ಗಜಲ್

ಗಜಲ್

ಶಾಲಿನಿ ರುದ್ರಮುನಿ

Gulls in the blue sky over the sea

ಕೊರಳು ಬಾಗಿ ತುಟಿಗಿತ್ತ ಮುತ್ತು ಎದೆಯಲಿ
ಇಳಿಯುವಾಗ ನಿಂತು ಸಾಗು ದೊರೆ,
ಮೇಲೆ ನಭದಲಿ ಘನಿಕರಿಸಿದ ಮಾಡ ಕರಗಿ
ಹಗುರಾಗುವಾಗ ನಿಂತು ಸಾಗು ದೊರೆ,

ಹಸಿದ ಬಾಳಿಗೆ ಪ್ರೀತಿ ಪಕ್ವಾನ್ನ ಪ್ರಸಾದವಾಗಿ
ಒಡಲಿಗೆ ತೃಪ್ತ ಭಾವ ತುಂಬಿದೆ
ಸಮಯದ ತಿರುಗಣಿಲಿ ನೆನಪ ಹಕ್ಕಿ ಕೇಕೆಹಾಕಿ
ಕುಣಿಯುವಾಗ ನಿಂತು ಸಾಗು ದೊರೆ,

ಇಕ್ಕೆಲದ ಹಾದಿಯಲಿ ಬಿಕ್ಕು ಸರಿದು ಹಸಿರ ತಂಪೆಲರು ತನುಮನವ ಸೊಕುತಿದೆ,
ಇರುವ ಗಳಿಗೆಯ ಅರ್ಥವೆಲ್ಲ ವ್ಯರ್ಥವಾಗದೆ
ವೃಕ್ಷವಾಗುವಾಗ ನಿಂತು ಸಾಗು ದೊರೆ,

ನೆಲದಿ ಬೇರಿಳಿದ ಹಸಿರುಸಿರಿಗೆ ಹಬ್ಬಿ ಹೂ ತಾನರಳಿ ಪಸರಿಸಿ ಹಣ್ಣಾಗುತಿದೆ,
ಚಿರ ಋಣಿಗೆ ನೆಲಬಾನು ದಿಗಂತದಲಿ ಪರಸ್ಪರ
ಶರಣಾಗುವಾಗ ನಿಂತು ಸಾಗು ದೊರೆ,

ಎತ್ತರದ ಬೆಟ್ಟದಸಿರಿಗೂ ಆಳದ ನೀಲಿ ಕಡಲಿಗು
ಹೊದ್ದಂತೆ ಬಾಳ ಬಯಲು,
ಶಾರು ದನಿಪದದಲಿ ಜೀವಾತ್ಮ ನೀನಾಗಿ ನಾ
ಚಿಗುರೊಡೆಯುವಾಗ ನಿಂತು ಸಾಗು ದೊರೆ…


Leave a Reply

Back To Top