ಬಿ.ಶ್ರೀನಿವಾಸ್ ಹೊಸ ಕವಿತೆ

ಕಾವ್ಯಯಾನ

ಸುಮ್ಮನೆ

Double Exposure Portraits By Andreas Lie - IGNANT

ಇತ್ತೀಚೆಗೆ ಅವರು
ಜಗಳ ಕಾಯುವುದಿಲ್ಲ
ಮಾತಿಗೆ ಮಾತು ಬೆಳೆಸುವುದಿಲ್ಲ
ನೋಡುತ್ತಾರೆ
ಸುಖಾಸುಮ್ಮನೆ ನೋಡುತ್ತಾರೆ
ಕಿರಾಣಿಯಂಗಡಿಗಳಲ್ಲಿ
ತರಕಾರಿ ಮಾರ್ಕೆಟ್ಟುಗಳಲ್ಲಿ
ಚಪ್ಪಲಿ ಅಂಗಡಿಗಳಲ್ಲಿ
ಅವರು ಮಾತಾಡುವುದಿಲ್ಲ
ನೋಡುತ್ತಾರಷ್ಟೆ

ಮಾಂಸದಡಿಗೆ
ನಮಾಜುಗಳಿಗೂ
ಮೆತ್ತಿಕೊಂಡಿದೆ
ಅನುಮಾನದಂಟು

ಕುಶಲ ಕೇಳುವ
ಜಾಡಮಾಲಿ ,
ಅಗಸರವನು
ಮೀನು ಮಾರುವ ಹೆಂಗಸರೂ
ಈಗೀಗ ಸುಮ್ಮನೆ ಹಾದು ಹೋಗುತ್ತಾರೆ

ದನ ಕಾಯುವ ಹುಡುಗರಂತೂ ಮತ್ತೆ ಮತ್ತೆ ಎಣಿಸುತ್ತಾರೆ

ನಗುವುದಿಲ್ಲ
ಮಾತಾಡುವುದಿಲ್ಲ
ಜಗಳವಂತೂ
ಇಲ್ಲವೇ ಇಲ್ಲ

ಇವೆಲ್ಲ ಸುಳ್ಳು…… ರಾಜಗಾಂಭೀರ್ಯದಲಿ ಕವಿಯೊಬ್ಬ ಕವಿತೆ ಓದಿದರೆ…..ಚಪ್ಪಾಳೆಗಳ
ಬದಲು ಪಿಸುಮಾತುಗಳು…

ಆಟೋದ ಹುಡುಗನೂ
ಕುರುಚಲು ಗಡ್ಡವನ್ನೇ ನೋಡುತ್ತಾನೆ

ಹಳ್ಳಕ್ಕೆ ಬಿದ್ದ ಬಸ್ಸಿನ
ಡ್ರೈವರಿನ ಹೆಸರಿನ ಆಧಾರದ ಮೇಲೆ ದೋಷಾರೋಪದ
ಟಿ ಆರ್ ಪಿ ಸಿದ್ಧವಾಗುತ್ತದೆ

ಮಗು ಬಿಡಿಸಿದ
ಭಾರತದ ಭೂಪಟದ
ಚಿತ್ರವನ್ನು ಮತ್ತೆ ಮತ್ತೆ
ನೋಡುವ ಮೇಷ್ಟ್ರು

ಎಲ್ಲರೂ
ನೋಡುತ್ತಾರಷ್ಟೆ..
ಸುಖಾಸುಮ್ಮನೆ

ಸುಮ್ಮನೆ
ಸುಖಾಸುಮ್ಮನೆ ಹೀಗೆ ಗಾಯಗಳಾಗುತ್ತವೆ ಒಳಗೆ…

    ---------------------

5 thoughts on “ಬಿ.ಶ್ರೀನಿವಾಸ್ ಹೊಸ ಕವಿತೆ

 1. ಹಾಗೇ ಸುಮ್ಮನೆ ಹೇಳಬೇಕಾದದ್ದೆಲ್ಲವನ್ನೂ ಹೇಳಿದೆ ಕವಿತೆ
  ಬಿಮ್ಮನೆ

 2. ಕಾಲನ
  ದವಡೆಗೆ
  ಸಿಕ್ಕಿ
  ಬಾಯಿಗೆ
  ಹುಣ್ಣಾಗಿದೆ
  ಕವನದ ಅಂತರಾಳದ ತಿರುಳು ತುಂಬಾ ಚೆನ್ನಾಗಿದೆ ಸರ್

 3. ಕವಿತೆಯು ಸರಳ ಸುಂದರ ವಾಸ್ತವಕ್ಕೆ ಅರ್ಥಗರ್ಭಿತ ವಾಗಿದೆ ಸರ್. ಅಭಿನಂದನೆಗಳು.

Leave a Reply

Back To Top