ಕಾವ್ಯಯಾನ
ಕಾವ್ಯಕ್ಕೆ ಕಾರಣ ಬೇಕಿಲ್ಲ
ಬಿ.ಶ್ರೀನಿವಾಸ
ದಿಲ್ಲಿಯ ಚಳಿಗೆ
ಮರಗಟ್ಟಿ ರಕ್ತ,
ಚಳುವಳಿಗಿದು ಸಕಾಲ
ಅಂತೆನಿಸಿದರೂ…
ಮಣ್ಣಿಗೆ…
ಹೊಸಿಲಾಚೆ ಕುಂತ ಮಗನ ಕಂಗಳಿಗೆ
ಸಂತಾಪದ ಕಾಲ
ಹೌದು,ಕಾವ್ಯಕ್ಕೀಗ ಕೆಲಸವಿಲ್ಲ
ಕೋಟಿ ಕೋಟಿಗಳ ಗೋರಿಯೊಳಗೆ
ಬಸವಣ್ಣ,ಅಲ್ಲಮರಂಥ ಶರಣರು !
ಪ್ರಭುತ್ವಕ್ಕಿದು ಸಂತಾನದ ಕಾಲ
ಇಂಥಾ ಹೊತ್ತಿನಲ್ಲಿ
ಕಾವ್ಯಕ್ಕೇನು ಕೆಲಸ ?
ಕೇಳುವಿರಿ ನೀವು.
ಮುಂಜಾನೆಯ ಇಬ್ಬನಿಗೆ
ಸೂತಕದ ಬಡರೈತನ ಮನೆಯಂಗಳದಲ್ಲಿ
ಕಿಸಾನ್ ಪರೇಡಿನ ಮೌನದಲಿ
ಕಾವ್ಯ….
ಕಂಬನಿಯಾಗುತ್ತದೆ
ಒಮ್ಮೆ ರಕ್ತವಾಗುತ್ತದೆ
ಮಗದೊಮ್ಮೆ ಉಸಿರಾಗುತ್ತದೆ
ಕಳೇಬರಗಳ ಮುಂದೆ
ಕುಂತವರ
ಮೌನಕ್ಕೆ,
ಕಣ್ಣೀರಿಗೆ
ಕಾರಣಗಳನು ಕೇಳಬಾರದು
ಕಾವ್ಯಕ್ಕೂ …..ಕೂಡ.
ಬಿ.ಶ್ರೀನಿವಾಸ
ಚೆನ್ನಾಗಿದೆ ಸರ್.
ಮರಗಟ್ಟಿದ ಮೌನ
ಹೊಟ್ಟೆಯಲ್ಲಿನ ಸಿಟ್ಟು
ರಟ್ಟೆಗೆ ಬರದೆ ಕಮರಿದೆ
ತುಂಬಾ ಮನ ಮುಟ್ಟುವ ಕವನ ಸರ್