ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—47

ಆತ್ಮಾನುಸಂಧಾನ

ನಾಲ್ಕಾರು ಬಂಧುಗಳ ನಡುವೆ ವಿವಾಹ ಬಂಧನಕ್ಕೆ…..

: ಬದುಕು ಅನೇಕ ವಿಧದ ಸಂಬಂಧಗಳ ಬೆಸುಗೆ. ನಮ್ಮ ಜೀವಿತದ ಕಾಲಾವಧಿಯ ಉದ್ದಕ್ಕೂ ಈ ಸಂಬಂಧಗಳ ಬೆಸುಗೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಅಂತಹ ಸಂಬಂಧಗಳಲ್ಲಿ ಪ್ರೇಮ ಸಂಬಂಧವೆಂಬುದು ಒಂದು ಅಪರೂಪದ, ವಿಶಿಷ್ಟವಾದ ಭಾವ ಬಂಧ. ಇದು ಗಂಡ-ಹೆಂಡತಿಯ ಸಾಮಾಜಿಕ ಅಂತಸ್ತುಗಳ ರೂಪದಲ್ಲಿ ಸಮಾಜದ ಮುಂದುವರಿಕೆಗೂ ನೆರವಾಗುತ್ತದೆ. ‘ಪ್ರೇಮ’ ಎಂಬುದು ಮುಂಗಡ ಬುಕಿಂಗ್ ಮಾಡುವಂತಹುದಲ್ಲ. ಅದು ಹೊತ್ತು ಗೊತ್ತಿಲ್ಲದೆ ತೀರ ಆಕಸ್ಮಿಕವಾಗಿ ಘಟಿಸುವಂತಹದು. ಅದಕ್ಕೇ ಇರಬಹುದೇನೋ “ಪ್ರೇಮ ಕುರುಡು” ಎಂಬ ಉಕ್ತಿಯೇ ಬಹುಕಾಲದಿಂದ ಜನಜನಿತವಾಗಿದೆ.

ನಾನು ಉದ್ಯೋಗಕ್ಕೆ ಸೇರಿ ಆರೆಂಟು ವರ್ಷಗಳೇ ಕಳೆದಿದ್ದವು. ಉತ್ಸಾಹ ತುಂಬಿದ ತರಗತಿಯ ಪಾಠಗಳು, ಯಕ್ಷಗಾನ-ನಾಟಕ-ಸಾಹಿತ್ಯ ಸಂಬಂಧಿಯಾದ ನನ್ನ ಹವ್ಯಾಸಗಳಿಂದಾಗಿ ವರ್ಷಗಳು ಕಳೆದದ್ದೂ ಅರಿವಿಗೆ ಬಾರದಂತಹ ಉಲ್ಲಾಸದ ದಿನಗಳು ನನಗೆ ‘ಮದುವೆಯ ವಯಸ್ಸಾಗಿದೆ’ ಎಂಬುದರತ್ತ ಗಮನ ಹರಿಸಲೂ ಬಿಡಲಾರದಂತೆ ತಡೆದಿದ್ದವು.

ನನ್ನ ತಮ್ಮ ನಾಗೇಶ ಗುಂದಿ ನಾನು ಕಾಲೇಜು ಉಪನ್ಯಾಸಕನಾಗಿ ಉದ್ಯೋಗಕ್ಕೆ ಸೇರಿದ ಸಂದರ್ಭದಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದ. ಸಿದ್ದಾಪುರ ತಾಳೂಕಿನ ಕಾನಸೂರಿನ ಆಸುಪಾಸಿನ ಯಾವುದೋ ಹಳ್ಳಿಯ ಶಾಲೆಯಲ್ಲಿ ಅವನ ಶಿಕ್ಷಕ ವೃತ್ತಿಯು ಮುಂದುವರಿದಿತ್ತು. ಅದೇ ಊರಿನ ತರುಣಿಯೋರ್ವಳೊಡನೆ ಪ್ರೇಮ ಸಂಬಂಧ ಬೆಳೆದು ವಿವಾಹದ ತೀರ್ಮಾನಕ್ಕೂ ಬಂದಿದ್ದ. ಮುಖ್ಯವಾಗಿ ಹುಡುಗಿ ದೈವಜ್ಞ ಬ್ರಾಹ್ಮಣ ಸಮುದಾಯದವಳಾಗಿದ್ದು ದಲಿತ ಸಮುದಾಯದ ನನ್ನ ಸಹೋದರನಿಗೆ ಈ ವಿವಾಹ ಸಂಬಂಧವು ಸಂಘರ್ಷಕ್ಕೆ ಎಡೆಯಾಗಬಹುದೆಂಬ ಆತಂಕವೂ ಇತ್ತು. ಈ ಕಾರಣದಿಂದ ಸಹಜವಾಗಿಯೇ ಆತ ಮದುವೆಗೆ ಅವಸರ ಪಡುತ್ತಿರುವುದು ಸ್ಪಷ್ಟವಾಗಿತ್ತು. ಆದರೆ ಅವನಿಗಿಂತ ಹಿರಿಯನಾಗಿ ನಾನು ಇದ್ದುದರಿಂದ ನಮ್ಮ ತಂದೆ-ತಾಯಿಯರು ಅವನ ಮದುವೆಗೆ ಸಮ್ಮತಿಸಲು ಅನಮಾನಿಸುತ್ತಿದ್ದರು. ಸಂದರ್ಭದ ಸೂಕ್ಷ್ಮಗಳೆಲ್ಲ ನನ್ನ ಅರಿವಿಗೆ ಬಂದಾದ ಮೇಲೆ ಈ ಸಮಸ್ಯೆಗೆ ನಾನು ಪರಿಹಾರವನ್ನು ಸೂಚಿಸಲೇ ಬೇಕಾದ ಅನಿವಾರ್ಯತೆಯುಂಟಾಯಿತು. ಒಂದೋ ನಾನು ತಕ್ಷಣ ಮದುವೆಯ ನಿರ್ಧಾರಕ್ಕೆ ಬಂದು ನನ್ನ ಸಹೋದರನ ದಾರಿಯನ್ನು ಸುಗಮಗೊಳಿಸಬೇಕು. ಇಲ್ಲವೆ ನನ್ನ ಮದುವೆಗೆ ಮುನ್ನ ಸಹೋದರನ ಮದುವೆಗೆ ಮುಕ್ತ ಮನಸ್ಸಿನಿಂದ ಒಪ್ಪಿಗೆ ತಿಳಿಸಿ ತಾಯಿ-ತಂದೆಯರನ್ನೂ ಒಡಂಬಡಿಸಬೇಕು.

ನನಗೆ ಎರಡನೆಯ ದಾರಿಯೇ ಸುಲಭ ಮತ್ತು ಸೂಕ್ತವೆನ್ನಿಸಿತು. ಹಾಗೆಯೇ ಮಾಡಿದೆ. ಯಾವ ಅಡ್ಡಿ-ಆತಂಕಗಳೂ ಇಲ್ಲದೆ ದೈವಜ್ಞ ಬ್ರಾಹ್ಮಣ ಸಮುದಾಯದ ಯುವತಿ ‘ಮಂಜುಳಾ’ ನನ್ನ ಸಹೋದರನ ಪತ್ನಿಯಾಗಿ ನಮ್ಮ ತಾಯಿ ತಂದೆಯರ ಹಿರಿಯ ಸೊಸೆಯಾಗಿ ನಮ್ಮ ಮನೆ ತುಂಬಿದಳು.

ಅಲ್ಲಿಂದ ಮುಂದಿನ ದಿನಗಳಲ್ಲಿ ನಮ್ಮ ತಾಯಿ ತಂದೆ ಬಂಧು ಬಳಗವೆಲ್ಲ ಸೇರಿ ನನಗೂ ಮದುವೆಗಾಗಿ ಒತ್ತಾಯಿಸಲು ಆರಂಭಿಸಿದ್ದರು. ಅಂದಿನ ದಿನಗಳಲ್ಲಿ ನಮ್ಮ ಜಾತಿಯಲ್ಲಿ ಸುಶಿಕ್ಷಿತ ಹೆಣ್ಣು ಮಕ್ಕಳು ದೊರೆಯುವುದು ಕಷ್ಟವಾಗಿತ್ತು. ಅಪರೂಪದಲ್ಲಿ ಕೆಲವು ಓದಿದ, ಓದುತ್ತಿರುವ ಯುವತಿಯರು ಕಾಣಿಸುತ್ತಿದ್ದರೂ ವಿವಾಹ ಸಂಬಂಧದ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ನಾನು ಮದುವೆಯ ತೀರ್ಮಾನಕ್ಕೆ ಬರದೆ ನಿರಾಳವಾಗಿ ಇರುವಂತೆಯೂ ಇರಲಿಲ್ಲ.

ಇಂಥ ಸಂದರ್ಭದಲ್ಲಿ ನನ್ನ ನೆರವಿಗೆ ಬಂದವರು ನನ್ನ ದಾಯಾದಿ ಸಂಬಂಧಿಯಾದ ಹೂವಾ ವಂದಿಗೆ ಎಂಬ

ಸದ್ಗೃಹಸ್ಥ. ಹುಬ್ಬಳ್ಳಿಯ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಹೂವಾ ವಂದಿಗೆಯವರು ಹುಬ್ಬಳ್ಳಿಯ ಗಣೇಶ ಪೇಟೆ ಎಂಬ ಭಾಗದಲ್ಲಿ ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವರಿಗೆ ಮೂವರು ಗಂಡು ಮಕ್ಕಳು. ಹುಬ್ಬಳ್ಳಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಖಾಸಗಿ ಕೆಲಸದಲ್ಲಿದ್ದರು. ಹೂವಾ ಅವರ ಧರ್ಮಪತ್ನಿ ತುಂಬಾ ಬಂಧು ವತ್ಸಲೆಯೆನ್ನಿಸಿದ ತಾಯಿಯಾಗಿದ್ದರು. ಯಾವಾಗಲೂ ಅವರಿಗೆ ನೆಂಟರಿಷ್ಟರು ಮನೆಗೆ ಬರುತ್ತಾ ಇರಬೇಕು. ಅವರಿಗೆ ರುಚಿ ರುಚಿಯಾದ ಅಡಿಗೆ ಮಾಡಿ ಉಣ್ಣಿಸುವುದರಲ್ಲಿ ಅತ್ಯಂತ ಪ್ರೀತಿ ಮತ್ತು ಸಂತೋಷ…! ಊರಿನ ಕಡೆಯಿಂದ ಯಾರೇ ಬಂದರೂ ಅವರ ಯೋಗಕ್ಷೇಮವನ್ನು ನೋಡಿಕೊಂಡು ಆತಿಥ್ಯ ನೀಡುವುದರಲ್ಲಿ ಧನ್ಯತೆಯನ್ನು ಕಾಣುತ್ತಿದ್ದರು.

ಗಣೇಶ ಪೇಟೆಯಲ್ಲಿ ಹೂವಾ ವಂದಿಗೆಯವರ ಮನೆಯ ಆಚೀಚೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರು, ಮರಾಠರು ನೆಲೆಸಿದ್ದರು. ಎಲ್ಲರೊಂದಿಗೆ ಹೂವಾ ವಂದಿಗೆಯವರ ಪರಿವಾರ ಅತ್ಯಂತ ಆಪ್ತವಾಗಿ ಹೊಂದಿಕೊಂಡಿದ್ದರು. ಅವರಿಗೆ ತುಂಬ ಹತ್ತಿರದಲ್ಲಿ ಒಂದು ಮರಾಠಾ ಭಾವಸಾರ ಕ್ಷತ್ರಿಯ ಕುಟುಂಬ ನೆಲೆಸಿತ್ತು.

ಅದು ವಿಷ್ಣುರಾವ್ ಸುಲಾಖೆ ಎಂಬ ಗ್ರಹಸ್ಥರ ಮನೆ. ಅವರಿಗೆ ಮೂವರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದರು. ಮೂರು ಗಂಡು ಮಕ್ಕಳು ಜವಳಿ ವ್ಯಾಪಾರ ಮತ್ತು ಟೇಲರಿಂಗ್ ಕೆಲಸ ಮಾಡುತ್ತಿದ್ದರು. ಗಣೇಶ ಪೇಟೆಯಲ್ಲಿ “ರಾಯಲ್ ಟೇಲರ್ಸ ” ಎಂಬ ಅಂಗಡಿಯನ್ನು ಇಟ್ಟುಕೊಂಡು ಬಟ್ಟೆ ಮತ್ತು ಟೇಲರಿಂಗ್ ಮಟೀರಿಯಲ್ಸ್ಗಳನ್ನು ಬಾಂಬೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದರು. ತಂದೆ ವಿಷ್ಣುರಾವ್ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ರಾಣಿಬೆನ್ನೂರಿನ ಇಬ್ಬರು ಸೋದರ ಅಳಿಯಂದಿರಿಗೆ ಕೊಟ್ಟು ಮದುವೆ ಮಾಡಿದ್ದರು.

ಈ ಕುಟುಂಬದ ಎಲ್ಲ ಸದಸ್ಯರೂ ಹೂವಾ ವಂದಿಗೆಯವರ ಕುಟುಂಬದೊಡನೆ ಅನ್ಯೋನ್ಯವಾಗಿದ್ದರು. ಹಬ್ಬ ಹುಣ್ಣಿಮೆ ಇತ್ಯಾದಿ ವಿಶೇಷ ದಿನಗಳಲ್ಲಿ ಊಟೋಪಚಾರಗಳ ವಿನಿಮಯವೂ ನಡೆಯುತ್ತಿತ್ತು. ಧಾರವಾಡದಲ್ಲಿ ನಾನು ಎಂ.ಎ ಓದಿನ ದಿನಗಳಿಂದ ಹೂವಾ ವಂದಿಗೆಯವರ ಮನೆಗೆ ಭೇಟಿ ನೀಡುವ ಸಲಿಗೆ ಬೆಳೆಸಿಕೊಂಡಿದ್ದೆ. ವಿಶೇಷವಾಗಿ ಹೂವಾ ಅಂಕಲ್ ಪತ್ನಿ ಶಿವಮ್ಮ ಚಿಕ್ಕಮ್ಮ ಸೊಗಸಾಗಿ ಮಟನ್ ಮಸಾಲೆ ಮಾಡಿ ಬಡಿಸುತ್ತಿದ್ದುದು. ನನಗೆ ಹುಚ್ಚು ಹಿಡಿಸುವಷ್ಟು ಪ್ರಿಯವಾಗಿತ್ತು.

ನಾನು ಉದ್ಯೋಗಿಯಾದ ಬಳಿಕ ನಮ್ಮ ಭೇಟಿ ಅಪರೂಪವಾಗಿತ್ತಾದರೂ ಎರಡು ತಿಂಗಳಿಗೊಮ್ಮೆಯಾದರೂ ಹುಬ್ಬಳ್ಳಿಗೆ ಹೋಗಿ ಬರುತ್ತಿದ್ದೆ. ಇದೇ ಹೂವಾ ವಂದಿಗೆಯವರ ಮನೆಯಲ್ಲಿಯೇ ನೆರೆಯ ವಿಶ್ವನಾಥರಾವ್ ಸುಲಾಖೆಯವರ ಕಿರಿಯ ಮಗಳು ನಿರ್ಮಲಾ ನನಗೆ ಪರಿಚಯವಾಗಿದ್ದಳು.

ನಾನು ವಿವಾಹಕಾಂಕ್ಷೆಯಾದೆನೆಂಬುದು ತಿಳಿದಾಗ ಹೂವಾ ವಂದಿಗೆ ಅವರು ನಿರ್ಮಲಾ ಕುರಿತು ಸಣ್ಣ ಸೂಚನೆ ನೀಡದರು. ನನಗೂ ಸರಿಯೆನ್ನಿಸಿ ಅಂಕಲ್ ಮನೆಗೆ ಹೋದಾಗಲೆಲ್ಲ ನಿರ್ಮಲಾಳನ್ನು ನೋಡದೆ ಮರಳಿ ಬರುತ್ತಿರಲಿಲ್ಲ. ಆದರೆ ಅದೇ ಆಗ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ತರಗತಿಗೆ ಪ್ರವೇಶ ಪಡೆದ ನಿರ್ಮಲಾಳಿಗೆ ಮದುವೆಯ ಯೋಚನೆಯೂ ಇರಲಿಲ್ಲ. ಇನ್ನು ಒಂದು ವರ್ಷದ ಓದು ಮುಗಿದರೆ ಅವಳು ತನ್ನ ಓದು ಮುಗಿಸಿ ಡಿಪ್ಲೋಮಾ ಪಾಸು ಮಾಡುವ ನಿರೀಕ್ಷೆಯಲ್ಲಿ ಕಾದೆವು. ಆದರೆ ನಮ್ಮ ನಡುವಿನ ಸಂಬಂಧದ ಸುಳಿವು ಅವಳ ಪಾಲಕರ ಗಮನಕ್ಕೆ ಬಂದರೆ ನಮ್ಮ ವಿವಾಹ ಕಷ್ಟವೇ ಎಂಬ ಆತಂಕದಲ್ಲಿ ಅವಳು ವಿವಾಹಕ್ಕೆ ಸಮ್ಮತಿಸಿದಳು.

ಈ ನಡುವೆ ನಮ್ಮ ವಿವಾಹ ಸಂಬಂಧ ನಡೆಯಲು ಅವಳ ಹಿರಿಯ ಅಕ್ಕ ಲಕ್ಷ್ಮಿ ಎಂಬುವವರು ಬೆಂಬಲವಾಗಿ ನಿಂತು ಧೈರ್ಯ ತುಂಬಿದರು. ೧೯೮೪ರ ಮೇ ತಿಂಗಳ ಒಂದು ದಿನ ನಾವು ಧಾರವಾಡದ ವಿವಾಹ ನೋಂದಣಿ ಕಛೇರಿಯಲ್ಲಿ ಕೇವಲ ನಾಲ್ಕಾರು ಜನ ಬಂಧುಗಳು-ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಕಾಲಿಟ್ಟೆವು.

ನಮ್ಮ ತಾಯಿ ತಂದೆಯರು ನನ್ನ ನಿರ್ಧಾರಕ್ಕೆ ಯಾವುದೇ  ಆಕ್ಷೇಪವೆತ್ತಲಿಲ್ಲ. ಸುಶಿಕ್ಷಿತರಾದ ನಮ್ಮ ತಂದೆಯವರು ಸಂದರ್ಭದ ಸೂಕ್ಷ್ಮ ವನ್ನು ಅರಿತು ನನ್ನನ್ನು ಬೆಂಬಲಿಸಿದರು. ತಾಯಿಯೂ ಒಪ್ಪಿಕೊಂಡು ನಿರ್ಮಲಾಳನ್ನು ಸೊಸೆಯಾಗಿ ಸ್ವೀಕರಿಸಿದಳು.

ಆರಂಭದ ಕೆಲವು ದಿನಗಳವರೆಗೆ ತೀವೃ ಪ್ರತಿರೋಧ ವ್ಯಕ್ತಪಡಿಸಿದ ನಿರ್ಮಲಾಳ ತವರು ಮನೆಯ ಪರಿವಾರ ಕಾಲಕಳೆದಂತೆ ನಮ್ಮ ಸ್ಥಿತಿ-ಗತಿಗಳನ್ನು ಅರ್ಥಮಾಡಿಕೊಂಡು ನಮ್ಮ ವಿವಾಹ ಸಂಬಂಧವನ್ನು ಒಪ್ಪಿಕೊಂಡರು. ನಮ್ಮನ್ನು ಹುಬ್ಬಳ್ಳಿಗೆ ಕರೆಸಿಕೊಂಡು ತಮ್ಮ ಸಮಾಜ ಬಂಧುಗಳ ಸಮ್ಮುಖದಲ್ಲಿ ವಿವಾಹ ವಿಧಿಗಳನ್ನು ಮತ್ತೊಮ್ಮೆ ಪೂರೈಸಿ ವರೋಪಚಾರ ಇತ್ಯಾದಿಗಳಿಂದ ನಮ್ಮನ್ನು ಗೌರವಿಸಿ ಬೀಳ್ಕೊಟ್ಟರು. ಮರಾಠಿ ಮಾತ್ರ ಭಾಷೆಯ ಇಡಿಯ ಪರಿವಾರವೂ ಅಂದಿನಿಂದ ಇಂದಿನವರೆಗೂ ಗೌರವಪೂರ್ವಕವಾಗಿಯೇ ನಮ್ಮನ್ನು  ಬಾಂಧವ್ಯವನ್ನು ಮುಂದುವರೆಸಿದ್ದಾರೆ.

“ಬೆಟ್ಟದ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು” ಬೆರೆತಂತೆ ವಿಭಿನ್ನ ಸಂಸ್ಕೃತಿ-ಭಾಷೆ ಇತ್ಯಾದಿ ವ್ಯತ್ಯಾಸಗಳ ನಡುವೆಯೂ ಪರಸ್ಪರರನ್ನು ಅರ್ಥಮಾಡಿಕೊಂಡು ಗ್ರಹಸ್ಥ ಜೀವನ ನಡೆಸುವ ನಮ್ಮ ಸಂಕಲ್ಪ ಸಾಮಾಜಿಕವಾಗಿಯೂ ಗೌರವಾದರಗಳೊಂದಿಗೆ ಸಾಂಸಾರಿಕ ಜೀವನವನ್ನು ಮುನ್ನಡೆಸಲು ಸಾಧ್ಯವಾದದ್ದು ನಮ್ಮ ಅದೃಷ್ಟವೆಂದೇ ನಾನು ಭಾವಿಸಿದ್ದೇನೆ….


ರಾಮಕೃಷ್ಣ ಗುಂದಿ

ಕನ್ನಡದಖ್ಯಾತಕತೆಗಾರ. ಅವಾರಿ, ಕಡಲಬೆಳಕಿನದಾರಿಗುಂಟ, ಅತಿಕ್ರಾಂತ, ಸೀತೆದಂಡೆಹೂವೇ …ಈನಾಲ್ಕುಅವರಕಥಾಸಂಕಲನಗಳು. ಅವರಸಮಗ್ರಕಥಾಸಂಕಲನಸಹಈಚೆಗೆಪ್ರಕಟವಾಗಿದೆ.‌ಯಕ್ಷಗಾನಕಲಾವಿದ.‌ ಕನ್ನಡಉಪನ್ಯಾಸಕರಾಗಿಅಂಕೋಲಾದಜೆ.ಸಿ.ಕಾಲೇಜಿನಲ್ಲಿಸೇವೆಪ್ರಾರಂಭಿಸಿ, ಕಾರವಾರದದಿವೇಕರಕಾಲೇಜಿನಲ್ಲಿಪ್ರಾಂಶುಪಾಲರಾಗಿಕರ್ತವ್ಯನಿರ್ವಹಿಸಿನಿವೃತ್ತರಾಗಿದ್ದಾರೆ. ಯಕ್ಷಗಾನಅಕಾಡೆಮಿಸದಸ್ಯರಾಗಿಸೇವೆಸಲ್ಲಿಸಿದ್ದಾರೆ. ಮಗಅಮೆರಿಕಾದಲ್ಲಿಸಾಫ್ಟ್‌ವೇರ್ಎಂಜಿನಿಯರ್. ಅಗೇರಸಮುದಾಯದಿಂದಬಂದಗುಂದಿಅವರುಅದೇಜನಾಂಗದಬಗ್ಗೆಪಿಎಚ್ಡಿಪ್ರಬಂಧಮಂಡಿಸಿ, ಡಾಕ್ಟರೇಟ್ಸಹಪಡೆದಿದ್ದಾರೆ‌ . ದಲಿತಜನಾಂಗದಕಷ್ಟನಷ್ಟನೋವು, ಅವಮಾನ, ನಂತರಶಿಕ್ಷಣದಿಂದಸಿಕ್ಕಬೆಳಕುಬದುಕುಅವರಆತ್ಮಕಥನದಲ್ಲಿದೆ. ಮರಾಠಿದಲಿತಸಾಹಿತಿಗಳ,‌ಲೇಖಕರಒಳನೋಟ , ಕನ್ನಡನೆಲದದಲಿತಧ್ವನಿಯಲ್ಲೂಸಹಇದೆ.‌ ರಾಮಕೃಷ್ಣಗುಂದಿಅವರಬದುಕನ್ನುಅವರಆತ್ಮಕಥನದಮೂಲಕವೇಕಾಣಬೇಕು. ಅಂತಹನೋವಿನಹಾಗೂಬದುಕಿನ‌ ಚಲನೆಯಆತ್ಮಕಥನವನ್ನುಸಂಗಾತಿ ..ಓದುಗರಎದುರು, ‌ಕನ್ನಡಿಗರಎದುರುಇಡುತ್

3 thoughts on “ಅಂಕಣ ಬರಹ

  1. ನಿಮ್ಮ ಜೀವನದ ವಿಜಯ – ಯಶೋಗಾಥೆಗಳು ಅತ್ಯಂತ ಸಹಜವಾಗಿ ಮೂಡಿಬರುತ್ತಲಿವೆ.

  2. ಸರ,
    ಮದುವೆಯ ಮಾಹಿತಿಯನ್ನು ಸವಿಸ್ತಾರವಾಗಿ ಬರೆದದ್ದು ಓದಿ ತುಂಬಾ ಸಂತೋಷ ವಾಯಿತು. ಮುಂದೆ ಬರವಣಿಗೆಯ ನಿರೀಕ್ಷೆಯಲ್ಲಿ

  3. ನಿಮ್ಮ ಧರ್ಮ ಪತ್ನಿ ನಮ್ಮ ಮರಾಠಾ ಜನಾಂಗದವರು ಓದಿ ತುಂಬಾ ಸಂತೋಷನಾದೆ, ನೋಡಿ ಎಲ್ಲಿಯ ಸಂಬಂಧ ಹೇಗೋ ಹುಡುಕಿ ಬರುತ್ತಿದೆ ಗುರೂಜಿ…..

Leave a Reply

Back To Top