಲುಷಿತ ವಾತಾವರಣದ ಕುರಿತಾದ ವಿಡಂಬನೆ ಇಲ್ಲಿ ಕಂಡುಬಂದರೆ, ‘ಈ ದೇಶಕ್ಕೆ ಏನಿದ್ದರೇನು? – ನೀನೆ ಇಲ್ಲವಲ್ಲ ಗಾಂಧಿ!’ ಎಂದು, ಬಾಪುವಿನ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಪಟವನ್ನು ಮೊಳೆಗೆ ತೂಗು ಹಾಕಿ, ಸತ್ಯ-ನ್ಯಾಯ-ನೀತಿಗಳ ಕೊಲೆಗೈದು, ಅಂಧಕಾರ ಕವಿದ ವ್ಯಥೆಯ ಚಿತ್ರಣವನ್ನು ಕಾಣಬಹುದು.
‘ಅವನನ್ನು ಕ್ಷಮಿಸಿ’ ಎಂಬ ಕವಿತೆ ಮುಸ್ಲಿಮೇತರರನ್ನು ಸ್ವರ್ಗ ನರಕಗಳ ಖುರಾನಿನ ವಿವರಣೆಗಳೊಂದಿಗೆ ಸಂವಾದಿಸುತ್ತ, ಸಮರ್ಥಿಸಿಕೊಳ್ಳುತ್ತ, ಡೋಂಗಿ ಮುಸಲ್ಮಾನರ ವಿಡಂಬಿಸುತ್ತ
….
“ನಿಮಗಿಂತ ಮೊದಲೇನಾದರೂ ಸತ್ತರೆ
ನನ್ನನ್ನು ಖಬರಸ್ಥಾನಕ್ಕೆ ಹೊತ್ತೊಯ್ಯಬೇಡಿ
ಮಣ್ಣಲ್ಲಿ ಆಡಲು ಬಿಡದ ನನ್ನಮ್ಮ
ಮೈಮೇಲೆ ಮಣ್ಣು ಹಾಕಲು ಒಪ್ಪಲಾರಳು
ಮಣ್ಣಲ್ಲಿ ಕೊಳೆತು ಹೋಗುವ ಭಯವೋ ನನ್ನಲ್ಲಿಯೂ ಇದೆ
ಅಮ್ಮನ ಹೆರಿಗೆಯಾದ ಆಸ್ಪತ್ರೆಗೆ ನನ್ನನ್ನು ಕಳುಹಿಸಿ
ಬಣ್ಣ ಗುರುತಿಸದವನ ಕಣ್ಣಾಗಿ ಇರುತ್ತೇನೆ
ಕಲಿಯಲು ಬಂದವರಿಗೆ ನಿತ್ಯ ಪಾಠವಾಗುತ್ತೇನೆ“
….ಎಂದು, “ದೇಹ ದಾನ”ದ ಮಹತ್ತರ ಸಂದೇಶ ನೀಡುವ ಕವಿತೆ ಮಹತ್ವ ಪಡೆದುಕೊಳ್ಳುತ್ತದೆ.
ಬಹುಶಃ ಬುದ್ಧನನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಅಂತೆಯೇ, ಬುದ್ಧನ ಬಗೆಗೆ ಕವಿತೆ ಬರೆಯದ ಕವಿಯೂ ಇರಲಾರರೇನೊ! ಅದಕ್ಕೆ ರಾಯಸಾಬರು ಹೊರತಾಗಿಲ್ಲ.
“ರಾಮಕೃಷ್ಣ ಪರಮಹಂಸರು” ಹೇಳುವಂತೆ: ದರ್ಶನಾದಿ ಶಾಸ್ತ್ರಗಳಿಗಿಂತ ಸಂಗೀತ ಮಹತ್ತರವಾದುದು, ಸಂಗೀತಕ್ಕಿಂತ ಮೋಹಕವಾದುದು ಯುವತಿಯ ಮುಖದರ್ಶನ. ಆದರೆ ಹಸಿವು ಕಾಡಿದಾಗ ಮನುಷ್ಯನಿಗೆ ಶಾಸ್ತ್ರ, ಸಂಗೀತವಾಗಲಿ, ಸೌಂದರ್ಯವಾಗಲಿ ಮುಖ್ಯ ಎನಿಸದು.
ಹೀಗೆ, ಬುದ್ಧನನ್ನು ನೆಪವಾಗಿಸಿ ಹಸಿವನ್ನು ಸಾಕ್ಷಾತ್ಕರಿಸುವ ಕವಿತೆ ಮಾನವೀಯ ನಿಲುವನ್ನು ಹೊಂದಿದೆ.
‘ಜೇಡರ ಬಲೆಯ ದಿಗ್ಬಂಧನ’ ದಂತಹ ಕವಿತೆ, ಹೆಣ್ಣಿನ ಮೇಲಿನ ಅತ್ಯಾಚಾರದ ಕರಾಳ ಛಾಯೆಗೆ ಹಿಡಿದ ಕನ್ನಡಿಯಾಗಿ ಬಿಂಬಿತವಾಗಿದೆ.
“ಹಾರುತ್ತೇವೆಂದು ರೆಕ್ಕೆ ಕತ್ತರಿಸಬೇಡಿ,
ನಾವು ಈಗೀಗ ಮೈ ಮುರಿದು
ಈಜುವುದನ್ನೂ ಕಲಿತಿದ್ದೇವೆ.”
ಒಟ್ಟಾರೆಯಾಗಿ, ರಾಯಸಾಬ ದರ್ಗಾದವರ ಕವಿತೆಗಳಲ್ಲಿ “ಖಲೀಲ್ ಗಿಬ್ರಾನ್” ನ ಕಾವ್ಯಸತ್ವ ಮತ್ತು “ಸಾದತ್ ಹಸನ್ ಮಾಂಟೋ” ವಿನ ಕತ್ತಿಯ ಅಲುಗಿನ ಪ್ರಖರತೆ ಪ್ರಕಾಶಿಸುತ್ತದೆ ಎಂದರೆ, ಅತಿಶಯೋಕ್ತಿ ಆಗಲಾರದು.
ಉಪಸಂಹಾರ:
“ಸಂಜೆಗತ್ತಲಿನಲ್ಲಿ ಹುಟ್ಟಿಕೊಂಡ ಕವಿತೆಯು
ಅದೇ ಬಣ್ಣದಿಂದ ಬರೆದುಕೊಳ್ಳುತ್ತಿತ್ತು
ಓದುವವ ಮಾತ್ರ ಅಸಹಾಯಕ
ಆಗತಾನೆ ಮೂಡುತ್ತಿದ್ದ ನಕ್ಷತ್ರಗಳ ಮಿನುಗು
ಸಂಜೆ ಕವಿತೆಯಲ್ಲೂ ಭರವಸೆ ಹುಟ್ಟಿಸಿರಬೇಕು.”
ಹೌದು! ನಿಜಕ್ಕೂ ಗಾಂಧಿ ನೇಯ್ದಿಟ್ಟ ಬಟ್ಟೆ ಸಂಕಲನದ ಕವಿತೆಗಳು ಭರವಸೆ ಮೂಡಿಸಿವೆ. ರಾಯಸಾಬ ಎನ್. ದರ್ಗಾದವರು, ಮತ್ತಷ್ಟು ಸತ್ವಯುತ, ಜೀವಂತಿಕೆವುಳ್ಳ ಗಟ್ಟಿ ಕಾವ್ಯವನ್ನು ರಚಿಸುವುದರ ಮೂಲಕ ಉತ್ತಮ ಕವಿಯಾಗಬಲ್ಲ ಭರವಸೆಯನ್ನು ಹುಟ್ಟುಹಾಕಿದ್ದಾರೆ.
“ಕರ್ನಾಟಕ ಸರ್ಕಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದ ಕೃತಿ” ಇದಾಗಿದ್ದು, ಭವಿಷ್ಯದಲ್ಲಿ ಬೆಳಗಬಲ್ಲ ಶುಭ ಕೋರುತ್ತಾ…
=========================
ಜಬೀವುಲ್ಲಾ ಎಮ್. ಅಸದ್.